Category: State

  • 22 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಾಪತ್ತೆಯಾಗಿರುವ ಅನನ್ಯ ಭಟ್ ತಾಯಿ‌ಯಿಂದ ಜಿಲ್ಲಾ ಎಸ್ಪಿಗೆ ದೂರು

    ಮಂಗಳೂರು, ಜುಲೈ 15, 2025: ಇಪ್ಪತ್ತೆರಡು ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿ ಅನನ್ಯ ಭಟ್ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ತಾಯಿ ಇಂದು ಸಂಜೆ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಭೇಟಿಯಾದರು.

    ಅನನ್ಯ ಭಟ್ ತಾಯಿ ಸುಜಾತ ಭಟ್ ಅವರು ತಮ್ಮ ವಕೀಲರೊಂದಿಗೆ ಎಸ್ಪಿ ಅವರನ್ನು ಭೇಟಿಯಾಗಿ, ಮಗಳ ನಾಪತ್ತೆ ಪ್ರಕರಣದ ಬಗ್ಗೆ ದೂರು ನೀಡಿ, ನ್ಯಾಯ ಒದಗಿಸುವಂತೆ ಮನವಿ ಮಾಡಿದರು.

    ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯ ಭಟ್ ಅವರು 2003ರಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ಬಂದವರು ನಿಗೂಢವಾಗಿ ನಾಪತ್ತೆಯಾಗಿದ್ದರು. ಧರ್ಮಸ್ಥಳದಲ್ಲಿ ಒತ್ತಡದಿಂದ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ವ್ಯಕ್ತಿಯೊಬ್ಬ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದ. ಪತ್ರ ಬರೆದ ಕೆಲವೇ ದಿನಗಳ ಬಳಿಕ ಅದೇ ವ್ಯಕ್ತಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಾಧೀಶರ ಮುಂದೆ ಹೇಳಿಕೆಯನ್ನೂ ನೀಡಿದ್ದ. ಬರುವಾಗ ತನ್ನ ಜೊತೆ ಅಸ್ತಿಪಂಜರವೊಂದನ್ನು ತಂದಿದ್ದು, ಅದನ್ನು ಪೊಲೀಸರು ವಿಧಿ ವಿಜ್ಞಾನ ತನಿಖೆಗೆ ಒಳಪಡಿಸಿದ್ದಾರೆ. ಧರ್ಮಸ್ಥಳದ ಸುತ್ತಮುತ್ತ ಬಹಳಷ್ಟು ಕಡೆಗಳಲ್ಲಿ ತಾನು ಶವಗಳನ್ನು ಹೂತು ಹಾಕಿರುವುದಾಗಿಯು, ಪೊಲೀಸರು ತನಿಖೆ ನಡೆಸುವುದಾದರೆ ಆ ಸ್ಥಳಗಳನ್ನು ತೋರಿಸುವುದಾಗಿ ಆ ವ್ಯಕ್ತಿ ತಿಳಿಸಿದ್ದ. ಈಗ ಆ ವ್ಯಕ್ತಿಯನ್ನು ಪ್ರತಿನಿಧಿಸುವ ಇಬ್ಬರು ನ್ಯಾಯವಾದಿಗಳು ಎಸ್ ಐ ಟಿ ರಚನೆ ಬಗ್ಗೆ ಬೇಡಿಕೆ ಮುಂದಿಟ್ಟಿದ್ದಾರೆ.

    ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಕೊಲೆಗಳು ಹಾಗು ಅವುಗಳನ್ನು ಒತ್ತಡದಿಂದಾಗಿ ತಾನೇ ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೊಬ್ಬ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿರುವುದು ಈಗ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಅದೇ ಹೊತ್ತಿಗೆ ಸುಜಾತಾ ಭಟ್ ಅವರು ತಮ್ಮ ಮಗಳೂ ಅಲ್ಲೇ ಕಾಣೆಯಾಗಿದ್ದಾಳೆ ಎಂದು ದೂರು ಸಲ್ಲಿಸಲು ಬಂದಿದ್ದಾರೆ.

  • ವಿದ್ಯಾರ್ಥಿನಿ ಮೇಲೆ ರೇಪ್‌,ಬ್ಲ್ಯಾಕ್‌ಮೇಲ್‌ – ಮೂಡುಬಿದಿರೆ ಕಾಲೇಜಿನ ಇಬ್ಬರು ಉಪನ್ಯಾಸಕರು, ಸ್ನೇಹಿತ ಅರೆಸ್ಟ್‌

    ಬೆಂಗಳೂರು,ಜುಲೈ 15, 2025: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಬಿದಿರೆಯ ಪ್ರತಿಷ್ಠಿತ ಕಾಲೇಜಿನ ಇಬ್ಬರು ಉಪನ್ಯಾಸಕರು ಮತ್ತು ಅವರ ಸ್ನೇಹಿತನನ್ನು ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಕಾಲೇಜಿನ ಹಳೆ ವಿದ್ಯಾರ್ಥಿನಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಳು. ದೂರಿನ ಆಧಾರದಲ್ಲಿ ಎಫ್‌ಐಆರ್‌ ದಾಖಲಿಸಿದ ಪೊಲೀಸರು ಉಪನ್ಯಾಸಕರಾದ ನರೇಂದ್ರ, ಸಂದೀಪ್ ಮತ್ತು ಸ್ನೇಹಿತ ಅನೂಪ್‌ನನ್ನು ಬಂಧಿಸಿದ್ದಾರೆ.

    ಏನಿದು ಕೇಸ್‌?

    ಮೊದಲು ವಿದ್ಯಾರ್ಥಿನಿಗೆ ನೋಟ್ಸ್ ನೀಡುವ ವಿಚಾರದಲ್ಲಿ ಭೌತಶಾಸ್ತ್ರ ಉಪನ್ಯಾಸಕ ನರೇಂದ್ರ ಪರಿಚಯವಾಗಿದ್ದ. ಹಂತ ಹಂತವಾಗಿ ಚಾಟ್ ಮಾಡಿ ನೋಟ್ಸ್ ನೀಡುವುದಾಗಿ ಮತ್ತು ಸಹಾಯ ಮಾಡುವುದಾಗಿ ಹೇಳಿದ್ದ. ವಿದ್ಯಾರ್ಥಿನಿ ಬೆಂಗಳೂರಿಗೆ ಬಂದ ನಂತರವೂ ಸಲುಗೆ ಬೆಳೆಸಿದ್ದ. ಇದೆ ನೆಪದಲ್ಲಿ ವಿದ್ಯಾರ್ಥಿನಿಯನ್ನು ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿರುವ ಗೆಳೆಯನ ರೂಮ್‌ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ರೇಪ್‌ ಮಾಡಿದ ಬಳಿಕ ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ.

    ಸ್ನೇಹಿತ ನರೇಂದ್ರ ಈ ಕೃತ್ಯ ಎಸಗಿದ್ದ ವಿಚಾರ ತಿಳಿದು ಜೀವಶಾಸ್ತ್ರ ಉಪನ್ಯಾಸಕ ಸಂದೀಪ್‌ ವಿದ್ಯಾರ್ಥಿನಿಯನ್ನು ಸಂಪರ್ಕಿಸಿದ್ದಾನೆ. ಈ ವೇಳೆ ವಿದ್ಯಾರ್ಥಿನಿ ವಿರೋಧ ವ್ಯಕ್ತಪಡಿಸಿದ್ದಾಳೆ. ಈ ಸಂದರ್ಭದಲ್ಲಿ ಸಂದೀಪ್‌, ನರೇಂದ್ರ ಜೊತೆಗೆ ಇರುವ ಫೋಟೋ, ವಿಡಿಯೋ ತನ್ನ ಬಳಿ ಇದೆ ಎಂದು ಬ್ಲಾಕ್ ಮೇಲ್ ಮಾಡಿ ಅತ್ಯಾಚಾರ ಎಸಗಿದ್ದಾನೆ.

    ಸಂದೀಪ್‌ ಕರೆದುಕೊಂಡು ಹೋಗಿ ಅನೂಪ್‌ ರೂಮಿನಲ್ಲಿ ಅತ್ಯಾಚಾರ ಎಸಗಿದ್ದ. ನಂತರ ಅನೂಪ್‌ ಆಕೆಯನ್ನು ಸಂರ್ಪಕಿಸಿ ನೀನು ನನ್ನ ರೂಮಿಗೆ ಬಂದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಷ್ಟೇ ಅಲ್ಲದೇ ನನ್ನ ರೂಮ್​​ನಲ್ಲಿ ಸಿಸಿಟಿವಿ ಇದೆ ಎಂದು ಬೆದರಿಕೆ ಹಾಕಿದ್ದ. ನಂತರ ಅನೂಪ್‌ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ.

    ಉಪನ್ಯಾಸಕ ಸ್ನೇಹಿತರ ಕಿರುಕುಳ ತಾಳಲಾರದೇ ಆರಂಭದಲ್ಲಿ ಸುಮ್ಮನಿದ್ದ ವಿದ್ಯಾರ್ಥಿನಿ ಸಮಸ್ಯೆ ಹೆಚ್ಚಾದ ಬಳಿಕ ನಡೆದ ನಡೆದ ಘಟನೆಗಳನ್ನು ಬೆಂಗಳೂರಿಗೆ ಬಂದಿದ್ದ ಪೋಷಕರ ಬಳಿ ತಿಳಿಸಿದ್ದಾಳೆ. ಪೋಷಕರು ಆಕೆಯನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಹಿಳಾ ಆಯೋಗದಲ್ಲಿ ಕೌನ್ಸಿಲಿಂಗ್‌ ಮಾಡಿದ ಬಳಿಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

    ಮೂಡಬಿದಿರೆಯಲ್ಲಿ ಓದು ಮುಗಿಸಿದ್ದ ವಿದ್ಯಾರ್ಥಿನಿ ಈಗ ರಾಮನಗರದಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದಾಳೆ. ಉಪನ್ಯಾಸಕರು ಇನ್‌ಸ್ಟಾ ಮೂಲಕ ಆಕೆಯನ್ನು ಸಂಪರ್ಕಿಸಿ ಚಾಟ್‌ ಮಾಡುತ್ತಿದ್ದರು.

  • ಮಾದಕದ್ರವ್ಯ ಸಾಗಾಟ ಆರೋಪ; ಲಿಂಗರಾಜ ಕಣ್ಣಿ ಕಾಂಗ್ರೆಸ್‌ನಿಂದ ಉಚ್ಚಾಟನೆ

    ಲಬುರಗಿ, ಜುಲೈ 14, 2025: ಮಾದಕದ್ರವ್ಯ ಸಾಗಾಟ ಆರೋಪದಲ್ಲಿ ಮಹಾರಾಷ್ಟ್ರದ ಕಲ್ಯಾಣ ಪೊಲೀಸರಿಂದ ಬಂಧನಗೊಂಡ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. 2023ರಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ಸದಸ್ಯರಾಗಿದ್ದ ಲಿಂಗರಾಜ್ ಕಣ್ಣಿ ಕಾಂಗ್ರೆಸ್‌ಗೆ ಸೇರಿದ್ದರು.

    ಈ ಬಗ್ಗೆ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮತ್ತು ಎಂಎಲ್ಸಿ ಜಗದೇವ್ ಗುತ್ತೇದಾರ್ ಅವರು ಆದೇಶ ಹೊರಡಿಸಿದ್ದು, ಲಿಂಗರಾಜ್ ಕಣ್ಣಿ ಮಾದಕದ್ರವ್ಯ ಸಾಗಾಟದಲ್ಲಿ ಭಾಗವಹಿಸಿದ ಆರೋಪದ ಕಾರಣದಿಂದ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.

    ಮಹಾರಾಷ್ಟ್ರದ ಥಾಣೆ ನಗರದಲ್ಲಿ ಮಾದಕದ್ರವ್ಯ ಮಾರಾಟ ಮಾಡುವ ವೇಳೆ ಲಿಂಗರಾಜ ಕಣ್ಣಿ ಸಿಕ್ಕಿ ಬಿದ್ದಿದ್ದರು. ಅವರ ಬಳಿ ನಿಷೇಧಿತ 120 ಕೊಡೆನೈನ್ ಸಿರಪ್ ಪತ್ತೆಯಾಗಿದ್ದು, ಈ ಆರೋಪದಡಿ ಬಂಧನಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಕಲ್ಯಾಣ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

  • ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣ; ಪೊಲೀಸರ ಲೋಪ ಎತ್ತಿ ಹಿಡಿದ ವರದಿ

    ಬೆಂಗಳೂರು, ಜುಲೈ 13, 2025: ಆರ್‌ಸಿಬಿ ಗೆಲುವಿನ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ.ಕುನ್ಹಾ ನೇತೃತ್ವದ ಆಯೋಗ ಸಲ್ಲಿಸಿರುವ ವರದಿಯಲ್ಲಿ ಪೊಲೀಸರ ಗಂಭೀರ ಲೋಪಗಳನ್ನು ಎತ್ತಿ ಹಿಡಿಯಲಾಗಿದೆ.

    ಎರಡು ಸಂಪುಟಗಳನ್ನು ಒಳಗೊಂಡಿರುವ ಈ ವರದಿಯಲ್ಲಿ, ಕಾಲ್ತುಳಿತಕ್ಕೆ ಕೆಎಸ್‌ಸಿಎ, ಡಿಎನ್‌ಎ, ಆರ್‌ಸಿಬಿ ಮತ್ತು ಪೊಲೀಸರನ್ನು ನೇರವಾಗಿ ಹೊಣೆ ಮಾಡಲಾಗಿದೆ. ವರದಿಯ ಪ್ರಕಾರ, ಘಟನೆಯ ದಿನ ಮಧ್ಯಾಹ್ನ 3:25ಕ್ಕೆ ಕಾಲ್ತುಳಿತ ಸಂಭವಿಸಿದರೂ, ಪೊಲೀಸ್ ಕಮಿಷನರ್‌ಗೆ ಮಾಹಿತಿ 5:30ರವರೆಗೆ ತಲುಪದೆ ಇತ್ತ. ಜಂಟಿ ಪೊಲೀಸ್ ಆಯುಕ್ತರು ಕ್ರೀಡಾಂಗಣಕ್ಕೆ 4 ಗಂಟೆಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.

    ಕಾರ್ಯಕ್ರಮ ನಡೆಸುವುದು ಅಸಾಧ್ಯ ಎಂಬುದು ಗೊತ್ತಿದ್ದರೂ ಎಲ್ಲರೂ ಒಗ್ಗೂಡಿ ಕಾರ್ಯಕ್ರಮ ಆಯೋಜಿಸಿದ್ದರು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬಂದೋಬಸ್ತ ವ್ಯವಸ್ಥೆ ಸಮರ್ಪಕವಾಗಿರಲಿಲ್ಲ. ಕ್ರೀಡಾಂಗಣದ ಒಳಗೆ ಕೇವಲ 79 ಪೊಲೀಸರಿದ್ದರೆ, ಹೊರಗೆ ಯಾವುದೇ ಪೊಲೀಸ್ ಸಿಬ್ಬಂದಿ ಇರಲಿಲ್ಲ. ಆಂಬುಲೆನ್ಸ್ ಸೌಲಭ್ಯವೂ ಇರಲಿಲ್ಲ. ಈ ಎಲ್ಲಾ ಕರ್ತವ್ಯ ಲೋಪ ಮತ್ತು ನಿರ್ಲಕ್ಷ್ಯದ ಪರಮಾವಧಿ ಗಮನಾರ್ಹವಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದ್ದು, ಈ ಬಗ್ಗೆ ಮೂಲಗಳು ತಿಳಿಸಿವೆ.

  • ದಾಂಡೇಲಿ: ತಂದೆ-ತಾಯಿ ತಮ್ಮ ಮಗುವನ್ನು ಮಾರಾಟ ಮಾಡಿದ ಪ್ರಕರಣ – ಆರೋಪಿತರ ಬಂಧನ

    ದಾಂಡೇಲಿ, ಜುಲೈ 12, 2025: ದಾಂಡೇಲಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ತಂದೆ-ತಾಯಿಯೊಬ್ಬರು ತಮ್ಮ 20 ದಿನದ ಗಂಡು ಮಗುವನ್ನು ಮಾರಾಟ ಮಾಡಿದ ಆರೋಪದಡಿ ಆರೋಪಿತರನ್ನು ಬಂಧಿಸಲಾಗಿದೆ ಎಂದು ದಾಂಡೇಲಿ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಕ್ರೈಂ ಸಂಖ್ಯೆ 79/2025 ರಡಿ ದಾಖಲಾದ ಪ್ರಕರಣದಲ್ಲಿ, ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 143(2), 8(2) ಸಹಿತ 3(5) ಮತ್ತು ಜೆ.ಜೆ. ಆಕ್ಟ್ 2015 ರ ಕಲಂ 81 ರಡಿ ದೂರು ದಾಖಲಾಗಿದೆ. ದಿನಾಂಕ 02/07/2025 ರಂದು ಸಂಜೆ 6:15 ಗಂಟೆಗೆ ಫಿರ್ಯಾದುದಾರರಾದ ರೇಷ್ಮಾ ಕೊಂ ಮಹಾದೇವ ಪವಾಸ್ಕರ (ವಯಸ್ಸು 40, ಅಂಗನವಾಡಿ ಕಾರ್ಯಕರ್ತೆ, ಕೊಗಿಲಬಾನ, ದಾಂಡೇಲಿ) ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.

    ದೂರಿನ ಪ್ರಕಾರ, ಹಳೆ ದಾಂಡೇಲಿಯ ಸ್ವಾಮಿಲ್ ರೋಡ್‌ನ ನಿವಾಸಿಯಾದ ಮಾಹಿನ ವಸೀಂ ಚಂಡುಪಟೇಲ್ (ವಯಸ್ಸು 23) ದಿನಾಂಕ 17/06/2025 ರಂದು ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆರೋಪಿತಳು ತೀವ್ರ ಸಾಲದ ಸುಳಿಯಲ್ಲಿದ್ದು, ಸಂಘದ ಸಾಲಗಾರರು ಪದೇ ಪದೇ ಹಣವನ್ನು ಕೊಡುವಂತೆ ಕಿರಿಕಿರಿ ಮಾಡುತ್ತಿದ್ದರಿಂದ, ಮಾಹಿನ ವಸೀಂ ಚಂಡುಪಟೇಲ್ ಮತ್ತು ಆಕೆಯ ಗಂಡ ವಸೀಂ ನಜೀರ ಚಂಡುಪಟೇಲ್ ಇಬ್ಬರೂ ಸೇರಿಕೊಂಡು ತಮ್ಮ 20 ದಿನದ ಮಗುವನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ದಿನಾಂಕ 08/07/2025 ರಂದು ಧಾರವಾಡಕ್ಕೆ ತೆರಳಿ, ಬೆಳಗಾವಿಯ ನೂರ್ ಮೊಹಮ್ಮದ್ ಎಂಬಾತನಿಗೆ 3 ಲಕ್ಷ ರೂಪಾಯಿಗೆ ಮಗುವನ್ನು ಮಾರಾಟ ಮಾಡಿದ್ದಾರೆ.

    ಈ ದೂರನ್ನು ಸ್ವೀಕರಿಸಿದ ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ಅಮೀನಸಾಬ ಎಮ್. ಅತ್ತಾರ್ ರವರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಎಂ. ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ ಎಸ್., ಜಗದೀಶ ಎಂ., ಮತ್ತು ದಾಂಡೇಲಿ ಉಪವಿಭಾಗದ ಡಿವೈಎಸ್‌ಪಿ ಶಿವಾನಂದ ಮದರಕಂಡಿ, ಸಿ.ಪಿ.ಐ ಜಯಪಾಲ ಪಾಟೀಲ್ (ಪ್ರಭಾರ) ರವರ ಮಾರ್ಗದರ್ಶನದಲ್ಲಿ ತನಿಖಾ ತಂಡ ರಚಿಸಲಾಗಿದೆ.

    ತಂಡದಲ್ಲಿ ದಾಂಡೇಲಿ ನಗರ ಪೊಲೀಸ್ ಠಾಣೆಯ ಅಮೀನಸಾಬ ಎಮ್. ಅತ್ತಾರ್ (ಪಿ.ಎಸ್.ಐ., ಕಾನೂನು ಮತ್ತು ಸುವ್ಯವಸ್ಥೆ), ಕಿರಣ ಜೆ. ಪಾಟೀಲ್ (ಪಿ.ಎಸ್.ಐ.), ಎ.ಎಸ್.ಐ. ಬಸವರಾಜ ಒಕ್ಕುಂದ, ಸಿ.ಎಚ್.ಸಿ. 1545 ಸಿದ್ರಾಮ್ ರಾಮರಾಠ, ಸಿ.ಪಿ.ಸಿ. 1696 ಚಂದ್ರಶೇಖರ ಪಾಟೀಲ್, ಡಬ್ಲ್ಯೂ.ಪಿ.ಸಿ. 517 ಜ್ಯೋತಿ ಚಾಳೇಕರ ಮತ್ತು ಚಾಲಕ ಮಹಾಂತೇಶ ಜಾಮಗೌಡ ಸೇರಿದ್ದಾರೆ. ಈ ತಂಡವು ಖಚಿತ ಮಾಹಿತಿಯ ಆಧಾರದ ಮೇಲೆ ಬೆಳಗಾವಿಗೆ ತೆರಳಿ, ಆರೋಪಿತರನ್ನು ಬಂಧಿಸಿ, ಮಾರಾಟವಾದ ಮಗುವನ್ನು ರಕ್ಷಣೆ ಮಾಡಿಕೊಂಡು ಬಂದಿದೆ. ಮಗುವನ್ನು ಸುರಕ್ಷಿತವಾಗಿ ರಕ್ಷಿಸಿ, ಮಕ್ಕಳ ಕಲ್ಯಾಣ ಸಮಿತಿ-2, ಶಿರಸಿಗೆ ಹಾಜರುಪಡಿಸಲಾಗಿದೆ.

    ಈ ಪ್ರಕರಣದಲ್ಲಿ ಬಂಧಿತ ಆರೋಪಿತರ ವಿವರ:

    • ಎ-1: ನೂರ್ ಮೊಹಮ್ಮದ್, ತಂದೆ ಅಬ್ದುಲ್ ಮಜೀದ ನಾಯ್ಕ, ವಯಸ್ಸು 47, ವೃತ್ತಿ: ಚಿತ್ರಕಲೆ ಕೆಲಸ, ಸ್ಥಳ: ಆನಗೋಳ, ಬೆಳಗಾವಿ
    • ಎ-2: ಕಿಶನ, ತಂದೆ ಶ್ರೀಕಾಂತ ಐರೇಕರ, ವಯಸ್ಸು 42, ವೃತ್ತಿ: ಚಾಲಕ, ಸ್ಥಳ: ಎಸ್.ವಿ. ರೋಡ್, ಆನಗೋಳ, ಬೆಳಗಾವಿ

    ಸದರಿ ಆರೋಪಿತರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಉಳಿದ ಆರೋಪಿತರನ್ನು ಪತ್ತೆ ಮಾಡುವ ಕಾರ್ಯವನ್ನು ಮುಂದುವರೆಸಲಾಗಿದೆ.

  • ಶಿವಮೊಗ್ಗ: ಜೈಲು ಕೈದಿ ಮೊಬೈಲ್ ಫೋನ್ ನುಂಗಿದ ಘಟನೆ: ಶಸ್ತ್ರಚಿಕಿತ್ಸೆಯಿಂದ ಸಾಧನ ಪತ್ತೆ, ತನಿಖೆ ಆರಂಭ

    ಶಿವಮೊಗ್ಗ, ಜುಲೈ 12, 2025: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬ ಆಶ್ಚರ್ಯಕರವಾಗಿ ಮೊಬೈಲ್ ಫೋನ್ ನುಂಗಿದ ಘಟನೆಯೊಂದು ವರದಿಯಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಬಳಿಕ ಆ ಸಾಧನವನ್ನು ಹೊರತೆಗೆಯಲಾಗಿದೆ.

    ದೌಲತ್ ಯಾನೆ ಗುಂಡ (30) ಎಂದು ಗುರ್ತಿಸಲಾದ ಕೈದಿಯು ಜೂನ್ 24 ರಂದು ಜೈಲಿನ ವೈದ್ಯಕೀಯ ಸಿಬ್ಬಂದಿಯನ್ನು ಸಂಪರ್ಕಿಸಿ, ತಾನು ಕಲ್ಲನ್ನು ನುಂಗಿದ್ದೇನೆ ಮತ್ತು ಅದು ತನ್ನ ಹೊಟ್ಟೆಯಲ್ಲಿ ಸಿಲುಕಿಕೊಂಡಿದೆ ಎಂದು ದೂರಿದ್ದ. ಪ್ರಾಥಮಿಕ ತಪಾಸಣೆಯ ಬಳಿಕ ವೈದ್ಯರು ಅವನನ್ನು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ಮತ್ತಷ್ಟು ತನಿಖೆಗಾಗಿ ಕಳುಹಿಸಿದ್ದರು.

    ಆರಂಭಿಕ ಎಕ್ಸ್-ರೇ ಸ್ಕ್ಯಾನ್‌ಗಳು ವಸ್ತುವನ್ನು ಪತ್ತೆ ಮಾಡಲು ವಿಫಲವಾಗಿದ್ದವು. ಆದರೆ, ಎರಡನೇ ಬಾರಿಯ ಚಿತ್ರಣದಲ್ಲಿ ಕೈದಿಯ ಹೊಟ್ಟೆಯಲ್ಲಿ ಅಪರಿಚಿತ ವಸ್ತುವೊಂದು ಇರುವುದು ದೃಢಪಟ್ಟಿತು. ಅಗತ್ಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದ ಬಳಿಕ, ಕೈದಿಯ ಮೇಲೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈ ವೇಳೆ ವೈದ್ಯರು ಒಂದು ಇಂಚು ಅಗಲ ಮತ್ತು ಮೂರು ಇಂಚು ಉದ್ದದ ಮೊಬೈಲ್ ಫೋನ್ ಇರುವುದನ್ನು ಕಂಡು ದಿಗ್ಭ್ರಮೆಗೊಂಡರು.

    ಹೊರತೆಗೆಯಲಾದ ಮೊಬೈಲ್ ಫೋನ್ ಅನ್ನು ಜುಲೈ 8 ರಂದು ಶಿವಮೊಗ್ಗ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು.

    ಪ್ರಕರಣವನ್ನು ಮೇಲ್ವಿಚಾರಣೆ ಮಾಡುತ್ತಿರುವ ಮುಖ್ಯ ಅಧೀಕ್ಷಕ ಡಾ. ಪಿ. ರಂಗನಾಥ್ ಈ ಘಟನೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಅವರು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದ್ದು, ನಿಷೇಧಿತ ಸಾಧನವು ಉನ್ನತ ಭದ್ರತೆಯ ಜೈಲಿಗೆ ಹೇಗೆ ಪ್ರವೇಶಿಸಿತು ಎಂದು ತನಿಖೆಗೆ ಒತ್ತಾಯಿಸಿದ್ದಾರೆ. “ಫೋನ್ ನುಂಗಿದ ಉದ್ದೇಶದ ಬಗ್ಗೆ ಕೈದಿಯು ಮೌನವಾಗಿದ್ದಾನೆ,” ಎಂದು ಡಾ. ರಂಗನಾಥ್ ಹೇಳಿದ್ದಾರೆ.

    ವಿಚಿತ್ರವೆಂದರೆ, ಜೈಲು ಅಧಿಕಾರಿಗಳ ಪ್ರಕಾರ, ಹೊಟ್ಟೆಯೊಳಗೆ ಮೊಬೈಲ್ ಫೋನ್ ಇದ್ದರೂ ದೌಲತ್ ನಿಯಮಿತವಾಗಿ ಆಹಾರ ಸೇವಿಸುತ್ತಿದ್ದನು ಮತ್ತು ಯಾವುದೇ ಗೋಚರ ಕಫದ ಲಕ್ಷಣಗಳನ್ನು ತೋರಿಸಿರಲಿಲ್ಲ.

    ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದಿಂದ 10 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದ ದೌಲತ್‌ನನ್ನು ಜೂನ್ 15 ರಂದು ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿತ್ತು.

    ಈ ಘಟನೆಯು ಜೈಲು ವ್ಯವಸ್ಥೆಯ ಆಂತರಿಕ ಭದ್ರತೆ ಮತ್ತು ಕಣ್ಗಾವಲು ಲೋಪಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

    ಮೊಬೈಲ್ ಫೋನ್‌ನ ಮೂಲವನ್ನು ಕಂಡುಹಿಡಿಯಲು ಮತ್ತು ಜೈಲು ಸಿಬ್ಬಂದಿ ಅಥವಾ ಬಾಹ್ಯ ವ್ಯಕ್ತಿಗಳಿಂದ ಸಂಭವನೀಯ ಭದ್ರತಾ ಉಲ್ಲಂಘನೆಯನ್ನು ಗುರ್ತಿಸಲು ವಿವರವಾದ ತನಿಖೆ ಈಗ ನಡೆಯುತ್ತಿದೆ.

  • ಸರ್ಕಾರಿ ಶಾಲಾ ಮಕ್ಕಳಿಗೆ ಬಸ್‌ ಉಚಿತ -ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

    ಬೆಂಗಳೂರು, ಜು. 11: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳ ಭವಿಷ್ಯ ಉಜ್ವಲಕ್ಕೆ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದೆ.

    ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ LKG ಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರಮುಖ ಒತ್ತು ನೀಡಲಾಗುತ್ತಿದೆ. ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

    ಸರ್ಕಾರಿ ಶಾಲೆಯ ಮಕ್ಕಳ ಹಾಜರಾತಿ, ಗುಣಮಟ್ಟ ಹೆಚ್ಚಿಸಲು ಸರ್ಕಾರದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕಾಗಿ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಅನುಕೂಲ ಕಲ್ಪಿಸಲು ಉಚಿತ ಬಸ್‌ ವ್ಯವಸ್ಥೆಯನ್ನ ಸರ್ಕಾರ ನೀಡಲಿದೆ ಎಂದಿದ್ದಾರೆ.

    ಎಲ್‌ಕೆಜಿಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ಸರ್ಕಾರ ತೀರ್ಮಾನಿಸಿದೆ. ವಿದ್ಯಾಭ್ಯಾಸ ಮಾಡುವ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಬಡವರ ಮಕ್ಕಳಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಬಲ ನೀಡಲು ಸರ್ಕಾರದ ಈ ಕ್ರಮ ಮಹತ್ವದ್ದಾಗಿದೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ಕಾರದ ದಿಟ್ಟ ಹೆಜ್ಜೆಯೂ ಇದಾಗಿದೆ ಎಂದು ಎಕ್ಸ್‌ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

  • Alia Bhatt’s ex assistant arrested for cheating her of Rs 77 lakh

    Bengaluru, July 9, 2025: Alia Bhatt’s former personal assistant has been arrested for cheating the actor of Rs 77 lakh. Vedika Prakash Shetty, 32, is accused of committing irregularities worth Rs 76.9 lakh in Ms Bhatt’s production company, Eternal Sunshine Productions Private Limited, and her personal accounts.

    This fraud, police have said, was committed between May 2022 and August 2024. The matter came to light after Alia Bhatt’s mother, actor-director Soni Razdan, filed a complaint with Juhu police on January 23. Thereafter, a case was registered under sections relating to criminal breach of trust and cheating and police started looking for Vedika Shetty.

    According to police sources, Vedika Shetty worked as Ms Bhatt’s personal assistant from 2021 to 2024. During this time, she handled the actor’s financial documents and payments and planned her schedule.

    The investigation has revealed that Vedika Shetty allegedly prepared fake bills, got Ms Bhatt to sign them and siphoned off the money, police sources have said. She told the actor that the expenses were for her travel, meetings and other related arrangements.

    Vedika Shetty, the probe has found, used professional tools to make these fake bills look authentic. After Ms Bhatt signed them, the amounts were transferred to the account of her friend, who would then route the money back to Vedika Shetty.

    After Ms Razdan filed a police complaint, Vedika Shetty was on the run and kept changing her location. She was tracked down to Rajasthan, then to Karnataka, then to Pune and then to Bengaluru. Eventually, Juhu police caught up with her in Bengaluru and arrested her. She was then brought to Mumbai on a transit demand.

  • ಡೆಲಿವರಿ ಬಾಯ್​ನಿಂದ ಮಹಿಳೆಯರಿಗೆ ಅಸಭ್ಯ ಸಂದೇಶ ರವಾನೆ: ಹುಬ್ಬಳ್ಳಿಯಲ್ಲಿ ಆರೋಪಿ ಬಂಧನ

    ಹುಬ್ಬಳ್ಳಿ(ಧಾರವಾಡ): “ಮಹಿಳೆಯರ ನಂಬರ್​​ ಪಡೆದು ಅವರಿಗೆ ಅಸಭ್ಯ ಮೆಸ್ಸೇಜ್​​ ಮಾಡುತ್ತಿದ್ದ ಕೊರಿಯರ್​​ ಡೆಲಿವರಿ ಬಾಯ್​ನನ್ನು ಬಂಧಿಸಲಾಗಿದೆ” ಎಂದು ಹು-ಧಾ ಪೊಲೀಸ್​ ಕಮಿಷನರ್​​ ಎನ್​. ಶಶಿಕುಮಾರ್​ ಹೇಳಿದರು.

    ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, “ಮಹಿಳೆಯರಿಗೆ ಅಸಭ್ಯ ಸಂದೇಶ ಕಳುಹಿಸುತ್ತಿದ್ದ ರಮೇಶ ರೆಡ್ಡಿ ಎಂಬಾತನನ್ನು ಗೋಕುಲ್​ ರೋಡ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದು, ಇಲ್ಲಿಯವರೆಗೂ ಇಬ್ಬರು ಮಹಿಳೆಯರಿಗೆ ಮೆಸ್ಸೇಜ್​ ಮಾಡಿ ಕಿರಿಕಿರಿ ಮಾಡಿರುವುದು ತನಿಖೆಯಲ್ಲಿ ‌ಕಂಡುಬಂದಿದೆ. ಈ ಕುರಿತಂತೆ ಎರಡು ಪ್ರತ್ಯೇಕ ‌ಪ್ರಕರಣ ದಾಖಲು ಮಾಡಿಕೊಂಡು ಅಗತ್ಯ ಕಾನೂನು ಕ್ರಮ ಜರುಗಿಸಲಾಗಿದೆ” ಎಂದರು.

    “ಕೊರಿಯರ್ ಡೆಲಿವರಿ ಮಾಡುವವರು ಶ್ರಮಪಟ್ಟು ಕೆಲಸ ಮಾಡುತ್ತಾರೆ. ಅದರಲ್ಲಿ ‌ಒಂದು ಪರ್ಸೆಂಟ್ ಈ ತರಹ ಕೆಲಸ ಮಾಡುತ್ತಾರೆ. ಇದರಿಂದ ಇಡೀ ಕೊರಿಯರ್ ವೃತ್ತಿ ‌ನಂಬಿಕೊಂಡವರಿಗೆ ಕೆಟ್ಟ ಅಭಿಪ್ರಾಯ ಬರುತ್ತದೆ.‌ ಹೀಗಾಗಿ ಕಂಪನಿಯವರು ಕೆಲಸಕ್ಕೆ ತಗೆದುಕೊಳ್ಳುವವರ ಬಗ್ಗೆ ಗಮನ ಇಡಬೇಕು. ಒಂಟಿ‌ ಮಹಿಳೆಯರು, ಹಿರಿಯ ನಾಗರಿಕರು, ಹೆಣ್ಣು ಮಕ್ಕಳು ಡೆಲಿವರಿ ತಗೆದುಕೊಳ್ಳುತ್ತಾರೆ. ಒಬ್ಬರು ಈ ರೀತಿ ಮಾಡಿದರೆ, ಒಳ್ಳೆ ಕೆಲಸ ಮಾಡುವವರಿಗೆ ಕೆಟ್ಟ ಹೆಸರು ಬರುತ್ತದೆ. ಡೆಲಿವರಿ ಕೊಡುವವರು ಅನುಮಾನಾಸ್ಪದವಾಗಿ ಕಂಡುಬಂದರೆ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬೇಕು” ಎಂದು ಮನವಿ ಮಾಡಿದರು.

    ರಮೇಶ್​ ರೆಡ್ಡಿ ಎಂಬ ಯುವಕ ಕೊರಿಯರ್​ ಡೆಲಿವರಿ ಮಾಡುವ ಕೆಲಸ ಮಾಡುತ್ತಿರುತ್ತಾನೆ. ಇಂಥಹದ್ದೇ ಅಂತ ಕಂಪನಿ ಯಾವುದು ಇಲ್ಲ. ಹೆಚ್ಚುವರಿ ಡೆಲಿವರಿ ಮಾಡಲು ಇದ್ದಾಗ ಇವನನ್ನು ಸಂಪರ್ಕಿಸಿ, ಇವಾನ ಮುಖಾಂತರ ಡೆಲಿವರಿ ಮಾಡಿಸಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಡೆಲಿವರಿ ಮಾಡಿದಾಗ ಹೆಣ್ಣುಮಕ್ಕಳು ವಸ್ತುಗಳನ್ನು ಸ್ವೀಕರಿಸುತ್ತಿದ್ದಾಗ, ಅವರ ನಂಬರ್​ ತೆಗೆದುಕೊಂಡು ಅವರಿಗೆ ಹಾಯ್​ ಬೇಬಿ, ಹೌ ಆರ್​ ಯು, ಐ ವಾಂಟ್​ ಟು ಮೀಟ್​ ಯು ಅನ್ನುವ ರೀತಿಯಲ್ಲಿ ಮೆಸ್ಸೇಜ್​ ಹಾಕುವ ಮುಖಾಂತರ ಹೆಣ್ಣು ಮಕ್ಕಳಿಗೆ ಕಿರಿಕಿರಿ ಮಾಡುತ್ತಿದ್ದ ಎನ್ನುವಂತದ್ದು ನಮ್ಮ ಗಮನಕ್ಕೆ ಕಂಡುಬಂತು. ನಾವು ಪರಿಶೀಲನೆ ಮಾಡಿದಂತಹ ಸಂದರ್ಭದಲ್ಲಿ ಮತ್ತು ಇಬ್ಬರು ಹೆಣ್ಣುಮಕ್ಕಳಿಗೆ ಇದೇ ರೀತಿ ತೊಂದರೆ ಕೊಟ್ಟಿರುವಂತದ್ದು ಕಂಡುಬಂತು. ಹೀಗಾಗಿ ಪ್ರತ್ಯೇಕ ಪ್ರಕರಣವನ್ನು ದಾಖಲು ಮಾಡಿಕೊಂಡು ಸಂಬಂಧಪಟ್ಟ ರಮೇಶ್​ ರೆಡ್ಡಿ ಎಂಬ ವ್ಯಕ್ತಿ ವಿರುದ್ಧ ನಾವು ಅಗತ್ಯ ಕ್ರಮವನ್ನು ಕೈಗೊಂಡಿದ್ದೇವೆ- ಎನ್​. ಶಶಿಕುಮಾರ್​, ಹು-ಧಾ ಪೊಲೀಸ್​ ಕಮಿಷನರ್.

  • ಮಗನ ಆನ್​​ಲೈನ್ ಬೆಟ್ಟಿಂಗ್ ಗೀಳಿಗೆ ಅಪ್ಪನ ಆಸ್ತಿ ಮಾರಾಟ: ಸರಗಳ್ಳತನ ಮಾಡುತ್ತಿದ್ದ ಬಿಸಿಎ ಪದವೀಧರ ಅರೆಸ್ಟ್

    ಬೆಂಗಳೂರು, ಜೂಲೈ 9, 2025ಆನ್​​ಲೈನ್ ಬೆಟ್ಟಿಂಗ್ ಆಡಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಆರೋಪಿಯನ್ನು ಮಾಗಡಿ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಕೆ. ಎನ್. ಮೂರ್ತಿ (27) ಬಂಧಿತ. ಈತನಿಂದ 17 ಲಕ್ಷ ಬೆಲೆಯ 245 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗ ಮೂಲದ ಆರೋಪಿ ಬಿಸಿಎ ಪಧವೀಧರನಾಗಿದ್ದು, ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿ ಬೇಗೂರಿನ ಹೊಂಗಸಂದ್ರದಲ್ಲಿ ವಾಸವಾಗಿದ್ದ.

    ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಆನ್​​ಲೈನ್ ಬೆಟ್ಟಿಂಗ್ ದಾಸನಾಗಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದ. ಸಾಲಗಾರರು ಈತನ ಬೆನ್ನುಬಿದ್ದಿದ್ದರು. ಸಾಲ ತೀರಿಸಲು ಹಾಗೂ ಬೆಟ್ಟಿಂಗ್ ಆಡಲು ಮನೆಗಳ್ಳತನ ಹಾಗೂ ಸರಗಳ್ಳತನ ಕೃತ್ಯವೆಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಅಪ್ಪನ ಆಸ್ತಿ ಮಾರಿದರೂ ಬುದ್ಧಿ ಕಲಿಯದ ಮಗ : ಆರೋಪಿ ತಂದೆ ಅಣ್ಣಪ್ಪ ಶಿವಮೊಗ್ಗದಲ್ಲಿ ನೆಲೆಸಿದ್ದು, ಮಗ ಮಾಡಿಕೊಂಡ ಎಡವಟ್ಟಿನಿಂದ ಊರಿನಲ್ಲಿ ಜಮೀನು ಮಾರಿ ಸುಮಾರು 25 ಲಕ್ಷದವರೆಗೂ ಸಾಲ ತೀರಿಸಿದ್ದರು. ಇನ್ನಷ್ಟು ಸಾಲ ತೀರಿಸಲು ನಗರಕ್ಕೆ ಬಂದು ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು.

    ಇಷ್ಟಾದರೂ ಮಗನ ಆನ್​​ಲೈನ್ ಬೆಟ್ಟಿಂಗ್ ವ್ಯಾಮೋಹ ಕಡಿಮೆಯಾಗಿರಲಿಲ್ಲ. ಸುಲಭ ಹಾಗೂ ಅಕ್ರಮವಾಗಿ ಹಣ ಸಂಪಾದನೆ ಮಾಡಲು ಅಪರಾಧ ಎಸಗುವುದನ್ನ ಆರೋಪಿ ರೂಢಿಗತ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯ ಸರ ಕದ್ದ ಪ್ರಕರಣದಲ್ಲಿ ಮತ್ತೆ ಬಂಧಿತನಾದಾಗ ಕಳಚಿತು ಮುಖವಾಡ: ಬಿನ್ನಿಮಿಲ್ ಅಂಗಾಳಪರಮೇಶ್ವರಿ ದೇವಸ್ಥಾನದ ಬಳಿ ದೇವರ ದರ್ಶನಕ್ಕಾಗಿ ಸರದಿ ಸಾಲಿನಲ್ಲಿರುವಾಗ ಮಹಿಳೆ ಸರ ಕಸಿದುಕೊಂಡು ಈತ ಪರಾರಿಯಾಗಿದ್ದ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಇನ್​​ಸ್ಪೆಕ್ಟರ್ ಜಿ. ಪಿ. ರಾಜು ನೇತೃತ್ವದ ತಂಡವು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ 2022ರಿಂದಲೂ ರಾಜಗೋಪಾಲನಗರ, ಸುದ್ದುಗುಂಟೆಪಾಳ್ಯ, ಆವಲಹಳ್ಳ ಹಾಗೂ ಕೋಣನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಹಾಗೂ ಸರಗಳ್ಳತನ ಪ್ರಕರಣಗಳಲ್ಲಿ ಆರೋಪಿಯಾಗಿರುವುದು ತಿಳಿದುಬಂದಿದೆ ಎಂದರು.

    ಕದ್ದ ಚಿನ್ನಾಭರಣವನ್ನ ಮಡಿವಾಳ, ಪರಪ್ಪನ ಅಗ್ರಹಾರ ಏರಿಯಾ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜ್ಯುವೆಲ್ಲರಿ ಶಾಪ್​​ಗಳಲ್ಲಿ ಅಡವಿಟ್ಟು ಹಣ ಸಂಪಾದಿಸಿ ಬೆಟ್ಟಿಂಗ್ ಆಡುತ್ತಿದ್ದ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.