Category: Udupi District

  • ಕಾರ್ಕಳ ಪರಶುರಾಮ ಮೂರ್ತಿ ಕಂಚಿನದ್ದಲ್ಲ: ತನಿಖೆಯಿಂದ ಸಾಬೀತು

    ಉಡುಪಿ, ಜುಲೈ 14, 2025: ಕಾರ್ಕಳ ತಾಲೂಕಿನ ಉಮ್ಮಿಕಲ್ ಬೆಟ್ಟದ ಪರಶು ರಾಮ್ ಥೀಮ್ ಪಾರ್ಕ್‌ನಲ್ಲಿ ಶಿಲ್ಪಿಕೃಷ್ಣ ನಾಯ್ಕ ಹಿತ್ತಾಳೆಯಿಂದ ಪರಶು ರಾಮ ಮೂರ್ತಿ ನಿರ್ಮಿಸಿರುವುದೇ ಹೊರತು ಕಂಚಿನಿಂದ ಅಲ್ಲ ಎಂಬುದು ತಜ್ಞರ ಪರಿಶೀಲನಾ ವರದಿ ಹಾಗೂ ತನಿಖೆಯಿಂದ ಸಾಬೀತಾಗಿದೆ.

    ಶಿಲ್ಪಿ ಕೃಷ್ಣ ನಾಯಕ್ ಕ್ರಿಶ್ ಆರ್ಟ್ ವರ್ಲ್ಡ್ ಎಂಬ ಸಂಸ್ಥೆಯ ಮೂಲಕ ಪರಶುರಾಮ್ ಥೀಮ್ ಪಾರ್ಕ್‌ನಲ್ಲಿ ಕಂಚಿನ ಪರಶುರಾಮ್ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ ಹಣ ಪಡೆದು ಕೊಂಡು ಕಾಮಗಾರಿ ನಡೆಸುತ್ತಿದ್ದು, ನಂತರ ಕೃಷ್ಣ ನಾಯ್ಕ ಕಂಚಿನ ಮೂರ್ತಿಯನ್ನು ಮಾಡದೇ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆ ಮಾಡಿರುವುದಾಗಿ 2024ರ ಜೂ.21ರಂದು ಕಾರ್ಕಳದ ಕೃಷ್ಣ ಶೆಟ್ಟಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಈ ಬಗ್ಗೆ ತನಿಖೆ ನಡೆಸಿದ್ದು, ಶಿಲ್ಪಿಕೃಷ್ಣ ನಾಯ್ಕ ಕಂಚಿನ ಲೋಹದಿಂದ ಪರಶುರಾಮ ಮೂರ್ತಿಯ ಬದಲು ಹಿತ್ತಾಳೆ ಲೋಹದಿಂದ ನಿರ್ಮಾಣ ಮಾಡಿರುವುದು ತಜ್ಞರ ಪರಿಶೀಲನಾ ವರದಿ ಹಾಗೂ ತನಿಖೆಯಿಂದ ಸಾಬೀತಾಗಿದೆ. ಅದೇ ರೀತಿ ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಹಾಗೂ ಇಂಜಿನಿಯರ್ ಸಚಿನ್ ವೈ.ಕುಮಾರ್ ವರ್ಕ್ ಆರ್ಡರ್‌ನಲ್ಲಿದ್ದ ಷರತ್ತುಗಳನ್ನು ಪಾಲಿಸದೆ, 2023ರ ಅ.12ರಂದು ಪರಶುರಾಮ ಮೂರ್ತಿಯ ಸೊಂಟದಿಂದ ಮೇಲ್ಭಾಗವನ್ನು ಉಮ್ಮಿಕಲ್ ಬೆಟ್ಟದಿಂದ ತೆಗೆದುಕೊಂಡು ಹೋಗಿ ಅಲೆವೂರು ಗ್ರಾಮದ ಪ್ರಗತಿ ನಗರ ಎಂಬಲ್ಲಿರುವ ನಿರ್ಮಿತಿ ಕೇಂದ್ರಕ್ಕೆ ಸಂಬಂಧಿಸಿರುವ ಶೆಡ್‌ನಲ್ಲಿ 2024ರ ಫೆ.25ರ ತನಕ ಇರಿಸಿಕೊಂಡಿದ್ದರು.

    ಆದರೆ ಮೂರ್ತಿಯ ಸೊಂಟದಿಂದ ಮೇಲ್ಭಾಗವನ್ನು ಶಿಲ್ಪಿ ಕೃಷ್ಣ ನಾಯ್ಕಗೆ ಹಸ್ತಾಂತರ ಮಾಡಿದ್ದು, ಆತ ಅದನ್ನು ಬೆಂಗಳೂರಿಗೆ ಸಾಗಾಟ ಮಾಡಿರುವುದಾಗಿ ಅರುಣ್ ಕುಮಾರ್ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಈ ಮೂಲಕ ಆರೋಪಿಗಳಾದ ಶಿಲ್ಪಿ ಕೃಷ್ಣ ನಾಯ್ಕ ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಹಾಗೂ ಇಂಜಿನಿಯರ್ ಸಚಿನ್ ವೈ.ಕುಮಾರ್ ಅಪರಾಧಿಕ ಒಳಸಂಚು ಮತ್ತು ನಂಬಿಕೆ ದ್ರೋಹ ಮತ್ತು ವಂಚನೆ ಎಸಗಿ, ಸಾಕ್ಷಿ ನಾಶ ಮಾಡಿರುವುದು ಕಂಡುಬಂದಿದೆ. ಅವರ ವಿರುದ್ಧ ಕಲಂ. 420, 409, 201, 120 (ಬಿ) ಜೊತೆಗೆ 34 ಐಪಿಸಿ ಯಂತೆ 1231 ಪುಟಗಳ ದೋಷಾರೋಪಣಾ ಪಟ್ಟಿಯನ್ನು ತಯಾರಿಸಿ ಪೊಲೀಸರು ಕಾರ್ಕಳದ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

  • ಮನೋರೋಗಿ ಸಹಜ ಸ್ಥಿತಿಯತ್ತ; ಹನ್ನೆರಡು ವರ್ಷಗಳ ಬಳಿಕ ಯುವಕ ಕುಟುಂಬಕ್ಕೆ

    ಉಡುಪಿ ಜು.13 ಕಳೆದ ಕೆಲವು ದಿನಗಳ ಹಿಂದೆ ಮಿತ್ರ ಆಸ್ಪತ್ರೆ ಬಳಿ ಸಾರ್ವಜನಿಕರ ಮನೆಗಳಿಗೆ ಬೆಳಗಿನ ಜಾವ ಆಗಮಿಸಿ ಭಯದ ವಾತಾವರಣ ಸೃಷ್ಟಿಸಿದ್ದ ಅಪರಿಚಿತ ಮಾನಸಿಕ ಯುವಕನನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ , ಬಾಳಿಗ ಆಸ್ಪತ್ರೆಗೆ ದಾಖಲಿಸಿದ್ದು ಇದೀಗ ಯುವಕನ ಕುಟುಂಬ ಪತ್ತೆಯಾಗಿದ್ದು ಹಸ್ತಾಂತರಿಸಲಾಗಿದೆ.

    12 ವರ್ಷದ ಹಿಂದೆಯೇ ಮನೆ ಬಿಟ್ಟು ಹೋದ ನವಲಗುಂದ ಮೂಲದ ಸುಧಾಕರ ಪವಾರ್ (33) ರಕ್ಷಿಸಲ್ಪಟ್ಟ ಮಾನಸಿಕ ಯುವಕ. ಇದೀಗ ಕುಟುಂಬಕ್ಕೆ ಮಾಹಿತಿ ಲಭಿಸಿದ್ದು ಸಹೋದರ ಶ್ರೀನಿವಾಸ್ ಉಡುಪಿಗೆ ಬಂದಿದ್ದಾರೆ. ಬಾಳಿಗಾ ಆಸ್ಪತ್ರೆಯಲ್ಲಿ ವೈದ್ಯರು ರೋಗಿಯ ಬಗ್ಗೆ ಮಾಹಿತಿ ಹಾಗೂ ಮುಂದಿನ ಚಿಕಿತ್ಸೆಯ ಬಗ್ಗೆ ಸಹೋದರನಿಗೆ ತಿಳಿಸಿದ್ದಾರೆ. ಚಿಕಿತ್ಸೆಗೆ ಯುವಕ ಸ್ಪಂದಿಸಿದ್ದು ಸಹಜ ಸ್ಥಿತಿಗೆ ಬಂದಿದ್ದಾನೆ.

    ಸುಧಾಕರ್ ಪವಾರ್ ನನ್ನು ಸಹೋದರನ ವಶಕ್ಕೆ ನೀಡುವಾಗ 12 ವರ್ಷಗಳೇ ಕಳೆದು ಹೋಗಿದೆ ಈತ ಮನೆ ತೊರೆದು ಮನೆಗೆ ಕರೆದುಕೊಂಡು ಹೋಗುತ್ತೇನೆ, ಸಹಕರಿಸಿದ ವಿಶು ಶೆಟ್ಟಿ ಹಾಗೂ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯಾಧಿಕಾರಿಗೆ ಧನ್ಯವಾದ ತಿಳಿಸಿದ್ದಾರೆ.

    ತೀರಾ ಬಡತನದ ಕುಟುಂಬದವರಾದ ಇವರು ಆಸ್ಪತ್ರೆಯ ಚಿಕಿತ್ಸಾ ವೆಚ್ಚ ರೂ.15,500/- ಭರಿಸಲು ಅಸಹಾಯಕತೆ ತೋರಿಸಿದಾಗ ಚಿಕಿತ್ಸಾ ವೆಚ್ಚವನ್ನು ವಿಶು ಶೆಟ್ಟಿಯವರು ಭರಿಸಿ ಸಹಕರಿಸಿದರು.

  • ಉಡುಪಿ: ನಗರದಲ್ಲಿ ಸರ್ವಧರ್ಮೀಯರಿಂದ ’ಸೌಹಾರ್ದ ಸಂಚಾರ’; ಐಕ್ಯತೆಯ ಸಂದೇಶ

    ಉಡುಪಿ, ಜುಲೈ 14, 2025: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘವು ‘ಹೃದಯ ಹೃದಯಗಳನ್ನು ಬೆಸೆಯೋಣ’ ಎಂಬ ಧ್ಯೇಯವಾಕ್ಯದೊಂದಿಗೆ ‘ಸೌಹಾರ್ದ ಸಂಚಾರ’ ಕಾರ್ಯಕ್ರಮವನ್ನು ಸೋಮವಾರ ಉಡುಪಿ ನಗರದಲ್ಲಿ ಆಯೋಜಿಸಿತು. ಈ ಕಾರ್ಯಕ್ರಮ ಉಡುಪಿ ಜಾಮೀಯ ಮಸೀದಿಯಿಂದ ಆರಂಭಗೊಂಡು, ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ ಉಡುಪಿ ಶೋಕಾ ಮಾತಾ ಇಗರ್ಜಿಯಲ್ಲಿ ಸಮಾಪ್ತಿಗೊಂಡಿತು.

    ನಂತರ ನಡೆದ ಸಭೆಯಲ್ಲಿ ಮಾತನಾಡಿದ ಹೋರಾಟಗಾರ ಕಲ್ಕುಳಿ ವಿಠಲ್ ಹೆಗ್ಡೆ, “ನಮ್ಮ ಧರ್ಮ, ನಂಬಿಕೆಗಳು ಖಾಸಗಿಯೇ ಹೊರತು ಸಾರ್ವಜನಿಕ ಅಲ್ಲ. ಆದರೆ ಇತ್ತೀಚಿಗೆ ಕೆಲವರು ಧರ್ಮವನ್ನು ಆಧಾರವಾಗಿ ಇರಿಸಿ ಅಮಾಯಕರ ಮೇಲೆ ದಾಳಿ ಮಾಡಿ ಕೊಲೆ ಮಾಡುವ ಘಟನೆಗಳು ಈ ಜಿಲ್ಲೆಯಲ್ಲಿ ನಡೆಯುತ್ತಿವೆ. ಈ ನಾಡಿನ ಸಾವಿರಾರು ವರ್ಷಗಳಿಂದ ಎಲ್ಲ ಜಾತಿ ಧರ್ಮದವರು ಸೌಹಾದರ್ತೆಯಿಂದ ಬಾಳಿ ಬದುಕುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರ ಪ್ರಚೋದನೆಗೆ ಜನ ಬಲಿಯಾಗುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

    “ಇಂದು ಜೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ಜಾತಿಯ ಯುವಕರು ಇದ್ದಾರೆ. ದುಡಿದು ತಿನ್ನಬೇಕಾದ ಮಕ್ಕಳು ತಂದೆತಾಯಿಗೆ ಆಸರೆಯಾಗಬೇಕಾದವರು ಜೈಲಿನಲ್ಲಿ ಕೊಳೆಯುತ್ತಿರುವುದು ದುರಂತ. ಈ ದುಷ್ಟ ಶಕ್ತಿಗಳನ್ನು ನಾವೆಲ್ಲ ಸೇರಿ ಸೋಲಿಸಬೇಕು. ಸಮಾನತೆ, ಸಂವಿಧಾನ ಮತ್ತು ಜಾತ್ಯತೀತತೆಯ ವಿರುದ್ಧ ಇರುವ ಸಂಘಟನೆಗಳನ್ನು ಒಗ್ಗಟ್ಟಿನಿಂದ ಎದುರಿಸಬೇಕು” ಎಂದು ಕರೆ ನೀಡಿದರು. ಸಾಮಾಜಿಕ ಹೋರಾಟಗಾರ ಅಮೃತ್ ಶೆಣೈ, ಸೌಹಾರ್ದ ಸಂಚಾರ ಸಮಿತಿಯ ಅಧ್ಯಕ್ಷ ಹಂಝತ್ ಹೆಜಮಾಡಿ, ಬೈಂದೂರು ಜೋಗಿಮನೆಯ ಶ್ರೀವಸಂತನಾಥ ಗುರುಜೀ, ಮತ್ತು ಚರ್ಚ್‌ನ ಸಹಾಯಕ ಧರ್ಮಗುರು ರೆ.ಫಾ. ಲಿಯೋ ಪ್ರವೀಣ್ ಡಿಸೋಜಾ ಸಹ ಐಕ್ಯತೆಯ ಸಂದೇಶ ನೀಡಿದರು.

    ಈ ಕಾರ್ಯಕ್ರಮದಲ್ಲಿ ಧರ್ಮಗುರು ಫಾದರ್ ವಿಲಿಯಂ ಮಾರ್ಟಿಸ್, ಎಸ್‌ವೈಎಸ್ ಸಮಿತಿಯ ರಾಜ್ಯಾಧ್ಯಕ್ಷ ಬಶಿರ್ ಸಅದಿ (ಬೆಂಗಳೂರು), ಪ್ರಧಾನ ಕಾರ್ಯದರ್ಶಿ ಮೌಲಾನ ಅಬೂಬಕರ್ ಸಿದ್ದೀಕ್ (ಮೊಂಟಗೊಳಿ), ನ್ಯಾಯವಾದಿ ಹಬೀಬ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ವೌಲಾ, ಮತ್ತು ಪ್ರಮುಖರಾದ ಎಂ.ಎ.ಗಫೂರ್, ಡಾ.ಗಣನಾಥ ಎಕ್ಕಾರು, ಪ್ರಶಾಂತ್ ಜತ್ತನ್ನ, ರಮೇಶ್ ಕಾಂಚನ್, ಸುಂದರ್ ಮಾಸ್ಟರ್, ಶ್ಯಾಮರಾಜ್ ಬಿರ್ತಿ, ನಾಗೇಶ್ ಉದ್ಯಾವರ, ಪ್ರಭಾಕರ ಪೂಜಾರಿ, ವಹೀದ್ ಶೇಖ್ (ಉದ್ಯಾವರ), ಸುಭಾನ್ ಹೊನ್ನಾಳ, ಇಸ್ಮಾಯಿಲ್ ಹುಸೇನ್ (ಕಟಪಾಡಿ), ಹನೀಫ್ ಹಾಜಿ (ಅಂಬಾಗಿಲು), ತೌಫಿಕ್ ಹಾಜಿ ಸೇರಿದಂತೆ ಇತರರು ಭಾಗವಹಿಸಿದ್ದರು. ಎಸ್‌ವೈಎಸ್ ರಾಜ್ಯ ಸಂಯೋಜಕ ಅಬ್ದುರ್ರಹ್ಮಾನ್ ರಝ್ವಿ (ಕಲ್ಕಟ್ಟ) ಕಾರ್ಯಕ್ರಮವನ್ನು ನಿರೂಪಿಸಿದರು.

  • ಕಾರ್ಕಳ: ಹಾಸ್ಟೆಲ್ ಶೌಚಾಲಯದಲ್ಲಿ ಅಶ್ಲೀಲ, ಕೋಮು ಪ್ರಚೋದನಕಾರಿ ಬರಹ- ವಿದ್ಯಾರ್ಥಿನಿ ಬಂಧನ

    ಕಾರ್ಕಳ, ಜುಲೈ 14, 2025: ಖಾಸಗಿ ಕಾಲೇಜಿನಲ್ಲಿ ನಡೆದ ಘಟನೆಯೊಂದರಲ್ಲಿ, ಕೋಮು ದ್ವೇಷವನ್ನು ಸೃಷ್ಟಿಸುವ ಉದ್ದೇಶದಿಂದ ಹಾಸ್ಟೆಲ್ ಶೌಚಾಲಯದ ಗೋಡೆಯ ಮೇಲೆ ಅಶ್ಲೀಲ ಪದಗಳನ್ನು ಬರೆದ ಆರೋಪದ ಮೇಲೆ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

    ಬಂಧಿತಳನ್ನು ಫಾತಿಮಾ ಶಬ್ನಾ (21) ಎಂದು ಗುರುತಿಸಲಾಗಿದೆ, ಈಕೆ ಕಾಲೇಜು ವಿದ್ಯಾರ್ಥಿನಿ.

    ಈ ಘಟನೆ ಮೇ 7, 2025 ರಂದು ಸಂಜೆ 6 ಗಂಟೆ ಸುಮಾರಿಗೆ ನಡೆದಿದ್ದು, ಕೆಲವು ವಿದ್ಯಾರ್ಥಿಗಳು ಹಾಸ್ಟೆಲ್‌ನ ಮೊದಲ ಹಂತದಲ್ಲಿ ಶೌಚಾಲಯದ ಗೋಡೆಯ ಮೇಲೆ ಅಶ್ಲೀಲ ಮತ್ತು ಕೋಮು ಪ್ರಚೋದನಕಾರಿ ಪದಗಳನ್ನು ಬರೆದಿರುವುದನ್ನು ಗಮನಿಸಿದರು. ಇದರ ನಂತರ, ಕಾಲೇಜು ಮುಖ್ಯ ಮಹಿಳಾ ಹಾಸ್ಟೆಲ್‌ನ ವ್ಯವಸ್ಥಾಪಕಿ ಕಾರ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರಿನ ಆಧಾರದ ಮೇಲೆ, ಪ್ರಕರಣ ದಾಖಲಿಸಲಾಗಿದೆ. ಸಮಗ್ರ ತನಿಖೆಯ ನಂತರ, ಕಾರ್ಕಳ ಗ್ರಾಮೀಣ ಪೊಲೀಸರು ಜುಲೈ 14 ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ್ದಾರೆ.

    ಅದೇ ದಿನ ವಿದ್ಯಾರ್ಥಿಯನ್ನು ಕಾರ್ಕಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

  • ಜುಲೈ 20ರಂದು ಕುಂದಾಪುರದಲ್ಲಿ “ಲಗೋರಿ” ಗ್ರಾಮೀಣ ಕ್ರೀಡಾಕೂಟ

    ಕುಂದಾಪುರ, ಜುಲೈ 14, 2025: ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಯುಕ್ತ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಇದರ ಆಶ್ರಯದಲ್ಲಿ “ಲಗೋರಿ” ಗ್ರಾಮೀಣ ಕ್ರೀಡಾಕೂಟವನ್ನು ಇದೇ ಜುಲೈ 20ರಂದು ಕುಂದಾಪುರ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ನ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಮ್ಮ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಭಾಷೆಯ ಹೆಸರಿನಲ್ಲಿ ಲಗೋರಿ ಎಂಬ ಕ್ರೀಡಾಕೂಟವನ್ನು ಆಯೋಜಿಸುತ್ತಿದೆ. ಇಂದಿನ ಜನಾಂಗ ನೋಡದ ಮತ್ತು‌ ಆಡದ ಆಟಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 9ಗಂಟೆಯಿಂದ ಸಂಜೆ 7ಗಂಟೆಯವರೆಗೆ ಕ್ರೀಡಾಕೂಟ ನಡೆಯಲಿದೆ ಎಂದರು.

    ಈ ಕ್ರೀಡಾಕೂಟವು ವೈಯಕ್ತಿಕ ಮತ್ತು ಮುಕ್ತ ವಿಭಾಗದಲ್ಲಿ ನಡೆಯಲಿದೆ. ವೈಯಕ್ತಿಕ ವಿಭಾಗದಲ್ಲಿ 12 ವರ್ಷದೊಳಗಿನ ಬಾಲಕ ಬಾಲಕಿಯರಿಗೆ ‘ಗುರಿ ಇಟ್ಟು ಹೊಡೆಯುವುದು, ಚಕ್ರವ್ಯೂಹ, ಗೋಣಿ ಚೀಲ ಓಟ, ಸೈಕಲ್ ಟಯರ್ ಓಟ, ನಿಮ್ಮ ಕಾಲ್ಗುಣ’ ಸ್ಪರ್ಧೆಗಳು ನಡೆಯಲಿವೆ.

    17 ವರ್ಷದೊಳಗಿನ ಬಾಲಕ ಬಾಲಕಿಯರಿಗೆ ‘ಉಪ್ಪು ಮುಡಿ, ಗೋಣಿ ಚೀಲ ಓಟ, ಗೂಟ ಸುತ್ತಿ ಓಟ, ಸೈಕಲ್ ಟಯರ್ ಓಟ ಮತ್ತು ಕಂಬಳ’ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮುಕ್ತ ವಿಭಾಗದಲ್ಲಿ 65 ವರ್ಷದೊಳಗಿನ ಮಹಿಳೆಯರು ಹಾಗೂ ಪುರುಷರಿಗೆ ಗೋಣಿಚೀಲ ಓಟ, ಕಂಬಳ, ಸೈಕಲ್ ಟಯರ್ ಓಟ, ಗೂಟ ಸುತ್ತಿ ಓಟ, ಉಪ್ಪು ಮುಡಿ ಹಾಗೂ ಕಣ್ಣು ಕಟ್ಟಿ ಮಡಿಕೆ ಒಡೆಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಗುಂಪು ಆಟಗಳು ಮುಕ್ತ ವಿಭಾಗದಲ್ಲಿ ನಡೆಯಲಿದೆ. ಪುರುಷರಿಗೆ ಲಗೋರಿ, ಚೆಂಡಾನ್ ಚೆಂಡು, ಹಗ್ಗ ಜಗ್ಗಾಟ (9ಜನರ ತಂಡ) ಆಯೋಜಿಸಿದ್ದು, ಪ್ರಥಮ 12 ಸಾವಿರ ನಗದು ಬಹುಮಾನ ಹಾಗೂ ಟ್ರೋಫಿ, ದ್ವಿತೀಯ 8ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು. ಮಹಿಳೆಯರಿಗೆ ಬೆನ್ಚೆಂಡು, ಡೊಂಕಾಲು, ಥ್ರೋ ಬಾಲ್ ಸ್ಪರ್ಧೆ ಆಯೋಜಿಸಿದ್ದು, ಪ್ರಥಮ 5 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ 3 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು.

    ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ 8 ಸಾವಿರ ನಗದು ಮತ್ತು ಟ್ರೋಫಿ, ದ್ವಿತೀಯ 5 ಸಾವಿರ ನಗದು ಮತ್ತು ಟ್ರೋಫಿ ನೀಡಲಾಗುವುದು. ಎಲ್ಲ ಕ್ರೀಡೆಗಳಿಗೂ ಮುಕ್ತ ಪ್ರವೇಶ ಇರಲಿದ್ದು, ಯಾವುದೇ ಪ್ರವೇಶ ಶುಲ್ಕ ಇಲ್ಲ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 98447 83053 ಸಂಪರ್ಕಿಸಬಹುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ರಾಜೇಶ್ ಕಾವೇರಿ, ಶ್ರೀಧರ್ ಸುವರ್ಣ, ರಾಮಚಂದ್ರ, ಕೆ.ಆರ್. ನಾಯಕ್ ಇದ್ದರು.

  • ಉಡುಪಿ: ರೈತರ ಹಣ ಸಂದಾಯ ಖಾತ್ರಿ; ಡಿಸಿ ಬ್ರಹ್ಮಾವರ ಸಂಶೋಧನಾ ಕೇಂದ್ರಕ್ಕೆ ಭೇಟಿ

    ಉಡುಪಿ, ಜುಲೈ 14, 2025: ಜೂನ್ 20, 2025ರಂದು ನಡೆದ ಮಾನ್ಯ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಕೆಡಿಪಿ ಸಭೆಯಲ್ಲಿ, ಬೀಜೋತ್ಪಾದನೆಯಲ್ಲಿ ತೊಡಗಿದ 31 ರೈತರಿಗೆ ಹಣ ಸಂದಾಯವಾಗದೆ ಇರುವ ಬಗ್ಗೆ ಚರ್ಚೆ ನಡೆಯಿತು. ಉಸ್ತುವಾರಿ ಸಚಿವರು ತಕ್ಷಣ ಹಣ ಬಿಡುಗಡೆ ಮಾಡುವಂತೆ ಸೂಚಿಸಿದ್ದು, ಇದರ ಪ್ರಕಾರ 23 ರೈತರಿಗೆ ಹಣ ಸಂದಾಯವಾಗಿದೆ. ಉಳಿದ 8 ರೈತರಿಗೆ ಭಾಗಶಃ ಹಣ ಬಿಡುಗಡೆಯಾಗಿರುವಾಗ, ಕೆಲವು ರೈತರು ದೂರವಾಣಿ ಮೂಲಕ ಉಳಿದ ಹಣ ಸಂದಾಯವಾಗದೆ ಇರುವ ಬಗ್ಗೆ ದೂರಿದರು.

    ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಇಂದು ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಳಿದ 8 ರೈತರಿಗೆ ಭಾಗಶಃ ಹಣ ಬಿಡುಗಡೆಯಾಗುವಂತೆ ಸೂಚಿಸಿದ ಬಳಿಕ, ತಕ್ಷಣವೇ ರೈತರಿಗೆ ಉಳಿದ ಹಣ ಸಂದಾಯವಾಗಿದೆ. ಇದೇ ಸಂದರ್ಭದಲ್ಲಿ, ಭತ್ತದ ಸಸಿಮಡಿಗಳ ತಾಕನ್ನು ಪರೀಕ್ಷಿಸಿ, ಸಂಶೋಧನಾ ಕೇಂದ್ರದಿಂದ ರೈತರಿಗೆ ಒದಗಿಸಲಾಗುವ ತರಬೇತಿ, ಬಿತ್ತನೆ ಬೀಜ, ಯಾಂತ್ರೀಕೃತ ಸೇವೆಗಳು ಮತ್ತು ಇತರ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಯಿತು.

    ಅಲ್ಲದೆ, ಬ್ರಹ್ಮಾವರದ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ, ತರಬೇತಿ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ, ಕಛೇರಿ ಸೇರಿದಂತೆ ವಿವಿಧ ವಿಭಾಗಗಳನ್ನು ವೀಕ್ಷಿಸಲಾಯಿತು. 2025-26ನೇ ಸಾಲಿನ ಪ್ರಥಮ ವರ್ಷದ ಡಿಪ್ಲೋಮಾ ಕೃಷಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರೊಂದಿಗೆ ಸಂವಾದ ನಡೆಸಿ, ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಲಾಯಿತು.

  • ಕುಂದಾಪುರ: ‘ಶಕ್ತಿ’ ಯೋಜನೆಯಡಿ 500 ಕೋಟಿ ಉಚಿತ ಪ್ರಯಾಣ; ಆಚರಣೆ

    ಕುಂದಾಪುರ, ಜುಲೈ 14, 2025: ಜಾಗತಿಕ ಮಟ್ಟದಲ್ಲಿ ಮೊತ್ತ ಮೊದಲಬಾರಿಗೆ ಕರ್ನಾಟಕದಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿದ್ದು, ಫಲಾನುಭವಿಗಳ ಸಂಖ್ಯೆ 500 ಕೋಟಿ ದಾಟಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕುಂದಾಪುರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ.

    ಈ ಸಂದರ್ಭ ಕಾಂಗ್ರೆಸ್ ಮುಖಂಡ, ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಮೊಳಹಳ್ಳಿ ದಿನೇಶ್ ಹೆಗ್ಡೆ ಮಾತನಾಡಿ, ರಾಜ್ಯ ಸರ್ಕಾರವು ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಮುನ್ನುಡಿ ಬರೆದಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಯಶಸ್ವಿಯಾಗಿ ಪಂಚ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದ್ದು, ಯಾವುದೇ ಕಾರಣಕ್ಕೆ ಈ ಯೋಜನೆಗಳು ನಿಲ್ಲುವುದಿಲ್ಲ ಎಂದರು.

    ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಮಾತನಾಡಿ, ಸರಕಾರದ ಗ್ಯಾರಂಟಿ ಯೋಜನೆಗಳ ಮೂಲಕವಾಗಿ ಮಹಿಳೆಯು ಹಣಕ್ಕಾಗಿ ಪತಿ, ತಂದೆ, ಮಕ್ಕಳನ್ನು ಆಶ್ರಯಿಸಬೇಕಾದ ಅನಿವಾರ್ಯವನ್ನು ತಪ್ಪಿಸಿದೆ. ಮಹಿಳೆಯರು ಸಬಲೀಕರಣಗೊಳ್ಳಲು ಸರಕಾರದ ಈ ನಡೆ ಅನುಕರಣೀಯ ಎಂದರು.

    ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿ, ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾಗಿತ್ತು. ಅಂತಹ ಮಹತ್ವಾಕಾಂಕ್ಷೆಯ ಯೋಜನೆ, ಈಡೇರಿದ ಆಶ್ವಾಸನೆಯಿಂದಾಗಿ ಅಪಪ್ರಚಾರಕ್ಕೆ ಸಡ್ಡು ಹೊಡೆದು ಜನಸಾಮಾನ್ಯರಿಗೆ ಸಹಾಯ ಆಗಿದೆ. ಶಕ್ತಿ ಯೋಜನೆ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸಿದೆ ಎಂದು ಹೇಳಿದರು.

    ಉಡುಪಿಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ಮೂಲಕವಾಗಿ ಕೊಲ್ಲೂರಿಗೆ ಪ್ರಯಾಣಿಸುತ್ತಿದ್ದ ಕಾರ್ಯಕರ್ತರನ್ನು ಕುಂದಾಪುರದಲ್ಲಿ ಬರಮಾಡಿಕೊಂಡು ಹೂ ನೀಡಿ ಸಿಹಿ ತಿಂಡಿ ವಿತರಿಸಿ ಸಂಭ್ರಮಿಸಲಾಯಿತು. ಕೆಎಸ್ಆರ್ಟಿಸಿ ಡಿಪೊ ಮೆನೆಜರ್ ಉದಯ ಕುಮಾರ್ ಶೆಟ್ಟಿ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೊ, ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷೆ ಗೀತಾ ವಾಗ್ಳೆ, ಗ್ಯಾರಂಟಿ ಸಮಿತಿಯ ಸದಸ್ಯರಾದ ಅಭಿಜಿತ್ ಪೂಜಾರಿ, ವಾಣಿ ಶೆಟ್ಟಿ, ಆಶಾ ಕರ್ವಾಲೊ, ನಾರಾಯಣ ಆಚಾರ್ ಕೋಣಿ, ಜಹೀರ್ ಅಹ್ಮದ್ ಗಂಗೊಳ್ಳಿ, ಪ್ರಾಧಿಕಾರದ ಸದಸ್ಯ ಚಂದ್ರ ಅಮೀನ್, ಕೆಡಿಪಿ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ, ಕಾಂಗ್ರೆಸ್ ಮುಖಂಡರಾದ ವಿಕಾಸ್ ಹೆಗ್ಡೆ, ಸರಸು ಬಂಗೇರ, ಶೋಭಾ ಪುತ್ರನ್, ಜಾನಕಿ ಬಿಲ್ಲವ ಕೋಟೇಶ್ವರ, ರೋಶನ್ ಕುಮಾರ್ ಶೆಟ್ಟಿ, ಅಶೋಕ್ ಸುವರ್ಣ ಮೊದಲಾದವರು ಇದ್ದರು.

  • ರಾಜ್ಯದಲ್ಲಿ ಜುಲೈ 19 ರವರೆಗೆ ಭಾರೀ ಮಳೆ: ಕರಾವಳಿ ಜಿಲ್ಲೆಗೆ ಯೆಲ್ಲೋ ಅಲರ್ಟ್

    ಬೆಂಗಳೂರು: ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಜುಲೈ 19ರವರೆಗೆ ವ್ಯಾಪಕ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕರಾವಳಿ ಜಿಲ್ಲೆಗಳಲ್ಲಿ ಜುಲೈ 19ರ ವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಜು.19ರವರೆಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಜುಲೈ 19ರವರೆಗೆ ಹಲವು ಕಡೆ ಹೆಚ್ಚಿನ ಮಳೆಯಾಗುವ ಸಾದ್ಯತೆ ಇದ್ದು, ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

    ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಜುಲೈ 14,15ರಂದು ಯೆಲ್ಲೋ ಅಲರ್ಟ್‌ ಹಾಗೂ ಜುಲೈ 16 ರಿಂದ 19ರವರೆಗೆ ಆರೆಂಜ್‌ ಅಲರ್ಟ್‌ ಘೋಷನೆ ಮಾಡಲಾಗಿದೆ. ಉತ್ತರ ಕನ್ನಡದ ಮಂಕಿ 7, ಶಿವಮೊಗ್ಗದ ಆಗುಂಬೆಯಲ್ಲಿ 5, ಕೊಪ್ಪಳದ ಮುನಿರಾಬಾದ್‌ ನಲ್ಲಿ 3 ಸೆಂ.ಮೀ ಮಳೆಯಾಗಿದೆ.‌

  • ಕಾರ್ಕಳ: ನಿರ್ಜನ ಪ್ರದೇಶದಲ್ಲಿ ಹಸುವಿನ ತಲೆ, ದೇಹದ ಭಾಗಗಳು ಪತ್ತೆ- ಪ್ರಕರಣ ದಾಖಲು

    ಕಾರ್ಕಳ, ಜುಲೈ 14, 2025: ಇತ್ತೀಚೆಗೆ ಬ್ರಹ್ಮಾವರ ಸಮೀಪದ ಕುಂಜಾಲು ಎಂಬಲ್ಲಿ ದನದ ರುಂಡ ಪತ್ತೆಯಾಗಿದ್ದು ಸಾಕಷ್ಟು ಸುದ್ದಿಯಾಗಿತ್ತು. ಇದೀಗ ಕಾರ್ಕಳ ತಾಲೂಕಿನಲ್ಲೂ ಇಂತಹದ್ದೇ ಪ್ರಕರಣ ಪುನರಾವರ್ತನೆ ಯಾಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಲೆಬೆಟ್ಟು ಎಂಬಲ್ಲಿ ಹಸುವಿನ ದೇಹದ ಭಾಗಗಳು ಪತ್ತೆಯಾಗಿವೆ.

    ಇಲ್ಲಿನ ಸ್ವರ್ಣಾ ನದಿಯಲ್ಲಿ ತೇಲಿ ಬಂದಿರುವ ಸಾಧ್ಯತೆ ಇದೆ.ಕಾರ್ಕಳ ತಾಲೂಕಿನ ಮಲೆಬೆಟ್ಟು, ದುರ್ಗಾ ಗ್ರಾಮ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಾರ್ಕಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

  • ಉಡುಪಿ: ಆರೈಕೆದಾರನಿಂದ ಹಣ ಮೋಸ; ಪ್ರಕರಣ ದಾಖಲು

    ಉಡುಪಿ, ಜುಲೈ 14, 2025: ಉಡುಪಿಯ ಅಂಬಲ್ಪಾಡಿಯ ನಿವಾಸಿ ಕಾರ್ತಿಕ್ (33) ಅವರ ತಂದೆ ವಸಂತರಾಜ್ ಅವರ ಆರೋಗ್ಯ ಚಿಕಿತ್ಸೆಗಾಗಿ 2024ರ ನವೆಂಬರ್‌ ತಿಂಗಳಿಂದ 2025ರ ಮಾರ್ಚ್‌ವರೆಗೆ ಮೇಲ್ ನರ್ಸ್ ವಿನೋದ್ ಎಂಬವರನ್ನು ನೇಮಕ ಮಾಡಲಾಗಿತ್ತು. ದಿನಾಂಕ 27/02/2025ರಂದು ವಸಂತರಾಜ್ ಅವರನ್ನು ಎಸ್‌ಡಿಎಂ ಉದ್ಯಾವರ್‌ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಆರೈಕೆಗಾಗಿ ವಿನೋದ್ ಅವರನ್ನು ನೇಮಿಸಲಾಗಿತ್ತು.

    ಆರೈಕೆಯ ಸಂದರ್ಭದಲ್ಲಿ ವಿನೋದ್ ಅವರು ಕಾರ್ತಿಕ್ ಅವರ ತಂದೆಯ ಗಮನಕ್ಕೆ ತಪ್ಪಿಸಿಕೊಂಡು, ಫೋನ್-ಪೇ ಮೂಲಕ ಒಟ್ಟು ₹68,500/-ನ್ನು ಅವರ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿದ್ದಾನೆ. ಇದರ ಬಗ್ಗೆ ವಿನೋದ್‌ರನ್ನು ವಿಚಾರಿಸಿದಾಗ, ಅವರು ಹಣ ತೆಗೆದುಕೊಂಡಿದ್ದನ್ನು ಒಪ್ಪಿಕೊಂಡಿದ್ದು, ₹12,000/-ನ್ನು ಮಾತ್ರ ಹಿಂತಿರುಗಿಸಿದ್ದಾರೆ. ಉಳಿದ ₹56,500/- ರೂಪಾಯಿಯನ್ನು ಕೊಡದೆ ಮೋಸ ಮಾಡಿರುವ ಆರೋಪದಡಿ, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 129/2025ರಡಿ, ಕಲಂ 316(2), 318(4) BNS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.