ಕುಂದಾಪುರ, ಮೇ 19, 2025: ತಾಲೂಕಿನ ಹಂಗಳೂರು ನಿವಾಸಿಯೊಬ್ಬರು (ಮಹಿಳೆ, 30) ಸಲ್ಲಿಸಿದ ಖಾಸಗಿ ದೂರಿನ ಮೇರೆಗೆ ಚಿನ್ನದ ವಂಚನೆ ಪ್ರಕರಣದಲ್ಲಿ ಮೂವರು ಆರೋಪಿಗಳ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪಿರ್ಯಾದಿದಾರರ ಗಂಡ ವಿದೇಶದಲ್ಲಿದ್ದು, ಕಷ್ಟದ ಸಮಯಕ್ಕಾಗಿ 850 ಗ್ರಾಂ ಚಿನ್ನವನ್ನು ತೆಗೆದಿಟ್ಟಿದ್ದರು. ಸುಮಾರು ಐದು ವರ್ಷಗಳ ಹಿಂದೆ, ಪಿರ್ಯಾದಿದಾರರ ತಮ್ಮನಾದ ಮೊದಲ ಆರೋಪಿ, ವ್ಯವಹಾರದ ಉದ್ದೇಶಕ್ಕಾಗಿ ಈ ಚಿನ್ನವನ್ನು ಪಡೆದುಕೊಂಡಿದ್ದಾನೆ. ಆದರೆ, ಚಿನ್ನವನ್ನು ವಾಪಸ್ ನೀಡದೆ, ಪಿರ್ಯಾದಿದಾರರು ಕೇಳಿದಾಗ “ಇವತ್ತು-ನಾಳೆ” ಎಂದು ಸತಾಯಿಸುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ, ಪಿರ್ಯಾದಿದಾರರು ಮೊದಲ ಆರೋಪಿಯಲ್ಲಿ ಚಿನ್ನದ ಬಗ್ಗೆ ವಿಚಾರಿಸಿದಾಗ, ಎರಡನೇ ಆರೋಪಿಯ ಮೂಲಕ ಚಿನ್ನವನ್ನು ಮೂರನೇ ಆರೋಪಿಗೆ ನೀಡಿರುವುದಾಗಿ ತಿಳಿಸಿದ್ದಾನೆ. ಆದರೆ, ಮೂರನೇ ಆರೋಪಿಯ ಬಳಿ ವಿಚಾರಿಸಿದಾಗ, “ಅದನ್ನು ನಿಮಗೆ ಕೊಡಲು ಆಗುವುದಿಲ್ಲ, ಅದು ನನ್ನ ಚಿನ್ನ. ಇನ್ನು ಮುಂದೆ ಚಿನ್ನದ ವಿಚಾರಕ್ಕೆ ಬಂದರೆ ಸುಮ್ಮನೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿಗಳು ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ಚಿನ್ನವನ್ನು ತೆಗೆದುಕೊಂಡು, ನಂಬಿಕೆ ದ್ರೋಹ ಮಾಡಿ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2025ರ ಅಡಿಯಲ್ಲಿ ಕಲಂ 351, 352, 318(4), 316(2), ಮತ್ತು 3(2) BNS ರಂತೆ ಪ್ರಕರಣ ದಾಖಲಾಗಿದೆ.
Leave a Reply