ಪಹಲ್ಗಾಮ್ ದಾಳಿಯ ನಂತರ ಕರ್ನಾಟಕ ಕರಾವಳಿಯಲ್ಲಿ ತೀವ್ರ ಕಟ್ಟೆಚ್ಚರ: ಪ್ರವಾಸಿ ತಾಣಗಳ ಮೇಲೆ ಪೊಲೀಸರ ತೀಕ್ಷ್ಣ ನಿಗಾ

ಕಾರವಾರ: ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ಬೆನ್ನಲ್ಲೇ ದೇಶಾದ್ಯಂತ ಕ್ಷಣಕ್ಷಣಕ್ಕೂ ಮಹತ್ವದ ಬೆಳವಣಿಗೆಗಳು ದಾಖಲಾಗುತ್ತಿವೆ. ರಾಷ್ಟ್ರದ ಭದ್ರತೆಗೆ ಸಂಬಂಧಿಸಿದಂತೆ ತೀವ್ರ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಕಾವಲು ಪಡೆ, ಭಾರತೀಯ ಕೊಸ್ಟ್ ಗಾರ್ಡ್, ನೌಕಾ ನೆಲೆಯ ಸಿಬ್ಬಂದಿ ಹಾಗೂ ಜಿಲ್ಲಾ ಪೊಲೀಸರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೆಡೆ ಅರಬ್ಬೀ ಸಮುದ್ರ, ಮತ್ತೊಂದೆಡೆ ದೇಶದ ಪ್ರಮುಖ ನೌಕಾ ನೆಲೆ, ಜೊತೆಗೆ ಜಿಲ್ಲೆಗೆ ಆಗಮಿಸುವ ದೇಶ-ವಿದೇಶಿ ಪ್ರವಾಸಿಗರ ಸಂಖ್ಯೆಯ ಸೂಕ್ಷ್ಮತೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ.

ಮುನ್ನೆಚ್ಚರಿಕೆಯ ಕ್ರಮವಾಗಿ, ಸಮುದ್ರದಾಳಕ್ಕೆ ತೆರಳುವ ಮೀನುಗಾರಿಕೆ ಬೋಟ್‌ಗಳು ಮತ್ತು ಹಡಗುಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗಿದೆ. ಕರಾವಳಿ ಕಾವಲು ಪಡೆ ಮತ್ತು ಭಾರತೀಯ ಕೊಸ್ಟ್ ಗಾರ್ಡ್ ಸಿಬ್ಬಂದಿ ಸಮುದ್ರದಾಳಕ್ಕೆ ತೆರಳಿ, ಪ್ರತಿಯೊಂದು ಬೋಟ್‌ನ ಬಗ್ಗೆ ವಿವರವಾದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಜೊತೆಗೆ, ಜಿಲ್ಲೆಯ ಬಂದರುಗಳಿಗೆ ಆಗಮಿಸುವ ಪರ್ಷಿಯನ್ ಬೋಟ್‌ಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ. ಬಂದರುಗಳಲ್ಲಿ ಅಥವಾ ಸಮುದ್ರದಾಳದಲ್ಲಿ ಯಾವುದೇ ಅನುಮಾನಾಸ್ಪದ ಅಥವಾ ಬೇರೆಡೆಯಿಂದ ಬಂದ ಬೋಟ್‌ಗಳು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಮೀನುಗಾರರಿಗೆ ಪೊಲೀಸ್ ತಂಡ ಮನವಿ ಮಾಡಿದೆ.

ದೇಶದ ಅತಿದೊಡ್ಡ ಕದಂಬ ನೌಕಾ ನೆಲೆ ಕಾರವಾರದ ಸಮೀಪದಲ್ಲಿದೆ. ಈ ಕಾರಣದಿಂದ ಕಾರವಾರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಆಗಮಿಸುವ ವಲಸಿಗರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ನೌಕಾ ನೆಲೆಯ ಭದ್ರತೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆಯ ಸೂಚನೆಯಂತೆ, ನೌಕಾ ನೆಲೆಯ ಸಮೀಪದ ರವೀಂದ್ರನಾಥ್ ಠಾಗೋರ್ ಕಡಲತೀರದಲ್ಲಿ ಮೇ 4ರಂದು ನಡೆಯಬೇಕಿದ್ದ ಪ್ರಸಿದ್ಧ ಕರಾವಳಿ ಉತ್ಸವವನ್ನು ಮುಂದೂಡಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.

Comments

Leave a Reply

Your email address will not be published. Required fields are marked *