Category: More News

  • ದುಸ್ಥಿತಿ: ಶ್ರೀ ದುರ್ಗಾಂಬಾ ಬಸ್ ವಶಪಡಿಸಿಕೊಂಡ ಹಾವೇರಿ ಅಧಿಕಾರಿಗಳು

    ಹಾವೇರಿ, ಜೂನ್ 2, 2025: ದೇರಳಕಟ್ಟೆಯಿಂದ ಸಿರ್ಸಿಗೆ ಸಂಚರಿಸುತ್ತಿದ್ದ ಶ್ರೀ ದುರ್ಗಾಂಬಾ ಬಸ್ (ಬಸ್ ಸಂಖ್ಯೆ: KA51B1068) ಅನ್ನು ಹಾವೇರಿ ಸಾರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಸ್‌ನ ದುಸ್ಥಿತಿ ಮತ್ತು ಸಿಬ್ಬಂದಿಯ ದುರ್ವರ್ತನೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ದೂರಿನ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಈ ಘಟನೆ ಮೇ 20, 2025 ರಂದು ನಡೆದಿದ್ದು, ಕರ್ನಾಟಕ ಪೊಲೀಸ್‌ಗೆ ಔಪಚಾರಿಕ ದೂರು ಸಲ್ಲಿಕೆಯಾದ ಬಳಿಕ ತ್ವರಿತ ಕ್ರಮ ಕೈಗೊಳ್ಳಲಾಗಿದೆ.

    ದೂರಿನ ಪ್ರಕಾರ, ಬಸ್‌ನ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಭಾರಿ ಮಳೆಯ ಸಂದರ್ಭದಲ್ಲಿ ಬಸ್‌ಗೆ ಬಾಗಿಲೇ ಇರದ ಕಾರಣ ಮತ್ತು ಸರಿಯಾದ ನಿರ್ವಹಣೆಯ ಕೊರತೆಯಿಂದಾಗಿ ಒಳಗೆ ನೀರು ಸೋರಿತು. ಎರಡು ವರ್ಷದ ಮಗು ಸೇರಿದಂತೆ ಪ್ರಯಾಣಿಕರು ಸಂಪೂರ್ಣವಾಗಿ ನೆನೆದು ಭಯಭೀತರಾದರು. ಲಗೇಜ್ ಇಡುವ ಕ್ಯಾಬಿನ್‌ನಲ್ಲಿ ನೀರು ತುಂಬಿತ್ತು, ಇದರಿಂದಾಗಿ ಪ್ರಯಾಣಿಕರು ತಮ್ಮ ಸಾಮಾನುಗಳನ್ನು ಬಸ್‌ನ ಒಳಗೆ ತರಬೇಕಾಯಿತು, ಇದು ಮತ್ತಷ್ಟು ತೊಂದರೆಗೆ ಕಾರಣವಾಯಿತು. ಚಾಲಕನ ಹತ್ತಿರ ಸಹಾಯ ಕೇಳಿದಾಗ ಒರಟಾಗಿ ಮಾತನಾಡಿದರು ಮತ್ತು “ಆಫೀಸ್‌ಗೆ ಸಂಪರ್ಕಿಸಿ” ಎಂದು ಹೇಳಿ ಸಹಾಯ ಮಾಡಲು ನಿರಾಕರಿಸಿದರು. ಕ್ಲೀನರ್ ಸಹ ಯಾವುದೇ ಸಹಾನುಭೂತಿ ತೋರದೆ, ನೀರು ತುಂಬಿದ ಲಗೇಜ್ ಕ್ಯಾಬಿನ್‌ಗೆ ಬೆರಳು ಮಾಡಿ ತೋರಿಸಿದರು.

    ಪ್ರಯಾಣದ ಅರ್ಧ ಗಂಟೆಯ ನಂತರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಮತ್ತೊಮ್ಮೆ ಸಹಾಯ ಕೇಳಲು ಹೋದಾಗ ಒಬ್ಬ ಚಾಲಕ ಸಹಾನುಭೂತಿಯಿಂದ ನಡೆದುಕೊಂಡು ಪ್ರಯಾಣಿಕರನ್ನು ಹೊನ್ನಾವರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಆದರೆ ಚಾಲಕ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಅಲ್ಲಿಂದ ಓಡಿ ಹೋಗಲು ಯಶಸ್ವಿಯಾದರು. ಪೊಲೀಸರು ಬಸ್ ಮಾಲಿಕರಿಗೆ ಕರೆ ಮಾಡಿದಾಗ, ಮಾಲಿಕರು ಕರೆ ಸ್ವೀಕರಿಸಿ ಪೊಲೀಸ್ ಠಾಣೆಯಿಂದ ಕರೆ ಎಂದು ತಿಳಿದುಕೊಂಡ ತಕ್ಷಣ ಕರೆ ಕಟ್ ಮಾಡಿ ಫೋನ್ ಸ್ವಿಚ್ ಆಫ್ ಮಾಡಿದರು.
    ಈ ದೂರು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ಪೋಸ್ಟ್‌ನಲ್ಲಿ ಬಸ್‌ನ ಕಳಪೆ ಸ್ಥಿತಿಯ ಚಿತ್ರಗಳು, ಒಳಗೆ ನೀರು ಸೋರುತ್ತಿರುವ ವೀಡಿಯೊ ಮತ್ತು ಮೇ 23, 2025 ರಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದಾಖಲಾದ FIR (ಸಂಖ್ಯೆ: 202958) ನಕಲನ್ನು ಸೇರಿಸಲಾಗಿತ್ತು.

    ಸಾರ್ವಜನಿಕರ ಆಕ್ರೋಶದ ನಂತರ, ಹಾವೇರಿ ಸಾರಿಗೆ ಅಧಿಕಾರಿಗಳು ಮೇ 21, 2025 ರಂದು ಬಸ್ (KA51B1068) ಅನ್ನು ವಶಪಡಿಸಿಕೊಂಡರು ಮತ್ತು ನಿರ್ಲಕ್ಷ್ಯ ಹಾಗೂ ಸುರಕ್ಷತಾ ಮಾನದಂಡಗಳ ಉಲ್ಲಂಘನೆಗಾಗಿ ಆಪರೇಟರ್ ವಿರುದ್ಧ ಪ್ರಕರಣ ದಾಖಲಿಸಿದರು. ಈ ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ಮತ್ತು ಈ ಮಾರ್ಗದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

  • ಗಂಗೊಳ್ಳಿ ಎಸ್‌.ವಿ. ಹಿ.ಪ್ರಾ ಶಾಲೆಯ ನಿವೃತ್ತಿ ಹೊಂದಿದ ಶಿಕ್ಷಕ ಜಿ. ವಿಶ್ವನಾಥ ಭಟ್ ಅವರಿಗೆ ಬೀಳ್ಕೊಡುಗೆ

    ಗಂಗೊಳ್ಳಿ: ಗಂಗೊಳ್ಳಿಯ ಜಿ.ಎಸ್.ವಿ.ಎಸ್.ಅಸೋಸಿಯೇಶನ್ ವತಿಯಿಂದ ನಡೆಸಲ್ಪಡುವ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಫ 36 ವರ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮುಖ್ಯೋಪಾಧ್ಯಾಯರಾಗಿ ವಯೋನಿವೃತ್ತಿ ಹೊಂದಿದ ಶಾಲೆಯ ಮುಖ್ಯ ಶಿಕ್ಷಕ ಜಿ. ವಿಶ್ವನಾಥ ಭಟ್ ಅವರನ್ನು ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದಿಂದ ಬೀಳ್ಕೊಡಲಾಯಿತು.

    ಶಾಲೆಯ ಸಭಾಂಗಣದಲ್ಲಿ ಶನಿವಾರ ಜರಗಿದ ಕಾರ್ಯಕ್ರಮದಲ್ಲಿ ಜಿ.ಎಸ್.ವಿ.ಎಸ್.ಅಸೋಸಿಯೇಶನ್ ಅಧ್ಯಕ್ಷ ಡಾ. ಕಾಶೀನಾಥ ಪೈ, ಕಾರ್ಯದರ್ಶಿ ಎಚ್. ಗಣೇಶ ಕಾಮತ್ ಮತ್ತು ಎಸ್.ವಿ. ವಿದ್ಯಾಸಂಸ್ಥೆಗಳ ಸಂಚಾಲಕ ಎನ್. ಸದಾಶಿವ ನಾಯಕ್ ಅವರು ವಯೋನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕ ಜಿ.ವಿಶ್ವನಾಥ ಭಟ್ ಅವರ ಸೇವೆಯನ್ನು ಪ್ರಶಂಶಿಸಿ ಅವರನ್ನು ಗೌರವಿಸಿದರು.

    ಆಡಳಿತ ಮಂಡಳಿ ಸದಸ್ಯರಾದ ಎಂ. ವಿನೋದ ಪೈ, ಜಿ. ವೆಂಕಟೇಶ ನಾಯಕ್, ಎನ್. ಅಶ್ವಿನ್ ನಾಯಕ್, ಎಂ. ನಾಗೇಂದ್ರ ಪೈ, ಶಿಕ್ಷಕ-ರಕ್ಷಕ ಸಮಿತಿ ಕಾರ್ಯದರ್ಶಿ ಅಜಿತ್ ಭಟ್, ನಿಯೋಜಿತ ಶಿಕ್ಷಕಿ ಫಾತಿಮಾ ಮರಿಯಾ ಬೆರೆಟ್ಟೊ, ಪ್ರಭಾರ ಮುಖ್ಯ ಶಿಕ್ಷಕ ದೀಕ್ಷಿತ್ ಮೇಸ್ತ, ಶಾಲೆಯ ಶಿಕ್ಷಕರು, ಶಿಕ್ಷಕ-ರಕ್ಷಕ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

    ಮಹಾಬಲ ಆಚಾರ್ಯ ಅನಿಸಿಕೆ ವ್ಯಕ್ತಪಡಿಸಿದರು. ದೀಕ್ಷಿತ್ ಮೇಸ್ತ ಸ್ವಾಗತಿಸಿದರು. ಮಾಲಾಶ್ರೀ ಖಾರ್ವಿ ಕಾರ್ಯಕ್ರಮ ನಿರ್ವಹಿಸಿದರು. ರೇಖಾ ಖಾರ್ವಿ ವಂದಿಸಿದರು.

  • ಬ್ರಹ್ಮಾವರ: ಆಂಬ್ಯುಲೆನ್ಸ್ ಕೊಠಡಿ, 4 ಆಕ್ಸಿಜನ್ ಕಾನ್ಸೆಂಟ್ರೇಟರ್ ಹಸ್ತಾಂತರ

    ಬ್ರಹ್ಮಾವರ: ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಮತ್ತು ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಇದರ ಆಶ್ರಯದಲ್ಲಿ ಜನೌಷಧಿ ಕೇಂದ್ರದ ಬಳಿ ನೂತನವಾಗಿ ನಿರ್ಮಿಸಿರುವ ಅಂಬುಲೆನ್ಸ್‌ ಕೊಠಡಿ ಮತ್ತು 4 ಆಕ್ಸಿಜನ್ ಕಾನ್ಸೆಂಟ್ರೇಟರ್ ಹಸ್ತಾಂತರ ಸಮಾರಂಭ ಮೇ 31 ರಂದು ಶನಿವಾರ ಸಿಟಿ ಸೆಂಟರ್ ಬ್ರಹ್ಮಾವರದಲ್ಲಿ ನಡೆಯಿತು.

    ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ನಮ್ಮೊಳಗಿನ ನಮ್ಮತನ ಕಳೆದುಕೊಳ್ಳದೆ ಸದಾ ಕಾಲ ಜನಪಯೋಗಿಯಾಗಿ ಬದುಕು ಸಾಗಿಸಿದರೆ ನಮ್ಮ ಜೀವನ ಸಾರ್ಥಕವಾಗಲು ಸಾಧ್ಯ. ಶಾಲೆಯಲ್ಲಿ ಶಿಕ್ಷಣ ನೀಡಿದರೆ, ಮನೆಯಲ್ಲಿ ಸಂಸ್ಕಾರ ನೀಡುವ ಕಾಯ೯ ನಡೆಯಬೇಕು ನಮ್ಮ ವಾತಾವರಣ ತಿಳಿಮಾಡುವ ಕೆಲಸ ನಿತ್ಯ ನಿರಂತವಾಗಿರಬೇಕು ಎಂದರು.

    ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ, ಜಯಂಟ್ಸ್ ಸಂಸ್ಥೆಯು ಪರಿಸರದ ಜನರಿಗೆ ಅನೇಕ ಜನೋಪಯೋಗಿ ಕಾರ್ಯಕ್ರಮವನ್ನು ನಡೆಸುತ್ತಿರುವುದು ಅಭಿನಂದನೀಯ ಎಂದರು.

    ಜಯಂಟ್ಸ್ ಕೇಂದ್ರ ಸಮಿತಿ ಸದಸ್ಯ ದಿನಕರ ಅಮೀನ್, ಸ್ವಚ್ಚ ಭಾರತ ಮತ್ತು ವನಮಹೋತ್ಸವ ಕಾರ್ಯಕ್ರಮಗಳು ರಾಷ್ಟ್ರಮಟ್ಟದ ಕಾರ್ಯಕ್ರಮ ಗಳಾಗಿದ್ದು, ಅದನ್ನು ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದರು.

    ಜಯಂಟ್ಸ್ ಫೆಡರೇಶನ್ ಅಧ್ಯಕ್ಷ ತೇಜೇಶ್ವರ್ ರಾವ್, ತಾ.ಪಂ ಇಒ ಹೆಚ್.ವಿ ಇಬ್ರಾಹಿಂಪುರ ಶುಭ ಹಾರೈಸಿದರು.

    ಈ ಸಂದಭ೯ದಲ್ಲಿ ಅಮೇರಿಕ ಅನಿವಾಸಿ ಭಾರತೀಯ ಹಲವಾರು ಸಂಸ್ಥೆಗಳಿಗೆ ದಾನ ನೀಡಿದ ಡಾ.ಜೀವನ್ ಪ್ರಕಾಶಿನಿ ಮೂತಿ೯ ಮತ್ತು ಎನ್.ಸಿ ಮೂತಿ೯ ದಂಪತಿಗಳನ್ನು ಸನ್ಮಾನಿಸಲಾಯಿತು. ಈ ಸಂದಭ೯ದಲ್ಲಿ ಅವರು ಸಂಸ್ಥೆಯ ಕಾರ್ಯವೈಖರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಂಟ್ಸ್ ಗ್ರೂಪ್ ಅಧ್ಯಕ್ಷ ಅಣ್ಣಯ್ಯ ದಾಸ್ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ವಾರಂಬಳ್ಳಿ ಗ್ರಾ.ಪಂ ಅಧ್ಯಕ್ಷ ನಿತ್ಯಾನಂದ ಬಿ. ಆರ್ ರವರನ್ನು ಗೌರವಿಸಲಾಯಿತು. ನಾಯ್ಕನಕಟ್ಟೆ ಶಾಲೆಗೆ ನೋಟ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.

    ವೇದಿಕೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಮಹೇಶ್ ಐತಾಳ, ವಿವೇಕಾನಂದ ಕಾಮತ್, ನಿಕಟಪೂರ್ವ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ ಮುಂತಾದವರಿದ್ದರು. ಕಾರ್ಯದರ್ಶಿ ಮಿಲ್ಟನ್ ಒಲಿವರ್ ವರದಿ ವಾಚಿಸಿದರು. ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು ಪ್ರಸ್ತಾವನೆಗೈದು, ಅತಿಥಿಗಳಿಗೆ ಸಿಂದೂರ ವಿಶೇಷ ಗಿಡವನ್ನು ನೀಡಿ ಗೌರವಿಸಿದರು. ದಿವ್ಯ ಪೂಜಾರಿ, ಶ್ರೀನಾಥ ಕೋಟ, ಪ್ರಸನ್ನ ಕಾರಂತ, ರೊನಾಲ್ಡ್ ಡಯಾಸ್ ಪರಿಚಯಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿ, ವಂದಿಸಿದರು. ಈ ಸಂದರ್ಭದಲ್ಲಿ ಜನೌಷಧಿ ಸಿಬ್ಬಂದಿಗಳು ಮತ್ತು ಜಯಂಟ್ಸ್ ಹಿರಿಯ ಸದಸ್ಯರನ್ನು ಗೌರವಿಸಲಾಯಿತು.

    ಜಯಂಟ್ಸ್ ನಿರ್ದೇಶಕ ಪ್ರದೀಪ್ ಶೆಟ್ಟಿ ಪ್ರತಿಮಾ ಡೋರಿಸ್ ಸಹಕರಿಸಿದರು.

  • ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಿದರೆ, ಗುಟ್ಕಾ ಉಗುಳಿದರೆ ಇನ್ನು ಮುಂದೆ ಎಷ್ಟು ದಂಡ ಗೊತ್ತಾ…?

    ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ, ಪಾನ್ ಪರಾಗ್, ತಂಬಾಕು ಸೇರಿದಂತೆ ಇನ್ನಿತರ ಪದಾರ್ಥಗಳನ್ನು ತಿಂದು ಉಗುಳುವುದನ್ನು ನಿಷೇಧಿಸಿ ರಾಜ್ಯ ಸರಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

    ಒಂದು ವೇಳೆ ನಿಯಮ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ಸೇದಿದರೆ ಮತ್ತು ಗುಟ್ಕಾ ಉಗುಳಿದರೆ 1 ಸಾವಿರ ರೂ. ದಂಡ ವಿಧಿಸಲು ಅವಕಾಶ ಕಲ್ಪಿಸುವ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ.

    ಈ ಸಂಬಂಧ ರಾಜ್ಯ ಸರಕಾರವು ರೂಪಿಸಿದ್ದ, ‘ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ವಿತರಣೆಯ ವಿನಿಮಯ) (ಕರ್ನಾಟಕ ತಿದ್ದುಪಡಿ) ಮಸೂದೆ-2024’ಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ.

    ಇಪ್ಪತ್ತೊಂದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಬೀಡಿ-ಸಿಗರೇಟು ಮತ್ತು ತಂಬಾಕಿನ ಉತ್ಪನ್ನಗಳ ಮಾರಾಟವನ್ನು ಈ ಕಾಯ್ದೆ ನಿಷೇಧಿಸುತ್ತದೆ. ಉಲ್ಲಂಘಿಸಿದವರಿಗೆ 1 ಸಾವಿರ ರೂ. ದಂಡ ವಿಧಿಸಬಹುದಾಗಿದೆ. ಉಪಹಾರ ಗೃಹ, ಪಬ್, ಬಾರ್ ಅಥವಾ ರೆಸ್ಟೋರೆಂಟ್‌ಗಳಲ್ಲಿ ಹುಕ್ಕಾ ಸೇವೆನೆಗೆ ಅವಕಾಶ ನೀಡುವುದನ್ನೂ ಈ ಕಾಯ್ದೆ ನಿಷೇಧಿಸುತ್ತದೆ. ಈ ನಿಷೇಧವನ್ನು ಉಲ್ಲಂಘಿಸಿದವರಿಗೆ 50 ಸಾವಿರ ರೂ.ನಿಂದ 1 ಲಕ್ಷ ರೂ.ಗಳವರೆಗೆ ದಂಡ ಮತ್ತು 1 ವರ್ಷದಿಂದ ಮೂರು ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

  • ಮಂಡ್ಯ ಘಟನೆ ಬೆನ್ನಲ್ಲೇ ವಾಹನ ತಪಾಸಣೆಯ ಹೊಸ ಮಾರ್ಗಸೂಚಿ ಹೊರಡಿಸಿದ ಡಿಜಿಪಿ: ಹೀಗಿವೆ ನೋಡಿ

    ಬೆಂಗಳೂರು: ಇತ್ತೀಚೆಗೆ ಮಂಡ್ಯದಲ್ಲಿ ಸಂಚಾರ ಪೊಲೀಸರ ಅಮಾನವೀಯ ವರ್ತನೆಯಿಂದ ಮಗು ಬಿದ್ದು ಸಾವನ್ನಪ್ಪಿರುವ ದುರಂತ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಪೊಲೀಸ್ ಇಲಾಖೆಯು ವಾಹನ ತಪಾಸಣೆ ಮಾಡುವಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾರ್ಗಸೂಚಿ ಹೊರಡಿಸಿದೆ.

    ವಾಹನ ತಪಾಸಣೆ ವೇಳೆ ಮಂಡ್ಯದಲ್ಲಿ ಮೂರು ವರ್ಷದ ಮಗು ಸಾವನ್ನಪ್ಪಿದೆ. ಹೀಗಾಗಿ ಭವಿಷ್ಯದಲ್ಲಿ ಇಂತಹ ದುರ್ಘಟನೆ ಮರುಕಳಿಸದಿರಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎನ್. ಸಲೀಂ ಅವರು ತಪಾಸಣೆ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿ ಹೊರಡಿಸಿದ್ದಾರೆ.

    ಹೀಗಿವೆ ಮಾರ್ಗಸೂಚಿಗಳು:

    • ವಾಹನಗಳಿಗೆ ಸಂಬಂಧಪಟ್ಟ ದಾಖಲೆ ಪರೀಕ್ಷಿಸಲು ಸಕಾರಣವಿಲ್ಲದೇ ವಾಹನಗಳನ್ನು ತಡೆದು ತಪಾಸಣೆಗೊಳಪಡಿಸಬಾರದು. ಕಣ್ಣಿಗೆ ಕಾಣುವ (Visible violations) ಸಂಚಾರ ನಿಯಮ ಉಲ್ಲಂಘನೆಗಳು ಕಂಡುಬಂದಲ್ಲಿ ಮಾತ್ರವೇ ಅಂತಹ ವಾಹನಗಳನ್ನು ನಿಲ್ಲಿಸಿ ಪ್ರಕರಣಗಳನ್ನು ದಾಖಲಿಸಬೇಕು. ಪ್ರಕರಣಗಳನ್ನು ದಾಖಲಿಸುವಾಗ ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
    • ಹೆದ್ದಾರಿಗಳಲ್ಲಿ ಜಿಗ್ ಜಾಗ್ ಮಾದರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಯಬಾರದು. ರಸ್ತೆಯಲ್ಲಿ ದಿಢೀರನೇ ಅಡ್ಡಬಂದು ವಾಹನ ನಿಲ್ಲಿಸುವಂತೆ ಹೇಳಬಾರದು.
    • ದ್ವಿಚಕ್ರ ವಾಹನ ಹಿಂಬದಿ ಸವಾರನನ್ನು ಹಿಡಿದು ಎಳೆಯುವುದು ಹಾಗೂ ವಾಹನಗಳ ಕೀಲಿಕೈ ತೆಗೆದುಕೊಳ್ಳುವುದನ್ನು ಮಾಡಬಾರದು.
    • ವೇಗವಾಗಿ ಚಲಾಯಿಸಿಕೊಂಡು ಬರುವ ವಾಹನ ಸವಾರರನ್ನು ಹಿಡಿಯಲು ಅವರನ್ನು ಬೆನ್ನಟ್ಟದೇ ಆ ವಾಹನಗಳ ನೋಂದಣಿ ಸಂಖ್ಯೆಯನ್ನು ಗುರುತು ಮಾಡಿಕೊಂಡು ಜಿಲ್ಲಾ ಪೊಲೀಸ್ ಠಾಣಾ ಸರಹದ್ದುಗಳ ವಿವಿಧ ನಿಯಂತ್ರಣ ಕೋಣೆಗಳಿಗೆ ಮಾಹಿತಿ ರವಾನಿಸಿ, ಸದರಿ ವಾಹನ ಸವಾರರನ್ನು ಪತ್ತೆಹಚ್ಚಿ ಪ್ರಕರಣ ದಾಖಲಿಸಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
    • ಸಂಚಾರ ನಿಯಮ ಉಲ್ಲಂಘನೆದಾರರ ವಿರುದ್ಧ ಭೌತಿಕವಾಗಿ ಪ್ರಕರಣ ದಾಖಲಿಸುವಾಗ ಅಥವಾ ವಾಹನಗಳ ತಪಾಸಣೆ ಮಾಡುವ ಸಂದರ್ಭದಲ್ಲಿ ಪೊಲೀಸರು ತಮ್ಮ ಸುರಕ್ಷತೆಗಾಗಿ Reflective Jacket ಗಳನ್ನು ಧರಿಸಬೇಕು. ಸಂಜೆ ವೇಳೆಯಲ್ಲಿ ಕಡ್ಡಾಯವಾಗಿ ಎಲ್​​ಇಡಿ ಬಟನ್​​ಗಳನ್ನು ಉಪಯೋಗಿಸಬೇಕು ಹಾಗೂ ವಾಹನಗಳನ್ನು ತಪಾಸಣೆ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮರಾ ಧರಿಸಬೇಕು.
    • ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ (ಟಿಎಂಸಿ) ಅಥವಾ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಂ (ಐಟಿಎಂಎಸ್) ಹೊಂದಿರುವ ಘಟಕಗಳಲ್ಲಿ ಆದಷ್ಟು ಸಂಪರ್ಕ ರಹಿತ ಪ್ರಕರಣಗಳನ್ನು ದಾಖಲಿಸಬೇಕು.
    • ಅನಾಹುತಗಳನ್ನು ತಪ್ಪಿಸಲು ಎಲ್ಲಾ ಘಟಕಗಳಲ್ಲೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕಾಲಕಾಲಕ್ಕೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಮಾರ್ಗಸೂಚಿಯಲ್ಲಿ ಸಲೀಂ ಅವರು ತಿಳಿಸಿದ್ದಾರೆ.
    • ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಇತರೆ ರಸ್ತೆಗಳಲ್ಲಿ ಯಾವುದೇ ಕಾರಣಕ್ಕೂ ಅತಿ ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವ ಪ್ರಯತ್ನ ಮಾಡಬಾರದು ಹಾಗೂ ಇಂತಹ ವಾಹನಗಳ ವಿರುದ್ಧ ಎಫ್.ಟಿ.ವಿ.ಆರ್ ದಾಖಲಿಸಲು ತಂತ್ರಜ್ಞಾನ ಅನುಸರಿಸಬೇಕು.
    • ವಾಹನಗಳ ವೇಗವನ್ನು ಇಳಿಸುವ ಸಲುವಾಗಿ, ತಪಾಸಣೆಯ ಸ್ಥಳದ ಸುಮಾರು 100 ರಿಂದ 150 ಮೀಟರ್ ಮೊದಲೇ ರಿಫೆಕ್ಟಿವ್ ರಬ್ಬರ್ ಕೋನ್‌ಗಳನ್ನು ಹಾಗೂ ಸುರಕ್ಷತಾ ಸಲಕರಣಿಗಳನ್ನು ಅಳವಡಿಕೆ, ರಾತ್ರಿ ಮತ್ತು ತಡರಾತ್ರಿಯ ಸಂದರ್ಭದಲ್ಲಿ ಸಂಚಾರ ಸಿಗ್ನಲ್ ದೀಪಗಳಿರುವ ಅಥವಾ ಜಂಕ್ಷನ್ ಗಳ ಬದಿಯಲ್ಲೇ ವಾಹನಗಳನ್ನು ತಪಾಸಣೆ ಮಾಡಬೇಕೆಂದು ಆದೇಶದಲ್ಲಿ ನಮೂದಿಸಲಾಗಿದೆ.
    • ಕಾನೂನು ಮತ್ತು ಸುವ್ಯವಸ್ಥೆ ಪೊಲೀಸರು ನಡೆಸುವ ನಾಕಾಬಂಧಿ ಪ್ರಕ್ರಿಯೆಗಳನ್ನು ಸಾಧ್ಯವಾದಷ್ಟು ಹೆದ್ದಾರಿಗಳಲ್ಲಿ ನಡೆಸಬಾರದು. ತಪಾಸಣೆಯ ಸಂದರ್ಭದಲ್ಲಿ ಇಂತ ಕಾನೂನು ಸುವ್ಯವಸ್ಥೆ ಪೊಲೀಸರ ನೆರವು ಪಡೆಯಬೇಕು ಎಂದು ರಾಜ್ಯದ ಎಲ್ಲಾ ಜಿಲ್ಲಾ ಘಟಕಗಳ ಪೊಲೀಸರಿಗೆ ಡಿಜಿಪಿ ಸಲೀಂ ತಾಕೀತು ಮಾಡಿದ್ದಾರೆ.
  • Alumni Day 2025 at Milagres College, Kallianpur: A Celebration of Legacy and Unity

    Udupi, May 31, 2025: The Alumni Association (R) of Milagres College, Kallianpur, hosted a memorable Alumni Day 2025 on Saturday, May 31, at 6:00 PM in the college’s AV Hall. The event brought together alumni from various generations, fostering a sense of nostalgia, unity, and pride in their shared connection to the institution.

    The evening commenced with a serene prayer session led by Amrita Lewis and Ravinandan, the college’s Public Relations Officer, setting a reflective tone. Mr. Shekar Gujjarbettu, President of the Alumni Association, delivered a heartfelt welcome address, commending the alumni for upholding the values of Milagres and emphasizing the association’s role in bridging past and present students.

    The Chief Guest, Mr. Prasad Raj Kanchan, a Congress Leader and distinguished alumnus, shared fond memories of his time at Milagres PU College. He highlighted how the institution’s values shaped his leadership journey and underscored the importance of alumni associations in providing guidance and support in today’s competitive world.

    Mr. Chethan Kumar Shetty, Guest of Honour and a 1993 B.Sc alumnus, delivered an emotional address, reflecting on how Milagres instilled in him a deep sense of social responsibility. In a poignant moment, he dedicated his commitment to social service to the memory of his late son, Pradhan Shetty, crediting the college for shaping his values.

    A key highlight was the felicitation of Mr. Roshan Lobo, a 2005 B.Com alumnus and international powerlifter from Hosala, Barkur. Honored with a traditional shawl and memento, his inspiring journey was narrated by Prof. Sophia Dias. In his response, Mr. Lobo expressed gratitude to his teachers, classmates, and the late Physical Education Director, Augustine Dias, for igniting his passion for discipline and determination.

    In his address, Principal Dr. Vincent Alva praised the Alumni Association, a registered body since 2002, for contributing nearly ₹2 crores to the college’s developmental projects. With minimal government funding, he urged alumni to remain active stakeholders in the institution’s progress.

    The event concluded with a vote of thanks by Mrs. Joyce Lewis, who acknowledged the contributions of dignitaries, alumni, faculty, and volunteers. Fazal Neralkatte expertly compered the programme, ensuring a smooth and engaging flow.

    Alumni Day 2025 at Milagres College was a powerful testament to the enduring legacy and unity of its community, leaving attendees with renewed connections and cherished memories.

  • ನಾಳೆ ಎಸ್ ಡಿ ಪಿ ಐ ಕಾಪು ಕ್ಷೇತ್ರ ಸಮಿತಿ ವತಿಯಿಂದ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ

    ಕಾಪು ಮೇ 31, 2025: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ರಕ್ತ ಸಂಗ್ರಹ ನಿಧಿಗಳಲ್ಲಿ ತೀವ್ರ ರಕ್ತದ ಕೊರತೆ ಇರುವುದನ್ನು ಮನಗಂಡು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾಪು ಕ್ಷೇತ್ರ ಸಮಿತಿ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆ ರಕ್ತ ಸಂಗ್ರಹ ನಿಧಿಯ ಸಹಯೋಗದೊಂದಿಗೆ ದಿನಾಂಕ 01/06/2025 ರ ಆದಿತ್ಯವಾರ ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:30 ರ ವರೆಗೆ ಕಾಪುವಿನ ಮಜೂರ್ ಪಂಚಾಯತ್ ಸಭಾಂಗಣದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಾಮಾನ್ಯವಾಗಿ ಉಡುಪಿ ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಹಾಗೆ ರಕ್ತದ ಪೂರೈಕೆಯಾಗುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ರಕ್ತದಾನಿಗಳ ಕೊರತೆಯಿಂದಾಗಿ ಬೇಡಿಕೆಯಷ್ಟು ರಕ್ತ ಪೂರೈಕೆಯಾಗುತ್ತಿಲ್ಲ. ಉಡುಪಿ ಜಿಲ್ಲೆಯಲ್ಲಿ ದಿನಂಪ್ರತಿ 40-60 ಯೂನಿಟ್ ರಕ್ತದ ಅವಶ್ಯಕತೆ ಇದ್ದು ಆದರೆ ರಕ್ತಸಂಗ್ರಹ ನಿಧಿಯಲ್ಲಿ ಅಷ್ಟು ಪ್ರಮಾಣದ ರಕ್ತದ ಸಂಗ್ರಹವಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಎಸ್ ಡಿ ಪಿ ಐ ಕಾಪು ಕ್ಷೇತ್ರ ಸಮಿತಿ ವತಿಯಿಂದ ನಾಳೆ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಸಾರ್ವಜನಿಕರು ಈ ರಕ್ತದಾನ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ರಕ್ತದ ಕೊರತೆಯನ್ನು ನೀಗಿಸಲು ಕೈಜೋಡಿಸಬೇಕೆಂದು ಎಸ್ ಡಿ ಪಿ ಐ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸಾದಿಕ್ ಕೆ ಪಿ ಯವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ

  • ಉಡುಪಿ: ಅರ್ಹ ವಿಕಲಚೇತನ ವ್ಯಕ್ತಿಗಳ ಆರೈಕೆದಾರರಿಗೆ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

    ಉಡುಪಿ, ಮೇ 30, 2025: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಸೆರೆಬ್ರಲ್ ಪಾಲ್ಸಿ, ಮಸ್ಕ್ಯುಲರ್ ಡಿಸ್ಟೊಫಿ, ಪಾರ್ಕಿನ್ಸನ್ ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್, ಆಟಿಸಂ, ಬೌದ್ಧಿಕ ವಿಕಲತೆ ಮತ್ತು ಬಹುವಿಧ ಅಂಗವಿಕಲತೆ (ಶ್ರವಣ ಅಂಧತ್ವ/ ಡೆಫ್ ಬ್ಲೈಂಡ್) ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ಪ್ರತೀ ಮಾಹೆ 1,000 ರೂ. ಪ್ರೋತ್ಸಾಹಧನ ನೀಡಲು ಆದೇಶಿಲಾಗಿದ್ದು, ಸದರಿ ಯೋಜನೆಯ ಫಲಾನುಭವಿಗಳನ್ನು ಜಿಲ್ಲಾ ಮಟ್ಟದ ಸಮಿತಿಯಲ್ಲಿ ಆಯ್ಕೆ ಮಾಡಲಾಗುವುದು.

    ಮೇಲ್ಕಂಡ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳು ಕಡ್ಡಾಯವಾಗಿ ವಿಶಿಷ್ಟ ಗುರುತಿನ ಚೀಟಿ ಹೊಂದಿರಬೇಕು ಹಾಗೂ ಅಂಗವಿಕಲತೆಯ ಪ್ರಮಾಣ ಶೇ. 75 ಮತ್ತು ಅದಕ್ಕಿಂತ ಹೆಚ್ಚಿರಬೇಕು. ವಯಸ್ಸಿನ ಹಾಗೂ ಆದಾಯ ಮಿತಿ ಇರುವುದಿಲ್ಲ. ಜಿಲ್ಲಾ ಸಮಿತಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ಆರೈಕೆದಾರರ ಬ್ಯಾಂಕ್ ಖಾತೆಗೆ ಪ್ರೋತ್ಸಾಹಧನವನ್ನು ಜಮೆ ಮಾಡಲಾಗುವುದು. ಅರ್ಹ ವಿಕಲಚೇತನ ವ್ಯಕ್ತಿಗಳ ಆರೈಕೆದಾರರು ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನ.

    ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಿ ಬ್ಲಾಕ್, ತಳ ಅಂತಸ್ತು, ಜಿಲ್ಲಾಧಿಕಾರಿ ಕಛೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 0820-2574810 ಹಾಗೂ ಜಿಲ್ಲಾ ಕಛೇರಿಯ ಎಂ.ಆರ್. ಡಬ್ಲ್ಯೂ ಅಥವಾ ವಿ.ಆರ್. ಡಬ್ಲ್ಯೂ/ ಯು.ಆರ್. ಡಬ್ಲ್ಯೂ ರವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

  • ಪ್ರವಾದಿ ಅವರನ್ನು ಅವಮಾನಿಸಿದ ವಿದ್ಯಾರ್ಥಿನಿ; ಶರ್ಮಿಷ್ಠಾ ಬಂಧನ

    ದೆಹಲಿ, ಮೇ 30, 2025: ಪುಣೆಯ ಸಿಂಬಯಾಸಿಸ್ ಇನ್‌ಸ್ಟಿಟ್ಯೂಟ್‌ನ ನಾಲ್ಕನೇ ವರ್ಷದ ಕಾನೂನು ವಿದ್ಯಾರ್ಥಿನಿ ಶರ್ಮಿಷ್ಠಾ ಪನೋಲಿ ಅವರನ್ನು ದೆಹಲಿಯಲ್ಲಿ ಕೊಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ಹಂಚಿಕೊಂಡಿದ್ದ ಶರ್ಮಿಷ್ಠಾ, #ArrestSharmistha ಎಂಬ ಹ್ಯಾಶ್‌ಟ್ಯಾಗ್ ಎಕ್ಸ್‌ನಲ್ಲಿ ಟ್ರೆಂಡ್ ಆಗಿದ್ದರಿಂದ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

    ಮಾಹಿತಿಯ ಪ್ರಕಾರ, ಶರ್ಮಿಷ್ಠಾ ಅವರ ವಿಡಿಯೋದಲ್ಲಿ ಇಸ್ಲಾಮಿಕ್ ಪ್ರವಾದಿಯವರನ್ನು ಅವಮಾನಿಸಿದ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿ ಆಕೆಗೆ ಬೆದರಿಕೆಗಳು ಬಂದಿದ್ದವು. ದೆಹಲಿ ಮ್ಯಾಜಿಸ್ಟ್ರೇಟ್ ರಾತ್ರಿಯಲ್ಲಿ ಟ್ರಾನ್ಸಿಟ್ ರಿಮಾಂಡ್ ನೀಡಿದ್ದು, ಶರ್ಮಿಷ್ಠಾ ಅವರನ್ನು ಶನಿವಾರ ಬೆಳಿಗ್ಗೆ ಕೊಲ್ಕತ್ತಾಕ್ಕೆ ಕರೆತರಲಾಗುವುದು. ಪ್ರಕರಣದ ತನಿಖೆ ಮುಂದುವರಿದಿದೆ.

  • RCB ಐಪಿಎಲ್ ಗೆದ್ದರೆ ಸರ್ಕಾರಿ ರಜೆ ಘೋಷಿಸಿ: ಸಿದ್ದರಾಮಯ್ಯಗೆ ಅಭಿಮಾನಿ ಮನವಿ

    ಬೆಳಗಾವಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಒಬ್ಬ ಅಭಿಮಾನಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ವಿಶಿಷ್ಟ ಮನವಿಯನ್ನು ಮಾಡಿದ್ದಾರೆ. ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿಯನ್ನು ಆರ್‌ಸಿಬಿ ಗೆದ್ದರೆ, ಆ ದಿನವನ್ನು ರಾಜ್ಯ ರಜೆಯನ್ನಾಗಿ ಘೋಷಿಸಬೇಕೆಂದು ಅವರು ಕೋರಿದ್ದಾರೆ.

    ಬೆಳಗಾವಿ ಜಿಲ್ಲೆಯ ಶಿವಾನಂದ ಮಲ್ಲಣ್ಣವರ್ ಎಂಬ ಈ ಅಭಿಮಾನಿ, ಆರ್‌ಸಿಬಿ ಐಪಿಎಲ್ ಗೆದ್ದ ದಿನವನ್ನು ಅಧಿಕೃತವಾಗಿ “ಆರ್‌ಸಿಬಿ ಅಭಿಮಾನಿಗಳ ಹಬ್ಬ” ಎಂದು ಘೋಷಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ಇದು ಕರ್ನಾಟಕ ರಾಜ್ಯೋತ್ಸವದಂತೆಯೇ ಆಗಿರಬೇಕು ಎಂದು ಅವರು ಸೂಚಿಸಿದ್ದಾರೆ.

    ಮಲ್ಲಣ್ಣವರ್ ಅವರು ಪ್ರತಿ ವರ್ಷ ಆ ದಿನವನ್ನು ಸಾರ್ವಜನಿಕ ರಜೆಯಾಗಿ ಘೋಷಿಸಬೇಕು ಎಂದು ಕರ್ನಾಟಕ ಸರ್ಕಾರವನ್ನು ಕೇಳಿಕೊಂಡಿದ್ದಾರೆ, ಇದರಿಂದ ರಾಜ್ಯದಾದ್ಯಂತ ಅಭಿಮಾನಿಗಳು ಈ ಸಂನ್ಮಾನಕರ ಕ್ಷಣವನ್ನು ವಾರ್ಷಿಕವಾಗಿ ಸಂಭ್ರಮಿಸಬಹುದು. ಜೊತೆಗೆ, ರಾಜ್ಯವ್ಯಾಪಿ ಆಚರಣೆಗೆ ಅವಕಾಶ ನೀಡಬೇಕು ಮತ್ತು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಆರ್‌ಸಿಬಿ ಚಾಂಪಿಯನ್‌ಶಿಪ್ ಗೆದ್ದರೆ, ಉತ್ಸವಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸಲಹೆ ನೀಡಿದ್ದಾರೆ.

    ಗುರುವಾರ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಆರ್‌ಸಿಬಿ, ಪಂಜಾಬ್ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಪ್ರವೇಶಿಸಿದೆ. ಕಳೆದ 18 ವರ್ಷಗಳಿಂದ ಆರ್‌ಸಿಬಿ ಐಪಿಎಲ್ ಗೆದ್ದಿಲ್ಲದೇ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಾ ಬಂದಿದೆ.

    ಮುಖ್ಯಮಂತ್ರಿಗಳಿಗೆ ಬರೆದ ಈ ಹಸ್ತಲಿಖಿತ ಪತ್ರದ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.