Category: State

  • ಉಚಿತ ಪ್ರಯಾಣ ಎಂಬ ಕಾರಣಕ್ಕೆ ಟಿಕೆಟ್ ತಪ್ಪಿಸಿಕೊಂಡರೆ ಭಾರಿ ದಂಡ!

    ಬೆಂಗಳೂರು,ಮೇ. 11: ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ ಐದು ಭರವಸೆಗಳಲ್ಲಿ ಒಂದಾದ ‘ಶಕ್ತಿ ಯೋಜನೆ’ಯ ಭಾಗವಾಗಿ, ಕರ್ನಾಟಕದಾದ್ಯಂತ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅರ್ಹರಾಗಿದ್ದಾರೆ. ಈ ಯೋಜನೆ ಜಾರಿಗೆ ಬಂದಾಗಿನಿಂದ, ರಾಜ್ಯ ಸರ್ಕಾರ ನಡೆಸುವ ಬಸ್‌ಗಳಲ್ಲಿ ಹೆಚ್ಚಿನ ಜನದಟ್ಟಣೆ ಕಂಡುಬಂದಿದೆ, ವಿಶೇಷವಾಗಿ ಮಹಿಳೆಯರು. ಅನೇಕರು ಗುಂಪುಗಳಾಗಿ ಬಸ್‌ಗಳನ್ನು ಹತ್ತುತ್ತಾರೆ, ಆಧಾರ್ ಕಾರ್ಡ್‌ಗಳನ್ನು ಹಿಡಿದು ಉಚಿತ ಪ್ರಯಾಣವನ್ನು ಪಡೆಯುತ್ತಾರೆ. ಆದಾಗ್ಯೂ, ಉಚಿತ ಟಿಕೆಟ್ ಪಡೆಯುವುದನ್ನು ತಪ್ಪಿಸುವವರಿಗೆ ಈಗ ಕೆಎಸ್‌ಆರ್‌ಟಿಸಿ ಭಾರೀ ದಂಡ ವಿಧಿಸುತ್ತಿದೆ.

    ಉಚಿತ ಪ್ರಯಾಣದ ಹೊರತಾಗಿಯೂ ಮಹಿಳಾ ಪ್ರಯಾಣಿಕರು ಟಿಕೆಟ್ ತೆಗೆದುಕೊಳ್ಳುವುದರಿಂದ ವಿನಾಯಿತಿ ಪಡೆದಿಲ್ಲ. ಅವರು ತಮ್ಮ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ತೆಗೆದುಕೊಳ್ಳಬೇಕು. ಟಿಕೆಟ್‌ನಲ್ಲಿ ಉಲ್ಲೇಖಿಸಲಾದ ನಿಲ್ದಾಣದಲ್ಲಿಯೂ ಅವರು ಇಳಿಯಬೇಕು. ನಿಯಮಗಳ ಯಾವುದೇ ಉಲ್ಲಂಘನೆಗೆ ನಿಗದಿತ ದಂಡ ವಿಧಿಸಲಾಗುತ್ತದೆ. ಪುರುಷ ಪ್ರಯಾಣಿಕರು ಸಹ ಟಿಕೆಟ್ ಖರೀದಿಸಬೇಕು; ಹಾಗೆ ಮಾಡಲು ವಿಫಲವಾದರೆ ಭಾರೀ ದಂಡ ವಿಧಿಸಲಾಗುತ್ತದೆ.

    ದಂಡವಾಗಿ 7.32 ಲಕ್ಷ ರೂ. ಸಂಗ್ರಹ :

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಏಪ್ರಿಲ್‌ನಲ್ಲಿ 3,780 ಟಿಕೆಟ್ ರಹಿತ ಪ್ರಯಾಣಿಕರಿಂದ ₹7.32 ಲಕ್ಷ ದಂಡ ಸಂಗ್ರಹಿಸಿದೆ. ಹೆಚ್ಚುವರಿಯಾಗಿ, ನಿಯಮ ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

  • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅತಿಥಿ ಶಿಕ್ಷಕರ ನೇಮಕ : ಅರ್ಜಿ ಆಹ್ವಾನ

    ಉಡುಪಿ, ಮೇ 09 : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ (ರಾಜ್ಯ ಪಠ್ಯಕ್ರಮ) ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

     ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮೇ 19 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ https://dom.karnataka.gov.in  ಅಥವಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಕಚೇರಿ ಅಥವಾ ಸಹಾಯವಾಣಿ ಸಂಖ್ಯೆ : 8277799990 ಗೆ ಅಥವಾ ಉಡುಪಿ ದೂ.ಸಂಖ್ಯೆ: 0820-2574596, ಕುಂದಾಪುರ ದೂ.ಸಂಖ್ಯೆ: 08254-23070 ಹಾಗೂ ಕಾರ್ಕಳ ದೂ.ಸಂಖ್ಯೆ: 08258-231101 ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. 

  • ಕೃಷಿ ಡಿಪ್ಲೊಮಾ ಕೋರ್ಸ್ ಪ್ರವೇಶಾತಿ : ಅರ್ಜಿ ಆಹ್ವಾನ

    ಉಡುಪಿ, ಮೇ 09 : ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ ಬ್ರಹ್ಮಾವರದ ಡಿಪ್ಲೊಮಾ ಕೃಷಿ ಮಹಾವಿದ್ಯಾಲಯದಲ್ಲಿ ಎರಡು ವರ್ಷಗಳ ಕೃಷಿ ಡಿಪ್ಲೊಮಾ ಕೋರ್ಸ್ಗಳ ಪ್ರವೇಶಾತಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನಿಷ್ಠ ಶೇ.45 ಅಂಕಗಳೊಂದಿಗೆ ಉತ್ತೀರ್ಣರಾಗಿರುವ, 19 ವರ್ಷ ವಯಸ್ಸು ಮೀರದ ಅರ್ಹ ಅಭ್ಯರ್ಥಿಗಳಿಂದ ವೆಬ್ಸೈಟ್ ತಿತಿತಿ.uಚಿhs.eಜu.iಟಿ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.

     ಅರ್ಜಿ ಸಲ್ಲಿಸಲು ಜೂನ್ 6 ಕೊನೆಯ ದಿನ. ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ. 50 ರಷ್ಟು ಮೀಸಲಾತಿ ಇರುತ್ತದೆ. ಎರಡು ವರ್ಷದ ಡಿಪ್ಲೋಮಾ ಕೋರ್ಸ್ನಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಹೈನುವಿಜ್ಞಾನ, ರೇಷ್ಮೆಕೃಷಿ, ಜೇನು ಕೃಷಿ ಹೀಗೆ ಕೃಷಿಗೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ನುರಿತ ವಿಜ್ಞಾನಿಗಳಿಂದ ಭೋದನೆ ಮಾಡಲಾಗುವುದು ಹಾಗೂ ಕೃಷಿ ರಂಗದ ಪ್ರಾಯೋಗಿಕ ಪರಿಚಯ / ಅನುಭವ ಆಧಾರಿತ ಕಲಿಕೆಗೆ ಹೆಚ್ಚಿನ ಮಹತ್ವ ನೀಡಲಾಗುವುದು. 

     ಹೆಚ್ಚಿನ ಮಾಹಿತಿಗಾಗಿ ಕುಲಸಚಿವರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ ಅಥವಾ ಪ್ರಾಂಶುಪಾಲರು, ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಮೊ.ನಂ: 9108241342 ಅಥವಾ 9686405090 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

  • ಆಪರೇಷನ್‌ ಸಿಂಧೂರ್‌ – ರಾಜ್ಯದ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ

    ಬೆಂಗಳೂರು : ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ದೇಶದ ಮೂರು ಸಶಸ್ತ್ರ ಪಡೆಗಳ ಸೈನಿಕರಿಗೆ ಕೃತಜ್ಞತೆ ಸಲ್ಲಿಸಲು ರಾಜ್ಯಾದ್ಯಂತ ಎಲ್ಲಾ ಮಸೀದಿಗಳಲ್ಲಿ ನಾಳೆ (ಮೇ 9) ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ತಿಳಿಸಿದ್ದಾರೆ.

    ನಾಳೆ ಶುಕ್ರವಾರ ಮಸೀದಿಗಳಲ್ಲಿ ಮುಸಲ್ಮಾನರೆಲ್ಲರೂ ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಭಾರತೀಯ ಸೈನಿಕರಿಗೆ ಕೃತಜ್ಞತೆ, ಧೈರ್ಯ ಹಾಗೂ ಶಕ್ತಿ ತುಂಬಲು ಮಸೀದಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

  • ಉಡುಪಿ: ಸಾಲಿಡಾರಿಟಿ ಕರ್ನಾಟಕ; ಡಾ. ನಸೀಮ್ ಅಹ್ಮದ್ ನೇತೃತ್ವದ ನೂತನ ರಾಜ್ಯ ತಂಡಕ್ಕೆ ಜವಾಬ್ದಾರಿ ಹಸ್ತಾಂತರ

    ಉಡುಪಿ: ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ಕರ್ನಾಟಕ 2023-2025 ಅವಧಿಯು ಮುಕ್ತಾಯಗೊಂಡಿದ್ದು, ಜೆಐಎಚ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಅವರ ಸಮಕ್ಷಮದಲ್ಲಿ ನೂತನ ರಾಜ್ಯ ತಂಡಕ್ಕೆ, ಅಧ್ಯಕ್ಷ ಡಾ. ನಸೀಮ್ ಅಹ್ಮದ್ ನೇತೃತ್ವದಲ್ಲಿ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಲಾಗಿದೆ.

  • ನೀವು ರಜೆಗೆ ಊಟಿಗೆ ಹೋಗಲು ಯೋಜಿಸುತ್ತಿದ್ದೀರಾ? ಇದನ್ನು ಓದಿ

    ಚೆನ್ನೈ, ಮೇ 07, 2025: ತಮಿಳುನಾಡಿನ ಜನಪ್ರಿಯ ಗಿರಿಧಾಮಗಳಾದ ಊಟಿ ಮತ್ತು ಕೊಡೈಕಾನಲ್‌ಗೆ ಪ್ರವಾಸಿ ವಾಹನಗಳ ಪ್ರವೇಶವನ್ನು ಮಿತಿಗೊಳಿಸಿ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದೆ. ಏಪ್ರಿಲ್‌ನಿಂದ ಜೂನ್ 2025ರವರೆಗೆ ಈ ನಿರ್ಬಂಧ ಜಾರಿಯಲ್ಲಿರಲಿದ್ದು, ಹೆಚ್ಚುತ್ತಿರುವ ಟ್ರಾಫಿಕ್ ಮತ್ತು ಪರಿಸರಕ್ಕೆ ಒತ್ತಡದ ಸಮಸ್ಯೆಗೆ ಪರಿಹಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

    ಪ್ರತಿದಿನದ ವಾಹನ ಮಿತಿ

    ಕೋರ್ಟ್ ಆದೇಶದ ಪ್ರಕಾರ:

    • ಊಟಿ: ವಾರಾಂತ್ಯದಲ್ಲಿ 8,000 ವಾಹನಗಳು, ವಾರದ ದಿನಗಳಲ್ಲಿ 6,000 ವಾಹನಗಳು
    • ಕೊಡೈಕಾನಲ್: ವಾರಾಂತ್ಯದಲ್ಲಿ 6,000 ವಾಹನಗಳು, ವಾರದ ದಿನಗಳಲ್ಲಿ 4,000 ವಾಹನಗಳು

    ನ್ಯಾಯಮೂರ್ತಿಗಳಾದ ಎನ್. ಸತೀಶ್ ಕುಮಾರ್ ಮತ್ತು ಭರತ್ ಚಕ್ರವರ್ತಿ ಅವರ ವಿಶೇಷ ಪೀಠವು ಈ ಆದೇಶವನ್ನು ಜಾರಿಗೊಳಿಸಿದ್ದು, ಈ ನಿರ್ಬಂಧವು ಈ ಕೆಳಗಿನವುಗಳಿಗೆ ಅನ್ವಯಿಸುವುದಿಲ್ಲ:

    • ಸಾರ್ವಜನಿಕ ಸಾರಿಗೆ (ಬಸ್‌ಗಳು, ರೈಲುಗಳು)
    • ಸ್ಥಳೀಯ ನಿವಾಸಿಗಳ ವಾಹನಗಳು
    • ಕೃಷಿ ಉತ್ಪನ್ನಗಳನ್ನು ಸಾಗಿಸುವ ವಾಹನಗಳು

    ಇದರ ಜೊತೆಗೆ, ಪರಿಸರ ಸೂಕ್ಷ್ಮ ಪ್ರದೇಶಗಳಿಗೆ ಪ್ರವೇಶಕ್ಕೆ ಇ-ಪಾಸ್‌ಗಳನ್ನು ನೀಡುವಾಗ ವಿದ್ಯುತ್ ವಾಹನಗಳಿಗೆ ಆದ್ಯತೆ ನೀಡುವಂತೆ ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ.

    ನಿಗಿರಿಸ್‌ನಲ್ಲಿ 12 ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಚಾಸಿಸ್ ವಾಹನಗಳನ್ನು ಅನುಮತಿಸಲಾಗುವುದಿಲ್ಲ.

    ಹಿನ್ನೆಲೆ ಮತ್ತು ಸರಕಾರದ ಪ್ರತಿಕ್ರಿಯೆ

    ತಮಿಳುನಾಡು ಸರಕಾರವು ಕೋರ್ಟ್‌ಗೆ ಮಾಹಿತಿ ನೀಡಿದ ಪ್ರಕಾರ, ದಿನನಿತ್ಯ ಸುಮಾರು 20,000 ವಾಹನಗಳು ನೀಲಗಿರಿಗೆ ಪ್ರವೇಶಿಸುತ್ತಿವೆ, ಇದರಿಂಸಾಗಿ ಟ್ರಾಫಿಕ್ ದಟ್ಟಣೆ ಮತ್ತು ಪರಿಸರ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈ ಸಮಸ್ಯೆಯನ್ನು ಎದುರಿಸಲು ಕೋರ್ಟ್ ಈ ಹಿಂದೆ ಊಟಿ ಮತ್ತು ಕೊಡೈಕಾನಲ್‌ಗೆ ಪ್ರವೇಶಿಸುವ ಎಲ್ಲ ವಾಹನಗಳಿಗೆ ಇ-ಪಾಸ್ ಕಡ್ಡಾಯಗೊಳಿಸಿತ್ತು.

    ಮತ್ತಷ್ಟು ಪರಿಹಾರಕ್ಕಾಗಿ, ಸರಕಾರವು ಐಐಎಂ-ಬೆಂಗಳೂರು ಮತ್ತು ಐಐಟಿ-ಮದ್ರಾಸ್‌ನೊಂದಿಗೆ ಸಹಯೋಗದಲ್ಲಿ ಈ ಪ್ರದೇಶದ ಬೈಪಾಸ್ ರಸ್ತೆಗಳ ಟ್ರಾಫಿಕ್ ಸಾಮರ್ಥ್ಯದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸುತ್ತಿದೆ.

    ಟ್ರಾಫಿಕ್ ಡೇಟಾ ಮತ್ತು ಪ್ರವಾಸೋದ್ಯಮದ ಮೇಲಿನ ಪರಿಣಾಮ

    ಅಧಿಕೃತ ವರದಿಗಳ ಪ್ರಕಾರ, ನೀಲಗಿರಿಗೆ ದಿನನಿತ್ಯದ ವಾಹನ ಪ್ರವೇಶವು ಋತುವಿನ ಆಧಾರದ ಮೇಲೆ ಬದಲಾಗುತ್ತದೆ:

    • ಆಫ್-ಸೀಸನ್: 1,150 ಕಾರುಗಳು, 118 ವ್ಯಾನ್‌ಗಳು, 60 ಬಸ್‌ಗಳು, 674 ದ್ವಿಚಕ್ರ ವಾಹನಗಳು
    • ಪೀಕ್ ಸೀಸನ್: 11,509 ಕಾರುಗಳು, 1,341 ವ್ಯಾನ್‌ಗಳು, 637 ಬಸ್‌ಗಳು, 6,524 ದ್ವಿಚಕ್ರ ವಾಹನಗಳು

    ಈ ನಿರ್ಬಂಧಗಳು ಟ್ರಾಫಿಕ್ ಸುಗಮಗೊಳಿಸುವ ಜೊತೆಗೆ ರಸ್ತೆ ಸುರಕ್ಷತೆಯನ್ನು ಖಾತ್ರಿಪಡಿಸಲು ಮತ್ತು ಗಿರಿಧಾಮಗಳ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಹಾನಿಯನ್ನು ಕವಿಮಗೊಳಿಸುವ ಗುರಿಯನ್ನು ಹೊಂದಿವೆ.

    ಏಪ್ರಿಲ್-ಜೂನ್ ಅವಧಿಯಲ್ಲಿ ಊಟಿ ಅಥವಾ ಕೊಡೈಕಾನಲ್‌ಗೆ ಪ್ರಯಾಣ ಯೋಜಿಸುತ್ತಿರುವವರು ವಾಹನ ಮಿತಿಗಳನ್ನು ಪರಿಶೀಲಿಸಿ, ತೊಂದರೆ ತಪ್ಪಿಸಲು ಮುಂಗಡವಾಗಿ ಇ-ಪಾಸ್‌ಗೆ ಅರ್ಜಿ ಸಲ್ಲಿಸಬೇಕು. ವಿದ್ಯುತ್ ವಾಹನಗಳಿಗೆ ಒತ್ತು ನೀಡುವ ಈ ಕ್ರಮವು ತಮಿಳುನಾಡಿನ ಗಿರಿಧಾಮಗಳಲ್ಲಿ ಸುಸ್ಥಿರ ಪ್ರವಾಸೋದ್ಯಮಕ್ಕೆ ಒತ್ತಾಸಿಯಾಗಿದೆ.

  • ಅಕ್ರಮ ಗಣಿಗಾರಿಕೆ: MLA ಜನಾರ್ಧನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ; ಸಿಬಿಐ ವಿಶೇಷ ಕೋರ್ಟ್ ತೀರ್ಪು

    ಹೈದರಾಬಾದ್: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಓಬಳಾಪುರಂ ಮೈನಿಂಗ್ ಕಂಪನಿ(ಒಎಂಸಿ)ಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಗಂಗಾವತಿ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ.

    ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ – ಪ್ರತಿವಾದ ಆಲಿಸಿದ್ದ ಹೈದರಾಬಾದ್ ಸಿಬಿಐ ನ್ಯಾಯಾಲಯ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ಕೋರ್ಟ್, ಒಎಂಸಿ ಕಂಪನಿ ಮಾಲೀಕ ಜನಾರ್ದನ ರೆಡ್ಡಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

    ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಓಬಳಾಪುರಂನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ಬರೋಬ್ಬರಿ 13 ವರ್ಷಗಳಿಂದ ನಡೆದ ಸುದೀರ್ಘ ವಿಚಾರಣಾ ಪ್ರಕ್ರಿಯೆಯಲ್ಲಿ 3,400ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲಿಸಲಾಗಿದೆ ಮತ್ತು 219 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

    ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಜನಾರ್ದನ ರೆಡ್ಡಿ ಅವರ ಶಾಸಕ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಇನ್ನು, ಇದೇ ಪ್ರಕರಣದಲ್ಲಿ ವಿ.ಡಿ.ರಾಜಗೋಪಾಲ್, ದಿ. ರಾವ್ ಲಿಂಗಾರೆಡ್ಡಿ, ಕೆ.ಮೆಹಫೂಸ್ ಅಲಿ ಖಾನ್ ಕೂಡ ಅಪರಾಧಿ ಎಂದು ಕೋರ್ಟ್​​ ತೀರ್ಪು ನೀಡಿದೆ.

    ಜನಾರ್ದನ ರೆಡ್ಡಿ, ಬಿ.ವಿ ಶ್ರೀನಿವಾಸ ರೆಡ್ಡಿ (ಒಎಂಸಿ ವ್ಯವಸ್ಥಾಪಕ ನಿರ್ದೇಶಕ), ಮೆಫಾಜ್ ಅಲಿ ಖಾನ್ (ಜನಾರ್ದನ ರೆಡ್ಡಿ ಆಪ್ತ ಸಹಾಯಕ), ವಿ ಡಿ ರಾಜಗೋಪಾಲ್ (ಗಣಿ ಇಲಾಖೆಯ ಮಾಜಿ ನಿರ್ದೇಶಕ), ಕೃಪಾನಂದಂ (ನಿವೃತ್ತ ಐಎಎಸ್ ಅಧಿಕಾರಿ), ಸಬಿತಾ ಇಂದ್ರಾರೆಡ್ಡಿ (ತೆಲಂಗಾಣದ ಮಾಜಿ ಸಚಿವೆ ಹಾಗೂ ಹಾಲಿ ಶಾಸಕಿ), ವೈ. ಶ್ರೀಲಕ್ಷ್ಮಿ (2022ರಲ್ಲಿ ಸೇವೆಯಿಂದ ಬಿಡುಗಡೆಯಾದ ಐಎಎಸ್ ಅಧಿಕಾರಿ) ಮತ್ತು ದಿವಂಗತ ಆರ್. ಲಿಂಗಾ ರೆಡ್ಡಿ (ಅಂದಿನ ಗಣಿ ಇಲಾಖೆಯ ಸಹಾಯಕ ನಿರ್ದೇಶಕ) ಈ ಪ್ರಕರಣದ ಆರೋಪಿಗಳಾಗಿದ್ದಾರೆ. ಇವರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ, 420, 409, 468 ಮತ್ತು 471 ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(2) ಜೊತೆಗೆ 13(1)(ಡಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    2009 ರಲ್ಲಿ ಸಿಬಿಐ ಒಎಂಸಿ ಕಂಪನಿಯ ಅಕ್ರಮ ಗಣಿಗಾರಿಕೆ ಆರೋಪ ಸಂಬಂಧ ತನಿಖೆ ಪ್ರಾರಂಭಿಸಿತ್ತು. ವೈ.ಎಸ್. ರಾಜಶೇಖರ ರೆಡ್ಡಿ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರ ಒಎಂಸಿ ಕಂಪನಿಗೆ ಓಬಳಾಪುರಂ ಮತ್ತು ಡಿ. ಹಿರೇಹಾಳದಲ್ಲಿ ಕ್ರಮವಾಗಿ 68.5 ಹೆಕ್ಟೇರ್ ಮತ್ತು 39.5 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆ ನೀಡುವಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಕೇಳಿ ಬಂದಿತ್ತು. ಅಂದಿನ ಗಣಿ ಇಲಾಖೆಯ ಸಹಾಯಕ ನಿರ್ದೇಶಕ ಲಿಂಗಾ ರೆಡ್ಡಿ ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆ ನೀಡುವ ವೇಳೆ 23 ಅರ್ಜಿದಾರರನ್ನು ನಿರ್ಲಕ್ಷಿಸಿ, ಒಎಂಸಿ ಕಂಪನಿಗೆ ಗುತ್ತಿಗೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಆರೋಪ ಇದೆ.

    ಜನಾರ್ಧನ ರೆಡ್ಡಿ 25 ಮಾರ್ಚ್ 2025 ನಲ್ಲಿ ಬಿಜೆಪಿ ಗೆ ಮರು ಸೇರ್ಪಡೆಯಾಗಿದ್ದರು.

  • ನಾಳೆ ಮಾಕ್‌ ಡ್ರಿಲ್‌

    ನವದೆಹಲಿ (ಮೇ.06): ಪಹಲ್ಗಾಂ ಭಯೋತ್ಪಾದಕ ದಾಳಿ ನಂತರ ಪಾಕಿಸ್ತಾನದ ಜತೆ ಹೆಚ್ಚುತ್ತಿರುವ ಯುದ್ಧ ಉದ್ವಿಗ್ನತೆಯ ನಡುವೆಯೇ ಮಹತ್ವದ ಕ್ರಮವೊಂದರಲ್ಲಿ ಕೇಂದ್ರ ಗೃಹ ಸಚಿವಾಲಯವು ಮೇ 7ರ ಬುಧವಾರದಂದು ಪೂರ್ಣ ಪ್ರಮಾಣದ ನಾಗರಿಕ ರಕ್ಷಣಾ ಅಣಕು ಕವಾಯತುಗಳನ್ನು (ಮಾಕ್‌ ಡ್ರಿಲ್‌) ನಡೆಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿದೆ. 1971ರ ಬಾಂಗ್ಲಾ ವಿಮೋಚನಾ ಯುದ್ಧದ ಬಳಿಕ ಭಾರತದಲ್ಲಿ ಇಂಥ ತಾಲೀಮು ನಡೆಯುತ್ತಿರುವುದು ಇದೇ ಮೊದಲು. ಏ.22ರಂದು ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ 25 ಪ್ರವಾಸಿಗರು ಸೇರಿದಂತೆ 26 ನಾಗರಿಕರನ್ನು ಉಗ್ರರು ಹತ್ಯೆ ಮಾಡಿದ್ದರು.

    ನಾಳೆ ಏನು ನಡೆಯುತ್ತೆ?

    1. ವಾಯುದಾಳಿ ಎಚ್ಚರಿಕೆ ಸೈರನ್‌: ಶತ್ರುಗಳ ವಾಯುದಾಳಿಯ ಸಂದರ್ಭದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಯುದ್ಧ ಸೈರನ್‌ಗಳು ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

    2. ನಾಗರಿಕರಿಗೆ ರಕ್ಷಣಾ ತರಬೇತಿ: ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ರಕ್ಷಿಸಿಕೊಳ್ಳುವ ವಿಧಾನಗಳ ಕುರಿತು ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಪ್ರಸ್ತುತ ಪೀಳಿಗೆಯು ಎಂದಿಗೂ ಯುದ್ಧವನ್ನು ನೋಡಿಲ್ಲ. ಹೀಗಾಗಿ ಇದು ಮುಖ್ಯವಾಗಿದೆ.

    3. ಬ್ಲ್ಯಾಕ್‌ ಔಟ್‌ ಡ್ರಿಲ್‌: ವಾಯುದಾಳಿಯ ಸಂದರ್ಭದಲ್ಲಿ ನಗರಗಳು ಮತ್ತು ಹಳ್ಳಿಗಳಲ್ಲಿ ಸಂಪೂರ್ಣ ವಿದ್ಯುತ್‌ ಕಡಿತ ಮಾಡಲಾಗುತ್ತದೆ. ರಾತ್ರಿ ವಾಹನಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗುತ್ತದೆ. ಇದರ ಪರೀಕ್ಷೆ ಈಗ ನಡೆಯಲಿದೆ. ವೈರಿ ದೇಶಗಳಿಗೆ ಊರುಗಳ ಗುರುತು ಪತ್ತೆ ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ.

    4. ಪ್ರಮುಖ ಸ್ಥಾವರಗಳ ಮರೆಮಾಚುವಿಕೆ: ನಮ್ಮ ಪ್ರಮುಖ ಸ್ಥಾವರಗಳು ಸುರಕ್ಷಿತವಾಗಿರುವುದನ್ನು ಮತ್ತು ಶತ್ರುಗಳ ಬಾಂಬ್ ದಾಳಿಗೆ ತುತ್ತಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶ.

    5. ಸ್ಥಳಾಂತರ ಯೋಜನೆಯ ಪೂರ್ವಾಭ್ಯಾಸ: ದುರ್ಗಮ ಪ್ರದೇಶಗಳಿಂದ ನಾಗರಿಕರನ್ನು ಹೇಗೆ ಸ್ಥಳಾಂತರಿಸಬಹುದು ಮತ್ತು ರಕ್ಷಿಸಬಹುದು ಎಂಬುದನ್ನು ಪರೀಕ್ಷಿಸಲು ಇದನ್ನು ನಡೆಸಲಾಗುತ್ತದೆ.

    ಎಲ್ಲಿ?

    ಕರ್ನಾಟಕದಲ್ಲಿ, ಬೆಂಗಳೂರು ನಗರ, ಮಲ್ಲೇಶ್ವರ ಮತ್ತು ರಾಯಚೂರಿನ ಶಕ್ತಿನಗರದಲ್ಲಿ ನಡೆಸಲಾಗುವುದು.

    ‘ಬ್ಲ್ಯಾಕೌಟ್‌ ಡ್ರಿಲ್‌’: ಭಾನುವಾರವಷ್ಟೆ ಯುದ್ಧದ ಪರಿಸ್ಥಿತಿಯನ್ನು ಎದುರಿಸುವ ತಾಲೀಮಿನ ಭಾಗವಾಗಿ, ಪಂಜಾಬ್‌ನ ಫಿರೋಜ್‌ಪುರದ ಕಂಟೋನ್ಮೆಂಟ್ ಪ್ರದೇಶದಲ್ಲಿ ರಾತ್ರಿ 9 ರಿಂದ 9.30ರವರೆಗೆ ವಿದ್ಯುತ್‌ ಕಡಿತ ಮಾಡಿ ‘ಬ್ಲ್ಯಾಕೌಟ್‌ ಡ್ರಿಲ್‌’ ನಡೆಸಲಾಗಿತ್ತು. ಈ ವೇಳೆ ವಾಹನ ಸಂಚಾರವನ್ನೂ ನಿಲ್ಲಿಸಿ ಅವುಗಳ ಲೈಟ್‌ ಆಫ್‌ ಮಾಡಲಾಗಿತ್ತು. ‘ಯುದ್ಧದ ಸಂದರ್ಭದಲ್ಲಿ ವೈರಿಗಳಿಂದ ರಕ್ಷಣೆ ಪಡೆಯಲು ಭದ್ರತಾ ದೃಷ್ಟಿಯಿಂದ ವಿದ್ಯುತ್‌ ತೆಗೆಯಲಾಗುತ್ತದೆ. ಆದ್ದರಿಂದ ಪೂರ್ವಾಭ್ಯಾಸ ನಡೆಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದರು.

  • ಶಿವಮೊಗ್ಗ: ಕ್ರಿಕೆಟ್‌ ವಿಚಾರವಾಗಿ ಗಲಾಟೆ: ಓರ್ವನ ಕೊಲೆಯಲ್ಲಿ ಅಂತ್ಯ

    ಶಿವಮೊಗ್ಗ: ಕ್ರಿಕೆಟ್‌ ವಿಚಾರವಾಗಿ ನಡೆದ ಗಲಾಟೆಯಿಂದಾಗಿ ಓರ್ವನ ಕೊಲೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.
    ಕೊಲೆಯಾದ ಯುವಕನನ್ನು ಅರುಣ್‌ ಎಂದು ಗುರುತಿಸಲಾಗಿದೆ.

    ಸೋಮವಾರ ಸಂಜೆ ಯುವಕರ ತಂಡ ಕ್ರಿಕೆಟ್‌ ಆಡುವಾಗ ಆಟದ ವಿಚಾರಕ್ಕೆ ಸಂಬಂಧಿಸಿದಂತೆ ಪರಸ್ಪರ ಜಗಳವಾಡಿಕೊಂಡಿದ್ದಾರೆ.

    ವಿಷಯ ಆಟದ ಮೈದಾನದಲ್ಲೇ ಮುಗಿದಿದ್ದರೂ ಕೂಡ ಒಂದು ಗುಂಪು ಪುನಃ ರಾತ್ರಿ ವೇಳೆ ಮಾತನಾಡಬೇಕು ಎಂದು ಕರೆಯಿಸಿಕೊಂಡು ತಗಾದೆ ತೆಗೆದಿದ್ದು, ಅರುಣ್‌ ಹಾಗೂ ಸಂಜಯ್‌ ಎನ್ನುವವರ ಮೇಲೆ ತೀವ್ರ ಹಲ್ಲೆ ನಡೆಸಿದ್ದಾರೆ. ಗಲಾಟೆ ತಾರಕಕ್ಕೇರಿ ಭರ್ಚಿಯಿಂದ ಇರಿದಿದ್ದಾರೆ. ಈ ಹಿನ್ನೆಲೆ ಅರುಣ್‌ ಮೃತಪಟ್ಟರೆ, ಸಂಜಯ್‌ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಇನ್ನು, ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಎಸ್‌.ಪಿ ಮಿಥುನ್‌ ಕುಮಾರ್ ಜಿ.ಕೆ. ತಿಳಿಸಿದ್ದಾರೆ.

  • ಬೆಳಗಾವಿ ಅಪಘಾತ: SUV-Car ಡಿಕ್ಕಿ, ಮೂವರು ಸಾವು, ಮಾಜಿ ಶಾಸಕರ ಪುತ್ರನ ವಿರುದ್ಧ ಪ್ರಕರಣ ದಾಖಲು

    ಬೆಳಗಾವಿ, ಮೇ 5: ಬೈಲಹೊಂಗಲ್ ತಾಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಬಳಿ ಸೋಮವಾರ ನಡೆದ SUV ಮತ್ತು ಕಾರಿನ ಮುಖಾಮುಖಿ ಡಿಕ್ಕಿಯಲ್ಲಿ ಒಂದೇ ಕುಟುಂಬದ ಒಂದು ವರ್ಷದ ಬಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಆರೋಪಿಯಾದ ಕಾರು ಚಾಲಕನನ್ನು ಮಾಜಿ ಶಾಸಕ ಆರ್.ವಿ. ಪಾಟೀಲ್ ಅವರ ಪುತ್ರ ಎಂದು ಗುರುತಿಸಲಾಗಿದೆ.

    ಪೊಲೀಸರ ಪ್ರಕಾರ, ಕಾರು ಹಿರೇಬಾಗೇವಾಡಿಯತ್ತ ಸಾಗುತ್ತಿದ್ದರೆ, SUV ಬೈಲಹೊಂಗಲ್ ಕಡೆಗೆ ಚಲಿಸುತ್ತಿತ್ತು. ಚಿಕ್ಕಬಾಗೇವಾಡಿ ಬಳಿ ಎರಡೂ ವಾಹನಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿವೆ. ಈ ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿಯ ತೀವ್ರತೆಯಿಂದ ಒಂದು ಕಾರು ರಸ್ತೆಯ ಪಕ್ಕದ ಕೃಷಿ ಭೂಮಿಗೆ ಜಾರಿ ಸಂಪೂರ್ಣ ಜಖಂಗೊಂಡಿದೆ. SUVಯ ಮುಂಭಾಗವೂ ಹಾನಿಗೊಳಗಾಗಿದೆ.

    SUV ಮುಂದಿರುವ ವಾಹನವನ್ನು ಓವರ್‌ಟೇಕ್ ಮಾಡಲು ಯತ್ನಿಸುವಾಗ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದಿರಬಹುದು ಎಂದು ಶಂಕಿಸಲಾಗಿದೆ.

    ಮೃತರನ್ನು ಹಿರೇಬಾಗೇವಾಡಿ ಗ್ರಾಮದ ನಿವಾಸಿಗಳಾದ ಅನೀಸ್ ಸಯ್ಯದ್ (23), ಅವರ ಪತ್ನಿ ಐಮಾನ್ (21) ಮತ್ತು ಮಗ ಐಮದ್ (1) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಐಷಾ ಅನ್ವರ್ ಸಯ್ಯದ್ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

    ಆರೋಪಿಯಾದ ಕಾರು ಚಾಲಕನನ್ನು ಸವದತ್ತಿಯ ನಿವಾಸಿ ಸುರೇಶಗೌಡ ಪಾಟೀಲ್ ಎಂದು ಗುರುತಿಸಲಾಗಿದೆ. ಇವರು ಮಾಜಿ ಶಾಸಕ ಆರ್.ವಿ. ಪಾಟೀಲ್ ಅವರ ಪುತ್ರರಾಗಿದ್ದಾರೆ.

    ಬೈಲಹೊಂಗಲ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.