ಅಹಮದಾಬಾದ್ನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ಸುದ್ದಿ ಕೇಳಿ ನಮಗೆ ತೀವ್ರ ಆಘಾತ ಮತ್ತು ಅತೀವ ದುಃಖವಾಗಿದೆ. ಈ ಘೋರ ದುರ್ಘಟನೆಯಲ್ಲಿ ವಿವಿಧ ದೇಶಗಳ ಪ್ರಯಾಣಿಕರು, ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಸೇರಿದಂತೆ ಅನೇಕ ಅಮಾಯಕ ಜೀವಗಳು ಬಲಿಯಾಗಿರುವುದು ಅತ್ಯಂತ ನೋವಿನ ಸಂಗತಿ. ಭಾರತದಲ್ಲಿ ಮತ್ತು ವಿದೇಶದಲ್ಲಿರುವ ಎಲ್ಲಾ ಮೃತರ ಕುಟುಂಬಗಳಿಗೆ ನಮ್ಮ ಅತೀವ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಈ ಅಪಾರ ದುಃಖದ ಸಮಯದಲ್ಲಿ ದೇವನು ಅವರಿಗೆ ಶಕ್ತಿ ಮತ್ತು ಸಹನೆಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷರಾದ ಸೈಯದ್ ಸಾದತುಲ್ಲಾ ಹುಸೈನಿಯವರು ಹೇಳಿದ್ದಾರೆ.
ದುರಂತ ಸ್ಥಳದಿಂದ ಹೊರಹೊಮ್ಮುತ್ತಿರುವ ದೃಶ್ಯಗಳು ನಿಜಕ್ಕೂ ಹೃದಯ ಕಲಕುವಂತಿವೆ. ತಮ್ಮ ಪ್ರೀತಿಪಾತ್ರರ ಗುರುತು ಮತ್ತು ಸುದ್ದಿಗಾಗಿ ಕಾಯುತ್ತಿರುವ ಕುಟುಂಬಗಳ ನೋವನ್ನ ವಿವರಿಸಲು ಪದಗಳಿಲ್ಲ. ರಕ್ಷಣಾ ಮತ್ತು ಪುನರ್ವಸತಿ ಕಾರ್ಯಾಚರಣೆಯಲ್ಲಿ ಅವಿರತವಾಗಿ ಶ್ರಮಿಸಿದ ಸ್ಥಳೀಯ ಅಧಿಕಾರಿಗಳು, ಪ್ರಥಮ ಪ್ರತಿಸ್ಪಂದಕರು ಮತ್ತು ಸ್ವಯಂಸೇವಕರ ಕಾರ್ಯವನ್ನು ನಾವು ತುಂಬು ಹೃದಯದಿಂದ ಶ್ಲಾಘಿಸುತ್ತೇವೆ.
ಈ ದುರಂತ ಘಟನೆಗೆ ಕಾರಣಗಳನ್ನು ನಿರ್ಧರಿಸಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು, ಸರ್ಕಾರವು ಸಮಗ್ರ ತನಿಖೆ ನಡೆಸಿ, ಹೊಣೆಗಾರಿಕೆ ಮತ್ತು ಸುರಕ್ಷತೆಯ ಕುರಿತು ಶೀಘ್ರ ಕ್ರಮಗಳನ್ನು ಕೈಗೊಳ್ಳಬೇಕೆಂದು ಈ ಮೂಲಕ ನಾವು ಒತ್ತಾಯಿಸುತ್ತೇವೆ.
ಜಮಾಅತೆ ಇಸ್ಲಾಮಿ ಹಿಂದ್ ಈ ದುರ್ಘಟನೆಯಿಂದ ಬಾಧಿತರಾದ ಎಲ್ಲಾ ಕುಟುಂಬಗಳಿಗ ಸಂತಾಪವನ್ನು ಸೂಚಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Reply