ಬೆಂಗಳೂರು, ಜುಲೈ 21, 2025: ವಾಹನ ಸವಾರರ ಅನುಕೂಲ ಮತ್ತು ಶಬ್ದ ಮಾಲಿನ್ಯ ತಡೆಗಟ್ಟಲು ಕರ್ನಾಟಕ ರಾಜ್ಯದಲ್ಲಿ ಇನ್ಮುಂದೆ ವಿಐಪಿ ಸಂಚಾರದ ವೇಳೆ ಸೈರನ್ ಬಳಕೆಯನ್ನು ನಿಷೇಧಿಸಲಾಗಿದೆ. ಈ ಸಂಬಂಧ ಡಿ.ಜಿ.-ಐ.ಜಿ.ಪಿ. ಡಾ. ಎಂ.ಎ. ಸಲೀಂ ಅವರು ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಮತ್ತು ಶಬ್ದ ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ, ವಿಐಪಿ ಸಂಚಾರ ಸಮಯದಲ್ಲಿ ಸೈರನ್ ಬಳಕೆಯನ್ನು ನಿಲ್ಲಿಸುವಂತೆ ಎಲ್ಲಾ ಘಟಕಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗಣ್ಯ ವ್ಯಕ್ತಿಗಳ ಸಂಚಾರದಲ್ಲಿ ಅನಗತ್ಯ ಸೈರನ್ ಬಳಕೆಯಿಂದ ಅವರ ರಸ್ತೆ ಮಾಹಿತಿ ಅನಧಿಕೃತ ವ್ಯಕ್ತಿಗಳಿಗೆ ತಿಳಿಯಬಹುದು ಮತ್ತು ಅಪಾಯ ಉಂಟಾಗುವ ಸಾಧ್ಯತೆ ಇದೆ. ಇದಲ್ಲದೆ, ಇದು ಸಾರ್ವಜನಿಕರಿಗೆ ತೊಂದರೆಯನ್ನೂ ಉಂಟುಮಾಡುತ್ತದೆ.
ಸೈರನ್ನ ಅನಗತ್ಯ ಬಳಕೆಯಿಂದ ಇತರ ಚಾಲಕರಿಗೆ ಗೊಂದಲವಾಗಿ ಅಪಘಾತದ ಸಾಧ್ಯತೆಯೂ ಇದೆ. ಈ ಸಂದರ್ಭದಲ್ಲಿ, ವಾಹನಗಳ ತುರ್ತು ಚಲನೆಗೆ ವೈರ್ಲೆಸ್ ಕಮ್ಯುನಿಕೇಶನ್ ವ್ಯವಸ್ಥೆಯನ್ನು ಬಳಸುವುದು ಶಿಸ್ತಿನ ಮತ್ತು ಸುರಕ್ಷಿತ ಮಾರ್ಗ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಸೈರನ್ ಬಳಕೆಯನ್ನು ಕೇವಲ ಅಂಬ್ಯುಲೆನ್ಸ್, ಪೊಲೀಸ್ ಮತ್ತು ಅಗ್ನಿಶಾಮಕ ವಾಹನಗಳಿಗೆ ಮಾತ್ರ ಮಿತವಾಗಿ ಅನುಮತಿಸಲಾಗಿದೆ.

ಈ ಆದೇಶವನ್ನು ಘಟಕಾಧಿಕಾರಿಗಳು ಸಂಪೂರ್ಣವಾಗಿ ಪಾಲಿಸಬೇಕು ಮತ್ತು ಅಧೀನ ಅಧಿಕಾರಿಗಳಿಗೆ ಜಾರಿ ಮಾಡಬೇಕೆಂದು ಸೂಚಿಸಲಾಗಿದೆ..
Leave a Reply