Category: Mangalore

  • ಮಂಗಳೂರು : ವೈರಲ್‌ ಪೋಸ್ಟ್‌ಗೆ ದಕ್ಷಿಣ ಕನ್ನಡ ಹೈಅಲರ್ಟ್

    ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಮತ್ತೊಂದು ಕೋಮು ಕಿಚ್ಚಿನ ಪೋಸ್ಟ್‌ ಒಂದು ದಕ್ಷಿಣ ಕನ್ನಡದಲ್ಲಿ ಹರಿದಾಡುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ‘ರಾತ್ರಿ 9.30ಕ್ಕೆ ಭರತ್ ಕುಮ್ಡೇಲ್ ಕೊಲ್ಲುತ್ತೇವೆ’ ಎಂದು ಸಂದೇಶ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಸೋಮವಾರ ರಾತ್ರಿ 9.30ರೊಳಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ.

    ಹೋಟೆಲ್, ಪಬ್, ಬಾರ್​ಗಳು, ಫುಟ್​ಪಾತ್ ವ್ಯಾಪಾರವನ್ನು ರಾತ್ರಿ 9.30 ರ ಒಳಗೆ ಬಂದ್ ಮಾಡಿಸಲಾಗುತ್ತಿದೆ. ಜನರನ್ನು ಬೇಗನೆ ಮನೆ ಸೇರಿಸುವ ಯತ್ನದಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

    “ಮೇ 5 ರಂದು ರಾತ್ರಿ 9:30ಕ್ಕೆ ನಿನ್ನ ಸ್ಥಳದಲ್ಲೇ ಕೊಲ್ಲುತ್ತೇವೆ” ಎಂದು ಭರತ್ ಕುಮ್ಡೇಲ್ ಹೆಸರು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದರು. ಹೀಗಾಗಿ, ಸೋಮವಾರವೇ ಮಂಗಳೂರು ನಗರದಲ್ಲಿ ಅಂಗಡಿ ಮುಂಗಟ್ಟುಗಳು ಹಾಗೂ ಫುಟ್ಪಾತ್ ವ್ಯಾಪಾರಿಗಳನ್ನು ರಾತ್ರಿ 9:30ರ ಒಳಗೆ ತೆರವುಗೊಳಿಸುವ ಪ್ರಕ್ರಿಯೆ ಶುರುವಾಗಿತ್ತು. ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಮತ್ತು ಭರತ್ ಕುಮ್ಡೇಲ್‌ ಅವರನ್ನು ಹತ್ಯೆ ಮಾಡುವುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ವೈರಲ್ ಆಗಿತ್ತು ಎನ್ನಲಾಗಿದೆ.

  • ಬೆಳ್ತಂಗಡಿ : ಮನೆಯೊಳಗೆ ನುಗ್ಗಿ ನಗನಗದು ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    ಬೆಳ್ತಂಗಡಿ: ಮನೆಯೊಳಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ನಗನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪುಂಜಾಲಕಟ್ಟೆ ಪೋಲೀಸರ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಹಾಸನ ಜಿಲ್ಲೆಯ ಮಾಲೂರು ತಾಲೂಕಿನ ಅಂಗಡಿಹಳ್ಳಿ ನಿವಾಸಿ ಶಿವರಾಜ್ ಯಾನೆ ಶಿವಕೇರಿ ( 32) ಹಾಗೂ ಮಂಗಳೂರು ಕಣ್ಣೂರು ನಿವಾಸಿ ಸಂತೋಷ್ ( 26) ಎಂಬಾತನನ್ನು ಬಂಧಿಸಲಾಗಿದೆ.

    ಬೆಳ್ತಂಗಡಿ ತಾಲೂಕು, ಮಾಲಾಡಿ ಗ್ರಾಮದ ಕೊಲ್ಪೆದಬೈಲು ವಸಂತಿ ಹೆಗ್ಡೆ ಎಂಬವರ ಮನೆಯಲ್ಲಿ ಎ. 20 ರಂದು ಕಳ್ಳರು ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿ ಕೋಣೆಯ ಕಪಾಟಿನಲ್ಲಿದ್ದ ರೂ 13,72,000/- ರೂ ಮೌಲ್ಯದ 160.5 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ರೂ 30,000 ನಗದು ಹಣವನ್ನು ಕಳವು ಮಾಡಿದ್ದರು.

    ಈ ಬಗ್ಗೆ ವಸಂತಿ ಹೆಗ್ಡೆಯವರು ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೋಲೀಸರ ತಂಡ ಮೇ.4 ರಂದು ಸಂಜೆ ಕಳ್ಳತನ ಮಾಡಿದ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳಿಂದ 106 ಗ್ರಾಂ ತೂಕದ ಚಿನ್ನಾಭರಣವನ್ನು ಸ್ವಾದೀನಪಡಿಸಿಕೊಂಡಿದ್ದಾರೆ.

  • ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಆಯಕ್ತರಿಗೆ ಕಾಂಗ್ರೆಸ್ ನಿಂದ ಮನವಿ

    ಮಂಗಳೂರು: ಬಿಜೆಪಿ ಶಾಸಕ ಹರೀಶ್ ಪೂಂಜಾ ಕಾಂಗ್ರೆಸ್ ನಾಯಕರ ವಿರುದ್ಧ ಇಲ್ಲಸಲ್ಲದ ಸುಳ್ಳಾರೋಪ ಹೊರಿಸಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಕೋಮುವಾದಕ್ಕೆ ಪ್ರಯತ್ನಿಸುತ್ತಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯಕ್ತರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಪರವಾಗಿ NSUI ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಅವರು ಮನವಿ ಸಲ್ಲಿಸಿದರು.

  • ರೌಡಿಶೀಟರ್ ಗಳನ್ನು ಬಿಜೆಪಿಗರು ಮಹಾನ್ ದೇಶಭಕ್ತರು ಎಂಬಂತೆ ಬಿಂಬಿಸುವುದೇಕೆ?: ಮಂಜುನಾಥ ಭಂಡಾರಿ

    ಮಂಗಳೂರು: ”ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೌಡಿಶೀಟರ್ ಗಳನ್ನು ಕೊಂದರೆ ಬಿಜೆಪಿಯವರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ. ಕೊಲೆ ಕೊಲೆಯತ್ನ ದರೋಡೆಯಲ್ಲಿ ಭಾಗಿಯಾದ ರೌಡಿಗಳು ಜೈಲಿನಿಂದ ಬಿಡುಗಡೆಯಾಗುವಾಗ ಹಾರ ತುರಾಯಿ ಹಾಕಿ ಸ್ವಾಗತಿಸುತ್ತಾರೆ.

    ಒಂದು ವೇಳೆ ವೈಯಕ್ತಿಕ ವೈಷಮ್ಯಕ್ಕೆ ಅಥವಾ ವಿರೋಧಿ ರೌಡಿ ಪಡೆಯಿಂದ ಸಾವಿಗೀಡಾದರೆ ಅವರನ್ನು ಹಿಂದೂನಾಯಕ, ಮಹಾನ್ ದೇಶಭಕ್ತ ಎಂಬಂತೆ ಬಿಂಬಿಸುವುದೇಕೆ?“ ಎಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಪ್ರಶ್ನಿಸಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿದ ಅವರು, ”ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ವೈಷಮ್ಯ, ಘರ್ಷಣೆಯಿಂದಾಗಿ ಮಂಗಳೂರಿನ ಮಾನ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ. ಈ ಹಿಂದೆ ಪಬ್ ದಾಳಿ, ಚರ್ಚ್ ದಾಳಿ, ಬರ್ತ್ ಡೇ ಪಾರ್ಟಿ ದಾಳಿಯಿಂದ ಪ್ರವಾಸೋದ್ಯಮಕ್ಕೆ ಕಪ್ಪು ಚುಕ್ಕೆಯಾಗಿದೆ. ಮಂಗಳೂರು ಬದಲಾವಣೆಯತ್ತ ತೆರೆದುಕೊಳ್ಳುತ್ತಿರುವ ಈ ವೇಳೆಯಲ್ಲಿ ಇಂತಹ ಘಟನೆಗಳು ಸಾಮಾಜಿಕ ಸ್ವಾಸ್ಥ್ಯಕ್ಕೆ ಮಾರಕವಾಗಿದೆ“ ಎಂದರು.

    ಬಿಜೆಪಿಯವರು ಕೆಲವು ತಿಂಗಳ ಹಿಂದೆ ಬಂಟ್ವಾಳದಲ್ಲಿ ಬಾಲಕನೊಬ್ಬ ನಾಪತ್ತೆಯಾದಾಗ ಅದರಲ್ಲಿ ಅನ್ಯಕೋಮಿನ ಕೈವಾಡ ಎಂದು ಹಿರಿಕಿರಿಯ ನಾಯಕರೆಲ್ಲರೂ ಮನೆಗೆ ಭೇಟಿಕೊಟ್ಟು ಪ್ರಕಾರಣದ ದಿಕ್ಕು ತಪ್ಪಿಸಲು ಯತ್ನಿಸಿ ವಿಫಲರಾದರು. ನಾಪತ್ತೆಯಾದ ಬಾಲಕ ವಾಪಸ್ ಮನೆಗೆ ಬಂದಾಗ ಇವರ್ಯಾರು ಕೂಡಾ ಇರಲಿಲ್ಲ. ಈಗ ರೌಡಿಯ ಕೊಲೆ ಪ್ರಕರಣ ಮುಂದಿಟ್ಟು ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಕೆಡಿಸಲು ಮುಂದಾಗಿದ್ದಾರೆ. ಇವರು ತಮ್ಮ ಮನೋಸ್ಥಿತಿಯ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕು“ ಎಂದರು.

    ”ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವ ಅಗತ್ಯತೆ ಎಲ್ಲಾ ಪಕ್ಷದವರಿಗೂ ಇದೆ. ಜನಪ್ರತಿನಿಧಿಗಳ ಜವಾಬ್ದಾರಿ ಇದೇ ಆಗಿದೆ. ಕಾನೂನಿನ ಅಲ್ಪ ಜ್ಞಾನವೂ ಇಲ್ಲದೆ ಮಾತಾಡುವುದು ಬಿಜೆಪಿ ನಾಯಕರಿಗೆ ಶೋಭೆ ತರುವುದಿಲ್ಲ. ಇನ್ನಾದರೂ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಯೋಚಿಸಬೇಕಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಈಗಾಗಲೇ ಉಪಮುಖ್ಯಮಂತ್ರಿ ಅವರು ಸರ್ವಪಕ್ಷಗಳ ನಾಯಕರ ಸಭೆ ಕರೆಯುವುದಾಗಿ ಹೇಳಿದ್ದಾರೆ. ಹೀಗಿರುವಾಗ ಹಿಂದೂ ಯುವಕರ ಸಾವಿನಲ್ಲಿ ರಾಜಕೀಯ ಮಾಡುವುದನ್ನು ಬಿಡಲಿ“ ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಮಿಥುನ್ ರೈ, ಇನಾಯತ್ ಅಲಿ, ಹರೀಶ್ ಕುಮಾರ್, ಶಾಲೆಟ್ ಪಿಂಟೋ, ಜಿ ಎ ಬಾವ, ಲಾರೆನ್ಸ್ ಡಿಸೋಜ, ಸುಹಾನ್ ಆಳ್ವ, ಪದ್ಮರಾಜ್ ಆರ್., ಶಾಹುಲ್ ಹಮೀದ್, ವಿಕಾಸ್, ಶುಭೋದ್ ಆಳ್ವ, ಕೃಷ್ಣ ಶೆಟ್ಟಿ, ಬಶೀರ್ ಮತ್ತಿತರರು ಉಪಸ್ಥಿತರಿದ್ದರು.

  • ಬೆಳ್ತಂಗಡಿ: ಆಟವಾಡುವಾಗ ಹೃದಯಾಘಾತದಿಂದ 16 ವರ್ಷದ ಬಾಲಕ ಸಾವು

    ಬೆಳ್ತಂಗಡಿ, ಮೇ 5: ಧರ್ಮಸ್ಥಳದ ಜೋಡುಸ್ಥಾನದಲ್ಲಿ ಮೇ 4ರಂದು ಆಟವಾಡುವ ವೇಳೆ ಹೃದಯಾಘಾತಕ್ಕೊಳಗಾಗಿ 9ನೇ ತರಗತಿಯನ್ನು ಪೂರ್ಣಗೊಳಿಸಿ 10ನೇ ತರಗತಿಗೆ ಪ್ರವೇಶಿಸಲು ಸಿದ್ಧತೆ ನಡೆಸುತ್ತಿದ್ದ ವಿದ್ಯಾರ್ಥಿಯೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.

    ಮೃತ ಬಾಲಕನನ್ನು ಧರ್ಮಸ್ಥಳದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ಗೋವಿಂದ ಗೌಡರ ಪುತ್ರ ಪ್ರಥಮ್ (16) ಎಂದು ಗುರುತಿಸಲಾಗಿದೆ.

    ಮೇ 4ರ ಮಧ್ಯಾಹ್ನ, ಪ್ರಥಮ್ ತನ್ನ ಮನೆಯ ಸಮೀಪ ಆಟವಾಡುವಾಗ ಎದೆನೋವಿನ ಬಗ್ಗೆ ದೂರಿದ್ದಾನೆ. ಕೂಡಲೇ ಅವನನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆಯ ಪ್ರಯತ್ನಗಳ ಹೊರತಾಗಿಯೂ ಅವನನ್ನು ಉಳಿಸಲು ಸಾಧ್ಯವಾಗಲಿಲ್ಲ.

    ಈ ಘಟನೆಯ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಪುತ್ತೂರು: ಬಲವಂತವಾಗಿ ಅಂಗಡಿಗಳನ್ನು ಬಂದ್ ಮಾಡಿ ದೊಂಬಿ ನಡೆಸಿ ನಿಷೇಧಾಜ್ಞೆ ಉಲ್ಲಂಘನೆ – 30 ಮಂದಿ ವಿರುದ್ಧ ಪ್ರಕರಣ ದಾಖಲು

    ಪುತ್ತೂರು: ಮೇ.1ರಂದು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕಿನಾದ್ಯಂತ ಮೇ 2 ರಿಂದ 5ರ ತನಕ ಜಿಲ್ಲಾಧಿಕಾರಿಯವರು ನಿಷೇದಾಜ್ಞೆ ಜಾರಿ ಮಾಡಿದ್ದರು.

    ಆದರೆ ಮೇ 2ರಂದು ಪುತ್ತೂರು ಗಾಂಧಿಕಟ್ಟೆ ಜಂಕ್ಷನ್ ಬಳಿಯಲ್ಲಿ ಸುಮಾರು 20 ರಿಂದ 30 ಜನ ಅಕ್ರಮ ಕೂಟ ಸೇರಿಕೊಂಡು ಬಸ್ ನಿಲ್ದಾಣದ ಬಳಿಯಲ್ಲಿರುವ ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿರುವಾಗ ಪುತ್ತೂರು ನಗರ ಪೊಲೀಸರು ಸ್ಥಳಕ್ಕೆ ತೆರಳಿ ನಿಷೇದಾಜ್ಞೆ ಜಾರಿಯಲ್ಲಿರುವ ಕುರಿತು ಸೂಚನೆ ನೀಡಿದರೂ ಸೂಚನೆಗಳನ್ನು ಉಲ್ಲಂಘಿಸಿ, ಅಕ್ರಮ ಕೂಟ ಸೇರಿದ 20 ರಿಂದ 30 ಜನ ಸಮಾನ ಉದ್ದೇಶದಿಂದ ದೊಂಬಿ ನಡೆಸುವ ಮೂಲಕ ನಿಷೇದಾಜ್ಞೆ ಉಲ್ಲಂಘಿಸಿದ್ದಾರೆ. ಈ ಕುರಿತು ದೊಂಬಿ ನಡೆಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

  • ಬೆಳ್ತಂಗಡಿ : ಕೋಮು ಸೌಹಾರ್ದತೆ ಕದಡುವ ಪ್ರಚೋದನಕಾರಿ ವೀಡಿಯೊ ಅಪ್‌ಲೋಡ್ – ಯುವಕನ ವಿರುದ್ಧ ಪ್ರಕರಣ ದಾಖಲು

    ಬೆಳ್ತಂಗಡಿ: ಬೆಳ್ತಂಗಡಿ ಬಳಿಯ ತಣ್ಣೀರುಪಂಥದ ಯುವಕನೊಬ್ಬ ಕೋಮು ಸೌಹಾರ್ದತೆಯನ್ನು ಕದಡುವ ಉದ್ದೇಶದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಚೋದನಕಾರಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾನೆ.

    ಬೆಳ್ತಂಗಡಿ ನಿವಾಸಿ ಧನುಷ್ ಎಂದು ಗುರುತಿಸಲಾದ ಆರೋಪಿಯು ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುವ ಮತ್ತು ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ವಿಷಯವನ್ನು ಪ್ರಸಾರ ಮಾಡಿದ್ದಾನೆ ಎಂದು ಹೇಳಲಾಗುತ್ತದೆ. ಇದರ ನಂತರ, ಮೇ 4 ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.

    ಭಾರತೀಯ ನ್ಯಾಯ ಸಂಹಿತ (ಬಿಎನ್‌ಎಸ್) – 2023 ರ ಸೆಕ್ಷನ್ 196(1)(ಎ) ಮತ್ತು 353(1)(ಸಿ) ಅಡಿಯಲ್ಲಿ ಎಫ್‌ಐಆರ್ ಸಂಖ್ಯೆ 30/2025 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಸಾಮಾಜಿಕ ಮಾಧ್ಯಮ ವೇದಿಕೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳುಮಾಡುವ ಪ್ರಚೋದನಕಾರಿ ವಿಷಯವಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಾಥಮಿಕ ತನಿಖೆಗಳು ವೀಡಿಯೊವನ್ನು ದುರುದ್ದೇಶಪೂರಿತ ಉದ್ದೇಶದಿಂದ ರಚಿಸಲಾಗಿದೆ ಮತ್ತು ಪೋಸ್ಟ್ ಮಾಡಲಾಗಿದೆ ಎಂದು ಸೂಚಿಸುತ್ತವೆ.

    ಈ ವಿಷಯದ ಬಗ್ಗೆ ಅಧಿಕಾರಿಗಳು ವಿವರವಾದ ತನಿಖೆಯನ್ನು ಪ್ರಾರಂಭಿಸಿದ್ದಾರೆ.ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎನ್ನಲಾಗಿದೆ.

  • ಮಂಗಳೂರು: ಕಾರು-ಆಟೋರಿಕ್ಷಾ ಡಿಕ್ಕಿ-ಪ್ರಯಾಣಿಕರಿಗೆ ಗಂಭೀರ ಗಾಯ

    ಮಂಗಳೂರು: ಕೊಣಾಜೆ ಸಮೀಪದ ಕಂಬ್ಲಪದವು ಬಳಿ ಮೇ 4 ರ ಭಾನುವಾರ ಬೆಳಿಗ್ಗೆ ಕಾರು ಮತ್ತು ಆಟೋರಿಕ್ಷಾ ಅಪಘಾತಕ್ಕೀಡಾಗಿವೆ.ಡಿಕ್ಕಿಯಲ್ಲಿ ಕಾರಿನ ಮುಂಭಾಗ ಮತ್ತು ಆಟೋರಿಕ್ಷಾ ತೀವ್ರವಾಗಿ ಹಾನಿಗೊಳಗಾಗಿವೆ.ಆಟೋರಿಕ್ಷಾದಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಗಾಯಾಳುಗಳ ಗುರುತು ಸೇರಿದಂತೆ ಹೆಚ್ಚಿನ ವಿವರಗಳು ಇನ್ನೂ ತಿಳಿದುಬಂದಿಲ್ಲ.

  • ಮಂಗಳೂರು : ಕಾವೂರು ಹಲ್ಲೆ ಪ್ರಕರಣ – ನಾಲ್ವರ ಬಂಧನ

    ಮಂಗಳೂರು:  ಕಾವೂರು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಮೇಲೆ ಭಾರತೀಯ ನೀತಿ ಸಂಹಿತೆ ಪ್ರಕಾರ 189(2), 191(2), 115(2), 118(1), 352, 351(2) ಆರ್/ಡಬ್ಲ್ಯೂ ಸೆಕ್ಷನ್ 190ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

    ಬಂಧಿತ ಆರೋಪಿಗಳನ್ನು ಬಜ್ಪೆಯ ಲಿಖಿತ್(29), ಕುತ್ತಾರ್‌ನ ರಾಕೇಶ್(34),ಸುರತ್ಕಲ್‌ನ ಧನರಾಜ್ ಅಲಿಯಾಸ್ ಧನು, ಮೂಡುಬಿದಿರೆಯ ಪ್ರಶಾಂತ್ ಶೆಟ್ಟಿ (26) ಎಂದು ಗುರುತಿಸಲಾಗಿದೆ.

    ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

  • ಮಂಗಳೂರು : ಬಸ್‌ಗೆ ಕಲ್ಲು ತೂರಾಟ ಪ್ರಕರಣ – ನಾಲ್ವರ ಬಂಧನ

    ಮಂಗಳೂರು: ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಕೃತ್ಯ ಖಂಡಿಸಿ ವಿಶ್ವಹಿಂದೂ ಪರಿಷತ್ ನೀಡಿದ್ದ ದ.ಕ. ಜಿಲ್ಲಾ ಬಂದ್ ಸಂದರ್ಭ ನಗರದ ಪಂಪ್‌ವೆಲ್ ಬಳಿ ಬಸ್‌ಗೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ನಾಲ್ಕು ಮಂದಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಗಳು ಕೃತ್ಯಕ್ಕೆ ಬಳಸಲಾದ ಎರಡು ಸ್ಕೂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಅತ್ತಾವರ ನಿವಾಸಿಗಳಾದ ಬಾಲಚಂದ್ರ (31), ಅಕ್ಷಯ್ (21), ಜಪ್ಪಿನಮೊಗರು ನಿವಾಸಿ ಶಬೀನ್ ಪಡಿಕ್ಕಲ್ (38), ಮಂಜನಾಡಿ ನಿವಾಸಿ ರಾಕೇಶ್ ಎಂ.(26) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

    ಮೇ 2ರಂದು ಬೆಳಗ್ಗೆ 6:50ರಿಂದ ಬೆಳಿಗ್ಗೆ 7ರ ಮಧ್ಯೆ ಪಂಪ್‌ವೆಲ್ ಬಳಿ 5 ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ಎಸೆದು ಪರಾರಿಯಾಗಿದ್ದರು. ಇದರಿಂದ ಬಸ್‌ಗಳ ಮುಂಭಾಗ ಹಾನಿಯಾಗಿತ್ತು. ಬಸ್‌ನ ಚಾಲಕ ಸತೀಶ್ ನಾಯಕ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿದ್ದರು.