ಕಲಬುರಗಿ: ಮುಸ್ಲಿಮರ ಸಾಮೂಹಿಕ ಹತ್ಯೆಗೆ ಕರೆ ನೀಡಿದ ಬಿಜೆಪಿ ನಾಯಕ; ಎಫ್ಐಆರ್ ದಾಖಲು

ಮುಸ್ಲಿಮರ ಸಾಮೂಹಿಕ ಹತ್ಯೆ ನಡೆಸಬೇಕು ಎಂದು ಬೆದರಿಕೆ ಹಾಕಿದ್ದಕ್ಕಾಗಿ ಕಲಬುರಗಿ ಪೊಲೀಸರು ಚಿತ್ತಾಪುರದ ಬಿಜೆಪಿ ನಾಯಕ ಮಣಿಕಂಠ ರಾಥೋಡ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ. ಅವರ ಬೆದರಿಕೆ ಹಾಕುತ್ತಿರುವ ವಿಡಿಯೊ ಶನಿವಾರ (ಮೇ 31, 2025) ವೈರಲ್ ಆಗಿದ್ದು, ಸೈಯದ್ ಅಲೀಮ್ ಇಲಾಹಿ ಎಂಬವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿವಿಧ ಧರ್ಮಗಳ ಸಮುದಾಯಗಳ ನಡುವೆ ದ್ವೇಷವನ್ನು ಪ್ರಚೋದಿಸುವ ಕಾಲ್ಪನಿಕ ಸಿದ್ದಾಂತವಾದ ‘ಲವ್ ಜಿಹಾದ್’ನ ಅಪರಾಧಿಗಳನ್ನು ಎಂಟು ದಿನಗಳಲ್ಲಿ ಕೊಲ್ಲಲು ರಾಥೋಡ್ ಕರೆ ನೀಡಿದ್ದಾರೆ ಎಂದು ಅಲೀಮ್ ಇಲ್ಲಾಹಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ದೂರು ಮತ್ತು ವೈರಲ್ ಆದ ವೀಡಿಯೊದ ಆಧಾರದ ಮೇಲೆ, ರಾಥೋಡ್ ವಿರುದ್ಧ ಕಲಬುರಗಿಯ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 196 (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 197 (ರಾಷ್ಟ್ರೀಯ ಏಕೀಕರಣಕ್ಕೆ ಪೂರ್ವಾಗ್ರಹ ಪೀಡಿತ ಆರೋಪಗಳು ಅಥವಾ ಪ್ರತಿಪಾದನೆಗಳು), 299 (ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು), 253 (ಸಾರ್ವಜನಿಕ ದುಷ್ಕೃತ್ಯಕ್ಕೆ ಕಾರಣವಾಗುವ ಹೇಳಿಕೆಗಳು) ಮತ್ತು 351 (ಕ್ರಿಮಿನಲ್ ಬೆದರಿಕೆ) ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್), 2023 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವೀಡಿಯೊದಲ್ಲಿ ರಾಥೋಡ್ ತಮ್ಮ ಲಂಬಾಣಿ ಭಾಷೆಯಲ್ಲಿ ಮಾತನಾಡುತ್ತಾ, ಇತ್ತೀಚೆಗೆ ಮುಸ್ಲಿಂ ಯುವಕರು ಲಂಬಾಣಿ ಹುಡುಗಿಯ ಮೇಲೆ ನಡೆಸಿದ ಅತ್ಯಾಚಾರವನ್ನು ಉಲ್ಲೇಖಿಸಿದ್ದು, ಮುಸ್ಲಿಮರ ವಿರುದ್ಧದ ದ್ವೇಷವನ್ನು ತೀರಿಸಿಕೊಳ್ಳಲು ತಮ್ಮ ಸಮುದಾಯದ ಸದಸ್ಯರಿಗೆ ಕರೆ ನೀಡಿದ್ದಾರೆ. ಈ ವೀಡಿಯೊದಲ್ಲಿ ರಾಥೋಡ್ ಅವರು ಮುಸ್ಲಿಮರ ವಿರುದ್ಧ ಸಾಮೂಹಿಕ ಹಿಂಸಾಚಾರಕ್ಕೆ ಬೆದರಿಕೆ ಹಾಕುತ್ತಿರುವುದು ಕಂಡುಬಂದಿದೆ.

“ಪೊಲೀಸರನ್ನು ಕೇವಲ 15 ನಿಮಿಷಗಳ ಕಾಲ ತಡೆಹಿಡಿದರೆ, ಕಲಬುರಗಿಯಲ್ಲಿರುವ ಎಲ್ಲಾ ಮುಸ್ಲಿಮರನ್ನು ಹತ್ಯೆ ಮಾಡಬಹುದು. ಜಿಹಾದಿಗಳನ್ನು ಎಂಟು ದಿನಗಳಲ್ಲಿ ನಿರ್ಮೂಲನೆ ಮಾಡಬೇಕು ಮತ್ತು ಮುಸ್ಲಿಂ ಸಮುದಾಯವನ್ನು ‘ಮೂಲದಿಂದ ನಿರ್ಮೂಲನೆ’ ಮಾಡಬೇಕು” ಎಂದು ಅವರು ಪ್ರತಿಪಾದಿಸಿದ್ದಾರೆ.

“ರಾಥೋಡ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರಸ್ತುತ, ಆರೋಪಿ ಕಲಬುರಗಿ ಜಿಲ್ಲೆಯಲ್ಲಿಲ್ಲ. ನಾವು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ” ಎಂದು ದಿ ಹಿಂದೂ ಜೊತೆ ಮಾತನಾಡುತ್ತಾ ಕಲಬುರಗಿ ಪೊಲೀಸ್ ಆಯುಕ್ತ ಎಸ್.ಡಿ. ಶರಣಪ್ಪ ಹೇಳಿದ್ದಾರೆ.

ರಾಥೋಡ್ ವಿವಾದಕ್ಕೆ ಸಿಲುಕಿದ್ದು ಇದೇ ಮೊದಲಲ್ಲ. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಮೀಸಲಾದ ಪಿಡಿಎಸ್ ಅಕ್ಕಿ ಕಳ್ಳಸಾಗಣೆ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕುವುದು ಸೇರಿದಂತೆ ವಿವಿಧ ಆರೋಪಗಳ ಮೇಲೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಅವರ ವಿರುದ್ಧ ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿವೆ.

ಅಪರಾಧ ಚಟುವಟಿಕೆಗಳಲ್ಲಿ ಅವರ ಭಾಗಿಯಾಗಿರುವುದನ್ನು ಪರಿಗಣಿಸಿ, ಕಲಬುರಗಿ ಪೊಲೀಸರು ಅವರನ್ನು ಕಲಬುರಗಿ ಜಿಲ್ಲೆಯಿಂದ ಗಡಿಪಾರು ಮಾಡಿದ್ದರು. ಶಹಾಪುರದಲ್ಲಿ ವರದಿಯಾದ ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಪೊಲೀಸರು ಅವರನ್ನು ಬಂಧಿಸಿದ್ದರು.

2023 ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ರಾಥೋಡ್ ಅವರನ್ನು ಕಣಕ್ಕಿಳಿಸಿತ್ತು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಂತಹ ಅನೇಕ ಬಿಜೆಪಿ ನಾಯಕರು ಅವರ ಪರವಾಗಿ ಪ್ರಚಾರ ಮಾಡಿದ್ದರೂ ಸಹ ರಾಥೋಡ್ ಅವರು ಚುನಾವಣೆಯಲ್ಲಿ ಸೋತರು.

Comments

Leave a Reply

Your email address will not be published. Required fields are marked *