ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಕುಂದಾಪುರ (ರಿ.) ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ – ಶಿಕ್ಷಕರ ಓರಿಯಂಟೇಶನ್ ಕಾರ್ಯಕ್ರಮ – 2025

ಕುಂದಾಪುರ, ಮೇ 27, 2025: ಮಕ್ಕಳನ್ನು ಕೇವಲ ಪಠ್ಯಪುಸ್ತಕಗಳಿಗೆ ಸೀಮಿತಗೊಳಿಸದೆ, ಎಲ್ಲಾ ವಿಧದ ಜ್ಞಾನವನ್ನು ಪಡೆಯಲು ಅವಕಾಶ ಕಲ್ಪಿಸಬೇಕು. ಶಿಕ್ಷಣದ ನಿಜವಾದ ಉದ್ದೇಶವು ಮಕ್ಕಳಲ್ಲಿರುವ ಎಲ್ಲಾ ಪ್ರತಿಭೆಗಳನ್ನು ಹೊರತಂದು ಜಗತ್ತಿಗೆ ಪರಿಚಯಿಸುವುದಾಗಿದೆ ಎಂದು ಹೆಸ್ಕುತೂರು ಶಾಲೆಯ ಮುಖ್ಯ ಶಿಕ್ಷಕ ಅಬ್ದುಲ್ ರವೂಫ್‌ ಹೇಳಿದರು. ಶಿಕ್ಷಕರು ತರಬೇತಿ ಕಾರ್ಯಗಾರಗಳಲ್ಲಿ ಭಾಗವಹಿಸಿ, ಹೆಚ್ಚಿನ ಜ್ಞಾನವನ್ನು ಗಳಿಸಿದಾಗ ಮಕ್ಕಳನ್ನು ಕ್ರಿಯಾಶೀಲ ಕಲಿಕೆಯಲ್ಲಿ ತೊಡಗಿಸಲು ಸಾಧ್ಯವಾಗುತ್ತದೆ. ಪಠ್ಯದ ಜೊತೆಗೆ ಚಟುವಟಿಕೆಗಳನ್ನು ಸಂಯೋಜಿಸಿದರೆ, ಮಕ್ಕಳು ಆಸಕ್ತಿಯಿಂದ ಕಲಿಕೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಕ್ಕಳ ಜ್ಞಾನ ಮತ್ತು ಬುದ್ಧಿಮಟ್ಟವನ್ನು ಅಳೆಯಲು ಕೇವಲ ಅಂಕಗಳು ಆಧಾರವಾಗದು; ಸರ್ವಾಂಗೀಣ ಪ್ರಗತಿಯೇ ಶಿಕ್ಷಣದ ಸಾರ್ಥಕತೆಯನ್ನು ತೋರಿಸುತ್ತದೆ. ಇದಕ್ಕೆ ಶಿಕ್ಷಕರ ತರಬೇತಿ ಕಾರ್ಯಗಾರಗಳು ಸಹಕಾರಿಯಾಗುತ್ತವೆ ಎಂದು ಅವರು ತಿಳಿಸಿದರು.

ಅವರು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೇ 26 ರಿಂದ 28 ರವರೆಗೆ ಆಯೋಜಿಸಲಾದ ಮೂರು ದಿನಗಳ ಶಿಕ್ಷಕರ ತರಬೇತಿ ಕಾರ್ಯಗಾರದ ಒರಿಯೆಂಟೇಷನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಇಂತಹ ತರಬೇತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಶಿಕ್ಷಕರನ್ನು ಇನ್ನಷ್ಟು ಕ್ರಿಯಾಶೀಲರನ್ನಾಗಿಸಲು ಇದು ಸಹಾಯಕವಾಗಿದೆ. ಇಂದಿನ ಶಿಕ್ಷಣ ವ್ಯವಸ್ಥೆಯು ದಿನನಿತ್ಯ ಬದಲಾವಣೆಗೊಳ್ಳುತ್ತಿದ್ದು, ಶಿಕ್ಷಕರು ಹೊಸ ಚಿಂತನೆಗಳನ್ನು ಅಳವಡಿಸಿಕೊಂಡು ಶೈಕ್ಷಣಿಕ ವಿದ್ಯಾಮಾನಕ್ಕೆ ಹೊಂದಿಕೊಳ್ಳಬೇಕು. ಮೊಬೈಲ್ ಯುಗದಲ್ಲಿ ಮಕ್ಕಳನ್ನು ಕಲಿಕೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡಲು ತರಬೇತಿ ಕಾರ್ಯಗಾರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ಮೊದಲ ದಿನದ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಫ್ರೀಲ್ಯಾನ್ಸ್ ಅಕಾಡೆಮಿಕ್ ಕೌನ್ಸಿಲ್ ಕನ್ಸಲ್ಟೆಂಟ್ ಮತ್ತು ಸಾಫ್ಟ್ ಸ್ಕಿಲ್ಸ್ ತರಬೇತುದಾರ ಅರುಣ್ ಎಸ್ ಭಾಗವಹಿಸಿದರು. ಶಿಕ್ಷಕರು ಉತ್ಸಾಹದಿಂದ ಕಾರ್ಯಗಾರದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಕೆ, ಓರಿಯಂಟಲ್ ಬ್ಲಾಕ್ ಸ್ವಾನ್ ಪ್ರಕಾಶನದ ಚೇತನ್ ಮತ್ತು ಇತರರು ಉಪಸ್ಥಿತರಿದ್ದರು. ಶಿಕ್ಷಕಿ ಸುಧಾ ಕಾರ್ಯಕ್ರಮವನ್ನು ನಿರೂಪಿಸಿದರು.

Comments

Leave a Reply

Your email address will not be published. Required fields are marked *