Category: State

  • ಹಾಸನ: ಅನೈತಿಕ ಸಂಬಂಧಕ್ಕಾಗಿ ಗಂಡ ಮತ್ತು ಮಕ್ಕಳಿಗೆ ವಿಷ ಬೆರೆಸಿದ ಮಹಿಳೆ

    ಹಾಸನ: ಬೇಲೂರು ತಾಲೂಕಿನ ಕೆರಲೂರಿನ 33 ವರ್ಷದ ಮಹಿಳೆಯೊಬ್ಬಳು ತನ್ನ ಅನೈತಿಕ ಸಂಬಂಧವನ್ನು ಮುಂದುವರಿಸಲು ತನ್ನ ಕುಟುಂಬದ ಸದಸ್ಯರಾದ ಗಂಡ, ಮಕ್ಕಳು ಮತ್ತು ಮಾವಂದಿರಿಗೆ ವಿಷ ಹಾಕಿ ಕೊಲ್ಲಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಚೈತ್ರ ಎಂಬ ಮಹಿಳೆಯು 11 ವರ್ಷಗಳ ಹಿಂದೆ ಗಜೇಂದ್ರನನ್ನು ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ, ಕಳೆದ ಮೂರು ವರ್ಷಗಳಿಂದ ಚೈತ್ರ ತನ್ನ ಗಂಡನೊಂದಿಗೆ ಸಣ್ಣಪುಟ್ಟ ವಿಷಯಗಳಿಗೆ ಆಗಾಗ ಜಗಳವಾಡುತ್ತಿದ್ದಳು ಮತ್ತು ಇನ್ನೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವನ್ನು ಬೆಳೆಸಿಕೊಂಡಿದ್ದಳು. ಈ ವಿಷಯ ಗಜೇಂದ್ರನಿಗೆ ತಿಳಿದ ನಂತರ, ಅವನು ಚೈತ್ರಳ ಪೋಷಕರಿಗೆ ತಿಳಿಸಿದ್ದಾನೆ. ಮಧ್ಯಸ್ಥಿಕೆಯ ನಂತರ ದಂಪತಿಗಳು ಕೆಲಕಾಲ ಒಟ್ಟಿಗೆ ಇದ್ದರು.

    ಆದರೆ, ಚೈತ್ರಳು ಮತ್ತೆ ಗ್ರಾಮದ ಶಿವು ಎಂಬಾತನೊಂದಿಗೆ ಮತ್ತೊಂದು ಅನೈತಿಕ ಸಂಬಂಧವನ್ನು ಆರಂಭಿಸಿದ್ದಳು. ತನ್ನ ಗಂಡ, ಮಕ್ಕಳು ಮತ್ತು ಮಾವಂದಿರು ತನ್ನ ಸಂಬಂಧಕ್ಕೆ ಅಡ್ಡಿಯಾಗಬಹುದು ಎಂದು ಭಾವಿಸಿದ ಚೈತ್ರ, ಅವರೆಲ್ಲರನ್ನೂ ಕೊನೆಗಾಣಿಸಲು ಯೋಜನೆ ರೂಪಿಸಿದಳು. ಶಿವುನ ಸಹಾಯದಿಂದ, ಚೈತ್ರ ತನ್ನ ಕುಟುಂಬದವರ ಆಹಾರದಲ್ಲಿ ವಿಷ ಬೆರೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕುಟುಂಬದ ಸದಸ್ಯರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ, ವಿಷ ಹಾಕಿದ ವಿಷಯ ಬೆಳಕಿಗೆ ಬಂದಿತು. ಇದರಿಂದ ಕೋಪಗೊಂಡ ಗಜೇಂದ್ರ ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಬೇಲೂರು ಪೊಲೀಸರು ಚೈತ್ರ ಮತ್ತು ಶಿವು ಎಂಬಿಬ್ಬರನ್ನೂ ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.

  • ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳ ಮಾಹಿತಿ ನೀಡುವಂತೆ ಸರ್ಕಾರ ಸೂಚನೆ

    ಬೆಂಗಳೂರು, ಜೂ.11: ಯುವ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.

    2022ರಿಂದ 2025ರ ಮೇ 31ರ ವರೆಗೆ ದಾಖಲಾಗಿರುವ ಪ್ರಕರಣಗಳ ಮಾಹಿತಿ ಹಾಗೂ ಎಫ್‌ಐಆರ್ ಪ್ರತಿಗಳನ್ನು ಎಸ್.ಪಿ, ಪೊಲೀಸ್ ಪ್ರಧಾನ ಕಚೇರಿ, ಬೆಂಗಳೂರು-ಇಲ್ಲಿಗೆ ಕಳುಹಿಸುವಂತೆ ಆದೇಶಿಸಲಾಗಿದೆ.

    ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ಬರೆದ ಪತ್ರದ ಮೇರೆಗೆ ಎಫ್‌ಐಆರ್ ಪ್ರತಿ, ತೆಗೆದುಕೊಂಡ ಕ್ರಮಗಳು ಹಾಗೂ ಪ್ರಸ್ತುತ ಹಂತದ ಮಾಹಿತಿ ಒದಗಿಸುವಂತೆ ಎಲ್ಲ ಪೊಲೀಸ್ ಕಮಿಷನರ್‌ಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಆದೇಶದಲ್ಲಿ ಸೂಚಿಸಲಾಗಿದೆ.

  • ಕ.ರಾ.ರ.ಸಾ.ನಿಗಮದ ವಿದ್ಯಾರ್ಥಿ ಬಸ್ ಪಾಸ್  : ಅರ್ಜಿ ಆಹ್ವಾನ

    ಉಡುಪಿ: ಪ್ರಸಕ್ತ ಸಾಲಿನಲ್ಲಿ ಕ.ರಾ.ರ.ಸಾ. ನಿಗಮದ ವಿದ್ಯಾರ್ಥಿ ಬಸ್‌ಪಾಸ್ ಪಡೆಯಲು ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in/buspassservices ನಲ್ಲಿ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅಥವಾ ಕರ್ನಾಟಕ-ಒನ್, ಗ್ರಾಮಒನ್ ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಬಹುದಾಗಿದೆ.

    ವಿದ್ಯಾರ್ಥಿಗಳು ವಿದ್ಯಾರ್ಥಿ ಬಸ್ಸುಪಾಸುಗಾಗಿ ಅರ್ಜಿ ಸಲ್ಲಿಸಲು ಡಿಕ್ಲರೇಷನ್ ಫಾರ್ಮ್ ಅನ್ನು ಸೇವಾಸಿಂಧು ತಂತ್ರಾಂಶದಲ್ಲಿ ಅಥವಾ ಕ.ರಾ.ರ.ಸಾ.ನಿಗಮದ ವೆಬ್‌ಸೈಟ್  https://ksrtc.karnataka.gov.in/studentpass ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಡಿಕ್ಲರೇಷನ್ ಫಾರ್ಮ್ ಅನ್ನು ಭರ್ತಿ ಮಾಡಿ ಶಾಲಾ ಅಥವಾ ಕಾಲೇಜು ಮುಖೋಪಾಧ್ಯಾಯರ ಅಥವಾ ಪ್ರಾಂಶುಪಾಲರ ಸಹಿ ಮತ್ತು ಶಾಲಾ/ಕಾಲೇಜು ಮೊಹರಿನೊಂದಿಗೆ ಅರ್ಜಿ ಸಲ್ಲಿಸುವಾಗ ಅಪ್‌ಲೋಡ್ ಮಾಡಬೇಕು.

    ಅರ್ಜಿ ಅನುಮೋದನೆಯಾದ ವಿದ್ಯಾರ್ಥಿಗಳಿಗೆ ಪಾಸು ಪಡೆಯಲು ಭೇಟಿ ನೀಡಬೇಕಿರುವ ಕೌಂಟರ್‌ನ ಹೆಸರು/ವಿಳಾಸ ಮಾಹಿತಿಯನ್ನು ಅರ್ಜಿಯಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ ಎಸ್.ಎಂ.ಎಸ್ ಮುಖೇನ ಕಳುಹಿಸಲಾಗುವುದು. ವಿದ್ಯಾರ್ಥಿಗಳು ಆಯ್ಕೆ ಮಾಡಿದ ಕೌಂಟರ್‌ಗೆ ತೆರಳಿ, ನಿಗದಿತ ಪಾಸಿನ ಶುಲ್ಕವನ್ನು ನಗದು ಮುಖೇನ ಪಾವತಿಸಿ ಪಾಸನ್ನು ಪಡೆಯಬಹುದಾಗಿದೆ.

    ರಾಜ್ಯ ಸರ್ಕಾರವು ಮಹಿಳೆಯರಿಗೆ (ವಿದ್ಯಾರ್ಥಿನಿಯರು, ಲಿಂಗತ್ವ ಅಲ್ಪ ಸಂಖ್ಯಾತರು ಸೇರಿದಂತೆ) ಶಕ್ತಿ ಯೋಜನೆಯಡಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಿದ್ದು, ನೆರೆರಾಜ್ಯದಲ್ಲಿ ವಾಸವಿದ್ದು, ಕರ್ನಾಟಕ ರಾಜ್ಯದ ಶಾಲೆ/ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಗಡಿಭಾಗದ ಮಾರ್ಗಗಳಲ್ಲಿನ ವಿದ್ಯಾರ್ಥಿನಿಯರು ವಿದ್ಯಾರ್ಥಿ ರಿಯಾಯಿತಿ ಬಸ್ಸು ಪಾಸು ಪಡೆಯುವ ಅಗತ್ಯವಿದೆ.

    ಕ.ರಾ.ರ.ಸಾ.ನಿಗಮ ವ್ಯಾಪ್ತಿಯ ಪಾಸ್ ವಿತರಣಾ ಕೌಂಟರ್‌ಗಳ ವಿವರಗಳನ್ನು ವಿದ್ಯಾರ್ಥಿಗಳ ಮಾಹಿತಿಗಾಗಿ ನಿಗಮದ ವೆಬ್‌ಸೈಟ್ https://ksrtc.karnataka.gov.in/student ನಲ್ಲಿ ಪ್ರಕಟಿಸಲಾಗಿದೆ ಎಂದು ಮಂಗಳೂರು ಕ.ರಾ.ರ.ಸಾ ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕಾಲ್ತುಳಿತ ಪ್ರಕರಣ: ಆರ್‌ಸಿಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೇರಿ ನಾಲ್ವರ ಬಂಧನ; ಪೊಲೀಸರಿಂದ ತೀವ್ರ ವಿಚಾರಣೆ

    ಬೆಂಗಳೂರು, ಜೂನ್ 6, 2025: ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದಿಂದ 11 ಆರ್‌ಸಿಬಿ ಅಭಿಮಾನಿಗಳ ಸಾವು ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಸೇರಿದಂತೆ ಕೆಲ ಅಧಿಕಾರಿಗಳನ್ನು ಅಮಾನತು ಮಾಡಿದೆ. ಇದೀಗ ಈ ಸಂಬಂಧ ಮೂವರು ಆಯೋಜಕರು ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಮತ್ತು ಸಿಸಿಬಿ ಜಂಟಿ ಕಾರ್ಯಾಚರಣೆ ನಡೆಸಿ ಕೆಂಪೇಗೌಡ ಏರ್​​ಪೋರ್ಟ್​ನಲ್ಲಿ ಮೂವರು ಆಯೋಜಕರು ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಮುಂಬೈಗೆ ಪರಾರಿಯಾಗುತ್ತಿದ್ದ ಆರ್‌ಸಿಬಿ ಮಾರ್ಕೆಟಿಂಗ್ ಮುಖಸ್ಥ ನಿಖಿಲ್ ಸೋಸಲೆ, ಡಿಎನ್‌ಎ ಮ್ಯಾನೇಜ್‌ಮೆಂಟ್ ಸಿಬ್ಬಂದಿ ಸುನೀಲ್ ಮ್ಯಾಥ್ಯೂ, ಕಿರಣ್ ಮತ್ತು ಸುಮಂತ್ ಬಂಧಿಸಲಾಗಿದೆ.

    ಸದ್ಯ ನಾಲ್ವರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆತರಲಾಗಿದ್ದು, ಬಂಧಿತರನ್ನು ತೀವ್ರತರದ ವಿಚಾರಣೆಗೆ ಒಳಪಡಿಸಲಾಗಿದೆ. ಖುದ್ದು ಸಿಸಿಬಿ ಡಿಸಿಪಿ ಅಕ್ಷಯ್ ಎಂ. ನೇತೃತ್ವದಲ್ಲಿ ಇದೀಗ ಕಬ್ಬನ್ ಪಾರ್ಕ್ ಠಾಣೆಯಲ್ಲಿ ನಾಲ್ವರ ವಿಚಾರಣೆ ನಡೆಸಲಾಗುತ್ತಿದೆ.

  • ಬೆಂಗಳೂರಿಗೆ ನೂತನ ಪೊಲೀಸ್ ಕಮಿಷನರ್: ಸೀಮಂತ್ ಕುಮಾರ್ ಸಿಂಗ್ ನೇಮಕ

    ಬೆಂಗಳೂರು, ಜೂನ್ 05, 2025: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ (ಜೂನ್ 4, 2025) ನಡೆದ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಸರ್ಕಾರವು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರನ್ನು ಅಮಾನತುಗೊಳಿಸಿದ ಕೆಲವೇ ಗಂಟೆಗಳಲ್ಲಿ 1996ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ನೂತನ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿದೆ.

    ದಯಾನಂದ್ ಅವರ ಜೊತೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್.ಟಿ., ಒಬ್ಬ ಎಸಿಪಿ ಹಾಗೂ ಕಬ್ಬನ್ ಪಾರ್ಕ್ ಠಾಣೆಯ ಇನ್ಸ್‌ಪೆಕ್ಟರ್ ಗಿರೀಶ್ ಎ.ಕೆ. ಅವರನ್ನು ಸಹ ಅಮಾನತುಗೊಳಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಮತ್ತು ಡಿಎನ್‌ಎ ಎಂಟರ್‌ಟೈನ್‌ಮೆಂಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

  • ಮಡಿಕೇರಿ: ನವಜಾತ ಶಿಶುವಿನ ಕಳೇಬರ ಪತ್ತೆ

    ಮಡಿಕೇರಿ, ಜೂನ್ 05, 2025: ಕುಶಾಲನಗರ ತಾಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಹಾಡಿ ಸಮುದಾಯ ಭವನದ ಬಳಿಯ ತೋಟದಲ್ಲಿ ನವಜಾತ ಹೆಣ್ಣು ಶಿಶುವಿನ ಕಳೇಬರ ಪತ್ತೆಯಾಗಿದೆ. ಜನನವಾದ ಕೆಲವೇ ಗಂಟೆಗಳಲ್ಲಿ ಶಿಶುವನ್ನು ತೋಟದಲ್ಲಿ ಬಿಟ್ಟು ಹೋಗಲಾಗಿದ್ದು, ನಾಯಿಗಳು ಎಳೆದಾಡುತ್ತಿರುವ ದೃಶ್ಯ ಕಂಡುಬಂದಿದೆ.

    ಗ್ರಾಮ ಪಂಚಾಯಿತಿ ಸದಸ್ಯ ಆರ್.ಕೆ. ಚಂದ್ರು ಸ್ಥಳಕ್ಕೆ ಭೇಟಿ ನೀಡಿ, ಸಂಬಂಧಿತ ಇಲಾಖೆಗಳಿಗೆ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್, ತಾಲೂಕು ವೈದ್ಯಾಧಿಕಾರಿ ಡಾ. ಇಂದೂಧರ್, ಕುಶಾಲನಗರ ವೃತ್ತ ನಿರೀಕ್ಷಕ ದಿನೇಶ್ ಕುಮಾರ್, ಮತ್ತು ಗ್ರಾಮಾಂತರ ಠಾಣಾಧಿಕಾರಿ ಸ್ವಾಮಿ ಸ್ಥಳವನ್ನು ಪರಿಶೀಲಿಸಿ ಮಹಜರು ನಡೆಸಿದರು. ಕಳೇಬರವನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರ್.ಕೆ. ಚಂದ್ರು, ಶಿಶುವನ್ನು ಬಿಟ್ಟವರನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

  • ಬೆಂಗಳೂರು ಕಾಲ್ತುಳಿತ: ಪೊಲೀಸ್ ಕಮಿಷನರ್ ಸೇರಿ ಹಲವು ಅಧಿಕಾರಿಗಳ ಅಮಾನತು

    ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ (ಜೂನ್ 4, 2025) ನಡೆದ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿ, 47ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಸರ್ಕಾರವು ತಕ್ಷಣವೇ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್.ಟಿ., ಒಬ್ಬ ಎಸಿಪಿ ಹಾಗೂ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಗಿರೀಶ್ ಎ.ಕೆ. ಅವರನ್ನು ಅಮಾನತುಗೊಳಿಸಿದೆ.

    ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ, ಉಪ ಮುಖ್ಯಮಂತ್ರಿ, ಹಿರಿಯ ಸಚಿವರು, ಮುಖ್ಯಮಂತ್ರಿಯ ಕಾನೂನು ಸಲಹೆಗಾರ, ಅಡ್ವೊಕೇಟ್ ಜನರಲ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕರೊಂದಿಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದ ಬಳಿಕ ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿ ಅವರು ಮಾತನಾಡಿದರು.

    ಸತ್ತವರ ಹೆಸರುಗಳ ಪಟ್ಟಿ

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಚಿವ ಸಂಪುಟ ಸಭೆಯ ನಂತರ ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯ ಮುಖ್ಯಾಂಶಗಳು:

    • ಆರ್‌ಸಿಬಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಘಟನೆ ದು:ಖಕರವಾಗಿದ್ದು, ಮೃತಪಟ್ಟವರಿಗೆ ಮತ್ತೊಮ್ಮೆ ಸಂತಾಪ ಸೂಚಿಸುತ್ತಿದ್ದೇನೆ. ಇಂದು ಎಂದಿನಂತೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಗಂಭೀರ ಚರ್ಚೆ ನಡೆಸಲಾಗಿದೆ. ನಿನ್ನೆ ನಡೆದ ಅಹಿತಕರ ಘಟನೆ ಬಗ್ಗೆ ಚರ್ಚಿಸಿ ಕೆಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
    • ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶರಾದ ಜಸ್ಟೀಸ್ ಮೈಕೆಲ್ ಕುನ್ಹಾ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿ, ತನಿಖೆ ನಡೆಸಲಾಗುತ್ತದೆ.
    • ಆರ್.ಸಿ.ಬಿ ಸಂಸ್ಥೆ ಹಾಗೂ ಕಾರ್ಯಕ್ರಮ ಆಯೋಜಕರಾದ ಡಿಎನ್‌ಎ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಈ ಮೂರು ಸಂಸ್ಥೆಗಳ ಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು, ಬಂಧಿಸಲು ಸೂಚನೆ ನೀಡಲಾಗಿದೆ. ಇವರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.
    • ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಆ ಭಾಗದ ಎಸಿಪಿ, ಸೆಂಟ್ರಲ್ ಡಿಸಿಪಿ, ಕ್ರೀಡಾಂಗಣದ ಉಸ್ತುವಾರಿ ವಹಿಸಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತರು ಮತ್ತು ಬೆಂಗಳೂರು ನಗರದ ಪೊಲೀಸ್ ಕಮೀಷನರ್ ರನ್ನು ತಕ್ಷಣದಿಂದ ಅಮಾನತ್ತುಗೊಳಿಸಲು ತೀರ್ಮಾನಿಸಲಾಗಿದೆ. ಈ ದುರಂತಕ್ಕೆ ಸಂಬಂಧಪಟ್ಟ ಚರ್ಚೆಯ ನಂತರ ತೆಗೆದುಕೊಂಡ ತೀರ್ಮಾನಗಳಾಗಿವೆ. ಉಪಮುಖ್ಯಮಂತ್ರಿಗಳು, ಗೃಹಸಚಿವರು, ಸಚಿವರಾದ ಎಚ್.ಕೆ.ಪಾಟೀಲ್, ಸುಧಾಕರ್, ಮಹಾದೇವಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.
    • ಮೇಲ್ನೋಟಕ್ಕೆ ಈ ಅಧಿಕಾರಿಗಳ ಬೇಜವಾಬ್ದಾರಿತನ, ಅಲಕ್ಷ್ಯ ಕಂಡುಬರುತ್ತಿದ್ದು, ಇವರುಗಳನ್ನು ಅಮಾನತ್ತುಗೊಳಿಸಲು ತೀರ್ಮಾನಿಸಲಾಗಿದೆ.
    • ನಾನು ಶಾಸಕರು, ಸಚಿವ, ಡಿಸಿಎಂ ಹಾಗೂ ಮುಖ್ಯಮಂತ್ರಿಯಾದ ನಂತರ ಇಂತಹ ಘಟನೆ ನಡೆದಿರಲಿಲ್ಲ. ಈ ಘಟನೆ ನನ್ನನ್ನು ಘಾಸಿಗೊಳಿಸಿದೆ. ದುರಂತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತಾ, ಕುಟುಂಬದವರ ಜೊತೆ ಸರ್ಕಾರವಿದೆ ಎನ್ನುವ ಭರವಸೆಯನ್ನು ಕೂಡ ನೀಡಬಯಸುತ್ತೇನೆ.

    ನಿನ್ನೆ ಆದೇಶ ನೀಡಿದಂತೆ ಮ್ಯಾಜಿಸ್ಟ್ರೇಟ್ ತನಿಖೆ ಪ್ರಾರಂಭವಾಗಿದೆ. ಈ ಮಹಾದುರಂತದ ಬಗ್ಗೆ ಕೆಲವು ಮಾಹಿತಿಗಳು ದೊರೆತ ನಂತರ, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಮೂರು ಸಂಸ್ಥೆಗಳ ವಿರುದ್ಧದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ.

  • ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಭೀಕರ ಅಪಘಾತ: ಶಿವಮೊಗ್ಗದಲ್ಲಿ ಯುವಕ ಸಾವು

    ಶಿವಮೊಗ್ಗ: ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ಸಂದರ್ಭ ಅಪಘಾತವಾಗಿ ಯುವಕನೊಬ್ಬ ಸಾವನ್ನಪ್ಪಿದ್ದಾನೆ. ಉಷಾ ನರ್ಸಿಂಗ್‌ ಹೋಂ ಸರ್ಕಲ್‌ ಬಳಿ ರವೀಂದ್ರ ನಗರ ಗಣಪತಿ ದೇವಸ್ಥಾನದ ಮುಂದೆ ಕಳೆದ ರಾತ್ರಿ ಘಟನೆ ಸಂಭವಿಸಿದೆ.

    ವೆಂಕಟೇಶ ನಗರದ ನಿವಾಸಿ ಅಭಿ (21) ಮೃತ ದುರ್ದೈವಿ. ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಯುವಕರು ಬೈಕ್‌ ಜಾಥಾ ನಡೆಸಿದರು. ಈ ಸಂದರ್ಭ ಎರಡು ಬೈಕುಗಳು ಮುಖಾಮುಖಿ ಡಿಕ್ಕಿಯಾಗಿದ್ದು ತೀವ್ರ ಗಾಯಗೊಂಡಿದ್ದ ಅಭಿ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.

    ಅಪಘಾತವಾಗುತ್ತಿದ್ದಂತೆ ಯುವಕರು ಕೂಡಲೆ ನೆರವಿಗೆ ಧಾವಿಸಿದ್ದಾರೆ. ಆದರೆ ಈ ವೇಳೆಗಾಗಲೆ ಅಭಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಜಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

  • ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ ಪ್ರಕರಣ: ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಹೈಕೋರ್ಟ್

    ಬೆಂಗಳೂರು, ಜೂನ್ 05, 2025: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ಸಮಯದಲ್ಲಿ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

    ಘಟನೆ ಕುರಿತು ಇಂದು ಮಧ್ಯಾಹ್ನ 2:30ಕ್ಕೆ ಅರ್ಜಿ ವಿಚಾರಣೆ ನಡೆಯಲಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಕಾಮೇಶ್ವರ ರಾವ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ರಾಜ್ಯ ಸರ್ಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಿತ್ತು. ಈ ಬಗ್ಗೆ ಮಧ್ಯಾಹ್ನ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ.

    ಎಜಿ ಶಶಿಕಿರಣ್ ಶೆಟ್ಟಿ ಪೀಠಕ್ಕೆ ವಿವರಣೆ ನೀಡಲಿದ್ದು, ವಕೀಲರಾದ ಹೇಮಂತ್ ರಾಜ್, ಜಿ.ಆರ್.ಮೋಹನ್ ಮಾಹಿತಿ ನೀಡಲಿದ್ದಾರೆ. ಹೈಕೋರ್ಟ್ ಕಟ್ಟಡದ ಮೇಲೂ ಜನರು ನಿಂತಿದ್ದರು. ಭದ್ರತಾ ಲೋಪವಾಗಿದೆ ಎಂದು ವಕೀಲರು ಕೋರ್ಟ್‌ಗೆ ತಿಳಿಸಿದ್ದಾರೆ.

    ಜನರ ಸಾವುನೋವಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ಭದ್ರತಾ ಲೋಪದ ಬಗ್ಗೆ ಸರ್ಕಾರದ ವರದಿ ಕೇಳಿದ್ದೇವೆ. ವಿಚಾರಣೆ 2:30ಕ್ಕೆ ನಿಗದಿಯಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.

  • ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ದುರಂತ: ಮೃತರ ಸಂಖ್ಯೆ 10ಕ್ಕೆ ಏರಿಕೆ, 13 ಜನ ಐಸಿಯುನಲ್ಲಿ

    ಬೆಂಗಳೂರು, ಜೂನ್ 4, 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಮ್ಮ ಐಪಿಎಲ್ 2025 ಗೆಲುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ದುರಂತದಲ್ಲಿ 7 ಜನರು ಮೃತಪಟ್ಟಿದ್ದಾರೆ ಎಂದು ಟಿವಿ9 ವರದಿ ಮಾಡಿದೆ. ಈ ಘಟನೆಯಲ್ಲಿ 13 ಜನರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ, ಅದರಲ್ಲಿ ನಾಲ್ಕು ಜನರ ಸ್ಥಿತಿ ಗಂಭೀರವಾಗಿದೆ.

    ಟಿವಿ9 ವರದಿಯ ಪ್ರಕಾರ, ಮೃತಪಟ್ಟವರಲ್ಲಿ ನಾಲ್ಕು ಜನರು ವೈದೇಹಿ ಆಸ್ಪತ್ರೆಯಲ್ಲಿ, ಅದರಲ್ಲಿ ಒಬ್ಬ ಮಹಿಳೆ ಸೇರಿದ್ದಾರೆ, ಮತ್ತು ಇಬ್ಬರು ಬೌರಿಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆರ್‌ಸಿಬಿ ತಂಡವು ವಿಧಾನ ಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಓಪನ್-ಟಾಪ್ ಬಸ್‌ನಲ್ಲಿ ವಿಜಯೋತ್ಸವ ಮೆರವಣಿಗೆ ಆಯೋಜಿಸಿತ್ತು. ಆದರೆ, ದೊಡ್ಡ ಸಂಖ್ಯೆಯ ಅಭಿಮಾನಿಗಳ ಜನಸಂದಣಿಯಿಂದಾಗಿ ಕ್ರೀಡಾಂಗಣದ ಗೇಟ್‌ಗಳ ಬಳಿ ನೂಕುನುಗ್ಗಲು ಉಂಟಾಗಿ ಈ ದುರಂತ ಸಂಭವಿಸಿದೆ.

    ಬೆಂಗಳೂರು ಪೊಲೀಸರು ಜನಸಂದಣಿಯನ್ನು ನಿಯಂತ್ರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದರೂ, ಭಾರೀ ಜನದಟ್ಟಣೆಯಿಂದಾಗಿ ಕಾಲ್ತುಳಿತದಂತಹ ಸ್ಥಿತಿ ಉಂಟಾಯಿತು. ಗಾಯಾಳುಗಳನ್ನು ತಕ್ಷಣವೇ ವೈದೇಹಿ ಮತ್ತು ಬೌರಿಂಗ್ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. 13 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ಕು ಜನರ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.