Category: Udupi District

  • ಉಡುಪಿ: ಜುಲೈ 12 ರಂದು ಉಚಿತ ಹಣ್ಣು-ಹಂಪಲಿನ ಗಿಡಗಳ ವಿತರಣೆ

    ಉಡುಪಿ, ಜುಲೈ 9, 2025: ಪ್ರಿ ಓನ್ಡ್‌ ವೆಹಿಕಲ್‌ ಅಸೋಸಿಯೇಷನ್‌ ಉಡುಪಿ ಇದರ ವತಿಯಿಂದ ಒಂದು ಸಾವಿರಕ್ಕೂ ಮಿಕ್ಕಿ ಹಣ್ಣು ಹಂಪಲಿನ ಗಿಡಗಳ ಉಚಿತ ವಿತರಣೆ ಮತ್ತು ನೆಡುವ ಕಾರ್ಯಕ್ರಮ ಜುಲೈ 12 ರ ಶನಿವಾರದಂದು ನಡೆಯಲಿದೆ.

    ಈ ಕಾರ್ಯಕ್ರಮವು ಬೆಳಿಗ್ಗೆ 10 ಗಂಟೆಗೆ ಉಡುಪಿ ಭುಜಂಗ ಪಾರ್ಕ್‌ ನ ಬಯಲು ರಂಗಮಂಟಪದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವಂತೆ ಸಂಸ್ಥೆಯ ಅಧ್ಯಕ್ಷರಾದ ಮೊಹಮ್ಮದ್ ಆಶ್ರಫ್ ವಿನಂತಿಸಿದ್ದಾರೆ.

  • ಏಕವಿನ್ಯಾಸ ನಕ್ಷೆ ಹಾಗೂ 9/11 ರ ಹೊಸ ಅಧಿಸೂಚನೆ- ಕೆಲವು ವಿನಾಯಿತಿ ಅಗತ್ಯವಿದೆ: ಕೋಟ

    ಉಡುಪಿ, ಜು.09: ಜಿಲ್ಲೆಯಲ್ಲಿ ಸಾರ್ವಜನಿಕರು ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಏಕ ವಿನ್ಯಾಸ ನಕ್ಷೆ ಹಾಗೂ ನಮೂನೆ 9/11 ರನ್ನು ಹೊಸ ಅಧಿಸೂಚನೆಯ ಪ್ರಕಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆಯಲು ಸಮಸ್ಯೆ ಉಂಟಾಗುತ್ತಿದೆ. ಕರಾವಳಿ ಜಿಲ್ಲೆಗಳಿಗೆ ಕೆಲವೊಂದು ವಿನಾಯಿತಿ ನೀಡಲು ಸರಕಾರದೊಂದಿಗೆ ಚರ್ಚಿಸಲಾಗುವುದು ಎಂದು ಉಡುಪಿ -ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಏಕ ನಿವೇಶನ ನಕ್ಷೆ ಹಾಗೂ ನಮೂನೆ 9/11 ರಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಏಕ ವಿನ್ಯಾಸ ನಕ್ಷೆ ಹಾಗೂ ನಮೂನೆ 9/11 ಅನ್ನು ಪಡೆಯಲು ಜನಸಾಮಾನ್ಯರು ಸಂಬಂಧಿಸಿದ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದರೂ ಅವುಗಳನ್ನು ಪಡೆಯಲು ವಿಳಂಬವಾಗುತ್ತಿದೆ. ತಿಂಗಳುಗಟ್ಟಲೇ ಸುತ್ತಾಡಿದರೂ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಹೊಸ ಅಧಿಸೂಚನೆಯ ಪ್ರಕಾರ ಎಲ್ಲಾ ಅರ್ಜಿಗಳನ್ನು ಅನುಮೋದನೆ ನೀಡಲೂ ಸಹ ಕಷ್ಟಸಾಧ್ಯವಾಗುತ್ತಿದೆ. ಇದಕ್ಕೆ ಸರಕಾರ ಕೆಲವೊಂದು ವಿನಾಯಿತಿಗಳನ್ನು ಕರಾವಳಿ ಜಿಲ್ಲೆಗಳಿಗೆ ವಿಶೇಷ ಪ್ರಕರಣ ಎಂದು ತಿಳಿದು ನೀಡುವ ಅಗತ್ಯವಿದೆ.

    ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಜಿಲ್ಲೆಯ ಜನಸಾಮಾನ್ಯರಿಗೆ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಏಕ ವಿನ್ಯಾಸ ನಕ್ಷೆ ಹಾಗೂ ಮತ್ತಿತರ ದಾಖಲೆಗಳನ್ನು ಪಡೆಯಲು ಆಗುತ್ತಿರುವ ತೊಂದರೆಯ ಬಗ್ಗೆ ಸರಕಾರದ ಗಮನಕ್ಕೆ ತರಲು ಜಿಲ್ಲೆಯ ಬಾಗೀಧಾರರ ಸಭೆಯನ್ನು ಕರೆದು ಅವರ ಅಹವಾಲುಗಳನ್ನು ಕೇಳಿ, ಸಮಸ್ಯೆಗಳ ಪಟ್ಟಿಯನ್ನು ಕ್ರೂಢೀಕರಣವನ್ನು ಮುಂದಿನ ಐದು ದಿನಗಳ ಒಳಗಾಗಿ ಮಾಡಬೇಕೆಂದು ಸೂಚನೆ ನೀಡಿದ ಅವರು, ಜಿಲ್ಲೆಯ ಜನತೆಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

    ಶಾಸಕ ಸುನೀಲ್ ಕುಮಾರ್ ಮಾತನಾಡಿ, ಪ್ರಾಧಿಕಾರ ಹೊಸ ಅಧಿಸೂಚನೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಒಂದು ಪಟ್ಟಿಮಾಡಿ ಕೊಡಿ. ಅದನ್ನು ಮತ್ತೊಮ್ಮೆ ಎಲ್ಲರೂ ಸೇರಿ ಅದನ್ನು ಮತ್ತೊಮ್ಮೆ ಚರ್ಚಿಸಿ ಬೆಂಗಳೂರಿನಲ್ಲಿ ಕಾರ್ಯದರ್ಶಿಗಳ ಮಟ್ಟದಲ್ಲಿ ಸಭೆ ಮಾಡಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡೋಣಾ ಎಂದರು.
    ಜನಪ್ರತಿನಿಧಿಗಳು ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಲು ಸಭೆಗಳನ್ನು ಕರೆದಾಗ ಸಭೆಯ ನಡುವಳಿಯನ್ನು ದಾಖಲಿಸಿದ್ದಲ್ಲಿ ಮುಂದಿನ ಸಭೆಗಳಲ್ಲಿ ನಡುವಳಿ ಆಧಾರದ ಮೇಲೆ ಸಭೆಯನ್ನು ಮುಂದುವರೆಸಲು ಅನುಕೂಲವಾಗುತ್ತದೆ. ಆದರೆ ಕಳೆದ ಸಭೆಯ ನಡುವಳಿಯನ್ನು ದಾಖಲಿಸದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಗ್ರಾಮಠಾಣೆಗಳು ಇಲ್ಲದೇ ಇರುವುದರಿಂದ ಸಮಸ್ಯೆಗಳು ಉದ್ಭವವಾಗುತ್ತಿವೆ ಎಂದ ಅವರು, ಲೋಕೋಪಯೋಗಿ ಇಲಾಖೆ ರಸ್ತೆಯ ಅಂಚಿನಿಂದ ಗೃಹ ನಿರ್ಮಾಣಕ್ಕೆ 6 ಮೀ. ಬಿಟ್ಟು ಏಕವಿನ್ಯಾಸ ನಕ್ಷೆಗೆ ಅನುಮೋದನೆ ನೀಡಬೇಕು. ಇದರಿಂದ ಜನರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ನಗರ ಯೋಜನಾ ಪ್ರಾಧಿಕಾರದಲ್ಲಿ ನಮ್ಮ ಕೆಲಸಗಳು ಆಗುವುದಿಲ್ಲ ಎಂದು ಜನರ ಮನಸ್ಸಿನಲ್ಲಿ ಇದೆ. ಸಲ್ಲಿಕೆಯಾಗುವ ಅರ್ಜಿಗಳಲ್ಲಿ ಕಂಡು ಬರುವ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ, ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು. ಸಭೆಯಲ್ಲಿ ಶಾಸಕರಾದ ಯಶ್‌ಪಾಲ್ ಎ ಸುವರ್ಣ ಹಾಗೂ ಗುರುರಾಜ್ ಶೆಟ್ಟಿ ಗಂಟಿಹೊಳೆ, ನಗರಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ನಗರ ಮತ್ತು ಗ್ರಾಮಾಂತರ ಇಲಾಖೆಯ ಸಹಾಯಕ ನಿರ್ದೇಶಕಿ ರಮ್ಯಾ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  • ಕಿರಿಮಂಜೇಶ್ವರ: ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಚೆಸ್ ಪ್ರತಿಭೆ; ಪ್ರಮುಖ ಬಿ. ಪೂಜಾರಿ

    ಬೈಂದೂರು, ಜುಲೈ 9, 2025: ಮಂಗಳೂರಲ್ಲಿ ರೋಯ್ಸ್ ಚೆಸ್ ಕಾರ್ನರ್ ನಡೆಸಿದ ಆಲ್ ಇಂಡಿಯಾ ರ್‍ಯಾಪಿಡ್ ಚೆಸ್ ಟೂರ್ನಮೆಂಟ್ ನಲ್ಲಿ 7ರ ವಯೋಮಾನದ ವಿಭಾಗದಲ್ಲಿ ಪ್ರಮುಖ ಬಿ. ಪೂಜಾರಿ ಪ್ರಥಮ ಲೈಟ್ನಿಂಗ್ ಚೆಸ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾನೆ. ಹಾಗೂ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಚೆಸ್ ಅಸೋಸಿಯೇಷನ್ ಅವರು ನಡೆಸಿದ ಆಲ್ ಇಂಡಿಯಾ ಕ್ಲಾಸಿಕಲ್ ಚೆಸ್ ಸ್ಪರ್ಧೆಯಲ್ಲಿ ಬೈಂದೂರು ತಾಲ್ಲೂಕಿನಲ್ಲಿ ಪ್ರಥಮವಾಗಿ ಅತಿ ಕಿರಿಯ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶ್ರೇಯಾಂಕವನ್ನು ಪಡೆದಿರುತ್ತಾನೆ. ಇವನು ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಿರಿಮಂಜೇಶ್ವರದಲ್ಲಿ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತ, ಸಿದ್ದಿವಿನಾಯಕ ಚೆಸ್ ಅಕಾಡೆಮಿ ಬೈಂದೂರು ಇಲ್ಲಿ ಚೆಸ್ ತರಬೇತಿಯನ್ನು ಪಡೆಯುತ್ತಿದ್ದಾನೆ.

    ವಿದ್ಯಾರ್ಥಿಯ ಈ ಸಾಧನೆಗೆ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ ,ಭೋದಕ/ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

  • ಪತ್ರಕರ್ತರಿಗೆ ಅಧ್ಯಯನ ಶಿಬಿರ: ಅರ್ಜಿ ಆಹ್ವಾನ

    ಉಡುಪಿ: ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ “ಪತ್ರಕರ್ತರಿಗೆ ಕನ್ನಡ ಸಾಹಿತ್ಯ” ಎಂಬ ಹೆಸರಿನಲ್ಲಿ 3 ದಿನಗಳ ಅಧ್ಯಯನ ಶಿಬಿರವನ್ನು ಆಗಸ್ಟ್ 3ನೇ ವಾರ ಅಥವಾ ಕೊನೆಯ ವಾರದಲ್ಲಿ ನಡೆಸಲು ಉದ್ದೇಶಿಸಿದ್ದು, 20 ರಿಂದ 40 ವರ್ಷ ದೊಳಗಿನ, ಈಗಾಗಲೇ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವವರು, ಪತ್ರಿಕೋದ್ಯಮ ಪದವಿ ಪಡೆದವರು ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಹುದಾಗಿದೆ.

    ಅರ್ಜಿ ಸಲ್ಲಿಸಲು ಜುಲೈ 25 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‌ಸೈಟ್ https://sahithyaacademy.karnataka.gov.in ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕುಂದಾಪುರ ಪುರಸಭೆ ವಿಶೇಷ ಸಾಮಾನ್ಯ ಸಭೆ: ಯುಜಿಡಿ, ಪಾರ್ಕಿಂಗ್‌, ಜಲಸಿರಿ ಸಮಸ್ಯೆ ಬಗ್ಗೆ ಚರ್ಚೆ

    ಕುಂದಾಪುರ, ಜುಲೈ 9, 2025: ಯುಜಿಡಿ ಯೋಜನೆಯ ಬಾಕಿ ಉಳಿದ ಕಾಮಗಾರಿಗೆ ಒಂದು ಸ್ಪಷ್ಟ ಯೋಜನೆ ರೂಪಿಸಿ, ಏಕಕಾಲಕ್ಕೆ ಅದನ್ನು ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕ ಕಿರಣ್ ಕುಮಾರ ಕೊಡ್ಗಿ ಒತ್ತಾಯಿಸಿದರು. ಅವರು ಮಂಗಳವಾರ ಕುಂದಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

    ಶಾಸಕ ಕೊಡ್ಗಿ ತಿಳಿಸಿದಂತೆ, ಸರಿಯಾದ ಯೋಜನೆ ಇಲ್ಲದೆ ಯುಜಿಡಿ ಪೂರ್ಣಗೊಳ್ಳುತ್ತಿಲ್ಲ. ಈಗಾಗಲೇ ಯೋಜನೆಗೆ 33 ಕೋಟಿ ರೂಪಾಯಿ ವೆಚ್ಚವಾಗಿದ್ದು, 13 ಕೋಟಿ ರೂಪಾಯಿ ಉಳಿದಿದೆ. ಆದರೆ ಯೋಜನೆ ಮುಗಿಸಲು ಇನ್ನೂ 33 ಕೋಟಿ ಬೇಕಾಗುತ್ತದೆ. ಉಳಿದ ಹಣದಲ್ಲಿ ಸೀಮಿತ ಕಾಮಗಾರಿ ಮಾತ್ರ ಮಾಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.

    ಸದಸ್ಯ ಗಿರೀಶ್ ಜಿ.ಕೆ. ಆಶ್ಚರ್ಯ ವ್ಯಕ್ತಪಡಿಸಿ, ಯುಜಿಡಿ ಯೋಜನೆಯಲ್ಲಿ ಈಗಾಗಲೇ ಸಂಭವಿಸಿರುವ ತಪ್ಪುಗಳು ಮುಂದೆ ತಪ್ಪಿಸಬೇಕು. ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಇಲಾಖೆಯ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳು ಸಹಕರಿಸಬೇಕು ಎಂದರು. ಸದಸ್ಯ ಶ್ರೀಧರ ಶೇರೆಗಾರ್ ಯೋಜನೆಯನ್ನು “ಬಿಳಿ ಆನೆ” ಎಂದು ಟೀಕಿಸಿದರು ಮತ್ತು ಇದುವರೆಗೆ ಎಂಜಿನಿಯರ್‌ಗಳ ವಿವಿಧ ಕಥೆಗಳನ್ನು ಕೇಳುವುದಕ್ಕೆ ತಿಳಿಯಾಗಿದೆ. ಈಗ ಯೋಜನೆ ಪೂರ್ಣಗೊಳ್ಳಬೇಕು ಎಂದು ಒತ್ತಾಯಿಸಿದರು. ಚಂದ್ರಶೇಖರ ಖಾರ್ವಿ ಈ ಆರೋಪಕ್ಕೆ ಬೆಂಬಲ ನೀಡಿದರು.

    ಹುಂಚಾರಬೆಟ್ಟುವಿನಲ್ಲಿ ಯುಜಿಡಿ ಯೋಜನೆಯಡಿ ಎಸ್‌ಟಿಪಿ ಸ್ಥಾಪನೆಗೆ ಸದಸ್ಯ ಶೇಖರ ಪೂಜಾರಿ ವಿರೋಧ ವ್ಯಕ್ತಪಡಿಸಿದರು. ಗ್ರಾಮಸ್ಥರು ಈಗಾಗಲೇ ಪ್ರತಿಭಟನೆ ಮತ್ತು ಮನವಿ ಸಲ್ಲಿಸಿದ್ದು, ಅಧಿಕಾರಿಗಳು ಇದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಸದಸ್ಯೆ ಆಶ್ವಿನಿ ಪ್ರದೀಪ್ ಯುಜಿಡಿ ಕಾರಣದಿಂದ ಕುಂದಾಪುರದ ರಸ್ತೆಗಳು ನಾಶವಾಗಿವೆ ಎಂದು ಆರೋಪಿಸಿದರು. ವೆಂಕಟರಮಣ ಶಾಲೆ ರಸ್ತೆಯ ದುರಸ್ತಿಗೆ ಕಳೆದ 3 ವರ್ಷಗಳಿಂದ ಮನವಿ ಮಾಡಿದರೂ ಸ್ಪಂದನೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಜಲಸಿರಿ ಯೋಜನೆಯಡಿ 24 ಗಂಟೆ ನೀರು ಪೂರೈಕೆ ಭರವಸೆಗೆ ಎದುರಾಗಿ ಕೆಲವು ವಾರ್ಡ್‌ಗಳಲ್ಲಿ ನೀರು ಸರಿಯಾಗಿ ಇಲ್ಲ ಎಂದು ಚಂದ್ರಶೇಖರ ಖಾರ್ವಿ ಆರೋಪಿಸಿದರು. ಅಧಿಕಾರಿಗಳು ದೂರಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು. ಶಾಸಕ ಕೊಡ್ಗಿ ಪ್ರತಿಕ್ರಿಯಿಸಿ, ಕುಡಿಯುವ ನೀರಿನ ಸರಬರಾಜುಗೆ ಪುರಸಭೆಯಲ್ಲಿ ಮೊದಲ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಗಿರೀಶ್ ಜಿ.ಕೆ., ಸಂತೋಷ್ ಶೆಟ್ಟಿ ರಾಘವೇಂದ್ರ ಖಾರ್ವಿ ಜಲಸಿರಿ ಯೋಜನೆಯ ತೀವ್ರತರ ನ್ಯೂನತೆಗಳನ್ನು ಎತ್ತಿ ತೋರಿಸಿದರು.

    ಪಾರ್ಕಿಂಗ್ ಸಮಸ್ಯೆಗೆ ಒಮ್ಮತ:
    ಕುಂದಾಪುರದ ಪಾರ್ಕಿಂಗ್ ಸಮಸ್ಯೆ ಪರಿಹಾರಕ್ಕೆ ಶಾಸಕ ಕೊಡ್ಗಿ ಒಮ್ಮತದ ನಿರ್ಣಯ ಕರೆ ನೀಡಿದರು. ಫ್ಲೈಓವರ್‌ನಡಿ ದ್ವಿಚಕ್ರ ವಾಹನ ನಿಲುಗಡೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮತಿ ನೀಡದ ಕಾರಣ, 250ಕ್ಕೂ ಅಧಿಕ ಬೈಕ್‌ಗಳನ್ನು ನಿಲ್ಲಿಸಬಹುದಾದ ಸ್ಥಳವನ್ನು ಗುರುತಿಸಿ ಚರ್ಚಿಸಬೇಕು ಎಂದು ಸಲಹೆ ನೀಡಿದರು. ಶ್ರೀಧರ ಶೇರೆಗಾರ್ ಫ್ಲೈಓವರ್ ಸುಂದರೀಕರಣಕ್ಕೆ ಲಯನ್ಸ್ ಸಂಸ್ಥೆ 45 ಲಕ್ಷ ರೂ. ಖರ್ಚು ಮಾಡಿದ್ದು, ಪುರಸಭೆಗೆ ಆದಾಯ ತಂದಿದೆ ಎಂದರು. ಶಾಸಕ ಕೊಡ್ಗಿ ವಾಹನ ನಿಲುಗಡೆಗೆ ಅವಕಾಶ ಸಿಕ್ಕರೆ ಆದಾಯ ಹೆಚ್ಚುತ್ತದೆ ಎಂದು ತಿಳಿಸಿದರು.

    ಪಾರ್ಕಿಂಗ್‌ಗೆ ಮಾರ್ಕಿಂಗ್ ಮಾಡುವ ನಿರ್ಣಯ ಮೇ ಸಭೆಯಲ್ಲಿ ಆಗಿದ್ದರೂ, ಇಲಾಖೆಗೆ ಕೊರಿಯರ್ ನಿನ್ನೆಯಷ್ಟೇ ತಲುಪಿದೆ ಎಂದು ಸಂಚಾರ ಠಾಣೆ ಎಸ್‌ಐ ನೂತನ್ ತಿಳಿಸಿದರು. ಇದಕ್ಕೆ ಎಸ್‌ಪಿ ಮತ್ತು ಡಿಸಿ ಮೂಲಕ ಗಜೆಟ್ ನೋಟಿಫಿಕೇಶನ್ ಬೇಕು ಎಂದು ವಿವರಿಸಿದರು. ಗಿರೀಶ್ ಜಿ.ಕೆ. 2022ರಿಂದ ಚರ್ಚೆಯಾಗಿದ್ದರೂ ಮೂರು ಡಿವೈಎಸ್‌ಪಿಗಳು ಬದಲಾದರೂ ಯೋಜನೆ ಜಾರಿಯಾಗಿಲ್ಲ ಎಂದು ಆರೋಪಿಸಿದರು. ಭಂಡಾರ್‌ಕಾರ್ಸ್ ಕಾಲೇಜು ರಸ್ತೆಯ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಬೇಕು ಎಂದು ರೋಹಿಣಿ ಉದಯ್ ಕುಮಾರ್ ಒತ್ತಾಯಿಸಿದರು. ಬಸ್ರೂರು, ಹಾಲಾಡಿ ಕೋಟೇಶ್ವರ ಸೇರಿದಂತೆ ದಂಡ ವಿಧಿಸಲು ಫಲಕ ಅಳವಡಿಸಲಾಗುವುದು ಎಂದು ಎಸ್‌ಐ ತಿಳಿಸಿದರು. ಸಂಚಾರ ಸೂಚನಾ ಫಲಕಗಳಿಗೆ ಅನುದಾನ ಮಂಗೆ ಮನವಿ ಮಾಡಲಾಯಿತು.

    ಸಭೆಯ ಅಧ್ಯಕ್ಷತೆಯನ್ನು ಪುರಸಭೆ ಅಧ್ಯಕ್ಷೆ ಕೆ.ಮೋಹನದಾಸ ಶೆಣೈ ವಹಿಸಿದ್ದರು. ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಪ್ರಭಾಕರ್, ಮುಖ್ಯಾಧಿಕಾರಿ ಆನಂದ್ ಉಪಸ್ಥಿತರಿದ್ದರು.

  • ಉಡುಪಿ ಜಿಲ್ಲಾದ್ಯಂತ ಕಾರ್ಮಿಕರಿಂದ ಸಾರ್ವತ್ರಿಕ ಮುಷ್ಕರ: ವಿವಿಧೆಡೆ ಪ್ರತಿಭಟನೆ

    ಉಡುಪಿ, ಜುಲೈ 9, 2025: ಕೇಂದ್ರ ಸರಕಾರ ನಾಲ್ಕು ಕಾರ್ಮಿಕ ಸಂಹಿತೆಗಳ ಜಾರಿ ಮಾಡದಂತೆ ಆಗ್ರಹಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ಉಡುಪಿ ಜಿಲ್ಲೆ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ವಿವಿಧ ಕಾರ್ಮಿಕರು ಬುಧವಾರ ಮುಷ್ಕರ ನಡೆಸಿದರು.

    ಕೇಂದ್ರ ಹಾಗೂ ರಾಜ್ಯ ಸರಕಾರದ ನೀತಿಗಳನ್ನು ವಿರೋಧಿಸಿ ಕಟ್ಟಡ, ಅಂಗನವಾಡಿ, ಬಿಸಿಯೂಟ, ಹೆಂಚು, ಬೀಡಿ, ಕೆಲವು ಫ್ಯಾಕ್ಟರಿಗಳ ಕಾರ್ಮಿಕರು, ಬ್ಯಾಂಕ್, ವಿಮಾ ಹಾಗೂ ಅಂಚೆ ನೌಕರರು ಕೆಲಸಕ್ಕೆ ಹೋಗದೆ ಮುಷ್ಕರ ನಡೆಸಿ, ಜೆಸಿಟಿಯ ನೇತೃತ್ವದಲ್ಲಿ ಉಡುಪಿ, ಕುಂದಾಪುರ ಹಾಗೂ ಬೈಂದೂರಿನಲ್ಲಿ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

    ಉಡುಪಿಯ ಹಳೆಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಇರುವ ಸಿಐಟಿಯು ಕಚೇರಿಯಿಂದ ಪ್ರಧಾನ ಅಂಚೆ ಕಚೇರಿಯವರೆಗೆ ಕಾರ್ಮಿಕರು ಮೆರವಣಿಗೆ ನಡೆಸಿದರು. ಬಳಿಕ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಹಲವು ವರ್ಷಗಳ ಕಾಲ ಹೋರಾಟ ಮಾಡಿ ಪಡೆದ 44 ಕಾರ್ಮಿಕ ಕಾನೂನುಗಳ ಪೈಕಿ 15 ಕಾನೂನುಗಳನ್ನು ಕೇಂದ್ರ ಸರಕಾರ ರದ್ದು ಮಾಡಿದೆ. ಉಳಿದ 29 ಕಾನೂನುಗಳನ್ನು ನಾಲ್ಕು ಸಂಹಿತೆಯನ್ನಾಗಿ ಮಾಡುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳ ಲಾಗಿದೆ. ಆದುದರಿಂದ ಇದು ಕಾರ್ಮಿಕರ ಅಳಿವು ಉಳಿವಿನ ಹೋರಾಟವಾಗಿದೆ ಎಂದರು.

    ಉಡುಪಿ ಜಿಲ್ಲೆಯಲ್ಲಿ ಕೆಂಪುಕಲ್ಲು, ಶಿಲೆ/ಪಾದೆಕಲ್ಲು ಹಾಗೂ ಮರಳಿನ ಕೊರತೆ ಎದುರಾಗಿದೆ. ಇದರಿಂದ ಕಾರ್ಮಿಕರಿಗೆ ಕೆಲಸವಿಲ್ಲದೆ ತೊಂದರೆ ಉಂಟಾಗಿದೆ. ಮನೆ ಕಟ್ಟುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಸೂಕ್ತ ಗಮನ ನೀಡಬೇಕೆಂದು ಅವರು ಆಗ್ರಹಿಸಿದರು.

    ಪ್ರತಿಭಟನೆಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಕವಿರಾಜ್ ಎಸ್. ಕಾಂಚನ್, ಎಐಐಇಎ ಮುಖಂಡ ಕೆ.ವಿಶ್ವನಾಥ್, ಎಐಟಿಯುಸಿ ಮುಖಂಡ ಯು.ಶಿವಾನಂದ, ಸಿಐಟಿಯು ಮುಖಂಡರಾದ ಉಮೇಶ್ ಕುಂದರ್, ಶಶಿಧರ್ ಗೊಲ್ಲ, ಸುನೀತಾ ಶೆಟ್ಟಿ, ರಾಮ ಕಾರ್ಕಡ, ಇಂಟಕ್ ಮುಖಂಡ ಕಿರಣ್ ಹೆಗ್ಡೆ, ಎಐಬಿಇಎ ನಾಗೇಶ್ ನಾಯಕ್, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಭಾರತಿ, ಪ್ರಧಾನ ಕಾರ್ಯದರ್ಶಿ ಸುಶೀಲಾ ನಾಡ, ಖಜಾಂಚಿ ಯಶೋಧಾ, ಉಪಾಧ್ಯಕ್ಷೆ ಪ್ರೇಮಾ ಮೊದಲಾದವರು ಉಪಸ್ಥಿತರಿದ್ದರು.

  • ಉಡುಪಿ: ನರೇಗಾ ಕಾರ್ಮಿಕರಿಗೆ ತಿಂಗಳುಗಳಿಂದ ಸಿಗದ ವೇತನ; ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ

    ಉಡುಪಿ, ಜುಲೈ 9, 2025: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (NREGA) ಯೋಜನೆಯಡಿ ಕಾಂಟ್ರಾಕ್ಟ್ ಆಧಾರಿತ ಕಾರ್ಮಿಕರಿಗೆ ಕಳೆದ ಐದರಿಂದ ಆರು ತಿಂಗಳಿಂದ ಸಂಬಳ ದೊರಕಿಲ್ಲ. ಇದರಿಂದಾಗಿ ಯೋಜನಾ ಚಟುವಟಿಕೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡವು ಮತ್ತು ಬಾಧಿತ ನೌಕರರು ಅಸಹಕಾರ ಪ್ರತಿಭಟನೆ ಆರಂಭಿಸಿದ್ದಾರೆ.

    ಈ ಸಮಸ್ಯೆಯು ಸ್ಥಳೀಯ ಮತ್ತು ರಾಜ್ಯ ಅಧಿಕಾರಿಗಳು ಪರಿಹರಿಸಲು ಸಾಧ್ಯವಾಗದ ತಾಂತ್ರಿಕ ದೋಷದಿಂದ ಈ ಸಮಸ್ಯೆ ಉದ್ಭವಿಸಿದೆ. ಇದರಿಂದ ಉಡುಪಿ ಜಿಲ್ಲೆಯ ಸುಮಾರು 40 ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 65 ಕಾರ್ಮಿಕರು ಸೇರಿದಂತೆ ರಾಜ್ಯಾದ್ಯಂತ ಸುಮಾರು 3,500 ಸಿಬ್ಬಂದಿಗಳು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಇವರಲ್ಲಿ ಜಿಲ್ಲಾ ಮಟ್ಟದಲ್ಲಿ ಎಡಿಪಿಸಿ, ಡಿಎಂಐಎಸ್, ಡಿಐಇಸಿ, ಖಾತೆ ನಿರ್ವಾಹಕರು ಮತ್ತು ತಾಲೂಕು ಮಟ್ಟದಲ್ಲಿ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಟಿಎಂಐಎಸ್, ಟಿಐಇಸಿ, ಆಡಳಿತ ಸಹಾಯಕರು, ಬಿಎಫ್‌ಟಿಗಳು, ಎನ್‌ಆರ್‌ಇಜಿಎ ಡೇಟಾ ಎಂಟ್ರಿ ಆಪರೇಟರ್‌ಗಳು ಮತ್ತು ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಕಾಯಕ ಮಿತ್ರರು ಸೇರಿದ್ದಾರೆ.

    ಸ್ಥಳೀಯ ಮತ್ತು ರಾಜ್ಯ ಪ್ರಾಧಿಕಾರಗಳಿಗೆ ಸಂಬಳ ವಿತರಣೆಗೆ ಪದೇ ಪದೇ ಮನವಿ ಮಾಡಿದರೂ ಯಾವುದೇ ಕಠಿಣ ಕ್ರಮ ಕೈಗೊಳ್ಳಲಾಗಿಲ್ಲ. ಕರ್ನಾಟಕ ಎನ್‌ಆರ್‌ಇಜಿಎ ಕಾರ್ಮಿಕರ ಕಲ್ಯಾಣ ಸಂಘದ ನಿರ್ಧಾರದ ಪ್ರಕಾರ, ಕಾರ್ಮಿಕರು ಈಗ ಗೈರಸಾಧಾರಣ ಚಳವಳಿ ಆರಂಭಿಸಿದ್ದು, ಬಾಕಿ ಉಳಿದ ಸಂಬಳ ತೀರಿಸುವವರೆಗೆ ಕರ್ತವ್ಯಕ್ಕೆ ಹಿಂತಿರುಗದ ತೀರ್ಮಾನ ಮಾಡಿದ್ದಾರೆ.

    ರಾಜ್ಯಾದ್ಯಂತ NAREGA ಕಾರ್ಯಾಚರಣೆಯು ಸ್ಥಗಿತಗೊಂಡಿದೆ. ವೈಯಕ್ತಿಕ ಮತ್ತು ಸಮುದಾಯ ಆಧಾರಿತ ಎನ್‌ಆರ್‌ಇಜಿಎ ಕಾಮಗಾರಿಗಳು ಈ ಕಾರ್ಮಿಕರ ಸಹಾಯದ ಮೇಲೆ ಅವಲಂಬಿತವಾಗಿದ್ದು, ಅವರ ಅನುಪಸ್ಥಿತಿಯಿಂದ ಯೋಜನೆಯ ಪ್ರಗತಿ ಸಂಪೂರ್ಣವಾಗಿ ನಿಂತಿದೆ. ಮೂಲಗಳ ಪ್ರಕಾರ, ಒಕ್ಕೂಟ ದಕ್ಷಿಣ ಕನ್ನಡ ಮತ್ತು ಇತರ ಜಿಲ್ಲೆಗಳಲ್ಲಿ ಎನ್‌ಆರ್‌ಇಜಿಎ ಅನುಷ್ಠಾನ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

    ಈ ಸಂಕಷ್ಟ 2024ರ ಡಿಸೆಂಬರ್ ನಂತರ ಕೇಂದ್ರ ಸರ್ಕಾರವು ಸಂಬಳ ವಿತರಣಾ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಜಾರಿಗೆ ತಂದಾಗ ಪ್ರಾರಂಭವಾಯಿತು. ‘ಸ್ಪರ್ಶ’ ಎಂಬ ಹೊಸ ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್ ಅನ್ನು ಪರಿಚಯಿಸಲಾಗಿತ್ತು, ಇದು ಖಜಾನಾ ಸಾಫ್ಟ್‌ವೇರ್ ಮತ್ತು ಎಂಜಿಎನ್‌ಆರ್‌ಇಜಿಎ ವೆಬ್‌ಸೈಟ್‌ನೊಂದಿಗೆ ‘ಎಸ್‌ಎನ್‌ಎ ಸ್ಪರ್ಶ’ ವ್ಯವಸ್ಥೆಯಡಿಯಲ್ಲಿ ಸಂಬಳ ಪಾವತಿಗೆ ಸಹಾಯ ಮಾಡುತ್ತದೆ. ಆದರೆ, ರಾಜ್ಯ ಮಟ್ಟದಲ್ಲಿ ಈ ಎರಡು ವ್ಯವಸ್ಥೆಗಳ ನಡುವೆ ತಾಂತ್ರಿಕ ಅಸಂಗತಿಯಿಂದಾಗಿ ಪಾವತಿಗಳು ತಡೆಗೊಂಡಿವೆ, ಇದಕ್ಕೆ ಕೇಂದ್ರ ಸರ್ಕಾರ ಅಗತ್ಯ ನಿಧಿಯನ್ನು ಬಿಡುಗಡೆ ಮಾಡಿದ್ದರೂ.

    ಕಾರ್ಮಿಕರ ಆಕ್ರೋಶಕ್ಕೆ ಸಿಹಿ, ಬೆಂಗಳೂರಿನ ಕೇಂದ್ರ ಕಚೇರಿಯ ಒಪ್ಪಂದ ಕಾರ್ಮಿಕರು ಹಳೆಯ ವ್ಯವಸ್ಥೆಯಡಿಯಲ್ಲಿ ಸಂಬಳ ಪಡೆದಿದ್ದಾರೆ ಎಂಬ ವರದಿಗಳು ಸೇರಿವೆ. ಆದ್ದರಿಂದ, ಪ್ರತಿಭಟನಾಕಾರರು ಹೊಸ ಸಾಫ್ಟ್‌ವೇರ್ ಸರಿಯಾಗಿ ಕಾರ್ಯನಿರ್ವಹಿಸುವವರೆಗೆ ಸರ್ಕಾರವು ಹಿಂದಿನ ಪಾವತಿ ವ್ಯವಸ್ಥೆಗೆ ಮರಳಬೇಕೆಂದು ಒತ್ತಾಯಿಸುತ್ತಿದ್ದಾರೆ.

  • ಬೈಂದೂರು: ದನ ಸಾಗಾಟ ಮಾಡುತ್ತಿದ್ದ ಕಾರು ವಶ

    ಬೈಂದೂರು, ಜೂಲೈ 9, 2025: ಕಾರಿನಲ್ಲಿ ಹಿಂಸಾತ್ಮಕವಾಗಿ ದನ ಸಾಗಾಟ ಮಾಡುತ್ತಿದ್ದ ವಾಹನವನ್ನು ಬೈಂದೂರು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.ಇಲ್ಲಿನ ಒತ್ತಿನೆಣೆ ಬಳಿ ಮುಂಜಾನೆ ವಾಹನ ತಪಾಸಣೆ ಮಾಡುವ ವೇಳೆ ಬ್ರಿಜಾ ಕಾರಿನ ಡಿಕ್ಕಿಯಲ್ಲಿ ನಾಲ್ಕು ದನಗಳನ್ನು ಸಾಗಿಸುತ್ತಿದ್ದು ಪೊಲೀಸರನ್ನು ನೋಡುತ್ತಿದ್ದಂತೆ ಆರೋಪಿಗಳು ಕಾರು ಬಿಟ್ಟು ಪರಾರಿಯಾಗಿದ್ದಾರೆ.ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಉಡುಪಿ: ಜಿಲ್ಲಾಧಿಕಾರಿಗಳಿಂದ ಕೋಡಿ ಕನ್ಯಾನ ಹೊಳೆ ಮತ್ತು ನಾಡಕಚೇರಿ ಕಾಮಗಾರಿ ಪರಿಶೀಲನೆ

    ಉಡುಪಿ, ಜುಲೈ 8, 2025: ಕುಂದಾಪುರ: ರಾಜ್ಯ ಸರಕಾರದ ಬಜೆಟ್‌ನಲ್ಲಿ ಮುಖ್ಯಮಂತ್ರಿ ಗಳು ಘೋಷಿಸಿದಂತೆ ಸಮುದ್ರತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಿದ್ಧತೆಗಳಾಗುತ್ತಿವೆ. ಆದರೆ ಈಗಾಗಲೇ ಪ್ರವಾಸೋದ್ಯಮ ಪೂರಕ ಚಟುವಟಿಕೆ ನೀಡುತ್ತಿರುವವರು ತಮಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಯಾರಿಗೂ ಸಮಸ್ಯೆ ಆಗದಂತೆ ಮುತುವರ್ಜಿ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪಾ ಹೇಳಿದರು.

    ಹೊಸದಾಗಿ ಪ್ರವಾಸೋದ್ಯಮ ಚಟುವಟಿಕೆ ಹಮ್ಮಿಕೊಳ್ಳುವುದರಿಂದ ಈಗಾಗಲೇ ನಿರ್ವಹಿಸುತ್ತಿರುವವರಿಗೆ ತೊಂದರೆ ಕೊಡುವ ಉದ್ದೇಶ ಇಲ್ಲ. ಪ್ರವಾಸ ಪೂರಕ ಚಟುವಟಿಕೆಗಳು ನಡೆದಷ್ಟೂ ಸ್ಥಳೀಯರ ಆದಾಯ ಹೆಚ್ಚಾಗುತ್ತದೆ. ಚಟುವಟಿಕೆಗಳಿಗೆ ಊರು ತೆರೆದುಕೊಳ್ಳುತ್ತದೆ. ಬೇರೆ ಬೇರೆ ಊರುಗಳಿಂದ ಜನ ಆಗಮಿಸುತ್ತಾರೆ. ಡಿಜಿಟಲ್ ಸಾಧನ, ಮಾಧ್ಯಮದ ಮೂಲಕ ತಿಳಿದುಕೊಳ್ಳುತ್ತಾರೆ.

    ಆಗ ಸೌಕರ್ಯಗಳು ಚೆನ್ನಾಗಿದ್ದಷ್ಟು ಅದಕ್ಕೆ ಮಹತ್ವ ಬರುತ್ತದೆ. ಈಗಾಗಲೇ ಇಲ್ಲಿ ಬೋಟಿಂಗ್, ಕಯಾಕಿಂಗ್, ಡಾಲ್ಟಿನ್ ವೀಕ್ಷಣೆ ಇತ್ಯಾದಿ ನಡೆಯುತ್ತಿದೆ. ಅದರ ಜತೆಗೆ ವಾಟರ್ ಗೇಮ್ಸ್ ಮೊದಲಾದ ಚಟುವಟಿಕೆ ಹಮ್ಮಿಕೊಳ್ಳಲಾಗುವುದು ಎಂದರು.

    ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಿಧೀಶ್ ಕೆ.ಜೆ., ಅಧಿಕಾರಿ ಭವಿಷ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಕಂದಾಯ ನಿರೀಕ್ಷಕ ದಿನೇಶ್ ಮೊದಲಾದವರು ಇದ್ದರು.

  • ಬಿಜೆಪಿ ಬೈಂದೂರು ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ಕರಣ್ ಪೂಜಾರಿ ನೇಮಕ

    ಬೈಂದೂರು, ಜುಲೈ 8, 2025: ಭಾರತೀಯ ಜನತಾ ಪಕ್ಷ ಬೈಂದೂರು ಮಂಡಲದ ನೂತನ ಕಾರ್ಯದರ್ಶಿಯಾಗಿ ಕರಣ್ ಪೂಜಾರಿ ತಲ್ಲೂರು ನೇಮಕಗೊಂಡಿದ್ದಾರೆ.

    ಇವರನ್ನು ನೇಮಕ ಮಾಡಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ತಿಳಿಸಿದ್ದಾರೆ.