Category: Udupi District

  • ಕುಂದಾಪುರ: ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ

    ಕುಂದಾಪುರ, ಜೂ.30: ಸರಕಾರದ ಪಂಚಗ್ಯಾರಂಟಿ ಯೋಜನೆಯಲ್ಲಿ ಕುಂದಾಪುರ ತಾಲೂಕಿಗೆ ಮೇ ತಿಂಗಳಲ್ಲಿ ಗೃಹಲಕ್ಷ್ಮೀ ಯೋಜನೆಗೆ ರೂ.20,17,94,000, ಗೃಹಜ್ಯೋತಿ-4,22,05,681, ಅನ್ನಭಾಗ್ಯ-2,39,40,000, ಶಕ್ತಿಯೋಜನೆ-2,72,13,212, ಒಟ್ಟು ರೂ.29,51,52,893 ಲಭಿಸಿದೆ. ಈ ತನಕ ಒಟ್ಟು ರೂ. 373,51,12,371 ಕುಂದಾಪುರ ತಾಲೂಕಿಗೆ ಬಂದಿದೆ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಹೆಚ್.ಹರಿಪ್ರಸಾದ್ ಶೆಟ್ಟಿ ತಿಳಿಸಿದರು.

    ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಪಂಚಗ್ಯಾರಂಟಿ ಯೋಜನೆ ಕುಂದಾಪುರ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ತಾಲೂಕು ಮಟ್ಟದಲ್ಲಿ ಶಿಬಿರ ನಡೆಸಲು ಸರಕಾರದಿಂದ ಸೂಚನೆ ನೀಡಲಾಗಿದೆ. ಪಂಚಗ್ಯಾರಂಟಿ ಯೋಜನೆಯ ಫಲಾನುಭವಿಗಳ ಶಿಬಿರ, ಸಂವಾದ ಸಾಧಕ ಬಾಧಕಗಳ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ಜು 4ರಂದು ಯೋಜನೆಯ ರಾಜ್ಯ ಉಪಾಧ್ಯಕ್ಷೆ ಪುಷ್ಪ ಅವರು ಜಿಲ್ಲೆಗೆ ಆಗಮಿಸಲಿದ್ದು ಒಂದು ತಾಲೂಕಿನ ಪ್ರಗತಿಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

    ಸರಕಾರಿ ಬಸ್ ಸಮಸ್ಯೆ:

    ಅಮಾಸೆಬೈಲು ಜಡ್ಡಿನಗದ್ದೆ ಕೆಳಾಸುಂಕ ಮಾರ್ಗದಲ್ಲಿ ಸಂಚರಿಸುವ ಬಸ್‍ಗಳು ನಿಗದಿತ ಸಮಯಕ್ಕೆ ಸರಿಯಾಗಿ ಸಂಚಾರ ಮಾಡಬೇಕು. ಎರಡು ಬಸ್‍ಗಳು ಸಂಚಾರ ಮಾಡಲೆಬೇಕು. ಸಮಯದ ಬದಲಾವಣೆ ಮಾಡುತ್ತಾ ಇದ್ದರೆ ನಿತ್ಯ ಪ್ರಯಾಣಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ ಎಂದು ಸಮಿತಿ ಸದಸ್ಯ ವಸುಂಧರ ಹೆಗ್ಡೆ ಹೇಳಿದರು.

    ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಉತ್ತರಿಸಿ ಈಗಾಗಲೇ ಜಡ್ಡಿನಗದ್ದೆ ಕೆಳಾಸುಂಕ ಬಸ್ ಸಂಚಾರ ಆರಂಬಿಸಿದೆ. ಬಡಾಕೆರೆ, ಕೊಲ್ಲೂರು-ಬೈಂದೂರು ಬಸ್ ಗಳಿಗೆ ಪರವಾನಿಗೆ ಆಗಿದೆ. ಇನ್ನೂ ಸಮಯ ನಿಗದಿಯಾಗಿಲ್ಲ ಎಂದರು.
    ಇತ್ತೀಚೆಗೆ ಸಾರಿಗೆ ಸಚಿವರು ಕೋಟೇಶ್ವರಕ್ಕೆ ಬಂದಾಗ ಶಂಕರನಾರಾಯಣ ಕಾಲೇಜು ವಿದ್ಯಾರ್ಥಿಗಳು ಕೊಲ್ಲೂರು-ವಂಡ್ಸೆ-ಅಂಪಾರು-ಶಂಕರನಾರಾಯಣ ಮಾರ್ಗದಲ್ಲಿ ಬಸ್ ಸೌಲಭ್ಯದ ಬಗ್ಗೆ ಮನವಿ ಮಾಡಿದ್ದರು. ಆಗ ಸಚಿವರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗೆ ಈ ಬಗ್ಗೆ ಕ್ರಮ ವಹಿಸುವಂತೆ ಸೂಚಿಸಿದ್ದರು. ಅದು ಏನಾಯಿತು? ಎಂದು ಸಮಿತಿ ಅಧ್ಯಕ್ಷರಾದ ಹೆಚ್.ಹರಿಪ್ರಸಾದ್ ಶೆಟ್ಟಿ ಪ್ರಶ್ನಿಸಿದರು.

    ಈ ಬಗ್ಗೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸಮೀಕ್ಷೆ, ಸಮಯ ನಿಗಧಿಯಾದ ತಕ್ಷಣ ಪರವಾನಿಗೆ ಲಭಿಸುತ್ತದೆ. ಕೊಲ್ಲೂರಿಗೆ ಬಸ್ ಬೇಡಿಕೆಯೂ ಇದೆ ಎಂದರು. ಈಗಾಗಲೆ ಚಾಲಕರ ನೇಮಕಾತಿಯಲ್ಲಿ ಕುಂದಾಪುರಕ್ಕೆ 60 ಜನರನ್ನು ನೀಡಿದ್ದಾರೆ. ತರಬೇತಿ ಬಳಿಕ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುತ್ತಾರೆ ಎಂದರು.
    ಕುಂದಾಪುರದ ಶಾಸ್ತ್ರೀ ಸರ್ಕಲ್ ಹತ್ತಿರ ಸರ್ವೀಸ್ ರಸ್ತೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲುಗಡೆಗೆ ಅವಕಾಶ ಬೇಕು ಸದಸ್ಯೆ ಆಶಾ ಕರ್ವೇಲ್ಲೋ ತಿಳಿಸಿದರು. ಉತ್ತರಿಸಿದ ಕುಂದಾಪುರ ಘಟಕದ ಅಧಿಕಾರಿ ಈಗಾಗಲೇ ಆರ್.ಎನ್.ಶೆಟ್ಟಿ ಹಾಲ್ ಹತ್ತಿರ ನಿಲುಗಡೆ ಮಾಡಲಾಗುತ್ತದೆ ಎಂದರು.

    ಇದಕ್ಕೆ ಪ್ರತಿಸ್ಪಂದಿಸಿ ಮಾತನಾಡಿದ ಸಮಿತಿ ಅಧ್ಯಕ್ಷರಾದ ಹೆಚ್.ಹರಿಪ್ರಸಾದ್ ಶೆಟ್ಟಿ ಇಲ್ಲಿ ತಾತ್ಕಾಲಿಕ ನಿಲಗಡೆ ಮಾಡಲು ಸಭೆ ನಿರ್ಣಯ ಮಾಡಿ, ಸಂಚಾರ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ಮಾಡೋಣ. ಸಂಚಾರ ಸಮಸ್ಯೆಯಾಗುತ್ತದೆ. ಏನಾದರೂ ಪರಿಹಾರ ಕಂಡುಕೊಳ್ಳೋಣ ಎಂದರು.
    ಸದಸ್ಯ ಗಣೇಶ್ ಮಾತನಾಡಿ ಕೆಎಸ್‍ಆರ್‍ಟಿಸಿ ಬಸ್ ಆರಂಭಿಸುವಾಗ ಶಾಲಾ ಕಾಲೇಜು ವೇಳೆಗೆ ಸರಿಯಾಗಿ ಆರಂಭಿಸಿ ಎಂದರು.

    ಮೆಸ್ಕಾಂ ಕಂಬಕ್ಕೆ ಡಿಶ್ ಕೇಬಲ್: ನಿಬಂಧನೆ ನಿರ್ಲಕ್ಷ್ಯ:

    ಮೆಸ್ಕಾಂಗೆ ಸಂಬಂಧಿಸಿ ಸಾಕಷ್ಟು ಚರ್ಚೆ ನಡೆಯಿತು. ಮೆಸ್ಕಾಂ ಕಂಬಗಳಿಗೆ ಡಿಶ್ ಕೇಬಲ್ ಅಳವಡಿಸಿದ್ದಲ್ಲಿ ಅದಕ್ಕೆ ಇಲಾಖಾ ನಿಯಮಾನುಸಾರ ಸೂಕ್ತ ಶುಲ್ಕವನ್ನು ಪಡೆಯಲಾಗುತ್ತದೆ. 2025-26ನೇ ಸಾಲಿನಲ್ಲಿ ಒಟ್ಟು 3421 ಕಂಬಳಗಳ ಮೂಲಕ ಡಿಶ್ ಕೇಬಲ್ ಅಳವಡಿಸಿದ್ದು ಕಂಬಗಳ ಬಾಬ್ತು ರೂ.4,03,648 ಬೇಡಿಕೆ ಮಾಡಲಾಗಿದೆ ಎಂದು ಮೇಸ್ಕಾಂ ಅಧಿಕಾರಿಗಳು ತಿಳಿಸಿದರು.

    ಕೇಬಲ್ ಅಳವಡಿಕೆ ನಿಯಮಗಳನ್ನು ಪಾಲನೆ ಮಾಡುವುದು ಕಡಿಮೆಯಾಗಿದೆ. ಇತ್ತೀಚೆಗೆ ಜನ್ನಾಡಿಯಲ್ಲಿ ಒಂದು ಪ್ರಕರಣ ವರದಿಯಾಗಿದೆ. ಕೇಬಲ್ ವಯರ್‍ಗಳು ಜೋತಾಡುತ್ತಿರುವುದು ಅಪಾಯವನ್ನುಂಟು ಮಾಡುತ್ತವೆ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸದಸ್ಯರು ಹೇಳಿದರು. ವಸುಂಧರ ಹೆಗ್ಡೆ ಮಾತನಾಡಿ ವಿದ್ಯುತ್ ವ್ಯತಯ ಸಮಸ್ಯೆ, ಗಾಳಿ ಮಳೆಯಿಂದ ವಿದ್ಯುತ್ ಕಡಿತವಾಗುವಂತಹದ್ದು, ವೋಲ್ಟೇಜ್ ಸಮಸ್ಯೆಗಳಿಗೆ ಪರಿಹಾರವಾಗಿ ನಮ್ಮ ವ್ಯಾಪ್ತಿಯಲ್ಲಿ ಸಬ್ ಸ್ಟೇಷನ್ ನಿರ್ಮಾಣ ಮಾಡಲು ಅವಕಾಶವಿದೆ ಎಂದರು. ಈ ಬಗ್ಗೆ ಸಭೆಯಲ್ಲಿ ನಿರ್ಣಯ ಮಾಡಿ ಮೇಸ್ಕಾಂಗೆ ನೀಡುವುದು, ಹಾಗೂ ಸ್ಥಳ ಕಾದಿರುಸುವ ಸಲುವಾಗಿ ಪಂಚಾಯತ್ ಗೆ ಮನವಿ ನೀಡುವಂತೆ ಅಧ್ಯಕ್ಷರು ತಿಳಿಸಿದರು.

    ಹೆಚ್ಚುವರಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣಕ್ಕೆ ಆಗ್ರಹ:

    ಗಂಗೊಳ್ಳಿ ಅತೀ ಹೆಚ್ಚು ಜನವಸತಿ ಇರುವ ಪ್ರದೇಶ. ಲೈನ್ ಮ್ಯಾನ್‍ಗಳ ಸೇವೆ ಸರಿಯಾಗಿ ಸಿಗುತ್ತಿಲ್ಲ. ರಾತ್ರಿ ವೇಳೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ. ಮಳೆಗಾಲದಲ್ಲಿ ತುಂಬಾ ಅಗತ್ಯವಿದೆ. ತುರ್ತಾಗಿ ಗಂಗೊಳ್ಳಿಗೆ ಲೈನ್ ಮ್ಯಾನ್ ವ್ಯವಸ್ಥೆ ಮಾಡಿ ಎಂದು ಸದಸ್ಯ ಜಹೀರ್ ಆಹಮ್ಮದ್ ಗಂಗೊಳ್ಳಿ ಹೇಳಿದರು.

    ಇದಕ್ಕೆ ಉತ್ತರಿಸಿದ ಅಧಿಕಾರಿಗಳು ವಿಶೇಷ ಮಾನ್ಸೂನ್ ಪಡೆಗಳನ್ವಯ ಗಂಗೊಳ್ಳಿ ಭಾಗಕ್ಕೆ 2 ಲೈನ್ ಮ್ಯಾನ್ ಗಳನ್ನು ನೀಡಲಾಗಿದೆ. ಹಾಗೂ ಕಂಪೆನಿಯ ವತಿಯಿಂದಲೂ ಕೂಡ, ಈಗಾಗಲೇ ಹೊಸದಾಗಿ ಖಾಯಂ ಲೈನ್ ಮ್ಯಾನ್ ಗಳನ್ನು ನೇಮಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.

    ಗೃಹಲಕ್ಷ್ಮೀ ಯೋಜನೆಯಲ್ಲಿ ಒಟ್ಟು 529 ಕೊರಗ ಕುಟುಂಬಗಳಲ್ಲಿ 70 ಕೊರಗ ಕುಟುಂಬಗಳನ್ನು ಈ ಯೋಜನೆಗೆ ನೋಂದಾಯಿಸಲು ಬಾಕಿ ಇದ್ದು 4 ಕುಟುಂಬಗಳನ್ನು ನೋಂದಾಯಿಸಿಕೊಳ್ಳಲಾಗಿದೆ. ಒಂದು ಕುಟುಂಬ ಯಜಮಾನಿಯ ಬೆರಳಚ್ಚು ದಾಖಲಾಗದೆ ಆಧಾರ್‍ಗೆ ಮೊಬೈಲ್ ಸಂಖ್ಯೆ ನಮೊದಿಸಲು ಆಗುತ್ತಿಲ್ಲ ಎಂದು ಶಿಶು ಅಭಿವೃದ್ದಿ ಯೋಜನೆಯ ಅಧಿಕಾರಿ ತಿಳಿಸಿದರು. ಈ ಬಗ್ಗೆ ಆ ಫಲಾನುಭವಿಯನ್ನು ಯೋಜನೆಗೆ ನೊಂದಾಯಿಸಲು ಕ್ರಮ ವಹಿಸುವುದಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

    ಸಭೆಯಲ್ಲಿ ಸದಸ್ಯರಾದ ವಸುಂಧರ ಹೆಗ್ಡೆ, ಚಂದ್ರ ಕಾಂಚನ್, ಅಭಿಜಿತ್ ಪೂಜಾರಿ, ವಾಣಿ ಆರ್.ಶೆಟ್ಟಿ, ಆಶಾ ಕರ್ವಾಲ್ಲೋ, ನಾರಾಯಣ ಆಚಾರ್, ಗಣೇಶ್, ಕೆ.ಪ್ರದೀಪ್ ಕುಮಾರ್ ಶೆಟ್ಟಿ, ಅರುಣ, ಹರ್ಷ ಶೆಟ್ಟಿ ಸವಿತಾ ಪೂಜಾರಿ, ಮಂಜು ಕೊಠಾರಿ, ಜಹೀರ್ ಅಹಮದ್ ಉಪಸ್ಥಿತರಿದ್ದರು.

    ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪ್ರಕಾಶ್ ಹುಕ್ಕೇರಿ ಸ್ವಾಗತಿಸಿ, ವಂದಿಸಿದರು.

  • ಗೋವಿನ ರುಂಡ ಪತ್ತೆ ಕೇಸು ಕೋಮು ನಿಗ್ರಹ ದಳಕ್ಕೆ ವಹಿಸಲಿ- ಬಿಜೆಪಿ ಮುಖಂಡ ಶ್ರೀನಿಧಿ ಹೆಗ್ಡೆ ಆಗ್ರಹ

    ಉಡುಪಿ: ಬ್ರಹ್ಮಾವರ ಕುಂಜಾಲು ರಸ್ತೆಯಲ್ಲಿ ಗೋವಿನ ರುಂಡ ಪತ್ತೆಯಾಗಿದ್ದು ಈ ಮೂಲಕ ಕೋಮು ಸೌಹಾರ್ದಕ್ಕೆ ಧಕ್ಕೆ ತಂದೊಡ್ದುತ್ತಿರುವ ದುಷ್ಕರ್ಮಿಗಳೇ ದ‌.ಕ., ಉಡುಪಿ ಹಾಗು ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಮು ನಿಗ್ರಹ ದಳಕ್ಕೆ ಮೊದಲ ಟಾಸ್ಕ್‌ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ್ ಶ್ರೀನಿಧಿ ಹೆಗ್ಡೆ ಹೇಳಿದ್ದಾರೆ.

    ಹಿಂದುಗಳನ್ನು ಮಾತ್ರ ದಮನಿಸಲು ಕೋಮು ನಿಗ್ರಹ ದಳವನ್ನು ಸ್ಥಾಪಿಸಲಾಗಿದೆ ಎಂದು ಭಾಜಪಾ ಹೇಳುತ್ತಿದ್ದರೂ, ಕಾಂಗ್ರೆಸ್ ಇದನ್ನು ಅಲ್ಲಗಳೆಯುತ್ತಿತ್ತು. ಆದರೆ ಈಗ ಗೋವಿನ ರುಂಡ ಪತ್ತೆಯಾಗಿದ್ದು, ಗೋ ಹತ್ಯೆ ನಡೆದು, ರಾಜಾರೋಷವಾಗಿ ಸಾಗಾಟ ಮಾಡಿದರೂ ಪೋಲಿಸ್ ಇಲಾಖೆಗೆ ಮಾಹಿತಿ ದೊರಕದೇ ಇರುವುದು ಇಲಾಖೆಯ ವೈಫಲ್ಯವನ್ನು ಜಗಜ್ಜಾಹೀರು ಮಾಡಿದೆ. ಕಾಂಗ್ರೆಸ್ ಸರಕಾರವೇ ಸ್ಥಾಪಿಸಿರುವ ಕೋಮು ನಿಗ್ರಹ ದಳಕ್ಕೆ ಇದನ್ನೇ ಮೊದಲ ಪ್ರಕರಣವನ್ನಾಗಿ ನೀಡಲಿ. ಕಾಂಗ್ರೆಸ್ ಸರಕಾರಕ್ಕೆ ಹಿಂದುಗಳ ಭಾವನೆಗಳ ಬಗ್ಗೆ ಅದೆಷ್ಟು ಕಾಳಜಿ ಇದೆ ಎಂಬುದು ಈಗ ತಿಳಿಯಲಿದೆ. ಗೃಹ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

  • ಉಡುಪಿ: ಆನ್‌ಲೈನ್ ವಂಚನೆ; ಐಸ್‌ಕ್ರೀಂ ಅಂಗಡಿ ಮಾಲೀಕನಿಗೆ ₹10,000 ನಷ್ಟ

    ಉಡುಪಿ, ಜೂನ್ 29, 2025: ಉಡುಪಿ ತಾಲೂಕಿನ ಕೊರಂಗ್ರಪಾಡಿ ಗ್ರಾಮದ ಜಿಗರ್ಥಾಂಡ ಐಸ್‌ಕ್ರೀಂ ಅಂಗಡಿಯ ಫ್ರಾಂಚೈಸಿ ಮಾಲೀಕರಾದ ಪಿ.ಪಿ. ಗೋಕುಲ್ ರಾಜ್ (31) ಎಂಬವರಿಗೆ ಆನ್‌ಲೈನ್ ವಂಚನೆಯ ಮೂಲಕ ₹10,000 ನಷ್ಟವಾದ ಘಟನೆ ನಡೆದಿದೆ.

    ಪಿರ್ಯಾದಿದಾರರಾದ ಗೋಕುಲ್ ರಾಜ್, ಐಸ್‌ಕ್ರೀಂ ಅಂಗಡಿಯಲ್ಲಿ ದಿನಾಂಕ 27/06/2025ರ ಸಂಜೆ 5:30 ಗಂಟೆಗೆ ಇದ್ದಾಗ, ಅಪರಿಚಿತ ವ್ಯಕ್ತಿಯೊಬ್ಬ 9014030651 ಸಂಖ್ಯೆಯಿಂದ ಕರೆ ಮಾಡಿ, ಕಾರ್ಯಕ್ರಮವೊಂದಕ್ಕೆ ₹45,000 ಮೌಲ್ಯದ ಆರ್ಡರ್ ನೀಡುವುದಾಗಿ ತಿಳಿಸಿದ್ದಾನೆ. ಮುಂಗಡವಾಗಿ NEFT ಮೂಲಕ ₹20,000 ಕಳುಹಿಸುವುದಾಗಿ ಆರೋಪಿಯು ಭರವಸೆ ನೀಡಿದ್ದಾನೆ.

    ಕೆಲವು ಸಮಯದ ನಂತರ ಆರೋಪಿಯು ಮತ್ತೆ ಕರೆ ಮಾಡಿ, ತಪ್ಪಾಗಿ ₹30,000 ವರ್ಗಾವಣೆ ಮಾಡಿರುವುದಾಗಿ ಹೇಳಿ, ₹10,000 ವಾಪಸ್ ಕಳುಹಿಸುವಂತೆ ಕೇಳಿದ್ದಾನೆ. ಪಿರ್ಯಾದಿದಾರರು ತಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಿದಾಗ, NEFT ವರ್ಗಾವಣೆಯಿಂದ ಹಣವು ಕೆಲವೇ ಸಮಯದಲ್ಲಿ ಖಾತೆಗೆ ಜಮೆಯಾಗಬಹುದು ಎಂದು ಭಾವಿಸಿ, ಆರೋಪಿಯು ಕಳುಹಿಸಿದ ಸ್ಕ್ಯಾನರ್‌ನ ಖಾತೆ ಸಂಖ್ಯೆ 50100167838423 ಮೂಲಕ ₹10,000 ವರ್ಗಾಯಿಸಿದ್ದಾರೆ.

    ಆದರೆ, ನಂತರ ಗೋಕುಲ್ ರಾಜ್‌ರ ಖಾತೆಗೆ ಯಾವುದೇ ಹಣ ಜಮೆಯಾಗದೇ ಇದ್ದು, ಇದು ಆನ್‌ಲೈನ್ ವಂಚನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 114/2025ರಡಿ, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(2) ಮತ್ತು ಐಟಿ ಕಾಯ್ದೆ ಕಲಂ 66(D) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  • ಪುತ್ತೂರು: ಬಿಜೆಪಿ ನಾಯಕನ ಮಗನ ವಿರುದ್ಧ ಸಹಪಾಠಿಯನ್ನು ಪ್ರೀತಿಯ ಆಮಿಷದಡಿ ಲೈಂಗಿಕವಾಗಿ ದುರ್ಬಳಕೆ ಮಾಡಿದ ಆರೋಪ; ಆರೋಪಿ ಪರಾರಿ

    ಪುತ್ತೂರು, ಜೂನ್ 29: ಪುತ್ತೂರಿನ ಬಿಜೆಪಿ ನಾಯಕ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ರಾವ್ ವಿರುದ್ಧ, ಪ್ರೀತಿಯ ಆಮಿಷದಡಿ ಯುವತಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿ, ಗರ್ಭಿಣಿಯಾಗಿಸಿ, ನಂತರ ವಿವಾಹವಾಗಲು ನಿರಾಕರಿಸಿದ ಗಂಭೀರ ಆರೋಪ ಕೇಳಿಬಂದಿದೆ. ಯುವತಿ ಈಗ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮಕ್ಕಾಗಿ ದೂರು ದಾಖಲಿಸಿದ್ದಾಳೆ.

    ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, ಕೃಷ್ಣ ರಾವ್ ಮತ್ತು ಸಂತ್ರಸ್ತೆ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಶಾಲೆಯ ನಂತರವೂ ಇವರಿಬ್ಬರ ಸಂಬಂಧ ಮುಂದುವರೆದಿತ್ತು. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ಪದವಿ ವ್ಯಾಸಂಗ ಮಾಡುತ್ತಿರುವ ಯುವತಿ, ಕೃಷ್ಣ ರಾವ್ ತನ್ನನ್ನು 2024ರ ಅಕ್ಟೋಬರ್ 11ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆಗೆ ಕರೆದು, ವಿವಾಹದ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಆರೋಪಿಸಿದ್ದಾಳೆ.

    2025ರ ಜನವರಿಯಲ್ಲಿ ಮತ್ತೊಮ್ಮೆ ಅವನು ಯುವತಿಯ ಮೇಲೆ ಬಲವಂತವಾಗಿ ದೈಹಿಕ ಸಂಬಂಧ ಹೊಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಂತರ ಯುವತಿಗೆ ತಾನು ಗರ್ಭಿಣಿಯಾಗಿರುವುದು ತಿಳಿದು, ಈ ವಿಷಯವನ್ನು ಕೃಷ್ಣನಿಗೆ ತಿಳಿಸಿದಾಗ, ಅವನು ವಿವಾಹವಾಗಲು ನಿರಾಕರಿಸಿದ್ದಾನೆ.

    ಪುತ್ತೂರಿನ ನಿವಾಸಿಯಾಗಿರುವ ಯುವತಿ, ಕೃಷ್ಣ ರಾವ್ ತನ್ನ ವಿಶ್ವಾಸವನ್ನು ದುರ್ಬಳಕೆ ಮಾಡಿಕೊಂಡು, ಹಲವಾರು ಬಾರಿ ತನ್ನ ಮನೆಯಲ್ಲಿ ದೈಹಿಕವಾಗಿ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ. ಗರ್ಭಿಣಿಯಾಗಿರುವ ವಿಷಯ ತಿಳಿದ ನಂತರ, ಯುವತಿ ತನ್ನ ಕುಟುಂಬಕ್ಕೆ ವಿಷಯ ತಿಳಿಸಿದ್ದಾಳೆ. ಯುವತಿಯ ಕುಟುಂಬವು ಕೃಷ್ಣನ ಕುಟುಂಬವನ್ನು ಸಂಪರ್ಕಿಸಿದಾಗ, ಆರಂಭದಲ್ಲಿ ವಿವಾಹಕ್ಕೆ ಒಪ್ಪಿಗೆ ನೀಡಿದ್ದರೂ, ಕೃಷ್ಣ ನಂತರ ವಿವಾಹವನ್ನು ತಿರಸ್ಕರಿಸಿದ್ದಾನೆ.

    ಜೂನ್ 24ರ ರಾತ್ರಿ ದಾಖಲಾದ ದೂರಿನ ಆಧಾರದ ಮೇಲೆ, ಪುತ್ತೂರು ಪೊಲೀಸರು ಕೃಷ್ಣ ರಾವ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 64(1) ಮತ್ತು 69ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಕೃಷ್ಣ ರಾವ್ ಪ್ರಸ್ತುತ ಪರಾರಿಯಾಗಿದ್ದು, ಪೊಲೀಸರು ಅವನನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

    ಎಫ್‌ಐಆರ್ ಪ್ರಕಾರ, ಕೃಷ್ಣ ರಾವ್ ಯುವತಿಯನ್ನು ವಿವಾಹದ ಆಮಿಷದಡಿ 2024ರ ಅಕ್ಟೋಬರ್ 11ರಂದು ತನ್ನ ಮನೆಗೆ ಕರೆದು, ದೈಹಿಕ ಸಂಬಂಧ ಬಲವಂತವಾಗಿ ಬೆಳೆಸಲು ಯತ್ನಿಸಿದ್ದಾನೆ. ಯುವತಿ ವಿರೋಧಿಸಿದಾಗ, ವಿವಾಹದ ಭರವಸೆ ನೀಡಿ, ವಿಷಯವನ್ನು ಗೌಪ್ಯವಾಗಿಡುವಂತೆ ತಿಳಿಸಿದ್ದಾನೆ. ಜನವರಿಯಲ್ಲಿ ಅವನು ಮತ್ತೊಮ್ಮೆ ಈ ಕೃತ್ಯವನ್ನು ಪುನರಾವರ್ತಿಸಿದ್ದಾನೆ.

    ಯುವತಿ ಶುಕ್ರವಾರ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿದುಬಂದಿದೆ.

  • ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಿಂದ ಯುವಕ ಸಾವು; ಪೋಷಕರಿಗೆ 58.94 ಲಕ್ಷ ರೂ. ಪರಿಹಾರ

    ಬೆಂಗಳೂರು,ಜೂನ್ 28, 2025: ಉಡುಪಿಯ ಹಾರಾಡಿಯ ಸೈಯದ್ ನಹೀಮ್ ಎಂಬ 31 ವರ್ಷದ ಯುವಕನ ಸಾವಿಗೆ ಕಾರಣವಾದ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಿಲ್ಲಾ ನ್ಯಾಯಾಲಯವು ಮೃತನ ಪೋಷಕರಾದ ಸೈಯದ್ ಅಬೂ ಮೊಹಮ್ಮದ್ ಸಾಹೇಬ್ (67) ಮತ್ತು ಕುರೇಶಾ (62) ಅವರಿಗೆ 58.94 ಲಕ್ಷ ರೂಪಾಯಿ ಪರಿಹಾರವನ್ನು ಮಂಜೂರು ಮಾಡಿದೆ. ಈ ತೀರ್ಪನ್ನು ಜೂನ್ 28, 2024 ರಂದು XI ಅಡಿಷನಲ್ ಸ್ಮಾಲ್ ಕೆಸೆಸ್ ಜಡ್ಜ್ ಮತ್ತು ಎಸಿಎಂಎಂ ವಿದ್ಯಾಲಕ್ಷ್ಮಿ ಭಟ್ ಪ್ರಕಟಿಸಿದ್ದಾರೆ.

    2018ರ ಮಾರ್ಚ್ 1 ರಂದು ರಾತ್ರಿ 10:15ಕ್ಕೆ, ಸೈಯದ್ ನಹೀಮ್ ಇಂದಿರಾನಗರದಿಂದ ಕೆ.ಆರ್. ಪುರಂ ಕಡೆಗೆ ಮೋಟಾರ್ ಸೈಕಲ್‌ನಲ್ಲಿ (KA-05-HG-1083) ಪಿಲಿಯನ್ ರೈಡರ್ ಆಗಿ ಪ್ರಯಾಣಿಸುತ್ತಿದ್ದಾಗ, ಕಲ್ಪಳ್ಳಿ ಜಂಕ್ಷನ್ ಬಳಿ ಚಾಲಕ ಚಿನ್ಮಯ್ ಗಾಡಿಯನ್ನು ಓವರ್‌ಟೇಕ್ ಮಾಡಲು ಯತ್ನಿಸಿ ನಿಯಂತ್ರಣ ತಪ್ಪಿದ್ದಾರೆ. ಇದರಿಂದ ಬೈಕ್ ರಸ್ತೆಯಲ್ಲಿ ಉರುಳಿಬಿದ್ದಿದ್ದು, ಆ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ (KA-40-F-877) ಚಾಲಕನ ಅಜಾಗರೂಕ ಚಾಲನೆಯಿಂದ ಬಸ್‌ನ ಹಿಂಬದಿಯ ಚಕ್ರವು ನಹೀಮ್‌ರ ತಲೆಯ ಮೇಲೆ ಹರಿದು ಸಾವಿಗೆ ಕಾರಣವಾಯಿತು. ಗಾಯಗೊಂಡವರನ್ನು ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿಯಲ್ಲೇ ನಹೀಮ್ ಮೃತಪಟ್ಟಿದ್ದಾರೆ.

    ನಹೀಮ್‌ರ ಪೋಷಕರು ತಮ್ಮ ಏಕೈಕ ಮಗನ ಸಾವಿನಿಂದ ಆರ್ಥಿಕ ಮತ್ತು ಭಾವನಾತ್ಮಕ ನಷ್ಟವನ್ನು ಎದುರಿಸಿದ್ದಾರೆ. ಸೈಯದ್ ನಹೀಮ್ ಇನ್‌ಫ್ಲೋ ಟೆಕ್ನಾಲಜೀಸ್ ಪ್ರೈ. ಲಿಮಿಟೆಡ್‌ನಲ್ಲಿ ತಾಂತ್ರಿಕ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 64,448 ರೂ. ಸಂಬಳ ಪಡೆಯುತ್ತಿದ್ದರು. ಆದರೆ, ನ್ಯಾಯಾಲಯವು ಆದಾಯ ತೆರಿಗೆ ಕಡಿತದ ನಂತರ ತಿಂಗಳಿಗೆ 40,000 ರೂ. ಆದಾಯವನ್ನು ಲೆಕ್ಕಾಚಾರಕ್ಕೆ ಪರಿಗಣಿಸಿದೆ.

    ನ್ಯಾಯಾಲಯವು ಅಪಘಾತಕ್ಕೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ಮೋಟಾರ್ ಸೈಕಲ್ ಚಾಲಕ ಚಿನ್ಮಯ್ ಇಬ್ಬರೂ 50% ಜವಾಬ್ದಾರರೆಂದು ತೀರ್ಪು ನೀಡಿದೆ. ಒಟ್ಟು 58.94 ಲಕ್ಷ ರೂ. ಪರಿಹಾರವನ್ನು ಕೆಎಸ್‌ಆರ್‌ಟಿಸಿ ಮತ್ತು ಮೋಟಾರ್ ಸೈಕಲ್‌ನ ವಿಮಾ ಕಂಪನಿಯಾದ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಸೂರೆನ್ಸ್ ಕಂಪನಿಯು 50-50% ರಷ್ಟು ಭಾಗಿಸಿಕೊಂಡು ಪಾವತಿಸಬೇಕೆಂದು ಆದೇಶಿಸಲಾಗಿದೆ. ಪರಿಹಾರವನ್ನು ಪೋಷಕರಾದ ಸೈಯದ್ ಅಬೂ ಮೊಹಮ್ಮದ್ ಸಾಹೇಬ್ ಮತ್ತು ಕುರೇಶಾ ಅವರಿಗೆ ಸಮಾನವಾಗಿ ಹಂಚಿಕೆ ಮಾಡಲಾಗಿದ್ದು, 50% ಮೊತ್ತವನ್ನು 3 ವರ್ಷಗಳ ಕಾಲ ಸ್ಥಿರ ಠೇವಣಿಯಲ್ಲಿ ಇಡಲು ಆದೇಶಿಸಲಾಗಿದೆ.

    ಈ ಪ್ರಕರಣದಲ್ಲಿ ಪೋಷಕರ ದೃಢನಿಶ್ಚಯವು ಗಮನಾರ್ಹವಾಗಿದ್ದು, 67 ಮತ್ತು 62 ವಯಸ್ಸಿನ ಈ ದಂಪತಿಗಳು ತಮ್ಮ ಮಗನ ಸಾವಿನ ನಂತರ ಕಾನೂನು ಹೋರಾಟವನ್ನು ಮುಂದುವರಿಸಿದ್ದಾರೆ. ಈ ತೀರ್ಪು ಅವರಿಗೆ ಕಾನೂನು ಮತ್ತು ಆರ್ಥಿಕ ನ್ಯಾಯವನ್ನು ಒದಗಿಸಿದೆ.

  • ಮುಸ್ಲಿಂ ವಿರೋಧಿ ಹೇಳಿಕೆ: ಕಾಂಗ್ರೆಸ್ ಶಾಸಕನ ವಿರುದ್ಧ ಎಸ್‌ಡಿಪಿಐ ಪ್ರತಿಭಟನೆ: ವಜಾಗೊಳಿಸಲು ಆಗ್ರಹ

    ಉಡುಪಿ, ಜೂನ್ 24, 2025: ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ಬಂಡೀಸಿದ್ದೇಗೌಡನ ಮುಸ್ಲಿಂ ವಿರೋಧಿ ಹೇಳಿಕೆಯನ್ನು ಖಂಡಿಸಿ ಹಾಗೂ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಇಂದು ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

    ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ ಡಿ ಪಿ ಐ ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಹನೀಫ್ ಮೂಳೂರ್ ಕಾಂಗ್ರೆಸ್ ಸರಕಾರ ಮುಸ್ಲಿಮರ ವೋಟ್ ಪಡೆದು ನಿರಂತರವಾಗಿ ಮುಸ್ಲಿಮರ ವಿರುದ್ಧವೇ ಕೆಲಸ ಮಾಡಿದೆ. ಅಧಿಕಾರಕ್ಕೆ ಬಂದರೆ ಹಿಜಾಬ್ ನಿಷೇಧವನ್ನು ಹಿಂಪಡೆಯುತ್ತೇವೆ ಎಂದು ಹೇಳಿದ್ದ ಸಿದ್ಧರಾಮಯ್ಯ ಅಧಿಕಾರ ಹಿಡಿದು 2 ವರ್ಷವಾದರೂ ಅದರ ಬಗ್ಗೆ ಮಾತೆತ್ತುತ್ತಿಲ್ಲ. ಒಂದು ವೇಳೆ ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ ಶಾಸಕರನ್ನು ಶಾಸಕ ಸ್ಥಾನದಿಂದ ವಜಾಗೊಳಿಸದಿದ್ದರೆ ತೀವ್ರ ಹೋರಾಟವನ್ನು ನಡೆಸುವುದಾಗಿ ಎಚ್ಚರಿಸಿದರು.

    ಎಸ್ ಡಿ ಪಿ ಐ ಉಡುಪಿ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ರಹೀಂ ಆದಿ ಉಡುಪಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಶುದ್ದೀನ್, ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಾವ ವಿಮೆನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾಧ್ಯಕ್ಷೆ ನಾಝಿಯಾ ನಸ್ರುಲ್ಲ ಹಾಗೂ ಮತ್ತಿತರು ಉಪಸ್ಥಿತರಿದ್ದರು.

  • ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯ ಪ್ರವೇಶಾತಿ: ಅರ್ಜಿ ಆಹ್ವಾನ

    ಉಡುಪಿ: ಪ್ರಸಕ್ತ ಸಾಲಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಾತಿಗಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ಪಿ.ಯು.ಸಿ, ಐ.ಟಿ.ಐ ಹಾಗೂ ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ವೆಬ್‌ಸೈಟ್ https://shp.karnataka.gov.in/bcwd ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

    ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್‌ಸೈಟ್ https://bcwd.karnataka.gov.in/ ಅಥವಾ ಸಹಾಯವಾಣಿ ಸಂಖ್ಯೆ: 805077004 ಹಾಗೂ 8050770005 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

  • ಉಡುಪಿ ರೈಲ್ವೆ ಯಾತ್ರಿ ಸಂಘ :ಧೀರಜ್ ಶಾಂತಿ ಅಧ್ಯಕ್ಷರಾಗಿ ಆಯ್ಕೆ, ನೂತನ ಆಡಳಿತ ಮಂಡಳಿ ರಚನೆ

    ಉಡುಪಿ: ಉಡುಪಿ ರೈಲ್ವೆ ಯಾತ್ರಿ ಸಂಘದ ವಾರ್ಷಿಕ ಮಹಾಸಭೆಯು ಭಾನುವಾರ ಉಡುಪಿಯ ಹಿಂದಿ ಪ್ರಚಾರ ಸಮಿತಿ ಸಭಾಂಗಣದಲ್ಲಿ ಉಪಾಧ್ಯಕ್ಷರಾದ ಅಜಿತ್ ಕುಮಾರ್ ಶೆಣೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಮುಂಬರುವ 2025-27ರ  ವರ್ಷದ ಸಾಲಿನ ಅಧ್ಯಕ್ಷರಾಗಿ ಧೀರಜ್ ಶಾಂತಿಯವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮಧುಸೂದನ್ ಹೇರೂರು, ಕೋಶಾಧಿಕಾರಿಯಾಗಿ ಅಜಿತ್ ಕುಮಾರ್ ಶೆಣೈ ಉದ್ಯಾವರ ರವರನ್ನು ನೇಮಿಸಲಾಯಿತು. ಕಾರ್ಯದರ್ಶಿಯಾಗಿ ಮಂಜುನಾಥ ಮಣಿಪಾಲ್ ರವರನ್ನು ಮುಂದುವರಿಸಲಾಯಿತು.

    ನಿರ್ದೇಶಕರಾಗಿ ಜಾನ್ ರೆಬೆಲ್ಲೊ, ಸದಾನಂದ ಅಮೀನ್, ಜನಾರ್ದನ್ ಕೋಟ್ಯಾನ್, ಜಯಚಂದ್ರ ರಾವ್,  ಪ್ರಭಾಕರ್ ಆಚಾರ್ಯ.  ರತ್ನ ಶ್ರೀ ಆಚಾರ್ಯ, ಶ್ರೀನಿವಾಸ್ ಶೆಟ್ಟಿ ತೊನ್ಸೆ, ಸಿ.ಎಸ್ ರಾವ್, ವೆಂಕಟರಾಜ್ ಭಟ್, ರವಿ ಪೂಜಾರಿ ಹಿರಿಯಡ್ಕ, ಪಿ ಅಪ್ರಾಯ ಶೆಟ್ಟಿಗಾರ್, ಪ್ಲಾಸಿಡ್ ಜೆ.ಪಿ,  ನಾರಾಯಣ್ ಕಾಂಚನ್, ರಘುರಾಮ್ ನಾಯಕ್, ಪಿ.ಎನ್  ರವೀಂದ್ರ, ರವೀಶ್ ಕೋಟ್ಯಾನ್, ಸತೀಶ್ ಪೂಜಾರಿ, ದಿನೇಶ್ ಅಮೀನ್ ಕದಿಕೆ  ಆಯ್ಕೆಯಾದರು. ಮಂಜುನಾಥ್ ಮಣಿಪಾಲ ಕಾರ್ಯಕ್ರಮ ಸಂಯೋಜಿಸಿದರು.

  • ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ. ಕೆ ಅಧಿಕಾರ ಸ್ವೀಕಾರ

    ಉಡುಪಿ,ಜೂ.18: ಉಡುಪಿ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ ರವರು ಅಪರಾಹ್ನ ನಿಕಟಪೂರ್ವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರಿಂದ ಅಧಿಕಾರ ಸ್ವೀಕರಿಸಿದರು. ಅವರು ಈ ಹಿಂದೆ ಬೆಂಗಳೂರಿನ ಆರ್. ಡಿ. ಪಿ. ಆರ್ ಇ -ಗವರ್ನೆನ್ಸ್ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

    ಟೈಕ್ಸ್‌ಟೈಲ್ ಇಂಜಿನಿಯರಿಂಗ್‌ನಲ್ಲಿ ಐಐಟಿ ದಿಲ್ಲಿಯಿಂದ ಎಂಟೆಕ್ ಪದವಿ ಪಡೆದಿರುವ ಸ್ವರೂಪ ಅವರು 2025ರ ಫೆಬ್ರವರಿಯಿಂದ ಆರ್‌ಡಿಪಿಆರ್ ಇಲಾಖೆಯಲ್ಲಿ ಇ-ಗವರ್ನೆನ್ಸ್‌ನ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಅದಕ್ಕೆ ಮುನ್ನ ಅವರು ಧಾರವಾಡ ಜಿಲ್ಲಾ ಪಂಚಾಯತ್‌ನಲ್ಲಿ ಸಿಇಓ ಹಾಗೂ ನೇಶನಲ್ ರೂರಲ್ ಲೈಲ್ಲಿಹುಡ್ ಮಿಷನ್‌ನ ಸಿಓಓ ಹಾಗೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿದ್ದರು.

  • ಬ್ರಹ್ಮಾವರ: ಶಾಲಾ ಬಸ್‌ಗೆ ಲಾರಿ ಢಿಕ್ಕಿ- ಹಲವು ವಿದ್ಯಾರ್ಥಿಗಳಿಗೆ ಗಾಯ

    ಬ್ರಹ್ಮಾವರ, ಜೂನ್ 18, 2025: ಶಾಲಾ ಬಸ್ಸಿಗೆ ಹಿಂದಿನಿಂದ ಲಾರಿಯೊಂದು ಗುದ್ದಿದ ಪರಿಣಾಮ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ಧರ್ಮವರ ಆಡಿಟೋರಿಯಂ ಸರ್ಕಲ್ ಬಳಿ ನಡೆದಿದೆ.

    ಜಿ.ಎಂ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿದ್ದ ವಾಹನಕ್ಕೆ ಕುಂದಾಪುರದಿಂದ ಬಂದಿದ್ದ ಈಚಾರ್ ಲಾರಿಯೊಂದು ಧರ್ಮವರ ಆಡಿಟೋರಿಯಂ ಸರ್ಕಲ್ ಬಳಿ ಯೂಟರ್ನ್ ಮಾಡುವ ಸಂದರ್ಭ ಗುದ್ದಿದೆ.

    ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದೆ.‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಈ ಅಪಘಾತಕ್ಕೆ ಶಾಲಾ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದ್ದು ಬ್ರಹ್ಮಾವರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.