ಚಿನ್ನ ಖರೀದಿಸಿ ಲಕ್ಷಾಂತರ ರೂ. ಹಣ ನೀಡದೆ ವಂಚಿಸಿದ ಮಹಿಳೆ ವಿರುದ್ಧ ದೂರು

ಶಿರ್ವಾ, ಜುಲೈ 10, 2025: ಮಹಿಳೆಯೋರ್ವರು ವಿವಿಧ ಚಿನ್ನದ ಅಂಗಡಿಗಳಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ ಖರೀದಿಸಿ ಬಿಲ್ಲು ಮೊತ್ತ ಪಾವತಿಸುವುದಾಗಿ ಹೇಳಿ ಬಳಿಕ ಹಣ ಪಾವತಿಸದೇ ವಂಚನೆ ಮಾಡಿರುವ ಘಟನೆ ಶಿರ್ವ ಪೇಟೆಯ ಬಳಿ ನಡೆದಿದೆ.

ಫರೀದಾ ಎನ್ನುವ ಮಹಿಳೆ ಶಿರ್ವ ಗ್ರಾಮದ ಗಣೇಶ್‌ ಎನ್ನುವವರು ನಡೆಸಿಕೊಂಡು ಹೋಗುತ್ತಿರುವ ಶಿರ್ವ ಪೇಟೆಯ ಬಳಿಯ “ ನ್ಯೂ ಭಾರ್ಗವಿ ಜುವೆಲ್ಲರ್ಸ್‌ ” ಎಂಬ ಹೆಸರಿನ ಚಿನ್ನಾಭರಣಗಳ ಮಳಿಗೆಯಲ್ಲಿ ಚಿನ್ನಾಭರಣ ಖರೀದಿಗೆ ಬಂದಿದ್ದಾರೆ. ಅಪ್ಸಲ್‌ ಮತ್ತು ಇತರ ಇಬ್ಬರು ಸಂಬಂಧಿಕರ ಮುಖಾಂತರ ಮಾರ್ಚ್‌ 8 ರಿಂದ 11ನೇ ತಾರೀಖಿನ ನಡುವೆ 1,78,000/- ಮೊತ್ತದ 69.165 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ಖರೀದಿಸಿದ್ದಾರೆ. ಬಿಲ್ಲು ಮೊತ್ತ ಪಾವತಿಸುವುದಾಗಿ ತಿಳಿಸಿ ಈ ತನಕವೂ ಪಾವತಿಸದೇ ವಂಚನೆ ಮಾಡಿದ್ದಾರೆ.

ಅಲ್ಲದೇ ಮಾರ್ಚ್‌ 16 ರಂದು ಆರೋಪಿ ಫರೀದಾಳು ಇದೇ ರೀತಿಯಲ್ಲಿ ಶಿರ್ವ ಪೇಟೆಯ ಬಳಿಯ ಕೃಪಾ ಜುವೆಲ್ಲರ್ಸ್‌ ನ ಅನುಷ್‌ ರವರಿಗೂ ಫೋನ್‌ ಕರೆ ಮಾಡಿ, ಅವರನ್ನು ನಂಬಿಸಿ, ಒಟ್ಟು 10.740 ಗ್ರಾಂ ತೂಕದ ವಿವಿಧ ಮಾಧರಿಯ ಚಿನ್ನಾಭರಣಗಳನ್ನು ಖರೀದಿಸಿ, ಆರೋಪಿ ಅಪ್ಸಲ್‌ ಮುಖಾಂತರ ಮಂಗಳೂರಿನಲ್ಲಿ ಪಡೆದುಕೊಂಡು, ಬಿಲ್ಲು ಮೊತ್ತ ಪಾವತಿಸುವುದಾಗಿ ತಿಳಿಸಿ ಈ ತನಕವೂ ಪಾವತಿಸದೇ ಮೋಸ ಮಾಡಿದ್ದಾರೆ.

ಈ ಎರಡು ಪ್ರಕರಣಗಳು ಮಾತ್ರವಲ್ಲದೇ ಫರೀದಾಳು ಇದೇ ರೀತಿಯಲ್ಲಿ ಶಿರ್ವ ಪೇಟೆಯ ಬಳಿಯ ಪುಷ್ಪಾ ಜುವೆಲ್ಲರ್ಸ್‌ ನ ಶ್ರೀಹರ್ಷರವರಿಗೂ ಫೋನ್‌ ಕರೆ ಮಾಡಿ, ಅವರನ್ನು ನಂಬಿಸಿ ಮಾರ್ಚ್ 09ರಂದು ಒಟ್ಟು 18.660 ಗ್ರಾಂ ತೂಕದ ವಿವಿಧ ಮಾದರಿಯ ಚಿನ್ನಾಭರಣಗಳನ್ನು ಖರೀದಿಸಿದ್ದು, ಬಿಲ್ಲು ಮೊತ್ತ ಪಾವತಿಸುವುದಾಗಿ ತಿಳಿಸಿ ಈ ತನಕವೂ ಪಾವತಿಸದೇ ವಂಚನೆ ಮಾಡಿದ್ದಾರೆ.

ಇನ್ನು, ಮೇಲಿನ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿ ಫರೀದಾಳ ವಿರುದ್ಧ ಶಿರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Comments

Leave a Reply

Your email address will not be published. Required fields are marked *