Category: Kundapura

  • ಕುಂದಾಪುರದಲ್ಲಿ ಡ್ರಗ್ಸ್ ದಂಧೆ : ಇಬ್ಬರ ಬಂಧನ

    ಕುಂದಾಪುರ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ದಂಧೇ ನಡೆಯುತ್ತಿರುವುದು ಬಹಿರಂಗಗೊಂಡಿದೆ. ಎಂಡಿಎಂಎ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದು ಲಕ್ಷಾಂತರ ಮೌಲ್ಯದ ಡ್ರಗ್ಸ್ ಹಾಗೂ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮುದಾಸ್ಸಿರ್ (23) ಹಾಗೂ ಉಡುಪಿ ಜಿಲ್ಲೆಯ ಉದ್ಯಾವರ, ಬೋಳಾರಗುಡ್ಡೆಯ ಅಡೆನ್ ಲೋಬೋ (18) ಎಂದು ಗುರುತಿಸಲಾಗಿದೆ.

    ಜೂನ್ 4ರ ಬುಧವಾರ ಸಂಜೆ ಕುಂದಾಪುರ ಕಸಬಾ ಗ್ರಾಮದ ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಇಬ್ಬರು ವ್ಯಕ್ತಿಗಳು ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಕುಂದಾಪುರ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದಾಗ ಆರೋಪಿಗಳಾದ ಮುದಾಸ್ಸಿರ್ ಹಾಗೂ ಆಡೆನ್ ಲೋಬೋ ಇಬ್ಬರು ಗಿರಾಕಿಗಳಿಗಾಗಿ ಕಾಯುತ್ತಿದ್ದರು. ಪೊಲೀಸರನ್ನು ನೋಡೊದ ಆರೋಪಿಗಳನ್ನು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರನ್ನು ಬಂಧಿಸಲಾಯಿತು. ಬಳಿಕ ವಿಚಾರಿಸಿದಾಗ ಎಂಡಿಎಂಎ ಎಂಬ ಡ್ರಗ್ಸ್ ಮಾರಾಟ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.

    ಬಂಧಿತ ಆರೋಪಿಗಳಿಂದ ಅಂದಾಜು ಎರಡು ಲಕ್ಷದ ನಲವತ್ತೊಂಭತ್ತು ಸಾವಿರದ ನಾನೂರ ನಲವತ್ತೊಂಭತ್ತು ರೂಪಾಯಿ ಮೌಲ್ಯದ 124.72 ಗ್ರಾಂ ಎಂಡಿಎಂಎ, ಪಿ. ಒರಾಕಲ್ ಎಂಬ ಹೆಸರಿನ ಪ್ಲಾಸ್ಟೀಕ್ ಬಾಕ್ಸ್, ಒಂಭತ್ತು ಇನ್ಸುಲಿನ್ ಸಿರಿಂಜ್, ENER-MECH ಎಂಬ ಕಪ್ಪು ಬ್ಯಾಗ್, Fresh ಎಂಬ ಪ್ಲಾಸ್ಟೀಕ್ ಬಾಕ್ಸ್, 2 ವೇಯಿಂಗ್ ಮೇಶಿನ್, 20 ಸಣ್ಣ ಸಣ್ಣ ಸ್ಟೀಲ್ ಡಬ್ಬ ಮತ್ತು 2 ಸ್ಟೀಲ್ ಚಮಚ ಇರುವ ಒಂದು ಪ್ಲಾಸ್ಟೀಕ್ ಬಾಕ್ಸ್, 36 ಪ್ಲಾಸ್ಟೀಕ್ ಜಿಪ್ ಲಾಕ್ ಕವರ್, ಒಂದು Allen Solly Exclusive ಮೆಟಲ್ ಬಾಕ್ಸ್, 4540/ ರೂ ನಗದು, 1 ಡ್ರಾಗನ್ ಚೂರಿ, 1 OPPO ಮೊಬೈಲ್, 2 ಸ್ಯಾಮ್ಸಂಗ್ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

  • ಕುಂದಾಪುರ ಶಾಸ್ತ್ರೀ ಸರ್ಕಲ್‌ನಲ್ಲಿ ಗಲಾಟೆ: ಮೂವರು ಆರೋಪಿತರ ವಿರುದ್ಧ ಪ್ರಕರಣ ದಾಖಲು

    ಕುಂದಾಪುರ, ಜೂನ್ 4, 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್ 2025 ಗೆಲುವಿನ ಸಂಭ್ರಮಾಚರಣೆಯ ಬಳಿಕ ಕುಂದಾಪುರದ ಶಾಸ್ತ್ರೀ ಸರ್ಕಲ್‌ನಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಸುಶಾಂತ್, ಕಾರ್ತಿಕ್ ಮತ್ತು ರಜತ್ ಸೇರಿದಂತೆ ಕೆಲವು ಯುವಕರು ಗಲಾಟೆಯಲ್ಲಿ ಭಾಗಿಯಾಗಿದ್ದಾರೆ ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದಿನಾಂಕ ಜೂನ್ 3, 2025 ರಂದು ರಾತ್ರಿ 11:30 ಗಂಟೆಗೆ, ಕುಂದಾಪುರ ಪೊಲೀಸ್ ಉಪನಿರೀಕ್ಷಕರಾದ ನಂಜಾ ನಾಯ್ಕ ಅವರು ಇಲಾಖಾ ಸಿಬ್ಬಂದಿಯೊಂದಿಗೆ ಠಾಣಾ ಸರಹದ್ದಿನಲ್ಲಿ ಗಸ್ತು ತಿರುಗುತ್ತಿದ್ದರು. ರಾತ್ರಿ 11:45 ಗಂಟೆಗೆ ಶಾಸ್ತ್ರೀ ಪಾರ್ಕ್‌ಗೆ ತಲುಪಿದಾಗ, ಆರ್‌ಸಿಬಿ ಗೆಲುವಿನ ಸಂಭ್ರಮದಲ್ಲಿ ಜನರು ಶಾಸ್ತ್ರೀ ಸರ್ಕಲ್‌ನಲ್ಲಿ ಜಮಾಯಿಸಿ ಸಂಭ್ರಮಾಚರಣೆ ನಡೆಸುತ್ತಿದ್ದರು. ಕೆಲವು ಸಮಯದ ನಂತರ ಜನರು ಚದುರಿಕೊಂಡು ತೆರಳಿದ್ದರು.

    ಆದರೆ, ರಾತ್ರಿ 12:15 ಗಂಟೆಯ ಸಮಯದಲ್ಲಿ, ಶಾಸ್ತ್ರೀ ಸರ್ಕಲ್‌ನ ಆಟೋ ನಿಲ್ದಾಣದ ಬಳಿ ಕೆಲವು ಯುವಕರು ಸಾರ್ವಜನಿಕ ಸ್ಥಳದಲ್ಲಿ ಒಂದು ಮಹೇಂದ್ರ ಎಸ್‌.ಯು.ವಿ ವಾಹನದ ಮೇಲೆ ನಿಂತುಕೊಂಡು, ವಾಹನದ ಸುತ್ತ ಗುಂಪುಗೂಡಿದ್ದರು. ಈ ಸಂದರ್ಭದಲ್ಲಿ, ರಾತ್ರಿ ಗಸ್ತಿನ ಬೀಟ್ ಸಿಬ್ಬಂದಿ, ಹೋಮ್ ಗಾರ್ಡ್‌ಗಳು ಮತ್ತು ತುರ್ತು ಸೇವಾ ವಾಹನದ ಸಿಬ್ಬಂದಿಯವರು ಸ್ಥಳಕ್ಕೆ ಆಗಮಿಸಿದರು. ಆಗ, ನಾಲ್ಕೈದು ಯುವಕರು ಪರಸ್ಪರ ಕೈಕಾಲು ದೂಡಾಡಿಕೊಂಡು, ಕೂಗಾಡುತ್ತಾ ಸ್ಥಳದಲ್ಲಿ ಅಶಾಂತಿ ಉಂಟುಮಾಡುತ್ತಿರುವುದು ಕಂಡುಬಂದಿತು.

    ಪಿರ್ಯಾದಿದಾರರಾದ ನಂಜಾ ನಾಯ್ಕ ಅವರು ಸಿಬ್ಬಂದಿಯೊಂದಿಗೆ ಗಲಾಟೆಯ ಸ್ಥಳಕ್ಕೆ ತೆರಳಿದಾಗ, ಆರೋಪಿತರು ತಕ್ಷಣವೇ ವಾಹನದಲ್ಲಿ ಚದುರಿ ಓಡಿಹೋಗಿದ್ದಾರೆ. ತನಿಖೆಯಿಂದ ಗಲಾಟೆಯಲ್ಲಿ ಭಾಗಿಯಾಗಿದ್ದವರು ಕುಂದಾಪುರದ ಸುಶಾಂತ್, ಕಾರ್ತಿಕ್, ರಜತ್ ಮತ್ತು ಇತರರೆಂದು ಗುರುತಿಸಲಾಗಿದೆ. ಈ ಆರೋಪಿತರು ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿ, ಶಾಂತಿಗೆ ಭಂಗ ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

    ಈ ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2025, ಕಲಂ 194 (2) BNS ರಂತೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿತರ ಹುಡುಕಾಟವನ್ನು ತೀವ್ರಗೊಳಿಸಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.

  • ಕುಂದಾಪುರ: ಉದ್ಯೋಗ ವೀಸಾದ ಹೆಸರಿನಲ್ಲಿ 16 ಲಕ್ಷ ರೂ. ವಂಚನೆ

    ಕುಂದಾಪುರ, ಜೂನ್ 03, 2025: ಯುಕೆಯಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವ ಭರವಸೆ ನೀಡಿ, 16 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಿರ್ಯಾದಿದಾರರಾದ ಸಿಸಿಲಿ, ಇವರ ಮಗ ಸುನಿಲ್, ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ UK-IN-REGAL ACADEMY ಎಂಬ ಸಂಸ್ಥೆಯ ಫೇಸ್‌ಬುಕ್ ಜಾಹೀರಾತು ನೋಡಿ, ಯುಕೆಯಲ್ಲಿ ಉದ್ಯೋಗಕ್ಕಾಗಿ ವೀಸಾ ಪಡೆಯಲು ಸಂಪರ್ಕಿಸಿದ್ದರು. ಸಂಸ್ಥೆಯು 90 ದಿನಗಳಲ್ಲಿ ವೀಸಾ ಕೊಡಿಸುವ ಭರವಸೆ ನೀಡಿ, 16 ಲಕ್ಷ ರೂಪಾಯಿ ಪಾವತಿಸುವಂತೆ ತಿಳಿಸಿತ್ತು.

    ಸುನಿಲ್‌ ಅವರು ಕೊಡಿಯಾಲ್‌ಬೈಲ್‌ನ ಕಚೇರಿಗೆ ಭೇಟಿ ನೀಡಿದಾಗ, ಆರೋಪಿ ಸೂರಜ್ ಜೋಸೆಫ್‌, 2 ಲಕ್ಷ ರೂಪಾಯಿ ನಗದನ್ನು ಮುಂಗಡವಾಗಿ ಪಡೆದು ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ. ನಂತರ, ಉಳಿದ 16 ಲಕ್ಷ ರೂಪಾಯಿಗಳನ್ನು ಕೂಡಲೇ ಪಾವತಿಸುವಂತೆ ಒತ್ತಾಯಿಸಿ, ಪದೇ ಪದೇ ಫೋನ್‌ ಕರೆ ಮಾಡಿ, ಪಾವತಿಸದಿದ್ದರೆ ವೀಸಾ ರದ್ದಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

    ದಿನಾಂಕ 27-10-2023 ರಂದು ಪಿರ್ಯಾದಿದಾರರ ಮಗಳ ಬ್ಯಾಂಕ್ ಖಾತೆಯ ಮೂಲಕ ಟೌನ್ ಕೋಆಪರೇಟಿವ್ ಬ್ಯಾಂಕ್‌, ಉಡುಪಿ ಶಾಖೆಯಿಂದ 3 ಲಕ್ಷ ರೂಪಾಯಿಯನ್ನು ಸಂಸ್ಥೆಯ ಕಣ್ಣೂರು ಫೆಡರಲ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿತ್ತು. ಇದೇ ರೀತಿ, 01-12-2023 ರಂದು ಕುಂದಾಪುರ ಕರ್ನಾಟಕ ಬ್ಯಾಂಕ್ ಶಾಖೆಯಿಂದ 13 ಲಕ್ಷ ರೂಪಾಯಿಯನ್ನು ಸಂಸ್ಥೆಯ ಆಕ್ಸಿಸ್ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು.

    ಆದರೆ, ಆರೋಪಿಯು ವೀಸಾ ಕೊಡಿಸದೇ, ಸುನಿಲ್‌ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ದಿನಾಂಕ 20-03-2024 ರಂದು ಸುನಿಲ್‌ ಮಂಗಳೂರಿನ ಕಚೇರಿಗೆ ಭೇಟಿ ನೀಡಿದಾಗ, ಆರೋಪಿ ಸೂರಜ್ ಜೋಸೆಫ್‌, 3 ತಿಂಗಳೊಳಗೆ ವೀಸಾ ಕೊಡಿಸುವುದಾಗಿ ಅಥವಾ 6 ತಿಂಗಳೊಳಗೆ ಹಣ ವಾಪಸ್‌ ಮಾಡುವುದಾಗಿ ಒಪ್ಪಂದದಲ್ಲಿ ತನ್ನ ಸಹಿ ಮತ್ತು ಕಚೇರಿಯ ಶೀಲಿನೊಂದಿಗೆ ಲಿಖಿತ ಭರವಸೆ ನೀಡಿದ್ದಾನೆ.

    ಆದಾಗ್ಯೂ, 6 ತಿಂಗಳು ಕಳೆದರೂ ಹಣ ವಾಪಸ್‌ ಮಾಡದೇ ಇದ್ದಾಗ, ಸುನಿಲ್‌ ಪುನಃ ಕಚೇರಿಗೆ ಭೇಟಿ ನೀಡಿದಾಗ, ಆರೋಪಿಯು 16 ಲಕ್ಷ ರೂಪಾಯಿಯ ಚೆಕ್‌ (ದಿನಾಂಕ 03-10-2024) ನೀಡಿದ್ದಾನೆ. ಆದರೆ, 16-12-2024 ರಂದು ಚೆಕ್‌ ಕಲೆಕ್ಷನ್‌ಗೆ ಹಾಕಿದಾಗ “Funds Insufficient” ಎಂದು ಹಿಂತಿರುಗಿದೆ.

    ಆರೋಪಿ ಸೂರಜ್ ಜೋಸೆಫ್‌, ವೀಸಾ ಕೊಡಿಸುವ ಭರವಸೆಯೊಂದಿಗೆ ನಗದು ಮತ್ತು ಬ್ಯಾಂಕ್ ವರ್ಗಾವಣೆ ಮೂಲಕ 16 ಲಕ್ಷ ರೂಪಾಯಿಯನ್ನು ಪಡೆದು, ವೀಸಾ ಕೊಡಿಸದೇ ಮತ್ತು ಹಣ ವಾಪಸ್‌ ಮಾಡದೇ ವಂಚಿಸಿರುವುದಾಗಿ ಪಿರ್ಯಾದಿದಾರರು ಆರೋಪಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ Zero FIR No. 01/2025, ಕಲಂ: 318(4), 316(2) BNS ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಚಾಲನೆಯಲ್ಲಿದೆ.

  • ತೋಟಗಾರಿಕೆ ಇಲಾಖೆಯ ಯೋಜನೆಯಡಿ ಸಹಾಯಧನ : ಅರ್ಜಿ ಆಹ್ವಾನ

    ಉಡುಪಿ, ಜೂನ್ 02 : ತೋಟಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕುಂದಾಪುರ ತಾಲೂಕಿನಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಗಳಡಿ ಸಹಾಯಧನ ಸೌಲಭ್ಯ ಲಭ್ಯವಿದ್ದು, ಆಸಕ್ತ ರೈತರುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಪ್ರಸಕ್ತ ಸಾಲಿನ ವಿವಿಧ ಯೋಜನೆಗಳಡಿ ರೈತರಿಗೆ ಕಾಳುಮೆಣಸು, ಅನಾನಸ್ಸು, ಅಂಗಾಂಶಬಾಳೆ, ಅಪ್ರಧಾನ ಹಣ್ಣುಗಳಾದ ರಾಂಬೂಟಾನ್, ಮ್ಯಾಂಗೋಸ್ಟೀನ್ ಮತ್ತು ಡ್ರಾ್ಯಗನ್ ಫ್ರೂಟ್ ತೋಟಗಳ ಸ್ಥಾಪನೆಗೆ ಶೇ. 40 ರ ಸಹಾಯಧನ, ನೀರು ಸಂಗ್ರಹಣ ಘಟಕ ನಿರ್ಮಾಣಕ್ಕೆ, ಗರಿಷ್ಠ 0.75 ಲಕ್ಷ ರೂ.ಗಳ ಸಹಾಯಧನ, ವಿವಿಧ ತೋಟಗಾರಿಕೆ ಬೆಳೆಗಳಿಗೆ ಹಾನಿಯುಂಟು ಮಾಡುವ ರೋಗ/ಕೀಟಗಳ ನಿಯಂತ್ರಣಕ್ಕಾಗಿ ಸಸ್ಯ ಸಂರಕ್ಷಣಾ ಔಷಧಿಗಳಿಗೆ ಪ್ರತಿ ಹೆಕ್ಟೇರಿಗೆ 1,500 ಹಾಗೂ ಅಡಿಕೆ ತೋಟ ಹೊಂದಿರುವ ರೈತರಿಗೆ ಅಡಿಕೆ ಸಂರಕ್ಷಣೆ/ ಒಣಗಿಸಲು ಸೋಲಾರ್ ಶೀಟ್ ಖರೀದಿಗೆ ಶೇ.40 ರ ಸಹಾಯಧನ ಲಭ್ಯವಿದೆ.

    ತೋಟಗಾರಿಕೆ ಬೆಳೆಗಳ ಪ್ರಾಥಮಿಕ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಶೇ.40 ರ ದರದಲ್ಲಿ (ಗರಿಷ್ಠ 12.25 ಲಕ್ಷಗಳವರೆಗೆ), ಪ್ಯಾಕ್ ಹೌಸ್ಗಳ ನಿರ್ಮಾಣಕ್ಕೆ ಗರಿಷ್ಠ 2.40 ಲಕ್ಷಗಳವರೆಗೆ ಶೇ.50 ರ ವರೆಗೆ ಹಾಗೂ ರೈತರ ಯಾಂತ್ರೀಕರಣ ಅವಶ್ಯಕತೆಗೆ 20 hಠಿ ಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್ ಖರೀದಿಗೆ ರೂ. 1.6 ರಿಂದ 2.45 ಲಕ್ಷ ರೂ. ವರೆಗೆ ಸಹಾಯಧನ ಲಭ್ಯವಿದೆ.

    ಕೃಷಿ ಯಾಂತ್ರೀಕರಣ ಉಪಅಭಿಯಾನ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗಳಡಿ ತೋಟಗಾರಿಕೆ ಯಾಂತ್ರಿಕರಣ ಕಾರ್ಯಕ್ರಮದಡಿ ಅನುಮೋದಿತ ವಿವಿಧ ಯಂತ್ರೋಪಕರಣಗಳಿಗೆ ಶೇ. 40/50 ರ ಸಹಾಯಧನ ಹಾಗೂ ದೊಡ್ಡ ಗಾತ್ರದ ನೀರು ಸಂಗ್ರಹಣಾ ಘಟಕ, ಪ್ಯಾಕಿಂಗ್ ಮತ್ತು ಸಂಗ್ರಹಣಾ ಘಟಕಗಳ ನಿರ್ಮಾಣಕ್ಕೆ ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರ ಮತ್ತು ಲಘುಪೋಷಕಾಂಶಗಳ ಖರೀದಿಗೆ ಸಹಾಯಧನ ಪಡೆಯಲು ಅವಕಾಶವಿದೆ.

    ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಪಕ ಬಳಕೆಗಾಗಿ ಹನಿ ನೀರಾವರಿ /ತುಂತುರು ನೀರಾವರಿ ಅಳವಡಿಕೆಗೆ ರೈತರಿಗೆ ಶೇ.90 ರಷ್ಟು ಸಹಾಯಧನ, ಭವಿಷ್ಯದ ಬೆಳೆಯಾದ ತಾಳೆ ಬೆಳೆಗಾಗಿ ತಾಳೆಬೆಳೆ ಯೋಜನೆಯಡಿ ಹೊಸದಾಗಿ ತಾಳೆಬೆಳೆ ಪ್ರದೇಶ ವಿಸ್ತರಣೆಗೆ ಹಾಗೂ ತಾಳೆ ಬೆಳೆ ಬೆಳೆಯುವ ರೈತರಿಗೆ ಬೋರ್ವೆಲ್, ಬಾವಿ ನಿರ್ಮಿಸಿಕೊಳ್ಳಲು, ವಿದ್ಯುತ್/ಡೀಸೆಲ್ ಪಂಪ್ ಮತ್ತು ಯಂತ್ರೋಪಕರಣ ಖರೀದಿಗೆ ಸಹಾಯಧನ ಮತ್ತು ಜೇನು ಸಾಕಾಣಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2 ದಿನಗಳ ತರಬೇತಿಯೊಂದಿಗೆ ಜೇನು ಕುಟುಂಬ ಸಹಿತ ಗರಿಷ್ಠ 4 ಪೆಟ್ಟಿಗೆ ಖರೀದಿಗೆ ಶೇ.75 ರಿಂದ 90 ರ ಸಹಾಯಧನ ಪಡೆಯಬಹುದಾಗಿದೆ.

    ಮಹಾತ್ಮಾಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ಪೌಷ್ಠಿಕ ತೋಟಗಳ ನಿರ್ಮಾಣಕ್ಕೆ ಅವಕಾಶವಿದ್ದು, ಈ ಯೋಜನೆಯ ಪ್ರಯೋಜನೆ ಪಡೆಯಲಿಚ್ಚಿಸುವವರು ಕೂಡಲೆ ಅರ್ಜಿ ಸಲ್ಲಿಸಿ, ಯೋಜನೆಯ ಫಲಾನುಭವಿಯಾಗಬಹುದಾಗಿದೆ.

    ಈ ಎಲ್ಲಾ ಯೋಜನೆಗಳ ಪ್ರಯೋಜನೆ ಪಡೆಯಲು ಆಸಕ್ತ ರೈತರು ಪ್ರಥಮ ಹಂತದಲ್ಲಿ ನೋಂದಣಿ ಅರ್ಜಿಯೊಂದಿಗೆ ಬೆಳೆ ನಮೂದಿಸಿರುವ ಇತ್ತೀಚಿನ ಪಹಣಿ ಪತ್ರ ಮತ್ತು ಅಗತ್ಯ ಪ್ರಮಾಣ ಪತ್ರಗಳೊಂದಿಗೆ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಇಲಾಖಾ ಮಾರ್ಗಸೂಚಿಯನುಸಾರ ಅರ್ಜಿಗಳನ್ನು ಜೇಷ್ಠತೆಯ ಆಧಾರದಲ್ಲಿ ಇಲಾಖೆ ನಿಗಧಿಪಡಿಸಿದ ಗುರಿಗೆ ಅನುಗುಣವಾಗಿ ಸಹಾಯಧನಕ್ಕೆ ಪರಿಗಣಿಸಲಾಗುವುದು ಎಂದು ಕುಂದಾಪುರ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ರಕಟಣೆ ತಿಳಿಸಿದೆ.

  • ಕುಂದಾಪುರ: ಬಕ್ರೀದ್ ಹಬ್ಬಕ್ಕೆ ಮುನ್ನ ಶಾಂತಿ ಸಭೆ; ಸೌಹಾರ್ದತೆಯಿಂದ ಆಚರಿಸಲು ಸೂಚನೆ

    ಕುಂದಾಪುರ, ಜೂನ್ 03, 2025: ಮುಂಬರುವ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಎಲ್ಲಾ ಧಾರ್ಮಿಕ ಮುಖಂಡರನ್ನು ಕರೆಯಿಸಿ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಹಬ್ಬದ ಸಂದರ್ಭದಲ್ಲಿ ಸಾಮರಸ್ಯ, ಸೌಹಾರ್ದತೆ, ಮತ್ತು ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆ ಬಾರದಂತೆ ಬಕ್ರೀದ್ ಹಬ್ಬವನ್ನು ಆಚರಿಸುವಂತೆ ಧಾರ್ಮಿಕ ಮುಖಂಡರಿಗೆ ಪೊಲೀಸ್ ಅಧಿಕಾರಿಗಳು ಸೂಚಿಸಿದರು.

    ಸಭೆಯಲ್ಲಿ ಎಲ್ಲಾ ಸಮುದಾಯದ ಮುಖಂಡರು ಭಾಗವಹಿಸಿ, ಶಾಂತಿಯುತವಾಗಿ ಹಬ್ಬ ಆಚರಿಸುವ ಕುರಿತು ಚರ್ಚಿಸಿದರು. ಕಾನೂನು ಉಲ್ಲಂಘನೆಯಾಗದಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸೌಹಾರ್ದತೆ ಕಾಪಾಡಿಕೊಂಡು ಹಬ್ಬವನ್ನು ಆಚರಿಸಲು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದರು.

    ಉಡುಪಿ: ನಗರ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಧಾರ್ಮಿಕ ಮುಖಂಡರನ್ನು ಠಾಣೆಗೆ ಕರೆಯಿಸಿ ಶಾಂತಿ ಸಭೆ ನಡೆಸಿ ಹಬ್ಬದ ಸಮಯದಲ್ಲಿ ಸಾಮರಸ್ಯ ಹಾಗೂ ಸೌಹಾರ್ದತೆಯಿಂದ ಹಬ್ಬವನ್ನು ಕಾನೂನು ಸುವ್ಯವಸ್ಥೆಗೆ ದಕ್ಕೆ ಬಾರದಂತೆ ಆಚರಣೆ ಮಾಡುವಂತೆ ತಿಳಿಸಲಾಯಿತು.

  • ಕುಂದಾಪುರ: ಪಂಚಗಂಗಾವಳಿ ಹೊಳೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ, ಒಬ್ಬ ಆರೋಪಿ ವಶಕ್ಕೆ

    ಕುಂದಾಪುರ, ಜೂನ್ 01, 2025: ಕುಂದಾಪುರ ತಾಲೂಕಿನ ವಡೇರಹೋಬಳಿ ಗ್ರಾಮದ ಪಂಚಗಂಗಾವಳಿ ಹೊಳೆಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದಿನಾಂಕ 01-06-2025 ರಂದು ಬೆಳಗ್ಗೆ 6:15 ಗಂಟೆಗೆ, ಕುಂದಾಪುರ ಪೊಲೀಸ್ ಠಾಣೆಯ ಠಾಣಾ ಬೀಟ್ ಸಿಬ್ಬಂದಿಯಾದ ಹೆಚ್.ಸಿ ಸೂರ್ಯ ರವರು, ವಡೇರಹೋಬಳಿ ಗ್ರಾಮದ ನಾನಾ ಸಾಹೇಬ್ ರಸ್ತೆಯ ಕೊನೆಯಲ್ಲಿ ರಿಂಗ್ ರೋಡ್ ಸಮೀಪದ ಪಂಚಗಂಗಾವಳಿ ಹೊಳೆಯಲ್ಲಿ ಕೆಲವರು ಮರಳನ್ನು ದೋಣಿಯಲ್ಲಿ ತುಂಬಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಈ ಮಾಹಿತಿಯ ಮೇರೆಗೆ ಪೊಲೀಸ್ ಉಪನಿರೀಕ್ಷಕ ನಂಜಾನಾಯ್ಕ್ ಎನ್. ರವರು ಠಾಣಾ ಸಿಬ್ಬಂದಿಯೊಂದಿಗೆ ಬೆಳಗ್ಗೆ 7:00 ಗಂಟೆಗೆ ಸ್ಥಳಕ್ಕೆ ಭೇಟಿ ನೀಡಿ ದಾಳಿ ನಡೆಸಿದರು.

    ದಾಳಿಯ ವೇಳೆ ಆರೋಪಿತ ಉದಯ ಮೆಂಡನ್ ವಶಕ್ಕೆ ಸಿಕ್ಕಿದ್ದು, ಇನ್ನೊಬ್ಬ ವ್ಯಕ್ತಿ ಸುನಿಲ್ ಎಂಬಾತ ಓಡಿಹೋಗಿದ್ದಾನೆ. ಸ್ಥಳದಲ್ಲಿ ಒಂದು ಫೈಬರ್ ದೋಣಿಯಲ್ಲಿ ಸುಮಾರು 1 ½ ಯುನಿಟ್ ಮರಳು (ಅಂದಾಜು ಮೌಲ್ಯ ₹5,000/-) ತುಂಬಿಸಿಟ್ಟಿರುವುದು ಹಾಗೂ KA20 C 6070 ಸಂಖ್ಯೆಯ 407 ಟಿಪ್ಪರ್ ವಾಹನ (ಅಂದಾಜು ಮೌಲ್ಯ ₹5,00,000/-) ನಿಂತಿರುವುದು ಕಂಡುಬಂದಿತು. ಆರೋಪಿತ ಉದಯ ಮೆಂಡನ್, ಪಂಚಗಂಗಾವಳಿ ಹೊಳೆಯಿಂದ ಮರಳನ್ನು ತೆಗೆದು ಟಿಪ್ಪರ್ ವಾಹನದಲ್ಲಿ ಸಾಗಾಟಕ್ಕೆ ತಂದಿರಿಸಿರುವುದಾಗಿ ತಿಳಿಸಿದ್ದಾನೆ.

    ಆರೋಪಿತರು ಯಾವುದೇ ಪರವಾನಗಿ ಇಲ್ಲದೇ ಸಂಘಟಿತವಾಗಿ ಮರಳು ಕಳವು ಮಾಡಿ ಸಾಗಾಟಕ್ಕೆ ಶೇಖರಿಸಿದ್ದಾರೆ ಎಂದು ಕಂಡುಬಂದಿದೆ. ಪೊಲೀಸರು ಸ್ಥಳದಲ್ಲಿ ದೋಣಿ (ಅಂದಾಜು ಮೌಲ್ಯ ₹15,000/-), 1 ½ ಯುನಿಟ್ ಮರಳು, ಟಿಪ್ಪರ್ ವಾಹನ, ಕಬ್ಬಿಣದ ಹಾರೆ-1, ಮತ್ತು ಫೈಬರ್ ಬುಟ್ಟಿಗಳು-2 ಅನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

    ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2025ರ ಅಡಿಯಲ್ಲಿ ಕಲಂ 303(2), 112 BNS ಮತ್ತು ಕಲಂ 4, 4(1)(a), 21 Mines and Minerals (Regulation and Development) Actನಂತೆ ಪ್ರಕರಣ ದಾಖಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ.

  • ಕುಂದಾಪುರ :ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

    ಕುಂದಾಪುರ :ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ 85% ಕ್ಕಿಂತ ಅಧಿಕ ಅಂಕಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಆದ ಕುಂದಾಪುರದ ಆಸುಪಾಸಿನ ಸರಕಾರಿ ಹಾಗೂ ಅನುದಾನಿತ ಏಳು ಪ್ರೌಢ ಶಾಲೆಗಳ ನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಸುಮಾರು ಎರಡು ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು.

    ಕುಂದಾಪುರದ ಹೊಟೇಲ್ ಶಾರೋನ್ ಸಭಾಂಗಣದಲ್ಲಿ ಲಯನ್ ರೋವನ್ ಡಿ’ ಕೋಸ್ತ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಥಮ ಉಪಜಿಲ್ಲಾ ರಾಜ್ಯಪಾಲೆ ಲಯನ್ ಸಪ್ನಾ ಸುರೇಶ್, ದ್ವಿತೀಯ ಉಪರಾಜ್ಯಪಾಲ ಲಯನ್ ರಾಜೀವ್ ಕೋಟ್ಯಾನ್, ಜಿಲ್ಲಾ ಶಿಕ್ಷಣ ಕೋ ಆರ್ಡಿನೇಟರ್ ಲಯನ್ ಸುಜಯ ಜತ್ತನ್ನ್, ಲಯನ್ ಉದಯಕುಮಾರ್ ಶೆಟ್ಟಿ, ಲಯನ್ ಬಾಲಕೃಷ್ಣ ಶೆಟ್ಟಿ, ಲಯನ್ ಶಂಕರ್ ಶೆಟ್ಟಿ, ಲಯನ್ ಜೋಸೆಫ್ ಮಾರ್ಟಿಸ್ ಉಪಸ್ಥಿತರಿದ್ದರು.

    ವಲಯಾಧ್ಯಕ್ಷ ಲಯನ್ ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ. ಮಾತುಗಳನ್ನಾಡಿದರು

    ಲಯನ್ ಎಲ್. ಜೆ. ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಲಯನ್ ಮ್ಯಾಥ್ಯೂ ಜೋಸೆಫ್ ವಂದಿಸಿದರು.

  • ಕುಂದಾಪುರ: ಏಣಿಯಿಂದ ಬಿದ್ದು ಕಾರ್ಮಿಕ ಸಾವು

    ಕುಂದಾಪುರ ತಾಲೂಕಿನ ಹಾಲಾಡಿ ಗ್ರಾಮದ ಚೋರಾಡಿಯಲ್ಲಿ ದುರ್ಘಟನೆಯೊಂದರಲ್ಲಿ ಕಾರ್ಮಿಕರೊಬ್ಬರು ಸಾವನ್ನಪ್ಪಿದ ಘಟನೆ ದಿನಾಂಕ 30-05-2025ರಂದು ನಡೆದಿದೆ. ಬಿಹಾರ ರಾಜ್ಯದ ನಿವಾಸಿಯಾದ ಎಂ.ಡಿ. ಇಸ್ರೈಲ್ (37) ಎಂಬುವವರು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರಿನ ವಿವರಗಳ ಪ್ರಕಾರ, ಚೋರಾಡಿಯಲ್ಲಿ ಕಳೆದ 2-3 ವರ್ಷಗಳಿಂದ ಎಸ್‌ಎನ್‌ಸಿ ಕಂಪನಿಯ ವಾಟರ್ ಸಪ್ಲೈ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯಲ್ಲಿ ದೂರುದಾರರ ಸಹೋದ್ಯೋಗಿ ಸಫರಾಜ್ ಆಲಂ ಎಂಬ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಘಟನೆಯ ದಿನ ಬೆಳಿಗ್ಗೆ 9:30ರ ಸುಮಾರಿಗೆ ಸಫರಾಜ್ ಆಲಂ ಅವರು 6 ಅಡಿ ಎತ್ತರದ ಏಣಿಯ ಮೇಲೆ ನಿಂತು ಫಿಲ್ಟರ್ ಹೌಸ್‌ನ ಗೋಡೆಯ ಲಿಕೇಜ್ ಪ್ಯಾಚ್ ಮಾಡುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.

    ತಕ್ಷಣವೇ ಸ್ಥಳದಲ್ಲಿದ್ದ ಇಂಜಿನಿಯರ್ ಶಿವರಾಜ್ ಹಾಗೂ ಇತರ ಕೆಲಸಗಾರರು ಸೇರಿ ಸಫರಾಜ್ ಅವರನ್ನು ಎತ್ತಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ ಅವರನ್ನು ವಾಹನದಲ್ಲಿ ಹಾಲಾಡಿಯ ದುರ್ಗಾ ಆಸ್ಪತ್ರೆಗೆ ಕರೆದೊಯ್ದಾಗ, ವೈದ್ಯಾಧಿಕಾರಿಗಳು ಪರೀಕ್ಷಿಸಿ ಸಫರಾಜ್ ಆಲಂ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

    ಈ ಘಟನೆಯ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 21/2025ರ ಅಡಿಯಲ್ಲಿ ಕಲಂ 194 BNSS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

  • ಮಂಗಳೂರು/ಉಡುಪಿ: ಐಪಿಎಸ್ ಅಧಿಕಾರಿಗಳ ವರ್ಗಾವಣೆ – ಉಡುಪಿ, ದಕ್ಷಿಣ ಕನ್ನಡ ಪೊಲೀಸ್ ನಾಯಕತ್ವದಲ್ಲಿ ಬದಲಾವಣೆ

    ಮಂಗಳೂರು/ಉಡುಪಿ, ಮೇ 29, 2025: ರಾಜ್ಯ ಸರ್ಕಾರವು ಐಪಿಎಸ್ ಅಧಿಕಾರಿಗಳ ಗಣನೀಯ ವರ್ಗಾವಣೆಯನ್ನು ಘೋಷಿಸಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪೊಲೀಸ್ ನಾಯಕತ್ವದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ.

    ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಡಾ. ಅರುಣ್ ಕೆ. ಅವರನ್ನು ವರ್ಗಾಯಿಸಲಾಗಿದ್ದು, ಅವರು ದಕ್ಷಿಣ ಕನ್ನಡ ಜಿಲ್ಲೆಯ ಹೊಸ ಪೊಲೀಸ್ ಅಧೀಕ್ಷಕರಾಗಿ ನೇಮಕಗೊಂಡಿದ್ದಾರೆ.

    ಹರಿರಾಮ್ ಶಂಕರ್ ಅವರು ಉಡುಪಿ ಜಿಲ್ಲೆಯ ಹೊಸ ಪೊಲೀಸ್ ಅಧೀಕ್ಷಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

    ಇದೇ ವೇಳೆ, ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಅನುಪಮ್ ಅಗರ್ವಾಲ್ ಅವರನ್ನು ಆರ್ಥಿಕ ಅಪರಾಧಗಳ ಉಪಮಹಾನಿರೀಕ್ಷಕರ (ಡಿಐಜಿ) ಹುದ್ದೆಗೆ ವರ್ಗಾಯಿಸಲಾಗಿದೆ.

    ಸುಧೀರ್‌ಕುಮಾರ್ ರೆಡ್ಡಿ ಅವರು ಮಂಗಳೂರು ನಗರದ ಹೊಸ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

    ಚಿತ್ರ:

    • ಮೇಲೆ: ಸುಧೀರ್‌ಕುಮಾರ್ ರೆಡ್ಡಿ, ಹರಿರಾಮ್ ಶಂಕರ್
    • ಕೆಳಗೆ: ಅನುಪಮ್ ಅಗರ್ವಾಲ್, ಡಾ ಅರುಣ್ ಕೆ
  • ಕುಂದಾಪುರ: ಬಾವಿ ಕೆಲಸದ ವೇಳೆ ದುರಂತ – ವ್ಯಕ್ತಿಯೊಬ್ಬರು ಮುಳುಗಿ ಸಾವು

    ಕುಂದಾಪುರ, ಮೇ 29, 2025: ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಸುಭಾಷ್ (50) ಎಂಬ ವ್ಯಕ್ತಿಯು ಬಾವಿ ಕೆಲಸದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಗೋಪಾಡಿ ಗ್ರಾಮದ ಮೂಡುಗೋಪಾಡಿಯಲ್ಲಿ ನಡೆದಿದೆ. ದೂರುದಾರರಾದ ಅವರ ಪುತ್ರ ಅಭಿಷೇಕ್ (20) ಈ ಬಗ್ಗೆ ಮಾಹಿತಿ ನೀಡಿದ್ದಾರೆ.

    ಸುಭಾಷ್ ಅವರು ತಮ್ಮ ಅಣ್ಣ ಸುರೇಂದ್ರ ಜೊತೆಗೆ ಕಳೆದ ಮೂರು ತಿಂಗಳಿಂದ ಗೋಪಾಡಿ ಗ್ರಾಮದ ಕರುಣಾಕರ ಎಂಬುವವರ ಜಾಗದಲ್ಲಿ ಬಾವಿ ತೋಡುವ ಕೆಲಸದಲ್ಲಿ ತೊಡಗಿದ್ದರು. ದಿನಾಂಕ 28/05/2025ರಂದು ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದ ಸುಭಾಷ್, ಮಧ್ಯಾಹ್ನ 1:45 ಗಂಟೆ ಸುಮಾರಿಗೆ ಬಾವಿಯ ರಿಂಗ್ ಬದಿಯಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಲು ಅಳವಡಿಸಿದ್ದ ಪಿವಿಸಿ ಪೈಪ್ ಬಾವಿಯೊಳಗೆ ಬಿದ್ದಿತ್ತು. ಇದನ್ನು ತೆಗೆಯಲು ಬಾವಿಗೆ ಇಳಿದಿದ್ದ ವೇಳೆ, ಪೈಪ್ ಸಿಗದೇ, ಪುನಃ ಮೇಲೆ ಬರಲು ಹಗ್ಗದ ಸಹಾಯದಿಂದ ಹತ್ತುತ್ತಿರುವಾಗ ಆಕಸ್ಮಿಕವಾಗಿ ಹಗ್ಗವು ಕೈಯಿಂದ ಜಾರಿ ಬಾವಿಯ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ.

    ಈ ಘಟನೆಯ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 30/2025ರಡಿ, ಕಲಂ 194 BNSS ರಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.