ಭಟ್ಕಳ: ಸ್ಫೋಟ ಬೆದರಿಕೆಯ ಇ-ಮೇಲ್ ಆರೋಪಿ ಸುಳಿವು ಪತ್ತೆ; ಮೈಸೂರಿನಿಂದ ವಿಚಾರಣೆಗೆ ಕರೆ

ಭಟ್ಕಳ , ಜುಲೈ 13, 2025: ಭಟ್ಕಳ ನಗರವನ್ನು ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಹಾಕಿದ ವ್ಯಕ್ತಿಯ ಸುಳಿವನ್ನು ಪತ್ತೆ ಮಾಡುವಲ್ಲಿ ಭಟ್ಕಳ ಪೊಲೀಸರು ಮತ್ತು ಸೈಬರ್ ತನಿಖಾ ವಿಭಾಗ ಯಶಸ್ವಿಯಾಗಿದೆ. ಈ ಪ್ರಕರಣದ ಬೆನ್ನತ್ತಿ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ.

ತಮಿಳುನಾಡು ಮೂಲದ ಕಣ್ಣನ್ ಎಂಬ ವ್ಯಕ್ತಿಯ ಮೊಬೈಲ್‌ನಿಂದ ಮತ್ತೊಬ್ಬ ಗುಪ್ತ ವ್ಯಕ್ತಿ ಭಟ್ಕಳ ನಗರವನ್ನು ಸ್ಫೋಟಿಸುವ ಬೆದರಿಕೆಯ ಇ-ಮೇಲ್ ಕಳುಹಿಸಿದ್ದಾನೆ. ಇತ್ತೀಚೆಗೆ ಈ ಬೆದರಿಕೆಯ ಇ-ಮೇಲ್ ಕಳುಹಿಸಲಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸರು ಕಣ್ಣನ್‌ನಿಂದ ಈ ಬೆದರಿಕೆಯನ್ನು ಹಾಕಿದ ವ್ಯಕ್ತಿ ಮೊಬೈಲ್ ಹೇಗೆ ಪಡೆದುಕೊಂಡನೋ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಈಗಾಗಲೇ ಕಣ್ಣನ್ ಗುರುಸ್ವಾಮಿ ಎಂಬ ವ್ಯಕ್ತಿಯ ವಿಚಾರಣೆ ನಡೆಸಲಾಗಿದೆ.

ಕಣ್ಣನ್ ಮತ್ತು ಈ ಮೋಸ್ಟ್ ವಾಂಟೆಡ್ ವ್ಯಕ್ತಿ ನಡುವೆ ಭೇಟಿಯ ಮಾಹಿತಿಯನ್ನು ಪೊಲೀಸರು ತನಿಖೆಯಲ್ಲಿ ಪತ್ತೆಹಚ್ಚಲು ಯತ್ನಿಸುತ್ತಿದ್ದಾರೆ. ಈ ವ್ಯಕ್ತಿ ಭಟ್ಕಳ ಸ್ಫೋಟ ಬೆದರಿಕೆಯ ಜೊತೆಗೆ ಹಿಂದೆ ಮೈಸೂರು, ಬಳ್ಳಾರಿ ಮತ್ತು ಕೇರಳ ಸೇರಿದಂತೆ ಬೇರೆ ಕಡೆಗಳಿಗೂ ಬಾಂಬ್ ಸ್ಫೋಟದ ಬೆದರಿಕೆಗಳನ್ನು ಹಾಕಿರುವುದು ತಿಳಿದುಬಂದಿದೆ. ಪೊಲೀಸರಿಗೆ ಈ ಮೋಸ್ಟ್ ವಾಂಟೆಡ್ ವ್ಯಕ್ತಿ ಈಗ ಮೈಸೂರಿನಲ್ಲಿರುವುದು ಖಚಿತವಾಗಿದೆ.

ಕರ್ನಾಟಕ ಮತ್ತು ಕೇರಳ ಪೊಲೀಸರ ಸಹಕಾರದಿಂದ ಈ ಆರೋಪಿಯ ಮಾಹಿತಿ ಬಯಲಾಗಿದ್ದು, ಉತ್ತರಕನ್ನಡ ಜಿಲ್ಲಾ ಎಸ್ಪಿ ನಾರಾಯಣ್ ನೇತೃತ್ವದಲ್ಲಿ ಆರೋಪಿಯನ್ನು ಪತ್ತೆ ಮಾಡಲಾಗಿದೆ. ಮೋಸ್ಟ್ ವಾಂಟೆಡ್ ವ್ಯಕ್ತಿಯನ್ನು ಮೈಸೂರಿನಿಂದ ನಾಳೆ ಕಾರವಾರಕ್ಕೆ ಕರೆತರಲಾಗುವುದು ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಈ ವ್ಯಕ್ತಿಯನ್ನು ಮೈಸೂರು, ಬಳ್ಳಾರಿ ಮತ್ತು ಕೇರಳ ಪೊಲೀಸರು ಸಹ ವಿಚಾರಣೆ ನಡೆಸುವ ಸಾಧ್ಯತೆಯಿದೆ.

Comments

Leave a Reply

Your email address will not be published. Required fields are marked *