ಬಂಟ್ವಾಳ/ಶಿರಸಿ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಉಪನಿರೀಕ್ಷಕರಾಗಿ (ಪಿಎಸ್‌ಐ) ಸೇವೆ ಸಲ್ಲಿಸುತ್ತಿದ್ದ ಕೀರಪ್ಪ ಘಟಕಾಂಬ್ಳೆ ಅವರು ತಾವು ತಂಗಿದ್ದ ವಸತಿಗೃಹದ ಕೊಠಡಿಯಲ್ಲೇ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಅವರ ಈ ದಿಢೀರ್ ನಿರ್ಧಾರಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದವರಾದ 45 ವರ್ಷದ ಕೀರಪ್ಪ ಘಟಕಾಂಬ್ಳೆ ಅವರು ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಪೊಲೀಸ್ ಇಲಾಖೆಯಲ್ಲಿ ಸುಮಾರು 20 ವರ್ಷಗಳ ಅನುಭವ ಹೊಂದಿದ್ದ ಅವರು, ಈ ಹಿಂದೆ ಮುಂಡಗೋಡ, ಶಿರಸಿ ಗ್ರಾಮೀಣ ಮತ್ತು ಶಿರಸಿ ಮಾರ್ಕೆಟ್ ಪೊಲೀಸ್ ಠಾಣೆಗಳಲ್ಲಿ ಸಹಾಯಕ ಉಪನಿರೀಕ್ಷಕರಾಗಿ (ಎಎಸ್‌ಐ) ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.
ಕಳೆದ ಎಂಟು ತಿಂಗಳ ಹಿಂದಷ್ಟೇ ಅವರಿಗೆ ಪಿಎಸ್‌ಐ ಆಗಿ ಪದೋನ್ನತಿ ದೊರೆತಿತ್ತು. ಪದೋನ್ನತಿಗೊಂಡ ನಂತರ ಅವರು ಬಂಟ್ವಾಳ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಕುಟುಂಬವನ್ನು ಶಿರಸಿಯಲ್ಲಿಯೇ ಬಿಟ್ಟು, ಘಟಕಾಂಬ್ಳೆ ಅವರು ಬಂಟ್ವಾಳದಲ್ಲಿ ವಾಸವಾಗಿದ್ದರು.
ಅವರ ಆತ್ಮಹ*ತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆ ಸೇರಿದಂತೆ ಅವರ ಕುಟುಂಬಸ್ಥರು, ಸಹೋದ್ಯೋಗಿಗಳು ಮತ್ತು ಹಳಿಯಾಳ ಹಾಗೂ ಶಿರಸಿಯಲ್ಲಿರುವ ಸ್ನೇಹಿತರ ವಲಯದಲ್ಲಿ ತೀವ್ರ ಆಘಾತ ಮತ್ತು ಶೋಕ ಮನೆ ಮಾಡಿದೆ. ಅವರು ಪತ್ನಿ, ಇಬ್ಬರು ಮಕ್ಕಳು ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ಆರಂಭಿಸಿದ್ದಾರೆ
Leave a Reply