ಕುಂದಾಪುರ, ಮೇ 5: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಹೋದ ಮೊಬೈಲ್ ಫೋನ್ ಒಂದನ್ನು ಕೇಂದ್ರ ಸರ್ಕಾರದ ಸೆಂಟ್ರಲ್ ಇಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್ (CEIR) ಪೋರ್ಟಲ್ ಬಳಸಿ ಪತ್ತೆಹಚ್ಚಿರುವ ಉಡುಪಿ ಪೊಲೀಸರು, ಫೋನ್‌ನ ಮಾಲೀಕರಿಗೆ ಯಶಸ್ವಿಯಾಗಿ ಹಿಂದಿರುಗಿಸಿದ್ದಾರೆ.
ಏನಿದು ಸಿಇಐಆರ್? ಹೇಗೆ ಕೆಲಸ ಮಾಡುತ್ತದೆ?
ಸಿಇಐಆರ್ ದೂರು ನೀಡುವ ಕಾರ್ಯವಿಧಾನ ಕದ್ದ ಸಾಧನಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಅವುಗಳನ್ನು ಬಳಸಲು ಪ್ರಯತ್ನಿಸಿದಾಗ ಪೊಲೀಸರಿಗೆ ಎಚ್ಚರಿಕೆ ನೀಡುತ್ತದೆ. CEIR ಪೋರ್ಟಲ್‌ನಲ್ಲಿ ಸಾಧನ ಮತ್ತು ಅದರ ಮಾಲೀಕರ ಎಲ್ಲಾ ವಿವರಗಳನ್ನು ಒದಗಿಸಿದ ನಂತರ, ಮೊಬೈಲ್ ಸ್ವಯಂಚಾಲಿತವಾಗಿ ನಿರ್ಬಂಧಿಸಲ್ಪಡುತ್ತದೆ. ಹೊಸ ಸಿಮ್ ಕಾರ್ಡ್ ಅನ್ನು ಸೇರಿಸುವ ಮೂಲಕ ಸಾಧನವನ್ನು ಬಳಸುವ ಯಾವುದೇ ಪ್ರಯತ್ನವು ಹೊಸ ಬಳಕೆದಾರರ ಸಂಖ್ಯೆ ಮತ್ತು ಸ್ಥಳ ಮತ್ತು ಇತರ ವಿವರಗಳ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ.
ದೂರು ಬಂದ ಬಳಿಕ ಮೊದಲು ಪೊಲೀಸರು ಆ ಸಂಖ್ಯೆಗೆ ಮರಳಿ ಕರೆ ಮಾಡುತ್ತಾರೆ. ಪ್ರತಿಕ್ರಿಯೆ ನೀಡದಿದ್ದಲ್ಲಿ ಮೊಬೈಲ್ ಫೋನ್ ಸಕ್ರಿಯಗೊಳಿಸುತ್ತಾರೆ. ಇದು ಕದ್ದ ಅಥವಾ ಕಳೆದು ಹೋದ ಫೋನ್ ಎಂದು ತಿಳಿಸುತ್ತಾರೆ. ಮತ್ತು ಅದನ್ನು ಹಿಂತಿರುಗಿಸಬೇಕು ಇಲ್ಲಾ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡುತ್ತಾರೆ. ಇದು ರಿಸೀವರ್ ಬಳಸಿದ ಸಿಮ್ ಕಾರ್ಡ್ ಎಲ್ಲಾ ವಿವರಗಳನ್ನು ಒದಗಿಸುತ್ತದೆ ಮತ್ತು ಪೊಲೀಸರು ಫೋನ್ ಸಿಕ್ಕ ವ್ಯಕ್ತಿ ಜೊತೆ ಸಂಪರ್ಕದಲ್ಲಿರಲು ಸುಲಭವಾಗುತ್ತದೆ. ಇಂತಹ ಪ್ರಕರಣದಲ್ಲಿ ಖುದ್ದಾಗಿ ಬಂದು ಫೋನ್ ನೀಡುವುದಿಲ್ಲ ಬದಲಿಗೆ ಮೊಬೈಲ್‌ಗಳನ್ನು ಕೊರಿಯರ್‌ಗಳ ಮೂಲಕ ಪೊಲೀಸರಿಗೆ ಹಿಂತಿರುಗಿಸುತ್ತಾರೆ.
ಮೊಬೈಲ್ ಕಳೆದುಹೋದವರು ದೂರು ದಾಖಲಿಸುವುದು ಹೇಗೆ?
ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್‌ಗಳ ಬಗ್ಗೆ ದೂರು ದಾಖಲಿಸಲು ನಾಗರಿಕರು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು:
- CEIR ಪೋರ್ಟಲ್‌ಗೆ ಭೇಟಿ: www.ceir.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
- ದೂರು ದಾಖಲಾತಿ: “Block/Lost Mobile” ಆಯ್ಕೆಯನ್ನು ಆರಿಸಿ, ಅಗತ್ಯವಿರುವ ಮಾಹಿತಿಯಾದ ಫೋನ್‌ನ IMEI ಸಂಖ್ಯೆ, ಮೊಬೈಲ್ ಸಂಖ್ಯೆ, ಕಳೆದ ಸ್ಥಳದ ವಿವರಗಳು ಮತ್ತು ಆಧಾರ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಿ.
- ಕರ್ನಾಟಕ ರಾಜ್ಯ ಪೊಲೀಸ್ (KSP) ಆ್ಯಪ್: ಕರ್ನಾಟಕದ ನಾಗರಿಕರು KSP ಆ್ಯಪ್‌ನಲ್ಲಿ “e-Lost” ವಿಭಾಗದ ಮೂಲಕ ದೂರು ದಾಖಲಿಸಬಹುದು. ದೂರು ದಾಖಲಾದ ನಂತರ, CEIR ಪೋರ್ಟಲ್ ಮೂಲಕ ಫೋನ್‌ನ IMEI ಸಂಖ್ಯೆಯನ್ನು ತಡೆಯಲಾಗುತ್ತದೆ ಮತ್ತು ಟ್ರ್ಯಾಕಿಂಗ್ ಪ್ರಕ್ರಿಯೆ ಆರಂಭವಾಗುತ್ತದೆ.
- ಸ್ಥಳೀಯ ಪೊಲೀಸ್ ಠಾಣೆ: ದೂರನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಿಸಿ, ಇದರಿಂದ ಪೊಲೀಸರು CEIR ವ್ಯವಸ್ಥೆಯ ಮೂಲಕ ಫೋನ್ ಪತ್ತೆಗೆ ಕ್ರಮ ಕೈಗೊಳ್ಳಬಹುದು.
ಈ ಪೋರ್ಟಲ್ ಬಳಸಲು ಸಿಮ್ ಕರ್ನಾಟಕದಲ್ಲಿ ನೋಂದಣಿಯಾಗಿರಬೇಕು
ಈ ವ್ಯವಸ್ಥೆ ಬಳಸಿಕೊಳ್ಳಲು ಮೊಬೈಲ್ ಮತ್ತು ಸಿಮ್ ಅನ್ನು ಕರ್ನಾಟಕದಲ್ಲಿ ನೋಂದಾಯಿಸಿಕೊಳ್ಳಬೇಕು. ಇದರಿಂದ ಕಳೆದು ಹೋದ ಮೊಬೈಲ್ ಅನ್ನು ದೇಶದ ಯಾವುದೇ ಭಾಗಕ್ಕೆ ತೆಗೆದುಕೊಂಡ ಹೋದರೂ ಪತ್ತೆಹಚ್ಚಬಹುದು. ಹಿಂದೆ ರಾಜ್ಯದಲ್ಲಿ ಕಳೆದು ಹೋದ ಮೊಬೈಲ್ಗಗಳನ್ನು ಪತ್ತೆಹಚ್ಚುವುದು ಕಷ್ಟಕರವಾಗಿತ್ತು. ಈಗ ಅದು ಸುಲಭವಾದ ಮಾರ್ಗವಾಗಿದೆ ಎಂದು ಐಪಿಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.