Category: Gangolli

  • ಗಂಗೊಳ್ಳಿ: ತಕೀಯ ಮೊಹಲ್ಲಾದಲ್ಲಿ ದಾರಿ ದೀಪ ಅಳವಡಿಕೆ

    ಗಂಗೊಳ್ಳಿ, ಜುಲೈ 10, 2025: ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 2ನೇ ವಾರ್ಡ್‌ನ ತಕೀಯ ಮೊಹಲ್ಲಾದಲ್ಲಿ ವಾರ್ಡ್ ಸದಸ್ಯರ ಅನುದಾನದ ಮೂಲಕ ದಾರಿ ದೀಪಗಳ ಅಳವಡಿಸಲಾಯಿತು.

    ಇದರಿಂದ ಸ್ಥಳೀಯ ನಿವಾಸಿಗಳಿಗೆ ರಾತ್ರಿ ಸಮಯದಲ್ಲಿ ಸುರಕ್ಷತೆ ಮತ್ತು ಸೌಲಭ್ಯ ಹೆಚ್ಚಾಗಲಿದೆ.

  • ಗಂಗೊಳ್ಳಿ ರೋಟರಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮ

    ಗಂಗೊಳ್ಳಿ, ಜುಲೈ 8, 2025: ರೋಟರಿ ಕ್ಲಬ್ ಒಂದು ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, ವಿಶ್ವದಾದ್ಯಂತ ಸೇವೆ ಸಲ್ಲಿಸುತ್ತಿವೆ ಮತ್ತು ಸಮಾಜಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡುತ್ತಿವೆ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವುದು ಹಾಗೂ ಸ್ಥಳೀಯ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುವುದು ಮತ್ತು ಜೀವನವನ್ನು ಸುಧಾರಿಸುವುದು ರೋಟರಿ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ ಎಂದು ರೋಟರಿ ಜಿಲ್ಲೆ 3182 ವಲಯ-9ರ ಮಾಜಿ ಅಸಿಸ್ಟೆಂಟ್ ಗವರ್ನರ್ ನವೀನ್ ಅಮೀನ್ ಶಂಕರಪುರ ಹೇಳಿದರು.

    ಅವರು ಬಸ್ರೂರು ಆನಗಳ್ಳಿಯ ಆದಿತ್ಯ ಶೋರ್ ರೆಸಾರ್ಟ್‌ನಲ್ಲಿ ರೋಟರಿ ಕ್ಲಬ್ ಗಂಗೊಳ್ಳಿಯ 2025-26ನೇ ಸಾಲಿನ ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

    ರೋಟರಿ ಜಿಲ್ಲೆ 3182 ವಲಯ-1ರ ಅಸಿಸ್ಟೆಂಟ್ ಗವರ್ನರ್ ಐ. ನಾರಾಯಣ ಶುಭ ಹಾರೈಸಿದರು.

    ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷೆ ಚಂದ್ರಕಲಾ ತಾಂಡೇಲ ಅವರು ನೂತನ ಅಧ್ಯಕ್ಷ ಕೃಷ್ಣ ಪೂಜಾರಿ ಅವರಿಗೆ ಹಾಗೂ ಕಾರ್ಯದರ್ಶಿ ಮಾಲಾಶ್ರೀ ಖಾರ್ವಿ ಅವರು ನೂತನ ಕಾರ್ಯದರ್ಶಿ ರಾಮನಾಥ ಚಿತ್ತಾಲ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

    ನೂತನ ಅಧ್ಯಕ್ಷ ಕೃಷ್ಣ ಪೂಜಾರಿ ಅವರು ಗಂಗೊಳ್ಳಿ ರೋಟರಿಯ 2025-26ನೇ ಸಾಲಿನ ಪದಾಧಿಕಾರಿಗಳನ್ನು ಪರಿಚಯಿಸಿದರು.

    ಇದೇ ಸಂದರ್ಭ ಎಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸ.ವಿ. ಪದವಿಪೂರ್ವ ಕಾಲೇಜಿನ ಮಧ್ಯಾಹ್ನದೂಟ ಯೋಜನೆಗೆ ಹಾಗೂ ರಥಬೀದಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾಹನ ವ್ಯವಸ್ಥೆಗೆ ಸಹಾಯಧನ ನೀಡಲಾಯಿತು.

    ಅಧ್ಯಕ್ಷೆ ಚಂದ್ರಕಲಾ ಎಸ್.ತಾಂಡೇಲ್ ಸ್ವಾಗತಿಸಿದರು. ಕಾರ್ಯದರ್ಶಿ ಮಾಲಾಶ್ರೀ ಖಾರ್ವಿ ವರದಿ ವಾಚಿಸಿದರು. ಸದಸ್ಯರಾದ ಉಮೇಶ ಮೇಸ್ತ ಮತ್ತು ಸುಗುಣ ಆರ್.ಕೆ. ಅತಿಥಿಗಳನ್ನು ಪರಿಚಯಿಸಿದರು. ಕೆ.ರಾಮನಾಥ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ರಾಮನಾಥ ಚಿತ್ತಾಲ್ ವಂದಿಸಿದರು.

  • ಗುಜ್ಜಾಡಿ ಗ್ರಾಮ ಪಂಚಾಯತ್ ಎದುರು ಕಂಚುಗೋಡು ಗ್ರಾಮಸ್ಥರ ಪ್ರತಿಭಟನೆ

    ಗಂಗೊಳ್ಳಿ, ಜುಲೈ 7, 2025: ಗುಜ್ಜಾಡಿ ಕಂಚುಗೋಡಿನ ಗ್ರಾಮಸ್ಥರಿಗೆ ಕಂಚುಗೋಡು ಸನ್ಯಾಸಿಬಲ್ಲೆ ಬಳಿ ಸ್ಮಶಾನಕ್ಕೆ ಹೋಗಲು ಅನೇಕ ವರ್ಷಗಳಿಂದ ಇದ್ದ ರಸ್ತೆಗೆ ಖಾಸಗಿ ವ್ಯಕ್ತಿ ತಡೆಗೋಡೆ ನಿರ್ಮಿಸಿದ್ದು ತಡೆಗೋಡೆಯನ್ನು ತೆರವು ಮಾಡಬೇಕೆಂದು ಜು.7 ರಂದು ಗುಜ್ಜಾಡಿ ಗ್ರಾಮ ಪಂಚಾಯತ್ ಎದುರು ಇಡೀ ದಿನ ಇಲ್ಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.

    ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಮುಚ್ಚಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಅಣಕು ಶವವನ್ನು ಕಂಚುಗೋಡಿನಿಂದ ಮೆರವಣಿಗೆಯಲ್ಲಿ ಹೊತ್ತು ತಂದು ಪಂಚಾಯತ್ ಎದುರು ಇರಿಸಿಕೊಂಡು ಪ್ರತಿಭಟನೆ ನಡೆಸಿದರು. ‘ಗುಜ್ಜಾಡಿ ಗ್ರಾಮ ಪಂಚಾಯತ್ ಕಣ್ಣಿದ್ದು ಕುರುಡಾಗಿದೆ’, ‘ಪ್ರತಿನಿಧಿಗಳು ಎಂಜಲು ಕಾಸಿಗೆ ಕೈ ಚಾಚಿದ್ದಾರೆ’, ‘ಮುಕ್ತಿಧಾಮಕ್ಕೆ ಬೇಕಿದೆ ಸಂಪರ್ಕ ರಸ್ತೆ’ ಎಂಬಿತ್ಯಾದಿ ನಾಮಫಲಕಗಳನ್ನು ಹಿಡಿದುಕೊಂಡು ಪಂಚಾಯತ್ ಎದುರು ಅಣಕು ಶವದ ಮೆರವಣಿಗೆ ಬಂದು ಪ್ರತಿಭಟನೆ ನಡೆಸಿದರೂ ಗ್ರಾಮ ಪಂಚಾಯತ್ ಅಧ್ಯಕ್ಷರಾಗಲಿ, ಉಪಾಧ್ಯಕ್ಷರಾಗಲಿ ಯಾವುದೇ ಸದಸ್ಯರಾಗಲಿ ೪ ಗಂಟೆಯವರೆಗೂ ಪಂಚಾಯತ್‌ಗೆ ಆಗಮಿಸದೆ ಉಳಿದರು. ರೆವಿನ್ಯೂ ಇನ್ಸಪೆಕ್ಟರ್ ಆಗಮಿಸಿ ಮನವೊಲಿಸಲು ಯತ್ನಿಸಿದಾಗ ಪ್ರತಿಭಟನಾಕಾರರು ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಬರಬೇಕೆಂದು ಪಟ್ಟುಹಿಡಿದರು.

    ಈ ಸಂದರ್ಭ ಪ್ರದೀಪ್ ಖಾರ್ವಿ ಮಾತನಾಡಿ ನೂರಾರು ವರ್ಷಗಳಿಂದ ಇಲ್ಲಿರುವ ದಾರಿಯಲ್ಲಿ ನಾವು ತಿರುಗಾಡಿಕೊಂಡಿದ್ದು ಆ ದಾರಿಯನ್ನು ನಿರ್ಬಂಧಿಸಿ ಎತ್ತರದ ಪಾಗಾರ ನಿರ್ಮಿಸಿದ್ದಾರೆ. ಇಲ್ಲಿರುವ ದುರ್ಗಾಪರಮೇಶ್ವರೀ, ರಾಮನಾಥ ಹಾಗೂ ನಾಗ ದೇವಸ್ಥಾನಗಳಿಗೆ ಹೋಗುವ ದಾರಿ ಬಂದ್ ಮಾಡಿದ್ದಾರೆ. ಅಧಿಕಾರಿಗಳು ಇದನ್ನು ತೆರವು ಮಾಡಬೇಕು. ಅಲ್ಲಿಯೇ ಸ್ಮಶಾನ ಮುಂದುವರಿಯಬೇಕು. ನಮಗೆ ಅಲ್ಲಿಗೆ ಹೋಗಲು ಹಿಂದಿನಂತೆಯೇ ಮಾರ್ಗದ ವ್ಯವಸ್ಥೆ ಆಗಬೇಕು ಎಂದರು.

    ಪಿಡಿಓ ಶ್ರೀಮತಿ ಅನಿತಾ ಪ್ರತಿಭಟನಾ ನಿರತರನ್ನುದ್ದೇಶಿ ಮಾತನಾಡಿ ಕಾನೂನು ಬಾಹಿರ ಎಂದು ತಿಳಿದು ನಾವು ಹಿಂದೆ ಕೊಟ್ಟ ಲೈಸನ್ಸ್‌ನ್ನು ಕ್ಯಾನ್ಸಲ್ ಮಾಡಿದ್ದೇವೆ. ಖಾಸಗಿ ಜಾಗವಾದ್ದರಿಂದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದರು. ಈ ಸಂದರ್ಭ ಹೊಸಾಡು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸುರೇಶ್ ಖಾರ್ವಿ ಮಾತನಾಡಿ ಪಂಚಾಯತ್ ಕಾನೂನಿನಲ್ಲಿ ತೆರವು ಮಾಡಲು ಅವಕಾಶವಿದ್ದರೂ ನೀವು ಆ ಕೆಲಸ ಮಾಡಿಲ್ಲ ಎಂದರು.

    ಸಂಜೆಯವರೆಗೂ ಪ್ರತಿಭಟನೆ ನಡೆಸಿ ಸಂಜೆ ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಆಗಮಿಸಿ ಒಂದು ವಾರದೊಳಗೆ ಸಮಸ್ಯೆ ಇತ್ಯರ್ಥ ಪಡಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.

    ಪ್ರತಿಭಟನೆಯಲ್ಲಿ ಹೊಸಾಡು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಸುರೇಶ್ ಖಾರ್ವಿ, ನಾಗೇಶ್ ಪಟೇಲ್, ಕೃಷ್ಣ ಪಟೇಲ್, ಪ್ರದೀಪ್ ಪಟೇಲ್, ಪ್ರಶಾಂತ್ ಪೂಜಾರಿ, ರಾಘವೇಂದ್ರ ಖಾರ್ವಿ, ವಿನೋದ್ ಖಾರ್ವಿ, ಸಂತೋಷ್ ಪೂಜಾರಿ, ಶರತ್ ಖಾರ್ವಿ, ನಾಗೇಶ್ ಖಾರ್ವಿ, ಅರುಣ್ ಖಾರ್ವಿ, ಮಿಥುನ್ ಪಟೇಲ್, ಸಂದೀಪ್ ಖಾರ್ವಿ, ಜಗದೀಶ್ ಪಟೇಲ್, ರಾಜ ಖಾರ್ವಿ, ಹರೀಶ್ ಪಟೇಲ್, ಮೋಹನ್ ಖಾರ್ವಿ, ಶಂಕರ್ ಪಟೇಲ್, ರಮೇಶ್ ಖಾರ್ವಿ ಹಾಗೂ ಕಂಚುಗೋಡು ಗ್ರಾಮಸ್ಥರು ಭಾಗವಹಿಸಿದ್ದರು.

  • ಗಂಗೊಳ್ಳಿ: ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ!

    ಗಂಗೊಳ್ಳಿ, ಜುಲೈ 7, 2025: ಯುವಕನೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೇನಾಪುರ ರೈಲು ನಿಲ್ದಾಣ ಸಮೀಪದ ನಾಡ ಗ್ರಾಮದ ನಾಡ ಗುಡ್ಡೆಯಂಗಡಿ ಬಳಿಯ ರೈಲು ಹಳಿಯಲ್ಲಿ ನಡೆದಿದೆ.

    ರಾಮನಗರ ನಿವಾಸಿ ಶಶಾಂಕ್ ಭಂಡಾರಿ (29) ಆತ್ಮಹತ್ಯೆ ಮಾಡಿಕೊಂಡಿದ್ದು,ನಿಖರ ಕಾರಣ ತಿಳಿದುಬಂದಿಲ್ಲ.

    ಖಾಸಗಿ ಕಂಪೆನಿಯಲ್ಲಿ ವರ್ಕ್ ಫ್ರಂ ಹೋಂ ಕೆಲಸ ಮಾಡುತ್ತಿದ್ದ ಶಶಾಂಕ್ ಶನಿವಾರ ಮನೆಯಿಂದ ಹೋದವರು ನಾಪತ್ತೆಯಾಗಿದ್ದರು. ಇದೀಗ ಶವವಾಗಿ ಪತ್ತೆಯಾಗಿದ್ದು ಗಂಗೊಳ್ಳಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಬಾಲ ಪ್ರತಿಭೆ ಸಂಜಿತ್ ಎಂ. ದೇವಾಡಿಗ ಅವರಿಗೆ ಸನ್ಮಾನ

    ಕುಂದಾಪುರ: ಉಡುಪಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಡುಪಿ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ ಉಡುಪಿ ವಲಯ ಇವರ ಸಹಯೋಗದಲ್ಲಿ ಇತ್ತೀಚೆಗೆ ಹಿರಿಯಡ್ಕದಲ್ಲಿ ನಡೆದ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಕಾರ್ಯಗಾರ 2025 ರಲ್ಲಿ ಗಂಗೊಳ್ಳಿಯ ಸಾಕ್ಸೋಫೋನ್ ಮತ್ತು ಚಿತ್ರಕಲಾ ಬಾಲ ಪ್ರತಿಭೆ ಸಂಜಿತ್ ಎಮ್. ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.

    ಈ ಸಂದರ್ಭದಲ್ಲಿ ಜಮ್ಮು-ಕಾಶ್ಮೀರ ಸರಕಾರದ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಪ್ರಸಾದ್, ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಮಂಜುನಾಥ ಭಟ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಲೋಕೇಶ್ ಸಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಅಶೋಕ್ ಕಾಮತ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಯಲ್ಲಮ್ಮ ಕೃಷಿ ಅರ್ಥಶಾಸ್ತ್ರಜ್ಞರಾದ ಎನ್. ಎಸ್. ಶೆಟ್ಟಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ಯೋಗ ನರಸಿಂಹ ಸ್ವಾಮಿ ಕೆ. ಎಂ., ಶಾಲಾ ಶಿಕ್ಷಣ ಇಲಾಖೆಯ ನಾಗರಾಜ್, ಎಸ್‌ಡಿಎಂಸಿ ಉಪಾಧ್ಯಕ್ಷರಾದ ಬಿಎಲ್ ವಿಶ್ವಾಸ ಭಟ್, ಉಪ ಪ್ರಾಂಶುಪಾಲ ಪ್ರಕಾಶ್ ಪ್ರಭು, ತಾಲೂಕು ಚಿತ್ರಕಲಾ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಬಿ. ಪಿ., ಹಾಗೂ ಉಡುಪಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮೋಹನ್ ಕಡಬ ಮೊದಲಾದವರು ಉಪಸ್ಥಿತರಿದ್ದರು.

    ಈತ ಗಂಗೊಳ್ಳಿಯ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಅವರು ಗಂಗೊಳ್ಳಿಯ ಚಿತ್ರಕಲಾ ಶಿಕ್ಷಕ ಹಾಗೂ ಸ್ಯಾಕ್ಸೋಫೋನ್ ಕಲಾವಿದ ಮಾಧವ ಎಮ್. ದೇವಾಡಿಗ ಮತ್ತು ಗಣಿತಶಾಸ್ತ್ರ ಉಪನ್ಯಾಸಕಿ ಸಾವಿತ್ರಿ ಎಸ್. ದಂಪತಿ ಪುತ್ರ.

  • ಮೇಲ್‌ ಗಂಗೊಳ್ಳಿಯ ಸ.ಕಿ.ಪ್ರಾ ಶಾಲೆಯ ವಿದ್ಯಾರ್ಥಿ ಸಂಸತ್‌ ಪದಗ್ರಹಣ ಕಾರ್ಯಕ್ರಮ

    ಗಂಗೊಳ್ಳಿ: ಮೇಲ್‌ ಗಂಗೊಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 2025-26ನೇ ಸಾಲಿನ ವಿದ್ಯಾರ್ಥಿ ಸಂಸತ್ ಪದಗ್ರಹಣ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.

    ಶಾಲೆಯ ಮುಖ್ಯ ಶಿಕ್ಷಕ ಗುರುರಾಜ್ ಆಚಾರ್ಯ ಅವರು ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿ ಶುಭ ಹಾರೈಸಿದರು. ವಿದ್ಯಾರ್ಥಿ ನಾಯಕಿ ರಶ್ಮಿತಾ ಅನಿಸಿಕೆ ಹಂಚಿಕೊಂಡರು.

    ಈ ಸಂದರ್ಭದಲ್ಲಿ ಸಹ ಶಿಕ್ಷಕ ಯೋಗೀಶ್, ಎಸ್‌ಡಿಎಂಸಿ ಅಧ್ಯಕ್ಷೆ ಸವಿತಾ ಖಾರ್ವಿ, ಅಡುಗೆ ಸಹಾಯಕಿ ಶಕುಂತಲಾ ಖಾರ್ವಿ, ಜ್ಯೋತಿ ಆನಂದ ಇನ್ನಿತರರು ಉಪಸ್ಥಿತರಿದ್ದರು.

    ಕಾರ್ಯಕ್ರಮವನ್ನು ಶಿಕ್ಷಣ ಮಂತ್ರಿ ಸಾನ್ವಿ ನಿರೂಪಿಸಿ, ಉಪ ಮುಖ್ಯಮಂತ್ರಿ ಇರ್ಷಾದ್ ಸ್ವಾಗತಿಸಿ, ಸಾಂಸ್ಕೃತಿಕ ಮಂತ್ರಿ ಅನ್ವಿತಾ ವಂದಿಸಿದರು.

  • ದಕ್ಷಿಣ ಕನ್ನಡ, ಉಡುಪಿಯ 21,000ಕ್ಕೂ ಹೆಚ್ಚು ರೇಷನ್ ಕಾರ್ಡ್‌ದಾರರಿಂದ ಇ-ಕೆವೈಸಿ ಬಾಕಿ

    ಉಡುಪಿ, ಜುಲೈ 6, 2025: ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್‌ದಾರರಿಗೆ ಇ-ಕೆವೈಸಿ ಪೂರ್ಣಗೊಳಿಸಲು ಸರ್ಕಾರ ನಿಗದಿಪಡಿಸಿದ ಗಡುವು ಮುಕ್ತಾಯಗೊಂಡಿದೆ. ಇ-ಕೆವೈಸಿ ಮಾಡದವರಿಗೆ ರೇಷನ್ ಸರಬರಾಜು ನಿಲ್ಲಿಸುವುದಾಗಿ ಘೋಷಿಸಲಾಗಿತ್ತಾದರೂ, ಮುಂದಿನ ಆದೇಶದವರೆಗೆ ವಿತರಣೆ ಮುಂದುವರಿಯಲಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17,778 ಫಲಾನುಭವಿಗಳು ಮತ್ತು ಉಡುಪಿಯಲ್ಲಿ 3,301 ಜನರು ಇ-ಕೆವೈಸಿ ಪೂರ್ಣಗೊಳಿಸಬೇಕಿದೆ. ದಕ್ಷಿಣ ಕನ್ನಡದಲ್ಲಿ 22,871 ಅಂತ್ಯೋದಯ ಮತ್ತು 2,58,910 ಬಿಪಿಎಲ್ ಕಾರ್ಡ್‌ದಾರರಿದ್ದಾರೆ. ಉಡುಪಿಯಲ್ಲಿ 1,98,265 ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‌ದಾರರಿದ್ದಾರೆ. ಜೊತೆಗೆ, 673 ಅನರ್ಹ ಕಾರ್ಡ್‌ಗಳನ್ನು ಗುರುತಿಸಲಾಗಿದೆ.

    ಫಲಾನುಭವಿಗಳು ರೇಷನ್ ಅಂಗಡಿಗಳಲ್ಲಿ ಉಚಿತವಾಗಿ ಇ-ಕೆವೈಸಿ ಮಾಡಬಹುದು. ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲೂ ಈ ಸೇವೆ ಲಭ್ಯವಿದೆ.

    ಬಂಟ್ವಾಳ ತಾಲೂಕಿನಲ್ಲಿ 4,552 ಇ-ಕೆವೈಸಿ ನೋಂದಣಿ ಬಾಕಿಯಿದ್ದು, ಉಡುಪಿಯ ಬೈಂದೂರು ತಾಲೂಕಿನಲ್ಲಿ 2,242 ನೋಂದಣಿಗಳು ಬಾಕಿಯಿವೆ. ಸುಳ್ಯದಲ್ಲಿ 78 ಮತ್ತು ಕುಂದಾಪುರದಲ್ಲಿ 28 ನೋಂದಣಿಗಳು ಬಾಕಿಯಿವೆ. ಕೆಲವರು ಕೆಲಸ ಅಥವಾ ಇತರ ಕಾರಣಗಳಿಂದ ಜಿಲ್ಲೆ/ರಾಜ್ಯದಿಂದ ಹೊರಗಿರುವುದರಿಂದ ಇ-ಕೆವೈಸಿ ಮಾಡಿಲ್ಲ. ಸಮೀಪದ ರೇಷನ್ ಅಂಗಡಿಗಳಲ್ಲಿ ದಾಖಲೆ ಸಲ್ಲಿಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.

    10,128 ಜನರು, ಒಳಗೊಂಡಂತೆ ಹಾಸಿಗೆಯಲ್ಲಿರುವ ರೋಗಿಗಳು ಮತ್ತು ಬಯೋಮೆಟ್ರಿಕ್ ಪರಿಶೀಲನೆಗೆ ಆಗದವರು, ವಿನಾಯಿತಿ ಕೋರಿದ್ದಾರೆ. ಇವರಿಗೆ ಇಲಾಖೆಯಿಂದ ವಿನಾಯಿತಿ ಪತ್ರಗಳನ್ನು ನೀಡಲಾಗಿದೆ. ಅವರು ಹಂತಹಂತವಾಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರೇಷನ್ ಕಾರ್ಡ್‌ನಲ್ಲಿ ದಾಖಲಾದ ಎಲ್ಲಾ ಸದಸ್ಯರು ಇ-ಕೆವೈಸಿ ಮಾಡಿದಾಗ ಮಾತ್ರ ಪ್ರಕ್ರಿಯೆ ಪೂರ್ಣವೆನಿಸಲಿದೆ. ಕುಟುಂಬದ ಯಾವುದೇ ಸದಸ್ಯರು ಮರಣ ಹೊಂದಿದ್ದರೆ, ಅವರ ಹೆಸರನ್ನು ಕಾರ್ಡ್‌ನಿಂದ ಅಧಿಕೃತವಾಗಿ ತೆಗೆಯಬೇಕು.

    ಗಡುವು ಮುಗಿದಿದ್ದರೂ, ವಿಸ್ತರಣೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆರೋಗ್ಯ ಕಾರಣಗಳಿಂದ ಬೆರಳಚ್ಚು ನೀಡಲಾಗದವರು ರೇಷನ್ ಅಂಗಡಿಗಳಲ್ಲಿ ಕಣ್ಣಿನ ಸ್ಕ್ಯಾನ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದು. ದಕ್ಷಿಣ ಕನ್ನಡದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಈ ಸೇವೆ ಉಚಿತವಾಗಿದೆ ಎಂದು ಪುನರುಚ್ಚರಿಸಿದೆ.

  • ಗಂಗೊಳ್ಳಿ: ಸ್ಟೆಲ್ಲಾ ಮಾರಿಸ್ ಕನ್ನಡ ಮಾಧ್ಯಮ ಹಳೆ ವಿದ್ಯಾರ್ಥಿಗಳ ಸಂಘದ ನೂತನ ಅಧ್ಯಕ್ಷೆ, ಉಪಾಧ್ಯಕ್ಷ ಆಯ್ಕೆ

    ಗಂಗೊಳ್ಳಿ: ಸ್ಟೆಲ್ಲಾ ಮಾರಿಸ್ ಕನ್ನಡ ಮಾಧ್ಯಮ ಹಳೆ ವಿದ್ಯಾರ್ಥಿಗಳ ಸಂಘ, ಗಂಗೊಳ್ಳಿಯ ನೂತನ ಅಧ್ಯಕ್ಷೆಯಾಗಿ ಫಿಲೋಮಿನಾ ಫೆರ್ನಾಂಡಿಸ್ ಹಾಗೂ ಉಪಾಧ್ಯಕ್ಷರಾಗಿ ಝಹೀರ್ ಅಹ್ಮದ್ ನಾಖುದಾ ಆಯ್ಕೆಯಾಗಿದ್ದಾರೆ.

    ಹಳೆ ವಿದ್ಯಾರ್ಥಿಗಳ ಸಂಘವು ಅವರಿಬ್ಬರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದೆ.

    ಸ್ಟೆಲ್ಲಾ ಮಾರಿಸ್ ಶಾಲೆಯ ಇತಿಹಾಸದ ಮುಖ್ಯಾಂಶಗಳು:

    • ಸ್ಥಾಪನೆ: ಸ್ಟೆಲ್ಲಾ ಮಾರಿಸ್ ಗರ್ಲ್ಸ್ ಹೈಸ್ಕೂಲ್ 13 ಜೂನ್ 1966ರಂದು 21 ವಿದ್ಯಾರ್ಥಿನಿಯರೊಂದಿಗೆ ಆರಂಭ.
    • ಉದ್ದೇಶ: ಗಂಗೊಳ್ಳಿಯ ಮೀನುಗಾರಿಕೆ ಆಧಾರಿತ ಗ್ರಾಮದಲ್ಲಿ, ವಿಶೇಷವಾಗಿ ಬಡತನದ ಹಿನ್ನೆಲೆಯ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಒದಗಿಸುವ ಗುರಿ.
    • ಪ್ರಗತಿ: 1967ರಲ್ಲಿ “ಕೃಪಾ ಗ್ರಹ” ಬೋರ್ಡಿಂಗ್ ಹೌಸ್ ಆರಂಭ; 1968ರಲ್ಲಿ ಸೇಂಟ್ ಜೋಸೆಫ್‌ನ ಹಿರಿಯ ಪ್ರಾಥಮಿಕ ಶಾಲೆ ಸ್ಥಾಪನೆ; 1984ರಲ್ಲಿ ಬಾಲಕರಿಗೂ ಪ್ರವೇಶ.
    • ಗೋಲ್ಡನ್ ಜುಬಿಲಿ: 2016ರ ಡಿಸೆಂಬರ್ 17-18ರಂದು ಶಾಲೆಯ 50ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
  • ಗಂಗೊಳ್ಳಿ: ರೈಲ್ವೆ ಸೇತುವೆ ಬಳಿ ಅಪರಿಚಿತ ಯುವಕನ ಜರ್ಜರಿತ ಶವ ಪತ್ತೆ

    ಗಂಗೊಳ್ಳಿ, ಜುಲೈ 5, 2025: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸೇನಾಪುರ ರೈಲ್ವೆ ನಿಲ್ದಾಣದ ಸಮೀಪದ ಗುಡ್ಡೆ ಅಂಗಡಿ ರೈಲ್ವೆ ಮೇಲ್ ಸೇತುವೆಯ ಕೆಳಬಾಗದಲ್ಲಿ 30 ರಿಂದ 35 ವರ್ಷ ವಯಸ್ಸಿನ ಅಪರಿಚಿತ ಯುವಕನ ಜರ್ಜರಿತ ಶವವು ಶನಿವಾರ ಪತ್ತೆಯಾಗಿದೆ.

    ಘಟನಾ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಮತ್ತು ಗಂಗೊಳ್ಳಿ ಪೊಲೀಸ್ ಠಾಣಾ ಸಿಬ್ಬಂದಿಗಳು ಆಗಮಿಸಿ ಕಾನೂನು ಪ್ರಕ್ರಿಯೆ ನಡೆಸಿದ್ದಾರೆ. ಗಂಗೊಳ್ಳಿ 24×7 ಆಂಬುಲೆನ್ಸ್ ನಿರ್ವಾಹಕ ಮೊಹಮ್ಮದ್ ಇಬ್ರಾಹಿಂ ಗಂಗೊಳ್ಳಿ, ಸ್ವಯಂಸೇವಕ ವಿಕಾಸ್ ಮೊಗವೀರ ನಾಯಕವಾಡಿ, ಸ್ಥಳೀಯ ಯುವಕರಾದ ಭರತ ಗಾಣಿಗ, ಪಂಕಜ ದೇವಾಡಿಗ, ಪೊಲೀಸ್ ಇಲಾಖೆಯ ಎಎಸ್‌ಐ ಆನಂದ, ಹೆಡ್ ಕಾನ್ಸ್ಟೇಬಲ್ ಶಾಂತರಾಮ್ ಶೆಟ್ಟಿ ಮತ್ತು ಶರಣಪ್ಪ ಕೂಡಲ ಸೇರಿದಂತೆ ಹಲವರು ಶವವನ್ನು ಘಟನಾ ಸ್ಥಳದಿಂದ ಆಂಬುಲೆನ್ಸ್‌ಗೆ ಸಾಗಿಸಲು ಸಹಾಯ ಮಾಡಿದ್ದಾರೆ.

    ಶವವು ಗುರುತು ಹಿಡಿಯಲಾರದಷ್ಟು ಜರ್ಜರಿತವಾಗಿದ್ದು, ಯಾವುದೇ ಹೆಸರು, ವಿಳಾಸ ಅಥವಾ ಕುರುಹುಗಳು ದೊರೆಯದ ಕಾರಣ, ಮೃತನ ಪಾರ್ಥಿವ ಶರೀರವನ್ನು ವಾರಸುದಾರರ ಪತ್ತೆಗಾಗಿ ಕುಂದಾಪುರದ ಶೀತಲೀಕರಣ ಘಟಕದಲ್ಲಿ ಇರಿಸಲಾಗಿದೆ. ಮೃತನ ಸಂಬಂಧಿಕರು ಯಾರಾದರೂ ಇದ್ದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಕೋರಿದ್ದಾರೆ.

  • ತ್ರಾಸಿ-ಮರವಂತೆ ಬೀಚ್‌ನಲ್ಲಿ ಸುರಕ್ಷತೆ: ಕರಾವಳಿ ಠಾಣೆ ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಚರ್ಚೆ

    ಗಂಗೊಳ್ಳಿ: ತ್ರಾಸಿ-ಮರವಂತೆ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆ ಕುರಿತಂತೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಗಂಗೊಳ್ಳಿ ಕರಾವಳಿ ಪೊಲೀಸ್ ಠಾಣೆ ಮತ್ತು ಉಡುಪಿ ಜಿಲ್ಲೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತ್ರಾಸಿ-ಮರವಂತೆ ಬೀಚ್‌ನಲ್ಲಿ ಮಂಗಳವಾರ ಚರ್ಚೆ ನಡೆಸಿದರು.

    ಗಂಗೊಳ್ಳಿ ಕರಾವಳಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ವಸಂತ ರಾಮ್ ಆಚಾರ್ ಮಾರ್ಗದರ್ಶನದಲ್ಲಿ ಠಾಣೆಯ ಪಿ‌ಎಸೈ ಮುಕ್ತ ಬಾಯಿ, ಎ‌ಎಸ್ಸೈ ಸಂತೋಷ್ ಕುಂದರ್ ಮತ್ತು ರಾಘವೇಂದ್ರ ದೇವಾಡಿಗ ಅವರು ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆ ಕುರಿತಂತೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ನಿದೀಶ್ ಜೊತೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ದಳ, ಪ್ರವಾಸಿ ಮಿತ್ರ ಮತ್ತು ಲೈಪ್ ಗಾರ್ಡ್‌ಗಳನ್ನು ನಿಯೋಜಿಸುವ ಕುರಿತು ಚರ್ಚೆ ನಡೆಸಲಾಯಿತು.