ಪುತ್ತೂರು: ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆರವರು ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಬೈಕ್ ಮೊಬೈಲ್ ಬಿಟ್ಟು ಹೋಗಿರುವ ಘಟನೆ ನಡೆದಿದ್ದು, ಮೃತದೇಹ ಪತ್ತೆಯಾಗಿದೆ.
ಜೂ.5ರಂದು ಬೆಳಿಗ್ಗೆ ಸುಮಾರು 11 ಗಂಟೆಯಿಂದ ಬೈಕ್ ಹಾಗೂ ಸೊತ್ತುಗಳು ಪಾಣೆಮಂಗಳೂರು ಹಳೆ ಸೇತುವೆ ಕೆಳಭಾಗದಲ್ಲಿ ಅನಾಥವಾಗಿ ಕಂಡು ಬಂದಿದ್ದು, ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದು, ಕಾರ್ಯಾಚರಣೆ ಬಳಿಕ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ರಮೇಶ್ ರೈ ಅವರು ಇತ್ತೀಚೆಗೆ ನಡೆದ ಪುತ್ತೂರು ನಗರಸಭೆಯ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನೆಲ್ಲಿಕಟ್ಟೆ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು.
ಅವರು ಸುಳ್ಯದಲ್ಲಿ ಮಂಗಳ ಡ್ರೈವಿಂಗ್ ಸ್ಕೂಲ್ ನ ಮಾಲಕರಾಗಿದ್ದರು. ಸಜ್ಜನ ರಾಜಕಾರಣಿ ಎಂದೇ ಚಿರಪರಿಚಿತರಾಗಿದ್ದರು. ಆರೋಗ್ಯ ಸಮಸ್ಯೆ ಅಥವಾ ಹಣಕಾಸಿನ ಸಮಸ್ಯೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗುತ್ತಿದೆ.
ಪಾಣೆಮಂಗಳೂರು ಸೇತುವೆ ಬಳಿ ದೊರೆತ ಮೊಬೈಲ್ ನಿಂದ ಪೊಲೀಸರು ಕರೆ ಮಾಡಿದಾಗ, ಅದು ಪುತ್ತೂರಿನ ರಮೇಶ್ ರೈ ಅವರಿಗೆ ಸೇರಿದ್ದೆಂದು ತಿಳಿದುಬಂದಿತ್ತು. ಕೂಡಲೇ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಇದೀಗ ಕುಟುಂಬ ಸದಸ್ಯರು ಮೃತದೇಹವನ್ನು ಗುರುತಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಕುಟುಂಬ ವರ್ಗ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.
Leave a Reply