ಗಂಗೊಳ್ಳಿ, ಜುಲೈ 15, 2025: ಗಂಗೊಳ್ಳಿ ಬಂದರಿನಿಂದ ಮೀನುಗಾರಿಕೆಗೆ ತೆರಳಿದ ದೋಣಿ ಅಲೆಗಳ ಅಬ್ಬರಕ್ಕೆ ಮಗುಚಿಬಿದ್ದ ಪರಿಣಾಮ ಮೂವರು ಮೀನುಗಾರರು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಇಂದು ಸಚಿವರು ಮತ್ತು ಶಾಸಕ-ಸಂಸದರು ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮೀನುಗಾರರ ಕುಟುಂಬಗಳಿಗೆ ನೆರವು ಒದಗಿಸುವಂತೆ ಮತ್ತು ಹುಡುಕಾಟಕ್ಕೆ ಹೆಲಿಕಾಪ್ಟರ್ ಬಳಕೆಯನ್ನು ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಯಿತು.

ಬೆಳಗ್ಗೆ 6ರಿಂದ 6:30ರ ನಡುವೆ ಮೀನುಗಾರಿಕೆಗೆ ತೆರಳಿದ್ದ ಸುರೇಶ್ ಖಾರ್ವಿ (45), ಲೋಹಿತ್ ಖಾರ್ವಿ (38), ಮತ್ತು ಜಗದೀಶ್ (ಜಗ್ಗು) ಖಾರ್ವಿ (36) ಅವರ ದೋಣಿ ಬೆಳಗ್ಗೆ 7ರಿಂದ 8ರ ನಡುವೆ ಅಲೆಗಳಿಂದ ಮಗುಚಿಬಿಟ್ಟಿತು. ಈ ವೇಳೆ ಸಂತೋಷ್ ಖಾರ್ವಿ ಒಬ್ಬರು ರಕ್ಷಣೆಯಾಗಿದ್ದರೆ, ಉಳಿದ ಮೂವರು ಇನ್ನೂ ಪತ್ತೆಯಾಗಿಲ್ಲ. ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ (ಶಿವಮೊಗ್ಗ), ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಮತ್ತು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಇಂದು ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಬಿಜೆಪಿ ಸಂಸದ ಬಿ.ವೈ. ರಾಘವೇಂದ್ರ, “ಈ ದುರಂತದಲ್ಲಿ ಒಂದು ಕುಟುಂಬ ತನ್ನ ಏಕೈಕ ಆರ್ಥಿಕ ಆಸರೆಯನ್ನು ಕಳೆದುಕೊಂಡಿದೆ. ನಾವು ಸರ್ಕಾರಕ್ಕೆ ಕನಿಷ್ಠ ₹25 ಲಕ್ಷ ಪರಿಹಾರ ಧನ ಒದಗಿಸುವಂತೆ ಮನವಿ ಮಾಡುತ್ತೇವೆ. ಜನತಾ ಪರಿವಾರ ಯೋಜನೆಯ ಇನ್ಸೂರೆನ್ಸ್‌ನಿಂದ ₹5-6 ಲಕ್ಷ ಮತ್ತು ಸಚಿವ ಯಶ್ ಪಾಲ್ ಸುವರ್ಣ ಜೊತೆ ಸಮಾಲೋಚನೆಯ ನಂತರ ₹10 ಲಕ್ಷ ನೀಡಲಾಗುವುದು. ಆದರೆ ಈಗ ಹುಡುಕುವುದು ಅಗತ್ಯವಿದೆ. ಈಗಾಗಲೇ ಎಸ್‌ಪಿ, ಕರಾವಳಿ ಅಧಿಕಾರಿಗಳು, ದೋಣಿ ಮತ್ತು ಮೀನುಗಾರಿಕೆ ಇಲಾಖೆಗಳು ಹುಡುಕಾಟದಲ್ಲಿ ತೊಡಗಿವೆ. ಸಾಧ್ಯವಾದರೆ ಕರಾವಳಿ ಹೆಲಿಕಾಪ್ಟರ್ ಅನ್ನು ಬಳಸಬೇಕು ಎಂದು ಸರ್ಕಾರಕ್ಕೆ ವಿನಂತಿ ಮಾಡುತ್ತೇವೆ, ಇದರಿಂದ ಕನಿಷ್ಠ ಕುಟುಂಬಗಳಿಗೆ ಶಾಂತಿ ದೊರೆಯುತ್ತದೆ” ಎಂದು ಹೇಳಿದರು.

ಈಗಾಗಲೇ ಕರಾವಳಿ ಕಾವಲು ಪಡೆ, ಅಗ್ನಿಶಾಮಕ ದಳ, ಸ್ಥಳೀಯ ಮೀನುಗಾರರು ಮತ್ತು ಡ್ರೋನ್‌ಗಳ ಸಹಾಯದಿಂದ ಹುಡುಕಾಟ ನಡೆಯುತ್ತಿದ್ದು, ಗಾಳಿ ಮಳೆಯ ಸಮಸ್ಯೆಯ ನಡುವೆಯೂ ಕಾರ್ಯಾಚರಣೆ ಮುಂದುವರಿದಿದೆ.
Leave a Reply