ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದ ವಧು! ಕಂಗಾಲಾದ ವರ; ಮುರಿದುಬಿದ್ದ ವಿವಾಹ

ಹಾಸನ: ಮುಹೂರ್ತದ ಸಂದರ್ಭದಲ್ಲಿ ವಧು ನಿರಾಕರಿಸಿದ ಕಾರಣದಿಂದಾಗಿ ನಗರದ ಕಲ್ಯಾಣ ಮಂಟಪವೊಂದರಲ್ಲಿ ಶುಕ್ರವಾರ ಬೆಳಿಗ್ಗೆ ಏರ್ಪಾಟಾಗಿದ್ದ ಮದುವೆಯೊಂದು ವಿಫಲವಾಯಿತು. ಬೇರೊಬ್ಬನೊಂದಿಗೆ ಪ್ರೀತಿಯಲ್ಲಿದ್ದು, ಆತನನ್ನೇ ಮದುವೆಯಾಗುವುದಾಗಿ ವಧು ಕೊನೆಯ ಕ್ಷಣದಲ್ಲಿ ಘೋಷಿಸಿದ್ದರಿಂದ ವರ ಮತ್ತು ವಧುವಿನ ಕುಟುಂಬಸ್ಥರಿಗೆ ದಿಕ್ಕು ತೋಚದಂತಾಯಿತು.

ಮಂತ್ರೋಚ್ಚಾರಣೆ ಮತ್ತು ಗಟ್ಟಿಮೇಳದ ಸದ್ದಿನೊಂದಿಗೆ ವರ ತಾಳಿ ಕಟ್ಟಲು ಸಿದ್ಧನಾಗಿದ್ದ. ತಾಳಿ ಕಟ್ಟುವ ಕ್ಷಣ ಬಂದಾಗ, ‘ಈ ಮದುವೆ ಬೇಡ’ ಎಂದು ವಧು ಒತ್ತಾಯಪೂರ್ವಕವಾಗಿ ಹೇಳಿದಳು. ಕೆಲವೇ ಕ್ಷಣಗಳ ಮೊದಲು ತನ್ನ ಪ್ರಿಯಕರನಿಂದ ಕರೆ ಬಂದಿದ್ದರಿಂದ ವಧು ಮದುವೆಯನ್ನು ನಿರಾಕರಿಸಿದಳು.

ಈ ವೇಳೆ, ‘ನಿಜವಾಗಿಯೂ ಮದುವೆಯಾಗಲು ಇಷ್ಟವಿದೆಯೇ?’ ಎಂದು ವರ ಕೂಡ ಹಲವು ಬಾರಿ ಪ್ರಶ್ನಿಸಿದ. ಆದರೆ, ಮದುವೆ ಇಷ್ಟವಿಲ್ಲ ಎಂದು ವಧು ಸ್ಪಷ್ಟವಾಗಿ ತಿಳಿಸಿದಳು. ವಧುವಿನ ಪೋಷಕರು ಬೆದರಿಕೆಯಿಂದಲಾದರೂ ಮದುವೆ ಮಾಡಿಸಲು ಯತ್ನಿಸಿದರಾದರೂ, ‘ನಾನು ಬೇರೊಬ್ಬನನ್ನು ಪ್ರೀತಿಸುತ್ತಿದ್ದೇನೆ’ ಎಂದು ವಧು ಹೇಳಿದಳು.

ಮದುವೆ ಬೇಡ ಎಂದು ಹೇಳಿ, ವಧು ಹಸಮಣೆಯಿಂದ ಎದ್ದು ಕಲ್ಯಾಣ ಮಂಟಪದಿಂದ ಕಾರಿನಲ್ಲಿ ನೇರವಾಗಿ ಹೊರಟುಹೋದಳು. ಎರಡೂ ಕುಟುಂಬಗಳ ನಡುವೆ ಗೊಂದಲ ಮತ್ತು ಗಲಾಟೆ ಉಂಟಾಯಿತು. ಬಡಾವಣೆ ಮತ್ತು ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

ಕಣ್ಣೀರಿಟ್ಟ ಕುಟುಂಬಸ್ಥರು: ಸರ್ಕಾರಿ ಶಾಲೆಯ ಶಿಕ್ಷಕನಾಗಿರುವ ವರನ ಕುಟುಂಬವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಮದುವೆ ಏರ್ಪಾಟು ಮಾಡಿದ್ದರು. ಬಂಧು-ಮಿತ್ರರನ್ನು ಆಹ್ವಾನಿಸಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಈ ಘಟನೆ ಸಂಭವಿಸಿದ್ದರಿಂದ ವರ ಸೇರಿದಂತೆ ಕುಟುಂಬಸ್ಥರು ಕಣ್ಣೀರಿಟ್ಟರು.

ವಧುವಿನ ಪೋಷಕರು ತಮ್ಮ ಮಗಳನ್ನು ಬೇಡಿಕೊಂಡರಾದರೂ, ಆಕೆ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ಮಗಳ ನಿರ್ಧಾರದಿಂದ ಆಘಾತಕ್ಕೊಳಗಾದ ಪೋಷಕರು ಕಣ್ಣೀರಿಟ್ಟರು.

Comments

Leave a Reply

Your email address will not be published. Required fields are marked *