ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪತ್ತೆಗಾಗಿ ಎಲ್ಲೆಂದರಲ್ಲಿ ನಿಂತು ಅವೈಜ್ಞಾನಿಕವಾಗಿ ತಪಾಸಣೆ ಮಾಡದಂತೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗದ ರೀತಿ ಕಾರ್ಯಾಚರಣೆ ನಡೆಸಬೇಕೆಂದು ಬೆಂಗಳೂರು ನಗರ ಸಂಚಾರ ಪೊಲೀಸರಿಗೆ ಹಿರಿಯ ಅಧಿಕಾರಿಗಳು ತಾಕೀತು ಮಾಡಿದ್ದಾರೆ.
ಜನಾಕ್ರೋಶಕ್ಕೆ ಕಾರಣವಾದ ಮಂಡ್ಯದ ಘಟನೆ: ಹೆಲ್ಮೆಟ್ ತಪಾಸಣೆ ವೇಳೆ ಬೈಕ್ ಸವಾರರನ್ನು ಸಂಚಾರ ಪೊಲೀಸರು ತಡೆದಿದ್ದ ವೇಳೆ ಸವಾರನ ಜೊತೆಗಿದ್ದ ಮೂರು ವರ್ಷದ ಮಗು ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ಮಂಡ್ಯದಲ್ಲಿ ನಡೆದಿತ್ತು. ಅವೈಜ್ಞಾನಿಕ ತಪಾಸಣೆ ನಡೆಸಿದ್ದ ಬಗ್ಗೆ ಸಂಚಾರ ಪೊಲೀಸರ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಈ ದುರ್ಘಟನೆಯಿಂದ ಎಚ್ಚೆತ್ತುಕೊಂಡಿರುವ ನಗರ ಸಂಚಾರ ವಿಭಾಗವು ವಾಹನ ಸವಾರರಿಗೆ ತೊಂದರೆಯಾಗದ ರೀತಿ ಹಾಗೂ ತೆರೆಮರೆಯಲ್ಲಿ ನಿಂತು ದಿಢೀರ್ ವಾಹನಗಳನ್ನು ಅಡ್ಡಗಟ್ಟದಂತೆ ಸಂಚಾರ ಪೊಲೀಸರಿಗೆ ಮೌಖಿಕವಾಗಿ ತಾಕೀತು ಮಾಡಿದೆ.
ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚಿ, ಸವಾರರಿಗೆ ದಂಡ ವಿಧಿಸುವ ಜೊತೆಗೆ ಟ್ರಾಫಿಕ್ ಟ್ರಾಫಿಕ್ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸುವುದು ಟ್ರಾಫಿಕ್ ಪೊಲೀಸರ ಕರ್ತವ್ಯ. ಉಲ್ಲಂಘನೆಗಳ ಪತ್ತೆ ನೆಪದಲ್ಲಿ ಪೊಲೀಸರು ರಸ್ತೆ ತಿರುವಿನಲ್ಲಿ ನಿಲ್ಲುವುದು, ಗೋಡೆ ಬದಿ ಬಚ್ಚಿಟ್ಟುಕೊಂಡು ಏಕಾಏಕಿ ವಾಹನಗಳನ್ನು ಅಡ್ಡಗಟ್ಟುವುದು ಸರಿಯಾದ ಕ್ರಮವಲ್ಲ. ವೇಗವಾಗಿ ಬರುವ ಸವಾರರಿಗೆ ದಿಢೀರ್ ಆಗಿ ಕೈ ಹಾಕಿ ನಿಲ್ಲಿಸುವಂತೆ ಸೂಚಿಸುವುದರಿಂದ ನಿಯಂತ್ರಣ ತಪ್ಪಿ, ಅಪಘಾತಕ್ಕೂ ಕಾರಣವಾಗಲಿದೆ. ಸಿಡ್ಕ್ ಆಗಿ ಬಿದ್ದು ಸಣ್ಣಪುಟ್ಟ ಗಾಯಗಳಾಗಿರುವ ನಿದರ್ಶನಗಳಿವೆ. ತಿರುವಿನಲ್ಲಿ ನಿಂತು ಏಕಾಏಕಿ ವಾಹನಗಳನ್ನು ತಡೆಯಬಾರದೆಂಬ ನಿಯಮವಿದ್ದರೂ, ಸಂಚಾರ ಪೊಲೀಸರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಂತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ದರ್ಪ ತೋರಿಸುತ್ತಾರೆ ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದರು.
ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಹೇಳುವುದೇನು?:
- ಸರ್ಪ್ರೈಸ್ ರೀತಿ ತಪಾಸಣೆ ಮಾಡಿ ಸವಾರರಿಗೆ ತೊಂದರೆ ಮಾಡಬೇಡಿ.
- ಮಂಡ್ಯದಲ್ಲಿ ನಡೆದ ದುರಂತ ಮರುಕಳಿಸದಿರಲು ಹಾಗೂ ವೈಜ್ಞಾನಿವಾಗಿ ವಾಹನಗಳ ತಪಾಸಣೆ ಮಾಡಬೇಕು.
- ಅನಗತ್ಯ ಸಂದರ್ಭಗಳಲ್ಲಿ ತೆರೆಮರೆಯಲ್ಲಿ ನಿಲ್ಲದೆ, ಏಕಾಏಕಿ ವಾಹನ ಸವಾರರಿಗೆ ತೊಂದರೆಯಾಗದಂತೆ ಕಾರ್ಯಾಚರಣೆ ಕೈಗೊಳ್ಳಬೇಕು.
- ಸಿಗ್ನಲ್ ಬದಿಯಲ್ಲಿ, ರಸ್ತೆ ತಿರುವಿನಲ್ಲಿ ಸೇರಿದಂತೆ ಅನಪೇಕ್ಷಿತವಾಗಿ ವಾಹನಗಳನ್ನು ಅಡ್ಡಗಟ್ಟದಿರಿ.
- ಪೀಕ್ ಅವರ್ನಲ್ಲಿ ತಪಾಸಣೆ ಕೈಗೊಳ್ಳಬೇಡಿ.
- ತಪಾಸಣೆ/ದಂಡ ವಿಧಿಸುವಾಗ ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮರಾ ಧರಿಸಬೇಕು ಜಂಟಿ ಪೊಲೀಸ್ ಆಯುಕ್ತರು ತಾಕೀತು ಮಾಡಿದ್ದಾರೆ.
ಟಾರ್ಗೆಟ್ ನೀಡಿಲ್ಲ- ಸಂಚಾರ ಡಿಸಿಪಿ: “ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸುವ ಹಾಗೂ ಸುಗಮ ಸಂಚಾರಕ್ಕೆ ಧಕ್ಕೆ ತರುವವರ ವಿರುದ್ಧ ನಿರಂತರವಾಗಿ ಅಭಿಯಾನ ಕೈಗೊಂಡು ಸವಾರರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಲಾಗುತ್ತಿದೆ. ಎಲ್ಲಾ ಮಾದರಿಯ ಉಲ್ಲಂಘನೆಗಳನ್ನು ಏಕಾಏಕಿ ಒಂದೇ ದಿನದಲ್ಲಿ ತಪಾಸಣೆ ಮಾಡದೆ, ಹೆಚ್ಚು ಉಲ್ಲಂಘನೆ ಕಂಡುಬರುವ ಸಂಚಾರ ಅಪರಾಧಗಳನ್ನು ನಿರ್ದಿಷ್ಟ ದಿನದಂದು ನಿಗಡಿಪಡಿಸಿ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಎಫ್ಟಿವಿಆರ್ (ಫೀಲ್ಡ್ ಟ್ರಾಫಿಕ್ ವೈಯಲೇಷನ್ ರಿಪೋರ್ಟ್) ಪ್ರತಿನಿತ್ಯ 15-20 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಪಾಸಣೆ ನಡೆಸುವ ಸಿಬ್ಬಂದಿಗೆ ದಾಖಲಿಸುವಂತೆ ಸೂಚಿಸಲಾಗಿದೆಯೇ ಹೊರತು ಬೇರೆ ಯಾವ ಪ್ರಕರಣಗಳಿಗೂ ಇಂತಿಷ್ಟೇ ಸಂಖ್ಯೆಯಲ್ಲಿ ಕೇಸ್ ದಾಖಲಿಸಬೇಕೆಂದು ಟಾರ್ಗೆಟ್ ನಿಗದಿಪಡಿಸಿಲ್ಲ” ಎಂದು ಉತ್ತರ ವಿಭಾಗದ ಸಂಚಾರ ಡಿಸಿಪಿ ಸಿರಿಗೌರಿ ಅವರು ‘ಈಟಿವಿ ಭಾರತ’ಕ್ಕೆ ತಿಳಿಸಿದ್ದಾರೆ.
ಸಂಚಾರ ಪೊಲೀಸರು ಅವೈಜ್ಞಾನಿಕವಾಗಿ ವಾಹನ ಸವಾರರನ್ನು ತಡೆಯಬಾರದು. ವ್ಯವಸ್ಥಿತ ಪದ್ಧತಿಯನ್ನು ಪೊಲೀಸರು ಅನುಸರಿಸಬೇಕು. ಈ ಕುರಿತು ಸಂಚಾರ ಪೊಲೀಸರಿಗೆ ಸೂಚನೆ ನೀಡಿದ್ದೇನೆ – ಜಿ.ಪರಮೇಶ್ವರ್, ಗೃಹ ಸಚಿವ
ವಾಹನ ತಪಾಸಣೆ ಮಾಡುವಾಗ ಸಂಚಾರ ಪೊಲೀಸರು ಅನುಸರಿಸಬೇಕಾದ ನಿಯಮಗಳು:
- ರಸ್ತೆ ಬದಿ ವಾಹನ ತಪಾಸಣೆ ಮಾಡುವಾಗ ಸೂಕ್ಷ್ಮ ಹಾಗೂ ಸಂವೇದನೆಯಿಂದ ವರ್ತಿಸಿ.
- ಏಕಾಏಕಿ ವಾಹನಗಳನ್ನು ಅಡ್ಡಗಟ್ಟಿ ವಾಹನ ಸವಾರರನ್ನು ಗಾಬರಿಗೊಳಿಸಬೇಡಿ.
- ರಸ್ತೆ ತಿರುವು, ಜಂಕ್ಷನ್ ಹಾಗೂ ತೆರೆಮರೆಯಲ್ಲಿ ನಿಂತು ತಪಾಸಣೆ ಮಾಡಬೇಡಿ.
- ಅತ್ಯಾಧುನಿಕ ತಂತ್ರಜ್ಞಾನಗಳ ನೆರವಿನಿಂದ ಉಲ್ಲಂಘಿಸಿದ ವಾಹನಗಳ ಫೋಟೊ ಸೆರೆಹಿಡಿದು, ಸವಾರರ ಮನೆಗೆ ನೋಟಿಸ್ ಜಾರಿಗೆ ಆದ್ಯತೆ ನೀಡಿ.
- ಸುರಕ್ಷಿತ ಹಾಗೂ ನಿರ್ದಿಷ್ಟ ಸ್ಥಳಗಳಲ್ಲಿ ನಿಂತು ವಾಹನ ತಪಾಸಣೆ ನಡೆಸಿ.
Leave a Reply