ಕಾರವಾರ: ‘ಡಿಜಿಟಲ್ ಅರೆಸ್ಟ್’ ಪ್ರಕರಣ; ಆರೋಪಿ ಹರ್ದೀಪ್ ಸಿಂಗ್ ಬಂಧನ

ಕಾರವಾರ, ಜುಲೈ 15, 2025: ಉತ್ತರ ಕನ್ನಡ ಜಿಲ್ಲೆಯಲ್ಲಿ ‘ಡಿಜಿಟಲ್ ಅರೆಸ್ಟ್’ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹರ್ದೀಪ್ ಸಿಂಗ್ (39) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕಾರವಾರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯ ವಿಶೇಷ ತಂಡ ಭಾಗವಹಿಸಿತು.

ಆರೋಪಿಗಳು ದಿನಾಂಕ 23-10-2024ರಂದು ರಾಫೇಲ್ ತಂದೆ ಮ್ಯಾಥ್ಯೂವ್ಸ್ ಫರ್ನಾಂಡಿಸ್ ಅವರ ಸಹೋದರ ವಿಲ್ಸನ್ ಫರ್ನಾಂಡಿಸ್ ಅವರಿಗೆ ಫೋನ್ ಮಾಡಿ, ಡಿ.ಎಚ್‌.ಎಲ್ ಕೋರಿಯರ್ ಸರ್ವಿಸ್ ಪ್ರತಿನಿಧಿಯಾಗಿ ಮಾತನಾಡಿ, ಅವರ ಹೆಸರಿನಲ್ಲಿ ಪಾರ್ಸಲ್‌ನಲ್ಲಿ ಮಾದಕ ದ್ರವ್ಯ (1.4 ಕೆ.ಜಿ), 7 ಪಾಸ್‌ಪೋರ್ಟ್‌ಗಳು, 5 ಕ್ರೆಡಿಟ್ ಕಾರ್ಡ್‌ಗಳು ಮತ್ತು 3.5 ಕೆ.ಜಿ ಬಟ್ಟೆ ಇರುವುದಾಗಿ ಹೇಳಿ ಆನ್‌ಲೈನ್ ದೂರು ದಾಖಲಿಸುವಂತೆ ಒತ್ತಾಯಿಸಿದ್ದರು. ಇದೀಗ ಮುಂಬಯಿ ಪೊಲೀಸರ ಭಾಷ್ಯದಲ್ಲಿ ವಾಟ್ಸ್‌ಅಪ್ ವಿಡಿಯೋ ಕಾಲ್ ಮೂಲಕ ಭಯಭೀತರನ್ನಾಗಿ ಮಾಡಿ ₹35,80,100 ರಷ್ಟು ಹಣ ವಂಚಿಸಿದ್ದರು. ಈ ಸಂಬಂಧ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 35/2024 ದಾಖಲಾಗಿ ತನಿಖೆ ಆರಂಭವಾಗಿತ್ತು.

ಪೊಲೀಸ್ ಅಧೀಕ್ಷಕ ಎಂ. ನಾರಾಯಣ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ.ರವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕ ಐ. ಅಶ್ವಿನಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡವು ಬಿಹಾರ ರಾಜ್ಯಕ್ಕೆ ತೆರಳಿ ಜುಲೈ 12, 2025ರಂದು ಹರ್ದೀಪ್ ಸಿಂಗ್ ಅವನನ್ನ ಪಾಟ್ನಾ, ಬಿಹಾರದಿಂದ ವಶಕ್ಕೆ ಪಡೆದು ಕಾರವಾರಕ್ಕೆ ಕರೆತಂದಿದ್ದಾರೆ. ತನಿಖೆಯಲ್ಲಿ ಆರೋಪಿ ಮೇಲೆ ದೇಶಾದ್ಯಂತ 29 ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿರುವುದು ಬಯಲಾಗಿದ್ದು, ಇದರಲ್ಲಿ ತಮಿಳುನಾಡು (₹2,02,17,100), ಆಂಧ್ರಪ್ರದೇಶ (₹2,47,15,500), ಬೆಂಗಳೂರು (₹80,00,000 ಮತ್ತು ₹74,60,047) ಸೇರಿ ಒಟ್ಟು ₹40,28,71,710 ರಷ್ಟು ಹಣ ವಂಚನೆ ಮಾಡಿರುವುದು ಗೊತ್ತಾಗಿದೆ. ಆರೋಪಿ 8 ಉಳಿತಾಯ ಖಾತೆ ಮತ್ತು 2 ಚಾಲ್ತ ಖಾತೆಗಳನ್ನು ಹೊಂದಿರುವುದೂ ತಿಳಿದುಬಂದಿದೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರಿಸಿ ಪೊಲೀಸ್ ಕಸ್ಟಡಿಯಲ್ಲಿ ತನಿಖೆ ಮುಂದುವರಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಪಿ.ಎಸ್‌.ಐ ಉದ್ದಪ್ಪ ಧರೆಪ್ಪ, ಸಿಬ್ಬಂದಿ ನಾಮದೇವ ನಾಂದ್ರೆ, ಮತ್ತು ಕಾರವಾರ ಟೆಕ್ನಿಕಲ್ ಸೆಲ್‌ನ ಉದಯ ಗುನಗಾ, ಬಬನ್ ಕದಂ ಭಾಗವಹಿಸಿದ್ದಾರೆ. ಈ ಯಶಸ್ವೀ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಪೊಲೀಸ್ ಇಲಾಖೆ ಅಭಿನಂದಿಸಿದೆ.

Comments

Leave a Reply

Your email address will not be published. Required fields are marked *