Category: Crime

  • ಕೆನರಾ ಬ್ಯಾಂಕ್‌ ನಲ್ಲಿ ಕಳ್ಳತನ: 53.31 ಕೋಟಿ ರೂ ಮೌಲ್ಯದ ಚಿನ್ನಾಭರಣ ಕಳವು..!

    ವಿಜಯಪುರ: ಕೆನರಾ ಬ್ಯಾಂಕ್‌ ನ ಸೇಫ್‌ ಲಾಕರ್‌ ಗೆ ಕನ್ನ ಹಾಕಿ ಸುಮಾರು 53.31 ಕೋಟಿ ರೂ ಮೌಲ್ಯದ ಚಿನ್ನಾಭರಣ ಮತ್ತು 5.20 ಲಕ್ಷ ರೂ. ನಗದು ಕಳ್ಳತನ ಮಾಡಿರುವ ಘಟನೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಶಾಖೆಯಲ್ಲಿ ಮೇ.24ರ ಶನಿವಾರದಂದು ನಡೆದಿದೆ.
    ಮೇ. ತಿಂಗಳಿನ ನಾಲ್ಕನೇ ವಾರದಲ್ಲಿ ಈ ಕಳ್ಳತನ ನಡೆದಿದ್ದು, ಈ ಬಗ್ಗೆ ಮೇ.26ರಂದು ಬ್ಯಾಂಕ್‌ ನ ಹಿರಿಯ ಮ್ಯಾನೇಜರ್‌ ದೂರು ದಾಖಲಿಸಿದ್ದರು. ತನಿಖೆಗೆ ಎಂಟು ಪೊಲೀಸ್‌ ತಂಡಗಳನ್ನು ರಚಿಸಲಾಗಿದ್ದು, ಕಳ್ಳತನ ನಡೆದ ಬಳಿಕ ಕಳವಾದ ಚಿನ್ನಾಭರಣ ಹಾಗೂ ನಗದಿನ ಅಂಕಿ-ಅಂಶಗಳ ಮೊತ್ತವನ್ನು ಪೊಲೀಸ್‌ ಇಲಾಖೆ ಸೋಮವಾರ ಬಹಿರಂಗ ಪಡಿಸಿದ್ದಾರೆ.

  • ಕಾಪು: ಫೇಸ್‌ಬುಕ್ ಮೂಲಕ ವಂಚನೆ – 75 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

    ಕಾಪು, 27 ಮೇ 2025: ತಾಲೂಕಿನ ಶಂಕರಪುರದ ಜೊಸ್ಸಿ ಡಿಕ್ರೂಸ್ (54) ಎಂಬವರು ಫೇಸ್‌ಬುಕ್ ಮೂಲಕ ಆಗಿರುವ ವಂಚನೆಯಿಂದ 75 ಲಕ್ಷ ರೂಪಾಯಿ ಕಳೆದುಕೊಂಡ ಘಟನೆಯೊಂದು ನಡೆದಿದೆ.

    ಫಿರ್ಯಾದಿದಾರರಾದ ಜೊಸ್ಸಿ ಡಿಕ್ರೂಸ್, ವಿದೇಶದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದವರು, ಆರೋಗ್ಯದ ಕಾರಣದಿಂದ ಎರಡು ವರ್ಷಗಳ ಹಿಂದೆ ಊರಿಗೆ ಮರಳಿದ್ದರು. 2025ರ ಫೆಬ್ರವರಿಯಲ್ಲಿ ಫೇಸ್‌ಬುಕ್ ಮೂಲಕ ಅರೋಹಿ ಅಗರ್‌ವಾಲ್ ಎಂಬ ಮಹಿಳೆಯ ಪರಿಚಯವಾಗಿತ್ತು. ಆಕೆಯಿಂದ ವಾಟ್ಸಾಪ್ ಸಂಖ್ಯೆ ಪಡೆದ ಫಿರ್ಯಾದಿದಾರರು ಚಾಟ್ ಮಾಡುತ್ತಿದ್ದಾಗ, FXCM ಗೋಲ್ಡ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಭಾರೀ ಲಾಭಾಂಶ ದೊರೆಯುತ್ತದೆ ಎಂದು ಆಕೆ ಸಂದೇಶ ಕಳುಹಿಸಿದ್ದಳು.

    ಈ ಮಾತನ್ನು ನಂಬಿದ ಜೊಸ್ಸಿ, ತಮ್ಮ ಶಂಕರಪುರದ ಕೆನರಾ ಬ್ಯಾಂಕ್ ಖಾತೆಯಿಂದ 09/04/2025 ರಿಂದ 12/05/2025ರವರೆಗೆ ಹಂತಹಂತವಾಗಿ ಒಟ್ಟು 75,00,000 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ, ಅಪರಿಚಿತ ವ್ಯಕ್ತಿಗಳು ಫಿರ್ಯಾದಿದಾರರ ಹೂಡಿಕೆಯ ಹಣವನ್ನಾಗಲೀ ಅಥವಾ ಲಾಭಾಂಶವನ್ನಾಗಲೀ ನೀಡದೇ ವಂಚಿಸಿದ್ದಾರೆ.

    ಈ ಬಗ್ಗೆ ಉಡುಪಿ ಸೆನ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ಕ್ರಮಾಂಕ 21/2025ರಡಿ ಕಲಂ 66(ಸಿ), 66(ಡಿ) ಐ.ಟಿ. ಆಕ್ಟ್ ಮತ್ತು 318(4) ಬಿಎನ್‌ಎಸ್‌ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  • ಅಮಾಯಕ ಮುಸ್ಲಿಂ ಯುವಕನ ಬಾಡಿಗೆಗೆ ಕರೆಸಿ ವಂಚನೆ ಮೂಲಕ ಹತ್ಯೆ, ಜಿಲ್ಲೆ ಯಾದ್ಯಂತ ತೀವ್ರ ಆಕ್ರೋಶ.. ನಾಳೆ ಬಂದ್ ಗೆ ಕರೆ ಸಾಧ್ಯತೆ?

    ಬಂಟ್ವಾಳ :ಅಮಾಯಕ ಮುಸ್ಲಿಂ ಯುವಕನ ಬಾಡಿಗೆಗೆ ಕರೆಸಿ ವಂಚನೆ ಮೂಲಕ ಹತ್ಯೆನಡೆದಿದ್ದು, ಜಿಲ್ಲೆ ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ನಾಳೆ ಮುಸ್ಲಿಂ ಸಂಘಟನೆ ಗಳು ಬಂದ್ ಗೆ ಕರೆ ನೀಡುವ ಸಾಧ್ಯತೆಇದೆ ಎನ್ನಲಾಗುತಿದೆ

    ಘಟನೆ ನಡೆದ ತಕ್ಷಣ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆ ಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿರುವ ಖಲಂದರ್ ಶಾಫಿಯ ಆರೋಗ್ಯ ವಿಚಾರಿಸಲು ಬಂದ ಮುಸ್ಲಿಂ ಮುಖಂಡರನ್ನು ಯುವಕರು ಅಡ್ಡ ಗಟ್ಟಿ ತರಾಟೆಗೆ ತೆಗೆದ ಪ್ರಸಂಗ ನಡೆಯಿತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದು ಮುಸ್ಲಿಂ ಸಮುದಾಯಕ್ಕೆ ರಕ್ಷಣೆ ಇಲ್ಲದಂತಾಗಿದೆ ಮೊನ್ನೆ ನಡೆದ ಹಿಂದೂ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದವರ ವಿರುದ್ಧ ಕ್ರಮ ಜಿಲ್ಲಾ ಆಡಳಿತ ಕೈಗೊಂಡಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಿರಲಿಲ್ಲ ಎಂದು ನಾಯಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದರು ಸಮುದಾಯಕ್ಕೆ ನಿಮ್ಮ ನಾಯಕತ್ವದ ಅವಶ್ಯಕತೆ ಇಲ್ಲ ಎಂದು ಈ ಸಂದರ್ಭದಲ್ಲಿ ಗುಡುಗಿದರು.

  • ಮಂಗಳೂರು: ಖಾಸಗಿ ಏಜೆನ್ಸಿಯಿಂದ ವಂಚನೆ; ಹಣ ಮರುಪಾವತಿಗೆ ಒತ್ತಾಯ

    ಮಂಗಳೂರು, ಮೇ 25, 2025: ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ನೇಮಕಾತಿ ಸಂಸ್ಥೆ “ದಿ ಲೆಜೆಂಡ್” ನಿಂದ ವಂಚಿತರಾದ ಹಲವಾರು ಬಲಿಪಶುಗಳು, ವಿದೇಶದಲ್ಲಿ ಉದ್ಯೋಗದ ಭರವಸೆಯಡಿಯಲ್ಲಿ ಪಾವತಿಸಿದ ಹಣದ ಮರುಪಾವತಿಗೆ ಒತ್ತಾಯಿಸಿದ್ದಾರೆ. ಆದರೆ ಭರವಸೆ ನೀಡಿದ ಉದ್ಯೋಗಗಳು ಈವರೆಗೆ ಒದಗಿಬಂದಿಲ್ಲ.

    ಶನಿವಾರದಂದು ಪತ್ರಕರ್ತರೊಂದಿಗೆ ಮಾತನಾಡಿದ ಲೀನಾ ಫೆರ್ನಾಂಡಿಸ್, 2021ರಲ್ಲಿ ತಮ್ಮ ಮಕ್ಕಳಿಗೆ ಸ್ಪೇನ್ ಮತ್ತು ಆಸ್ಟ್ರೇಲಿಯಾದಲ್ಲಿ ಉದ್ಯೋಗದ ಭರವಸೆಗಾಗಿ ತಾವು ಮತ್ತು 29 ಇತರರು ಸಂಸ್ಥೆಗೆ ಹಣ ಪಾವತಿಸಿದ್ದಾಗಿ ತಿಳಿಸಿದರು. “ನಾನು ₹5 ಲಕ್ಷ ಪಾವತಿಸಿದ್ದೆ, ಆದರೆ ಕೇವಲ ₹2 ಲಕ್ಷ ಮಾತ್ರ ಮರಳಿ ಪಡೆದಿದ್ದೇನೆ,” ಎಂದು ಅವರು ಹೇಳಿದರು. 2023ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾದ ವಂಚನೆ ಪ್ರಕರಣದಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದೂ ಅವರು ಸೇರಿಸಿದರು.

    ಮತ್ತೊಬ್ಬ ಬಲಿಪಶು ಕ್ಸೇವಿಯರ್ ಮ್ಯಾಥಿಯಾಸ್, ಆಸ್ಟ್ರೇಲಿಯಾದ ಒಂದು ಫೈನಾನ್ಸ್ ಸಂಸ್ಥೆಯಲ್ಲಿ ಸಂಬಂಧಿಕರಿಗೆ ಉದ್ಯೋಗದ ಭರವಸೆಗಾಗಿ ₹5 ಲಕ್ಷ ಪಾವತಿಸಿದ್ದಾಗಿ ತಿಳಿಸಿದರು, ಆದರೆ ಯಾವುದೇ ಮರುಪಾವತಿಯನ್ನು ಪಡೆದಿಲ್ಲ. ಗಿಲ್ಬರ್ಟ್ ವಾಜ್ ಅವರ ಪುತ್ರಿ, ತನ್ನ ಉಪನ್ಯಾಸಕ ವೃತ್ತಿಯನ್ನು ತೊರೆದು, 2022ರಲ್ಲಿ ₹6 ಲಕ್ಷ ಪಾವತಿಸಿದ್ದರು, ಆದರೆ ಕೇವಲ ₹1 ಲಕ್ಷವನ್ನು ಮಾತ್ರ ಮರಳಿ ಪಡೆದಿದ್ದಾರೆ.

    ಲವೀನಾ ಅರಾನ್ಹಾ ತಮ್ಮ ಮಗನಿಗೆ ಕತಾರ್‌ನಲ್ಲಿ ಉದ್ಯೋಗಕ್ಕಾಗಿ ₹1.3 ಲಕ್ಷ ಪಾವತಿಸಿದ್ದರು, ಆದರೆ ಯಾವುದೇ ಮರುಪಾವತಿಯನ್ನು ಪಡೆದಿಲ್ಲ. ಅನಿತಾ ಫೆರ್ನಾಂಡಿಸ್ 2021ರಲ್ಲಿ ತಮ್ಮ ಪುತ್ರಿಗೆ ನೆದರ್ಲೆಂಡ್ಸ್‌ನಲ್ಲಿ ಉದ್ಯೋಗಕ್ಕಾಗಿ ₹5 ಲಕ್ಷ ಪಾವತಿಸಿದ್ದರು, ಆದರೆ ಯಾವುದೇ ಹಣವನ್ನು ಮರಳಿ ಪಡೆದಿಲ್ಲ.

    ವಿಮಾನಯಾನ ಕ್ಷೇತ್ರದಲ್ಲಿ ಉದ್ಯೋಗಕ್ಕಾಗಿ ₹1.3 ಲಕ್ಷ ಪಾವತಿಸಿದ ಬ್ರಾಂಡನ್ ಪಿಂಟೋ, ವಿದೇಶಿ ನೇಮಕಾತಿ ಸಂಸ್ಥೆಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಪರಿಶೀಲಿಸುವ ಅಗತ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯ ಕೊರತೆಯನ್ನು ಒತ್ತಿ ಹೇಳಿದರು. ಜೊತೆಗೆ, ವಲಸೆ ರಕ್ಷಕರ (ಪ್ರೊಟೆಕ್ಟರ್ ಆಫ್ ಎಮಿಗ್ರಂಟ್ಸ್) ಪಾತ್ರದ ಬಗ್ಗೆಯೂ ಅನೇಕರಿಗೆ ತಿಳಿದಿಲ್ಲ ಎಂದು ತಿಳಿಸಿದರು.

    ಪೊಲೀಸರು, “ದಿ ಲೆಜೆಂಡ್” ಸಂಸ್ಥೆಯ ವಿರುದ್ಧ 2023ರಲ್ಲಿ ವಂಚನೆ ಪ್ರಕರಣ ದಾಖಲಾಗಿದೆ ಎಂದು ದೃಢಪಡಿಸಿದ್ದಾರೆ. ಸಂಸ್ಥೆಯ ಮಾಲೀಕ ಅಲ್ವಿನ್ ಡಿಮೆಲ್ಲೊ ಅವರನ್ನು ಬಂಧಿಸಲಾಗಿದ್ದು, ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆಯು ಇನ್ನೂ ಜಾರಿಯಲ್ಲಿದೆ.

  • ಉಡುಪಿ: ಡ್ರಗ್ ಟ್ರಾಫಿಕಿಂಗ್‌ ಇಬ್ಬರ ಬಂಧನ; ಧಾರವಾಡ ಕೇಂದ್ರ ಕಾರಾಗೃಹಕ್ಕೆ ರವಾನೆ

    ಉಡುಪಿ, ಮೇ 23, 2025: ಮಾದಕ ದ್ರವ್ಯ ವ್ಯಾಪಾರದ ವಿರುದ್ಧ ದೊಡ್ಡ ಕ್ರಮಕ್ಕೆ ಮುಂದಾದ ಉಡುಪಿ ಜಿಲ್ಲಾ ಪೊಲೀಸರು, ನಾರ್ಕೋಟಿಕ್ ವಸ್ತುಗಳ ವಿತರಣೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿಗಳನ್ನು ಕೊಲಾಲಗಿರಿಯ ಕೃಷ್ಣ ಆಚಾರಿ (43) ಮತ್ತು ಕೇಳರಕಲಬೆಟ್ಟುವಿನ ಅಬ್ದುಲ್ ಜಬ್ಟಾರ್ (27) ಎಂದು ಗುರುತಿಸಲಾಗಿದೆ. ಇವರಿಬ್ಬರ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸಸ್ (NDPS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇವರು ಪ್ರಸ್ತುತ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

  • ಬೈಂದೂರು: ಗೋಡೌನ್‌ ನಲ್ಲಿದ್ದ 200 ಚೀಲ ಸಿಪ್ಪೆ ಅಡಿಕೆ ಕಳವು; ಪ್ರಕರಣ ದಾಖಲು

    ಬೈಂದೂರು, ಮೇ 23: ತಾಲೂಕಿನ ಯಡ್ತರೆ ಗ್ರಾಮದ ಹಡಿನಗದ್ದೆ ಎಂಬಲ್ಲಿ ಕೃಷಿ ತೋಟವನ್ನು ಹೊಂದಿರುವ ಮಸೂದ್ ಪಟೇಲ್ ಎಂಬವರ ಗೋಡೌನ್‌ನಿಂದ 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆ ಕಳವಾಗಿರುವ ಘಟನೆ ನಡೆದಿದೆ.

    ಮಸೂದ್ ಪಟೇಲ್ ಅವರು ತಮ್ಮ ತೋಟದಲ್ಲಿ ಅಡಿಕೆ, ತೆಂಗು, ಹಲಸು, ಮಾವು, ರಬ್ಬರ್ ಮತ್ತು ಇತರ ಕೃಷಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ತೋಟ ಮತ್ತು ಗೋಡೌನ್‌ನ ನಿರ್ವಹಣೆಯನ್ನು ಸಂತೋಷ್ ನೋಡಿಕೊಳ್ಳುತ್ತಿದ್ದಾರೆ. ಈ ವರ್ಷದ 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆಯನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಕಟ್ಟಿ, ಕಪ್ಪು ಬಣ್ಣದ ಪ್ಲಾಸ್ಟಿಕ್‌ನಿಂದ ಮುಚ್ಚಿ ಗೋಡೌನ್‌ನಲ್ಲಿ ಇರಿಸಲಾಗಿತ್ತು.

    ದಿನಾಂಕ 15/05/2025 ರಂದು ಸಂತೋಷ್ ತನ್ನ ಊರಾದ ಕಡಬಕ್ಕೆ ತೆರಳಿದ್ದರು. ದಿನಾಂಕ 22/05/2025 ರಂದು ಬೆಳಿಗ್ಗೆ 10 ಗಂಟೆಗೆ ಮಸೂದ್ ಪಟೇಲ್ ಗೋಡೌನ್‌ಗೆ ಭೇಟಿ ನೀಡಿದಾಗ, ಕಬ್ಬಿಣದ ಗ್ರಿಲ್ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದಿರುವುದು ಕಂಡುಬಂದಿತು. ಗೋಡೌನ್‌ನಲ್ಲಿದ್ದ 200 ಚೀಲ ಒಣಗಿಸಿದ ಸಿಪ್ಪೆ ಅಡಿಕೆಯನ್ನು ಯಾರೋ ಕಳ್ಳರು ದಿನಾಂಕ 15/05/2025 ರಿಂದ 22/05/2025 ರ ಬೆಳಿಗ್ಗೆ 10 ಗಂಟೆಯ ನಡುವಿನ ಅವಧಿಯಲ್ಲಿ ಬೀಗ ಮುರಿದು ಕಳವು ಮಾಡಿದ್ದಾರೆ.

    ಈ ಬಗ್ಗೆ ಮಸೂದ್ ಪಟೇಲ್ ನೀಡಿದ ದೂರಿನ ಆಧಾರದ ಮೇಲೆ, ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 106/2025ರಡಿ ಕಲಂ 331(3), 331(4), ಮತ್ತು 305 BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಬ್ರಹ್ಮಾವರ: ಸೈಬರ್ ಕಳ್ಳರಿಂದ 2.84 ಲಕ್ಷ ರೂ. ವಂಚನೆ

    ಬ್ರಹ್ಮಾವರ, ಮೇ 20, 2025: 30 ವರ್ಷದ ಪ್ರಶಾಂತ ಎಂಬವರಿಗೆ ದಿನಾಂಕ 22-11-2024ರಿಂದ 06-12-2024ರ ಮಧ್ಯೆ ಸೈಬರ್ ಅಪರಾಧಿಗಳು RPC ಎಂಬ ಟ್ರೇಡಿಂಗ್ ಲಿಂಕ್ ಮೂಲಕ WhatsApp ಗ್ರೂಪ್‌ನಲ್ಲಿ ವ್ಯವಹಾರ ಆಹ್ವಾನಿಸಿ, ಗೂಗಲ್ ಪೇ ಮೂಲಕ ಕಳುಹಿಸಿದ ಸ್ಕ್ಯಾನ್ ಕೋಡ್‌ಗಳ ಮೂಲಕ ಹಂತಹಂತವಾಗಿ ಒಟ್ಟು 2,84,600 ರೂಪಾಯಿ ಹಣವನ್ನು ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ.

    ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 114/2025, ಕಲಂ 66(C), 66(D) IT Act ರಂತೆ ಪ್ರಕರಣ ದಾಖಲಾಗಿದೆ.

  • ಕೊಲ್ಲೂರು ಮತ್ತು ಕಾಪುವಿನಲ್ಲಿ ಕಳ್ಳತನ: ಇತರೆ ಪ್ರಕರಣಗಳು

    ಕೊಲ್ಲೂರಿನಲ್ಲಿ 80,000 ರೂ. ಮೌಲ್ಯದ ಚಿನ್ನ ಕಳವು

    ಕೊಲ್ಲೂರು, ಮೇ 19, 2025: ಇಡೂರು ಕುಂಜ್ಞಾಡಿ ಗ್ರಾಮದ 60. ವರ್ಷದ ಮಹಿಳೆಯೊಬ್ಬರು ದಿನಾಂಕ 16-05-2025ರ ಸಂಜೆ 4:00 ಗಂಟೆಗೆ ಮನೆಗೆ ಬೀಗ ಹಾಕಿ ತೆರಳಿದ್ದರು. 19-05-2025ರ ಬೆಳಿಗ್ಗೆ 8:30 ಗಂಟೆಗೆ ಮನೆಗೆ ವಾಪಸ್ ಬಂದು ತಪಾಸಿದಾಗ, ಅಡುಗೆ ಕೋಣೆಯ ರೂಮ್‌ನಲ್ಲಿ ಮನೆಯ ಸ್ವತ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು.

    ಗೋದ್ ರೇಜ್‌ನಲ್ಲಿ ಇರಿಸಿದ್ದ 16 ಗ್ರಾಂ ತೂಕದ 2 ಚಿನ್ನದ ಬಳೆಗಳು ಮತ್ತು ದೇವರ ಚಿಲ್ಲರೆ ಹಣ ಕಳವಾಗಿತ್ತು. 16-05-2025ರ ಸಂಜೆ 4:00 ಗಂಟೆಯಿಂದ 19-05-2025ರ ಬೆಳಿಗ್ಗೆ 8:30 ಗಂಟೆಯವರೆಗಿನ ಅವಧಿಯಲ್ಲಿ ಕಳ್ಳರು ಹಂಚು ತೆಗೆದು ಒಳಪ್ರವೇಶಿಸಿ ಕಳ್ಳತನ ಮಾಡಿದ್ದಾರೆ. ಕಳವಾದ ಸ್ವತ್ತಿನ ಅಂದಾಜು ಮೌಲ್ಯ 80,000 ರೂಪಾಯಿ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 39/2025, ಕಲಂ 331(3), 331(4), 305 BNS ರಂತೆ ಪ್ರಕರಣ ದಾಖಲಾಗಿದೆ.

    ಕಾಪುವಿನಲ್ಲಿ 3.84 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

    ಕಾಪು, ಮೇ 19, 2025: ಪಡು ಗ್ರಾಮದ 74 ವರ್ಷದ ಮಹಿಳೆಯೊಬ್ಬರು 18-05-2025ರ ಮಧ್ಯಾಹ್ನ 3:30 ಗಂಟೆಗೆ ಮಗ ಮಗನ ಮನೆಯಲ್ಲಿ ಕಾರ್ಯಕ್ರಮಕ್ಕಾಗಿ ಮನೆಗೆ ಬೀಗ ಹಾಕಿ ತೆರಳಿ, ರಾತ್ರಿ ಅಲ್ಲಿ ಉಳಿದುಕೊಂಡಿದ್ದರು. 19-05-2025ರ ಬೆಳಿಗ್ಗೆ 8:30 ಗಂಟೆಗೆ ಮನೆಗೆ ವಾಪಸ್ ಬಂದು ನೋಡಿದಾಗ, ಕಳ್ಳರು ಬಾಗಿಲಿನ ಲಾಕ್ ಅನ್ನು ಮುರಿದು ಒಳನುಗ್ಗಿ, ಬೆಡ್‌ರೂಂ ಕಪಾಟಿನ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದರು.

    ಪರ್ಸ್‌ನಲ್ಲಿ ಇದ್ದ 64 ಗ್ರಾಂ ತೂಕದ ಚಿನ್ನಾಭರಣಗಳು—2.5 ಪವನ್ ಮುತ್ತಿನ ಹಾರ, 2.5 ಪವನ್ ಬಳೆ, 1 ಪವನ್ ತೂಕದ 4 ಉಂಗುರುಗಳು, 0.5 ಪವನ್ ಕಿವಿಯೋಲೆ, 0.5 ಪವನ್ ಒಡೆಗೆ ಹೂ, 3 ಗ್ರಾಂ ಕಿವಿಯ ಟಿಕ್ಕಿ (3 ಜೊತೆ), 4 ಗ್ರಾಂ ಮಗುವಿನ ಚೈನ್, 1 ಗ್ರಾಂ ಕಿವಿಯ ರಿಂಗ್ (1 ಜೊತೆ)—ಕಳವಾಗಿವೆ. ಒಟ್ಟು ಮೌಲ್ಯ 3,84,000 ರೂಪಾಯಿ. ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 74/2025, ಕಲಂ 331(3), 331(4), 305 BNS ರಂತೆ ಪ್ರಕರಣ ದಾಖಲಾಗಿದೆ.

  • ಗಂಗೊಳ್ಳಿ: ಸಹಕಾರ ಸಂಘಕ್ಕೆ 12.42 ಲಕ್ಷ ರೂ. ವಂಚನೆ ಆರೋಪ; ಪ್ರಕರಣ ದಾಖಲು

    ಗಂಗೊಳ್ಳಿ, ಮೇ 19: ಮರವಂತೆ ಗ್ರಾಮದ ನೋಂದಾಯಿತ ಹಣಕಾಸು ಸಂಸ್ಥೆಯಾದ ಮರವಂತೆ ಮೀನುಗಾರರ ಸಹಕಾರ ಸಂಘದಲ್ಲಿ 12,42,175 ರೂಪಾಯಿ ವಂಚನೆ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

    ಪಿರ್ಯಾದಿದಾರರಾದ ಗಂಗಾಧರ (31), ಜನವರಿ 1, 2020ರಿಂದ ಈ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, 2013-14 ರಿಂದ 2018-19ರವರೆಗೆ ಈ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಪ್ರಶಾಂತಿ ಎಂ., ಸಂಘಕ್ಕೆ ಮೋಸ ಮಾಡುವ ಮತ್ತು ನಷ್ಟ ಉಂಟುಮಾಡುವ ಉದ್ದೇಶದಿಂದ 12,42,175 ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

    ಈ ಬಗ್ಗೆ ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯವು ಪ್ರಶಾಂತಿ ಅವರಿಗೆ ಹಣವನ್ನು ಮರುಪಾವತಿಸುವಂತೆ ತೀರ್ಪು ನೀಡಿದ್ದರೂ, ಅವರು ಹಣವನ್ನು ವಾಪಸ್ ನೀಡದೆ ಸಂಘಕ್ಕೆ ವಂಚನೆ ಮಾಡಿದ್ದಾರೆ ಎಂದು ಗಂಗಾಧರ ದೂರು ಸಲ್ಲಿಸಿದ್ದಾರೆ.

    ಈ ದೂರಿನ ಆಧಾರದ ಮೇಲೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 59/2025, ಕಲಂ 408, 417, 418 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

  • ಕುಶಾಲನಗರ ಸಂಪತ್ ಕೊಲೆ ಕೇಸ್‌ – ಸ್ನೇಹಿತನಿಗೆ ಚಟ್ಟ ಕಟ್ಟಿದ್ದ ಮೂವರು ಅರೆಸ್ಟ್‌

    ಮಡಿಕೇರಿ: ಇದೇ ಮೇ 10ರಂದು ನಾಪತ್ತೆಯಾಗಿದ್ದ ಕೊಡಗಿನ (Kodagu) ಸೋಮವಾರಪೇಟೆಯ ನಿವಾಸಿ ಸಂಪತ್‌ ನಾಯರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.

    ಸೋಮವಾರಪೇಟೆ ತಾಲ್ಲೂಕಿನ ಹಾನಗಲ್‌ ಗ್ರಾಮದ ಬಿ.ಎಂ ಕಿರಣ್ (44), ಆತನ ಪತ್ನಿ ಸಂಗೀತಾ (35) ಹಾಗೂ ಚೌಡ್ಲು ಗ್ರಾಮದ ಪಿ.ಎಂ ಗಣಪತಿ (43) ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂವರೂ ಕೊಲೆಯಾದ ಸಂಪತ್‌ ಸ್ನೇಹಿತರೇ ಎಂಬುದು ಗಮನಾರ್ಹ. 

    ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ

    ವೈಯಕ್ತಿಕ ದ್ವೇಷದಿಂದ ಕೊಲೆ ಮಾಡಲು ಆರೋಪಿ ಸಂಗೀತಾ ಸಂಚು ರೂಪಿಸಿದ್ದಳು. ಅದಕ್ಕಾಗಿ ಮೇ 9ರಂದು ಸಂಪತ್‌ ನಾಯರ್‌ನನ್ನ ಸೋಮವಾರಪೇಟೆಯ ಹಾನಗಲ್‌ನಲ್ಲಿರುವ ತನ್ನ ಮನೆಗೆ ಬರಲು ಹೇಳಿದ್ದಳು. ಸಾಲದ ಹಣ ವಾಪಸ್‌ ಕೊಡುತ್ತೇನೆ ಎಂದು ಕರೆಸಿಕೊಂಡಿದ್ದಳು. ಸಂಪತ್‌ ಮನೆಗೆ ಬಂದ ಮೇಲೆ ಸಂಗೀತಾಳ ಗಂಡ ಕಿರಣ್‌ ಹಾಗೂ ಸ್ನೇಹಿತ ಗಣಪತಿ ಮೂವರು ಸೇರಿ ದೊಣ್ಣೆಯಿಂದ ಹೊಡೆದು, ಕತ್ತಿಯಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆಯನ್ನು ಮರೆಮಾಚಲು ಮೃತ ದೇಹವನ್ನ ಸಂಪತ್ ನಾಯರ್ ತಂದಿದ್ದ ಫಿಯೆಟ್ ಪುಂಟೋ ಕಾರಿನಲ್ಲೇ ಹಾಕಿಕೊಂಡು ಸಕಲೇಶಪುರ ತಾಲೂಕು ಒಳಗೂರು ಅರಣ್ಯದಲ್ಲಿ ಬಿಸಾಡಿದ್ದಾರೆ. ಬಳಿಕ ಕಲ್ಲಳ್ಳಿ ಬಳಿ ಆತನ ಕಾರು ನಿಲ್ಲಿಸಿ ಬೇರೊಂದು ಕಾರಿನಲ್ಲಿ ಬೆಂಗಳೂರಿಗೆ ತೆರಳಿದ್ದರು. ಮೇ 16 ರಂದು ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಿರಣ್‌ನನ್ನ ಬೆಂಗಳೂರಿನಲ್ಲಿ ಬಂಧಿಸಲಾಯಿತು. ಇನ್ನೂ ಮೇ 17ರಂದು ಬೆಳ್ತಂಗಡಿಯ ಅಂಗಡಿಯಲ್ಲಿ ಮತ್ತೊಬ್ಬ ಆರೋಪಿ ಗಣಪತಿ ಹಾಗೂ ಮೇ 18ರಂದು (ಇಂದು) ಆರೋಪಿ ಸಂಗೀತಾಳನ್ನ ಸೋಮವಾರ ಪೇಟೆಯಲ್ಲಿ ಬಂಧಿಸಲಾಯಿತು.