ಉಡುಪಿ: ಅನರ್ಹ ಪಡಿತರ ಚೀಟಿದಾರರಿಗೆ ಎಚ್ಚರಿಕೆ; ಚೀಟಿ ಒಪ್ಪಿಸಿ ಅಥವಾ ರದ್ದತಿಗೆ ಸಿದ್ಧರಾಗಿ

ಉಡುಪಿ, ಜೂನ್ 13, 2025: ಉಡುಪಿ ಜಿಲ್ಲಾಡಳಿತವು ಅಂತ್ಯೋದಯ, ಅನ್ನಯೋಜನೆ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ (BPL) ಮಹತ್ವದ ಎಚ್ಚರಿಕೆಯೊಂದನ್ನು ನೀಡಿದೆ. ಸರ್ಕಾರದ ಮಾನದಂಡಗಳಿಗೆ ವಿರುದ್ಧವಾಗಿ ಪಡಿತರ ಚೀಟಿ ಪಡೆದಿರುವವರು ತಕ್ಷಣವೇ ತಮ್ಮ ಚೀಟಿಯನ್ನು ಸಂಬಂಧಿತ ತಾಲೂಕು ಕಚೇರಿಯ ಆಹಾರ ಶಾಖೆಯ ಅಧಿಕಾರಿಗಳಿಗೆ ಒಪ್ಪಿಸಿ ರದ್ದುಗೊಳಿಸಿಕೊಳ್ಳಬೇಕೆಂದು (Surrender) ಸೂಚಿಸಲಾಗಿದೆ.

ಜಿಲ್ಲಾಡಳಿತದ ಪ್ರಕಾರ, ಕೆಲವು ಪಡಿತರ ಚೀಟಿದಾರರು ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಚೀಟಿಗಳನ್ನು ಹೊಂದಿದ್ದಾರೆ, ಇದು ಸರ್ಕಾರಿ ನಿಯಮಾವಳಿಗಳ ಉಲ್ಲಂಘನೆಯಾಗಿದೆ. ಅಂತಹವರು ತಮ್ಮ ಹೆಚ್ಚುವರಿ ಚೀಟಿಗಳನ್ನು ರದ್ದುಗೊಳಿಸಲು ಆಹಾರ ಶಾಖೆಗೆ ಮಾಹಿತಿ ನೀಡಬೇಕು. ಇದಲ್ಲದೆ, ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಒದಗಿಸಲಾದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಕೆಲವು ಕುಟುಂಬಗಳ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಬಂದಿದೆ. ಇದು ಕಾನೂನುಬಾಹಿರವಾಗಿದ್ದು, ಇಂತಹ ಚಟುವಟಿಕೆಯಲ್ಲಿ ತೊಡಗಿರುವವರ ಪಡಿತರ ಚೀಟಿಯನ್ನು ತಕ್ಷಣ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಅನರ್ಹರ ವಿವರ:
ಸರ್ಕಾರಿ ಮಾನದಂಡಗಳ ಪ್ರಕಾರ, ಈ ಕೆಳಗಿನ ಕುಟುಂಬಗಳು ಆದ್ಯತಾ ಪಡಿತರ ಚೀಟಿಗೆ ಅನರ್ಹವಾಗಿವೆ:

  1. ಸರ್ಕಾರಿ/ಸರ್ಕಾರಿ ಸಂಸ್ಥೆಯ ಖಾಯಂ ನೌಕರರು: ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್ ಅಥವಾ ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬಗಳು.
  2. ಭೂಮಿ ಮತ್ತು ಆಸ್ತಿ: ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ, ಅಥವಾ ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆ ಹೊಂದಿರುವ ಕುಟುಂಬಗಳು.
  3. ವಾಹನ ಮಾಲೀಕತ್ವ: ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಮುಂತಾದ ಒಂದು ವಾಣಿಜ್ಯ ವಾಹನವನ್ನು ಜೀವನೋಪಾಯಕ್ಕಾಗಿ ಒಡಿಸುವ ಕುಟುಂಬಗಳನ್ನು ಹೊರತುಪಡಿಸಿ, ನಾಲ್ಕು ಚಕ್ರದ ವಾಹನ ಹೊಂದಿರುವ ಕುಟುಂಬಗಳು.
  4. ಆದಾಯ ಮಿತಿ: ವಾರ್ಷಿಕ ಆದಾಯವು 1.20 ಲಕ್ಷ ರೂ.ಗಿಂತ ಹೆಚ್ಚಿರುವ ಕುಟುಂಬಗಳು.

ಜಿಲ್ಲಾಡಳಿತವು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತದೆ ಮತ್ತು ಅನರ್ಹ ಕುಟುಂಬಗಳು ತಮ್ಮ ಪಡಿತರ ಚೀಟಿಗಳನ್ನು ಒಪ್ಪಿಸದಿದ್ದರೆ, ಅವರು ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

Comments

Leave a Reply

Your email address will not be published. Required fields are marked *