Author: NewsDesk

  • ಬೆಳಗಾವಿ ಅಪಘಾತ: SUV-Car ಡಿಕ್ಕಿ, ಮೂವರು ಸಾವು, ಮಾಜಿ ಶಾಸಕರ ಪುತ್ರನ ವಿರುದ್ಧ ಪ್ರಕರಣ ದಾಖಲು

    ಬೆಳಗಾವಿ, ಮೇ 5: ಬೈಲಹೊಂಗಲ್ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಬಳಿ ಸೋಮವಾರ ನಡೆದ SUV ಮತ್ತು ಕಾರಿನ ಮುಖಾಮುಖಿ ಡಿಕ್ಕಿಯಲ್ಲಿ ಒಂದೇ ಕುಟುಂಬದ ಒಂದು ವರ್ಷದ ಬಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಆರೋಪಿಯಾದ ಕಾರು ಚಾಲಕನನ್ನು ಮಾಜಿ ಶಾಸಕ ಆರ್.ವಿ. ಪಾಟೀಲ್ ಅವರ ಪುತ್ರ ಎಂದು ಗುರುತಿಸಲಾಗಿದೆ.

    ಪೊಲೀಸರ ಪ್ರಕಾರ, ಕಾರು ಹಿರೇಬಾಗೇವಾಡಿಯತ್ತ ಸಾಗುತ್ತಿದ್ದರೆ, SUV ಬೈಲಹೊಂಗಲ್ ಕಡೆಗೆ ಚಲಿಸುತ್ತಿತ್ತು. ಚಿಕ್ಕಬಾಗೇವಾಡಿ ಬಳಿ ಎರಡೂ ವಾಹನಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ. ಈ ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿಯ ತೀವ್ರತೆಯಿಂದ ಒಂದು ಕಾರು ರಸ್ತೆಯ ಪಕ್ಕದ ಕೃಷಿ ಭೂಮಿಗೆ ಜಾರಿ ಸಂಪೂರ್ಣ ಜಖಂಗೊಂಡಿದೆ. SUVಯ ಮುಂಭಾಗವೂ ಹಾನಿಗೊಳಗಾಗಿದೆ.

    SUV ಮುಂದಿರುವ ವಾಹನವನ್ನು ಓವರ್‌ಟೇಕ್ ಮಾಡಲು ಯತ್ನಿಸುವಾಗ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ.

    ಮೃತರನ್ನು ಹಿರೇಬಾಗೇವಾಡಿ ಗ್ರಾಮದ ನಿವಾಸಿಗಳಾದ ಅನೀಸ್ ಸಯ್ಯದ್ (23), ಅವರ ಪತ್ನಿ ಐಮಾನ್ (21) ಮತ್ತು ಮಗ ಐಮದ್ (1) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಐಷಾ ಅನ್ವರ್ ಸಯ್ಯದ್ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

    ಆರೋಪಿಯಾದ ಕಾರು ಚಾಲಕನನ್ನು ಸವದತ್ತಿಯ ನಿವಾಸಿ ಸುರೇಶಗೌಡ ಪಾಟೀಲ್ ಎಂದು ಗುರುತಿಸಲಾಗಿದೆ. ಇವರು ಮಾಜಿ ಶಾಸಕ ಆರ್.ವಿ. ಪಾಟೀಲ್ ಅವರ ಪುತ್ರರಾಗಿದ್ದಾರೆ.

    ಬೈಲಹೊಂಗಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ಅಪರಿಚಿತ ವಾಹನ ಡಿಕ್ಕಿ; ವ್ಯಕ್ತಿ ಸ್ಥಳದಲ್ಲಿಯೇ ಸಾವು

    ನಂಜನಗೂಡು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ವ್ಯಕ್ತಿ ಮೃತಪಟ್ಟಿರುವ ಘಟನೆ ನಂಜನಗೂಡು ತಾಲ್ಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಕಸುವಿನಹಳ್ಳಿ ಗ್ರಾಮದ ಗಜೇಂದ್ರ ಕುಮಾರ್ (35) ಮೃತ ದುರ್ದೈವಿ. ರಾತ್ರಿಯ ಸಮಯದಲ್ಲಿ ಅಪರಿಚಿತ ವಾಹನ ಚಾಲಕ ಕೂಗಲೂರು ಗ್ರಾಮದ ಸಿದ್ದಯ್ಯನಹುಂಡಿ ಗ್ರಾಮದ ಗೇಟ್ ಕಡೆಯಿಂದ ಕಸುವಿನಹಳ್ಳಿ ಗ್ರಾಮದ ಕಡೆಗೆ ಅತಿ ವೇಗವಾಗಿ ಬಂದು ಬೈಕ್ ನಲ್ಲಿ ಹೋಗುತ್ತಿದ್ದ ಗಜೇಂದ್ರ ಕುಮಾರ್ ಗೆ ಡಿಕ್ಕಿ ಹೊಡೆದಿದ್ದಾನೆ.

    ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವವಾಗಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಪರಿಚಿತ ವಾಹನದ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಶ್ರೀನಿವಾಸಪುರ ಮಾವಿನ ರಾಜಧಾನಿ ಮತ್ತೆ ಸಜ್ಜು – ಮೇ 15 ರಿಂದ ಭರ್ಜರಿ ಆರಂಭವಾಗಲಿದೆ ಮಾವಿನ ಮಾರುಕಟ್ಟೆ

    ಶ್ರೀನಿವಾಸಪುರ: ದೇಶದ ಅತಿ ದೊಡ್ಡ ಮಾವು ಉತ್ಪಾದನಾ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿರುವ ಶ್ರೀನಿವಾಸಪುರದಲ್ಲಿನ ಮಾವಿನ ಮಾರುಕಟ್ಟೆ ಈ ವರ್ಷದ ಮೇ 15ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ. ಈಗಾಗಲೇ ತಯಾರಿ ಕಾರ್ಯಗಳು ತೀವ್ರಗೊಂಡಿದ್ದು, ಎಪಿಎಂಸಿ ಹಾಗೂ ಖಾಸಗಿ ಮಾರುಕಟ್ಟೆಗಳ ಮಾಲೀಕರು, ರೈತರು ಮತ್ತು ವ್ಯಾಪಾರಸ್ಥರು ಸಜ್ಜಾಗುತ್ತಿದ್ದಾರೆ.

    ತಾಲೂಕಿನಲ್ಲಿ ಸುಮಾರು 57 ಸಾವಿರ ಎಕರೆ ಭಾಗದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಹಿನ್ನೆಲೆ ಶ್ರೀನಿವಾಸಪುರ ‘ಮಾವಿನ ನಾಡು’, ‘ಮಾವಿನ ರಾಜಧಾನಿ’ ಎಂಬ ಹೆಸರನ್ನು ಸಂಪೂರ್ಣವಾಗಿ ಸ್ಥಾಪಿಸಿಕೊಂಡಿದೆ. ಇಲ್ಲಿನ ಮಾವಿಗೆ ರಾಜ್ಯದಷ್ಟೇ ಅಲ್ಲದೆ ದೇಶದಾದ್ಯಂತ ಭಾರೀ ಬೇಡಿಕೆ ಉಂಟಾಗಿದೆ.

  • ಮೇ 15ರಿಂದ 17ರವರೆಗೆ ಸುಕ್ಷೇತ್ರ ಗುರುಪುರ ಶ್ರೀಗುರುಮಹಾಕಾಲೇಶ್ವರ ದೇವರ ಪ್ರತಿಷ್ಠಾ ಬ್ರಹ್ಮಕಲಶ ಸಂಭ್ರಮ

    ಉಡುಪಿ: ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾಗಿ ಸುಕ್ಷೇತ್ರ ಗುರುಪುರ ಪಲ್ಗುಣಿ ನದಿ ತಟದ ಗೋಳಿದಡಿಗುತ್ತುನಲ್ಲಿ ನಿರ್ಮಾಣಗೊಂಡಿರುವ ಶ್ರೀಗುರುಮಹಾಕಾಲೇಶ್ವರ ದೇವರ ಬೃಹತ್ ಎಕಶಿಲಾ ಮೂರ್ತಿಯ ಪ್ರತಿಷ್ಠಾ ಬ್ರಹ್ಮಕಲಶ ಸಂಭ್ರಮ ಮೇ. 15ರಿಂದ 17 ರವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶ ಸಂಭ್ರಮ ಸಮಿತಿಯ ಅಧ್ಯಕ್ಷ, ಮಾಜಿ ಸಂಸದ ಕುಂಜಾಡಿ ಬೀಡು ನಳಿನ್ ಕುಮಾರ್ ಕಟೀಲು ತಿಳಿಸಿದರು.

    ಈ ಬಗ್ಗೆ ಸೋಮವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ವೇದ ಕೃಷಿಕ ಬ್ರಹ್ಮ‌ಋಷಿ ಕೆ.ಎಸ್. ನಿತ್ಯಾನಂದ ಗುರುಗಳ ಮಾರ್ಗದರ್ಶನದಲ್ಲಿ ಗುರುಮಹಾಕಾಲೇಶ್ವರ ದೇವರ ಬೃಹತ್ ಏಕಶಿಲಾ ಮೂರ್ತಿಯ ಪತ್ರಿಷ್ಠಾ ಬ್ರಹ್ಮಕಲಶ ನೆರವೇರಲಿದೆ.

    ಮೇ 16 ರಂದು ಸಂಜೆ ನಡೆಯಲಿರುವ ಪಂಚಕಲ್ಯಾಣಯುಕ್ತ ಬ್ರಹ್ಮಕಲಶಾಭೀಷೇಕ ಕಾರ್ಯದಲ್ಲಿ ಜಾತಿ, ಪಂಗಡ, ಲಿಂಗಭೇದ ಇಲ್ಲದೇ ಭಾಗವಹಿಸಬಹುದಾಗಿದೆ. ದೇವರ ಬೃಹತ್ ಏಕಶಿಲಾ ಮೂರ್ತಿಗೆ ಪಂಚಕಲ್ಯಾಣ ಸ್ವರೂಪದ ಕಲಶಾಭೀಷೇಕವನ್ನು ಸಮರ್ಪಿಸಬಹುದಾಗಿದೆ ಎಂದರು.

    ಮೇ 17 ರಂದು ಸಂಜೆ 6 ಗಂಟೆಗೆ ಶಿವಾನುಭವ ಮಂಟಪದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ವೇದ ಕೃಷಿಕ ಬ್ರಹ್ಮ‌ಋಷಿ ಕೆ.ಎಸ್.ನಿತ್ಯಾನಂದ ಸಾನಿಧ್ಯ ವಹಿಸಲಿದ್ದಾರೆ. ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಪಾವಂಜೆ ಕ್ಷೇತ್ರದ ಯಾಜಿ ನಿರಂಜನ್ ಭಟ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಗೋಳಿದಡಿ ಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿ, ಅಂತರಾಷ್ಟ್ರೀಯ ಕ್ರೀಡಾಪಟು, ಚಲನಚಿತ್ರ ನಟ, ಸ್ವಾಗತ ಸಮಿತಿ‌ ಅಧ್ಯಕ್ಷ ರೋಹಿತ್ ಕುಮಾರ್ ಕಟೀಲ್, ಪ್ರಮುಖರಾದ ಚಂದ್ರಹಾಸ್ ಆಮೀನ್, ಸುಜಾತ ಸದಾಶಿವ, ದಿವಾಕರ್ ಉಪಸ್ಥಿತರಿದ್ದರು.

  • ಉಡುಪಿಯ ಗಾಂಧಿ ಆಸ್ಪತ್ರೆಗೆ 30ರ ಸಡಗರ; ಸ್ವಯಂಪ್ರೇರಿತ ರಕ್ತದಾನ ಶಿಬಿರ

    ಉಡುಪಿ: ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಗಾಂಧಿ ಆಸ್ಪತ್ರೆಗೆ 30ವರ್ಷ ಸಂಭ್ರಮದ ಹಿನ್ನೆಲೆಯಲ್ಲಿ ಅಜ್ಜರಕಾಡು​ಜಿಲ್ಲಾ ಸರಕಾರಿ ಆಸ್ಪತ್ರೆಯ ​ಜಿಲ್ಲಾ  ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಆಸ್ಪತ್ರೆಯ ಲಹರಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.

    ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂ​ಜಾರಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಸಮಾಜದಿಂದ​ ಪಡೆದುದನ್ನು  ಸಮಾಜಕ್ಕೆ ​ಹಂಚುವ ಕೆಲಸವನ್ನು ​ಗಾಂಧಿ ಆಸ್ಪತ್ರೆ ಮಾಡುತ್ತಿದೆ . ನಗರಸಭೆ ಜತೆ ಗಾಂಧಿ ಆಸ್ಪತ್ರೆ ಕೈ​ಜೋಡಿಸಿದ್ದು​, ಎಂ.ಹರಿಶ್ಚಂದ್ರರ​ ಸಾಮಾಜಿಕ ಕಳಕಳಿ ಶ್ಲಾಘನೀಯ ಎಂದರು.

    ಉಡುಪಿ ನಗರಸಭೆ ಪೌರಾಯುಕ್ತ ಡಾ. ಉದಯ ಕುಮಾರ್ ಶೆಟ್ಟಿ ಮಾತನಾಡಿ, ಆರೋಗ್ಯ, ಶಿಕ್ಷಣ, ಆದಾಯದ ಆಧಾರದಲ್ಲಿ ಮಾನವ ಅಭಿವೃದ್ಧಿ ಅಳತೆಗೋಲಾಗಿದ್ದು ಮಡಾಮಕ್ಕಿಯಂತಹ ಕುಗ್ರಾಮದಿಂದ ಬಂದ ಎಂ.ಹರಿಶ್ಚಂದ್ರರ ಸಾಧನೆ  ಅನ್ಯರಿಗೆ ಮಾದರಿ ಎಂದು ಹೇಳಿದರು.

    30ವರ್ಷಗಳ ಹಿಂದೆ ಗೆಳೆಯನ ಜತೆ 25 ಬೆಡ್‍ಗಳಿಂದ ​ಎಂ ಹರಿಶ್ಚಂದ್ರರು ಆರಂಭಿಸಿದ ಆಸ್ಪತ್ರೆ  2002ರಲ್ಲಿ ಸ್ವಂತ ಕಟ್ಟಡ ಹೊಂದಿ, ಐದು ಡಯಾಲಿಸಿಸ್ ಯಂತ್ರ ಅಳವಡಿಸಿದೆ.​  25  ವರುಷಗಳಿಂದ  ಪಂಚಮಿ ಟ್ರಸ್ಟ್ ಮೂಲಕ ಸಮಾಜ ಮುಖಿ ಸೇವೆ, ಸಿಟಿ ಬಸ್ ನಿಲ್ದಾಣದಿಂದ ಕಲ್ಸಂಕ ತನಕದ ಮುಖ್ಯರಸ್ತೆಯನ್ನು  ​ಹತ್ತು ವರ್ಷದಿಂದ  ಪ್ರತಿ ಭಾನುವಾರ ಸ್ವಚ್ಚತೆ ಕಾರ್ಯ, ಗಾರ್ಡನ್ ನಿರ್ವಹಣೆ ಮಾಡಲಾಗುತ್ತಿದೆ  ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ  ಡಾ. ವ್ಯಾಸರಾಜ ತಂತ್ರಿ ಹೇಳಿದರು.

    ಉಡುಪಿ ಟೌನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಚ್. ಜಯಪ್ರಕಾಶ್ ಕೆದ್ಲಾಯ ಮಾತನಾಡಿದರು. ​ ಗಾಂಧಿ ಆಸ್ಪತ್ರೆ ಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ಎಂ.ಹರಿಶ್ಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಾಂಧಿ ಆಸ್ಪತ್ರೆಯಲ್ಲಿ ಜನಿಸಿದ, ನಾನಾ ಕ್ಷೇತ್ರದ ಸಾಧಕರು ಹಾಗೂ ಆಸ್ಪತ್ರೆಯ ಸಿಬ್ಬಂದಿಯನ್ನು ಗೌರವಿಸಲಾಯಿತು.

    ಕರ್ನಾಟಕ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ  ಎಜಿಎಂ ವಾದಿರಾಜ ಭ​ಟ್,  ಲಕ್ಷ್ಮೀ ಹರಿಶ್ಚಂದ್ರ, ಡಾ. ಪಂಚಮಿ​, ಡಾ. ವಿದ್ಯಾ ವಿ ತಂತ್ರಿ ಉಪಸ್ಥಿತರಿದ್ದರು. ​ ವಿಜಯಲಕ್ಷ್ಮಿ ಪ್ರಾರ್ಥಿಸಿದರು. ಗಾಂಧಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಪ್ರಾಸ್ತಾವಿಕ ಮಾತನಾಡಿದರು. ಶ್ವೇತಾ ಕಾರ್ಯಕ್ರಮ ನಿರೂಪಿಸಿ, ಸುಮಾ ವಂದಿಸಿದರು.

  • ಉಡುಪಿ: ಇಂದಿನಿಂದ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆ

    ಉಡುಪಿ: ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾ| ಎಚ್.ಎನ್. ನಾಗಮೋಹನ್ ದಾಸ್ ಏಕ ಸದಸ್ಯ ವಿಚಾರಣ ಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಕ್ರೋಢೀಕರಿಸಲು ಮೇ 5ರಿಂದ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಯಲಿದೆ.

    ಮೂರು ಹಂತದಲ್ಲಿ ಸಮೀಕ್ಷೆ ನಡೆಯಲಿದ್ದು, ಪರಿಶಿಷ್ಟ ಜಾತಿಯವರ ಮನೆಗಳಿಗೆ ಮಾತ್ರ ಭೇಟಿ ನೀಡಿ ವಿವರ ಪಡೆಯಲಾಗುವುದು. ಮೇ 5ರಿಂದ 17ರವರೆಗೆ ಮನೆ ಮನೆ ಸಮೀಕ್ಷೆ, ಮೇ 19ರಿಂದ 21ರ ವರೆಗೆ ಅಲ್ಲಲ್ಲಿ ಕ್ಯಾಂಪ್ ಮಾಡಿ ದಾಖಲೀಕರಣ ಹಾಗೂ ಮೂರನೇ ಹಂತದಲ್ಲಿ ಆನ್‌ಲೈನ್ ಮೂಲಕ ನಮೂದು ಕಾರ್ಯ ನಡೆಯಲಿದೆ. 2011ರ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 75 ಸಾವಿರ ಪ.ಜಾತಿ ಜನಸಂಖ್ಯೆಯಿದ್ದು, ನಿರ್ದಿಷ್ಟ ಕಾಲಮಿತಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಲು ಯೋಜಿಸಲಾಗಿದೆ.

    ಜಿಲ್ಲೆಯ ಮಾಸ್ಟ‌ರ್ ಟ್ರೈನರ್‌ಗಳಿಂದ 35 ತಾಲೂಕು ಮಟ್ಟದ ಟ್ರೈನರ್‌ಗಳಿಗೆ ತರಬೇತಿ ನೀಡಲಾಗಿದೆ. 1112 ಶಿಕ್ಷಕರು ಹಾಗೂ 112 ಮೇಲ್ವಿಚಾರಕರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವರು. ಸಮೀಕ್ಷೆ ಕುರಿತ ಮಾಹಿತಿಗೆ 9480843046, ಸಹಾಯವಾಣಿಗೂ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

    ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಸಹಿತ ಯಾವುದಾದರೂ ಒಂದು ದಾಖಲೆ ನೀಡಬೇಕು. ರಾಷ್ಟ್ರಪತಿಗಳಿಂದ ಅನುಮೋದನೆ ಪಡೆದಿರುವ 101 ಜಾತಿಗಳ ಪಟ್ಟಿಯನ್ನು ಸಿದ್ಧಪಡಿಸಿ ಸರಕಾರವೇ ನೀಡಿದೆ. ಮೊಬೈಲ್ ಆ್ಯಪ್ ಮೂಲಕ ಸರ್ವೆ ನಡೆಯಲಿದ್ದು ಸಮೀಕ್ಷೆಗೆ ಸಂಬಂಧಿಸಿದ ಎಲ್ಲ ಮಾಹಿತಿ ನೀಡಿದೆ.

  • ಸ್ಯಾಂಡಲ್​ವುಡ್​ನಿಂದ ಖ್ಯಾತ ಗಾಯಕ ಸೋನು ನಿಗಮ್ ಬ್ಯಾನ್

    ಫಿಲ್ಮ್ ಚೇಂಬರ್​​ನಲ್ಲಿ ಇಂದು ಸೋನು ನಿಗಮ್ ವಿವಾದದ ಕುರಿತು ಸಭೆ ನಡೆದಿದ್ದು, ಸಂಗೀತ ಸಂಯೋಜಕರ ಸಂಘ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘಗಳು ಭಾಗಿಯಾಗಿದ್ದವು. ಸಭೆಯಲ್ಲಿ ಒಮ್ಮತದಿಂದ ಸೋನು ನಿಗಮ್​​ರನ್ನು ಸ್ಯಾಂಡಲ್​ವುಡ್​​ನಿಂದ ನಿಷೇಧಿಸಲು ನಿರ್ಧರಿಸಲಾಗಿದೆ.

    ಕನ್ನಡ ಹಾಡು ಕೇಳಿದಕ್ಕೆ ಪೆಹಲ್ಗಾಮ್​ ದಾಳಿ ಜೊತೆಗೆ ಹೋಲಿಕೆ ಮಾಡಿದ್ದ ಸೋನು ನಿಗಮ್ ಮೇಲೆ ಕನ್ನಡಪರ ಸಂಘಟನೆಗಳು ಕೆರಳಿ ಕೆಂಡವಾಗಿದ್ದವು. ಕ್ಷಮೆ ಕೇಳುವ ಬದಲು ಸಮರ್ಥನೆ ಮಾಡಿಕೊಂಡು ಉದ್ದಟತನ ಮೆರೆದಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿದ್ದವು. ಅದರ ಬೆನ್ನಲ್ಲೇ ಫಿಲಂ ಚೇಂಬರ್ ಈ ನಿರ್ಧಾರ ಕೈಗೊಂಡಿದೆ.

    ಇತ್ತೀಚೆಗೆ ಸೋನು ನಿಗಮ್ ತಮ್ಮ ಹೊಸ ಹಿಂದಿ ಹಾಡು ಸುನ್ ಝರಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ, ಯುವಕನೋರ್ವ ಕನ್ನಡದ ಹಾಡು ಹಾಡಿ ಎಂದು ಪ್ಲಕಾರ್ಡ್ ಪ್ರದರ್ಶಿಸಿದ್ದ. ಈ ವೇಳೆ ಕೆರಳಿದ ಸೋನು ನಿಗಮ್, ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲವು ಮಾತುಗಳನ್ನಾಡಿದ್ದರು. ಆ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿ, ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿತ್ತು.

  • ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಆಯಕ್ತರಿಗೆ ಕಾಂಗ್ರೆಸ್ ನಿಂದ ಮನವಿ

    ಮಂಗಳೂರು: ಬಿಜೆಪಿ ಶಾಸಕ ಹರೀಶ್ ಪೂಂಜಾ ಕಾಂಗ್ರೆಸ್ ನಾಯಕರ ವಿರುದ್ಧ ಇಲ್ಲಸಲ್ಲದ ಸುಳ್ಳಾರೋಪ ಹೊರಿಸಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಕೋಮುವಾದಕ್ಕೆ ಪ್ರಯತ್ನಿಸುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯಕ್ತರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪರವಾಗಿ NSUI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಅವರು ಮನವಿ ಸಲ್ಲಿಸಿದರು.

  • ರೌಡಿಶೀಟರ್ ಗಳನ್ನು ಬಿಜೆಪಿಗರು ಮಹಾನ್ ದೇಶಭಕ್ತರು ಎಂಬಂತೆ ಬಿಂಬಿಸುವುದೇಕೆ?: ಮಂಜುನಾಥ ಭಂಡಾರಿ

    ಮಂಗಳೂರು: ”ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೌಡಿಶೀಟರ್ ಗಳನ್ನು ಕೊಂದರೆ ಬಿಜೆಪಿಯವರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ. ಕೊಲೆ ಕೊಲೆಯತ್ನ ದರೋಡೆಯಲ್ಲಿ ಭಾಗಿಯಾದ ರೌಡಿಗಳು ಜೈಲಿನಿಂದ ಬಿಡುಗಡೆಯಾಗುವಾಗ ಹಾರ ತುರಾಯಿ ಹಾಕಿ ಸ್ವಾಗತಿಸುತ್ತಾರೆ.

    ಒಂದು ವೇಳೆ ವೈಯಕ್ತಿಕ ವೈಷಮ್ಯಕ್ಕೆ ಅಥವಾ ವಿರೋಧಿ ರೌಡಿ ಪಡೆಯಿಂದ ಸಾವಿಗೀಡಾದರೆ ಅವರನ್ನು ಹಿಂದೂನಾಯಕ, ಮಹಾನ್ ದೇಶಭಕ್ತ ಎಂಬಂತೆ ಬಿಂಬಿಸುವುದೇಕೆ?“ ಎಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪ್ರಶ್ನಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿದ ಅವರು, ”ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ವೈಷಮ್ಯ, ಘರ್ಷಣೆಯಿಂದಾಗಿ ಮಂಗಳೂರಿನ ಮಾನ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಈ ಹಿಂದೆ ಪಬ್ ದಾಳಿ, ಚರ್ಚ್ ದಾಳಿ, ಬರ್ತ್ ಡೇ ಪಾರ್ಟಿ ದಾಳಿಯಿಂದ ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆಯಾಗಿದೆ. ಮಂಗಳೂರು ಬದಲಾವಣೆಯತ್ತ ತೆರೆದುಕೊಳ್ಳುತ್ತಿರುವ ಈ ವೇಳೆಯಲ್ಲಿ ಇಂತಹ ಘಟನೆಗಳು ಸಾಮಾಜಿಕ ಸ್ವಾಸ್ಥ್ಯಕ್ಕೆ ಮಾರಕವಾಗಿದೆ“ ಎಂದರು.

    ಬಿಜೆಪಿಯವರು ಕೆಲವು ತಿಂಗಳ ಹಿಂದೆ ಬಂಟ್ವಾಳದಲ್ಲಿ ಬಾಲಕನೊಬ್ಬ ನಾಪತ್ತೆಯಾದಾಗ ಅದರಲ್ಲಿ ಅನ್ಯಕೋಮಿನ ಕೈವಾಡ ಎಂದು ಹಿರಿಕಿರಿಯ ನಾಯಕರೆಲ್ಲರೂ ಮನೆಗೆ ಭೇಟಿಕೊಟ್ಟು ಪ್ರಕಾರಣದ ದಿಕ್ಕು ತಪ್ಪಿಸಲು ಯತ್ನಿಸಿ ವಿಫಲರಾದರು. ನಾಪತ್ತೆಯಾದ ಬಾಲಕ ವಾಪಸ್ ಮನೆಗೆ ಬಂದಾಗ ಇವರ್ಯಾರು ಕೂಡಾ ಇರಲಿಲ್ಲ. ಈಗ ರೌಡಿಯ ಕೊಲೆ ಪ್ರಕರಣ ಮುಂದಿಟ್ಟು ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಕೆಡಿಸಲು ಮುಂದಾಗಿದ್ದಾರೆ. ಇವರು ತಮ್ಮ ಮನೋಸ್ಥಿತಿಯ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕು“ ಎಂದರು.

    ”ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವ ಅಗತ್ಯತೆ ಎಲ್ಲಾ ಪಕ್ಷದವರಿಗೂ ಇದೆ. ಜನಪ್ರತಿನಿಧಿಗಳ ಜವಾಬ್ದಾರಿ ಇದೇ ಆಗಿದೆ. ಕಾನೂನಿನ ಅಲ್ಪ ಜ್ಞಾನವೂ ಇಲ್ಲದೆ ಮಾತಾಡುವುದು ಬಿಜೆಪಿ ನಾಯಕರಿಗೆ ಶೋಭೆ ತರುವುದಿಲ್ಲ. ಇನ್ನಾದರೂ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಯೋಚಿಸಬೇಕಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಈಗಾಗಲೇ ಉಪಮುಖ್ಯಮಂತ್ರಿ ಅವರು ಸರ್ವಪಕ್ಷಗಳ ನಾಯಕರ ಸಭೆ ಕರೆಯುವುದಾಗಿ ಹೇಳಿದ್ದಾರೆ. ಹೀಗಿರುವಾಗ ಹಿಂದೂ ಯುವಕರ ಸಾವಿನಲ್ಲಿ ರಾಜಕೀಯ ಮಾಡುವುದನ್ನು ಬಿಡಲಿ“ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಮಿಥುನ್ ರೈ, ಇನಾಯತ್ ಅಲಿ, ಹರೀಶ್ ಕುಮಾರ್, ಶಾಲೆಟ್ ಪಿಂಟೋ, ಜಿ ಎ ಬಾವ, ಲಾರೆನ್ಸ್ ಡಿಸೋಜ, ಸುಹಾನ್ ಆಳ್ವ, ಪದ್ಮರಾಜ್ ಆರ್., ಶಾಹುಲ್ ಹಮೀದ್, ವಿಕಾಸ್, ಶುಭೋದ್ ಆಳ್ವ, ಕೃಷ್ಣ ಶೆಟ್ಟಿ, ಬಶೀರ್ ಮತ್ತಿತರರು ಉಪಸ್ಥಿತರಿದ್ದರು.

  • ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಚೋದನಕಾರಿ ಸಂದೇಶ: ಆರೋಪಿ ಬಂಧನ

    ಉಡುಪಿ: ಮೇ 2ರಂದು ಸಂಪುಸಾಲಿನ್ (ಸಂಪು ಎಸ್ ಸಾಣೂರು) ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಾಜಕೀಯ ವೈಷಮ್ಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಪ್ರಚೋದನಕಾರಿ ಸಂದೇಶ ಹಾಕಿದ ಬೆಂಗಳೂರು ಹೋಮ್ಗಾರ್ಡ್ ಕಚೇರಿಯ ಉದ್ಯೋಗಿ ಸಂಪತ್ ಸಾಲಿಯಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

    ‘ಸಿಎಂ ಸಿದ್ದರಾಮಯ್ಯನನ್ನು ಕೊಂದ್ರೆ ಹಿಂದುಗಳಿಗೆ ನೆಮ್ಮದಿ’ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ರಾಜಕೀಯ ಪಕ್ಷದ ಮುಖಂಡರ ಹಾಗೂ ಹಿಂದುಗಳಿಗೆ ನೆಮ್ಮದಿ ಎಂದು ಪ್ರಚೋದಿಸಿ ವೈರತ್ವವನ್ನು ಬೆಳಸಿ ದ್ಷೇಷ ಭಾವನೆ ಹರಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.

    ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಸೂರಜ್ ಕುಕ್ಕುಂದೂರು ಎಂಬವರು ದೂರಿನಂತೆ ಅಪರಾಧ ಕ್ರಮಾಂಕ : 68/2025 ಕಲಂ 353(2) ಬಿಎನ್ಎಸ್ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

    ತನಿಖೆಯ ಬಳಿಕ ಆರೋಪಿ ಬೆಂಗಳೂರಿನ ಹೋಂಗಾರ್ಡ್ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸಂಪತ್ ಸಾಲಿಯಾನ್ ಎಂಬಾತನನ್ನು ಮೇ 4ರಂದು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ.