ಕುಂದಾಪುರ, ಜೂನ್ 03, 2025: ಯುಕೆಯಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವ ಭರವಸೆ ನೀಡಿ, 16 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರರಾದ ಸಿಸಿಲಿ, ಇವರ ಮಗ ಸುನಿಲ್, ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ UK-IN-REGAL ACADEMY ಎಂಬ ಸಂಸ್ಥೆಯ ಫೇಸ್‌ಬುಕ್ ಜಾಹೀರಾತು ನೋಡಿ, ಯುಕೆಯಲ್ಲಿ ಉದ್ಯೋಗಕ್ಕಾಗಿ ವೀಸಾ ಪಡೆಯಲು ಸಂಪರ್ಕಿಸಿದ್ದರು. ಸಂಸ್ಥೆಯು 90 ದಿನಗಳಲ್ಲಿ ವೀಸಾ ಕೊಡಿಸುವ ಭರವಸೆ ನೀಡಿ, 16 ಲಕ್ಷ ರೂಪಾಯಿ ಪಾವತಿಸುವಂತೆ ತಿಳಿಸಿತ್ತು.
ಸುನಿಲ್ ಅವರು ಕೊಡಿಯಾಲ್‌ಬೈಲ್‌ನ ಕಚೇರಿಗೆ ಭೇಟಿ ನೀಡಿದಾಗ, ಆರೋಪಿ ಸೂರಜ್ ಜೋಸೆಫ್, 2 ಲಕ್ಷ ರೂಪಾಯಿ ನಗದನ್ನು ಮುಂಗಡವಾಗಿ ಪಡೆದು ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ. ನಂತರ, ಉಳಿದ 16 ಲಕ್ಷ ರೂಪಾಯಿಗಳನ್ನು ಕೂಡಲೇ ಪಾವತಿಸುವಂತೆ ಒತ್ತಾಯಿಸಿ, ಪದೇ ಪದೇ ಫೋನ್ ಕರೆ ಮಾಡಿ, ಪಾವತಿಸದಿದ್ದರೆ ವೀಸಾ ರದ್ದಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.
ದಿನಾಂಕ 27-10-2023 ರಂದು ಪಿರ್ಯಾದಿದಾರರ ಮಗಳ ಬ್ಯಾಂಕ್ ಖಾತೆಯ ಮೂಲಕ ಟೌನ್ ಕೋಆಪರೇಟಿವ್ ಬ್ಯಾಂಕ್, ಉಡುಪಿ ಶಾಖೆಯಿಂದ 3 ಲಕ್ಷ ರೂಪಾಯಿಯನ್ನು ಸಂಸ್ಥೆಯ ಕಣ್ಣೂರು ಫೆಡರಲ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ಇದೇ ರೀತಿ, 01-12-2023 ರಂದು ಕುಂದಾಪುರ ಕರ್ನಾಟಕ ಬ್ಯಾಂಕ್ ಶಾಖೆಯಿಂದ 13 ಲಕ್ಷ ರೂಪಾಯಿಯನ್ನು ಸಂಸ್ಥೆಯ ಆಕ್ಸಿಸ್ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು.
ಆದರೆ, ಆರೋಪಿಯು ವೀಸಾ ಕೊಡಿಸದೇ, ಸುನಿಲ್ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ದಿನಾಂಕ 20-03-2024 ರಂದು ಸುನಿಲ್ ಮಂಗಳೂರಿನ ಕಚೇರಿಗೆ ಭೇಟಿ ನೀಡಿದಾಗ, ಆರೋಪಿ ಸೂರಜ್ ಜೋಸೆಫ್, 3 ತಿಂಗಳೊಳಗೆ ವೀಸಾ ಕೊಡಿಸುವುದಾಗಿ ಅಥವಾ 6 ತಿಂಗಳೊಳಗೆ ಹಣ ವಾಪಸ್ ಮಾಡುವುದಾಗಿ ಒಪ್ಪಂದದಲ್ಲಿ ತನ್ನ ಸಹಿ ಮತ್ತು ಕಚೇರಿಯ ಶೀಲಿನೊಂದಿಗೆ ಲಿಖಿತ ಭರವಸೆ ನೀಡಿದ್ದಾನೆ.
ಆದಾಗ್ಯೂ, 6 ತಿಂಗಳು ಕಳೆದರೂ ಹಣ ವಾಪಸ್ ಮಾಡದೇ ಇದ್ದಾಗ, ಸುನಿಲ್ ಪುನಃ ಕಚೇರಿಗೆ ಭೇಟಿ ನೀಡಿದಾಗ, ಆರೋಪಿಯು 16 ಲಕ್ಷ ರೂಪಾಯಿಯ ಚೆಕ್ (ದಿನಾಂಕ 03-10-2024) ನೀಡಿದ್ದಾನೆ. ಆದರೆ, 16-12-2024 ರಂದು ಚೆಕ್ ಕಲೆಕ್ಷನ್‌ಗೆ ಹಾಕಿದಾಗ “Funds Insufficient” ಎಂದು ಹಿಂತಿರುಗಿದೆ.
ಆರೋಪಿ ಸೂರಜ್ ಜೋಸೆಫ್, ವೀಸಾ ಕೊಡಿಸುವ ಭರವಸೆಯೊಂದಿಗೆ ನಗದು ಮತ್ತು ಬ್ಯಾಂಕ್ ವರ್ಗಾವಣೆ ಮೂಲಕ 16 ಲಕ್ಷ ರೂಪಾಯಿಯನ್ನು ಪಡೆದು, ವೀಸಾ ಕೊಡಿಸದೇ ಮತ್ತು ಹಣ ವಾಪಸ್ ಮಾಡದೇ ವಂಚಿಸಿರುವುದಾಗಿ ಪಿರ್ಯಾದಿದಾರರು ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ Zero FIR No. 01/2025, ಕಲಂ: 318(4), 316(2) BNS ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಚಾಲನೆಯಲ್ಲಿದೆ.
Leave a Reply