ಮಂಗಳೂರಿನಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಅರೆಸ್ಟ್

ಮಂಗಳೂರು, ಜುಲೈ 12, 2025:  ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದ ಮಾಹಿತಿ ಪ್ರಕಾರ ಡ್ರಗ್ಸ್ ಚೈನ್ ಲಿಂಕ್ ಹಿಂದೆ ಮಂಗಳೂರು ಪೊಲೀಸರು ಬಿದ್ದಿದ್ದು, ಇದೀಗ ಮಹಾರಾಷ್ಟ್ರ ಮತ್ತು ಮದ್ಯಪ್ರದೇಶದಿಂದ ಮಾದಕವಸ್ತುಗಳನ್ನು ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಯನ್ನು ಅರೆಸ್ಟ್ ಮಾಡಿದ್ದಾರೆ.

ಬಂಧಿತನನ್ನು ಮೂಲತಃ ಬೀದರ್‌ನ ಪ್ರಸಕ್ತ ಕೋಡಿಪಾಳ್ಯ ನಿವಾಸಿ ಪ್ರಜ್ವಲ್ ಪೀಣ್ಯಾಸ್ ಎಂದು ಗುರುತಿಸಲಾಗಿದೆ. ಜುಲೈ 2 ರಂದು ಮಂಗಳೂರಿನಲ್ಲಿ ದಾಖಲಾಗಿದ್ದ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದುವರಿದ ತನಿಖೆಯ ಭಾಗವಾಗಿ ಈ ಆರೋಪಿ ಅರೆಸ್ಟ್ ಆಗಿದ್ದಾನೆ.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿಗೆ ಮಾದಕವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ 9 ಜನರನ್ನು ಅರೆಸ್ಟ್ ಮಾಡಲಾಗಿದೆ. ಇನ್ನು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯದಿಂದ ಮಾದಕ ವಸ್ತುವನ್ನು ಪಡೆದುಕೊಂಡು ಮಂಗಳೂರು ನಗರಕ್ಕೆ ಪೂರೈಕೆ ಮಾಡುತ್ತಿದ್ದವರ ಪೈಕಿ ಪ್ರಮುಖ ಆರೋಪಿ ಪ್ರಜ್ವಲ್ ಪೀಣ್ಯಾಸ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಅರೆಸ್ಟ್ ಆದ ಆರೋಪಿ ಈ ಹಿಂದೆ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿದ್ದು, ಆತನ ಮೇಲೆ ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ 03 ಮಾದಕ ವಸ್ತು ಮಾರಾಟ ಪ್ರಕರಣಗಳು ದಾಖಲಾಗಿರುತ್ತವೆ.

Comments

Leave a Reply

Your email address will not be published. Required fields are marked *