ಮಂಗಳೂರು: ಅಪರಾಧ ತಡೆಗಟ್ಟುವ ಉದ್ದೇಶದಿಂದ ಹಾಗೂ ಮೋಟಾರು ವಾಹನ ಕಾಯ್ದೆಯ ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಯಲು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ದಿನಾಂಕ 02-08-2028 ಮತ್ತು 05-08-2028 ರಂದು ನಗರದ ಸಂಚಾರಿ ಪೊಲೀಸ್ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಯವರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಕಾರುಗಳ ಗಾಜುಗಳಲ್ಲಿ ಬ್ಲಾಕ್ ಫಿಲ್ಮ್ (ಸನ್ ಫಿಲ್ಮ್) ಅಥವಾ ಟಿಂಟೆಡ್ ಗ್ಲಾಸ್ ಅಳವಡಿಸಿ ಸಂಚರಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಒಟ್ಟು 2,293 ಪ್ರಕರಣಗಳನ್ನು ದಾಖಲಿಸಲಾಗಿದ್ದು, ರೂ. 11,58,000/- ದಂಡವನ್ನು ವಿಧಿಸಲಾಗಿದೆ. ಅಲ್ಲದೆ, 22 ಕಾರುಗಳಿಗೆ ಅಳವಡಿಸಲಾಗಿದ್ದ ಟಿಂಟೆಡ್ ಗ್ಲಾಸ್ ಮತ್ತು ಬ್ಲಾಕ್ ಫಿಲ್ಮ್ ಸ್ಟಿಕರ್ಗಳನ್ನು ಚಾಲಕರಿಂದ ತೆಗೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಚಾಲಕರಿಗೆ ಈ ಕುರಿತು ತಿಳುವಳಿಕೆಯನ್ನೂ ನೀಡಲಾಗಿದೆ.
ಇದೇ ರೀತಿಯಾಗಿ, ದಿನಾಂಕ 03-08-2028 ರಂದು ಪೊಲೀಸ್ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ, ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಕಾರು ಶೋರೂಮ್, ಆಕ್ಸೆಸರೀಸ್ ಶಾಪ್, ಗ್ಯಾರೇಜ್, ಮತ್ತು ಸ್ಟಿಕರ್ ಅಂಗಡಿಗಳ ಮಾಲೀಕರ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ಅಪರಾಧಿಗಳು ಟಿಂಟೆಡ್ ಗಾಜುಗಳಿರುವ ವಾಹನಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ, ಗಿರಾಕಿಗಳ ವಾಹನಗಳಿಗೆ ಟಿಂಟೆಡ್ ಗಾಜುಗಳನ್ನು ಅಳವಡಿಸದಂತೆ ಸೂಚನೆ ನೀಡಲಾಗಿದೆ.
ಈ ವಿಶೇಷ ಕಾರ್ಯಾಚರಣೆಯು ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
Leave a Reply