ಕಾರವಾರ: ಒಂದು ವಾರದಲ್ಲಿ ಎಲ್ಲಾ ಅಪಾಯಕಾರಿ ಮರಗಳ ತೆರವು : ಸತೀಶ್ ಸೈಲ್

ಕಾರವಾರ, ಜುಲೈ 21, 2025: ಕಾರವಾರ ನಗರಸಭಾ ವ್ಯಾಪ್ತಿಯಲ್ಲಿನ ಅಪಾಯಕಾರಿ ಮರಗಳನ್ನು ಇಂದಿನಿಂದಲೇ ಆರಂಭಿಸಿ ಒಂದು ವಾರದೊಳಗೆ ಸಂಪೂರ್ಣವಾಗಿ ತೆರವುಗೊಳಿಸುವಂತೆ ಅರಣ್ಯ ಇಲಾಖೆ, ಕಂದಾಯ, ಹೆಸ್ಕಾಂ ಮತ್ತು ನಗರಸಭೆ ಅಧಿಕಾರಿಗಳಿಗೆ ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅವರು ಸೋಮವಾರ ನಗರಸಭೆ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾನುವಾರ ಕಾರವಾರ ನಗರಸಭಾ ವ್ಯಾಪ್ತಿಯಲ್ಲಿ ಮರ ಬಿದ್ದು ಮಹಿಳೆ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ತೀವ್ರ ದುಃಖ ವ್ಯಕ್ತಪಡಿಸಿದ ಅವರು ಅಪಾಯಕಾರಿ ಮರಗಳ ತೆರವು ಕುರಿತಂತೆ ನಾನು ಎಚ್ಚರಿಕೆ ನೀಡುತ್ತಲೇ ಇದ್ದರೂ ಈ ಘಟನೆಗೆ ಸಂಭವಿಸಿರುವುದಕ್ಕೆ ಅಧಿಕಾರಿಗಳ ವಿರುದ್ದ ಬೇಸರ ವ್ಯಕ್ತಪಡಿಸಿದ ಅವರು, ಇಂದಿನಿಂದ ಒಂದು ವಾರದ ಒಳಗೆ ಕಾರವಾರ ನಗರಸಭಾ ವ್ಯಾಪ್ತಿಯಲ್ಲಿ ಗುರುತಿಸಿರುವ ಅಪಾಯಕಾರಿ ಮರಗಳನ್ನು ತಕ್ಷಣದಿಂದಲೇ ತೆರವುಗೊಳಿಸುವ ಕಾರ್ಯ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರವಾರ ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೇ 12 ರಿಂದ 18 ಅಪಾಯಕಾರಿಗಳ ಮರಗಳನ್ನು ಗುರುತಿಸಿದ್ದು, ಈ ಮರಗಳನ್ನು ತೆರವುಗೊಳಿಸುವುದು ಮಾತ್ರವಲ್ಲದೇ ಸಾರ್ವಜನಿಕರಿಂದ ಬೇಡಿಕೆ ಬರುವ ಅಪಾಯಕಾರಿ ಮರಗಳನ್ನು ಸಹ ನಿಯಮಾನುಸಾರ ಪರಿಶೀಲಿಸಿ ತೆರವುಗಳಿಸುವಂತೆ ಸೂಚಿಸಿದರು.

ಪ್ರಸ್ತುತ ತೆರವುಗೊಳಿಸುವ ಮರಗಳ ಬದಲಿಗೆ ಮುಂದಿನ ವಾರದಲ್ಲಿ 1:10 ಪ್ರಮಾಣದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ಆರಂಭಿಸುವಂಕವನತೆ ತಿಳಿಸಿದ ಅವರು ಈ ಪ್ರಮಾಣ 1:20 ಕ್ಕೆ ಹೆಚ್ಚಿಸುವ ಕುರಿತಂತೆ ಎಲ್ಲಾ ಸ್ವಯಂ ಸೇವಾ ಸಂಘಟನೆಗಳು ಮತ್ತು ಅಧಿಕಾರಿಗಳು ವಿಶೇಷ ಕಾಳಜಿ ವಹಿಸುವಂತೆ ತಿಳಿಸಿದರು.

ಒಂದು ವಾರದ ಅವಧಿಯಲ್ಲಿ ಮರಗಳನ್ನು ತೆರವು ಮಾಡುವ ಸಂದರ್ಭದಲ್ಲಿ ಸೂಕ್ತ ರೀತಿಯಲ್ಲಿ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವಂತೆ ಮತ್ತು ಸಾರ್ವಜನಿಕರಿಗೆ ಯಾವುದೇ ಅಪಾಯವಾಗದ ರೀತಿಯಲ್ಲಿ ಗರಿಷ್ಠ ಭದ್ರತೆಯಲ್ಲಿ ಕಾರ್ಯನಿರ್ವಹಿಸುವಂತೆ ಪೊಲೀಸ್ ಇಲಾಖೆಗೆ, ವಿದ್ಯುತ್ ಸಂಬಂದಿತ ಸಮಸ್ಯೆ ಕಂಡು ಬರದಂತೆ ಹೆಸ್ಕಾಂ ಇಲಾಖೆಗೆ ಮತ್ತು ಸ್ಥಳದಲ್ಲಿ ಆಂಬುಲೆನ್ಸ್ ಸೇವೆ ಇರುವುದು ಸೇರಿದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸಿದರು.

ನಗರಸಭಾ ವ್ಯಾಪ್ತಿಯ ಕೋಣೆನಾಲದ ಒತ್ತುವರಿಯನ್ನು ಕೂಡಲೇ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಕೋಣೆನಾಲಕ್ಕೆ ಗೃಹ ಬಳಕೆಯ ನೀರು ಮತ್ತು ಶೌಚಾಲಯದ ತ್ಯಾಜ್ಯ ಬಿಡುವವರ ವಿರುದ್ದ ಕ್ರಮ ಕೈಗೊಂಡು ಅವರಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಕಡಿತಗೊಳಿಸುವಂತೆ ನಿರ್ದೇಶನ ನೀಡಿದರು.
ನಗರಸಭಾ ವ್ಯಾಪ್ತಿಯಲ್ಲಿ ಮರಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವವರಿಗೆ ಅವರಿಗೆ ಎಲ್ಲಾ ಅಗತ್ಯ ಸೌಕರ್ಯಗಳನ್ನು ಒದಗಿಸುವಂತೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ 10 ಲಕ್ಷದ ವರೆಗಿನ ವಿಮಾ ಸೌಲಭ್ಯ ಒದಗಿಸುವಂತೆ ನಗರಸಭೆಯ ಪೌರಾಯುಕ್ತರಿಗೆ ಸೂಚಿಸಿದರು.

ಅಪಾಯಕಾರಿ ಮರಗಳ ತೆರವು ಕಾರ್ಯದ ಪ್ರಯುಕ್ತ ಸವಿತಾ ಹೋಟೆಲ್ ಬಳಿಯ ಅಪಾಯಕಾರಿಯಾಗಿದ್ದ ಮರವನ್ನು ಶಾಸಕರ ಸಮ್ಮುಖದಲ್ಲಿ ತೆರವುಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮರಕ್ಕೆ ಪೂಜೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್, ಡಿಎಫ್ಓ ರವಿಶಂಕರ್, ತಹಸೀಲ್ದಾರ್ ನಿಶ್ಚಲ್ ನರೋನ್ಹ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ್, ಕಾರವಾರ ನಗರ ಠಾಣೆಯ ಇನ್ಸ್ಪೆಕ್ಟರ್ ರಮೇಶ ಹೂಗಾರ್, ನಗಸಭೆಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

Comments

Leave a Reply

Your email address will not be published. Required fields are marked *