ಭಟ್ಕಳ: ನಿದ್ರೆ ಮಾತ್ರೆ ಕೊಟ್ಟು ಗಂಡನಿಗೆ ಚಟ್ಟ ಕಟ್ಟಿದ ಹೆಂಡ್ತಿಗೆ ಜೀವಾವಧಿ ಶಿಕ್ಷೆ

ಭಟ್ಕಳ: ಗಂಡ 2ನೇ ಮದುವೆಯಾದ ಎಂಬ ಕಾರಣಕ್ಕೆ ಆತನನ್ನು ಕೊಲೆ ಮಾಡಿದ ಪತ್ನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಭಟ್ಕಳದ ರೇಷ್ಮಾ ಖಾನಮ್ ಶಿಕ್ಷೆಗೊಳಗಾದ ಅಪರಾಧಿ ಭಟ್ಕಳ ಮೌಲಾನಾ ಆಜಾದ್ ರಸ್ತೆಯ ಅಬ್ದುಲ್ ನಾಸಿರ್ ಕೊಲೆಯಾದ ಪತಿ. 2017ರ ಫೆ.17 ರಂದು ಘಟನೆ ನಡೆದಿತ್ತು. ಪತಿಗೆ ನಿದ್ರೆ ಮಾತ್ರೆ ಕೊಟ್ಟು ಮಲಗಿಸಿದ ಪತ್ನಿ ನಂತರ ವೇಲ್‌ನಿಂದ ಆತನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಳು. ನಂತರ ಮಲಗಿದಲ್ಲೇ ಆತ ಮೃತಪಟ್ಟಿದ್ದಾನೆ ಎಂದು ನಾಟಕವಾಡಿದ್ದಳು.

ಕೊಲೆ ಮಾಡಲು ಬಳಸಿ ವೇಲನ್ನು ವಾಷಿಂಗ್ ಮಷಿನ್‌ಗೆ ಹಾಕಿ ತೊಳೆದು, ಸಾಕ್ಷ್ಯವನ್ನು ನಾಶಪಡಿಸಿದ್ದಳು. ಆದರೆ, ಆಕೆಯ ವರ್ತನೆಯಿಂದ ಅನುಮಾನಗೊಂಡಿದ್ದ ಮೃತರ ಸಹೋದರನ ಪುತ್ರ ಭಟ್ಕಳ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ತನಿಖೆ ನಡೆಸಿದ ಶಹರ ಠಾಣೆ ಪೊಲೀಸರು ರೇಷ್ಮಾಳನ್ನು ಬಂಧಿಸಿ ವಿಚಾರಣೆ ನಡೆಸಿ, ಸಾಕ್ಷ್ಯಗಳನ್ನು ಕಲೆ ಹಾಕಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯಶ ಡಿ.ಎಸ್ ವಿಜಯಕುಮಾರ್ ಅವರು, ಅಪರಾಧ ಸಾಬೀತಾದ ಕಾರಣ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಜತೆಗೆ 6 ಸಾವಿರ ರೂ. ದಂಡ ತುಂಬುವಂತೆ ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

Comments

Leave a Reply

Your email address will not be published. Required fields are marked *