ಗಂಗೊಳ್ಳಿ ಗ್ರಾಮ ಪಂಚಾಯಿತಿ: ಬಿಜೆಪಿ ಬೆಂಬಲಿತರಿಗೆ ಕೈ ತಪ್ಪಿದ ಅಧಿಕಾರ

ಕುಂದಾಪುರ: ಡಿ. 8ರಂದು ನಡೆದ ಗಂಗೊಳ್ಳಿ ಗ್ರಾಮ ಪಂಚಾಯಿತಿಯ ಚುನಾವಣೆ ಫಲಿತಾಂಶ ಗುರುವಾರ ರಾತ್ರಿ ಹೊರಬಿದ್ದಿದ್ದು, ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತವಾಗಿದೆ.

ಎರಡು ದಶಕಗಳ ಕಾಲ ಬಿಜೆಪಿ ಬೆಂಬಲಿತರ ಭದ್ರಕೋಟೆಯಾಗಿದ್ದ ಹಾಗೂ ಹಿಂದುತ್ವ ಪ್ರತಿಪಾದನೆಯ ಪ್ರಬಲ ಗ್ರಾಮ ಎಂದು ಬಿಂಬಿತವಾಗಿದ್ದ ಗಂಗೊಳ್ಳಿ ಗ್ರಾಮ ಪಂಚಾಯಿತಿಯ ಚುನಾವಣೆಯಲ್ಲಿ ಎಸ್‍ಡಿಪಿಐ ಬೆಂಬಲಿತರ ಸಹಕಾರದೊಂದಿಗೆ, ಕಾಂಗ್ರೆಸ್ ಬೆಂಬಲಿತರು ಅಧಿಕಾರದ ಗದ್ದುಗೆ ಹಿಡಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿಗರು 4 ಕ್ಷೇತ್ರಗಳಲ್ಲಿ ಶೂನ್ಯ ಸಾಧನೆ ಮಾಡಿದ್ದರೆ, ಎಸ್‍ಡಿಪಿಐ 6 ಕ್ಷೇತ್ರಗಳಲ್ಲಿ ಶೂನ್ಯ ಸಾಧನೆ ಮಾಡಿದೆ. ಕಳೆದ ಕೆಲ ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿದ್ದ ವಾರ್ಡ್‌ಗಳಲ್ಲಿ ಈ ಬಾರಿ ಕಾಂಗ್ರೆಸ್ ಬೆಂಬಲಿಗರು ಹುಬ್ಬೇರುವಂತೆ ಸಾಧನೆ ಮಾಡಿದ್ದಾರೆ.

33 ಸದಸ್ಯ ಬಲದ ಗಂಗೊಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರು ತಲಾ 12, ಎಸ್‍ಡಿಪಿಐ ಬೆಂಬಲಿತರು 7 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಬೆಳಿಗ್ಗೆಯಿಂದ ಮಂದಗತಿಯಲ್ಲಿ ಸಾಗಿದ ಮತ ಎಣಿಕೆ ಕಾರ್ಯ ರಾತ್ರಿ 10ರವರೆಗೂ ಸಾಗಿತ್ತು. ಕುಂದಾಪುರ ತಹಶೀಲ್ದಾರ್ ಎಚ್.ಎಸ್.ಶೋಭಾಲಕ್ಷ್ಮಿ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆದಿದ್ದು, ತಾಲ್ಲೂಕು ಯುವಜನ ಸೇವಾ ಅಧಿಕಾರಿ ಕುಸುಮಾರ ಶೆಟ್ಟಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಕಳೆದ ಆಡಳಿತದ ಅವಧಿಯಲ್ಲಿ 23 ಬಿಜೆಪಿ ಬೆಂಬಲಿತರು, 6 ಕಾಂಗ್ರೆಸ್ ಬೆಂಬಲಿತರು ಮತ್ತು ನಾಲ್ವರು ಎಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ವಿಜಯೋತ್ಸವ:  ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ ಕಾಂಗ್ರೆಸ್ ಮತ್ತು ಎಸ್‍ಡಿಪಿಐ ಬೆಂಬಲಿತ ಅಭ್ಯರ್ಥಿಗಳು ತಮ್ಮ ಬೆಂಬಲಿತರೊಂದಿಗೆ ತಡರಾತ್ರಿ ಕುಂದಾಪುರದಿಂದ ಗಂಗೊಳ್ಳಿಯವರೆಗೆ ವಿಜಯೋತ್ಸವ ನಡೆಸಿದರು.

Comments

Leave a Reply

Your email address will not be published. Required fields are marked *