Category: Kaup

  • ಮಂಗಳೂರು/ಉಡುಪಿ: ಐಪಿಎಸ್ ಅಧಿಕಾರಿಗಳ ವರ್ಗಾವಣೆ – ಉಡುಪಿ, ದಕ್ಷಿಣ ಕನ್ನಡ ಪೊಲೀಸ್ ನಾಯಕತ್ವದಲ್ಲಿ ಬದಲಾವಣೆ

    ಮಂಗಳೂರು/ಉಡುಪಿ, ಮೇ 29, 2025: ರಾಜ್ಯ ಸರ್ಕಾರವು ಐಪಿಎಸ್ ಅಧಿಕಾರಿಗಳ ಗಣನೀಯ ವರ್ಗಾವಣೆಯನ್ನು ಘೋಷಿಸಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪೊಲೀಸ್ ನಾಯಕತ್ವದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ.

    ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಡಾ. ಅರುಣ್ ಕೆ. ಅವರನ್ನು ವರ್ಗಾಯಿಸಲಾಗಿದ್ದು, ಅವರು ದಕ್ಷಿಣ ಕನ್ನಡ ಜಿಲ್ಲೆಯ ಹೊಸ ಪೊಲೀಸ್ ಅಧೀಕ್ಷಕರಾಗಿ ನೇಮಕಗೊಂಡಿದ್ದಾರೆ.

    ಹರಿರಾಮ್ ಶಂಕರ್ ಅವರು ಉಡುಪಿ ಜಿಲ್ಲೆಯ ಹೊಸ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

    ಇದೇ ವೇಳೆ, ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅನುಪಮ್ ಅಗರ್ವಾಲ್ ಅವರನ್ನು ಆರ್ಥಿಕ ಅಪರಾಧಗಳ ಉಪಮಹಾನಿರೀಕ್ಷಕರ (ಡಿಐಜಿ) ಹುದ್ದೆಗೆ ವರ್ಗಾಯಿಸಲಾಗಿದೆ.

    ಸುಧೀರ್‌ಕುಮಾರ್ ರೆಡ್ಡಿ ಅವರು ಮಂಗಳೂರು ನಗರದ ಹೊಸ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

    ಚಿತ್ರ:

    • ಮೇಲೆ: ಸುಧೀರ್‌ಕುಮಾರ್ ರೆಡ್ಡಿ, ಹರಿರಾಮ್ ಶಂಕರ್
    • ಕೆಳಗೆ: ಅನುಪಮ್ ಅಗರ್ವಾಲ್, ಡಾ ಅರುಣ್ ಕೆ
  • ಕಾಪು: ಫೇಸ್‌ಬುಕ್ ಮೂಲಕ ವಂಚನೆ – 75 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

    ಕಾಪು, 27 ಮೇ 2025: ತಾಲೂಕಿನ ಶಂಕರಪುರದ ಜೊಸ್ಸಿ ಡಿಕ್ರೂಸ್ (54) ಎಂಬವರು ಫೇಸ್‌ಬುಕ್ ಮೂಲಕ ಆಗಿರುವ ವಂಚನೆಯಿಂದ 75 ಲಕ್ಷ ರೂಪಾಯಿ ಕಳೆದುಕೊಂಡ ಘಟನೆಯೊಂದು ನಡೆದಿದೆ.

    ಫಿರ್ಯಾದಿದಾರರಾದ ಜೊಸ್ಸಿ ಡಿಕ್ರೂಸ್, ವಿದೇಶದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದವರು, ಆರೋಗ್ಯದ ಕಾರಣದಿಂದ ಎರಡು ವರ್ಷಗಳ ಹಿಂದೆ ಊರಿಗೆ ಮರಳಿದ್ದರು. 2025ರ ಫೆಬ್ರವರಿಯಲ್ಲಿ ಫೇಸ್‌ಬುಕ್ ಮೂಲಕ ಅರೋಹಿ ಅಗರ್‌ವಾಲ್ ಎಂಬ ಮಹಿಳೆಯ ಪರಿಚಯವಾಗಿತ್ತು. ಆಕೆಯಿಂದ ವಾಟ್ಸಾಪ್ ಸಂಖ್ಯೆ ಪಡೆದ ಫಿರ್ಯಾದಿದಾರರು ಚಾಟ್ ಮಾಡುತ್ತಿದ್ದಾಗ, FXCM ಗೋಲ್ಡ್ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಭಾರೀ ಲಾಭಾಂಶ ದೊರೆಯುತ್ತದೆ ಎಂದು ಆಕೆ ಸಂದೇಶ ಕಳುಹಿಸಿದ್ದಳು.

    ಈ ಮಾತನ್ನು ನಂಬಿದ ಜೊಸ್ಸಿ, ತಮ್ಮ ಶಂಕರಪುರದ ಕೆನರಾ ಬ್ಯಾಂಕ್ ಖಾತೆಯಿಂದ 09/04/2025 ರಿಂದ 12/05/2025ರವರೆಗೆ ಹಂತಹಂತವಾಗಿ ಒಟ್ಟು 75,00,000 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ, ಅಪರಿಚಿತ ವ್ಯಕ್ತಿಗಳು ಫಿರ್ಯಾದಿದಾರರ ಹೂಡಿಕೆಯ ಹಣವನ್ನಾಗಲೀ ಅಥವಾ ಲಾಭಾಂಶವನ್ನಾಗಲೀ ನೀಡದೇ ವಂಚಿಸಿದ್ದಾರೆ.

    ಈ ಬಗ್ಗೆ ಉಡುಪಿ ಸೆನ್‌ ಅಪರಾಧ ಪೊಲೀಸ್ ಠಾಣೆಯಲ್ಲಿ ಕ್ರಮಾಂಕ 21/2025ರಡಿ ಕಲಂ 66(ಸಿ), 66(ಡಿ) ಐ.ಟಿ. ಆಕ್ಟ್ ಮತ್ತು 318(4) ಬಿಎನ್‌ಎಸ್‌ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  • ಕಾಪು ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಪಲ್ಟಿ

    ಕಾಪು, ಮೇ 26, 2025: ಖಾಸಗಿ ಎಕ್ಸ್‌ಪ್ರೆಸ್ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ಮೇ. 26 ರಂದು ಸೋಮವಾರ ಸಂಜೆ ರಾಷ್ಟ್ರಿಯ ಹೆದ್ದಾರಿ 66ರ ಕಾಪು ಪೊಲಿಪು ಮಸೀದಿ ಬಳಿ ಸಂಭವಿಸಿದೆ.

    ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಖಾಸಗಿ ಎಕ್ಸ್‌ಪ್ರೆಸ್ ಬಸ್ ಓವರ್ ಟೆಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ ಎಂದು ತಿಳಿದು ಬಂದಿದೆ.
    ಬಸ್ಸಿನಲ್ಲಿದ್ದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ.

    ಅಪಘಾತಕ್ಕೆ ಬಸ್ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆ ಕಾರಣ ಎನ್ನಲಾಗಿದೆ.
    ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.