Category: Gangolli

  • ಗಂಗೊಳ್ಳಿ: ಸಂಭ್ರಮದ ‘ಈದುಲ್ ಅಝ್‌ಹಾ’ ಆಚರಣೆ

    ಗಂಗೊಳ್ಳಿ, ಜೂನ್ 07, 2025: ಇಸ್ಲಾಂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾದ ಈದ್ ಉಲ್-ಅಝ್‌ಹಾ (ಬಕ್ರೀದ್) ಅನ್ನು ಗಂಗೊಳ್ಳಿಯ ಮುಸ್ಲಿಂ ಸಮುದಾಯವು ಶನಿವಾರ, ಜೂನ್ 7, 2025 ರಂದು ಅತ್ಯಂತ ಭಕ್ತಿಭಾವ ಮತ್ತು ಸಡಗರದಿಂದ ಆಚರಿಸಿತು. ಈ ಹಬ್ಬವು ಪ್ರವಾದಿ ಇಬ್ರಾಹಿಂ ಅವರ ದೇವರಿಗೆ ಸಮರ್ಪಣೆ ಮತ್ತು ತ್ಯಾಗದ ಸಂದೇಶವನ್ನು ಸಾರುತ್ತದೆ.

    ಗಂಗೊಳ್ಳಿಯ ಜಾಮಿಯಾ ಮಸೀದಿ, ಮುಹಿಯುದ್ದೀನ್ ಜುಮಾ ಮಸೀದಿ, ಶಾಹಿ ಮಸೀದಿ ಮತ್ತು ಸುಲ್ತಾನ್ ಮಸೀದಿ (ತಾತ್ಕಾಲಿಕ)ಗಳಲ್ಲಿ ಬೆಳಿಗ್ಗೆ ಈದ್ ಉಲ್-ಅಝ್‌ಹಾ ನಮಾಜ್‌ಗಾಗಿ ದೊಡ್ಡ ಸಂಖ್ಯೆಯ ಭಕ್ತರು ಒಟ್ಟಿಗೆ ಸೇರಿದರು. ಎಳೆಯ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ, ನಾನಾ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಸಂಭ್ರಮಿಸಿದರು. ಈದ್ ನಮಾಜ್ ಮತ್ತು ಖುತ್ಬಾದ ಬಳಿಕ ಭಕ್ತರು ದಫನ ಭೂಮಿಗೆ ತೆರಳಿ, ಅಗಲಿದ ಕುಟುಂಬದ ಸದಸ್ಯರ ಮಗ್ಫಿರತ್‌ಗಾಗಿ ಪ್ರಾರ್ಥಿಸಿದರು. ಬಳಿಕ ಕುಟುಂಬಸ್ಥರು, ಸ್ನೇಹಿತರು ಮತ್ತು ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಸಲ್ಲಿಸಿದರು.

    ವಿಶೇಷ ಪ್ರಾರ್ಥನೆಗಳ ನಂತರ, ಇಮಾಮ್‌ರವರು ತ್ಯಾಗ, ದಾನ ಮತ್ತು ಸಮುದಾಯದ ಒಗ್ಗಟ್ಟಿನ ಬಗ್ಗೆ ಉಪದೇಶ ನೀಡಿದರು.

  • ಗಂಗೊಳ್ಳಿ: ಎಸ್‌ಎಸ್‌ಸಿ ವತಿಯಿಂದ ಈದ್ ಕಿಟ್‌ ವಿತರಣೆ

    ಗಂಗೊಳ್ಳಿ, ಜೂನ್ 07, 2025: ಸೋಶಿಯಲ್ ಸ್ಪೋರ್ಟ್ಸ್ ಮತ್ತು ಚಾರಿಟೇಬಲ್ ಅಸೋಸಿಯೇಷನ್ (ಎಸ್‌ಎಸ್‌ಸಿ) ಗಂಗೊಳ್ಳಿಯು ಇವತ್ತು ನಡೆಯಲಿರುವ ಬಕ್ರೀದ್ ಹಬ್ಬದ ಪ್ರಯುಕ್ತ ಈದ್ ಕಿಟ್‌ಗಳನ್ನು ವಿತರಿಸಲಾಯಿತು. ಅಗತ್ಯವಿರುವವರಿಗೆ ಆಹಾರ ಸಾಮಗ್ರಿಗಳನ್ನು ನೀಡಲಾಗಿದ್ದು, ಅವರೂ ಈದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಹಾಯವಾಗಿದೆ.

    ಸಂಸ್ಥೆಯ ಮಹಿಳಾ ವಿಭಾಗವು ಈ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಕಿಟ್‌ಗಳನ್ನುವೈಯಕ್ತಿಕವಾಗಿ ಕಿಟ್‌ಗಳನ್ನು ತಲುಪಿಸುವ ಮೂಲಕ ಮಹತ್ವದ ಕೊಡುಗೆ ನೀಡಿದೆ. ಈ ಸಾಮಾಜಿಕ ಕಾರ್ಯವು ಸಮುದಾಯದಲ್ಲಿ ಒಗ್ಗಟ್ಟು ಮತ್ತು ಸಹಾಯದ ಮನೋಭಾವವನ್ನು ಬಲಪಡಿಸಿದೆ.

  • ಗಂಗೊಳ್ಳಿ: ಯುವಕನ ಮೇಲೆ ಹಲ್ಲೆ, ಜೀವ ಬೆದರಿಕೆ – ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು

    ಗಂಗೊಳ್ಳಿ, ಜೂನ್ 06, 2025: ಗುಜ್ಜಾಡಿ ಗ್ರಾಮದ 17 ವರ್ಷದ ಯುವಕನ ಮೇಲೆ ಆರೋಪಿಗಳಾದ ರಿತೇಶ್‌ ಮತ್ತು ತೇಜಸ್‌ ಕೆಲಸದ ವಿಷಯಕ್ಕೆ ಸಂಬಂಧಿಸಿದ ಜಗಳದಿಂದಾಗಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ದಿನಾಂಕ 05/06/2025ರಂದು ಸಂಜೆ 7:30 ಗಂಟೆಗೆ ನಡೆದಿದೆ ಎಂದು ವರದಿಯಾಗಿದೆ.

    ಯುವಕ, ಜಾನ್‌ ಡಿ ಸಿಲ್ವಾ ಎಂಬವರ ಡಿಜೆ ಉಪಕರಣವನ್ನು ಪರಿಶೀಲಿಸುತ್ತಿದ್ದ ವೇಳೆ, ಆರೋಪಿಗಳಾದ ರಿತೇಶ್‌ ಮತ್ತು ತೇಜಸ್‌, ಜಾನ್‌ ಡಿ ಸಿಲ್ವಾ ಅವರ ಮನೆಯ ಹೊರಗೆ ಬರುವಂತೆ ಯುವಕನಿಗೆ ಸೂಚಿಸಿದ್ದಾರೆ. ಹೊರಗೆ ಬಂದ ಯುವಕನನ್ನು ತಡೆದ ಆರೋಪಿಗಳು, ಅವನ ಟೀ ಶರ್ಟ್‌ ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ, ಆರೋಪಿಗಳು ಯುವಕನ ಮುಖ, ಕೆನ್ನೆ, ತಲೆ ಮತ್ತು ಬೆನ್ನಿಗೆ ಕೈಯಿಂದ ಹೊಡೆದಿದ್ದಾರೆ. ತೇಜಸ್‌, ಯುವಕನನ್ನು ಕೆಳಗೆ ದೂಡಿ, ಅವರ ಕನ್ನಡಕವನ್ನು ಹೊಡೆದು ಒಡೆದಿದ್ದಾನೆ. ಇದೇ ವೇಳೆ ರಿತೇಶ್‌, ಯುವಕನ ಕುತ್ತಿಗೆಯಲ್ಲಿದ್ದ ಸರವನ್ನು ಹರಿದು, ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

    ಈ ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/2025ರಡಿ ಕಲಂ 352, 126(2), 115(2), 351(2), 3(5) BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

  • ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಾರ್ಷಿಕ ಸಂಚಿಕೆ ‘ದೃಷ್ಟಿ’ ಅನಾವರಣ

    ಗಂಗೊಳ್ಳಿ: ಕುಂದಾಪುರ ತಾಲೂಕಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ 2024-25ನೇ ಸಾಲಿನ ವಾರ್ಷಿಕ ಸಂಚಿಕೆ ‘ದೃಷ್ಟಿ’ ಅನಾವರಣ ಕಾರ್ಯಕ್ರಮವು 2025ರ ಜೂನ್ 6 ರ ಶುಕ್ರವಾರ ಸಂಜೆ 3:00 ಗಂಟೆಗೆ ಕಾಲೇಜು ಸಭಾಂಗಣದಲ್ಲಿ ಜರಗಲಿದೆ. ಈ ಕಾರ್ಯಕ್ರಮವು ಪ್ರಾಂಶುಪಾಲರಾದ ಶ್ರೀಮತಿ ಕವಿತಾ ಎಂ.ಸಿ. ರವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಪ್ರಸಿದ್ಧ ಕವಯತ್ರಿ ಹಾಗೂ ಲೇಖಕಿ ಶ್ರೀಮತಿ ಸುಮನ ಆರ್. ಹೇರ್ಳೆ ಅವರು ಸಂಚಿಕೆಯನ್ನು ಅನಾವರಣಗೊಳಿಸಲಿದ್ದಾರೆ.

    ಕಾರ್ಯಕ್ರಮದಲ್ಲಿ ಜಿ.ಎಸ್.ವಿ.ಎಸ್. ಅಸೋಸಿಯೇಷನ್‌ನ ಅಧ್ಯಕ್ಷರಾದ ಡಾ. ಕಾಶೀನಾಥ ಪೈ, ಕಾರ್ಯದರ್ಶಿಗಳಾದ ಶ್ರೀ ಹೆಚ್. ಗಣೇಶ್ ಕಾಮತ್ ಹಾಗೂ ಕಾಲೇಜಿನ ಕಾರ್ಯದರ್ಶಿಗಳಾದ ಶ್ರೀ ಎನ್. ಸದಾಶಿವ ನಾಯಕ್ ಗೌರವ ಉಪಸ್ಥಿತರಾಗಲಿದ್ದಾರೆ. ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಪ್ರತಿಬಿಂಬಿಸುವ ಈ ಸಂಚಿಕೆಯ ಅನಾವರಣಕ್ಕೆ ಎಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾಲೇಜು ಆಡಳಿತ ಮಂಡಳಿ ಆಹ್ವಾನಿಸಿದೆ.

  • ಗಂಗೊಳ್ಳಿ: ಬಸ್ ಕಂಡಕ್ಟರ್ ಕೊಲೆಯತ್ನ, ಹಲ್ಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

    ಗಂಗೊಳ್ಳಿ, ಜೂನ್ 4, 2025: ಗಂಗೊಳ್ಳಿ ಮತ್ತು ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಈ ಎರಡು ಪ್ರಕರಣಗಳಲ್ಲೂ ಆರೋಪಿಗಳಾದ ಇಡೂರು-ಕುಂಜ್ಞಾಡಿ ಗ್ರಾಮದ ಕಾರ್ತಿಕ್ ಆಚಾರಿ(24), ವಿಷ್ಣು ಶೆಟ್ಟಿ(26) ಹಾಗೂ ಗಂಗೊಳ್ಳಿ ಪೊಲೀಸ್ ಠಾಣಾ ಪ್ರಕರಣದ ಆರೋಪಿ ಆಲೂರು ಗ್ರಾಮದ ಪ್ರದೀಪ ಪೂಜಾರಿ(28) ಎಂಬವರನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

    ಆಲೂರು -ಕುಂದಾಪುರ ಮಾರ್ಗದಲ್ಲಿ ಸಂಚರಿಸುವ ಜಯದುರ್ಗಾ ಬಸ್‌ಗೆ ಆಲೂರು ಗ್ರಾಮದ ಹೊಯಿಗೆಹರ ಬಸ್ ನಿಲ್ದಾಣದಲ್ಲಿ ಜೂ.2ರಂದು ಹತ್ತಿದ ಪ್ರದೀಪ್ ಮತ್ತು ಇತರರು, ನಿರ್ವಾಹಕ ಗಣೇಶ್ ಅವರ ಶರ್ಟ್ ಕಾಲರ್ ಪಟ್ಟಿಯನ್ನು ಹಿಡಿದು, ಕೈಯಿಂದ ಹೊಡೆದು ರಕ್ತಗಾಯ ಉಂಟಾಗುವಂತೆ ಮಾಡಿದ್ದಾರೆ. ಅಲ್ಲದೆ ಗಣೇಶ್ ಅವರ ಎದೆಗೆ ಕಾಲಿನಿಂದ ತುಳಿದು, ಅವರ ಕೈಯಲ್ಲಿದ್ದ ಬ್ಯಾಗ್‌ನಿಂದ ಸುಮಾರು 15,700 ರೂ. ಹಣವನ್ನು ಕಸಿದುಕೊಂಡು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಜೂ.2ರಂದು ರಾತ್ರಿ ಸುಧೀರ್ ಕೆಲಸ ಮುಗಿಸಿಕೊಂಡು ಇಡೂರು ಕುಂಜ್ಞಾಡಿ ಗ್ರಾಮದ ಬಸ್ ನಿಲ್ದಾಣದಲ್ಲಿ ಬಸ್ಸಿಂದ ಇಳಿದು ನಡೆದುಕೊಂಡು ಹೋಗುತ್ತಿದ್ದು, ಈ ವೇಳೆ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದ ಕಾರ್ತಿಕ್, ವಿಷ್ಣು ಹಾಗೂ ರಕ್ಷಿತ್ ಎಂಬವರು ಸುಧೀರ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೆನ್ನೆಗೆ ಹೊಡೆದು, ಕುತ್ತಿಗೆಯನ್ನು ಒತ್ತಿ ಹಿಡಿದು ಕೊಲ್ಲಲು ಪ್ರಯತ್ನಿಸಿರು ವುದಾಗಿ ದೂರಲಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಂತರಾಷ್ಟ್ರೀಯ ಯುವ ಶೃಂಗ ಸಭೆಗೆ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಧನ್ಯ ಯು ಆಯ್ಕೆ

    ಗಂಗೊಳ್ಳಿ, ಜೂನ್ 04, 2025:: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಎನ್.ಎಸ್. ಎಸ್ ಕೋಶ ಹಾಗೂ ಯೇನಪೋಯ ವಿಶ್ವ ವಿದ್ಯಾಲಯದ  ಸಹಯೋಗದೊಂದಿಗೆ ಮಂಗಳೂರು ದೇರಳಕಟ್ಟೆಯ ಯೇನಪೋಯ ವಿಶ್ವವಿದ್ಯಾಲಯ ದೀಮ್ದ್ ಕ್ಯಾಂಪಸ್ ನಲ್ಲಿ ಜೂನ್ 4 ರಿಂದ 7 ರವರೆಗೆ ನಡೆಯುವ ಜಾಗತಿಕ ಯುವಶೃಂಗ ಸಭೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ   ವಿದ್ಯಾರ್ಥಿನಿ . ಧನ್ಯ ಯು ಆಯ್ಕೆಯಾಗಿದ್ದಾರೆ. ಈಕೆ ಗುಜ್ಜಾಡಿ ನಾಯಕವಾಡಿಯ ಉದಯ್ ಎಮ್ ಪೂಜಾರಿ ಮತ್ತು ಶಾರದಾ ಯು. ಪೂಜಾರಿ ದಂಪತಿ ಪುತ್ರಿ .

  • ಗಂಗೊಳ್ಳಿ: ಯುವ ಮೀನುಗಾರ ಸಮುದ್ರದಲ್ಲಿ ಕಾಣೆ

    ಗಂಗೊಳ್ಳಿ, ಜೂನ್ 04, 2025: ಮಂಗಳೂರಿನ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದ 21 ವರ್ಷದ ಯುವಕನೊಬ್ಬ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಕಾಣೆಯಾಗಿರುವ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ.

    ಪಿರ್ಯಾದಿದಾರರಾದ ಸಹಾಸ್‌ (25, ಮಂಗಳೂರು) ಇವರು ಮಂಗಳೂರಿನ ಬಂದರಿನಲ್ಲಿ IND-KA-01-MM-4219 ನೊಂದಣಿ ಸಂಖ್ಯೆಯ ‘ವಿಶ್ವನಾಗ್’ ಎಂಬ ಹೆಸರಿನ ಬೋಟ್‌ನ ಮಾಲೀಕರಾಗಿದ್ದು, ಈ ಬೋಟ್‌ನಲ್ಲಿ ಸುಮಾರು 10 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ದಿನಾಂಕ 20-05-2025 ರಂದು ಮಧ್ಯಾಹ್ನ 12:00 ಗಂಟೆಗೆ ಬೋಟ್‌ ಮೀನುಗಾರಿಕೆಗಾಗಿ ಮಂಗಳೂರಿನ ಬಂದರಿನಿಂದ ಹೊರಟಿತ್ತು.

    ದಿನಾಂಕ 25-05-2025 ರಂದು ಬೆಳಿಗ್ಗೆ 11:45 ಗಂಟೆಗೆ ಬೋಟ್‌ನ ಚಾಲಕ ತಿರುಪತಿ ಅವರು ಪಿರ್ಯಾದಿದಾರರಿಗೆ ಕರೆ ಮಾಡಿ, ಸಮುದ್ರದಲ್ಲಿ ವಿಪರೀತ ಗಾಳಿಯಿಂದಾಗಿ ಬೋಟ್‌ನಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದ್ದಾರೆ. ಗಂಗೊಳ್ಳಿ ಬಂದರಿನ ಕಡೆಗೆ ವಾಪಸ್‌ ಬರುವಾಗ ಬೋಟ್‌ನ ಇಂಜಿನ್‌ನಲ್ಲಿ ದೋಷ ಕಾಣಿಸಿಕೊಂಡಿದ್ದು, ಅದನ್ನು ಸರಿಪಡಿಸಿಕೊಂಡು ಮುಂದುವರಿಯುತ್ತಿರುವಾಗ, ರಾತ್ರಿ 10:30 ಗಂಟೆ ಸುಮಾರಿಗೆ ಬೋಟ್‌ನಲ್ಲಿ ಕೆಲಸ ಮಾಡುತ್ತಿದ್ದ ವಯಾಲ್‌ ರವಿ ಕುಮಾರ್‌ (21) ಎಂಬ ಯುವಕ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಕಾಣೆಯಾಗಿದ್ದಾನೆ.

    ಈ ಘಟನೆಯ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 62/2025, ಕಲಂ: ಗಂಡಸು ಕಾಣೆ ಎಂಬಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಚಾಲನೆಯಲ್ಲಿದೆ.

  • ಗಂಗೊಳ್ಳಿ ಸರಸ್ವತಿ ವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ಆರಂಭೋತ್ಸವ

    ಗಂಗೊಳ್ಳಿ:  ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಪಿಯು ಶಿಕ್ಷಣವು ಉತ್ತಮವಾದ ತಳಹದಿಯನ್ನು ನೀಡುತ್ತದೆ ಹಾಗಾಗಿ ಸರಿಯಾದ ರೀತಿಯಲ್ಲಿ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಗಂಗೊಳ್ಳಿಯ ಜಿ.ಎಸ್‌. ವಿ.ಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶಿನಾಥ್ ಪೈ ಹೇಳಿದರು.   

    ಅವರು ಇಲ್ಲಿನ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ತರಗತಿಗಳ ಆರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. 

    ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ನಿಸರ್ಗ, ಮನಾಲಿ, ಪ್ರಾರ್ಥನಾ, ಪೂರ್ವಿಕ,  ಅದಿತಿ,  ಸ್ಕಂದ, ಬಿಂದುಶ್ರೀ ಅವರನ್ನು ಅಭಿನಂದಿಸಲಾಯಿತು. 

    ಕಾಲೇಜಿನ ಕಾರ್ಯದರ್ಶಿ ಸದಾಶಿವ ನಾಯಕ್ ಎನ್. ಶುಭ ಹಾರೈಸಿದರು. ಆಂಗ್ಲ ಭಾಷೆ ಉಪನ್ಯಾಸಕ ಥಾಮಸ್ ಪಿ.ಎ ಕಾಲೇಜಿನ ನೀತಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜು ಕಛೇರಿಯ ಮುಖ್ಯಸ್ಥೆ ಪ್ರಮೋದ  ಪೈ. ಎಮ್. ಜಿ. ಕಛೇರಿ ಸೌಲಭ್ಯಗಳು ಮತ್ತು ವಿದ್ಯಾರ್ಥಿ ವೇತನದ ಮಾಹಿತಿ ನೀಡಿದರು. ಗಣಿತಶಾಸ್ತ್ರ ಉಪನ್ಯಾಸಕ ಪ್ರವೀಣ್ ಕಾಮತ್ ಸಿಬ್ಬಂದಿಗಳನ್ನು ಪರಿಚಯಿಸಿದರು.

    ಹಿಂದಿ ಉಪನ್ಯಾಸಕ ನಾರಾಯಣ ಈ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಉಪನ್ಯಾಸಕ ಸುಜಯಿಂದ್ರ ಹಂದೆ  ಸಹಕರಿಸಿದರು. ಕಾಲೇಜಿನ ಸಂಸ್ಕಂತ ಉಪನ್ಯಾಸಕ ವೆಂಕಟೇಶ ಮೂರ್ತಿ ಎನ್. ಸಿ.  ಸ್ವಾಗತಿಸಿ,  ಅರ್ಥಶಾಸ್ತ್ರ ಉಪನ್ಯಾಸಕಿ ಸುಗುಣ ಆರ್ ಕೆ. ವಂದಿಸಿದರು.

  • ಗಂಗೊಳ್ಳಿ: ಬಕ್ರೀದ್ ಹಬ್ಬದ ಪೂರ್ವಭಾವಿಯಾಗಿ ಶಾಂತಿ ಸಭೆ

    ಗಂಗೊಳ್ಳಿ, ಜೂನ್ 03, 2025: ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಧಾರ್ಮಿಕ ಮುಖಂಡರನ್ನು ಕರೆಯಿಸಿ ಶಾಂತಿ ಸಭೆಯನ್ನು ಆಯೋಜಿಸಲಾಯಿತು. ಈ ಸಭೆಯಲ್ಲಿ ಹಬ್ಬದ ಸಂದರ್ಭದಲ್ಲಿ ಸಾಮರಸ್ಯ, ಸೌಹಾರ್ದತೆ, ಮತ್ತು ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬಾರದಂತೆ ಬಕ್ರೀದ್ ಹಬ್ಬವನ್ನು ಆಚರಿಸುವಂತೆ ಧಾರ್ಮಿಕ ಮುಖಂಡರಿಗೆ ಪೊಲೀಸ್ ಅಧಿಕಾರಿಗಳು ಸೂಚಿಸಿದರು.

    ಸಭೆಯಲ್ಲಿ ಎಲ್ಲಾ ಸಮುದಾಯದ ಮುಖಂಡರು ಭಾಗವಹಿಸಿ, ಶಾಂತಿಯುತವಾಗಿ ಹಬ್ಬ ಆಚರಿಸುವ ಕುರಿತು ಚರ್ಚಿಸಿದರು. ಕಾನೂನು ಉಲ್ಲಂಘನೆಯಾಗದಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸೌಹಾರ್ದತೆ ಕಾಪಾಡಿಕೊಂಡು ಹಬ್ಬವನ್ನು ಆಚರಿಸಲು ಸಹಕರಿಸುವಂತೆ ಪೊಲೀಸರು ತಿಳಿಸಿದ್ದಾರೆ.

  • ಉಡುಪಿ: ಹೊಲಿಗೆ ಯಂತ್ರ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

    ಉಡುಪಿ: ಉಡುಪಿ ನಗರಸಭೆಯ ನಗರೋತ್ಥಾನ 4ನೇ ಹಂತದ ಅನುದಾನದಡಿ ಶೇ. 24.10, ಶೇ.7.25 ಮತ್ತು ಶೇ.5 ಕ್ಕೆ ಮಂಜೂರಾದ ಮೊತ್ತದಲ್ಲಿ ಸರ್ಕಾರದ ಸುತ್ತೋಲೆಯಲ್ಲಿ ಸೂಚಿಸಿರುವಂತೆ ವ್ಯಕ್ತಿ ಸಂಬಂಧಿತ ಸೌಲಭ್ಯಗಳ ಅಡಿಯಲ್ಲಿ ಹೊಲಿಗೆ ಯಂತ್ರ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಜಾತಿ ಮತ್ತು ಆದಾಯ ದೃಢಪತ್ರ, ಪ್ರಸಕ್ತ ಸಾಲಿನ ಆಸ್ತಿತೆರಿಗೆ ಪಾವತಿ ರಶೀದಿ, ಪಡಿತರ ಚೀಟಿ ಪ್ರತಿ, ಆಧಾರ್‌ಕಾರ್ಡ್ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಪೌರಾಯುಕ್ತರು, ನಗರಸಭೆ, ಉಡುಪಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.