Category: Udupi District

  • ಉಡುಪಿ: ಖಾಸಗಿ ಬಸ್ ಅಜಾಗರೂಕ ಚಾಲನೆ ವಿಡಿಯೋ ವೈರಲ್; ಚಾಲಕ ಬಂಧನ

    ಉಡುಪಿ, ಜೂ. 18: ಬಸ್ ಚಾಲಕನೊಬ್ಬ ಅಪಾಯಕಾರಿ ಅಜಾಗರೂಕತೆಯ ಚಾಲನೆಯಿಂದ ವಾಹನ ಚಲಾಯಿಸಿ ಪ್ರಯಾಣಿಕರು ಮತ್ತು ಸಾರ್ವಜನಿಕರಲ್ಲಿ ಭಯ ಸೃಷ್ಟಿಸಿರುವ ವಿಡಿಯೋ ಜೂನ್ 17ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಉಡುಪಿ ಸಂಚಾರ ಪೊಲೀಸರು ತನಿಖೆ ನಡೆಸಿ ಆರೋಪಿ ಚಾಲಕನನ್ನು ಬಂಧಿಸಿದ್ದಾರೆ.

    ಆರೋಪಿ ಚಾಲಕನನ್ನು ದೇವರಾಜ್ ಎಂದು ಗುರುತಿಸಲಾಗಿದೆ. ಇವರು ಶ್ರೀ ದುರ್ಗಾಂಬಾ ಬಸ್ ಅನ್ನು ಎನ್‌ಎಚ್ 169ಎ ಸಾರ್ವಜನಿಕ ರಸ್ತೆಯ ಮೂಲಕ ಉಡುಪಿ ಮಾರ್ಗದಲ್ಲಿ ಚಲಾಯಿಸುತ್ತಿದ್ದರು. ಕರಾವಳಿ ಕಡೆಯಿಂದ ಉಡುಪಿಯ ಕಡೆಗೆ ಚಲಿಸುವಾಗ, ಇವರು ಅಜಾಗರೂಕ ಮತ್ತು ನಿರ್ಲಕ್ಷ್ಯದ ರೀತಿಯಲ್ಲಿ ವಾಹನ ಚಲಾಯಿಸಿ ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.

    ಬಸ್ ನಿಯಂತ್ರಣ ಕಳೆದುಕೊಂಡು ಬನ್ನಂಜೆಯ ಬಳಿ ದಿಢೀರನೆ ಪಕ್ಕಕ್ಕೆ ಸರಿದು ಅಪಾಯಕಾರಿ ರೀತಿಯಲ್ಲಿ ನಿಂತಿದೆ ಎಂದು ವರದಿಯಾಗಿದೆ. ನಂತರ, ಚಾಲಕ ಬಸ್ ಅನ್ನು ಉಡುಪಿಯ ಕಡೆಗೆ ತಪ್ಪಾದ ದಿಕ್ಕಿನಲ್ಲಿ ಚಲಾಯಿಸಿದ್ದಾನೆ ಎನ್ನಲಾಗಿದೆ. ಅದೃಷ್ಟವಶಾತ್, ಬಸ್‌ನಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.

    ಈ ಸಂಬಂಧ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಚಾಲಕ ದೇವರಾಜ್‌ನನ್ನು ಬಂಧಿಸಲಾಗಿದ್ದು, ಬಸ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

  • ಬಡ ಕುಟುಂಬಕ್ಕೆ ಶೌಚಾಲಯ ಹಸ್ತಾಂತರ: ನಮ್ಮ ನಾಡ ಒಕ್ಕೂಟ

    ಕುಂದಾಪುರ, ಜೂನ್ 18, 2025: ನಮ್ಮ ನಾಡ ಒಕ್ಕೂಟ (NNO) ಕಮ್ಯೂನಿಟಿ ಸೆಂಟರ್ ಕುಂದಾಪುರ, ದಾನಿಗಳ ಸಹಕಾರದೊಂದಿಗೆ “ಬಡ ಜನರಿಗಾಗಿ ಶೌಚಾಲಯ ನಿರ್ಮಾಣ ಯೋಜನೆ” ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಯಶಸ್ವಿಯಾಗಿ ಆರಂಭಿಸಿದೆ. ಈ ಯೋಜನೆಯ ಮೊದಲ ಹಂತದಲ್ಲಿ, ಬಡತನದಲ್ಲಿ ಜೀವನ ನಡೆಸುತ್ತಿರುವ ಒಂದು ಕುಟುಂಬಕ್ಕೆ ಶೌಚಾಲಯ ನಿರ್ಮಿಸಿ, ಇಂದು ಅದನ್ನು ಔಪಚಾರಿಕವಾಗಿ ಹಸ್ತಾಂತರಿಸಲಾಯಿತು.

    ಈ ಕುಟುಂಬವು ವಿಧವೆಯಾದ ತಾಯಿ ಮತ್ತು ಅವರ 16 ವರ್ಷದ ತಂದೆಯಿಲ್ಲದ ಮಗಳನ್ನು ಒಳಗೊಂಡಿದೆ. ಈ ಇಬ್ಬರೂ ಶೌಚಾಲಯ ಅಥವಾ ಸ್ನಾನಗೃಹವಿಲ್ಲದ ಮನೆಯಲ್ಲಿ ವಾಸಿಸುತ್ತಿದ್ದರು. ಕಿರಿಯ ಹುಡುಗಿಗೆ ಪ್ರತಿದಿನ ನೆರೆಮನೆಯ ಶೌಚಾಲಯವನ್ನು ಬಳಸುವುದು ಭದ್ರತೆ ಮತ್ತು ಗೌರವದ ದೃಷ್ಟಿಯಿಂದ ತೀವ್ರ ಮುಜುಗರಕ್ಕೆ ಕಾರಣವಾಗಿತ್ತು.

    ದಾನಿಗಳ ಉದಾರ ಸಹಕಾರದಿಂದ ಈ ಕುಟುಂಬಕ್ಕೆ ಶೌಚಾಲಯವನ್ನು ನಿರ್ಮಿಸಲಾಗಿದೆ. ಈ ಶೌಚಾಲಯವನ್ನು ಇಂದು ಔಪಚಾರಿಕವಾಗಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು, ಇದರಿಂದ ಅವರ ಜೀವನದಲ್ಲಿ ಗೌರವ ಮತ್ತು ಸುರಕ್ಷತೆಯ ಭಾವನೆ ಮರುಕಳಿಸಿದೆ.

    ಈ ಕಾರ್ಯಕ್ರಮದಲ್ಲಿ NNO ಕಮ್ಯೂನಿಟಿ ಸೆಂಟರ್ ಕುಂದಾಪುರದ ಅಧ್ಯಕ್ಷರಾದ ಅಬ್ದುಲ್ ಮುನಾಫ್ ಹಂಗಾರಕಟ್ಟೆ, ಕೇಂದ್ರ ಸಮಿತಿಯ ಖಜಾಂಚಿ ಪೀರು ಸಾಹೇಬ್ ಉಡುಪಿ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಬೆಳ್ವೆ, ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ಹಾಗೂ NNO ಕಮ್ಯೂನಿಟಿ ಸೆಂಟರ್ ಕುಂದಾಪುರದ ಪ್ರಧಾನ ಕಾರ್ಯದರ್ಶಿ ಹುಸೇನ್ ಹೈಕಾಡಿ, ಸದಸ್ಯರಾದ ಮನ್ಸೂರ್ ಇಬ್ರಾಹಿಂ, ಬೈಂದೂರು ಘಟಕದ ಉಪಾಧ್ಯಕ್ಷ ಮಮ್ದು ಇಬ್ರಾಹಿಂ, ಉಡುಪಿ ಘಟಕದ ಉಪಾಧ್ಯಕ್ಷ ರಿಯಾಜ್ ಅಹ್ಮದ್, ಖಜಾಂಚಿ ಅಕ್ರಮ್ ಉಡುಪಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

  • ಕುಂದಾಪುರ: ಆನ್‌ಲೈನ್ ಟಾಸ್ಕ್ ಹಗರಣ; ಸಾಫ್ಟ್‌ವೇರ್ ಇಂಜಿನಿಯರ್‌ಗೆ 28 ಲ.ರೂ ವಂಚನೆ

    ಕುಂದಾಪುರ, ಜೂ. 17: ಶಿರಿಯಾರ ಗ್ರಾಮದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಆನ್‌ಲೈನ್ ಉದ್ಯೋಗ ಹಗರಣದಲ್ಲಿ ಒಟ್ಟು 28,01,095 ರೂ. ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

    ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮದ ನಿವಾಸಿ ಹಾಗೂ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಶಶಿಧರ್ (31) ಎಂಬುವರು ಕಳೆದ 15 ದಿನಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯೊಂದಕ್ಕೆ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಮೇ 29 ರಂದು, ಅವರಿಗೆ ತಮ್ಮ ಮೊಬೈಲ್ ಫೋನ್‌ಗೆ ಗೂಗಲ್‌ನಲ್ಲಿ ರೆಸ್ಯೂಮ್ ಸಲ್ಲಿಸುವ ಬಗ್ಗೆ ಸಂದೇಶವೊಂದು ಬಂದಿದೆ. ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಅವರಿಗೆ ಟೆಲಿಗ್ರಾಮ್ ಅಪ್ಲಿಕೇಶನ್‌ಗೆ ಮರುನಿರ್ದೇಶಿಸಲಾಯಿತು. ಅಲ್ಲಿ ಶರ್ಮಾಯ್ ರಾಣಿ ಎಂಬ ವ್ಯಕ್ತಿ ಅವರನ್ನು ಸಂಪರ್ಕಿಸಿದ್ದಾರೆ.

    ಶರ್ಮಾಯ್ ರಾಣಿ ಅವರು ಶಶಿಧರ್ ಅವರನ್ನು ‘ಕಿಂಗ್ಸ್ ಡಿಜಿಲಕ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಟೆಲಿಗ್ರಾಮ್ ಗುಂಪಿಗೆ ಸೇರಿಸಿದರು. ಅಲ್ಲಿ ಅವರಿಗೆ ಆನ್‌ಲೈನ್ ಕಾರ್ಯಗಳನ್ನು ನೀಡಲಾಯಿತು. ಆರಂಭದಲ್ಲಿ, ದೂರುದಾರರು ಕೆಲವು ಕಾರ್ಯಗಳನ್ನು ಪೂರ್ಣಗೊಳಿಸಿ ಹಣವನ್ನು ಪಡೆದರು. ಇದು ಗುಂಪಿನ ಬಗ್ಗೆ ಅವರ ನಂಬಿಕೆಯನ್ನು ಹೆಚ್ಚಿಸಿತು.

    ನಂತರ, ಆರೋಪಿಗಳು ಹಲವಾರು ಬ್ಯಾಂಕ್ ಖಾತೆ ವಿವರಗಳನ್ನು ನೀಡಿ, ಹೆಚ್ಚಿನ ಕಾರ್ಯಗಳನ್ನು ನಿರ್ವಹಿಸಲು ಮತ್ತು ಪಾವತಿಗಳನ್ನು ಮಾಡಲು ಸೂಚಿಸಿದರು. ಆರೋಪಿಗಳು ಸೂಚನೆಗಳನ್ನು ನಂಬಿದ ಶಶಿಧರ್ ಮೇ 30 ರಿಂದ ಜೂನ್ 12 ರವರೆಗೆ ಹಲವು ಬಾರಿ ಪಾವತಿ ಮಾಡಿದರು. ಅವರು UPI ಮೂಲಕ 7,93,095 ರೂ. ಮತ್ತು IMPS ಹಾಗೂ ITGRS ಮೂಲಕ 20,08,000 ರೂ. ವರ್ಗಾಯಿಸಿದ್ದಾರೆ. ಈ ಮೂಲಕ ಶಶಿಧರ್ ಒಟ್ಟು 28,01,095 ರೂ. ವರ್ಗಾಯಿಸಿದ್ದಾರೆ.

    ಕಾರ್ಯ ಪೂರ್ಣಗೊಂಡ ನಂತರ ದ್ವಿಗುಣ ಲಾಭ ನೀಡುವುದಾಗಿ ಆರೋಪಿಗಳು ಭರವಸೆ ನೀಡಿದ್ದರು. ಆದರೆ ಶಶಿಧರ್ ಹಣ ಪಾವತಿಸಿದ ನಂತರ ಆರೋಪಿಗಳು ಅವರನ್ನು ಸಂಪರ್ಕಿಸದೆ ವಂಚಿಸಿದ್ದಾರೆ.

    ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

  • ಅಧಿಕಾರ ಕಿತ್ತುಕೊಂಡಿದ್ದಾರೆ, ನಾನು ಯಾವ ಅಧಿಕಾರ ಹಸ್ತಾಂತರಿಸಲಿ : ಕಿಶೋರ್ ಕುಮಾರ್ ಕುಂದಾಪುರ

    ಉಡುಪಿ: ಉಡುಪಿ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ನನ್ನಿಂದ ಕಿತ್ತುಕೊಂಡಿದ್ದಾರೆ. ಪಕ್ಷಕ್ಕಾಗಿ ಪ್ರಾಮಾಣಿಕತೆಯ ಗರಿಷ್ಠ ಮಟ್ಟದಲ್ಲಿ ನಾನು ಕೆಲಸ ಮಾಡಿದ್ದೇನೆ. ಇನ್ನು ಯಾವ ರೀತಿಯಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಪಕ್ಷ ಹೇಳಿದ ಎಲ್ಲಾ ಕಾರ್ಯಕ್ರಮಗಳನ್ನು ನಿಷ್ಠೆಯಿಂದ ಮಾಡಿದ್ದೇನೆ. ನನ್ನಿಂದ ಪಕ್ಷಕ್ಕೆ ಏನು ತೊಂದರೆಯಾಗಿದೆ ಎನ್ನುವುದು ತಿಳಿದಿಲ್ಲ ಎಂದು ಬಿಜೆಪಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

    ಉಡುಪಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಬಹಿರಂಗವಾಗಿ ರಾಜ್ಯ ಬಿಜೆಪಿ ಘಟಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಶಿಕಾರಿಪುರದಲ್ಲಿ ರಾಜ್ಯಾಧ್ಯಕ್ಷರು ಸಿಕ್ಕಿದ್ದರು, ಚೆಂದ ಮಾಡಿ ಮಾತನಾಡಿಸಿದ್ದರು. ಚೆಂದ ಮಾಡಿ ಮಾತನಾಡಿಸಿದ್ದು ಯಾಕೆ ಎನ್ನುವುದು ನನಗೆ ಮತ್ತೆ ಗೊತ್ತಾಯಿತು ಎಂದು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ವಿರುದ್ಧ ಪರೋಕ್ಷವಾಗಿ ಅವರು ಸಾತ್ವಿಕ ಕೋಪ ವ್ಯಕ್ತಪಡಿಸಿದರು.

    ನಾನು ಕಾರ್ಯಕರ್ತರ ನಡುವೆಯೇ ಇದ್ದು ಬೆಳೆದು ಬಂದವ. ಇವತ್ತಿಗೂ ನಾನು ಯಾವ ನಾಯಕರ ಬೆನ್ನ ಹಿಂದೆ ತಿರುಗಿದವ ಅಲ್ಲ, ನಾಯಕರೊಂದಿಗೆ ಫೋಟೋ ತೆಗೆಸಿಕೊಂಡಿದ್ದೆಲ್ಲಾ ಮಾಡಿದವನಲ್ಲ. ಪಕ್ಷದ ಕಾರ್ಯಕರ್ತರಿಗೆ ನಾನು ಏನು ಎನ್ನುವುದರ ಬಗ್ಗೆ ಗೊತ್ತಿದೆ. ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರು ಕರೆ ಮಾಡಿ ಜಿಲ್ಲಾಧ್ಯಕ್ಷರನ್ನು ಬದಲು ಮಾಡುತ್ತಿದ್ದೇವೆ ಎಂದು ಹೇಳಿದ್ದರು. ಶಾಸಕರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡುವುದಿಲ್ಲ ಎಂದಿದ್ದಕ್ಕೆ, ಶಾಸಕರನ್ನೇ ಮಾಡಿ ಯಾರನ್ನೇ ಮಾಡಿ ನನ್ನನ್ನು ಕೈ ಬಿಟ್ಟಾದ ಮೇಲೆ ನನಗೆ ಅದರ ಅವಶ್ಯಕತೆ ಇಲ್ಲ ಎಂದು ನೇರವಾಗಿಯೇ ಹೇಳಿದ್ದೆ. ಕರೆ ಇಟ್ಟ ಕೆಲ ಕ್ಷಣಗಳಲ್ಲೇ ಆದೇಶ ಪತ್ರ ಬರುತ್ತದೆ. ಈ ಥರ ಎಲ್ಲಾ ಡೋಂಗಿ ಯಾಕೆ ಮಾಡಬೇಕಿತ್ತು ಎಂದು ಅವರು ಖಾರವಾಗಿಯೇ ಪಕ್ಷದ ರಾಜ್ಯ ಘಟಕದ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.

    ಪಕ್ಷಕ್ಕಾಗಿ, ಪಕ್ಷದ ಸಂಘಟನೆಗಾಗಿ ಸ್ವಂತ ಹಣ ವ್ಯಯ ಮಾಡಿದ್ದೇನೆ. ಅನೇಕರು ಸಹಾಯ ಮಾಡಿದ್ದಾರೆ. ಪದಾಧಿಕಾರಿಗಳು ನನ್ನೊಂದಿಗೆ ಇದ್ದು ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಸಹಕರಿಸಿದ್ದಾರೆ. ಪಕ್ಷದ ಈ ನಿರ್ಧಾರದಿಂದ ನನಗೆ ಖಂಡಿತ ನೋವಾಗಿದೆ. ನೂತನ ಅಧ್ಯಕ್ಷರಿಗೆ ನನ್ನ ಬೆಂಬಲ ಸದಾ ಇದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

    ಬಹುಶಃ ಜಿಲ್ಲಾಧ್ಯಕ್ಷನ ಅಧಿಕಾರ ವಹಿಸಿಕೊಂಡು ಎಂಟು ತಿಂಗಳು ಎದೆಯುಬ್ಬಿಸಿ ಅಧ್ಯಕ್ಷ ಎಂದು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಎಂಟು ತಿಂಗಳಾದ ಮೇಲೆ ಪಕ್ಷದ ವದಂತಿಗಳಲ್ಲೇ ಕಾಲ ಕಳೆಯುವಂತಾಯಿತು. ಅಧ್ಯಕ್ಷನಾಗಿರುವ ಕಾಲದವರೆಗೂ ಪಕ್ಷಕ್ಕಾಗಿ ದುಡಿದ ಹಿರಿಯ ಕಿರಿಯರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡಿದ್ದೇನೆ. ಪಕ್ಷದ ಚೌಕಟ್ಟನ್ನು ಮೀರಿ ಯಾವುದನ್ನೂ ಮಾಡಿಲ್ಲ. ಕೆಲವರು ನನ್ನ ಬಗ್ಗೆ ಕೆಟ್ಟದನ್ನು ಮಾತಾಡಿದ್ದಾರೆ. ಅವೆಲ್ಲದಕ್ಕೂ ಸ್ಪಷ್ಟನೆ ಕೊಡಬೇಕಾದ ಯಾವ ಅವಶ್ಯಕತೆಯೂ ನನಗಿಲ್ಲ. ನಾನು ನಾನೇ. ನಾನು ಏನೆಂಬುವುದನ್ನು ನನಗಿಂತ ಹೆಚ್ಚಾಗಿ ಬೇರೆ ಯಾರೂ ಅರ್ಥ ಮಾಡಿಕೊಳ್ಳುವುದಕ್ಕೆ ಖಂಡಿತ ಸಾಧ್ಯವಿಲ್ಲ. ರಾಜಕಾರಣವನ್ನು ಬಿಟ್ಟು ನನಗೆ ದೊಡ್ಡ ಪ್ರಪಂಚವಿದೆ. ಹೇಗೆ ಬೆಳೆಯಬೇಕು, ಹೇಗೆ ಇರಬೇಕು ಎನ್ನುವುದು ಗೊತ್ತಿದೆ. ಬಿಜೆಪಿಯ ಅವಕಾಶಕ್ಕೆ ಧನ್ಯವಾದ ಎಂದು ಹೇಳಿದರು.

    ನಿರ್ಗಮನ ಅಧ್ಯಕ್ಷರಿಗೆ ಸನ್ಮಾನ ಮಾಡುವ ಪದ್ಧತಿ ಇದೆ. ಯಾವ ಸನ್ಮಾನವನ್ನೂ ನಾನು ಸ್ವೀಕರಿಸುವುದಿಲ್ಲ. ಇಲ್ಲಿ ಅಧಿಕಾರ ಹಸ್ತಾಂತರ ಎನ್ನುವುದಲ್ಲ. ಅಧಿಕಾರವನ್ನು ನನ್ನಿಂದ ಕಿತ್ತುಕೊಂಡಿದ್ದಾರೆ. ಹಾಗಾಗಿ ನನ್ನಲ್ಲಿ ಅಧಿಕಾರ ಇಲ್ಲದೇ ಇರುವಾಗ ಅಧಿಕಾರ ಹಸ್ತಾಂತರ ಮಾಡಿದರೇ ತಪ್ಪು ಸಂದೇಶ ರವಾನೆಯಾಗುತ್ತದೆ. ಅಧಿಕಾರ ಹಸ್ತಾಂತರವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಗಳು (ಶಾಸಕ ವಿ.ಸುನೀಲ್ ಕುಮಾರ್) ಹಸ್ತಾಂತರ ಮಾಡುತ್ತಾರೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

    ಈ ಸಂದರ್ಭದಲ್ಲಿ ಮಾಜಿ ಸಚಿವ, ಕಾರ್ಕಳ ವಿಧಾನಸಭಾ ಶಾಸಕ ವಿ.ಸುನೀಲ್ ಕುಮಾರ್ ಕಾರ್ಕಳ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

    ಇತ್ತೀಚೆಗಷ್ಟೇ, ರಾಜ್ಯದಲ್ಲಿ ಬಾಕಿ ಉಳಿದಿದ್ದ 10 ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ರಾಜ್ಯ ಬಿಜೆಪಿ ನೇಮಕ ಮಾಡಿತ್ತು. ಕಿಶೋರ್ ಕುಮಾರ್ ಕುಂದಾಪುರ ಅವರಲ್ಲಿದ್ದ ಉಡುಪಿ ಜಿಲ್ಲೆಯ ಅಧ್ಯಕ್ಷಗಿರಿಯನ್ನು ಕಿತ್ತು ಕುತ್ಯಾರು ನವೀನ್ ಶೆಟ್ಟಿ ಅವರನ್ನು ನೂತನ ಅಧ್ಯಕ್ಷರನ್ನಾಗಿ ನೇಮಿಸಿತ್ತು.

  • ಮುಂದವರಿದ ಮಳೆ – ಜೂ.17ರಂದು ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜುಗಳಿಗೆ ರಜೆ

    ಉಡುಪಿ,ಜೂ.16: ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 17ರಂದು ಅಂಗನವಾಡಿ, ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ, ಪಿಯುಸಿ ಹಾಗೂ ಐಟಿಐ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಅವರು ರಜೆ ಘೋಷಿಸಿ ಆದೇಶಿಸಿದ್ದಾರೆ.

    ಉಳಿದಂತೆ ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ. ಆದರೆ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ ಮತ್ತು ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

    ಕಳೆದ ಆರು ದಿನಗಳಿಂದ ರೆಡ್‌ ಅಲರ್ಟ್‌ ಇದ್ದುದರಿಂದ ಗುರುವಾರ ಹಾಗೂ ಶುಕ್ರವಾರ ಶಾಲೆಗಳಿಗೆ ರಜೆ ನೀಡಲಾಗಿತ್ತು. ಶನಿವಾರ ಮಳೆ ಕಡಿಮೆಯಿದ್ದುದರಿಂದ ಎಂದಿನಂತೆ ತರಗತಿಗಳು ನಡೆದಿದ್ದವು. ಸೋಮವಾರ ಆರೆಂಜ್‌ ಅಲರ್ಟ್‌ ಇದ್ದುದರಿಂದ ಜಿಲ್ಲಾಡಳಿತ ನೇರವಾಗಿ ರಜೆ ಘೋಷಿಸದೇ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ರಜೆ ಘೋಷಿಸುವ ನಿರ್ಧಾರವನ್ನು ಶಾಲಾಡಳಿತಕ್ಕೆ ಬಿಟ್ಟಿದ್ದು, ಕೆಲವು ಶಾಲೆಗಳು ಅದಾಗಲೇ ರಜೆಯನ್ನೂ ಘೋಷಿಸಿಕೊಂಡಿದ್ದವು. ಆದರೆ ಅಂತಿಮವಾಗಿ ಜಿಲ್ಲಾಡಳಿತವೇ ರಜೆ ನೀಡಿತ್ತು. ಮಂಗಳವಾರವೂ ಅಧಿಕ ಮಳೆ ಮುನ್ಸೂಚನೆ ಇರುವುದರಿಂದ ರಜೆ ಘೋಷಿಸಲಾಗಿದೆ.

  • ಬಸ್ಸಿಗೆ ಬೈಕ್‌ ಡಿಕ್ಕಿಯಾಗಿ ಸವಾರನ ಸಾವು, ಹೊತ್ತಿ ಉರಿದ ಬೈಕ್

    ಕುಂದಾಪುರ,ಜೂ.16: ತಾಲೂಕಿನ ಹೆಮ್ಮಾಡಿ – ಕೊಲ್ಲೂರು ಮಾರ್ಗದಲ್ಲಿ ಬಸ್ಸಿಗೆ ಬೈಕ್‌ ಡಿಕ್ಕಿಯಾಗಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ. ಅಪಘಾತದ ಸಂದರ್ಭ ಬೈಕಿಗೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿದೆ. ಮೃತ ಬೈಕ್ ಸವಾರನನ್ನು ಸಿಗಂದೂರಿನ ಶರತ್‌ (25) ಎಂದು ಗುರುತಿಸಲಾಗಿದೆ.

    ಸಿಗಂದೂರಿನಿಂದ ಕುಂದಾಪುರಕ್ಕೆ ಸಂಬಂಧಿಕರ ಮನೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕೆಂಚನೂರು ಮಲ್ಲಾರಿ ರಸ್ತೆಯ ತಿರುವಿನಲ್ಲಿ ಸವಾರ ನಿಯಂತ್ರಣ ತಪ್ಪಿ ಹೆಮ್ಮಾಡಿ ಕಡೆಯಿಂದ ಬರುತ್ತಿದ್ದ  ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಶರತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಸಂಪೂರ್ಣ ಬೆಂಕಿಯಿಂದಾಗಿ ಸುಟ್ಟು ಕರಕಲಾಗಿದೆ.

  • ಬ್ರಹ್ಮಾವರ : ಜಿ ಎಮ್ ಶಾಲಾ ಮಕ್ಕಳಿಂದ ಭತ್ತದ ನಾಟಿ

    ಬ್ರಹ್ಮಾವರ : ಇಲ್ಲಿನ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಮಕ್ಕಳಲ್ಲಿ ಕೃಷಿಯ ಕುರಿತ ಆಸಕ್ತಿಯನ್ನು ಮೂಡಿಸಲು ಭತ್ತ ಬೆಳೆಯುವತ್ತ ಮಕ್ಕಳ ಚಿತ್ತ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಉಡುಪಿ ಉದ್ಯಾವರದ ಕುತ್ಪಾಡಿಯ ಕೃಷಿ ಭೂಮಿಯಲ್ಲಿ ಭತ್ತದ ನಾಟಿಯನ್ನು ಮಾಡಿದರು.

    ಸಂಪ್ರದಾಯ ಶೈಲಿಯಲ್ಲಿ ಕಂಬಳದ ಕೋಣಗಳಿಂದ ಗದ್ದೆಯನ್ನು ಉಳುಮೆ ಮಾಡಿ ನಾಟಿಯನ್ನು ಪ್ರಾರಂಭಿಸಲಾಯಿತು. ಮಕ್ಕಳು ಸ್ಥಳೀಯ ರೈತರೊಂದಿಗೆ ನೇಜಿಯನ್ನು ನಾಟಿ ಮಾಡುವುದರ ಮೂಲಕ ಕೃಷಿಯ ಅನುಭವ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಸ್ಥಳೀಯ ರೈತರನ್ನು ಸನ್ಮಾಯಿಸಲಾಯಿತು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಕೃಷಿ ಭೂಮಿಯಲ್ಲಿ ಮಕ್ಕಳ ಜೊತೆಯಿದ್ದು ಸ್ಪೂರ್ತಿ ತುಂಬಿದರು. ಮಕ್ಕಳು ಮಧ್ಯಾಹ್ನ ಚಟ್ನಿಯ ಜೊತೆ ಗಂಜಿ ಊಟವನ್ನು ಮಾಡಿ ಹಳ್ಳಿಯ ಸೊಗಡನ್ನು ಅನುಭವಿಸಿದರು.

  • ಭಾರೀ ಗಾಳಿಮಳೆ: ತಾರಾಪತಿಯಲ್ಲಿ ಹಾರಿಹೋದ ಮನೆಯ ಮೇಲ್ಛಾವಣಿ

    ಬೈಂದೂರು: ರವಿವಾರ ರಾತ್ರಿ ಬೀಸಿದ ಭೀಕರ ಗಾಳಿಗೆ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಡುವರಿ ಸಮೀಪದ ತಾರಾಪತಿ ತುಂಡ್ಲಿತ್ತು ದಿ.ಗಂಗೆ ಪೂಜಾರಿ ಅವರ ಮನೆಯ ಮೇಲ್ಛಾವಣಿ ಹಾರಿ ಹೋಗಿದೆ.

    ರಾತ್ರಿ ಊಟ ಮಾಡಿ ಮಲಗಿದ ಸಂದರ್ಭ ಮಳೆಯೊಂದಿಗೆ ಬೀಸಿದ ಭಾರೀ ಗಾಳಿಗೆ ಮನೆಯ ಮೇಲ್ಛಾವಣಿ ಸೀಟುಗಳು ಹಾರಿ ಹೋಗಿ ದೂರ ಬಿದ್ದಿದೆ. ಮಳೆಯ ನೀರು ಮನೆಯ ಒಳಗೆ ಬರುತ್ತಿದೆ. ದೊಡ್ಡ ಪ್ರಮಾಣದ ಹಾನಿಯಾಗಿದ್ದು ಸಾಕಷ್ಟು ನಷ್ಟ ಸಂಭವಿಸಿದೆ.

  • ಜೂ.16ರಂದು ಉಡುಪಿ ಜಿಲ್ಲೆಯ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ

    ಉಡುಪಿ,ಜೂ.15: ಉಡುಪಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 16ರಂದು ಅಂಗನವಾಡಿ, ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿ ಅವರು ರಜೆ ಘೋಷಿಸಿ ಆದೇಶಿಸಿದ್ದಾರೆ.

    ಉಳಿದಂತೆ ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್ ಹಾಗೂ ಐಟಿಐ ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ. ಆದರೆ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ ಮತ್ತು ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

    ರಜೆ ಘೋಷಿಸುವ ಪೂರ್ವದಲ್ಲಿ ಸೋಮವಾರ ಶಾಲೆಗಳಿಗೆ ಜಿಲ್ಲಾಡಳಿತದಿಂದ ರಜೆ ಘೋಷಿಸಿರಲಿಲ್ಲ. ಆದರೆ ಆಯಾ ಊರಿನ ಪರಿಸ್ಥಿತಿಗೆ ಅನುಗುಣವಾಗಿ ಮುಖ್ಯ ಶಿಕ್ಷಕರು ಮತ್ತು ಎಸ್.ಡಿ.ಎಂ.ಸಿ ಸಮಿತಿ ಚರ್ಚಿಸಿ ಶಾಲೆಗೆ ರಜೆಯನ್ನು ಘೋಷಿಸಬಹುದಾಗಿದೆ ಎಂದು ಜಿಲ್ಲಾಡಳಿತ ಸೂಚನೆ ನೀಡಿತ್ತು. ಭಾನುವಾರ ರಾತ್ರಿ 9 ಗಂಟೆಯ ಬಳಿಕ ಮಳೆ ಪರಿಸ್ಥಿತಿ ಅವಲೋಕಿಸಿ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

    ಕಳೆದ ನಾಲ್ಕುದು ದಿನಗಳಿಂದ ರೆಡ್‌ ಅಲರ್ಟ್‌ ಇದ್ದುದರಿಂದ ಗುರುವಾರ ಹಾಗೂ ಶುಕ್ರವಾರ ಶಾಲೆಗಳಿಗೆ ರಜೆ ನೀಡಲಾಗಿತ್ತು. ಶನಿವಾರ ಮಳೆ ಕಡಿಮೆಯಿದ್ದುದರಿಂದ ಎಂದಿನಂತೆ ತರಗತಿಗಳು ನಡೆದಿದ್ದವು. ಸೋಮವಾರ ಆರೆಂಜ್‌ ಅಲರ್ಟ್‌ ಇದ್ದುದರಿಂದ ಜಿಲ್ಲಾಡಳಿತ ನೇರವಾಗಿ ರಜೆ ಘೋಷಿಸದೇ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ರಜೆ ಘೋಷಿಸುವ ನಿರ್ಧಾರವನ್ನು ಶಾಲಾಡಳಿತಕ್ಕೆ ಬಿಟ್ಟಿದ್ದು, ಕೆಲವು ಶಾಲೆಗಳು ಅದಾಗಲೇ ರಜೆಯನ್ನೂ ಘೋಷಿಸಿಕೊಂಡಿದ್ದವು. ಅಂತಿಮವಾಗಿ ಜಿಲ್ಲಾಡಳಿತವೇ ರಜೆ ನೀಡಿದೆ.

  • Udupi: A crane accident, the man died, the woman serious

    Udupi, June 14: In a tragic incident, one person died on the spot and a woman was seriously injured after a crane fell from the cradle to the ground while inspecting the slab leakage site near the Public Works Department office on Udupi Court Road on Saturday.

    Francis Furtado (65), who had called a crane to check for a slab leak at his brother’s house, climbed out of its cradle (bucket) with his maid, Sharada, when the belt on one side of the cradle snapped and they both fell to the ground.

    Social worker Nithyananda Olakadu, who rushed to the spot after learning about the incident, took both of them in his ambulance to Ajjarakadu district hospital. She was admitted to the hospital and her condition is said to be serious.

    Though both of them fell down after the accident, the driver of the crane fled from the spot with the crane.
    A case has been registered in Udupi town police station.