Category: Mangalore

  • ಮಂಗಳೂರು: ಸೂರತ್ಕಲ್‌ ಬಳಿ ಚಲಿಸುತ್ತಿದ್ದ ಕಾರಿಗೆ ಬೆಂಕಿ; ಮಹಿಳಾ ಚಾಲಕಿ ಸುರಕ್ಷಿತ

    ಮಂಗಳೂರು, ಮೇ 28, 2025: ಸುರತ್ಕಲ್ ಫ್ಲೈಓವರ್ ಬಳಿ ಚಲಿಸುತ್ತಿದ್ದ ಕಾರೊಂದು ಬುಧವಾರ ಸಂಜೆ ಬೆಂಕಿಗೆ ಆಹುತಿಯಾಗಿದ್ದು, ವಾಹನ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

    ಕಾರನ್ನು ಚಲಾಯಿಸುತ್ತಿದ್ದ ಮಹಿಳಾ ಚಾಲಕಿ ಬೆಂಕಿ ಆರಂಭವಾದಾಗಲೇ ಗಮನಿಸಿ, ಸುರಕ್ಷಿತವಾಗಿ ಹೊರಬಂದಿದ್ದಾರೆ. ಬೆಂಕಿ ಹರಡುವ ಮೊದಲೇ ಆಕೆಯು ವಾಹನದಿಂದ ಇತರ ಸಾಮಾನುಗಳನ್ನು ಹೊರಗೆ ತೆಗೆದುಕೊಂಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಹೇಳಲಾಗಿದೆ.

    ಸುರತ್ಕಲ್ ಪೊಲೀಸರಿಂದ ತುರ್ತು ಕರೆ ಬಂದ ನಂತರ, HPCL ಮತ್ತು ರಾಜ್ಯ ಅಗ್ನಿಶಾಮಕ ಇಲಾಖೆಯ ಎರಡೂ ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

  • ಮಂಗಳೂರು: ಲೋಕಾಯುಕ್ತ ಬಲೆಗೆ ಗಣಿ ಇಲಾಖೆ ಅಧಿಕಾರಿ, ಸಿಬ್ಬಂದಿ – 50,000 ಲಂಚ ಸ್ವೀಕಾರ

    ಮಂಗಳೂರು, ಮೇ 28, 2025: ಮಂಗಳೂರಿನ ಕರ್ನಾಟಕ ಲೋಕಾಯುಕ್ತ ಪೊಲೀಸರು ಮಂಗಳವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರೊಬ್ಬರನ್ನು ತಮ್ಮ ಚಾಲಕ ಮೂಲಕ ರೂ. 50,000 ಲಂಚ ಸ್ವೀಕರಿಸುವಾಗ ಸೆರೆಹಿಡಿದಿದ್ದಾರೆ. ಇದು ಭೂಮಿ ಮಟ್ಟಗೊಳಿಸುವುದು ಮತ್ತು ಕಲ್ಲು ತೆಗೆಯುವ ಸಂಬಂಧಿತ ಫೈಲ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಡೆದಿದೆ.

    ಕರ್ನಾಟಕ ಲೋಕಾಯುಕ್ತ, ದಕ್ಷಿಣ ಕನ್ನಡ ಜಿಲ್ಲೆಯ ಪತ್ರಿಕಾ ಪ್ರಕಟಣೆಯ ಪ್ರಕಾರ, ದೂರವಾದಿಯು 2024ರ ಒಕ್ಟೋಬರ್ 28ರಂದು ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಉಳ್ಳಾಲ ತಾಲೂಕಿನ ಇರಾ ಗ್ರಾಮದ ಸರ್ವೆ ನಂ. 279/5ರಲ್ಲಿ 0.35 ಎಕರೆ ಭೂಮಿಯನ್ನು ಮಟ್ಟಗೊಳಿಸಲು ಮತ್ತು ಕಟ್ಟಡ ಕಲ್ಲುಗಳನ್ನು ತೆಗೆಯಲು ಅನುಮತಿ ಕೋರಲಾಗಿತ್ತು. ಈ ಅರ್ಜಿ ಭೂಮಿಗೆ ಜಿಪಿಎ ಹೊಂದಿರುವ ಒಬ್ಬ ಸ್ನೇಹಿತರ ಪರವಾಗಿ ಸಲ್ಲಿಸಲಾಗಿತ್ತು.

    ಉಳ್ಳಾಲ ತಹಸೀಲ್ದಾರ್ 2025ರ ಮಾರ್ಚ್ 21ರಂದು ಸ್ಥಳದಲ್ಲಿ ಕಲ್ಲು ತೆಗೆಯಲು ಮತ್ತು ಮಟ್ಟಗೊಳಿಸಲು ಪ್ರಮಾಣಪತ್ರ ಅಥವಾ ಅನುಮತಿ ನೀಡಬಹುದು ಎಂದು ವರದಿ ನೀಡಿದ್ದರೂ, ಗಣಿ ಇಲಾಖೆಯಿಂದ ಇದುವರೆಗೆ ಅನುಮತಿ ನೀಡಿಲ್ಲ. ದೂರವಾದಿಯು ಫಾಲೋ ಅಪ್‌ಗಾಗಿ ಕಚೇರಿಗೆ ಭೇಟಿ ನೀಡಿದಾಗ, ಉಪನಿರ್ದೇಶಕ ಕೃಷ್ಣವೇಣಿ ಫೈಲ್‌ ಸಹಿ ಮಾಡಲು ರೂ. 50,000 ಒತ್ತಾಯಿಸಿದರು.

    ದೂರ್ವಾದಿಯ ದೂರಿನ ಆಧಾರದಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ಕೃಷ್ಣವೇಣಿ ಮತ್ತು ಪ್ರದೀಪ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಮೇ 28ರಂದು ಲೋಕಾಯುಕ್ತ ಪೊಲೀಸರು ಕೃಷ್ಣವೇಣಿಯವರನ್ನು ಚಾಲಕ ಮಧು ಮೂಲಕ ಲಂಚ ಸ್ವೀಕರಿಸುವಾಗ ಸೆರೆಹಿಡಿದರು. ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

    ಈ ಕಾರ್ಯಾಚರಣೆಯನ್ನು ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗದ ಎಸ್‌ಪಿ (ಚಾರ್ಜ್‌) ಕುಮಾರಚಂದ್ರ ಗೈಡಾನ್ಸ್‌ನಲ್ಲಿ ನಡೆಸಲಾಯಿತು. ಮಂಗಳೂರು ಲೋಕಾಯುಕ್ತ ಪೊಲೀಸ್‌ ಠಾಣೆಯ ಡಿವೈಎಸ್‌ಪಿ ಡಾ. ಗಣಪ ಕುಮಾರ್‌ ಮುಂದಾಳತ್ವದಲ್ಲಿ, ಇನ್ಸ್‌ಪೆಕ್ಟರ್‌ಗಳಾದ ಸುರೇಶ್‌ ಕುಮಾರ್‌ ಪಿ, ಭಾರತಿ ಜಿ, ಚಂದ್ರಶೇಖರ್‌ ಕೆ ಎನ್‌ (ಮಂಗಳೂರು) ಮತ್ತು ಮಂಜುನಾಥ್‌, ರಜೇಂದ್ರ ನಾಯಕ್‌ (ಉಡುಪಿ) ತಂಡ ಭಾಗವಹಿಸಿತು.

    ಗಣಿ ಇಲಾಕೆ ಉಪನಿರ್ದೇಶಕ ಕೃಷ್ಣವೇಣಿಯವರ ಹಿನ್ನೆಲೆ

    ಮಂಗಳೂರಿಗೆ ನೇಮಕವಾದ ನಂತರ ಗಣಿ ಇಲಾಖೆಯ ಉಪ ನಿರ್ದೇಶಕಿ ಕೃಷ್ಣವೇಣಿ ವಿವಾದಗಳಲ್ಲಿ ಸಿಲುಕಿದ್ದಾರೆ. ಭೂ ಮಾಫಿಯಾವನ್ನು ಬೆಂಬಲಿಸುವ ಅವರ ಹೇಳಿಕೆಗಳು ಜಿಲ್ಲೆಯಲ್ಲಿ ವಿವಾದಕ್ಕೆ ಕಾರಣವಾಗಿವೆ. ಇಲಾಖೆಯಲ್ಲಿನ ಅವ್ಯವಸ್ಥೆಯ ಬಗ್ಗೆ ಜಿಲ್ಲಾ ಸಚಿವ ಗುಂಡಾರಾವ್ ಎಚ್ಚರಿಕೆ ನೀಡಿದ್ದರು.

  • ಕೊಳತ್ತಮಜಲು ಮಸೀದಿಯ ಆವರಣದಲ್ಲಿ ಅಬ್ದುಲ್ ರಹ್ಮಾನ್‌ರ ಅಂತ್ಯಕ್ರಿಯೆ

    ಮಂಗಳೂರು, 28 ಮೇ,2025: ಮಂಗಳವಾರ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಬ್ದುಲ್ ರಹ್ಮಾನ್ ಅವರ ಅಂತಿಮ ಸಂಸ್ಕಾರವು ಬುಧವಾರ ಕುರಿಯಾಳ ಗ್ರಾಮದ ಇರಾಕೋಡಿಯ ಮಸೀದಿ ಆವರಣದಲ್ಲಿ ನೆರವೇರಿತು.

    ನೂರಾರು ಜನರು ಸೇರಿ ಅಂತಿಮ ದರ್ಶನ ಪಡೆದರು. ಕುತ್ತಾರ್ ಮದನಿ ನಗರದ ಮಸೀದಿಯಲ್ಲಿ ಪ್ರಾರಂಭಿಕ ವಿಧಿಗಳು ಮುಗಿದ ಬಳಿಕ, ಮೃತದೇಹವನ್ನು ಅವರ ಮನೆಗೆ ತೆಗೆದುಕೊಂಡು ಹೋಗಲಾಯಿತು. ಈ ವೇಳೆ ಮನೆಯವರ ಕಣ್ಣೀರಿನ ಆಕ್ರಂದನ ಮನಕಲಕಿತು. ತದನಂತರ ಅಬ್ದುಲ್ ರಹ್ಮಾನ್ ಅವರ ತಂದೆ, ತಾಯಿ, ಸಹೋದರಿ, ಪತ್ನಿ ಮತ್ತು ಸಂಬಂಧಿಕರೊಂದಿಗೆ ಸಾವಿರಾರು ಜನರು ಅಂತಿಮ ದರ್ಶನ ಮಾಡಿದರು.

  • ಉಡುಪಿ: ಕಾರು ಅಫಘಾತ ಫೋಟೊಗ್ರಾಫರ್ ಸಾವು

    ಉಡುಪಿ, ಮೇ 28, 2025: ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕೋಡಿಕಲ್ ಕ್ರಾಸ್ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತೋಡಿಗೆ ಮಗುಚಿ ಬಿದ್ದ ಘಟನೆಯಲ್ಲಿ ಫೋಟೋಗ್ರಾಫರ್ ಸೂರ್ಯ ನಾರಾಯಣ (48) ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ನಡೆದಿದೆ.

    ಸೂರ್ಯ ನಾರಾಯಣ ಅವರು ಪಣಂಬೂರು ಬಳಿಯ ನಂದೀಕೇಶ್ವರ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದ ಫೋಟೋಗ್ರಾಫಿಗಾಗಿ ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಆದರೆ, ಕೋಡಿಕಲ್ ಕ್ರಾಸ್ ಬಳಿ ಕಾರಿನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತೋಡಿಗೆ ಬಿದ್ದಿದೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸೂರ್ಯ ನಾರಾಯಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರಾದರೂ, ದಾರಿಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.

    ಸೂರ್ಯ ನಾರಾಯಣ ಅವರು ಕಳೆದ ಹಲವು ವರ್ಷಗಳಿಂದ ಉಡುಪಿಯ ಕಿದಿಯೂರು ವರ್ಣ ಲ್ಯಾಬ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ಸ್ವಂತ ಫೋಟೋಗ್ರಾಫಿ ಸ್ಟೂಡಿಯೋ ಆರಂಭಿಸಿದ್ದರು. ಉಡುಪಿಯಲ್ಲಿ ಎಲ್ಲರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿದ್ದ ಅವರನ್ನು ‘ವರ್ ಸೂರ್ಯ’ ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು.

  • ಮಂಗಳೂರು: ಅಮಾಯಕ ಮುಸ್ಲಿಂ ಯುವಕನ ಹತ್ಯೆಗೆ ಸರಕಾರ ಮತ್ತು ಪೊಲೀಸ್ ಇಲಾಖೆ ನೇರ ಹೊಣೆ: ಅನ್ವರ್ ಸಾದತ್ ಎಸ್

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೌಡಿಶೀಟರ್ ಹಾಗೂ ಕೀರ್ತಿ, ಫಾಝಿಲ್ ಹಂತಕ ಸುಹಾಸ್ ಶೆಟ್ಟಿ ಎಂಬಾತನ ಹತ್ಯೆಯ ಪ್ರತಿಕಾರವಾಗಿ ಜಿಲ್ಲೆಯ ವಿವಿಧೆಡೆಗಳಲ್ಲಿ ಹದಿನೈದಕ್ಕೂ ಹೆಚ್ಚಿನ ಕಡೆಗಳಲ್ಲಿ ಅಮಾಯಕ ಮುಸ್ಲಿಮರ ಮೇಲೆ ದಾಳಿಗಳಾಗಿದ್ದು, ಇದೀಗ ಅದರ ಮುಂದುವರಿದ ಭಾಗವಾಗಿ ಬಂಟ್ವಾಳದ ಕೊಳತ್ತಮಜಲು ಎಂಬಲ್ಲಿ ಇಬ್ಬರು ಯುವಕರ ಮೇಲೆ ತಲ್ವಾರ್ ದಾಳಿ ನಡೆಸಿದ್ದಾರೆ.

    ಅದರಲ್ಲಿ ಓರ್ವ ಮೃತಪಟ್ಟಿದ್ದು, ಓರ್ವ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಪೋಲಿಸ್ ಇಲಾಖೆ ಸಂಪೂರ್ಣವಾಗಿ ಸಂಘಪರಿವಾರದ ಜೊತೆ ಶಾಮೀಲಾಗಿರುವುದೇ ಈ ಎಲ್ಲಾ ಘಟನೆಗಳಿಗೆ ಕಾರಣ. ಮೇ ಒಂದರಂದು ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆಯ ನಂತರ ಒಂದು ತಿಂಗಳ ಒಳಗೆ ಹದಿನೈದಕ್ಕೂ ಹೆಚ್ಚಿನ ಕಡೆಗಳಲ್ಲಿ ಅಮಾಯಕ ಮುಸ್ಲಿಮರ ಮೇಲೆ ತಲ್ವಾರ್ ದಾಳಿ ಆಗಿದೆ.

    ಬಜರಂಗದಳದ ನಾಯಕರಾದ ಭರತ್ ಕುಮ್ಡೇಲ್, ಶರಣ್ ಪಂಪ್ವೆಲ್, ನರಸಿಂಹ ಮಾಣಿ, ಶ್ರೀಕಾಂತ್ ಶೆಟ್ಟಿ, ಶಿವಾನಂದ ಮೆಂಡನ್ ಸಹಿತ ಹಲವರು ಸುಹಾಸ್ ಶೆಟ್ಟಿ ಹತ್ಯೆಗೆ ನಾವು ಪ್ರತಿಕಾರ ತೀರಿಸುತ್ತೇವೆ ಎಂದು ಹೇಳಿದರೂ ಸಹ ಪೊಲೀಸ್ ಇಲಾಖೆ ಕೇವಲ ಎಫ್ಐಆರ್ ದಾಖಲಿಸಿ ಮೌನವಾಗಿದ್ದಾರೆ.

    ಮುಂದುವರಿದು ಬಜ್ಪೆಯಲ್ಲಿ ಮೇ 25ರಂದು ಶ್ರದ್ಧಾಂಜಲಿ ಸಭೆಯ ಹೆಸರಲ್ಲಿ ಪ್ರತಿಕಾರದ ಹತ್ಯೆಗೆ ಸಂಚು ರೂಪಿಸಲು ಪೋಲಿಸ್ ಇಲಾಖೆ ಅನುಮತಿ ನೀಡಿರುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಪ್ರತಿಕಾರದ ಬಗ್ಗೆ ಸಂದೇಶಗಳು ಬರುತ್ತಿದ್ದರೂ ಸಹ ಪೋಲಿಸ್ ಇಲಾಖೆ ಹತ್ಯೆ ನಡೆಯುವವರೆಗೂ ಮೌನ ಸಮ್ಮತಿ ನೀಡಿದೆ.

    ಸುಹಾಸ್ ಶೆಟ್ಟಿ ಹತ್ಯೆಯ ನಂತರ ಗೃಹ ಸಚಿವರು ಜಿಲ್ಲೆಗೆ ಭೇಟಿ ನೀಡಿ, ಜಿಲ್ಲೆಯಲ್ಲಿ Anty communal Force ಸ್ಥಾಪನೆಯ ಬಗ್ಗೆ ಹೇಳಿಕೆ ನೀಡಿ ಹೋಗಿದ್ದಾರೆ. ನಂತರದ ದಿನಗಳಲ್ಲಿ ಸಂಘಪರಿವಾರದ ಅಟ್ಟಹಾಸ ಹೆಚ್ಚಾದರೂ ಸಹ ಗೃಹ ಇಲಾಖೆ ಸಂಪೂರ್ಣವಾಗಿ ಮೌನವಾಗಿರುವುದೇ ಈ ಹತ್ಯೆಗೆ ಕಾರಣ ಎಂದು ಎಸ್‌ಡಿಪಿಐ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಆರೋಪಿಸಿದ್ದಾರೆ.

  • ಬಂಟ್ವಾಳ ಕೊಲೆ ಪ್ರಕರಣ: ದಕ್ಷಿಣ ಕನ್ನಡದ 5 ತಾಲೂಕುಗಳಲ್ಲಿ ಮೇ 27 ರಿಂದ 30 ರವರೆಗೆ ನಿಷೇಧಾಜ್ಞೆ ಜಾರಿ

    ಮಂಗಳೂರು, 27 ಮೇ, 2025: ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಹೀಂ ಎಂಬ ವ್ಯಕ್ತಿಯ ಹತ್ಯೆಯ ನಂತರ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ದಕ್ಷಿಣ ಕನ್ನಡ ಜಿಲ್ಲಾಡಳಿತವು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ರ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ.

    ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಾಧ್ಯತೆ ಇದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ನೀಡಿದ್ದ ವರದಿಯನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿ ಡಾ. ಆನಂದ್ ಕೆ ಅವರು ಮೇ 27 ರಂದು ಆದೇಶ ಹೊರಡಿಸಿದ್ದಾರೆ. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲ್ಲೂಕುಗಳಲ್ಲಿ ಮೇ 27 ರಂದು ಸಂಜೆ 6.00 ಗಂಟೆಯಿಂದ ಮೇ 30 ರಂದು ಸಂಜೆ 6.00 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ.

    ಈ ಅವಧಿಯಲ್ಲಿ ಈ ಕೆಳಗಿನ ನಿರ್ಬಂಧಗಳು ಜಾರಿ

    • ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದು, ಮೆರವಣಿಗೆಗಳು ಮತ್ತು ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ.
    • ಕೋಲುಗಳು, ಕತ್ತಿಗಳು, ಗದೆಗಳು, ಬಂದೂಕುಗಳು, ಚಾಕುಗಳು, ದೊಣ್ಣೆಗಳು ಅಥವಾ ದೈಹಿಕ ಹಾನಿಯನ್ನುಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.
    • ಪಟಾಕಿಗಳನ್ನು ಸಿಡಿಸುವುದು ಮತ್ತು ಸ್ಫೋಟಕ ಅಥವಾ ನಾಶಕಾರಿ ವಸ್ತುಗಳನ್ನು ಹೊಂದಿರುವುದು ನಿಷೇಧಿಸಲಾಗಿದೆ.
    • ಪ್ರತಿಭಟನೆಗಳು, ವಿಜಯೋತ್ಸವ ಆಚರಣೆಗಳು, ಸಾರ್ವಜನಿಕ ರ್ಯಾಲಿಗಳು, ಪ್ರತಿಭಟನಾ ಮೆರವಣಿಗೆಗಳು, ಬಂದ್‌ಗಳು, ರಸ್ತೆ ತಡೆಗಳು ಮತ್ತು ರಾಜಕೀಯ/ಸಾರ್ವಜನಿಕ ಸಭೆಗಳನ್ನು ಅನುಮತಿಸಲಾಗುವುದಿಲ್ಲ.
    • ಕಲ್ಲುಗಳು, ಸ್ಪೋಟಕಗಳು ಅಥವಾ ಅವುಗಳನ್ನು ಎಸೆಯುವ ಸಾಮರ್ಥ್ಯವಿರುವ ಯಾವುದೇ ಸಾಧನವನ್ನು ಸಂಗ್ರಹಿಸುವುದು ಅಥವಾ ಹೊಂದಿರುವುದು ನಿಷೇಧಿಸಲಾಗಿದೆ.
    • ಮಾನವ ದೇಹಗಳು, ಪ್ರತಿಮೆಗಳು ಅಥವಾ ವ್ಯಕ್ತಿಗಳ ಮಾದರಿಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.

    ಕೋಮು ಸಾಮರಸ್ಯ, ನೈತಿಕತೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ ಸಭ್ಯತೆಗೆ ಭಂಗ ತರುವಂತಹ ಘೋಷಣೆಗಳು, ಸನ್ನೆಗಳು ಅಥವಾ ಚಿತ್ರಗಳನ್ನು ಕೂಗುವುದು ಅಥವಾ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ. ಅಂತಹ ನಡವಳಿಕೆಯನ್ನು ಪ್ರಚೋದಿಸುವ ಕರಪತ್ರಗಳು ಅಥವಾ ಪೋಸ್ಟರ್‌ಗಳ ವಿತರಣೆಯನ್ನು ಸಹ ನಿಷೇಧಿಸಲಾಗಿದೆ.

    ಸರ್ಕಾರಿ ಕಾರ್ಯಕ್ರಮಗಳು ಅಥವಾ ಅಧಿಕೃತ ಅನುಮತಿಯ ಮೇರೆಗೆ ಆಯೋಜಿಸಲಾದ ಕಾರ್ಯಕ್ರಮಗಳಿಗೆ ಅಥವಾ ಕರ್ತವ್ಯದಲ್ಲಿರುವಾಗ ಶಸ್ತ್ರಾಸ್ತ್ರಗಳು ಅಥವಾ ಸಂವಹನ ಸಾಧನಗಳನ್ನು ಹೊಂದಿರುವ ಪೊಲೀಸ್ ಸಿಬ್ಬಂದಿ ಮತ್ತು ಬ್ಯಾಂಕ್ ಭದ್ರತಾ ಸಿಬ್ಬಂದಿಗೆ ಈ ಆದೇಶ ಅನ್ವಯಿಸುವುದಿಲ್ಲ.

    ಪೂರ್ವ ನಿಗದಿತ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆದೇಶದಿಂದ ವಿನಾಯಿತಿ ಪಡೆದಿವೆ.

    ಅಂತ್ಯಕ್ರಿಯೆಗೆ ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳನ್ನು ಅಂತ್ಯಕ್ರಿಯೆ ಅಥವಾ ಸಮಾಧಿ ಮಾಡುವ ಸ್ಥಳದಲ್ಲಿ ಕಟ್ಟುನಿಟ್ಟಾಗಿ ಅನುಮತಿಸಲಾಗುತ್ತದೆ.

    ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುನ್ನೆಚ್ಚರಿಕೆಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. ಮೇ 27 ರಂದು ಅವರ ಸಹಿ ಮತ್ತು ಅಧಿಕೃತ ಮುದ್ರೆಯೊಂದಿಗೆ ಆದೇಶವನ್ನು ಹೊರಡಿಸಲಾಗಿದೆ.

  • ಕರ್ನಾಟಕ ಸರ್ಕಾರದ ಅರಿವು ವಿದ್ಯಾ ಸಾಲ ಯೋಜನೆ: CET/NEET ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ

    ಬೆಂಗಳೂರು, ಮೇ 27, 2025: ಕರ್ನಾಟಕ ರಾಜ್ಯ ಸರ್ಕಾರದ ಅರಿವು ವಿದ್ಯಾ ಸಾಲ ಯೋಜನೆಯಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ CET/NEET ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಶಿಕ್ಷಣ ಸಾಲವನ್ನು ಒದಗಿಸಲಾಗುತ್ತದೆ. ಈ ಯೋಜನೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

    ಯೋಗ್ಯತಾ ಅಂಶಗಳು:

    • ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ. 8 ಲಕ್ಷಕ್ಕಿಂತ ಕಡಿಮೆ ಇರಬೇಕು.
    • ವಿದ್ಯಾರ್ಥಿಯು CET/NEET ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾಗಿರಬೇಕು.
    • ಕ್ರೈಸ್ತರನ್ನು ಹೊರತುಪಡಿಸಿ, ಇತರ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.

    ಸಾಲದ ಮೊತ್ತ (ಗರಿಷ್ಠ ಮಿತಿ):

    ಕೋರ್ಸ್ಗರಿಷ್ಠ ಸಾಲದ ಮೊತ್ತ (ರೂ)
    MBBS, MD, MS₹5,00,000
    BDS, MDS₹1,00,000
    BAMS, BHMS, BNYS, BUMS₹50,000
    BE, B.Tech, M.Tech, B.Arch, M.Arch₹50,000
    MBA, MCA, LLB₹50,000
    B.Sc. (Agriculture, Horticulture, etc.)₹50,000
    Pharmacy (B.Pharma, M.Pharma, D.Pharma, Pharma.D)₹50,000

    ಅಗತ್ಯ ದಾಖಲೆಗಳು:

    1. ಜಾತಿ/ಅಲ್ಪಸಂಖ್ಯಾತ ಪ್ರಮಾಣಪತ್ರ
    2. ಆದಾಯ ಪ್ರಮಾಣಪತ್ರ
    3. ಆಧಾರ್ ಕಾರ್ಡ್ ಪ್ರತಿ
    4. CET ಪ್ರವೇಶ ಪತ್ರ
    5. NEET ಪ್ರವೇಶ ಪತ್ರ
    6. SSLC/10ನೇ ತರಗತಿಯ ಅಂಕಪಟ್ಟಿ
    7. PUC/ಡಿಪ್ಲೋಮಾ ಅಂಕಪಟ್ಟಿ
    8. ಇಂಡೆಮ್ನಿಟೀ ಬಾಂಡ್ (Indemnity Bond)
    9. ವಿದ್ಯಾರ್ಥಿಯ ಸ್ವಯಂ ಘೋಷಣೆ ಪತ್ರ
    10. ಪೋಷಕರ ಸ್ವಯಂ ಘೋಷಣೆ ಪತ್ರ

    ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: ಮೇ 31, 2025

    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

    • ☎️ 6363604332 – NNO Mangalore Community Centre
    • ☎️ 7259204123 – NNO Kundapura Community Centre
    • ☎️ 9945167801 – NNO Karkala Community Centre
    • ನಮ್ಮ ನಾಡ ಒಕ್ಕೂಟ ಕಾರ್ಕಳ ಪ್ರಕಟಣೆ
  • ಹರೀಶ್‌ ಪೂಂಜಾ ಅವರನ್ನು ಶಾಸಕತ್ವದಿಂದ ತೆಗೆಯಬೇಕು: ಮುನೀರ್‌ ಕಾಟಿಪಳ್ಳ ಆಗ್ರಹ

    ಬೆಳ್ತಂಗಡಿ, ಮೇ 27, 2025: ಶಾಸಕ ಹರೀಶ್‌ ಪೂಂಜಾ ಅವರು ತಮ್ಮ ದ್ವೇಷ ಭಾಷಣವನ್ನು ನ್ಯಾಯಾಲಯದ ಮುಂದೆ ಸಮರ್ಥಿಸಿಕೊಳ್ಳಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್‌ ಕಾಟಿಪಳ್ಳ ಸವಾಲು ಹಾಕಿದ್ದಾರೆ. ಬೆಳ್ತಂಗಡಿಯ ಜಮಿಯತುಲ್‌ ಫಲಾಹ್‌ ಸಭಾ ಭವನದಲ್ಲಿ ನಡೆದ ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಶಾಸಕ ಹರೀಶ್‌ ಪೂಂಜಾ ಮೈಕ್‌ ಸಿಕ್ಕಾಗ ದ್ವೇಷ ಭಾಷಣ ಮಾಡಿ, ನಂತರ ನ್ಯಾಯಾಲಯದಲ್ಲಿ ಪ್ರಕರಣ ರದ್ದುಗೊಳಿಸುವಂತೆ ಕೋರಿಕೆ ಸಲ್ಲಿಸುತ್ತಾರೆ. ಅವರಿಗೆ ಧೈರ್ಯವಿದ್ದರೆ, ತಮ್ಮ ಭಾಷಣವನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡು ಸಮರ್ಥಿಸಿಕೊಳ್ಳಬೇಕು ಎಂದರು. ಸೋಮವಾರ ತೆಕ್ಕಾರುವಿನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಶಾಸಕರು ಭಾರತೀಯ ಪ್ರಜೆಗಳನ್ನು ಕೀಳಾಗಿ ನಿಂದಿಸಿ, ದೇಶದ ಜನರನ್ನು ಅವಮಾನಿಸಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಶಾಸಕತ್ವದಿಂದ ತೆಗೆದುಹಾಕಬೇಕೆಂದು ಆಗ್ರಹಿಸಿದರು.

    ಸಾಮಾಜಿಕ ಚಿಂತಕ ಹಾಗೂ ಕಾಂಗ್ರೆಸ್‌ ವಕ್ತಾರ ಎಂ.ಜಿ.ಹೆಗಡೆ ಮಾತನಾಡಿ, ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಹೆಚ್ಚಿನ ಕಾರ್ಯಕರ್ತರಿಗೆ ಹಿಂದೂ ಧರ್ಮದ ನಿಜವಾದ ಅರ್ಥವೇ ತಿಳಿದಿಲ್ಲ. ಮೊದಲು ಅವರಿಗೆ ಹಿಂದೂ ಧರ್ಮದ ಕುರಿತು ತಿಳಿವಳಿಕೆ ನೀಡಬೇಕು. ಇಲ್ಲವಾದರೆ, ಬ್ರಹ್ಮಕಲಶೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಏನು ಮಾತನಾಡಬೇಕೆಂಬ ಕನಿಷ್ಠ ಜ್ಞಾನವಿಲ್ಲದೆ, ತಮ್ಮನ್ನು ತಾವೇ ಹೊಗಳಿಕೊಂಡು ಹಿಂದೂ ಧರ್ಮದ ಮಾನ-ಮರ್ಯಾದೆಗೆ ಧಕ್ಕೆ ತರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಧಾರ್ಮಿಕ ಸಭೆಗಳಲ್ಲಿ ಇಂತಹ ರಾಜಕೀಯ ದ್ವೇಷದ ಭಾಷಣಗಳನ್ನು ಮಾಡುವವರ ವಿರುದ್ಧ ಧ್ವನಿಯೆತ್ತಿ ಖಂಡಿಸಬೇಕು. ಆಗ ಮಾತ್ರ ಹಿಂದೂ ಧರ್ಮವನ್ನು ರಕ್ಷಿಸಲು ಸಾಧ್ಯ ಎಂದು ಅವರು ಹೇಳಿದರು.

    ಸಭೆಯಲ್ಲಿ ಸಮಾನಮನಸ್ಕ ಸಂಘಟನೆಗಳ ಮುಖಂಡರಾದ ಲಕ್ಷ್ಮಣ ಗೌಡ, ಸಮದ್‌ ತೆಕ್ಕಾರು, ಸದಾಶಿವ ಶೆಟ್ಟಿ, ಜನಾರ್ಧನ ಆಚಾರ್ಯ, ಫಾರೂಕ್‌, ರಿಯಾಜ್‌, ಅಭಿಷೇಕ್‌, ಕಿರಣಪ್ರಭಾ, ಜಯಶ್ರೀ, ಪುಷ್ಪಾ, ಅಶ್ವಿತ, ರಾಮಚಂದ್ರ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಮುಖಂಡ ಶ್ಯಾಮರಾಜ್‌ ಪಟ್ರಮೆ ವಂದನೆ ಸಲ್ಲಿಸಿದರು.

  • ಮಂಗಳೂರು: ‘ಬಜಪೆ ಚಲೋ’ ಪ್ರತಿಭಟನೆಯ ಆಯೋಜಕರು, ವಕ್ತಾರರ ವಿರುದ್ಧ ಪ್ರಕರಣ ದಾಖಲು

    ಮಂಗಳೂರು, ಮೇ 26, 2025: ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ವಹಿಸಬೇಕೆಂದು ಒತ್ತಾಯಿಸಿ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗ ದಳದ ಸದಸ್ಯರು ನಡೆಸಿದ ‘ಬಜಪೆ ಚಲೋ’ ಪ್ರತಿಭಟನೆಯ ಆಯೋಜಕರು ಮತ್ತು ವಕ್ತಾರರ ವಿರುದ್ಧ ಮಂಗಳೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    ಬಜಪೆಯ ಶಾರದಾ ಮಂಟಪದ ಬಳಿ ನಡೆದ ಈ ಪ್ರತಿಭಟನೆಗೆ ಪೊಲೀಸರ ಅನುಮತಿ ಇರಲಿಲ್ಲ. ಸುಮಾರು 3,000 ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.

    ಪೊಲೀಸರ ಪ್ರಕಾರ, ಪ್ರತಿಭಟನಾಕಾರರು ಬಜಪೆ ಬಸ್ ನಿಲ್ದಾಣದಲ್ಲಿ ಮತ್ತು ಸುತ್ತಮುತ್ತ ಕಾನೂನುಬಾಹಿರವಾಗಿ ಜಮಾಯಿಸಿ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ತಡೆದರು ಹಾಗೂ ರಾಜ್ಯ ಹೆದ್ದಾರಿ ಸಂಖ್ಯೆ 67 ರ ಭಾಗವನ್ನು ಆಕ್ರಮಿಸಿದರು. ಇದರಿಂದ ವಾಹನ ಸಂಚಾರ ಮತ್ತು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿತ್ತು.

    ಪ್ರತಿಭಟನೆಯ ವೇಳೆ, ಒಬ್ಬ ವಕ್ತಾರರು ಸುಹಾಸ್ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿ ಸಾಮುದಾಯಿಕ ಉದ್ವಿಗ್ನತೆಯನ್ನು ಉಂಟುಮಾಡಬಹುದಾದ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಈ ಘಟನೆಯ ಆಧಾರದ ಮೇಲೆ, ಬಜಪೆ ಪೊಲೀಸ್ ಠಾಣೆಯಲ್ಲಿ ಕ್ರೈಂ ಸಂಖ್ಯೆ 90/2025 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 189(2), 191(2), 285, 192, 351(2), 351(3), ಮತ್ತು 190, ಜೊತೆಗೆ ಕರ್ನಾಟಕ ಪೊಲೀಸ್ ಕಾಯ್ದೆ, 1963 ರ ಸೆಕ್ಷನ್ 107 ಮತ್ತು 109 ರ ಅಡಿಯಲ್ಲಿ ಆರೋಪಗಳನ್ನು ದಾಖಲಿಸಲಾಗಿದೆ.

  • ಮಂಗಳೂರಿನ ಸಫ್ವಾನ್ ಜುನೈದ್‌ಗೆ ಸೌದಿ ರಾಜರಿಂದ ಹಜ್ ಯಾತ್ರೆಗೆ ಆಹ್ವಾನ

    ಮಂಗಳೂರು, ಮೇ 24, 2025: ಮಂಗಳೂರಿನ ಪಾಂಡೇಶ್ವರ ನಿವಾಸಿ ಸಫ್ವಾನ್ ಜುನೈದ್ ಅವರು ಪವಿತ್ರ ಮಕ್ಕಾ ಮತ್ತು ಮದೀನಾ ಮಸೀದಿಗಳ ಪಾಲಕರಾದ ಸೌದಿ ಅರೇಬಿಯಾದ ರಾಜರ ಅತಿಥಿಯಾಗಿ ಪವಿತ್ರ ಹಜ್ ಯಾತ್ರೆಗೆ ಆಹ್ವಾನಿತರಾಗಿದ್ದಾರೆ.

    ಸೌದಿ ರಾಯಭಾರ ಕಚೇರಿಯು ವಿಶ್ವದ ವಿವಿಧ ದೇಶಗಳಿಂದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳನ್ನು ಹಜ್ ಯಾತ್ರೆಗಾಗಿ ಆಯ್ಕೆ ಮಾಡುತ್ತದೆ. ಇದನ್ನು ಸೌದಿ ಅರೇಬಿಯಾದ ಧಾರ್ಮಿಕ ವ್ಯವಹಾರಗಳ ಸಚಿವಾಲಯವು ಸಂಯೋಜಿಸುತ್ತದೆ. ಈ ಅತಿಥಿಗಳ ಹಜ್ ಪ್ರಯಾಣದ ಸಂಪೂರ್ಣ ವೆಚ್ಚವನ್ನು ಸೌದಿ ರಾಜರು ಭರಿಸುತ್ತಾರೆ. ಇವರಿಗೆ ಸೌದಿಯ ಪ್ರಮುಖ ನಾಯಕರನ್ನು ಭೇಟಿ ಮಾಡುವ ಅವಕಾಶವೂ ಇರುತ್ತದೆ. ಸಫ್ವಾನ್ ಜುನೈದ್ ಅವರ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಗಮನಿಸಿ ಈ ಆಹ್ವಾನ ನೀಡಲಾಗಿದೆ ಎಂದು ತಿಳಿದುಬಂದಿದೆ.

    ಈ ವರ್ಷ ಸೌದಿ ರಾಜರ ಅತಿಥಿಗಳಾಗಿ ವಿಶ್ವದ ವಿವಿಧ ಭಾಗಗಳಿಂದ 1300ಕ್ಕೂ ಹೆಚ್ಚು ಮಂದಿ ಹಜ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಲ್ಲಿ ಭಾರತದಿಂದ 30 ಮಂದಿಗೆ ಈ ಅವಕಾಶ ದೊರೆತಿದ್ದು, ಮಂಗಳೂರಿನ ಸಫ್ವಾನ್ ಜುನೈದ್ ಕೂಡ ಅವರಲ್ಲಿ ಒಬ್ಬರಾಗಿದ್ದಾರೆ. ಈ ಅತಿಥಿಗಳು ಮೇ 27 ರಂದು ಹೊಸದಿಲ್ಲಿಯ ಸೌದಿ ರಾಯಭಾರ ಕಚೇರಿಗೆ ಭೇಟಿ ನೀಡಲಿದ್ದಾರೆ. ತದನಂತರ ಮೇ 28 ರಂದು ಹೊಸದಿಲ್ಲಿಯಿಂದ ಅವರ ಹಜ್ ಯಾತ್ರೆ ಪ್ರಾರಂಭವಾಗಲಿದೆ.