ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯಲ್ಲಿ ತಂದೆ ಮತ್ತು ಮಗ ಮೃತಪಟ್ಟಿದ್ದು, ತಾಯಿಯ ಸ್ಥಿತಿ ಗಂಭೀರವಾಗಿದೆ.
ಸಾಲಬಾಧೆಯಿಂದ ಕಂಗೆಟ್ಟಿದ್ದ ಕುಟುಂಬ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದೆ. ಮೃತರನ್ನು ಕಂಚುಗಾರುಬೆಟ್ಟು ನಿವಾಸಿಗಳಾದ ಮಾಧವ ದೇವಾಡಿಗ (56) ಮತ್ತು ಅವರ ಮಗ ಪ್ರಸಾದ್ ದೇವಾಡಿಗ (22) ಎಂದು ಗುರುತಿಸಲಾಗಿದೆ. ಗಂಭೀರವಾಗಿರುವ ತಾರಾ ದೇವಾಡಿಗ ಅವರನ್ನು ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಂದೆ ಮತ್ತು ಮಗ ಬಾವಿಗೆ ಹಾರಿರುವುದನ್ನು ತಿಳಿದ ತಾಯಿ ತಾರಾ ದೇವಾಡಿಗ ಕೂಡ ಬಾವಿಗೆ ಧುಮುಕಿದ್ದಾರೆ. ಅವರ ಕೂಗು ಕೇಳಿ ಸ್ಥಳೀಯರಾದ ಸಂತೋಷ್ ಶೆಟ್ಟಿ, ಶ್ರೀನಾಥ್ ಶೆಟ್ಟಿ ಸೇರಿದಂತೆ ಇತರರು ರಕ್ಷಣೆಗೆ ಧಾವಿಸಿದ್ದಾರೆ. ಮನೆಯಲ್ಲಿ ದೊರೆತ ಡೆತ್ ನೋಟ್‌ನಲ್ಲಿ, ಸಾಲಬಾಧೆಯಿಂದ ಬಡ ಕುಟುಂಬ ಮಾನ-ಮರ್ಯಾದೆಗಾಗಿ ಆತ್ಮಹತ್ಯೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ. ಮಾಧವ ದೇವಾಡಿಗ ಅವರು ಅಂಕದಕಟ್ಟೆಯ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ. ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಘವೇಂದ್ರ ನೇತೃತ್ವದಲ್ಲಿ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.