ಕೇರಳದ ನರ್ಸ್‌ ನಿಮಿಷಾ ಪ್ರಿಯಾಗೆ ಜುಲೈ 16 ರಂದು ಯೆಮೆನ್ ನಲ್ಲಿ ಗಲ್ಲು ಶಿಕ್ಷೆ: ವರದಿ

ತಿರುವನಂತಪುರಂ, ಜುಲೈ 8, 2025: ಯೆಮೆನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಪಾಲಕ್ಕಾಡ್ನ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಜುಲೈ 16 ರಂದು ಗಲ್ಲಿಗೇರಿಸಲಾಗುವುದು ಎಂದು ನಿಮಿಷಾ ಪ್ರಿಯಾ ಅವರ ತಾಯಿ ಪ್ರೇಮಾ ಕುಮಾರಿ ಅವರ ಪವರ್ ಆಫ್ ಅಟಾರ್ನಿ ಹೊಂದಿರುವ ಮಾನವ ಹಕ್ಕುಗಳ ಕಾರ್ಯಕರ್ತ ಸಂಧಾನಕಾರ ಸ್ಯಾಮ್ಯುಯೆಲ್ ಜೆರೋಮ್ ಹೇಳಿದ್ದಾರೆ.

ಅವರ ಮರಣದಂಡನೆ ದಿನಾಂಕವನ್ನೂ ಜೈಲು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಜೆರೋಮ್ ಹೇಳಿದ್ದಾರೆ. “ನಿನ್ನೆ, ನನಗೆ ಜೈಲಿನ ಮುಖ್ಯಸ್ಥರಿಂದ ಕರೆ ಬಂದಿದ್ದು, ಜುಲೈ 16ರಂದು ಗಲ್ಲಿಗೇರಿಸಲಾಗುವುದು ಎಂದು ಅವರು ದೃಢಪಡಿಸಿದರು. ನಿಮಿಷಾ ಪ್ರಿಯಾ ಅವರಿಗೆ ಈ ಮಾಹಿತಿಯನ್ನು ಅಧಿಕೃತವಾಗಿ ತಿಳಿಸಲಾಗಿದೆ” ಎಂದು ಸ್ಯಾಮ್ಯುಯೆಲ್ ಜೆರೋಮ್ OnManorama ಗೆ ತಿಳಿಸಿದರು.

ತಲಾಲ್‌ನ ಕುಟುಂಬದಿಂದ ಕ್ಷಮೆ ಪಡೆಯುವ ಬಗ್ಗೆ ಮಾತನಾಡಿದ ಸ್ಯಾಮುಯೆಲ್, “ನಾವು ಕಳೆದ ಸಭೆಯಲ್ಲಿ ಕುಟುಂಬಕ್ಕೆ ಒಂದು ಪ್ರಸ್ತಾವನೆ ಸಲ್ಲಿಸಿದ್ದೆವು. ಇಲ್ಲಿಯವರೆಗೆ ಅವರಿಂದ ಉತ್ತರ ಲಭ್ಯವಾಗಿಲ್ಲ. ನಾನು ಇಂದು ಯೆಮನ್‌ಗೆ ತೆರಳಿ ಮಧ್ಯಸ್ಥಿಕೆಯನ್ನು ಮುಂದುವರಿಸುತ್ತಿದ್ದೇನೆ,” ಎಂದು ತಿಳಿಸಿದ್ದಾರೆ.

ಮರಣದಂಡನೆ ನೀಡುವ ದಿನಾಂಕದ ಬಗ್ಗೆ ವಿದೇಶಾಂಗ ಸಚಿವಾಲಯಕ್ಕೆ (MEA) ಈಗಾಗಲೇ ತಿಳಿಸಲಾಗಿದೆ ಎಂದು ಅವರು ಹೇಳಿದರು. ಸಂಧಾನಕಾರ ಮಾತುಕತೆಗಳು ನಡೆಯುತ್ತಿದ್ದರೂ, ಯೆಮೆನ್ ಪ್ರಜೆಯ ಕುಟುಂಬದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಹೇಳಿದರು. ಮೃತ ಯೆಮನ್ ಪ್ರಜೆಯ ಕುಟುಂಬಕ್ಕೆ ಪರಿಹಾರ ಹಣವಾಗಿ ಒಂದು ಮಿಲಿಯನ್ ಡಾಲರ್(8.57ಕೋಟಿ ರೂ.)ಗಳನ್ನು ನೀಡುವುದಾಗಿ ಹೇಳಲಾಗಿತ್ತು. ಇದಕ್ಕಾಗಿ ಈಗಾಗಲೇ ಹಣ ಸಂಗ್ರಹಿಸುವ ಕೆಲಸವೂ ನಡೆಯುತ್ತಿತ್ತು ಎಂದು ಅವರು ಉಲ್ಲೇಖಿಸಿದರು.

ಈ ಕುರಿತು ಪ್ರತಿಕ್ರಿಯೆಗಾಗಿ ಹೊಸದಿಲ್ಲಿಯಲ್ಲಿರುವ ಯೆಮೆನ್ ರಾಯಭಾರ ಕಚೇರಿಯನ್ನು ಸಂಪರ್ಕಿಸಲಾಗಿದೆ. ಪ್ರತಿಕ್ರಿಯೆಗಾಗಿ ನಿರೀಕ್ಷಿಸಲಾಗಿದೆ. ವಿದೇಶಾಂಗ ಸಚಿವಾಲಯದಿಂದ ಈ ಕುರಿತು ಅಧಿಕೃತ ದೃಢೀಕರಣಕ್ಕಾಗಿ ಹೇಳಿಕೆ ಬಂದಿಲ್ಲ.

ನಿಮಿಷಾ ಪ್ರಿಯಾ ಅವರು, ತಮ್ಮ ವ್ಯವಹಾರ ಪಾಲುದಾರರಾದ ತಲಾಲ್ ಅಬ್ದೋ ಮಹ್ದಿ ಅವರ ಕೊಲೆಗೆ ಮರಣದಂಡನೆ ಶಿಕ್ಷೆ ಎದುರಿಸುತ್ತಿದ್ದಾರೆ. ಈಗ ತುರ್ತಾಗಿ ತಲಾಲ್ ಅವರ ಕುಟುಂಬವನ್ನು ಸಂಪರ್ಕಿಸುವುದು ಅವರ ಮೊದಲ ಆದ್ಯತೆ ಎಂದು ಜೆರೋಮ್ ಹೇಳಿದರು.

ನಿಮಿಶಾ ಪ್ರಿಯಾ ಕೆಲಸ ಅರಸಿಕೊಂಡು 2011 ರಲ್ಲಿ ಯೆಮೆನ್ಗೆ ತೆರಳಿದ್ದರು. ತಲಾಲ್ ಅವರ ಪ್ರಾಯೋಜಕತ್ವದಲ್ಲಿ 2015 ರಲ್ಲಿ ಸನಾದಲ್ಲಿ ಕ್ಲಿನಿಕ್ ಅನ್ನು ಪ್ರಾರಂಭಿಸಿದರು. ಆರ್ಥಿಕ ತೊಂದರೆಗಳಿಂದಾಗಿ, ಅವರ ಪತಿ ಮತ್ತು ಮಗು 2014 ರಲ್ಲಿ ಭಾರತಕ್ಕೆ ಮರಳಿದರು. ತಲಾಲ್, ನಿಮಿಷಾ ಅವರನ್ನು ಮದುವೆಯಾಗಿರುವುದಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿರಂತರ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ನಿಮಿಷಾ ಅವರ ಪಾಸ್ಪೋರ್ಟ್ ಅನ್ನು ವಶದಲ್ಲಿಟ್ಟುಕೊಂಡು ಬೆದರಿಕೆ ಹಾಕಿ, ಹಣ ಸುಲಿಗೆ ಮಾಡಿದ್ದಾರೆ ಎನ್ನಲಾಗಿದೆ.

ತಲಾಲ್ ಕೈಯಿಂದ ತಪ್ಪಿಸಿಕೊಳ್ಳುವ ಹತಾಶ ಪ್ರಯತ್ನದಲ್ಲಿ, ನಿಮಿಷಾ ತನ್ನ ಪಾಸ್ಪೋರ್ಟ್ ಅನ್ನು ವಾಪಾಸ್ ಪಡೆಯಲು ತಲಾಲ್ ಗೆ ಅರವಳಿಕೆ ನೀಡಲು ಇಂಜೆಕ್ಷನ್ ಚುಚ್ಚಿದರು. ಆದರೆ ವರದಿಗಳು ಹೇಳುವಂತೆ ಔಷಧಿ ಏರುಪೇರಾಗಿ ತಲಾಲ್ ಮೃತಪಟ್ಟರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 2017 ರಲ್ಲಿ ನಿಮಿಷಾ ಅವರನ್ನು ಬಂಧಿಸಿ, ತಲಾಲ್ ಕೊಲೆಯ ಆರೋಪ ಹೊರಿಸಲಾಯಿತು.

2020 ರಲ್ಲಿ, ಯೆಮೆನ್ ವಿಚಾರಣಾ ನ್ಯಾಯಾಲಯವು ನಿಮಿಷಾಗೆ ಮರಣದಂಡನೆ ವಿಧಿಸಿತು. ಆಕೆಯ ಮೇಲ್ಮನವಿಗಳನ್ನು ಉನ್ನತ ನ್ಯಾಯಾಲಯಗಳು ವಜಾಗೊಳಿಸಿದವು. ಯೆಮೆನ್ ನ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ 2023 ರಲ್ಲಿ ಮರಣದಂಡನೆಯನ್ನು ಎತ್ತಿಹಿಡಿಯಿತು. ಈಗ ಆಕೆಯ ಭವಿಷ್ಯವು ರಾಜತಾಂತ್ರಿಕ ಮಾತುಕತೆ ಮತ್ತು ತಲಾಲ್ ಅವರ ಕುಟುಂಬದ ಕ್ಷಮಾಧಾನದ ಮೇಲೆ ಅವಲಂಬಿತವಾಗಿದೆ.

Comments

Leave a Reply

Your email address will not be published. Required fields are marked *