Category: Kundapura

  • ಕುಂದಾಪುರ ಬಸ್ ನಿಲ್ದಾಣ: ವ್ಯಕ್ತಿಯೊಬ್ಬರ ಮೃತ್ಯು, ಪ್ರಕರಣ ದಾಖಲು

    ಕುಂದಾಪುರ, ಮೇ 23, 2025: ಕಳೆದ ಮೂರು ವರ್ಷಗಳಿಂದ ಕುಂದಾಪುರದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು, ತಮ್ಮ ಪತ್ನಿಯೊಂದಿಗೆ ಕುಂದಾಪುರದ ಹೊಸ ಬಸ್ ನಿಲ್ದಾಣದಲ್ಲಿ ವಾಸವಾಗಿದ್ದರು. ಆದರೆ, ವಿಪರೀತ ಮದ್ಯಸೇವನೆಯಿಂದಾಗಿ ಕಳೆದ ಮೂರು ತಿಂಗಳಿಂದ ಆರೋಗ್ಯ ಸಮಸ್ಯೆಯಿಂದ ಕೆಲಸಕ್ಕೆ ಹೋಗದೇ, ಬಸ್ ನಿಲ್ದಾಣದಲ್ಲಿಯೇ ಮಲಗುತ್ತಿದ್ದರು.

    ದಿನಾಂಕ 22/05/2025ರ ಸಂಜೆ 6:00 ಗಂಟೆಯಿಂದ 23/05/2025ರ ಬೆಳಿಗ್ಗೆ 6:15 ಗಂಟೆಯ ನಡುವೆ, ಈ ವ್ಯಕ್ತಿ ಕುಂದಾಪುರದ ಹೊಸ ಬಸ್ ನಿಲ್ದಾಣದಲ್ಲಿ ಮಲಗಿರುವಾಗ ಅನಾರೋಗ್ಯ ಅಥವಾ ಇನ್ನಿತರ ಕಾರಣದಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 28/2025, ಕಲಂ 194 BNSS ರಂತೆ ಪ್ರಕರಣ ದಾಖಲಿಸಲಾಗಿದೆ.

  • ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಡಿಜಿ & ಐಜಿಪಿ ಪ್ರಶಂಸನಾ ಪದಕ ಪ್ರದಾನ

    ಉಡುಪಿ, ಮೇ 22, 2025: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 2024-25ನೇ ಸಾಲಿನ “DG & IGP Commendation Disc Award” ಪ್ರಶಂಸನಾ ಪದಕವನ್ನು ಉಡುಪಿ ಜಿಲ್ಲೆಯ ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಗುರುದಾಸ್ ಹಾಗೂ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರ್ಮ್ಡ್ ಹೆಡ್ ಕಾನ್ಸ್‌ಟೇಬಲ್ ಸಂತೋಷ್ ಅವರು ಮಾನ್ಯ ಡಿಜಿ & ಐಜಿಪಿ ಅವರಿಂದ ಸ್ವೀಕರಿಸಿದ್ದಾರೆ.

  • ಕುಂದಾಪುರ ಪೊಲೀಸ್ ಇನ್ಸ್‌ಪೆಕ್ಟರ್ ನಂಜಪ್ಪ ನಿಧನ

    ಕುಂದಾಪುರ, ಮೇ 22: ಕುಂದಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಂಜಪ್ಪ ಎನ್ (59) ಅವರು ಬುಧವಾರ, ಮೇ 21 ರಂದು ನಿಧನರಾದರು.

    ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮೂಲನಿವಾಸಿಯಾಗಿದ್ದ ನಂಜಪ್ಪ, ಕಳೆದ ವರ್ಷದ ಆಗಸ್ಟ್‌ನಿಂದ ಕುಂದಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರ, ಕರ್ತವ್ಯದಲ್ಲಿರುವಾಗ, ಅಧಿಕ ರಕ್ತದೊತ್ತಡದಿಂದ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಚಿಕಿತ್ಸೆಯ ನಂತರವೂ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ ಕಂಡುಬರಲಿಲ್ಲ, ಮತ್ತು ಬುಧವಾರ ರಾತ್ರಿ ಅವರು ನಿಧನರಾದರು.

    ನಂಜಪ್ಪ 2003 ರಲ್ಲಿ ಸಬ್-ಇನ್ಸ್‌ಪೆಕ್ಟರ್ ಆಗಿ ಪೊಲೀಸ್ ಇಲಾಖೆಗೆ ಸೇರಿದರು ಮತ್ತು ಶಿವಮೊಗ್ಗ, ದಾವಣಗೆರೆ, ಮತ್ತು ಹಾವೇರಿಯಂತಹ ವಿವಿಧ ಸ್ಥಳಗಳಲ್ಲಿ ಸೇವೆ ಸಲ್ಲಿಸಿದರು. ಇನ್ಸ್‌ಪೆಕ್ಟರ್ ಆಗಿ ಬಡ್ತಿ ಪಡೆದ ನಂತರ, ಕಾಡೂರು, ಭದ್ರಾವತಿ, ಮತ್ತು ಗಂಗೊಳ್ಳಿಯ ಕರಾವಳಿ ಭದ್ರತಾ ಪಡೆಯಂತಹ ಸ್ಥಳಗಳಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಆಗಸ್ಟ್ 2024 ರಲ್ಲಿ ಕುಂದಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡರು.

    ಜಿಲ್ಲಾ ಪೊಲೀಸ್ ಅಧೀಕ್ಷಕರು, ಹಿರಿಯ ಅಧಿಕಾರಿಗಳು, ಮತ್ತು ಸಿಬ್ಬಂದಿ ಇನ್ಸ್‌ಪೆಕ್ಟರ್ ನಂಜಪ್ಪ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

    ಕುಂದಾಪುರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಗುರುವಾರ, ಮೇ 22 ರಂದು ಬೆಳಿಗ್ಗೆ 10:15 ಕ್ಕೆ ಸಾರ್ವಜನಿಕರು ಇನ್ಸ್‌ಪೆಕ್ಟರ್ ನಂಜಪ್ಪ ಅವರಿಗೆ ಅಂತಿಮ ಗೌರವ ಸಲ್ಲಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

  • ಕುಂದಾಪುರ, ಕಾರ್ಕಳ: ಮದ್ಯಪಾನದ ಚಟದಿಂದ ಖಿನ್ನತೆಗೊಳಗಾದ ಇಬ್ಬರು ಆತ್ಮಹತ್ಯೆ

    ಕುಂದಾಪುರ/ಕಾರ್ಕಳ, ಮೇ 21, 2025: ಕುಂದಾಪುರ ಮತ್ತು ಕಾರ್ಕಳದಲ್ಲಿ ವಿಪರೀತ ಮದ್ಯಪಾನದ ಚಟದಿಂದ ಖಿನ್ನತೆಗೊಳಗಾದ ಇಬ್ಬರು ವ್ಯಕ್ತಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ದಿನಾಂಕ 19/05/2025 ರಂದು ರಾತ್ರಿಯಿಂದ 20/05/2025 ರ ಬೆಳಗ್ಗೆಯವರೆಗಿನ ಅವಧಿಯಲ್ಲಿ ನಡೆದಿವೆ.

    ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದಲ್ಲಿ, 59 ವರ್ಷದ ವ್ಯಕ್ತಿಯೊಬ್ಬರು, ವಿಪರೀತ ಮದ್ಯಪಾನದ ಚಟ ಹಾಗೂ ಬಿಪಿ ಖಾಯಿಲೆಯಿಂದ ಬಳಲುತ್ತಿದ್ದರು. ಖಿನ್ನತೆಗೊಳಗಾಗಿ, ರಾತ್ರಿ 10:00 ಗಂಟೆಯಿಂದ ಬೆಳಗ್ಗೆ 5:30 ಗಂಟೆಯ ನಡುವೆ, ಮನೆಯ ಬಳಿಯ ಬಾವಿಯ ರಾಟಿಯ ಪೈಪ್‌ಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 27/2025, ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಇದೇ ರೀತಿಯಾಗಿ, ಕಾರ್ಕಳದ ಹೊಸ್ಮಾರು ಗ್ರಾಮದಲ್ಲಿ, 37 ವರ್ಷದ ಇನ್ನೊಬ್ಬ ವ್ಯಕ್ತಿ, ವಿಪರೀತ ಮದ್ಯಪಾನದ ಅಭ್ಯಾಸವುಳ್ಳವರಾಗಿದ್ದರು. ರಾತ್ರಿ 10:00 ಗಂಟೆಯಿಂದ ಬೆಳಗ್ಗೆ 7:45 ಗಂಟೆಯ ನಡುವೆ, ಮನೆಯೊಳಗಿನ ಜಂತಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 28/2025, ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಎರಡೂ ಘಟನೆಗಳಲ್ಲಿ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

  • ಕೊಲ್ಲೂರು: ಕಾರು-ಮಿನಿ ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ, ಒಬ್ಬ ಸಾವು, ಇಬ್ಬರಿಗೆ ಗಾಯ

    ಕೊಲ್ಲೂರು, ಮೇ 21, 2025: ಕುಂದಾಪುರ ತಾಲೂಕಿನ ಇಡೂರು ಕುಂಜಾಡಿ ಗ್ರಾಮದ ಜನ್ನಲ್‌ ಎಂಬಲ್ಲಿ ದಿನಾಂಕ 19/05/2025 ರಂದು ಮಧ್ಯಾಹ್ನ 3:45 ಗಂಟೆಗೆ ಘೋರ ರಸ್ತೆ ಅಪಘಾತವೊಂದು ಸಂಭವಿಸಿದೆ. ಚಿತ್ತೂರು ಕಡೆಯಿಂದ ಕೊಲ್ಲೂರು ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ KA-20-N-2119ನೇ ಅಲ್ಟೋ ಕಾರನ್ನು ಚಲಾಯಿಸಿಕೊಂಡು ಬಂದ ಜೋಸ್‌ ಪಿಟಿ ಎಂಬುವವರು, ಜಡ್ಕಲ್‌ ಕಡೆಯಿಂದ ಚಿತ್ತೂರು ಕಡೆಗೆ KA-51-AE-7503ನೇ ಮಿನಿ ಗೂಡ್ಸ್ ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಶಬರೀಶ (29), ಚಿತ್ತೂರು ಗ್ರಾಮ, ಕುಂದಾಪುರ ಇವರಿಗೆ ಎದುರುಗಡೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

    ಈ ಡಿಕ್ಕಿಯ ಪರಿಣಾಮ ಶಬರೀಶ ಅವರ ತಲೆಗೆ ರಕ್ತಗಾಯವಾಗಿದ್ದು, ಕಾರಿನ ಚಾಲಕ ಜೋಸ್‌ ಪಿಟಿ ಹಾಗೂ ಕಾರಿನಲ್ಲಿದ್ದ ಮಹಿಳೆಗೂ ರಕ್ತಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಕುಂದಾಪುರದ ಆದರ್ಶ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯಲ್ಲಿ ಶಬರೀಶ ಅವರಿಗೆ ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲಿಸಿಕೊಳ್ಳಲಾಗಿದೆ. ಆದರೆ, ಕಾರಿನ ಚಾಲಕ ಜೋಸ್‌ ಪಿಟಿ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಗಿದೆ.

    ಈ ಘಟನೆಯ ಕುರಿತು ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 41/2025ರಂತೆ ಕಲಂ 281, 125(b), 106 BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

  • ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮುಂದುವರಿಕೆ – ನಮ್ಮ ನಾಡ ಒಕ್ಕೂಟ ಕುಂದಾಪುರ

    ಕುಂದಾಪುರ: ಕಳೆದ ಎರಡು ವರ್ಷಗಳಿಂದ ಝಕಾತ್ ಸಹಾಯದ ಮೂಲಕ ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲ ನೀಡುತ್ತಿರುವ ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ, ಈ ವರ್ಷವೂ ಅರ್ಹ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲು ನಿರ್ಧರಿಸಿದೆ. ಈ ಝಕಾತ್ ಹಣವನ್ನು ವಿದ್ಯಾರ್ಥಿಗಳ ಪೋಷಕರ ಉಪಸ್ಥಿತಿಯಲ್ಲಿ ವಿತರಿಸಲಾಗುವುದು ಎಂದು ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ತಂಡ ತಿಳಿಸಿದೆ.

    ಕಳೆದ ವರ್ಷ ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರದ ವತಿಯಿಂದ ಸರ್ಕಾರಿ ವಿದ್ಯಾರ್ಥಿವೇತನ, ವಿವಿಧ ಕಂಪನಿಗಳ ವಿದ್ಯಾರ್ಥಿವೇತನ ಹಾಗೂ ಕಮ್ಯೂನಿಟಿ ಸೆಂಟರ್‌ನಿಂದ ಸುಮಾರು 11 ಲಕ್ಷ ರೂಪಾಯಿಗಿಂತ ಹೆಚ್ಚಿನ ವಿದ್ಯಾರ್ಥಿವೇತನವನ್ನು ವಿತರಿಸಲಾಗಿತ್ತು. ಈ ಸಹಾಯವನ್ನು ಪ್ರೌಢಶಾಲೆ, ಪಿಯುಸಿ, ಪದವಿ ಮತ್ತು ಉನ್ನತ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ಪಡೆದುಕೊಂಡಿದ್ದರು.

    ಈ ವಿದ್ಯಾರ್ಥಿವೇತನ ಕಾರ್ಯಕ್ರಮವು ಶೈಕ್ಷಣಿಕವಾಗಿ ಸಾಧನೆ ಮಾಡಲು ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿಗೆ ಒಂದು ದೊಡ್ಡ ಬೆಂಬಲವಾಗಿದೆ. ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ ತನ್ನ ಸಾಮಾಜಿಕ ಕಾರ್ಯಗಳ ಮೂಲಕ ಮುಸ್ಲಿಂ ಸಮುದಾಯದ ಶೈಕ್ಷಣಿಕ ಉನ್ನತಿಗೆ ಸತತವಾಗಿ ಶ್ರಮಿಸುತ್ತಿದೆ.

    ವಿತರಣೆಯ ದಿನಾಂಕಗಳು ಮತ್ತು ಹೆಚ್ಚಿನ ಮಾಹಿತಿಯಂತಹ ಇನ್ನಷ್ಟು ವಿವರಗಳನ್ನು ಲಭ್ಯವಾದಂತೆ ನವೀಕರಿಸಲಾಗುವುದು.

  • ಕುಂದಾಪುರ : ಸರಕಾರಿ ಪದವಿ ಕಾಲೇಜಿನಲ್ಲಿ ಯುವನಿಧಿ ಕುರಿತು ಪ್ರಚಾರ ಹಾಗೂ ನೋಂದಣಿ ಕಾರ್ಯಕ್ರಮ.

    ಕುಂದಾಪುರ, ಮೇ 14, 2025: ರಂದು ಕಾಳಾವರ ವರದರಾಜ್ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕೋಟೇಶ್ವರ ಇಲ್ಲಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಉಡುಪಿ ಮತ್ತು ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ವತಿಯಿಂದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಯುವನಿಧಿಯ ಕುರಿತು ಪ್ರಚಾರ ಮತ್ತು ನೋಂದಣಿ ಅಭಿಯಾನವನ್ನು ಕೈಗೊಳ್ಳಲಾಯಿತು.

    ಉದ್ಯೋಗ ವಿನಿಮಯ ಕಛೇರಿಯ ಸಿಬ್ಬಂದಿ ದೀಕ್ಷಿತ್ ಅವರು ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆ ಪಡೆದುಕೊಳ್ಳುವ ಬಗೆ ಮತ್ತು ಮಾನದಂಡಗಳ ಕುರಿತು ಪೂರ್ಣ ಮಾಹಿತಿ ನೀಡಿದರು. ಪ್ರಾಶುಪಾಲರಾದ ರಾಮರಾಯ ಆಚಾರ್ಯ ಅವರು ಅಧ್ಯಕ್ಷತೆ ವಹಿಸಿದ್ದರು, ಈ ಸಂದರ್ಭ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷಯರಾದ ಹರಿಪ್ರಸಾದ್ ಶೆಟ್ಟಿ, ಸದಸ್ಯರಾದ ಝಾಹಿರ್ ನಾಖುದಾ ಗಂಗೊಳ್ಳಿ ಮತ್ತು ಕಾಲೇಜಿನ ಉಪನ್ಯಾಸಕರಾದ ಡಾ. ಶೇಖರ್ ಬಿ, ಕಾರ್ತಿಕ್ ಪೈ ಉಪಸ್ಥಿತರಿದ್ದರು.

    ಅಸಿಸ್ಟೆಂಟ್ ಪ್ರೊಫೆಸರ್ ರಂಜಿತ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಚೈತನ್ಯ ವಂದಿಸಿ, ರಶ್ಮಿ ಕಾರ್ಯಕ್ರಮ ನಿರೂಪಿಸಿದರು.

  • ಕುಂದಾಪುರದಲ್ಲಿ ವಲಸೆ ಕಾರ್ಮಿಕರಿಗೆ ವಸತಿ ಸಮಸ್ಯೆ: ಸರ್ಕಾರದಿಂದ ಕ್ರಮಕೈಗೊಳ್ಳಲು ಭರವಸೆ

    ಮುಖ್ಯಮಂತ್ರಿಗಳ ಕಚೇರಿಯಿಂದ ಮಾಧ್ಯಮ ಪ್ರಕಟಣೆ

    ಉಡುಪಿ ಜಿಲ್ಲೆಯ ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚು ಕಾರ್ಮಿಕರು ಮೈದಾನ, ಫುಟ್ಪಾತ್‌ ಹಾಗೂ ಫ್ಲೈ ಓವರ್‌ ಅಡಿಯಲ್ಲಿ ಆಶ್ರಯ ಪಡೆಯುತ್ತಿದ್ದು, ಕೂಡಲೇ ವಲಸೆ ಕಾರ್ಮಿಕರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ʼಎಕ್ಸ್‌ʼ ಬಳಕೆದಾರರೊಬ್ಬರು ಮನವಿ ಮಾಡಿರುತ್ತಾರೆ.

    ಇದನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದು ಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು. ‌ ಅದರಂತೆ, ಸದರಿ ವ್ಯಾಪ್ತಿಯ ಕಾರ್ಮಿಕರು ಸಾರ್ವಜನಿಕ ಪ್ರದೇಶದಲ್ಲಿ ವಾಸ್ತವ್ಯ ಹೂಡುವುದು, ಮಲಮೂತ್ರ ವಿಸರ್ಜಿಸುವುದು, ಮದ್ಯಪಾನ, ದೂಮಪಾನ, ಗುಟ್ಕಾ ಸೇವಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಈ ಬಗ್ಗೆ ಅರಿವು ಮೂಡಿಸಲಾಗಿರುತ್ತದೆ.

    ಕಾರ್ಮಿಕರಿಗೆ ಸುವ್ಯವಸ್ಥಿತವಾದ ತಾತ್ಕಾಲಿಕ ಶೆಡ್‌ಗಳನ್ನು ಆಯ್ಕೆ ಮಾಡಿ ಸ್ವಚ್ಛತೆ ಕಾಪಾಡುವಂತೆ ಈ ಹಿಂದೆಯೇ ಅನುಮತಿ ನೀಡಲಾಗಿದ್ದು, ಪ್ರಸ್ತುತ ಸ್ಥಳದಲ್ಲಿ ಯಾವುದೇ ಕಾರ್ಮಿಕರು ವಾಸವಿರುವುದಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸೂಕ್ತ ಕ್ರಮಕೈಗೊಳ್ಳಲಾಗಿದ್ದು, ಕಾರ್ಮಿಕರಿಗೆ ವಸತಿ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಲು ʼಟ್ರಾನ್ಸಿಟ್‌ ಅಕಾಮಡೇಶನ್‌ʼ ಕಟ್ಟಡಗಳನ್ನು ನಿರ್ಮಾಣ ಮಾಡುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಇಲಾಖೆಯ ಆಯುಕ್ತರರು ತಿಳಿಸಿದ್ದಾರೆ.

    ನೀವು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಲು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳ @osd_cmkarnataka ʼಎಕ್ಸ್‌ʼ ಖಾತೆಗೆ ಟ್ಯಾಗ್‌ ಮಾಡಿ.

  • ಕುಂದಾಪುರ: ವೃದ್ಧೆಯ ಮೇಲೆ ಗಂಡನಿಂದ ಹಲ್ಲೆ, ಜೀವ ಬೆದರಿಕೆ; ಪ್ರಕರಣ ದಾಖಲು

    ಕುಂದಾಪುರ, ಮೇ 17, 2025: ಕುಂದಾಪುರ ತಾಲೂಕಿನ ಗೋಪಾಡಿ ಗ್ರಾಮದ 76 ವರ್ಷದ ರವಿಕಲಾ ಅವರ ಮೇಲೆ ಅವರ ಗಂಡ ರಾಮ ಎಂಬಾತ ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಘಟನೆ ಮೇ 16, 2025 ರಂದು ಮಧ್ಯಾಹ್ನ 12:30 ಗಂಟೆ ಸುಮಾರಿಗೆ ನಡೆದಿದೆ.

    ಪಿರ್ಯಾದಿಯಾದ ರವಿಕಲಾ ಅವರ ಪ್ರಕಾರ, ರಾಮ ಎಂಬಾತ ಆಗಾಗ ಕೌಟುಂಬಿಕ ವಿಚಾರಗಳಲ್ಲಿ ಗಲಾಟೆ ಮಾಡುತ್ತಿದ್ದ. ಘಟನೆಯ ದಿನ ರವಿಕಲಾ ಅವರೊಂದಿಗೆ ಅವರ ಆರೈಕೆದಾರರಾದ ರೇಖಾ, ಪೂರ್ಣಿಮಾ, ಮಗಳು ರಜನಿ ಹಾಗೂ ಸೊಸೆ ಲಕ್ಷ್ಮೀ ಮನೆಯಲ್ಲಿದ್ದಾಗ, ರಾಮ ತನ್ನ ಮೊಮ್ಮಕ್ಕಳನ್ನು ಸರಿಯಾಗಿ ವಿಚಾರಿಸದಿರುವುದು ಮತ್ತು ಕೌಟುಂಬಿಕ ವಿಷಯಗಳನ್ನು ಗಲಾಟೆಗೆ ಕಾರಣವಾಗಿಸಿದ. ಈ ವೇಳೆ ರಾಮ, ರವಿಕಲಾ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕುರ್ಚಿಯಿಂದ ಅವರ ತಲೆಗೆ ಎರಡು-ಮೂರು ಬಾರಿ ಹೊಡೆದಿದ್ದಾನೆ. ಜೊತೆಗೆ ಕೋಲಿನಿಂದ ಬಲಗೈಗೆ ಹೊಡೆದು ಜೀವ ಬೆದರಿಕೆ ಹಾಕಿದ್ದಾನೆ.

    ಈ ಹಲ್ಲೆಯಿಂದ ರವಿಕಲಾ ಅವರಿಗೆ ತೀವ್ರ ನೋವುಂಟಾಗಿದ್ದು, ಅವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಈ ಘಟನೆ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 60/2025ರಡಿ ಕಲಂ 118(1), 351(2), 352, 85 BNS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಕುಂದಾಪುರದ ಜಪ್ತಿ ಗ್ರಾಮದಲ್ಲಿ ರಸ್ತೆ ಮೇಲೆ ಪಾಕಿಸ್ತಾನಿ ಧ್ವಜ; ಪ್ರಕರಣ ದಾಖಲು

    ಕುಂದಾಪುರ, ಮೇ 16: ಜಪ್ತಿ ಗ್ರಾಮದ ಸಾರ್ವಜನಿಕ ರಸ್ತೆಯ ಮೇಲೆ ಪಾಕಿಸ್ತಾನ ರಾಷ್ಟ್ರದ ಧ್ವಜದ ಪ್ಲಾಸ್ಟಿಕ್ ಬ್ಯಾನರ್‌ಗಳನ್ನು ಹಾಸಿರುವ ಘಟನೆ ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಿರ್ಯಾದಿದಾರರಾದ ಸಚಿನ್ (29), ಜಪ್ತಿ ಗ್ರಾಮದ ನಿವಾಸಿ, 2025ರ ಮೇ 16ರಂದು ಬೆಳಿಗ್ಗೆ 8 ಗಂಟೆಗೆ ಕಾಳಾವಾರದಿಂದ ಜಪ್ತಿ ಕಡೆಗೆ ತನ್ನ ಮೋಟಾರು ಸೈಕಲಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಅವರು ದಬ್ಬೆ ಕಟ್ಟೆ ಎಂಬ ಸ್ಥಳ ತಲುಪಿದಾಗ, ಸಾರ್ವಜನಿಕ ರಸ್ತೆಯ ಮೇಲೆ ಪಾಕಿಸ್ತಾನದ ಧ್ವಜದ ಪ್ಲಾಸ್ಟಿಕ್ ಬ್ಯಾನರ್ ಒಂದನ್ನು ರಸ್ತೆ ಮೇಲೆ ಹಾಸಿರುವುದನ್ನು ಗಮನಿಸಿದರು.

    ಸಚಿನ್ ಅವರು ತಕ್ಷಣವೇ ತಮ್ಮ ವಾಹನವನ್ನು ರಸ್ತೆಯ ಬದಿಗೆ ನಿಲ್ಲಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಅಲ್ಲಿಂದ ಸುಮಾರು 300 ಮೀಟರ್ ದೂರದಲ್ಲಿಯೂ ಇದೇ ರೀತಿಯ ಮತ್ತೊಂದು ಬ್ಯಾನರ್ ರಸ್ತೆ ಮಧ್ಯೆ ಬಿದ್ದಿರುವುದು ಕಂಡುಬಂದಿದ್ದು, ಇದು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ ಎಂಬುದು ಸ್ಪಷ್ಟವಾಗಿದ್ದು.

    ಯಾರೋ ಕಿಡಿಗೇಡಿಗಳು ಸಾರ್ವಜನಿಕ ರಸ್ತೆಯ ಮೇಲೆ ದ್ವಜದ ಪ್ಲಾಸ್ಟಿಕ್ ಬ್ಯಾನರ್ ನ್ನು ಹಾಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿರುವುದು ಕಂಡು ಬಂದಿದ್ದು.

    ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 33/2025 ಅಡಿಯಲ್ಲಿ BNS ಸೆಕ್ಷನ್ 285 ಮತ್ತು 292 ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ಇದರ ಹಿಂದಿರುವ ದುರುದ್ದೇಶ ಅಥವಾ ಸಂಚುಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.

    ಪ್ರಾತಿನಿಧ್ಯ ಚಿತ್ರ