ಭಟ್ಕಳ: ಜೈಲಿನಿಂದ ಹೊರಬಂದ ನಂತರ ಮತ್ತೆ ಕಳ್ಳತನ

ಭಟ್ಕಳ, ಜುಲೈ 16, 2025: ಮನೆಯ ಮುಂದೆ ನಿಲ್ಲಿಸಿದ್ದ ಡಿಜೈರ್‌ ಕಾರು ಕಳವಾದ ಪ್ರಕರಣದಲ್ಲಿ ಭಟ್ಕಳ ಶಹರ ಠಾಣೆ ಪೊಲೀಸರು ಕೇವಲ 48 ಗಂಟೆಗಳಲ್ಲಿ ಕಾರು ಪತ್ತೆ ಹಚ್ಚಿ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರೂ ಆರೋಪಿಗಳು ಭಟ್ಕಳದವರಾಗಿದ್ದಾರೆ.

ಮಟ್ಟಳ್ಳಿಯ ರೈಲ್ವೆ ನಿಲ್ದಾಣದ ಹತ್ತಿರವಿರುವ ಶೇಖರ ಸೋಮಯ್ಯ ನಾಯ್ಕ ಎಂಬುವವರಿಗೆ ಸೇರಿದ ಮಾರುತಿ ಡಿಜೈರ್‌ ಕಾರು ಜುಲೈ ೧೩ರಂದು ಬೆಳಿಗ್ಗೆ ೪ ಗಂಟೆ ಸುಮಾರಿಗೆ ಕಳವಾಗಿದ್ದು, ತಕ್ಷಣವೇ ಶಹರ ಠಾಣೆಗೆ ದೂರು ನೀಡಲಾಗಿತ್ತು. ಪಿಎಸ್‌ಐ ತಿಮ್ಮಪ್ಪ ಬೆಡುಮನೆ ಅವರು ತನಿಖೆ ಕೈಗೊಂಡು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಶಿರೂರು ಟೋಲ್‌ಗೇಟ್ ಮಾರ್ಗವಾಗಿ ಕಾರು ಹಾದುಹೋಗಿರುವುದು ದೃಢಪಟ್ಟಿತ್ತು. ಶಹರ ಠಾಣೆಯ ಇನ್‌ಸ್ಪೆಕ್ಟರ್ ದಿವಾಕರ ಪಿ ಎಂ ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ಬೈಂದೂರು, ಉಡುಪಿ ಹಾಗೂ ಮಂಗಳೂರು ಕಡೆಗೆ ಕಳಿಸಲಾಗಿತ್ತು. ಜುಲೈ 15ರಂದು ಮಧ್ಯಾಹ್ನ ಬೈಂದೂರಿನ ರೈಲ್ವೆ ನಿಲ್ದಾಣ ಕ್ರಾಸ್ ಬಳಿ ಕಾರು ಸಹಿತ ಆರೋಪಿಗಳಾದ  ಬದ್ರಿಯಾ ಕಾಲೋನಿಯ ಫೌಜಾನ್ ಅಹ್ಮದ್ (20) ಮತ್ತು ವೆಂಕಟಾಪುರದ ದರ್ಶನ ನಾಯ್ಕ (18) ಎಂಬಿಬ್ಬರನ್ನು ಬಂಧಿಸಲಾಗಿದೆ.

ಬಂಧಿತ ಫೌಜಾನ್ ಹಿಂದೆ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಕ್ಕೆ ಜೈಲುಪಾಲಾಗಿದ್ದ. ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ಮತ್ತೆ ಕಳ್ಳತನದಲ್ಲಿ ತೊಡಗಿದ್ದನು. ಈ ಚುರುಕು ಕಾರ್ಯಾಚರಣೆಯಲ್ಲಿ ಶಾಂತಿನಾಥ ಪಾಸಾನೆ, ನವೀನ್ ನಾಯ್ಕ, ದೀಪಕ ನಾಯ್ಕ, ದಿನೇಶ್ ನಾಯಕ, ವಿನಾಯಕ ಪಾಟೀಲ್, ದೇವು ನಾಯ್ಡ, ಮಹಾಂತೇಶ ಹಿರೇಮಠ, ವೀರಣ್ಣಾ ಬಳ್ಳಾರಿ, ಕಾಶಿನಾಥ ಕೊಟಗೊಣಸಿ, ರೇವಣಸಿದ್ದಪ್ಪ ಮಾಗಿ, ಚಂದ್ರಕಾಂತ ಕುಂಬಾರ ಹಾಗೂ ಕಾರವಾರದ ಟೆಕ್ನಿಕಲ್ ಸೆಲ್‌ನ ಉದಯ ಗುನಗಾ, ಬಬನ್ ಕದಂ ಪಾಲ್ಗೊಂಡಿದ್ದರು. ಉತ್ತರ ಕನ್ನಡ ಜಿಲ್ಲಾ ಎಸ್‌ಪಿ ಎಂ. ನಾರಾಯಣ, ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ಹಾಗೂ ಭಟ್ಕಳ ಡಿವೈಎಸ್‌ಪಿ ಮಹೇಶ್ ಎಂ ಕೆ ಮಾರ್ಗದರ್ಶನ ನೀಡಿದರು.

Comments

Leave a Reply

Your email address will not be published. Required fields are marked *