ಮಂಗಳೂರು, ಜುಲೈ 1, 2025: ಭಾರತೀಯ ರೈಲ್ವೇ ಇಲಾಖೆಯು ಹಲವು ವರ್ಷಗಳ ನಂತರ ಮೊದಲ ಬಾರಿಗೆ ಟಿಕೆಟ್ ದರವನ್ನು ಏರಿಕೆ ಮಾಡಿದೆ. ಈ ಏರಿಕೆಯು ಇಂದಿನಿಂದ ಜಾರಿಗೆ ಬಂದಿದೆ. ಸೋಮವಾರ ಬಿಡುಗಡೆಯಾದ ಅಧಿಕೃತ ಆದೇಶದ ಪ್ರಕಾರ, ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಎಸಿ ವಿಭಾಗಗಳ ದರವು ಪ್ರತಿ ಕಿಲೋಮೀಟರ್‌ಗೆ 2 ಪೈಸೆಯಷ್ಟು ಹೆಚ್ಚಳವಾಗಿದೆ, ಆದರೆ ಎಸಿ ಇಲ್ಲದ ವಿಭಾಗಗಳ ದರವು ಪ್ರತಿ ಕಿಲೋಮೀಟರ್‌ಗೆ 1 ಪೈಸೆಯಷ್ಟು ಏರಿಕೆಯಾಗಿದೆ.
500 ಕಿಲೋಮೀಟರ್‌ವರೆಗಿನ ಸಾಮಾನ್ಯ ದ್ವಿತೀಯ ದರ್ಜೆಯ ಪ್ರಯಾಣಕ್ಕೆ ಹಿಂದಿನ ದರವನ್ನೇ ಉಳಿಸಿಕೊಳ್ಳಲಾಗಿದೆ. 500 ಕಿಲೋಮೀಟರ್‌ಗಿಂತ ಮೇಲೆ, ದರವು ಪ್ರತಿ ಕಿಲೋಮೀಟರ್‌ಗೆ 0.5 ಪೈಸೆಯಷ್ಟು ಹೆಚ್ಚಾಗಲಿದೆ. ಅದೇ ರೀತಿ, ಸಾಮಾನ್ಯ ಸ್ಲೀಪರ್ ಕ್ಲಾಸ್ ಮತ್ತು ಪ್ರಥಮ ದರ್ಜೆಯ ಪ್ರಯಾಣದ ದರವೂ ಪ್ರತಿ ಕಿಲೋಮೀಟರ್‌ಗೆ 0.5 ಪೈಸೆಯಷ್ಟು ಏರಿಕೆಯಾಗಿದೆ.
ಈ ಹೊಸ ದರವು ರಾಜಧಾನಿ, ಶತಾಬ್ದಿ, ದುರಂತೋ, ವಂದೇ ಭಾರತ್, ತೇಜಸ್, ಹಂಸಫರ್, ಅಮೃತ ಭಾರತ್, ಮಹಾಮಾನ, ಗತಿಮಾನ್, ಅಂತ್ಯೋದಯ, ಜನ ಶತಾಬ್ದಿ, ಯುವ ಎಕ್ಸ್‌ಪ್ರೆಸ್, ಎಸಿ ವಿಸ್ಟಾಡೋಮ್ ಕೋಚ್‌ಗಳು ಮತ್ತು ಅನುಭೂತಿ ಕೋಚ್‌ಗಳಂತಹ ಪ್ರೀಮಿಯರ್ ಮತ್ತು ವಿಶೇಷ ರೈಲುಗಳಿಗೆ ಅನ್ವಯವಾಗಲಿದೆ. ಉಪನಗರ ರೈಲುಗಳನ್ನು ಹೊರತುಪಡಿಸಿ ಎಲ್ಲಾ ಸಾಮಾನ್ಯ ರೈಲುಗಳಿಗೂ ಈ ಹೊಸ ದರದ ರಚನೆಯನ್ನು ಅನ್ವಯಿಸಲಾಗುವುದು.
“ಜುಲೈ 1 ರಂದು ಅಥವಾ ನಂತರ ಬುಕ್ ಮಾಡಿದ ಎಲ್ಲಾ ಟಿಕೆಟ್‌ಗಳಿಗೆ ಪರಿಷ್ಕೃತ ದರಗಳ ಪ್ರಕಾರ ಶುಲ್ಕ ವಿಧಿಸಲಾಗುವುದು. ಆದರೆ, ಈ ದಿನಾಂಕಕ್ಕಿಂತ ಮೊದಲು ಬುಕ್ ಆದ ಟಿಕೆಟ್‌ಗಳಿಗೆ ಹಳೆಯ ದರವೇ ಮಾನ್ಯವಾಗಿರುತ್ತದೆ,” ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. “ಪಿಆರ್‌ಎಸ್ (ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್), ಯುಟಿಎಸ್ (ಅನ್‌ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್) ಮತ್ತು ಕೌಂಟರ್‌ಗಳ ಸೇರಿದಂತೆ ಎಲ್ಲಾ ಬುಕಿಂಗ್ ವ್ಯವಸ್ಥೆಗಳನ್ನು ಈಗಾಗಲೇ ನವೀಕರಿಸಲಾಗಿದೆ,” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಜಯಪುರ, ಜುಲೈ 01, 2025: ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕದ ಸಂಸ್ಥಾಪಕ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೈಯದ್ ಮುಷ್ತಾಕ್ ಹೆನ್ನಾಬೈಲ್‌ರ ಕೃತಿ “ಧರ್ಮಾಧರ್ಮ” ವಿಜಯಪುರದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಂಡಿತು. ಈ ಪುಸ್ತಕವು ಮುಸ್ಲಿಮೇತರ ಸಮುದಾಯದವರ ಮನಸ್ಸಿನಲ್ಲಿ ಕುತೂಹಲ ಮತ್ತು ಪ್ರಶ್ನೆಗಳಿಗೆ ಕಾರಣವಾಗಿರುವ ವಿಷಯಗಳಿಗೆ ಉತ್ತರವಾಗಿ ರಚಿತವಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಪುಸ್ತಕದ ಬೆನ್ನುಡಿಯಲ್ಲಿ ಬರೆದಿದ್ದಾರೆ: ಕುಂದಾಪುರದ ಕ್ರಿಯಾಶೀಲ ಲೇಖಕ ಮುಷ್ತಾಕ್ ಹೆನ್ನಾಬೈಲ್, ರಾಜಕೀಯ ಕಾರಣಗಳಿಂದ ಹದಗೆಡುತ್ತಿರುವ ಹಿಂದೂ-ಮುಸ್ಲಿಂ ಸಂಬಂಧಗಳನ್ನು ಸರಿದಾರಿಗೆ ತರಲು ಸದಾ ಪ್ರಯತ್ನಿಸುತ್ತಿದ್ದಾರೆ. ಈ ಕೃತಿಯ 55 ಲೇಖನಗಳು ಮುಸ್ಲಿಮರ ಬಗೆಗಿನ ಪೂರ್ವಾಗ್ರಹಗಳನ್ನು ತೊಡೆದುಹಾಕುವ ಉದ್ದೇಶ ಹೊಂದಿವೆ.
ಭಾರತದಲ್ಲಿ ಮುಸ್ಲಿಮರನ್ನು ದಿನನಿತ್ಯ ಅವಮಾನಿಸಲಾಗುತ್ತಿದೆ, ಅವರ ಬಗ್ಗೆ ಸುಳ್ಳುಗಳನ್ನು ಹರಡಲಾಗುತ್ತಿದೆ. ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ನಿರ್ಬಂಧಿಸುವ, ಹಕ್ಕುಗಳನ್ನು ಕಸಿದುಕೊಳ್ಳುವ ಮಾತುಗಳು ಕೇಳಿಬರುತ್ತಿವೆ. ಮುಸ್ಲಿಮರು ತಮ್ಮದೇ ದೇಶದಲ್ಲಿ ‘ಅನ್ಯ’ರಂತೆ ಬದುಕಬೇಕಾದ ವಾತಾವರಣ ನಿರ್ಮಾಣವಾಗುತ್ತಿದೆ. ಸಾಮಾಜಿಕ-ಶೈಕ್ಷಣಿಕ ಅಭಿವೃದ್ಧಿಗೆ ಸರಕಾರದ ಅನುದಾನವನ್ನು ‘ಹಲಾಲ್ ಬಜೆಟ್’ ಎಂದು ಕರೆಯಲಾಗುತ್ತಿದೆ. ಸಂವಿಧಾನದ ರಕ್ಷಣೆ ಇದ್ದರೂ, ಮುಸ್ಲಿಮರು ತಾರತಮ್ಯ, ಪೂರ್ವಾಗ್ರಹ ಮತ್ತು ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ.
ನೂರಾರು ವರ್ಷಗಳಿಂದ ಸಹಬಾಳ್ವೆ ನಡೆಸುತ್ತಿದ್ದ ಸಮುದಾಯಗಳನ್ನು ಪರಸ್ಪರ ವಿರೋಧಕ್ಕೆ ತಳ್ಳುವ ದುಷ್ಟ ಶಕ್ತಿಗಳ ವಿಧಾನಗಳಿಗೆ ಮುಷ್ತಾಕ್ ಈ ಕೃತಿಯಲ್ಲಿ ತಾಳ್ಮೆಯಿಂದ ಉತ್ತರಿಸಿದ್ದಾರೆ. ಮುಸ್ಲಿಮರ ಬಗ್ಗೆ ಪ್ರಚಲಿತ ಸುಳ್ಳುಗಳಿಗೆ ವಿವರಣೆ ನೀಡಿದ್ದು, ಇಂತಹ ಸುಳ್ಳುಗಳನ್ನು ಹುಟ್ಟಿಸುವವರ ಧರ್ಮದಲ್ಲಿರುವ ಒಂದೇ ರೀತಿಯ ನಂಬಿಕೆ-ಆಚರಣೆಗಳ ಕಡೆಗೆ ಗಮನ ಸೆಳೆದಿದ್ದಾರೆ.
ಈ ಸಕಾಲಿಕ ಮತ್ತು ಉಪಯುಕ್ತ ಪುಸ್ತಕ ಸಾಮಾಜಿಕ ಸೌಹಾರ್ದತೆಗೆ ಮತ್ತು ತಪ್ಪು ಕಲ್ಪನೆಗಳನ್ನು ತೊಡೆದುಹಾಕಲು ಸಹಕಾರಿಯಾಗಲಿದೆ.
ವಿಜಯಪುರ: ಶರಣರು ಮತ್ತು ಸೂಫಿ ಸಂತರು ನೆಲೆಸಿದ ವಿಜಯಪುರದಲ್ಲಿ ಕೋಮುವಾದ ತಡೆಯಲು ಮುಸ್ಲಿಂ ಬಾಂಧವ್ಯ ವೇದಿಕೆಯು ಲಿಂಗಾಯತ ಸೇರಿದಂತೆ ವಿವಿಧ ಸಮುದಾಯಗಳೊಂದಿಗೆ ಸೌಹಾರ್ದ ಕೂಡ ಏರ್ಪಡಿಸುತ್ತಿದೆ ಎಂದು ವೇದಿಕೆಯ ಸಂಸ್ಥಾಪಕ ಮುಸ್ತಾಕ್ ಹೊನ್ನಾಬೈಲ್ ತಿಳಿಸಿದರು.
ಜಗಜ್ಯೋತಿ ಬಸವೇಶ್ವರರ ಜನ್ಮಭೂಮಿಯಾದ ವಿಜಯಪುರದಲ್ಲಿ, ಬಸವೇಶ್ವರರು ಕೇವಲ ಲಿಂಗಾಯತರ ಜ್ಯೋತಿಯಲ್ಲ, ವಿಶ್ವ ಜ್ಯೋತಿಯಾಗಿದ್ದಾರೆ. ಆದರೆ, ಇಂತಹ ಮಹಾತ್ಮರ ನೆಲದಲ್ಲಿ ಕೆಲವರು ಕೋಮುವಾದ ಹರಡುತ್ತಿದ್ದಾರೆ. ಇತಿಹಾಸದಲ್ಲಿ ಮುಸ್ಲಿಮರು ಮತ್ತು ಲಿಂಗಾಯತರು ಅನ್ಯೋನ್ಯವಾಗಿ ಬದುಕಿದ್ದಾರೆ. ಈ ಸಾಮರಸ್ಯವನ್ನು ಕದಡದಿರಲು ರಾಜ್ಯಾದ್ಯಂತ ಸೌಹಾರ್ದ ಕೂಡ ಆಯೋಜಿಸಲಾಗುತ್ತಿದೆ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ರಾಜ್ಯದಲ್ಲಿ ಸುಮಾರು 10 ಲಿಂಗಾಯತ ನಾಯಕರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದಾರೆ. ಯಾವುದೇ ಸರ್ಕಾರ ಬಂದರೂ ಸಚಿವ ಸಂಪುಟದಲ್ಲಿ ಲಿಂಗಾಯತ ಸಮುದಾಯಕ್ಕೆ ಸಿಂಹಪಾಲು ದೊರೆಯುತ್ತದೆ. ಈ ಸ್ಥಾನಗಳನ್ನು ಪಡೆಯಲು ಮುಸ್ಲಿಂ ಸಮುದಾಯ ರಾಜಕೀಯವಾಗಿ ನಿರಂತರ ಬೆಂಬಲ ನೀಡಿದೆ. ಆದರೆ, ಲಿಂಗಾಯತ ಸಮುದಾಯ ಮುಸ್ಲಿಮರಿಗೆ ಇದೇ ರೀತಿಯ ಸಹಕಾರ ನೀಡಿಲ್ಲ ಎಂದು ಮುಸ್ತಾಕ್ ಖೇದ ವ್ಯಕ್ತಪಡಿಸಿದರು.
ಕೋಮುವಾದಿ ಪಕ್ಷವನ್ನು ಬೆಂಬಲಿಸುವ ಲಿಂಗಾಯತರನ್ನು ಹೊರತುಪಡಿಸಿ, ಇತರ ಪಕ್ಷಗಳ ಲಿಂಗಾಯತರಿಗೆ ಮುಸ್ಲಿಮರು ನಿರಂತರವಾಗಿ ಮತದಾನ ಮಾಡಿದ್ದಾರೆ. ಆದರೆ, ಮುಸ್ಲಿಮರಿಗೆ ಲಿಂಗಾಯತ ಸಮುದಾಯದಿಂದ ಕನಿಷ್ಠ ಪ್ರಮಾಣದಲ್ಲೂ ರಾಜಕೀಯ ಬೆಂಬಲ ದೊರೆಯುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಮುಸ್ಲಿಮರ 4% ಮೀಸಲಾತಿಯನ್ನು ರದ್ದುಗೊಳಿಸಿದ್ದು ದೇಶದ ರಾಜಕಾರಣದಲ್ಲಿ ವಿಲಕ್ಷಣ ಘಟನೆಯಾಗಿದೆ. ಈ ಹಿನ್ನೆಲೆಯಲ್ಲಿ, ಉಭಯ ಸಮುದಾಯಗಳ ನಡುವೆ ಬಾಂಧವ್ಯ ಗಟ್ಟಿಗೊಳಿಸಲು ಸಮಾಜದ ಮುಖಂಡರು, ಚಿಂತಕರು ಮತ್ತು ಧಾರ್ಮಿಕ ಗುರುಗಳನ್ನು ಭೇಟಿಯಾಗಲಾಗುತ್ತಿದೆ ಎಂದರು.
ಸಮುದಾಯ ಸಮ್ಮಿಲನ ಕಾರ್ಯಕ್ರಮ ಮತ್ತು ಪುಸ್ತಕ ಪ್ರದರ್ಶನ
ಗುಮ್ಮಟ ನಗರಿ ವಿಜಯಪುರದ ಹೋಟೆಲ್ ಮಧುವನ ಇಂಟರ್‌ನ್ಯಾಷನಲ್‌ನ ಸಭಾಂಗಣದಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕದ ವತಿಯಿಂದ ಸಮುದಾಯ ಸಮ್ಮಿಲನ ಕಾರ್ಯಕ್ರಮ ಮತ್ತು ಪುಸ್ತಕ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಮುಸ್ಲಿಂ ಲೇಖಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಖ್ಯಾತ ವಿಮರ್ಶಕ ಮತ್ತು ಬಸವತತ್ವ ಪ್ರಚಾರಕ ಡಾ. ಜೆ.ಎಸ್. ಪಾಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಅವರು, ಭಾರತ ಬಹುಸಂಸ್ಕೃತಿಯ ದೇಶವಾಗಿದ್ದು, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಏಕಸಂಸ್ಕೃತಿಯನ್ನು ಹೇರಲು ಪ್ರಯತ್ನಿಸುತ್ತಿವೆ. ಮುಸ್ಲಿಮರ ಮೀಸಲಾತಿಯನ್ನು ಕಸಿದು ಲಿಂಗಾಯತರಿಗೆ ನೀಡುವ ಹಿಂದಿನ ಸರ್ಕಾರದ ನಿರ್ಧಾರ ನ್ಯಾಯಾಲಯದ ಮೆಟ್ಟಿಲೇರಿದೆ. ಇದು ಅನುಷ್ಠಾನವಾಗದ ಕಾರಣ ಮುಸ್ಲಿಮರು ಆತಂಕಗೊಳ್ಳುವ ಅಗತ್ಯವಿಲ್ಲ ಎಂದರು.
ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ನಬಿರಸೂಲ್ ಮಮದಾಪುರ ಕೂಡ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. 1994ರಿಂದ 1998ರವರೆಗೆ ಕುಂದಾಪುರ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ಇವರು, ಮೀಸಲಾತಿಯು ಆರ್ಥಿಕತೆಯನ್ನಾಧರಿಸಿದ್ದಲ್ಲ, ಸಾಮಾಜಿಕ ಮತ್ತು ಸಾಂಸ್ಕೃತಿಕ ಆಧಾರದ ಮೇಲೆ ನೀಡಲಾಗಿದೆ. ಈ ಆಧಾರದ ಮೀಸಲಾತಿಯನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಮುಸ್ಲಿಂ ಬಾಂಧವ್ಯ ವೇದಿಕೆಯ ಮೂರನೇ ಪದಗ್ರಹಣ ಸಮಾರಂಭ
ಕಾರ್ಯಕ್ರಮದಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕದ 2025-26ನೇ ಸಾಲಿನ ಮೂರನೇ ಪದಗ್ರಹಣ ಸಮಾರಂಭ ನಡೆಯಿತು. ಝಾಕಿರ್ ಹುಸೇನ್ ಉಚ್ಚಿಲ ಅಧ್ಯಕ್ಷರಾಗಿ ಮತ್ತು ರಹಮತ್ ದಾವಣಗೆರೆ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ಗ್ಯಾಲಂಟ್ರಿ ಶೌರ್ಯ ಪದಕ ವಿಜೇತ ಭಾರತೀಯ ಸೇನೆಯ ಬ್ರಿಗೇಡಿಯರ್ ಮುಹಮ್ಮದ್ ಮುಷ್ತಾಕ್ ಹುಸೇನ್ ಪದಪ್ರದಾನ ಮಾಡಿದರು.
ಬ್ರಿಗೇಡಿಯರ್ ಮುಹಮ್ಮದ್ ಮುಷ್ತಾಕ್ ಹುಸೇನ್ ಪರಿಚಯ
ಮೂಲತಃ ಕನ್ನಡಿಗರಾದ ಬ್ರಿಗೇಡಿಯರ್ ಮುಹಮ್ಮದ್ ಮುಷ್ತಾಕ್ ಹುಸೇನ್, ರಾಯಚೂರಿನ ಸೈಂಟ್ ಮೆರೀಸ್ ಕಾನ್ವೆಂಟ್‌ನಲ್ಲಿ ಪ್ರಾಥಮಿಕ ಶಿಕ್ಷಣ, ಕಲಬುರ್ಗಿಯ ಸೈಂಟ್ ಜೋಸೆಫ್ ಕಾನ್ವೆಂಟ್‌ನಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ಮೈಸೂರಿನ ಯುವರಾಜ ಕಾಲೇಜಿನಿಂದ ವಿಜ್ಞಾನದಲ್ಲಿ ಸ್ನಾತಕ ಪದವಿ, ಪುಣೆಯ ಸಿಂಬಯೋಸಿಸ್ ವಿಶ್ವವಿದ್ಯಾಲಯದಿಂದ ಎಂಬಿಎ, ಇಂದೋರ್ ವಿಶ್ವವಿದ್ಯಾಲಯದಿಂದ ಪಿಜಿಡಿಸಿಎ, ಐಐಎಂ-ಬೆಂಗಳೂರಿನಿಂದ ಮ್ಯಾನೇಜ್‌ಮೆಂಟ್ ಪದವಿ ಮತ್ತು ಮದ್ರಾಸ್ ವಿಶ್ವವಿದ್ಯಾಲಯದಿಂದ ಮನಃಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ.
1981ರಲ್ಲಿ ದೆಹರಾದೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದು ಲೆಫ್ಟಿನೆಂಟ್ ಆಗಿ ತೇರ್ಗಡೆಯಾಗಿ, ರೆಜಿಮೆಂಟ್ ಆಫ್ ಆರ್ಟಿಲರಿಯಲ್ಲಿ ಸೇವೆ ಸೇರಿದರು. ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿ ಉಗ್ರಗಾಮಿತ್ವ ನಿಗ್ರಹ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ಇವರು, ಕಾರ್ಗಿಲ್ ಯುದ್ಧದಲ್ಲಿ ಬೋಫೋರ್ಸ್ ಗನ್‌ಗಳಿಂದ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್‌ಗಳವರೆಗೆ ನಿರ್ವಹಿಸಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿನ ಶೌರ್ಯಕ್ಕಾಗಿ ಭಾರತದ ರಾಷ್ಟ್ರಪತಿಗಳಿಂದ ಸೇನಾ ಪದಕ (ಗ್ಯಾಲಂಟ್ರಿ) ಪಡೆದ ಇವರು, ಕರ್ನಾಟಕದ ಇಬ್ಬರು ಪುರಸ್ಕೃತರಲ್ಲಿ ಒಬ್ಬರು. ಸೇನೆಯ ಎಲ್ಲಾ ಪ್ರಮುಖ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ ಇವರು, ಸುಮಾರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಪಡೆದ ಪದಕಗಳು: ಸೇನಾ ಪದಕ (ಗ್ಯಾಲಂಟ್ರಿ), ಆಪರೇಷನ್ ರೈನೋ, ಪರಾಕ್ರಮ, ವಿಜಯ್, ರಕ್ಷಕ್, ಹೈ ಆಲ್ಟಿಟ್ಯೂಡ್ ಸರ್ವೀಸ್, ನೇಫಾ, ಆಪರೇಷನ್ ಫಾಲ್ಕನ್ ಮತ್ತು ಇತರ ಸೇವಾ ಪದಕಗಳು. ಈಸ್ಟರ್ನ್ ಕಮಾಂಡ್‌ನಿಂದ ವೃತ್ತಿಪರ ದಕ್ಷತೆಗೆ ಪ್ರಶಂಸೆ ಪತ್ರ ಪಡೆದಿದ್ದಾರೆ.
ನಿವೃತ್ತಿಯ ನಂತರ, ಬೆಂಗಳೂರಿನ ಯುಆರ್‌ಸಿ ಕನ್‌ಸ್ಟ್ರಕ್ಷನ್‌ನ ಅಧ್ಯಕ್ಷರಾಗಿರುವ ಇವರು, ಮೆಟ್ರೋ ಯೋಜನೆಗಳು, ವಿಮಾನ ನಿಲ್ದಾಣಗಳು, ಐಐಎಂ, ಐಐಎಸ್‌ಸಿ, ಅಮೆಜಾನ್ ಡೇಟಾ ಸೆಂಟರ್‌ಗಳು ಸೇರಿದಂತೆ ವಿವಿಧ ಯೋಜನೆಗಳನ್ನು ಮುನ್ನಡೆಸುತ್ತಿದ್ದಾರೆ. ಡಾ. ನೂರ್ ಝಹ್ರಾ ಜಾಫರ್ (ಎಂಎಸ್‌ಸಿ, ಪಿಎಚ್‌ಡಿ) ಜೊತೆ ವಿವಾಹವಾಗಿರುವ ಇವರಿಗೆ ಇಬ್ಬರು ಪುತ್ರಿಯರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಅನಿಷ ಪಾಶ, ಡಾ. ಮಹ್ಮದ್‌ಶಫಿ ಪಾಟೀಲ, ರೇಖಾ ಪಾಟೀಲ, ಜಮೀರ್ ಅಹ್ಮದ್ ರಶಾದಿ, ಎಸ್.ಎಂ. ಪಾಟೀಲ ಗಣಿಹಾರ, ಎಸ್.ಎಸ್. ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು (ಜೂ.30): ನಾವು ಈ ಹಿಂದೆ ಆರ್‌ಎಸ್‌ಎಸ್ ಅನ್ನು 2 ಬಾರಿ ಬ್ಯಾನ್ ಮಾಡಿದ್ದೆವು. ಅಮೇಲೆ ನಮ್ಮ ಕೈಕಾಲು ಹಿಡಿದು ಬ್ಯಾನ್ ವಾಪಸ್ ಮಾಡಿ ಅಂತ ಬಂದಿದ್ದರು. ಆಗ ಬ್ಯಾನ್ ತೆಗೆದಿದ್ದೇ ತಪ್ಪಾಯ್ತು. ಮುಂದೆ ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಆರ್‌ಎಸ್‌ಎಸ್ (RSS) ಬ್ಯಾನ್ ಮಾಡುವ ತೀರ್ಮಾನ ಮಾಡುತ್ತೇವೆ ಎಂದು ತಂತ್ರಜ್ಞಾನ ಹಾಗೂ ಮಾಹಿತಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಸಂವಿಧಾನದಿಂದ ಜಾತ್ಯಾತೀತ ಮತ್ತು ಸಮಾಜವಾದಿ ಪದ ತೆಗೆಯಬೇಕು ಎಂದು ಆರ್‌ಎಸ್‌ಎಸ್ ಮುಖಂಡ ಹೊಸಬಾಳೆ ಅವರು ಆಗ್ರಹ ಮಾಡಿದ ವಿಚಾರದ ಬಗ್ಗೆ ಮಾತನಾಡಿ, ಹೊಸಬಾಳೆ ಅವರು ಯಾವ ಸ್ಕೂಲ್ ಆಫ್ ಥಾಟ್ ಇಂದ ಬರ್ತಾರೆ. ಆರ್‌ಎಸ್‌ಎಸ್ ಹಿನ್ನಲೆಯಿಂದ ಬರುತ್ತಾರೆ. ಆರ್‌ಎಸ್‌ಎಸ್‌ನಲ್ಲಿ ಜಾತ್ಯಾತೀತೆ, ಸಮಾನತೆ, ಸಮಾಜವಾದಿ ಬಗ್ಗೆ ಅಲರ್ಜಿ ಇದೆ. ಆ ಸಂಸ್ಥೆ ಹುಟ್ಟಿದಾಗಿನಿಂದ ಸಂವಿಧಾನ, ಸಮಾನತೆ, ಆರ್ಥಿಕ ಸಮಾನತೆ ಬಗ್ಗೆ ಅಲರ್ಜಿ ಇದೆ. ಈಗ ಅದನ್ನ ಪುನರ್ ಉಚ್ಚಾರ ಮಾಡ್ತಿದ್ದಾರೆ. ಆರ್‌ಎಸ್‌ಎಸ್ ಸಿದ್ದಾಂತವನ್ನ ನಾವು ಮೊದಲಿನಿಂದಲೂ ವಿರೋಧ ಮಾಡ್ತಿದ್ದೇವೆ. ಈಗಲೂ ಮಾಡ್ತೀವಿ ಎಂದರು.
ಈ ಹಿಂದೆ ನಾವು ಎರಡು ಬಾರಿ ಆರ್‌ಎಸ್‌ಎಸ್ ಅವರನ್ನ ಬ್ಯಾನ್ ಮಾಡಿದ್ದೆವು. ಅಮೇಲೆ ಅವರು ನಮ್ಮ ಕೈಕಾಲು ಹಿಡಿದು ಬ್ಯಾನ್ ವಾಪಸ್ ಮಾಡಿ ಅಂತ ಬಂದಿದ್ದರು. ಆದರೆ, ಆಗ ನಾವು ಬ್ಯಾನ್ ತೆಗೆದಿದ್ದೇ ತಪ್ಪಾಯ್ತು. ಮುಂದೆ ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ RSS ಬ್ಯಾನ್ ಮಾಡೋ ಬಗ್ಗೆ ನೋಡೋಣ ಎಂದು ಹೇಳಿದರು. ಈ ಮೂಲಕ ದೇಶದಲ್ಲಿ ಆರ್‌ಎಸ್‌ಎಸ್ ಬ್ಯಾನ್ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.
ಸಂವಿಧಾನದಲ್ಲಿ ಸೇರಿಸಲಾಗಿರುವ ಜಾತ್ಯಾತೀತ ಪದದಲ್ಲಿ ಏನ್ ತಪ್ಪಿದೆ.? ಸಮಾಜವಾದದಲ್ಲಿ ಏನ್ ತಪ್ಪಿದೆ? ಇವರಿಗೆ ಯಾಕೆ ಈ ಪದಗಳ ಮೇಲೆ ಅಲರ್ಜಿ. ಇವರ ಸಿದ್ದಾಂತದಲ್ಲಿ ಒಂದೇ ಧರ್ಮ ಇರಬೇಕು. ಅವರೊಬ್ಬರೇ ಇರಬೇಕು. ಆದರೆ, ನಾವು ಸಂವಿಧಾನ ಎತ್ತಿ ಹಿಡಿಯೋ ಕೆಲಸ ಮಾಡುತ್ತೇವೆ. ಅಂಬೇಡ್ಕರ್ ಏನ್ ಹೇಳಿದ್ದಾರೆ ಎನ್ನುವುದನ್ನು ಆರ್‌ಎಸ್‌ಎಸ್‌ನವರು ಓದಲಿ. ಕಾಲ ಕಾಲಕ್ಕೆ ಜನರ ಆಶಯಕ್ಕೆ ತಕ್ಕಂತೆ ಬದಲಾವಣೆ ಅವಶ್ಯಕತೆ ಅಂತ ಹೇಳಿದ್ದಾರೆ.
ಸಂವಿಧಾನ ಲಿವಿಂಗ್ ಡಾಕ್ಯುಮೆಂಟ್ ಆಗಿದೆ. ಸಂವಿಧಾನದ ಅರಿವು ಇವರಿಗೆ ಇದೆಯಾ? ಇವರು 370 ತೆಗೆದು ಹಾಕಿದರು. ಅದು ಸಂವಿಧಾನದಲ್ಲಿ ಇತ್ತಾ ಆಗ? ಈಗ ತಿದ್ದುಪಡಿ ತಂದು ಮಾಡಿದ್ದರು. 371j ಇರಲಿಲ್ಲ. ತಿದ್ದುಪಡಿ ಮಾಡಿ ತಂದಿದ್ದೇವೆ. ಆರ್‌ಎಸ್‌ಎಸ್ ನವರು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ಹಾಗಾಗಿ, ಅವರ ಸ್ವಂತ ಇತಿಹಾಸ ಸೃಷ್ಟಿ ಮಾಡೋಕೆ ಹೊರಟಿದ್ದಾರೆ. ಅದಕ್ಕೆ ವಾಟ್ಸ್ ಅಪ್, ಫೇಸ್ ಬುಕ್ ನಲ್ಲಿ ಏನೇನೋ ಬರೆಯುತ್ತಾರೆ. ಇವರು ಮೊದಲು ಅಂಬೇಡ್ಕರ್ ಬಗ್ಗೆ ಓದುಕೊಳ್ಳಲಿ ಎಂದರು.
ಆರ್‌ಎಸ್‌ಎಸ್ ಸಂಘಟನೆಯವರು ಮೊದಲಿನಿಂದಲೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರೋಧಿಗಳು. ಈ ಬಗ್ಗೆ ಸದನದಲ್ಲಿ ಚರ್ಚೆಯನ್ನೂ ಮಾಡಿದ್ದರು. ಈ ಬಗ್ಗೆ ನಾನು ಬಿಜೆಪಿಯವರಿಗೆ ದಾಖಲೆಯನ್ನೂ ಕೊಟ್ಟೆ. ಆದರೆ ಅವರು ರಾಜೀನಾಮೆ ಕೊಡಲಿಲ್ಲ. ನಾಯಿತರಹ ಬೊಗಳುತ್ತಾರೆ ಅಂತ ವಿಷಯ ಡೈವರ್ಟ್ ಮಾಡುತ್ತಾರೆ. ಮೊದಲು ಇವರು ಸಂವಿಧಾನ ಓದಿಕೊಳ್ಳಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
Bengaluru: Congress’ National Media Panelist Aishwarya Mahadev was on Sunday appointed as the chairperson of KPCC’s Social Media Department.
“The AICC has approved the proposal for the appointment of Ms Aishwarya Mahadev as the Chairperson of the Social Media Department of the Karnataka Pradesh Congress Committee, with immediate effect,” a press release by AICC General Secretary (Organisation) K C Venugopal stated.
Daughter of late Congress leader
Aishwarya is the daughter of the late Congress leader and former MLA Manchanahalli Mahadev.
ಚಾಮರಾಜನಗರ: ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಬಡಿಸಲು ದಲಿತ ಮಹಿಳೆಯನ್ನು ನೇಮಿಕ ಮಾಡಿದ ಕಾರಣ ಶಾಲೆ ಬಿಟ್ಟ ಮಕ್ಕಳು, ಈ ಘಟನೆ ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ಹೊಮ್ಮ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಬಡಿಸಲು ದಲಿತ ಮಹಿಳೆಯನ್ನು ನೇಮಕ ಮಾಡಿಕೊಂಡಿರುವುದಕ್ಕೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಯಿಂದ ಬಿಡಿಸಿದ್ದಾರೆ. ಈ ಶಾಲೆಯಲ್ಲಿ 22 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದರು, ಆದರೆ ದಲಿತ ಮಹಿಳೆಯನ್ನು ನೇಮಕ ಮಾಡಿದ ನಂತರ 22 ಮಕ್ಕಳಲ್ಲಿ 21 ಮಕ್ಕಳು ಶಾಲೆಯನ್ನ ಬಿಟ್ಟಿದ್ದಾರೆ, ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಪಾಠ ಪ್ರವಚನಕ್ಕೆ ತೆರಳುತ್ತಿದ್ದಾನೆ.
22 ಮಕ್ಕಳಲ್ಲಿ 12 ಮಕ್ಕಳು ಟಿಸಿ ಯನ್ನು ಪಡೆದುಕೊಂಡು ಹೋಗಿದ್ದಾರೆ, ಇನ್ನು 9 ಮಕ್ಕಳು ಟಿಸಿ ಗೆ ಹರ್ಜಿಯನ್ನು ಸಲ್ಲಿಸಿದ್ದಾರೆ. ಈ ಘಟನೆಯಿಂದ ದಲಿತ ಮಹಿಳೆ ಬೇಸರಗೊಂಡಿದ್ದಾರೆ.
ಬೆಂಗಳೂರು: ರೀಲ್ಸ್ ಮಾಡುವಾಗ ನಿರ್ಮಾಣ ಹಂತದ ಕಟ್ಟಡದ 14ನೇ ಮಹಡಿಯಿಂದ ಕಾಲು ಜಾರಿ ಬಿದ್ದು ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಆಂಧ್ರದ ಬೋಯಲ ಚಿತ್ತೂರು ಮೂಲದ ನಂದಿನಿ(21) ಕಾಲು ಜಾರಿ ಬಿದ್ದು ಮೃತಪಟ್ಟ ಯುವತಿ.
ಬೆಂಗಳೂರು ನಗರದ ಭುವನೇಶ್ವರಿ ಲೇಔಟ್ ನ ಪಿಜಿಯೊಂದರಲ್ಲಿ ವಾಸಿಸುತ್ತಿದ್ದ ಯುವತಿ ರಿಲಯನ್ಸ್ ಮಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದಳು. ಕೆಲಸ ಮುಗಿಸಿ ಸಂಜೆ ಪಿಜಿಗೆ ಬಂದ ಯುವತಿ ತನ್ನ ಸ್ನೇಹಿತೆ ಹಾಗೂ ಇಬ್ಬರು ಸ್ನೇಹಿತರ ಜೊತೆ ಪಾರ್ಟಿ ಮಾಡಲು ರಾಯಸಂದ್ರ ಮುಖ್ಯರಸ್ತೆ ಸಮೀಪವಿರುವ ನಿರ್ಮಾಣ ಹಂತದಲ್ಲಿಯೇ ಇರುವ ಅಪಾರ್ಟ್‌ಮೆಂಟ್‌ವೊಂದಕ್ಕೆ ಹೋಗಿದ್ದರು. ಈ ವೇಳೆ ನಾಲ್ವರು ಸ್ನೇಹಿತಯರು ಜೊತೆಗೂಡಿ ರಾತ್ರಿ 9 ಗಂಟೆಯವರಿಗೆ ಮದ್ಯ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮುಗಿದ ಬಳಿಕ ರೀಲ್ಸ್ ಮಾಡಲು ನಿರ್ಮಾಣ ಹಂತದ 14ನೇ ಮಹಡಿಗೆ ತೆರಳಿ ರೀಲ್ಸ್ ಮಾಡುತ್ತಿದ್ದಳು. ಈ ವೇಳೆ ಕಾಲುಜಾರಿ ಕೆಳಗೆ ಬಿದ್ದು ಯುವತಿ ಮೃತಪಟ್ಟಿದ್ದಾಳೆ.
ಇನ್ನು, ಪುತ್ರಿಯ ಸಾವಿನ ವಿಚಾರ ತಿಳಿದು ಬೆಂಗಳೂರಿಗೆ ಬಂದ ಪೋಷಕರು, ತನ್ನ ಮಗಳ ಜೊತೆಗಿದ್ದ ಇಬ್ಬರು ಯುವಕರು ಹಾಗೂ ಆಕೆಯ ಸ್ನೇಹಿತೆಯನ್ನು ವಿಚಾರಣೆ ನಡೆಸುವಂತೆ ದೂರು ನೀಡಿದ್ದಾರೆ. ಇನ್ನು, ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Mandya, June 14, 2025: Nine‑year‑old Sayyad Sarfaraz Ahmad, hailing from Mandya in Karnataka, clinched the gold medal in the kickboxing category at the 7th International Thai Martial Arts Games, held in Bangkok, Thailand from May 18–22, 2025. His remarkable victory has brought immense pride to his hometown, reported News18.
The young fighter, son of Muhammad Makki and Sheeba, took up kickboxing at the age of three. Trained at Oshukai Martial Arts Academy, he also trained in skating. Sarfaraz has amassed over 60 medals in district, state, and national competitions—more than 35 in skating and over 25 in kickboxing. His recent international gold highlights his extraordinary dedication and rising talent.
At the Bangkok event, Sarfaraz outperformed competitors in his age group with exceptional skill and composure. His win not only brought honor to India but also earned heartfelt gratitude from him toward his family and coaches.
Mandya’s community celebrated the achievement, calling it a source of inspiration for the region’s youth. With discipline, commitment, and flair at such a young age, Sarfaraz aspires to one day compete in major events like the Olympics.
ಬೆಳಗಾವಿ: ಮರದ ಕೆಳಗೆ ನೆರಳಿನಲ್ಲಿ, ತನ್ನ ಮೊಬೈಲ್ ನಲ್ಲಿ ರೀಲ್ಸ್ ನೋಡ್ತಾ ಮಲಗಿದ್ದ ಒಡಹುಟ್ಟಿದ ಅಣ್ಣನನ್ನು ಸ್ವಂತ ತಮ್ಮ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಘಟನೆ ಬೆಳಗಾವಿಯ ಹುಕ್ಕೇರಿ ತಾಲ್ಲೂಕಿನ ಹಟ್ಟಿಆಲೂರಿನಲ್ಲಿ ನಡೆದಿದೆ. ಕುರಿಹಾಗಿ ರಾಯಪ್ಪ ಸುರೇಶ ಕಮತಿ (28) ಕೊಲೆಯಾದ ವ್ಯಕ್ತಿ.
ಈ ಘಟನೆ ಮೇ 8ರಂದು ನಡೆದಿದ್ದು ಕುರಿ ಮೇಯಿಸಲು ಜಮೀನಿಗೆ ತೆರಳಿದ್ದ ರಾಯಪ್ಪ ಸಂಜೆ ಮನೆಗೆ ಹಿಂದಿರುಗಿರಲಿಲ್ಲ.ಹೀಗಾಗಿ ಕುಟುಂಬಸ್ಥರು ಸಾಕಷ್ಟು ಹುಡುಕಾಟ ನಡೆಸಿದ ನಂತರ ಮೇ 9 ರಂದು ಅವರ ಮೃತದೇಹ ಪತ್ತೆಯಾಗಿತ್ತು.
ಈ ಕೊಲೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಕೆಲ ಸಣ್ಣ ಸುಳಿವುಗಳನ್ನು ಆಧರಿಸಿ ವಿಚಾರಣೆ ನಡೆಸಿದಾಗ ರಾಯಪ್ಪನ ಸಹೋದರ ಬಸವರಾಜನೇ ಕೊಲೆಗಾರ ಎಂಬುದು ಗೊತ್ತಾಗಿದೆ. ಈ ಬಸವರಾಜ ಪೆಟ್ರೋಲಿಯಂ ಕಂಪನಿಯಲ್ಲಿ ವಾಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಆದ್ರೆ ಇತ್ತೀಚೆಗೆ ಕೆಲಸ ಬಿಟ್ಟು ಬಸವರಾಜ ಹಟ್ಟಿಆಲೂರಿಗೆ ಮರಳಿದ್ದ ಮತ್ತು ಯಾವ ಕೆಲಸಕ್ಕೂ ತೆರಳದೆ ಮನೆಯಲ್ಲೇ ಉಳಿದಿದ್ದ ಕಾರಣ ರಾಯಪ್ಪ ಮತ್ತು ಈತನ ನಡುವೆ ಜಗಳವಾಗಿತ್ತಂತೆ. ಇದರಿಂದ ಕೋಪಗೊಂಡ ಬಸವರಾಜ ಕುರಿ ಮೇಯಿಸಲು ಹೋಗಿದ್ದ ಅಣ್ಣನ ಹತ್ಯೆ ಮಾಡಿ ನಂತರ ಮನೆಗೆ ಬಂದು ರಾಯಪ್ಪ ಹುಡುಕಾಡಲು ಪ್ರಯತ್ನಿಸುತ್ತಿರುವುದಾಗಿ ಬಿಂಬಿಸಿದ್ದ ಎನ್ನಲಾಗಿದ್ದು ಅಂತಿಮವಾಗಿ ಪೊಲೀಸರ ಕೈಯಲಿ ಲಾಕ್ ಆಗಿದ್ದಾನೆ.
ಉಡುಪಿ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇವರ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅಫಿಲಿಯೇಟೆಡ್ ಖಾಸಗಿ ಕೃಷಿ ವಿಜ್ಞಾನಗಳ ಕಾಲೇಜುಗಳನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವ ಹಾಗೂ ಕರ್ನಾಟಕದ ಸೊಸೈಟಿ ನೊಂದಣಿ ಕಾಯ್ದೆಯಡಿಯಲ್ಲಿ ನೊಂದಾಯಿಸಲಾದ ಮಂಡಳಿಗಳು, ಸೊಸೈಟಿಗಳು ಹಾಗೂ ಟ್ರಸ್ಟ್ಗಳಿಂದ ಅರ್ಜಿ ಅಹ್ವಾನಿಸಿದೆ.
ಆಸಕ್ತ ಸಂಸ್ಥೆಗಳು ಬಿ.ಎಸ್ಸಿ. (ಹಾನರ್ಸ್) ಕೃಷಿ, ಬಿ.ಟೆಕ್ ಕೃಷಿ ಇಂಜಿನಿಯರಿಂಗ್, ಬಿ.ಟೆಕ್. ಕೃಷಿ ಬಯೋಟೆಕ್ನಾಲಜಿ, ಬಿ.ಟೆಕ್. ಫುಡ್ ಟೆಕ್ನಾಲಜಿ, ಬಿ.ಎಸ್ಸಿ. (ಹಾನರ್ಸ್) ಅರಣ್ಯ, ಬಿ.ಎಸ್ಸಿ. (ಹಾನರ್ಸ್) ಕಮ್ಯೂನಿಟಿ ವಿಜ್ಞಾನ, ಬಿ.ಎಸ್ಸಿ. (ಹಾನರ್ಸ್) ಫುಡ್ ನ್ಯೂಟ್ರೀಶನ್ ಮತ್ತು ಡೈಯಟಿಕ್ಸ್, ಬಿ.ಎಸ್ಸಿ. (ಹಾನರ್ಸ್) ತೋಟಗಾರಿಕೆ ಮತ್ತು ಬಿ.ಎಸ್ಸಿ. (ಹಾನರ್ಸ್) ರೇಷ್ಮೆ ಕೃಷಿ ಪದವಿ ಪ್ರಾರಂಭಿಸಲು ಅರ್ಜಿ ಸಲ್ಲಿಸಬಹುದಾಗಿದೆ.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಫಿಲಿಯೇಶನ್‌ಗಾಗಿ ಕನಿಷ್ಟ ಮಾನದಂಡಗಳನ್ನು, ಹೆಚ್ಚಿನ ವಿವರ, ನಿಬಂಧನೆಗಳು ಮತ್ತು ಅರ್ಜಿಗಾಗಿ ವೆಬ್‌ಸೈಟ್ www.uahs.edu.in ಅನ್ನು ಸಂಪರ್ಕಿಸಬಹುದಾಗಿದೆ. ಅಫಿಲಿಯೇಶನ್‌ಗಾಗಿ ಅರ್ಜಿ ಸಲ್ಲಿಸಲು ಜುಲೈ 7 ಕೊನೆಯ ದಿನ. ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಈ ಸಾಲಿಗೆ ಪರಿಗಣಿಸಲಾಗುವುದಿಲ್ಲ ಎಂದು ವಿಶ್ವವಿದ್ಯಾಲಯದ ಕುಲಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.