ಗಂಗೊಳ್ಳಿ: ಮೀನುಗಾರನ ಸಾವಿನ ಪ್ರಕರಣ: ಆರೋಪಿಗೆ 10 ವರ್ಷ ಕಠಿಣ ಜೈಲುಶಿಕ್ಷೆ

ಕುಂದಾಪುರ: ಗಂಗೊಳ್ಳಿ ಮೀನುಗಾರಿಕಾ ಬಂದರಿನ ದಕ್ಕೆಯಲ್ಲಿ ಬೋಟ್ ಕಟ್ಟುವ ವಿಷಯಕ್ಕೆ ಸಂಬಂಧಿಸಿದ ಹಲ್ಲೆಯಿಂದ ಮೀನುಗಾರನೊಬ್ಬ ಮೃತಪಟ್ಟ ಪ್ರಕರಣದಲ್ಲಿ ಆರೋಪಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷ ಕಠಿಣ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಆರೋಪಿಯನ್ನು ಭಟ್ಕಳ ಮೂಲದ ಚಂದ್ರಕಾಂತ ಖಾರ್ವಿ ಎಂದು ಗುರುತಿಸಲಾಗಿದೆ. 2017ರ ಸೆಪ್ಟೆಂಬರ್ 15ರ ರಾತ್ರಿ, ಗಂಗೊಳ್ಳಿ ಮೀನುಗಾರಿಕಾ ಬಂದರಿನ ದಕ್ಕೆಯಲ್ಲಿ ಮೀನು ಖಾಲಿ ಮಾಡಲು ಪ್ರಕಾಶ ಪೂಜಾರಿ ತಾನು ಕೆಲಸ ಮಾಡುತ್ತಿದ್ದ ಮೀನುಗಾರಿಕಾ ಬೋಟ್‌ನ ಹಗ್ಗವನ್ನು ಚಂದ್ರಕಾಂತ ಚಾಲಕನಾಗಿದ್ದ ಬೋಟ್‌ಗೆ ಕಟ್ಟುತ್ತಿದ್ದಾಗ, ಆರೋಪಿಯು ಪ್ರಕಾಶ್‌ಗೆ ಅವಾಚ್ಯವಾಗಿ ಬೈದಿದ್ದನು.

ಇದನ್ನು ಆಕ್ಷೇಪಿಸಿದ್ದಕ್ಕೆ, ಚಂದ್ರಕಾಂತನು ತನ್ನ ಬೋಟ್‌ನಲ್ಲಿದ್ದ ಮರದ ಹಲಗೆಯಿಂದ ಪ್ರಕಾಶ್‌ನ ತಲೆಗೆ, ಆತನಿಗೆ ಮಾರಕವಾಗಬಹುದೆಂಬ ತಿಳಿವಳಿಕೆ ಇದ್ದರೂ, ಹೊಡೆದಿದ್ದನು. ಪರಿಣಾಮವಾಗಿ, ತಲೆಗೆ ಗಾಯಗೊಂಡ ಪ್ರಕಾಶ ಪೂಜಾರಿ ಪಂಚಗಂಗಾವಳಿ ಹೊಳೆಗೆ ಬಿದ್ದಿದ್ದನು. ಆತನ ಶವವು ಗಂಗೊಳ್ಳಿ ಗ್ರಾಮದ ಬೇಲಿಕೆರೆ ಅರಬ್ಬಿ ಸಮುದ್ರದಲ್ಲಿ ಪತ್ತೆಯಾಗಿತ್ತು.

ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಂದಿನ ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಪರಮೇಶ್ವರ ಆರ್. ಗುನಗ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಾಧೀಶ ಅಬ್ದುಲ್ ರಹೀಂ ಹುಸೇನ್ ಶೇಖ್ ಅವರು ಆರೋಪಿಯನ್ನು ದೋಷಿಯೆಂದು ಘೋಷಿಸಿ, ಐಪಿಸಿ ಕಲಂ 304(2) ಅಡಿಯಲ್ಲಿ 10 ವರ್ಷ ಕಠಿಣ ಜೈಲುಶಿಕ್ಷೆಯ ಜೊತೆಗೆ 10,000 ರೂ. ದಂಡ, ಮತ್ತು ಕಲಂ 504 ಅಡಿಯಲ್ಲಿ 2 ವರ್ಷ ಶಿಕ್ಷೆಯ ಜೊತೆಗೆ 5,000 ರೂ. ದಂಡ ವಿಧಿಸಿ ಆದೇಶಿಸಿದರು.

ಪ್ರಕರಣದ ಸಾಕ್ಷಿ ವಿಚಾರಣೆಯನ್ನು ಅಂದಿನ ಸರಕಾರಿ ಅಭಿಯೋಜಕರಾದ ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ಮತ್ತು ಹರಿಶ್ಚಂದ್ರ ಉದ್ಯಾವರ ನಡೆಸಿದ್ದರು. ಈಗಿನ ಸರಕಾರಿ ಅಭಿಯೋಜಕ ಇಂದಿರಾ ನಾಯ್ಕ ಅವರು ವಿಚಾರಣೆಯನ್ನು ಮುಂದುವರಿಸಿ ವಾದ ಮಂಡಿಸಿದ್ದಾರೆ.

Comments

Leave a Reply

Your email address will not be published. Required fields are marked *