ಕಾಪು, 27 ಮೇ 2025: ತಾಲೂಕಿನ ಶಂಕರಪುರದ ಜೊಸ್ಸಿ ಡಿಕ್ರೂಸ್ (54) ಎಂಬವರು ಫೇಸ್ಬುಕ್ ಮೂಲಕ ಆಗಿರುವ ವಂಚನೆಯಿಂದ 75 ಲಕ್ಷ ರೂಪಾಯಿ ಕಳೆದುಕೊಂಡ ಘಟನೆಯೊಂದು ನಡೆದಿದೆ.
ಫಿರ್ಯಾದಿದಾರರಾದ ಜೊಸ್ಸಿ ಡಿಕ್ರೂಸ್, ವಿದೇಶದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದವರು, ಆರೋಗ್ಯದ ಕಾರಣದಿಂದ ಎರಡು ವರ್ಷಗಳ ಹಿಂದೆ ಊರಿಗೆ ಮರಳಿದ್ದರು. 2025ರ ಫೆಬ್ರವರಿಯಲ್ಲಿ ಫೇಸ್ಬುಕ್ ಮೂಲಕ ಅರೋಹಿ ಅಗರ್ವಾಲ್ ಎಂಬ ಮಹಿಳೆಯ ಪರಿಚಯವಾಗಿತ್ತು. ಆಕೆಯಿಂದ ವಾಟ್ಸಾಪ್ ಸಂಖ್ಯೆ ಪಡೆದ ಫಿರ್ಯಾದಿದಾರರು ಚಾಟ್ ಮಾಡುತ್ತಿದ್ದಾಗ, FXCM ಗೋಲ್ಡ್ ಟ್ರೇಡಿಂಗ್ನಲ್ಲಿ ಹಣ ಹೂಡಿಕೆ ಮಾಡಿದರೆ ಭಾರೀ ಲಾಭಾಂಶ ದೊರೆಯುತ್ತದೆ ಎಂದು ಆಕೆ ಸಂದೇಶ ಕಳುಹಿಸಿದ್ದಳು.
ಈ ಮಾತನ್ನು ನಂಬಿದ ಜೊಸ್ಸಿ, ತಮ್ಮ ಶಂಕರಪುರದ ಕೆನರಾ ಬ್ಯಾಂಕ್ ಖಾತೆಯಿಂದ 09/04/2025 ರಿಂದ 12/05/2025ರವರೆಗೆ ಹಂತಹಂತವಾಗಿ ಒಟ್ಟು 75,00,000 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ, ಅಪರಿಚಿತ ವ್ಯಕ್ತಿಗಳು ಫಿರ್ಯಾದಿದಾರರ ಹೂಡಿಕೆಯ ಹಣವನ್ನಾಗಲೀ ಅಥವಾ ಲಾಭಾಂಶವನ್ನಾಗಲೀ ನೀಡದೇ ವಂಚಿಸಿದ್ದಾರೆ.
ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕ್ರಮಾಂಕ 21/2025ರಡಿ ಕಲಂ 66(ಸಿ), 66(ಡಿ) ಐ.ಟಿ. ಆಕ್ಟ್ ಮತ್ತು 318(4) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Leave a Reply