ಒಳ್ಳೆಯ ಮನಸ್ಸಿಗರು ಇರುವ ಊರು ಕುಂದಾಪುರ: ಎಸ್‌ಪಿ ಹರಿರಾಂ ಶಂಕರ್‌

ಕುಂದಾಪುರ, ಜುಲೈ 21, 2025: ಕರ್ನಾಟಕದಲ್ಲಿ ಕುಂದಾಪುರ ಕನ್ನಡಕ್ಕೆ ವಿಶೇಷ ಸಾಹಿತ್ಯ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಇದೆ ಎಂದು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಂ ಶಂಕರ್‌ ಹೇಳಿದ್ದಾರೆ.

ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಯುಕ್ತ ಕಲಾಕ್ಷೇತ್ರ ಕುಂದಾಪುರ‌ ಟ್ರಸ್ಟ್ ವತಿಯಿಂದ ಕುಂದಾಪುರ ಬೋರ್ಡ್‌ ಹೈಸ್ಕೂಲ್‌ ಮೈದಾನದಲ್ಲಿ ರವಿವಾರ ನಡೆದ ಲಗೋರಿ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಒಳ್ಳೆಯ ಮನಸ್ಸಿನವರು ಇರುವ ಊರು ಕುಂದಾಪುರ. ಕೇರಳದಲ್ಲಿ ತ್ರಿಶೂರು ಭಾಗದ ಮಲಯಾಳಿ ಭಾಷೆಗೆ ವಿಶೇಷ ಪ್ರಾಧಾನ್ಯತೆ ಇರುವಂತೆ, ಕರ್ನಾಟಕದಲ್ಲೂ ಕುಂದಾಪುರ ಕನ್ನಡಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ನನ್ನ ಹುಟ್ಟೂರು ತ್ರಿಶೂರ್‌ ಆಗಿದ್ದರೂ, ಕುಂದಾಪುರ ಎಂದರೆ ನನ್ನ ಹುಟ್ಟೂರು ಎನ್ನುವ ಭಾವನೆ ನನ್ನಲ್ಲಿ ಶಾಶ್ವತವಾಗಿದೆ. ನನಗೆ ಕನ್ನಡ ಕಲಿಸಿದ ಕುಂದಾಪುರಕ್ಕೆ ಪ್ರತಿ ಬಾರಿ ಬರುವಾಗಲೂ, ನನ್ನ ತಂದೆ-ತಾಯಿಯ ಊರಿಗೆ ಬರುತ್ತಿದ್ದೇನೆ ಎನ್ನುವ ಭಾವನೆ ನನ್ನದು. ನನ್ನ ಆಡು ಭಾಷೆಯಲ್ಲಿಯೂ ಕುಂದಾಪ್ರ ಭಾಷೆಯ ಅನೇಕ ಶಬ್ದಗಳು ಹಾಸು ಹೊಕ್ಕಾಗಿದೆ. ಹೀಗಾಗಿ ಈ ಊರು ಎಂದರೆ ನನಗೆ ವಿಶೇಷ ಅಕ್ಕರೆ ಎಂದಿದ್ದಾರೆ.

ಲಗೋರಿ ಸ್ತಂಭಕ್ಕೆ ಚೆಂಡು ಹೊಡೆಯುವ ಮೂಲಕ ಎಸ್‌ಪಿ ಹರಿರಾಂ ಶಂಕರ್‌ ಹಾಗೂ ಕೆ.ಜಯಪ್ರಕಾಶ್‌ ಹೆಗ್ಡೆ ಅವರು ಪಂದ್ಯಾಟಗಳಿಗೆ ಚಾಲನೆ ನೀಡಿದರು. ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್‌ ಅಧ್ಯಕ್ಷ ಬಿ.ಕಿಶೋರ್‌ ಕುಮಾರ್‌, ಕುಂದಾಪ್ರ ಭಾಷಿ ಬೆಳೆಯಬೇಕು, ಇಲ್ಲಿನ ಸಂಸ್ಕೃತಿ ಉಳಿಯಬೇಕು ಎನ್ನುವ ಸದುದ್ದೇಶದಿಂದ ಕಳೆದ ವರ್ಷ ಸಂಘಟಿಸಿದ ಲಗೋರಿ ಕ್ರೀಡಾಕೂಟ ಅತ್ಯದ್ಭುತ ಯಶಸ್ಸು ಕಂಡಿತ್ತು. ಕುಂದಾಪ್ರ ಕನ್ನಡ ಭಾಷೆ ಅರಿಯದವನರು ಸಹ, ಈ ಭಾಷೆಯನ್ನು ಇಷ್ಟಪಡುತ್ತಿದ್ದಾರೆ ಎನ್ನುವುದೇಈ ಭಾಷೆಯ ವಿಶೇಷ ಸಂಕೇತ ಎಂದಿದ್ದಾರೆ.

ಮಾಜಿ ಸಚಿವ, ಕುಂದಗನ್ನಡ ಅಧ್ಯಯನ ಪೀಠದ ಸದಸ್ಯ ಕೆ.ಜಯಪ್ರಕಾಶ್‌ ಹೆಗ್ಡೆ ಮಾತನಾಡಿ, ಕ್ರೀಡಾಕೂಟಗಳು ಭಾವನೆಗಳನ್ನು ಬೆಸೆದು ಎಲ್ಲರನ್ನೂ ಒಗ್ಗೂಡಿಸುತ್ತದೆ. ಇಂತಹ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸುವುದರರಿಂದ, ನಮ್ಮ ಅಬ್ಬಿ ಭಾಷೆಗಳನ್ನು ಮಾತನಾಡುವುದರಿಂದ ಮಕ್ಕಳಲ್ಲಿ ಒಳ್ಳೆಯ ಭಾವನೆಗಳು ಬೆಳೆದು ಭಾಷೆಗಳು ಅಭಿವೃದ್ಧಿಯಾಗುತದೆ.

ಇನ್ನು, ಕುಂದಾಪುರ ಕನ್ನಡ ಅಧ್ಯಯನ ಪೀಠದ ಸದಸ್ಯ ರಾಜೇಶ್‌ ಕೆ.ಸಿ, ಕನ್ನಡ ಸಾಹಿತ್ಯ ಪರಷತ್‌ ಅಧ್ಯಕ್ಷ, ಕುಂದಾಪುರ ತಾಲೂಕು ಅಧ್ಯಕ್ಷ ಡಾ.ಉಮೇಶ್‌ ಪುತ್ರನ್‌, ಎಸ್‌ಬಿಐ ಬ್ಯಾಂಕಿನ ಕಾರವಾರದ ಪ್ರಾದೇಶಿಕ ಪ್ರಬಂದಕ ಮುರಳೀಧರ, ಯುವಜನಸೇವಾ ಮತ್ತು ಕ್ರೀಡಾಧಿಕಾರಿ ಕುಸುಮಾಕರ್‌ ಶೆಟ್ಟಿ, ಲಯನ್ಸ್‌ ಜಿಲಾ ಸ್ವಿತೀಯ ಉಪಗವರ್ನರ್‌ ರಾಜೀವ್‌ ಕೋಟ್ಯಾನ್‌, ಬೈಂದೂರು ಕಂಬಳ ಸಮಿತಿ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ, ಬೋರ್ಡ್‌ ಹೈಸ್ಕೂಲ್‌ ಉಪ ಪ್ರಾಂಶುಪಾಲ ಕಿರಣ್‌ ಹೆಗ್ಡೆ, ಉಪನ್ಯಾಸಕ ಉದಯ್‌ ಕುಮಾರ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಲಾಕ್ಷೇತ್ರದ ರಾಜೇಶ್‌ ಕಾವೇರಿ ಸ್ವಾಗತಿಸಿ. ಪತ್ರಕರ್ತ ಚಂದ್ರಶೇಖರ ಬಿಜಾಡಿ ನಿರೂಪಿಸಿದರು.

Comments

Leave a Reply

Your email address will not be published. Required fields are marked *