Category: Mangalore

  • ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಶ್ವ ಪರಿಸರ ದಿನಾಚರಣೆ: ಪ್ರಯಾಣಿಕರಿಗೆ ಉಡುಪಿ ಮಲ್ಲಿಗೆ ಗಿಡಗಳ ಉಡುಗೊರೆ

    ಮಂಗಳೂರು: ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಮಂಗಳೂರು ವಿಮಾನ ನಿಲ್ದಾಣವು ಆಗಮಿಸುವ ಪ್ರಯಾಣಿಕರಿಗೆ ಉಡುಪಿ ಮಲ್ಲಿಗೆ ಗಿಡಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಭಾಗಿಯಾಯಿತು.

    ಈ ಸಂಚಾರವು ವಿಮಾನ ನಿಲ್ದಾಣದ ಉಡುಪಿ ಮಲ್ಲಿಗೆಯ ಸಂಪ್ರದಾಯವನ್ನು ಮುಂದುವರೆಸಿದ್ದು, ಪ್ರಯಾಣಿಕರಿಗೆ ಸುಗಂಧವನ್ನು ಹೊಂದಿರುವ ಪರಿಸರ ಸಂರಕ್ಷಣೆಯ ಸಂಕೇತವನ್ನು ನೀಡಿತು.

  • ಪಾಣೆಮಂಗಳೂರು: ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ಅವರ ಮೃತದೇಹ ಪತ್ತೆ

    ಪುತ್ತೂರು: ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆರವರು ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಬೈಕ್ ಮೊಬೈಲ್ ಬಿಟ್ಟು ಹೋಗಿರುವ ಘಟನೆ ನಡೆದಿದ್ದು, ಮೃತದೇಹ ಪತ್ತೆಯಾಗಿದೆ.

    ಜೂ.5ರಂದು ಬೆಳಿಗ್ಗೆ ಸುಮಾರು 11 ಗಂಟೆಯಿಂದ ಬೈಕ್ ಹಾಗೂ ಸೊತ್ತುಗಳು ಪಾಣೆಮಂಗಳೂರು ಹಳೆ ಸೇತುವೆ ಕೆಳಭಾಗದಲ್ಲಿ ಅನಾಥವಾಗಿ ಕಂಡು ಬಂದಿದ್ದು, ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಪೊಲೀಸರು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದು, ಕಾರ್ಯಾಚರಣೆ ಬಳಿಕ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

    ರಮೇಶ್ ರೈ ಅವರು ಇತ್ತೀಚೆಗೆ ನಡೆದ ಪುತ್ತೂರು ನಗರಸಭೆಯ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನೆಲ್ಲಿಕಟ್ಟೆ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು.

    ಅವರು ಸುಳ್ಯದಲ್ಲಿ ಮಂಗಳ ಡ್ರೈವಿಂಗ್ ಸ್ಕೂಲ್ ನ ಮಾಲಕರಾಗಿದ್ದರು. ಸಜ್ಜನ ರಾಜಕಾರಣಿ ಎಂದೇ ಚಿರಪರಿಚಿತರಾಗಿದ್ದರು. ಆರೋಗ್ಯ ಸಮಸ್ಯೆ ಅಥವಾ ಹಣಕಾಸಿನ ಸಮಸ್ಯೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಲಾಗುತ್ತಿದೆ.

    ಪಾಣೆಮಂಗಳೂರು ಸೇತುವೆ ಬಳಿ ದೊರೆತ ಮೊಬೈಲ್‌ ನಿಂದ ಪೊಲೀಸರು ಕರೆ ಮಾಡಿದಾಗ, ಅದು ಪುತ್ತೂರಿನ ರಮೇಶ್ ರೈ ಅವರಿಗೆ ಸೇರಿದ್ದೆಂದು ತಿಳಿದುಬಂದಿತ್ತು. ಕೂಡಲೇ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಯಿತು. ಇದೀಗ ಕುಟುಂಬ ಸದಸ್ಯರು ಮೃತದೇಹವನ್ನು ಗುರುತಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

    ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಕುಟುಂಬ ವರ್ಗ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

  • ಕಡಬ: ಅರಣ್ಯ ಅಧಿಕಾರಿಗಳ ದಾಳಿ -ಅಕ್ರಮ ಮರ ದಿಮ್ಮಿಗಳು, ಲಾರಿ ಕ್ರೇನ್ ವಶಕ್ಕೆ

    ಕಡಬ, ಜೂನ್ 4, 2025: ಅರಣ್ಯ ಅಧಿಕಾರಿಗಳ ದಾಳಿ ನಡೆಸಿ ಅಕ್ರಮ ಮರ ದಿಮ್ಮಿಗಳು, ಲಾರಿ ಕ್ರೇನ್ ವಶಕ್ಕೆ ಪಡೆದ ಘಟನೆ ಕೋಡಿಂಬಾಳ ಗ್ರಾಮದ ಗಾಳಿಬೀಡು ಸಮೀಪ ನಡೆದಿದೆ.

    ಕೆ.ಎ.19ಎ.ಎ.7499 ನಂಬರಿನ ಅಶೋಕ್ ಲೇಲ್ಯಾಂಡ್ ಲಾರಿ, ಏಸ್ 11ಟನ್ ಮೊಬೈಲ್ ಕ್ರೇನ್, ಮಹಾಗಣಿ ಮರದ 7.508ಮೀಟರ್ ಉದ್ದದ 22 ದಿಮ್ಮಿಗಳು ಪ್ರಸ್ತುತ ವಶಕ್ಕೆ ಪಡೆಯಲಾಗಿದೆ. ಇನ್ನೂ ದಾಳಿ ಮುಂದುವರಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

  • ಮಂಗಳೂರು: ಟಿಂಟೆಡ್ ಗ್ಲಾಸ್‌ ಅಳವಡಿಸಿದ ಕಾರುಗಳ ವಿರುದ್ಧ ವಿಶೇಷ ಕಾರ್ಯಾಚರಣೆ

    ಮಂಗಳೂರು: ಅಪರಾಧ ತಡೆಗಟ್ಟುವ ಉದ್ದೇಶದಿಂದ ಹಾಗೂ ಮೋಟಾರು ವಾಹನ ಕಾಯ್ದೆಯ ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಯಲು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ದಿನಾಂಕ 02-08-2028 ಮತ್ತು 05-08-2028 ರಂದು ನಗರದ ಸಂಚಾರಿ ಪೊಲೀಸ್‌ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಯವರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಕಾರುಗಳ ಗಾಜುಗಳಲ್ಲಿ ಬ್ಲಾಕ್ ಫಿಲ್ಮ್ (ಸನ್ ಫಿಲ್ಮ್) ಅಥವಾ ಟಿಂಟೆಡ್ ಗ್ಲಾಸ್‌ ಅಳವಡಿಸಿ ಸಂಚರಿಸುವ ವಾಹನಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

    ಈ ಕಾರ್ಯಾಚರಣೆಯಲ್ಲಿ ಒಟ್ಟು 2,293 ಪ್ರಕರಣಗಳನ್ನು ದಾಖಲಿಸಲಾಗಿದ್ದು, ರೂ. 11,58,000/- ದಂಡವನ್ನು ವಿಧಿಸಲಾಗಿದೆ. ಅಲ್ಲದೆ, 22 ಕಾರುಗಳಿಗೆ ಅಳವಡಿಸಲಾಗಿದ್ದ ಟಿಂಟೆಡ್ ಗ್ಲಾಸ್‌ ಮತ್ತು ಬ್ಲಾಕ್ ಫಿಲ್ಮ್ ಸ್ಟಿಕರ್‌ಗಳನ್ನು ಚಾಲಕರಿಂದ ತೆಗೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಚಾಲಕರಿಗೆ ಈ ಕುರಿತು ತಿಳುವಳಿಕೆಯನ್ನೂ ನೀಡಲಾಗಿದೆ.

    ಇದೇ ರೀತಿಯಾಗಿ, ದಿನಾಂಕ 03-08-2028 ರಂದು ಪೊಲೀಸ್ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ, ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಕಾರು ಶೋರೂಮ್‌, ಆಕ್ಸೆಸರೀಸ್ ಶಾಪ್‌, ಗ್ಯಾರೇಜ್‌, ಮತ್ತು ಸ್ಟಿಕರ್ ಅಂಗಡಿಗಳ ಮಾಲೀಕರ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ, ಅಪರಾಧಿಗಳು ಟಿಂಟೆಡ್ ಗಾಜುಗಳಿರುವ ವಾಹನಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವುದರಿಂದ, ಗಿರಾಕಿಗಳ ವಾಹನಗಳಿಗೆ ಟಿಂಟೆಡ್ ಗಾಜುಗಳನ್ನು ಅಳವಡಿಸದಂತೆ ಸೂಚನೆ ನೀಡಲಾಗಿದೆ.

    ಈ ವಿಶೇಷ ಕಾರ್ಯಾಚರಣೆಯು ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

  • ಮಂಗಳೂರು: ಜಮಾತ್-ಎ-ಇಸ್ಲಾಮಿ ಹಿಂದ್‌ನ ಹಿರಿಯ ನಾಯಕ ಕೆ.ಎಂ. ಶರೀಫ್ ನಿಧನ

    ಮಂಗಳೂರು, ಜೂನ್ 03, 2025: ಜಮಾತ್-ಎ-ಇಸ್ಲಾಮಿ ಹಿಂದ್‌ನ ಹಿರಿಯ ನಾಯಕರಾದ ಮತ್ತು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಕೆ.ಎಂ. ಶರೀಫ್ (85) ಅವರು ತಮ್ಮ ಸಂಕ್ಷಿಪ್ತ ಅನಾರೋಗ್ಯದಿಂದಾಗಿ ಮಂಗಳವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

    ಶರೀಫ್ ಸಾಹೇಬ್ ಎಂದೇ ಜನಪ್ರಿಯರಾಗಿದ್ದ ಅವರು, ಜಮಾತ್-ಎ-ಇಸ್ಲಾಮಿ ಹಿಂದ್‌ನಿಂದ ಸ್ಥಾಪಿತವಾದ ಹಲವು ಪ್ರಮುಖ ಸಂಸ್ಥೆಗಳಲ್ಲಿ ಪ್ರವರ್ತಕರಾಗಿ ಕಾರ್ಯನಿರ್ವಹಿಸಿದ್ದರು. ಅವರು ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್‌ನ ಸಂಸ್ಥಾಪಕ ಸದಸ್ಯರಾಗಿದ್ದು, ನಂತರ ಅದರ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಈ ಟ್ರಸ್ಟ್ ಸನ್ಮಾರ್ಗ ವಾರಪತ್ರಿಕೆ ಮತ್ತು ಶಾಂತಿ ಪ್ರಕಾಶನವನ್ನು ನಡೆಸುತ್ತದೆ, ಇದು ಒಂದು ಪ್ರಸಿದ್ಧ ಪ್ರಕಾಶನ ಸಂಸ್ಥೆಯಾಗಿದೆ.

    ಅವರು ಶಾಂತಿ ಎಜುಕೇಶನಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು, ಬಬ್ಬುಕಟ್ಟೆಯ ಹಿರಾ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಶಿಕ್ಷಣದ ಮೂಲಕ ಸಬಲೀಕರಣವನ್ನು ಒತ್ತಾಯಿಸಿದ ಅವರು, ಹಾಸನದ ಮನ್ಸೂರ ಆರಬಿಕ್ ಕಾಲೇಜಿನ ಸಂಸ್ಥಾಪಕ ಸದಸ್ಯರಾಗಿದ್ದರು ಮತ್ತು ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಜಮಾತ್-ಎ-ಇಸ್ಲಾಮಿ ಹಿಂದ್‌ನ ಸಲಹಾ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದರು.

    ತಮ್ಮ ಸರಳತೆ, ವಿನಯ, ಮತ್ತು ಜಮಾತ್ ಹಾಗೂ ಸಾಮಾಜಿಕ-ಧಾರ್ಮಿಕ ಉಪಕ್ರಮಗಳಿಗೆ ಮೀಸಲಾದ ಸಮರ್ಪಣೆಗೆ ಹೆಸರಾಗಿದ್ದ ಕೆ.ಎಂ. ಶರೀಫ್, ಶಿಕ್ಷಣ ಮತ್ತು ಪ್ರಕಾಶನದ ಮೂಲಕ ಸಮುದಾಯದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು. ಅವರು ದಿವಂಗತ ಇಬ್ರಾಹಿಂ ಸಯೀದ್ ಅವರ ಹಿರಿಯ ಸಹೋದರರಾಗಿದ್ದರು, ಇವರು ಗಮನಾರ್ಹ ವಾಗ್ಮಿ, ಚಿಂತಕ ಮತ್ತು ಸನ್ಮಾರ್ಗ ವಾರಪತ್ರಿಕೆಯ ಸಂಸ್ಥಾಪಕ ಸಂಪಾದಕರಾಗಿದ್ದರು.

    ಅವರ ಹಿಂದೆ ಪತ್ನಿ, ಐದು ಗಂಡು ಮಕ್ಕಳು, ಒಬ್ಬ ಮಗಳು ಮತ್ತು ಅನೇಕ ಸಂಬಂಧಿಕರು ಹಾಗೂ ಗೌರವಿಗರಿಗೆ ಉಳಿದಿದ್ದಾರೆ.

    ಕುಟುಂಬದ ಮೂಲಗಳ ಪ್ರಕಾರ, ಜನಾಜಾ ಪ್ರಾರ್ಥನೆಯು ಬುಧವಾರ (ಜೂನ್ 04, 2025) ಬೆಳಿಗ್ಗೆ 10:00 ಗಂಟೆಗೆ ಮಂಗಳೂರಿನ ಬಂದರ್‌ನ ಜೀನತ್ ಬಕ್ಷ್ ಜುಮಾ ಮಸೀದಿಯಲ್ಲಿ ನಡೆಯಲಿದೆ.

  • ದಕ್ಷಿಣ ಕನ್ನಡ : ಭರತ್ ಕುಮ್ಡೇಲು, ಪುತ್ತಿಲ, ತಿಮರೋಡಿ ಸೇರಿ 36 ಮಂದಿ ಗಡಿಪಾರಿಗೆ ನಿರ್ಧಾರ!

    ದಕ್ಷಿಣ ಕನ್ನಡ, ಜೂನ್ 2, 2025: ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಗೊಂದಲದ ಘಟನೆಗಳ ಹಿನ್ನೆಲೆಯಲ್ಲಿ, ಜಿಲ್ಲೆಯಿಂದ 36 ಜನರ ಗಡಿಪಾರಿಗೆ ಪೊಲೀಸ್ ಇಲಾಖೆ ಆದೇಶ ಹೊರಡಿಸಲಾಗಿದೆ.

    • ಹಸೈನಾರ್- ಬಂಟ್ವಾಳ ನಗರ ಠಾಣೆ
    • ಪವನ್ ಕುಮಾರ್ -ಬಂಟ್ವಾಳ ಗ್ರಾಮಾಂತರ ಠಾಣೆ
    • ಚರಣ್ ರಾಜ್- ಬಂಟ್ವಾಳ ಗ್ರಾಮಾಂತರ
    • ಗಣೇಶ ಪೂಜಾರಿ- ವಿಟ್ಲ ಪೊಲೀಸ್ ಠಾಣೆ
    • ಅಬ್ದುಲ್ ಖಾದರ್- ವಿಟ್ಲ ಪೊಲೀಸ್ ಠಾಣೆ
    • ಚಂದ್ರಹಾಸ- ವಿಟ್ಲ ಪೊಲೀಸ್ ಠಾಣೆ
    • ಅಬ್ದುಲ್ ಲತೀಫ್- ಬಂಟ್ವಾಳ ಗ್ರಾಮಾಂತರ
    • ಮಹಮ್ಮದ್ ಅಶ್ರಫ್- ಬಂಟ್ವಾಳ ಗ್ರಾಮಾಂತರ
    • ಮೊಯ್ದಿನ್ ಅದ್ನಾನ್ – ಬಂಟ್ವಾಳ ಗ್ರಾಮಾಂತರ
    • ಭರತ್ ಕುಮ್ಡೇಲ್-ಬಂಟ್ವಾಳ ಗ್ರಾಮಾಂತರ
    • ಮಹಮ್ಮದ್ ಸಫ್ವಾನ್-ಬಂಟ್ವಾಳ ನಗರ
    • ಭುವಿತ್ ಶೆಟ್ಟಿ- ಬಂಟ್ವಾಳ ನಗರ
    • ರಾಜೇಶ್- ಬಂಟ್ವಾಳ ನಗರ
    • ಅಶ್ರಫ್ ಬಿ- ಪೂಂಜಾಲಕಟ್ಟೆ ಠಾಣೆ
    • ಮನೋಜ್ ಕುಮಾರ್- ಬೆಳ್ತಂಗಡಿ ಠಾಣೆ
    • ಮಹೇಶ ಶೆಟ್ಟಿ ತಿಮರೋಡಿ- ಬೆಳ್ತಂಗಡಿ ಠಾಣೆ
    • ಹಕೀಂ ಕೂರ್ನಡ್ಕ- ಪುತ್ತೂರು ನಗರ
    • ಅಜಿತ್ ರೈ- ಪುತ್ತೂರು ನಗರ

    ಇವರನ್ನು ಗಡಿಪಾರಿಗೆ ಆದೇಶಿಸಲಾಗಿದೆ.

    ಜೊತೆಗೆ

    • ಅರುಣ್ ಕುಮಾರ್ ಪುತ್ತಿಲ- ಪುತ್ತೂರು ನಗರ
    • ಮನೀಶ್ ಎಸ್- ಪುತ್ತೂರು ನಗರ
    • ಅಬ್ದುಲ್ ರಹಿಮಾನ್- ಪುತ್ತೂರು ನಗರ
    • ಕೆ. ಅಝೀಜ್- ಪುತ್ತೂರು ನಗರ
    • ಕಿಶೋರ್- ಪುತ್ತೂರು ಗ್ರಾಮಾಂತರ
    • ರಾಕೇಶ್ ಕೆ- ಪುತ್ತೂರು ಗ್ರಾಮಾಂತರ
    • ನಿಶಾಂತ್ ಕುಮಾರ್- ಪುತ್ತೂರು ಗ್ರಾಮಾಂತರ
    • ಮಹಮ್ಮದ್ ನವಾಝ್- ಕಡಬ ಠಾಣೆ
    • ಸಂತೋಷ್ ಕುಮಾರ್ ರೈ- ಉಪ್ಪಿನಂಗಡಿ ಠಾಣೆ
    • ಜಯರಾಮ- ಉಪ್ಪಿನಂಗಡಿ ಠಾಣೆ
    • ಸಂಶುದ್ದೀನ್- ಉಪ್ಪಿನಂಗಡಿ ಠಾಣೆ
    • ಸಂದೀಪ್- ಉಪ್ಪಿನಂಗಡಿ ಠಾಣೆ
    • ಮಹಮ್ಮದ್ ಶಾಕಿರ್- ಉಪ್ಪಿನಂಗಡಿ ಠಾಣೆ
    • ಅಬ್ದುಲ್ ಅಝೀಝ್ -ಉಪ್ಪಿನಂಗಡಿ ಠಾಣೆ
    • ಲತೇಶ್ ಗುಂಡ್ಯ- ಸುಳ್ಯ ಠಾಣೆ
    • ಮನೋಹರ- ಸುಳ್ಯ ಠಾಣೆ
    • ಪ್ರಸಾದ್- ಬೆಳ್ಳಾರೆ ಠಾಣೆ
    • ಶಮೀರ್ ಕೆ- ಬೆಳ್ಳಾರೆ ಠಾಣೆ

    ಮುಂತಾದವರ ಗಡಿಪಾರು ಮಾಡುವ ಸಲುವಾಗಿ ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

  • ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲಾ ಮುಖಂಡ ರತ್ನಾಕರ್‌ ಅಮೀನ್‌ ಬಂಧನ

    ಹಿಂದೂ ಜಾಗರಣ ವೇದಿಕೆ ಜಿಲ್ಲಾ ಮುಖಂಡ, ಎಪಿಎಂಸಿ ಮಾಜಿ ಅಧ್ಯಕ್ಷ ರತ್ನಾಕರ ಅಮೀನ್‌ ಅವರನ್ನು ಜೂ. 2ರಂದು ಅಜೆಕಾರು ಪೊಲೀಸರು ಬಂಧನ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷದ ಪೋಸ್ಟರ್‌ ಅನ್ನು ಹಂಚಿಕೊಂಡಿರುವ ಆರೋಪದ ಹಿನ್ನೆಲೆ ಅಜೆಕಾರು ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಸೋಮವಾರ ಮುಂಜಾನೆ ಬಂಧಿಸಿದ್ದಾರೆ.

  • ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಗಡಿಪಾರು ನೋಟಿಸ್‌; ವಿಚಾರಣೆಗೆ ಹಾಜರಾಗಲು ಸೂಚನೆ

    ಪುತ್ತೂರು, ಜೂ.02,2025: ಪುತ್ತೂರಿನ ಬಿಜೆಪಿ ಮುಖಂಡ ಅರುಣ್‌ ಕುಮಾರ್‌ ಪುತ್ತಿಲರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಯ ಶಹಬಾದ್‌ ಪೊಲೀಸ್‌ ಠಾಣಾ ವ್ಯಾಪ್ತಿಗೆ ಗಡಿಪಾರು ಆದೇಶ ಹೊರಡಿಸುವ ಕುರಿತು ಕಂದಾಯ ಇಲಾಖೆ ಸಹಾಯಕ ಆಯುಕ್ತರು ಜೂ. 6 ರಂದು ವಿಚಾರಣೆಯನ್ನು ನಿಗದಿ ಮಾಡಿದ್ದಾರೆ. ಅಲ್ಲದೇ ಈ ವಿಚಾರಣೆಗೆ ಅರುಣ್ ಕುಮಾ‌ರ್ ಪುತ್ತಿಲ ಅವರು ತಪ್ಪದೇ ಹಾಜರಾಗಲು ಸೂಚನೆ ನೀಡಲಾಗಿದೆ.

    ಸ್ವತಃ ಅಥವಾ ನ್ಯಾಯವಾದಿಯವರ ಮೂಲಕ ವಿಚಾರಣೆಗೆ ಹಾಜರಾಗಿ ವಾದಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಒಂದು ವೇಳೆ ಅರುಣ್ ಕುಮಾರ್ ಪುತ್ತಿಲ ಅವರು ವಿಚಾರಣೆಗೆ ಹಾಜರಾಗದಿದ್ದರೆ ಈ ಪ್ರಕರಣದಲ್ಲಿ ಅವರಿಗೆ ಆಸಕ್ತಿ ಇಲ್ಲವೆಂದು ಭಾವಿಸಿ, ಲಭ್ಯವಿರರುವ ಮಾಹಿತಿಯ ಆಧಾರದಲ್ಲಿ ಏಕಪಕ್ರಿಯವಾಗಿ ತೀರ್ಮಾನ ಮಾಡಲಾಗುವುದು ಎಂದು ಕಂದಾಯ ಇಲಾಖೆಯ ಸಹಾಯಕ ಆಯುಕ್ತರು ತಿಳಿಸಿದ್ದಾರೆ.

  • ಬಂಟ್ವಾಳ: ಪ್ರಚೋದನಕಾರಿ ಭಾಷಣ: ಪ್ರಭಾಕರ ಭಟ್ ವಿರುದ್ದ ಪ್ರಕರಣ ದಾಖಲು

    ಬಂಟ್ವಾಳ, ಜೂ.02,2025: ಬಜ್ಜೆಯಲ್ಲಿ ಹತ್ಯೆಯಾದ ಸುಹಾಸ್ ಶೆಟ್ಟಿಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ  ಭಾಷಣ ಮಾಡಿದ್ದಾರೆ ಎಂದು ಆರೋಪಿ ಆ‌ರ್.ಎಸ್.ಎಸ್. ಮುಖಂಡ ಡಾ.ಪ್ರಭಾಕರ ಭಟ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

    ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಪಡೂರು ಗ್ರಾಮದ ಮದ್ವ ಪ್ಯಾಲೇಸ್ ಕಲ್ಯಾಣ ಮಂಟಪದ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಜನರನ್ನುದ್ದೇಶಿಸಿ ಭಾಷಣ ಮಾಡುವ ವೇಳೆ, ಸಮಾಜದ ಸ್ವಾಸ್ತ್ರ ಕೆಡುವಂತೆ, ಮತಿಯ ಗುಂಪುಗಳ ನಡುವೆ ವೈಮನಸ್ಸುಂಟು ಮಾಡುವಂತೆ, ಪ್ರಚೋದನಾತ್ಮಕವಾಗಿ ಹೇಳಿಕೆಯನ್ನು ನೀಡಿರುತ್ತಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿರುವುದರಿಂದ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಕೆನರಾ ಬ್ಯಾಂಕ್‌ನಿಂದ ಗ್ರಾಹಕರಿಗೆ ದೊಡ್ಡ ರಿಲೀಫ್: ಎಲ್ಲಾ ಉಳಿತಾಯ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ ಶುಲ್ಕ ಮನ್ನಾ

    ಮಂಗಳೂರು, ಜೂನ್ 01, 2025: ಕೆನರಾ ಬ್ಯಾಂಕ್ ತನ್ನ ಎಲ್ಲಾ ಉಳಿತಾಯ ಖಾತೆಗಳಿಗೆ (ಸೇವಿಂಗ್ಸ್ ಖಾತೆ, ವೇತನ ಖಾತೆ, ಎನ್‌ಆರ್‌ಐ ಖಾತೆಗಳು ಸೇರಿದಂತೆ) ಕನಿಷ್ಠ ಸರಾಸರಿ ಮಾಸಿಕ ಶಿಲ್ಕು (AMB) ನಿಯಮವನ್ನು ರದ್ದುಗೊಳಿಸಿದೆ. ಈ ಹೊಸ ನೀತಿಯು ಜೂನ್ 1, 2025 ರಿಂದ ಜಾರಿಗೆ ಬಂದಿದ್ದು, ಇದರಿಂದ ಗ್ರಾಹಕರಿಗೆ ಕನಿಷ್ಠ ಶಿಲ್ಕು ಕಾಯ್ದುಕೊಳ್ಳದಿದ್ದರೂ ಯಾವುದೇ ದಂಡ ಶುಲ್ಕ ವಿಧಿಸಲಾಗುವುದಿಲ್ಲ.

    ಈ ನಿರ್ಧಾರವು ವೇತನದಾರರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಎನ್‌ಆರ್‌ಐಗಳು ಮತ್ತು ಮೊದಲ ಬಾರಿಗೆ ಬ್ಯಾಂಕಿಂಗ್ ಸೇವೆಯನ್ನು ಬಳಸುವವರಿಗೆ ಸೇರಿದಂತೆ ಕೋಟ್ಯಂತರ ಗ್ರಾಹಕರಿಗೆ ಲಾಭವನ್ನು ಒದಗಿಸಲಿದೆ. ಈ ಕ್ರಮದೊಂದಿಗೆ, ಕೆನರಾ ಬ್ಯಾಂಕ್ ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಮೊದಲಿಗರಾಗಿ ಎಲ್ಲಾ ಉಳಿತಾಯ ಖಾತೆಗಳಿಗೆ ನಿಜವಾದ ಶೂನ್ಯ ಶಿಲ್ಕು ಸೌಲಭ್ಯವನ್ನು ನೀಡಿದೆ.

    ಈ ಹಿಂದೆ, ಕೆನರಾ ಬ್ಯಾಂಕ್ ಗ್ರಾಹಕರು ತಮ್ಮ ಖಾತೆಯ ಪ್ರಕಾರ ಕನಿಷ್ಠ ಸರಾಸರಿ ಮಾಸಿಕ ಶಿಲ್ಕನ್ನು ಕಾಯ್ದಿರಿಸಬೇಕಾಗಿತ್ತು. ನಗರ ಮತ್ತು ಮಹಾನಗರ ಶಾಖೆಗಳಲ್ಲಿ ₹2,000, ಅರೆ-ನಗರ ಶಾಖೆಗಳಲ್ಲಿ ₹1,000 ಮತ್ತು ಗ್ರಾಮೀಣ ಶಾಖೆಗಳಲ್ಲಿ ₹500 ಕನಿಷ್ಠ ಶಿಲ್ಕು ಕಾಯ್ದಿರಿಸುವುದು ಕಡ್ಡಾಯವಾಗಿತ್ತು. ಈ ಶಿಲ್ಕನ್ನು ಕಾಯ್ದಿರಿಸದಿದ್ದರೆ ದಂಡ ಶುಲ್ಕವನ್ನು ವಿಧಿಸಲಾಗುತ್ತಿತ್ತು. ಆದರೆ, ಈಗಿನಿಂದ ಗ್ರಾಹಕರು ತಮ್ಮ ಖಾತೆಯಲ್ಲಿ ಶೂನ್ಯ ಶಿಲ್ಕನ್ನು ಕಾಯ್ದಿರಿಸಿದರೂ ಯಾವುದೇ ಶುಲ್ಕವಿಲ್ಲದೇ ತಮ್ಮ ಖಾತೆಯನ್ನು ಸ್ವತಂತ್ರವಾಗಿ ಬಳಸಬಹುದು.

    “ಜೂನ್ 1, 2025 ರಿಂದ, ಕೆನರಾ ಬ್ಯಾಂಕ್‌ನ ಯಾವುದೇ ಉಳಿತಾಯ ಖಾತೆದಾರರಿಗೆ ಕನಿಷ್ಠ ಶಿಲ್ಕು ಕಾಯ್ದಿರಿಸದಿದ್ದರೂ ದಂಡ ವಿಧಿಸಲಾಗುವುದಿಲ್ಲ. ಇದು ಎಲ್ಲಾ ಗ್ರಾಹಕರಿಗೆ ನಿಜವಾದ ಶೂನ್ಯ ಶಿಲ್ಕು ಉಳಿತಾಯ ಖಾತೆಯನ್ನು ಒದಗಿಸುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ,” ಎಂದು ಬ್ಯಾಂಕ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

    ಕೆನರಾ ಬ್ಯಾಂಕ್, 1906 ರಲ್ಲಿ ಸ್ಥಾಪಿತವಾದ ಈ ಬ್ಯಾಂಕ್, ದೇಶಾದ್ಯಂತ 9,849 ಶಾಖೆಗಳನ್ನು ಹೊಂದಿದ್ದು, ಲಂಡನ್, ನ್ಯೂಯಾರ್ಕ್, ದುಬೈ ಮತ್ತು ಐಬಿಯು ಗಿಫ್ಟ್ ಸಿಟಿಯಲ್ಲಿ ವಿದೇಶಿ ಶಾಖೆಗಳನ್ನು ಹೊಂದಿದೆ. ಈ ನಿರ್ಧಾರವು ಗ್ರಾಹಕರಿಗೆ ಹೆಚ್ಚಿನ ಸೌಲಭ್ಯವನ್ನು ಒದಗಿಸುವ ಜೊತೆಗೆ ಬ್ಯಾಂಕಿಂಗ್ ಸೇವೆಗಳನ್ನು ಇನ್ನಷ್ಟು ಸರಳಗೊಳಿಸಲಿದೆ.