Category: Mangalore

  • ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರು ಯುವಕರ ಬಂಧನ

    ಮಂಗಳೂರು, ಜುಲೈ 21, 2025: ಇನ್‌ಸ್ಟಾಗ್ರಾಮ್ ಮೂಲಕ ಸ್ನೇಹ ಬೆಳೆಸಿಕೊಂಡಿದ್ದ ಅಪ್ರಾಪ್ತ ಬಾಲಕಿಯನ್ನು ಆಮಿಷವೊಡ್ಡಿ, ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮುಲ್ಕಿ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

    ಆರೋಪಿಗಳನ್ನು ಉಡುಪಿಯ ಬಡಗುಬೆಟ್ಟುವಿನ ಬಸ್ ಕಂಡಕ್ಟರ್ ದೀಪಕ್ (19) ಮತ್ತು ಆತನ ಸ್ನೇಹಿತ ಅತ್ರಾಡಿಯ ಪರ್ಕಳದ ಭಟ್ರಿಪಾಲ್ಕೆ ನಿವಾಸಿ ನವೀನ್ ಶೆಟ್ಟಿ (21) ಎಂದು ಗುರುತಿಸಲಾಗಿದೆ.

    ಪೊಲೀಸರ ಪ್ರಕಾರ, ಆರೋಪಿಗಳು ಜುಲೈ 19 ರಂದು ಬಪ್ಪನಾಡು ಬಳಿಯಿಂದ ಬಾಲಕಿಯನ್ನು ಸ್ಕೂಟರ್‌ನಲ್ಲಿ ಅಪಹರಿಸಿ ಉಡುಪಿಗೆ ಕರೆದೊಯ್ದು, ಅಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ.

    ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

  • ಅಂಕೋಲಾ: ಭೀಕರ ಬಸ್ ಅಪಘಾತ: ಹಳ್ಳಕ್ಕೆ ಬಿದ್ದ ಬಸ್, ಓರ್ವ ಸಾವು

    ಅಂಕೋಲ, ಜುಲೈ 21, 2025:  ಇಂದು ಬೆಳಗಿನ ಜಾವ ಸುಮಾರು 3 ಗಂಟೆಗೆ ಅಂಕೋಲಾ ತಾಲೂಕಿನ ಅಗಸೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ.

    ಬೆಳಗಾವಿಯಿಂದ ಯಲ್ಲಾಪುರ-ಅಂಕೋಲಾ ಮಾರ್ಗವಾಗಿ ಮಂಗಳೂರು ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್, ಚಾಲಕನ ನಿಯಂತ್ರಣ ತಪ್ಪಿ, ಕಿರು ಸೇತುವೆಗೆ ಡಿಕ್ಕಿ ಹೊಡೆದು ಪಕ್ಕದಲ್ಲೇ ಇದ್ದ ಹಳ್ಳಕ್ಕೆ ಬಿದ್ದಿದೆ.

    ಈ ದುರ್ಘಟನೆಯಲ್ಲಿ 18 ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಐವರು ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಮತ್ತು ಮಂಗಳೂರಿನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

    ಈ ಅಪಘಾತದಲ್ಲಿ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    ಅಪಘಾತ ಸಂಭವಿಸುತ್ತಿದ್ದಂತೆ, ದಿನಪತ್ರಿಕೆ ಸಾಗಾಟ ಮಾಡುವ ಚಾಲಕ ಸೈಯದ್ ಜಾಕಿರ್ ಇನಾಮ್‌ದಾರ, ಆಂಬ್ಯುಲೆನ್ಸ್ ವಾಹನಗಳು ಹಾಗೂ ಸ್ಥಳೀಯರು ಮತ್ತು ದಾರಿಹೋಕರು ತಕ್ಷಣವೇ ನೆರವಿಗೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.

    ಚಾಲಕನ ನಿರ್ಲಕ್ಷ್ಯ ಮತ್ತು ಅತಿ ವೇಗವೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಅನೇಕ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಹಳ್ಳಕ್ಕೆ ಬಿದ್ದರೂ ಬಹುತೇಕ ಪ್ರಯಾಣಿಕರು ಅಪಾಯದಿಂದ ಪಾರಾಗಿರುವುದು ನೆಮ್ಮದಿಯ ಸಂಗತಿಯಾಗಿದೆ. ಘಟನೆ ಕುರಿತು ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.

  • ಅತ್ಯಾಚಾರ ಆರೋಪ: ಕಾವೂರು ಠಾಣೆಯ ಕಾನ್ ಸ್ಟೇಬಲ್ ಸಹಿತ ಇಬ್ಬರ ಬಂಧನ

    ಮಂಗಳೂರು, ಜುಲೈ 16, 2025: ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸ್ ಸಿಬ್ಬಂದಿಯೊಬ್ಬರನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಕಾವೂರು ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಚಂದ್ರ ನಾಯಕ್ ಬಂಧಿತ ಆರೋಪಿ. ಈತನಿಗೆ ಸಹಕರಿಸಿದ ಆರೋಪದಲ್ಲಿ ಸಂತ್ರಸ್ತೆಯ ಪತಿಯನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

    ಅತ್ಯಾಚಾರದ ಬಗ್ಗೆ ಕಾನ್ ಸ್ಟೇಬಲ್ ಚಂದ್ರ ನಾಯಕ್ ವಿರುದ್ಧ ಮಹಿಳೆಯೊಬ್ಬರು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ದೂರು ನೀಡಿದ್ದರು. ಅದರಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಇದೀಗ ಆರೋಪಿಗಳಾದ ಕಾನ್ ಸ್ಟೇಬಲ್ ಚಂದ್ರ ನಾಯಕ್ ಮತ್ತು ಸಂತ್ರಸ್ತೆಯ ಪತಿಯನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.

  • ಧರ್ಮಸ್ಥಳ: ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ನಾಪತ್ತೆ ಪ್ರಕರಣ- ಹೆತ್ತವರಿಂದ ದೂರು

    ಮಂಗಳೂರು, ಜು.16: ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ನಾಪತ್ತೆ ಪ್ರಕರಣದ ಬಗ್ಗೆ ಅವರ ಹೆತ್ತವರು ದೂರು ನೀಡಿದ್ದಾರೆ. ದೂರಿನ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ತಿಳಿಸಿದ್ದಾರೆ.

    2003ನೇ ಇಸವಿಯಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಅನನ್ಯ ಭಟ್ ಕಣ್ಮರೆಯಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸುವಂತೆ ಯುವತಿಯ ತಾಯಿ ಜು. 15 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆಗಮಿಸಿ ದೂರು ನೀಡಿದ್ದಾರೆ. ಈ ದೂರಿನ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.

    ಅಸ್ಥಿ ಸಿಕ್ಕಿದರೆ ಸಂಪ್ರದಾಯ ಪ್ರಕಾರ ಅಂತ್ಯ ಸಂಸ್ಕಾರ: ಸಾಯುವುದಕ್ಕಿಂತ ಮೊದಲು ಮಗಳ ಮೃತದೇಹದ ಅಸ್ಥಿ ಏನಾದರೂ ದೊರೆತರೆ, ಸನಾತನ ಹಿಂದೂ ಧರ್ಮದ ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆ ನಡೆಸುವ ಆಲೋಚನೆಯಲ್ಲಿ ಹೊರಟಿರುವೆನು. ನನಗೆ ಈಗ ಬೇರೆ ಏನು ಉಳಿದಿಲ್ಲ. ಮಗಳು ನಾಪತ್ತೆ ಪ್ರಕರಣದಲ್ಲಿ ನ್ಯಾಯ ದೊರಕಬೇಕು ಎಂದು ತಾಯಿ ಸುಜಾತ ಭಟ್ ತಿಳಿಸಿದ್ದಾರೆ.

    ಅನನ್ಯಾ ನಾಪತ್ತೆ ಪ್ರಕರಣದ ಬಗ್ಗೆ ದೂರು ನೀಡುವ ಕಾರಣಕ್ಕಾಗಿ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿದ್ದೇವೆ. ಅವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಸುಜಾತ ಭಟ್ ಪರ ವಕೀಲರಾದ ಮಂಜುನಾಥ್ ಎನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

  • ವಿದ್ಯಾರ್ಥಿನಿ ಮೇಲೆ ರೇಪ್‌,ಬ್ಲ್ಯಾಕ್‌ಮೇಲ್‌ – ಮೂಡುಬಿದಿರೆ ಕಾಲೇಜಿನ ಇಬ್ಬರು ಉಪನ್ಯಾಸಕರು, ಸ್ನೇಹಿತ ಅರೆಸ್ಟ್‌

    ಬೆಂಗಳೂರು,ಜುಲೈ 15, 2025: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಬಿದಿರೆಯ ಪ್ರತಿಷ್ಠಿತ ಕಾಲೇಜಿನ ಇಬ್ಬರು ಉಪನ್ಯಾಸಕರು ಮತ್ತು ಅವರ ಸ್ನೇಹಿತನನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಕಾಲೇಜಿನ ಹಳೆ ವಿದ್ಯಾರ್ಥಿನಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ದೂರಿನ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಿದ ಪೊಲೀಸರು ಉಪನ್ಯಾಸಕರಾದ ನರೇಂದ್ರ, ಸಂದೀಪ್ ಮತ್ತು ಸ್ನೇಹಿತ ಅನೂಪ್‌ನನ್ನು ಬಂಧಿಸಿದ್ದಾರೆ.

    ಏನಿದು ಕೇಸ್‌?

    ಮೊದಲು ವಿದ್ಯಾರ್ಥಿನಿಗೆ ನೋಟ್ಸ್ ನೀಡುವ ವಿಚಾರದಲ್ಲಿ ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ ಪರಿಚಯವಾಗಿದ್ದ. ಹಂತ ಹಂತವಾಗಿ ಚಾಟ್ ಮಾಡಿ ನೋಟ್ಸ್ ನೀಡುವುದಾಗಿ ಮತ್ತು ಸಹಾಯ ಮಾಡುವುದಾಗಿ ಹೇಳಿದ್ದ. ವಿದ್ಯಾರ್ಥಿನಿ ಬೆಂಗಳೂರಿಗೆ ಬಂದ ನಂತರವೂ ಸಲುಗೆ ಬೆಳೆಸಿದ್ದ. ಇದೆ ನೆಪದಲ್ಲಿ ವಿದ್ಯಾರ್ಥಿನಿಯನ್ನು ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿರುವ ಗೆಳೆಯನ ರೂಮ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ರೇಪ್‌ ಮಾಡಿದ ಬಳಿಕ ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ.

    ಸ್ನೇಹಿತ ನರೇಂದ್ರ ಈ ಕೃತ್ಯ ಎಸಗಿದ್ದ ವಿಚಾರ ತಿಳಿದು ಜೀವಶಾಸ್ತ್ರ ಉಪನ್ಯಾಸಕ ಸಂದೀಪ್‌ ವಿದ್ಯಾರ್ಥಿನಿಯನ್ನು ಸಂಪರ್ಕಿಸಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ವಿರೋಧ ವ್ಯಕ್ತಪಡಿಸಿದ್ದಾಳೆ. ಈ ಸಂದರ್ಭದಲ್ಲಿ ಸಂದೀಪ್‌, ನರೇಂದ್ರ ಜೊತೆಗೆ ಇರುವ ಫೋಟೋ, ವಿಡಿಯೋ ತನ್ನ ಬಳಿ ಇದೆ ಎಂದು ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ್ದಾನೆ.

    ಸಂದೀಪ್‌ ಕರೆದುಕೊಂಡು ಹೋಗಿ ಅನೂಪ್‌ ರೂಮಿನಲ್ಲಿ ಅತ್ಯಾಚಾರ ಎಸಗಿದ್ದ. ನಂತರ ಅನೂಪ್‌ ಆಕೆಯನ್ನು ಸಂರ್ಪಕಿಸಿ ನೀನು ನನ್ನ ರೂಮಿಗೆ ಬಂದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೇ ನನ್ನ ರೂಮ್​​ನಲ್ಲಿ ಸಿಸಿಟಿವಿ ಇದೆ ಎಂದು ಬೆದರಿಕೆ ಹಾಕಿದ್ದ. ನಂತರ ಅನೂಪ್‌ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.

    ಉಪನ್ಯಾಸಕ ಸ್ನೇಹಿತರ ಕಿರುಕುಳ ತಾಳಲಾರದೇ ಆರಂಭದಲ್ಲಿ ಸುಮ್ಮನಿದ್ದ ವಿದ್ಯಾರ್ಥಿನಿ ಸಮಸ್ಯೆ ಹೆಚ್ಚಾದ ಬಳಿಕ ನಡೆದ ನಡೆದ ಘಟನೆಗಳನ್ನು ಬೆಂಗಳೂರಿಗೆ ಬಂದಿದ್ದ ಪೋಷಕರ ಬಳಿ ತಿಳಿಸಿದ್ದಾಳೆ. ಪೋಷಕರು ಆಕೆಯನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಹಿಳಾ ಆಯೋಗದಲ್ಲಿ ಕೌನ್ಸಿಲಿಂಗ್‌ ಮಾಡಿದ ಬಳಿಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

    ಮೂಡಬಿದಿರೆಯಲ್ಲಿ ಓದು ಮುಗಿಸಿದ್ದ ವಿದ್ಯಾರ್ಥಿನಿ ಈಗ ರಾಮನಗರದಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದಾಳೆ. ಉಪನ್ಯಾಸಕರು ಇನ್‌ಸ್ಟಾ ಮೂಲಕ ಆಕೆಯನ್ನು ಸಂಪರ್ಕಿಸಿ ಚಾಟ್‌ ಮಾಡುತ್ತಿದ್ದರು.

  • ಕೇಂದ್ರ ಸರ್ಕಾರದಿಂದ ಮಂಗಳೂರಿಗೆ 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳ ಮಂಜೂರು : ಸಂಸದ ಕ್ಯಾ. ಬ್ರಿಜೇಶ್‌ ಚೌಟ

    ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ಮಂಗಳೂರಿಗೆ ಒಟ್ಟು 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳನ್ನು ಮಂಜೂರು ಮಾಡಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ  ಇಂದು ತಿಳಿಸಿದ್ದಾರೆ.

    ಮುಡಿಪು ಕಂಬಳಪದವಿನಲ್ಲಿ ನಿರ್ಮಾಣಗೊಂಡ ವಿದ್ಯುನ್ಮಾನ ವಾಹನ ಚಾಲನಾ ಪರೀಕ್ಷಾ ಪಥಗಳ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು , ದೇಶದಲ್ಲಿ ವಾಹನಗಳಿಂದಾಗುವ ವಾಯುಮಾಲಿನ್ಯ ತಡೆಗಟ್ಟುವುದಕ್ಕೆ ಕೇಂದ್ರ ಸರ್ಕಾರವು ದೇಶದೆಲ್ಲೆಡೆ ಎಲೆಕ್ಟ್ರಿಕ್‌ ಬಸ್‌ಗಳ ಬಳಕೆಯನ್ನು ಹೆಚ್ಚು ಜನಪ್ರಿಯಗೊಳಿಸುತ್ತಿದೆ. ಅದರಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ ಕರ್ನಾಟಕಕ್ಕೆ ಒಟ್ಟು 750 ಎಲೆಕ್ಟ್ರಿಕಲ್‌ ಬಸ್‌ಗಳು ಮಂಜೂರಾಗಿದ್ದು, ಆ ಪೈಕಿ ಮಂಗಳೂರು ನಗರಕ್ಕೆ 100 ಬಸ್‌ಗಳನ್ನು ಮಂಜೂರುಗೊಳಿಸಲಾಗಿದೆ. 

    ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರ್ಗಿ, ಮೈಸೂರು, ಶಿವಮೊಗ್ಗ ಸೇರಿದಂತೆ ಒಟ್ಟು 10 ನಗರಗಳಿಗೆ ತಲಾ 100 ಎಲೆಕ್ಟ್ರಿಕಲ್‌ ಬಸ್‌ಗಳನ್ನು ಮಂಜೂರು ಮಾಡಲಾಗಿದೆ. ಪರಿಸರ ಸ್ನೇಹಿಯಾದ ಈ ಬಸ್‌ಗಳು ಶೀಘ್ರದಲ್ಲೇ ಮಂಗಳೂರು ನಗರದ ವಿವಿಧ ರೂಟ್‌ಗಳಲ್ಲಿ ರಸ್ತೆಗಿಳಿಯಲಿದೆ ಎಂದು ಕ್ಯಾ. ಚೌಟ ಹೇಳಿದ್ದಾರೆ.

    ವಿದ್ಯುತ್‌ ಚಾಲಿತ ಈ ಎಲೆಕ್ಟ್ರಿಕ್‌ ಬಸ್‌ಗಳಿಗೆ ಸೂಕ್ತ ಚಾರ್ಜಿಂಗ್‌ ಸ್ಟೇಷನ್‌, ಬಸ್‌ ಡಿಪೋಗಳು ಹಾಗೂ ವಾಹನಗಳ ನಿರ್ವಹಣಾ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯದ ಅಗತ್ಯವಿದೆ. ಹೀಗಿರುವಾಗ, ಕೆಎಸ್‌ಆರ್‌ಟಿಸಿ ಕೂಡಲೇ ಈ 100 ಎಲೆಕ್ಟ್ರಿಕಲ್‌ ಬಸ್‌ಗಳ ನಿರ್ವಹಣೆಗೆ ಮಂಗಳೂರಿನಲ್ಲಿ ಸೂಕ್ತ ಜಾಗ ಕೂಡ ಗುರುತಿಸಬೇಕಿದೆ. 

    ಇತ್ತೀಚೆಗೆ ನಡೆದಿರುವ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿಯೂ ಈ ಬಗ್ಗೆ ಪ್ರಸ್ತಾಪಿಸಿದ್ದು, ಮಂಗಳೂರಿನಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ನಿರ್ವಹಣೆಗೆ ಜಾಗ ಸೇರಿದಂತೆ ಸೂಕ್ತ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೂ ಸೂಚಿಸಿದ್ದೇನೆ. ಅಲ್ಲದೇ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಇಲಾಖೆಯು ಹೆಚ್ಚಿನ ಮುತುವರ್ಜಿ ವಹಿಸಿ ಅಗತ್ಯ ಮೂಲಸೌಕರ್ಯ ಒದಗಿಸುವಲ್ಲಿ ಸೂಕ್ತ ಕ್ರಮ ಜರುಗಿಸಬೇಕೆಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ , ಸಚಿವ ರಾಮಲಿಂಗಾ ರೆಡ್ಡಿ ಅವರಿಗೂ  ಇದೇ ಸಂದರ್ಭದಲ್ಲಿ ಕ್ಯಾ. ಚೌಟ ಅವರು ಮನವಿ ಮಾಡಿದ್ದು, ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.

    ಕೇಂದ್ರ ಸರ್ಕಾರಕ್ಕೆ ಧನ್ಯವಾದ ಮಂಗಳೂರಿಗೆ ಕೇಂದ್ರ ಸರ್ಕಾರವು 100 ಬಸ್‌ಗಳನ್ನು ಮಂಜೂರು ಮಾಡಿರುವುದಕ್ಕೆ ಕ್ಯಾ. ಚೌಟ ಅವರು ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯದ ಸಚಿವರಾದ ಮನೋಹರ್‌ ಲಾಲ್‌ ಖಟ್ಟರ್‌, ಇಲಾಖೆ ಅಧಿಕಾರಿಗಳು ಹಾಗೂ ಪರಿಸರ ಸ್ನೇಹಿ ಬಸ್‌ಗಳ ಸಂಚಾರಕ್ಕೆ ಒತ್ತು ನೀಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೂ ಕ್ಯಾ. ಚೌಟ ಅವರು ಜಿಲ್ಲೆಯ ಜನರ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

  • ಬಾಲಕಿಗೆ ಲೈಂಗಿಕ ಕಿರುಕುಳ- ಚಪಲಚೆನ್ನಿಗ ಉದ್ಯಮಿಯ ಬಂಧನ

    ಮಂಗಳೂರು, ಜುಲೈ 12, 2025: ಕಿನ್ನಿಗೋಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕಿನ್ನಿಗೋಳಿಯ ಪಿಂಟೋ ಗಾರ್ಡನ್ ಮಾಲೀಕ ಉದ್ಯಮಿ ರಾಕೀ ಪಿಂಟೋ (68) ಎಂಬಾತನ ಮೇಲೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಮನೆ ಕೆಲಸ ಮಾಡಿಕೊಂಡಿದ್ದ ಬಾಲಕಿಯ ತಾಯಿ ಈ ಬಗ್ಗೆ ದೂರು ನೀಡಿದ್ದು, ಬಾಲಕಿಯನ್ನು ಶಾಲೆಗೆ ಬಿಡುವ ನೆಪದಲ್ಲಿ ಕಾರಿ‌ನಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸೆಗಿದ್ದಾರೆ ಎಂದು ತಾಯಿ ದೂರು ನೀಡಿದ ಹಿನ್ನಲೆಯಲ್ಲಿ ಈ ಪ್ರಕರಣ ದಾಖಲಾಗಿದೆ.

    ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಂತೆ ಕಾರಿನ ಸಹಿತ ರಾಕಿ ಪಿಂಟೋ ಅವರನ್ನು ಬಂಧಿಸಲಾಗಿದ್ದು, ಬಂಧನದ ಸಮಯದಲ್ಲಿ ರಕ್ತದೊತ್ತಡ ಹೆಚ್ಚಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ವಾರ ಇದೇ ಬಾಲಕಿಯ ಮೇಲೆ ಪಕ್ಷಿಕೆರೆಯ ಅಪ್ರಾಪ್ತ ಅತ್ಯಾಚಾರದ ಅರೋಪದಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ ಐದು ಮಂದಿಯನ್ನು ಬಂಧಿಸಿ ಜೈಲು ಸೇರಿದ ಘಟನೆಯ ಬೆನ್ನಿಗೆ ಇದೀಗ ಬಾಲಕಿಯ ತಾಯಿ ತನ್ನ ಮಗಳ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ದೂರು ನೀಡಿದ್ದು ಮೂಲ್ಕಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಬಂಟ್ವಾಳ: ಅಬ್ದುಲ್ ರೆಹಮಾನ್ ಕೊಲೆ ಪ್ರಕರಣ – ಹತ್ತನೇ ಆರೋಪಿಯನ್ನು ವಶಕ್ಕೆ

    ಬಂಟ್ವಾಳ, ಜುಲೈ 12, 2025: ಕೊಲತ್ತಮಜಲಿನ ಅಬ್ದುಲ್ ರೆಹಮಾನ್ ಕೊಲೆ ಮತ್ತು ಕಲಂದರ್ ಶಾಫಿಯ ಮೇಲಿನ ದಾಳಿಗೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮೀಣ ಪೊಲೀಸರು ಮತ್ತೊಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

    ಈ ವರ್ಷದ ಮೇ 27 ರಂದು ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕ್ರೈಂ ಸಂಖ್ಯೆ 54/2025 ರಡಿ ದಾಖಲಾದ ಪ್ರಕರಣದಲ್ಲಿ, ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 191(1), 191(2), 191(3), 118(1), 118(2), 109, 103 ಜೊತೆಗೆ 190 ರಡಿ ಒಟ್ಟು ಒಂಬತ್ತು ಜನ ಆರೋಪಿಗಳನ್ನು ಈಗಾಗಲೇ ವಶಕ್ಕೆ ತೆಗೆದುಕೊಳ್ಳಲಾಗಿತ್ತು.

    ತನಿಖೆ ಮುಂದುವರೆದಂತೆ, ಶನಿವಾರ, ಜುಲೈ 12 ರಂದು ಬಂಟ್ವಾಳದ ಪುಡು ಗ್ರಾಮದ ನಿವಾಸಿ ಪ್ರದೀಪ್ (34) ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ಸದ್ಯ ವಿಚಾರಣೆಗೆ ಒಳಪಡಿಸಲಾಗಿದೆ.

    ತನಿಖೆಯು ಇನ್ನೂ ನಡೆಯುತ್ತಿದ್ದು, ಕಾನೂನು ಪ್ರಕ್ರಿಯೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ದೃಢಪಡಿಸಿದ್ದಾರೆ.

  • ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಯೂಟ್ಯೂಬರ್‌ ವಿರುದ್ಧ ಎಫ್‌ಐಆರ್; ಎಸ್‌ಐಟಿ ರಚನೆಗೆ ಒತ್ತಾಯದ ಮೇಲೆ ತನಿಖೆ

    ಬೆಳ್ತಂಗಡಿ, ಜುಲೈ 12, 2025: ಧರ್ಮಸ್ಥಳ ಪೊಲೀಸ್ ಪ್ರಕರಣದಲ್ಲಿ (ಕ್ರೈಂ ಸಂಖ್ಯೆ 35/2025) ನಾಟಕೀಯ ಬೆಳವಣಿಗೆಯಾಗಿ, ಜುಲೈ 11 ರಂದು ಎರಡು ಪ್ರತ್ಯೇಕ ತನಿಖೆಗಳಿಗೆ ಚಾಲನೆ ನೀಡುವಂತೆ ಹೊಸ ಪ್ರಕರಣವನ್ನು ದಾಖಲಿಸಲಾಗಿದೆ. ಒಂದು ತನಿಖೆಯು ಸುದ್ದಿಗೋಷ್ಠಿಯಲ್ಲಿ ನಡೆಸಿದ ಸಾರ್ವಜನಿಕರನ್ನು ದಾರಿತಪ್ಪಿಸುವ ಹೇಳಿಕೆಗಳನ್ನು ಕೇಂದ್ರೀಕರಿಸಿದ್ದರೆ, ಇನ್ನೊಂದು ತನಿಖೆಯು ಎಐ ತಂತ್ರಜ್ಞಾನದಿಂದ ರಚಿತವಾದ ಸುಳ್ಳು ವಿಡಿಯೋವನ್ನು ಹರಡಿ ಸಾರ್ವಜನಿಕ ಭಾವನೆಗಳನ್ನು ಕೆರಳಿಸಿದ ಆರೋಪದ ಮೇಲೆ ಯೂಟ್ಯೂಬರ್ ವಿರುದ್ಧವಾಗಿದೆ.

    ವಕೀಲರ ಸುದ್ದಿಗೋಷ್ಠಿಯ ಹೇಳಿಕೆಗಳ ಮೇಲೆ ಪ್ರಶ್ನೆ

    ಮೊದಲ ತನಿಖೆಯು ದೂರುದಾರ ಮತ್ತು ಪ್ರಮುಖ ಸಾಕ್ಷಿಯನ್ನು ಪ್ರತಿನಿಧಿಸುವ ವಕೀಲರ ಮೇಲೆ ಕೇಂದ್ರೀಕೃತವಾಗಿದೆ. ಈ ವಕೀಲರು ಜುಲೈ 11 ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಅವರ ಹಲವಾರು ಹೇಳಿಕೆಗಳು ಸತ್ಯಾಂಶಕ್ಕೆ ವಿರುದ್ಧವಾಗಿದ್ದು, ಸಾರ್ವಜನಿಕರನ್ನು ದಾರಿತಪ್ಪಿಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದ್ದು, ಇವು ಕಾನೂನು ಪ್ರಕ್ರಿಯೆಗೆ ಧಕ್ಕೆ ತಂದಿರಬಹುದೇ ಎಂದು ತನಿಖೆ ನಡೆಸಲಾಗುತ್ತಿದೆ.

    ಎಸ್‌ಐಟಿ ರಚನೆಗೆ ಒತ್ತಾಯದ ಮೇಲೆ ಗಮನ

    ಎರಡನೇ ತನಿಖೆಯು ಕೆಲವು ಗುಂಪುಗಳಿಂದ—ಸಾರ್ವಜನಿಕ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿಕೊಂಡಿರುವವರು—ಪ್ರಸ್ತುತ ತನಿಖಾಧಿಕಾರಿಯನ್ನು ತೆಗೆದುಹಾಕಲು ಅಥವಾ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಗೆ ಮಾಡಿರುವ ಒತ್ತಾಯದ ಮೇಲೆ ಕೇಂದ್ರೀಕೃತವಾಗಿದೆ. ಈ ಒತ್ತಾಯಗಳು ದೂರುದಾರರ ಕಾನೂನು ತಂಡದ ಜ್ಞಾನ ಅಥವಾ ಬೆಂಬಲದೊಂದಿಗೆ ಮಾಡಲ್ಪಟ್ಟಿವೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ವಿಷಯದಲ್ಲಿ ದೂರುದಾರರ ಅಧಿಕೃತ ನಿಲುವು ಏನು ಎಂಬುದನ್ನೂ ತಿಳಿಯಲಾಗುತ್ತಿದೆ. ಈ ವಿಷಯದಲ್ಲಿ ಸ್ಪಷ್ಟತೆಯನ್ನು ಸ್ಥಾಪಿಸುವುದು ತನಿಖೆಯ ಪಾರದರ್ಶಕತೆಯನ್ನು ಕಾಪಾಡಲು ಮತ್ತು ಬಾಹ್ಯ ಪ್ರಭಾವವನ್ನು ತಡೆಯಲು ನಿರ್ಣಾಯಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಎಐ-ರಚಿತ ಸುಳ್ಳು ವಿಡಿಯೋಗಾಗಿ ಯೂಟ್ಯೂಬರ್‌ಗೆ ಎಫ್‌ಐಆರ್

    ಸಮಾನಾಂತರವಾಗಿ ಮತ್ತು ಗಂಭೀರ ಬೆಳವಣಿಗೆಯಾಗಿ, ಸಮೀರ್ ಎಂ.ಡಿ. ಎಂಬ ಯೂಟ್ಯೂಬರ್‌ನ ವಿರುದ್ಧ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐ ತಂತ್ರಜ್ಞಾನದಿಂದ ರಚಿತವಾದ ಸುಳ್ಳು ವಿಡಿಯೋವನ್ನು ರಚಿಸಿ ಪ್ರಕಟಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆತನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾದ ಈ ವಿಡಿಯೋವು ಕಾಲ್ಪನಿಕ ಆರೋಪಗಳನ್ನು ಮತ್ತು ದೂರುದಾರ ಹಾಗೂ ಪ್ರಕರಣದ ವಿಕೃತ ಚಿತ್ರಣವನ್ನು ಒಳಗೊಂಡಿದ್ದು, ನ್ಯಾಯಾಲಯ ಅಥವಾ ಪೊಲೀಸ್ ದಾಖಲೆಗಳಲ್ಲಿ ಹಂಚಿಕೊಂಡಿರುವ ವಿಷಯವನ್ನು ಮೀರಿದೆ ಎಂದು ಅಧಿಕಾರಿಗಳು ಭಾವಿಸಿದ್ದಾರೆ. ಈ ವಿಡಿಯೋವನ್ನು ಸಾರ್ವಜನಿಕರನ್ನು ದಾರಿತಪ್ಪಿಸಲು ಮತ್ತು ಗಲಭೆಯನ್ನು ಉಂಟುಮಾಡಲು ಉದ್ದೇಶಪೂರ್ವಕವಾಗಿ ರಚಿಸಲಾಗಿದೆ ಎಂದು ಭಾವಿಸಲಾಗಿದೆ.

    ಈ ಕಾರಣದಿಂದ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕ್ರೈಂ ಸಂಖ್ಯೆ 42/2025 ರಡಿ ಹೊಸ ಎಫ್‌ಐಆರ್ ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023 ರ ಕೆಳಗಿನ ಕಲಂಗಳನ್ನು ಉಲ್ಲೇಖಿಸಲಾಗಿದೆ:

    • ಕಲಂ 192: ಸುಳ್ಳು ಸಾಕ್ಷ್ಯ ಅಥವಾ ಮಾಹಿತಿ
    • ಕಲಂ 240: ಸಾರ್ವಜನಿಕ ಅಶಾಂತಿಯನ್ನು ಉಂಟುಮಾಡಬಹುದಾದ ಕೃತ್ಯಗಳು
    • ಕಲಂ 353(1)(ಬಿ): ಕಾನೂನುಬದ್ಧ ಅಧಿಕಾರ ಅಥವಾ ಪ್ರಕ್ರಿಯೆಗೆ ಅಡ್ಡಿಪಡಿಸುವಿಕೆ

    ತಪ್ಪು ಮಾಹಿತಿಯ ವಿರುದ್ಧ ಪೊಲೀಸರ ಎಚ್ಚರಿಕೆ

    ಪೊಲೀಸರು ಎರಡೂ ತನಿಖೆಗಳು ಸಕ್ರಿಯವಾಗಿ ನಡೆಯುತ್ತಿರುವುದನ್ನು ದೃಢಪಡಿಸಿದ್ದು, ಸಾಕ್ಷ್ಯಾಧಾರದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಜೊತೆಗೆ, ತಪ್ಪು ಅಥವಾ ಎಐ-ರಚಿತ ವಿಷಯವನ್ನು, ವಿಶೇಷವಾಗಿ ಸೂಕ್ಷ್ಮ ಕಾನೂನು ವಿಷಯಗಳಿಗೆ ಸಂಬಂಧಿಸಿದಂತೆ ರಚಿಸುವ ಮತ್ತು ಹರಡುವ ವಿರುದ್ಧ ಕಟ್ಟುನಿಟ್ಟಾದ ಎಚ್ಚರಿಕೆಯನ್ನು ನೀಡಿದ್ದಾರೆ.

    “ಡಿಜಿಟಲ್ ಉಪಕರಣಗಳಾದ ಎಐ ಬಳಸಿ ತಪ್ಪು ಮಾಹಿತಿಯನ್ನು ಹರಡಿ ಸಾರ್ವಜನಿಕ ಅಶಾಂತಿಯನ್ನು ಉಂಟುಮಾಡುವುದು ಗಂಭೀರ ಅಪರಾಧವಾಗಿದೆ. ಇದನ್ನು ನಾವು ತುರ್ತು ಮತ್ತು ಗಂಭೀರತೆಯಿಂದ ಪರಿಗಣಿಸುತ್ತಿದ್ದೇವೆ,” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

  • ಮಂಗಳೂರಿನಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಅರೆಸ್ಟ್

    ಮಂಗಳೂರು, ಜುಲೈ 12, 2025:  ಮಾದಕ ವಸ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದ ಮಾಹಿತಿ ಪ್ರಕಾರ ಡ್ರಗ್ಸ್ ಚೈನ್ ಲಿಂಕ್ ಹಿಂದೆ ಮಂಗಳೂರು ಪೊಲೀಸರು ಬಿದ್ದಿದ್ದು, ಇದೀಗ ಮಹಾರಾಷ್ಟ್ರ ಮತ್ತು ಮದ್ಯಪ್ರದೇಶದಿಂದ ಮಾದಕವಸ್ತುಗಳನ್ನು ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಯನ್ನು ಅರೆಸ್ಟ್ ಮಾಡಿದ್ದಾರೆ.

    ಬಂಧಿತನನ್ನು ಮೂಲತಃ ಬೀದರ್‌ನ ಪ್ರಸಕ್ತ ಕೋಡಿಪಾಳ್ಯ ನಿವಾಸಿ ಪ್ರಜ್ವಲ್ ಪೀಣ್ಯಾಸ್ ಎಂದು ಗುರುತಿಸಲಾಗಿದೆ. ಜುಲೈ 2 ರಂದು ಮಂಗಳೂರಿನಲ್ಲಿ ದಾಖಲಾಗಿದ್ದ ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದುವರಿದ ತನಿಖೆಯ ಭಾಗವಾಗಿ ಈ ಆರೋಪಿ ಅರೆಸ್ಟ್ ಆಗಿದ್ದಾನೆ.

    ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿಗೆ ಮಾದಕವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ 9 ಜನರನ್ನು ಅರೆಸ್ಟ್ ಮಾಡಲಾಗಿದೆ. ಇನ್ನು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯದಿಂದ ಮಾದಕ ವಸ್ತುವನ್ನು ಪಡೆದುಕೊಂಡು ಮಂಗಳೂರು ನಗರಕ್ಕೆ ಪೂರೈಕೆ ಮಾಡುತ್ತಿದ್ದವರ ಪೈಕಿ ಪ್ರಮುಖ ಆರೋಪಿ ಪ್ರಜ್ವಲ್ ಪೀಣ್ಯಾಸ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

    ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಅರೆಸ್ಟ್ ಆದ ಆರೋಪಿ ಈ ಹಿಂದೆ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿದ್ದು, ಆತನ ಮೇಲೆ ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ 03 ಮಾದಕ ವಸ್ತು ಮಾರಾಟ ಪ್ರಕರಣಗಳು ದಾಖಲಾಗಿರುತ್ತವೆ.