ಉಡುಪಿ, ಜುಲೈ 15, 2025: ಭಾರತೀಯ ಹವಾಮಾನ ಇಲಾಖೆಯ ತಿರುವನಂತಪುರ ಕೇಂದ್ರವು ನೀಡಿರುವ ಮುನ್ಸೂಚನೆಯ ಪ್ರಕಾರ, ಲಕ್ಷದ್ವೀಪ, ಕೇರಳ ಮತ್ತು ಕರ್ನಾಟಕ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ 40-50 ಕಿ.ಮೀ. ಪ್ರತಿ ಗಂಟೆಯ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಕೆಲವೊಮ್ಮೆ ಗಂಟೆಗೆ 60 ಕಿ.ಮೀ. ವೇಗವೂ ದಾಟಬಹುದು. ಈ ಹಿನ್ನೆಲೆಯಲ್ಲಿ ಜುಲೈ 18ರವರೆಗೆ ಕರಾವಳಿ ತೀರದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಸಾಂಪ್ರದಾಯಿಕ ಮೀನುಗಾರರು ತಮ್ಮ ದೋಣಿ ಮತ್ತು ಬಲೆಗಳನ್ನು ದಡದಲ್ಲಿ ಸುರಕ್ಷಿತ ಸ್ಥಳದಲ್ಲಿ ಇರಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ನಾಡದೋಣಿ, ಸಣ್ಣ ಮತ್ತು ಮಧ್ಯಮ ಗಾತ್ರದ ದೋಣಿಗಳು ಮೀನುಗಾರಿಕೆಗೆ ತೆರಳದಂತೆ ಎಚ್ಚರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮೀನುಗಾರಿಕೆಗೆ ತೆರಳುವಾಗ ಕಡ್ಡಾಯವಾಗಿ ಜೀವರಕ್ಷಕ ಸಾಧನಗಳನ್ನು ಬಳಸಬೇಕು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಾವಳಿಯ ಬಂದರುಗಳಾದ ಕಾರವಾರ, ಮಂಗಳೂರು, ಪಣಂಬೂರು, ಹೊನ್ನಾವರ, ಭಟ್ಕಳ, ಗಂಗೊಳ್ಳಿ, ಮತ್ತು ಮಾಲ್ಪೆಯಲ್ಲಿ ಸ್ಥಳೀಯವಾಗಿ ಸಂಖ್ಯೆ 2 ಎಚ್ಚರಿಕೆಯ ಸೂಚನೆಯನ್ನು ಹಾರಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತೀವ್ರ ಮಳೆ: ಇಂದು ಬೆಳಗ್ಗೆ 8:30ರವರೆಗೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ 74.9ಮಿ.ಮೀ. ಮಳೆ ಜಿಲ್ಲೆಯಲ್ಲಿ ಬಿದ್ದಿದೆ. ಕುಂದಾಪುರದಲ್ಲಿ ಅತ್ಯಧಿಕ 97.4ಮಿ.ಮೀ. ಮಳೆಯಾದರೆ, ಬ್ರಹ್ಮಾವರದಲ್ಲಿ 93.9ಮಿ.ಮೀ.ಮಳೆ ಬಿದ್ದಿದೆ. ಹೆಬ್ರಿಯಲ್ಲಿ 81ಮಿ.ಮೀ.ಮಳೆಯಾಗಿದೆ.
ಹಾನಿ ವರದಿ: ಇಂದು ಎರಡು ಮನೆಗಳಿಗೆ ಹಾನಿಯಾಗಿದ್ದು, ಕಾಪು ತಾಲೂಕಿನ ಕಳತ್ತೂರಿನ ಗೋಪ ಮುಖರಿ ಅವರ ಮನೆಯ ಮೇಲೆ ಮರ ಬಿದ್ದು ₹20,000ರಷ್ಟು ಹಾನಿ ಉಂಟಾಗಿದ್ದರೆ, ಕುಂದಾಪುರ ತಾಲೂಕಿನ ಮೊಳಹಳ್ಳಿಯ ಸಾದಮ್ಮ ಶೆಟ್ಟಿ ಅವರ ಮನೆಯ ಮೇಲೆ ಮರ ಬಿದ್ದು ₹25,000ರಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
Leave a Reply