Category: Udupi District

  • ಉಡುಪಿ ಜಿಲ್ಲೆ: ಪೆಟ್ರೋಲ್ ಬಂಕ್‌ಗಳಿಗೆ ಜಿಲ್ಲಾಧಿಕಾರಿಗಳಿಂದ ಕಟ್ಟುನಿಟ್ಟಿನ ಸೂಚನೆ

    ಉಡುಪಿ, ಜೂನ್ 11, 2025: ಉಡುಪಿ ಜಿಲ್ಲೆಯ ಎಲ್ಲಾ ಪೆಟ್ರೋಲ್ ಬಂಕ್‌ ಮಾಲೀಕರಿಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಮಹತ್ವದ ಸೂಚನೆಯೊಂದನ್ನು ಹೊರಡಿಸಲಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲಿನ ಶೌಚಾಲಯಗಳ ಸ್ವಚ್ಛತೆಯ ಕೊರತೆ ಮತ್ತು ದುರಸ್ತಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳಾದ ಜಾಕಿ ಡಾ. ಕೆ ವಿದ್ಯಾಕುಮಾರಿ ಅವರು ಆದೇಶಿಸಿದ್ದಾರೆ.

    1. ಶೌಚಾಲಯಗಳ ಸ್ವಚ್ಛತೆ: ಎಲ್ಲಾ ಪೆಟ್ರೋಲ್ ಬಂಕ್‌ಗಳ ಶೌಚಾಲಯಗಳು ಕಡ್ಡಾಯವಾಗಿ ಸ್ವಚ್ಛವಾಗಿರಬೇಕು. ಸ್ಯಾನಿಟೈಸರ್, ಟಾಯ್ಲೆಟ್ ಪೇಪರ್ ಮತ್ತು ಇತರ ಅಗತ್ಯ ವಸ್ತುಗಳು ಯಾವಾಗಲೂ ಲಭ್ಯವಿರುವಂತೆ ನೋಡಿಕೊಳ್ಳಬೇಕು.
    2. ನೀರಿನ ಸಂಪರ್ಕ: ಶೌಚಾಲಯಗಳಲ್ಲಿ ಸುಸಜ್ಜಿತ ನೀರಿನ ಸಂಪರ್ಕವಿರಬೇಕು.
    3. ಮುಕ್ತ ಪ್ರವೇಶ: ಪೆಟ್ರೋಲ್ ಬಂಕ್‌ಗೆ ಬರುವ ಗ್ರಾಹಕರಿಗೆ ಶೌಚಾಲಯಗಳಿಗೆ ಮುಕ್ತ ಪ್ರವೇಶವನ್ನು ಕಲ್ಪಿಸಬೇಕು.
    4. ಪ್ರತ್ಯೇಕ ಶೌಚಾಲಯಗಳು: ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾದ ಶೌಚಾಲಯಗಳನ್ನು ಒದಗಿಸಬೇಕು.

    ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಸಾರ್ವಜನಿಕ ಜಾಗೃತಿಗಾಗಿ ಸರ್ಕಾರಕ್ಕೆ ಯಾವುದೇ ವೆಚ್ಚವಿಲ್ಲದಂತೆ ದಿನಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳಲ್ಲಿ ಪ್ರಕಟಣೆಯನ್ನು ಪ್ರಸಾರ ಮಾಡಲು ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ, ಉಡುಪಿಗೆ ಸೂಚಿಸಲಾಗಿದೆ.

  • ನಾಪತ್ತೆ ಪ್ರಕರಣಕ್ಕೆ ತಿರುವು; ಸ್ಕೂಟಿ ಜೊತೆ ನಾಪತ್ತೆಯಾದ ಮಹಿಳೆ ಯುವಕನೊಂದಿಗೆ ಎಸ್ಕೇಪ್?

    ಕುಂದಾಪುರ: ಎರಡು ಮಕ್ಕಳ‌ ತಾಯಿಯೊಬ್ಬಳು ನದಿಗೆ ಹಾರಿದ ನಾಟಕವಾಡಿದ ಯುವಕನೊಂದಿಗೆ‌ ಪರಾರಿಯಾದ ಘಟನೆ ನಡೆದಿದೆ.

    ಕುಂದಾಪುರ ಚರ್ಚ್ ರೋಡ್‌ನಿಂದ ಕೋಡಿಗೆ ಹೋಗುವ ಸೇತುವೆ ಬಳಿ ವಿಠಲವಾಡಿ ಮೂಲದ ಹೀನಾ ಕೌಸರ್(33) ಎಂಬಾಕೆ ಸ್ಕೂಟಿ ಹಾಗೂ ಚಪ್ಪಲಿ ಬಿಟ್ಟು ನದಿಗೆ ಹಾರಿದ ರೀತಿ ನಾಟಕವಾಡಿ ಹೆಮ್ಮಾಡಿಯ ಹೊಟೇಲ್ ಕಾರ್ಮಿಕ ಸಾಹಿಲ್ (27) ಎಂಬುವನ‌ ಜೊತೆ ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.

     ಮಹಿಳೆಯ ಪತಿ ವಿದೇಶದಲ್ಲಿದ್ದು ಎರಡು ಮಕ್ಕಳು ಹಾಗೂ ತಾಯಿಯೊಂದಿಗೆ ಕುಂದಾಪುರ ವಿಠಲವಾಡಿಯಲ್ಲಿ ವಾಸಿಸುತ್ತಿದ್ದರು.

    ಕುಂದಾಪುರ ಫುಡ್ ಮಾರ್ಕ್ ಎಂಬ ಹೋಟೇಲ್‌ ನಲ್ಲಿ ಯುವಕ ಕೆಲಸ ಮಾಡಿಕೊಂಡಿದ್ದು ಜೂ. 8 ರಂದು ರಾತ್ರಿ 8 ಗಂಟೆ ಸುಮಾರಿಗೆ ಮನೆಯಿಂದ ಕುಂದಾಪುರ ಪೇಟೆಗೆ ಹೋಗಿ ಬರುವುದಾಗಿ ಹೇಳಿ ತನ್ನ ಸ್ಕೂಟಿಯಲ್ಲಿ ಹೋದವ ಇದುವರೆಗೆ ಬಾರದೆ ನಾಪತ್ತೆಯಾದ ಬಗ್ಗೆ ದೂರು ದಾಖಲಾಗಿದೆ.

    ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 75/2025 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

  • ಉಡುಪಿ: ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಅನ್ನಭಾಗ್ಯದ ಅಕ್ಕಿ ವಶಕ್ಕೆ; ಆರೋಪಿಯ ಬಂಧನ

    ಉಡುಪಿ, ಜೂ. 10: ಸರಕಾರದ ಉಚಿತ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ದಾಸ್ತಾನು ಇರಿಸಿದ ಆರೋಪದ ಮೇರೆಗೆ ಜೂನ್ 10ರಂದು ದಾಳಿ ನಡೆಸಿದ ಹಿರಿಯಡ್ಕ ಪೊಲೀಸರು ಸುಮಾರು 1,27,880 ರೂ. ಮೌಲ್ಯದ 55 ಕ್ವಿಂಟಾಲ್ 60 ಕೆ.ಜಿ. ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ.

    ಬೊಮ್ಮರಬೆಟ್ಟುವಿನ ವಾಸುದೇವ ಪ್ರಭು (56) ಬಂಧಿತ ಆರೋಪಿ.

    ಆರೋಪಿಯು ಮಾಂಬೆಟ್ಟು ಎಂಬಲ್ಲಿರುವ ತನ್ನ ಜನರಲ್ ಸ್ಟೋರ್‌ನಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ದಾಸ್ತಾನು ಇಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಉಡುಪಿಯ ಆಹಾರ ನಿರೀಕ್ಷಕರು ಮತ್ತು ಹಿರಿಯಡಕ ಠಾಣಾ ಪಿಎಸ್‌ಐ ಪುನಿತ್ ಕುಮಾರ್ ಬಿ.ಇ. ಹಾಗೂ ಸಿಬ್ಬಂದಿಗಳಾದ ಆದರ್ಶ, ಕಾರ್ತಿಕ್ ಅವರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

    ದಾಳಿ ವೇಳೆ ಅಂಗಡಿಯ ಸಿಟೌಟ್‌ನಲ್ಲಿ ಒಟ್ಟು 131 ಪ್ಲಾಸ್ಟಿಕ್ ಚೀಲಗಳಲ್ಲಿ 1,27,880 ರೂ. ಮೌಲ್ಯದ ಒಟ್ಟು 55 ಕ್ವಿಂಟಾಲ್ 60 ಕೆ.ಜಿ. ಅಕ್ಕಿ ದಾಸ್ತಾನು ಮಾಡಲಾಗಿತ್ತು. ಇದನ್ನು ಪರಿಶೀಲಿಸಿದಾಗ ಅನ್ನಭಾಗ್ಯ ಯೋಜನೆಯಡಿಯಲ್ಲಿ ವಿತರಿಸಲಾಗಿರುವ ಅಕ್ಕಿ ಎಂದು ದೃಢಪಟ್ಟಿದೆ. ಆರೋಪಿಯನ್ನು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಬಗ್ಗೆ ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಂದಾಪುರ: ಕಳ್ಳತನ ಪ್ರಕರಣ; ಹೈಕೋರ್ಟ್‌ನಿಂದ ಆರೋಪಿಗೆ ಷರತ್ತುಬದ್ಧ ಜಾಮೀನು

    ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನಲ್ಲಿ ಕುಂದಾಪುರದ ಕೋಡಿ ಗ್ರಾಮದ ನಾಗೇಶ್ ಕಾಮತ್ (52) ಎಂಬವರಿಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕ್ರಿಮಿನಲ್ ಪ್ರಕರಣ ಸಂಖ್ಯೆ 28/2025ರಲ್ಲಿ ಷರತ್ತುಬದ್ಧ ಜಾಮೀನು ಮಂಜೂರಾಗಿದೆ. ಈ ಪ್ರಕರಣವು ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 341(1) (ಕಳ್ಳತನ), ಕಲಂ 341(2) (ಕಳ್ಳತನದ ಉದ್ದೇಶಕ್ಕಾಗಿ ತಯಾರಿ), ಮತ್ತು ಕಲಂ 318(4) (ಛಲದಿಂದ ವಂಚನೆ) ರಂತೆ ದಾಖಲಾಗಿತ್ತು. ದಿನಾಂಕ 03/06/2025 ರಂದು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠವು ಈ ತೀರ್ಪನ್ನು ನೀಡಿತು.

    ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕರಿಂದ ಸ್ವೀಕೃತವಾದ ಖಚಿತ ಮಾಹಿತಿಯ ಆಧಾರದ ಮೇಲೆ, ಆರೋಪಿ ನಾಗೇಶ್ ಕಾಮತ್ ಅವರು ಸರ್ಕಾರಿ ಕಚೇರಿಗಳಾದ ಸಬ್ ರಿಜಿಸ್ಟ್ರಾರ್ ಕಚೇರಿ, ಗ್ರಾಮ ಪಂಚಾಯಿತಿ, ಬಿಜ್ಜಹಳ್ಳಿ, ಮತ್ತು ಉಡುಪಿ ಡಿ.ಸಿ. ಕಚೇರಿಗಳ ನಕಲಿ ಮೊಹರುಗಳು ಮತ್ತು ರಬ್ಬರ್ ಸ್ಟಾಂಪ್‌ಗಳನ್ನು ಹೊಂದಿದ್ದರು ಎಂದು ಆರೋಪಿಸಲಾಗಿತ್ತು. ಈ ಮೊಹರುಗಳನ್ನು ಬಳಸಿ ಸಾರ್ವಜನಿಕರಿಗೆ ಖೋಟಾ ದಾಖಲೆಗಳನ್ನು ಒದಗಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ದಿನಾಂಕ 28/02/2025 ರಂದು ನ್ಯಾಯಾಲಯದಿಂದ ಶೋಧ ವಾರಂಟ್ ಪಡೆದು ಆರೋಪಿಯ ಕಚೇರಿಯಲ್ಲಿ ಶೋಧ ನಡೆಸಿದಾಗ 22 ಮೊಹರುಗಳು ಮತ್ತು ರಬ್ಬರ್ ಸ್ಟಾಂಪ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆರೋಪಿಯನ್ನು ಅಂದೇ ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

    ಆರೋಪಿಯ ವಕೀಲರು, ಈ ಪ್ರಕರಣದಲ್ಲಿ ಸಾರ್ವಜನಿಕರಿಂದ ಯಾವುದೇ ದೂರು ಬಂದಿಲ್ಲ ಎಂದು ವಾದಿಸಿದರು. ಜೊತೆಗೆ, ಚಾರ್ಜ್‌ಶೀಟ್‌ನಲ್ಲಿ ಕಲಂ 318(4) ಆರೋಪವನ್ನು ಕೈಬಿಡಲಾಗಿದೆ ಎಂದು ತಿಳಿಸಿದರು. ಆದರೆ, ಸರ್ಕಾರಿ ವಕೀಲರು ಆರೋಪಿಯು ಐದು ಇತರ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಗಂಭೀರ ಆರೋಪಿಯೆಂದು ವಾದಿಸಿ, ಜಾಮೀನು ನೀಡಿದರೆ ಮತ್ತೆ ಇಂತಹ ಅಪರಾಧಗಳಲ್ಲಿ ತೊಡಗುವ ಸಾಧ್ಯತೆ ಇದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

    ತನಿಖೆ ಪೂರ್ಣಗೊಂಡು ಚಾರ್ಜ್‌ಶೀಟ್ ಸಲ್ಲಿಕೆಯಾಗಿರುವುದರಿಂದ ಮತ್ತು ಆರೋಪಿತ ಅಪರಾಧಗಳಿಗೆ ಗರಿಷ್ಠ ಏಳು ವರ್ಷಗಳ ಶಿಕ್ಷೆಯಿರುವುದರಿಂದ, ನ್ಯಾಯಾಲಯವು ಆರೋಪಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು. ಜಾಮೀನಿಗೆ ಈ ಕೆಳಗಿನ ಷರತ್ತುಗಳನ್ನು ವಿಧಿಸಲಾಗಿದೆ:

    1. ಆರೋಪಿಯು 2 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಜಾಮೀನುದಾರರೊಂದಿಗೆ ಜಾಮೀನು ಒದಗಿಸಬೇಕು.
    2. ಪ್ರತಿ ಎರಡನೇ ಭಾನುವಾರ ಬೆಳಿಗ್ಗೆ 10:00 ರಿಂದ 1:00 ಗಂಟೆಯೊಳಗೆ ಕುಂದಾಪುರ ಪೊಲೀಸ್ ಠಾಣೆಗೆ ಹಾಜರಾಗಿ ಹಾಜರಾತಿ ದಾಖಲಿಸಬೇಕು.
    3. ಆರೋಪಿಯು ನ್ಯಾಯಾಲಯದ ವಿಚಾರಣೆಗೆ ನಿಯಮಿತವಾಗಿ ಹಾಜರಾಗಬೇಕು.
    4. ಸಾಕ್ಷಿಗಳ ಮೇಲೆ ಯಾವುದೇ ರೀತಿಯ ಒತ್ತಡ ತರಬಾರದು.
    5. ಭವಿಷ್ಯದಲ್ಲಿ ಇಂತಹ ಅಪರಾಧಗಳಲ್ಲಿ ತೊಡಗಬಾರದು.
    6. ನ್ಯಾಯಾಲಯದ ಅನುಮತಿಯಿಲ್ಲದೆ ಕುಂದಾಪುರ ತಾಲೂಕಿನ ವ್ಯಾಪ್ತಿಯನ್ನು ತೊರೆಯಬಾರದು.

    ಈ ತೀರ್ಪಿನೊಂದಿಗೆ, ಕುಂದಾಪುರ ಪೊಲೀಸ್ ಠಾಣೆಯ ಕ್ರಿಮಿನಲ್ ಪ್ರಕರಣ ಸಂಖ್ಯೆ 28/2025 ರಲ್ಲಿ ಆರೋಪಿಗೆ ಜಾಮೀನು ದೊರೆತಿದ್ದು, ವಿಚಾರಣೆ ಮುಂದುವರಿಯಲಿದೆ.

  • ಕುಂದಾಪುರ: ಯುವಕ ಕಾಣೆ; ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

    ಕುಂದಾಪುರ, ಜೂನ್ 10, 2025: ಹೆಮ್ಮಾಡಿ ಗ್ರಾಮದ ಫಝಕ್ಕೀರ್‌ (35) ಎಂಬವರ ತಮ್ಮ ಸಾಹೀಲ್‌ (27) ಕಾಣೆಯಾಗಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. ಸಾಹೀಲ್‌, ಕುಂದಾಪುರದ ಪುಡ್‌ ಮಾರ್ಕ ಎಂಬ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ದಿನಾಂಕ 08/06/2025 ರಂದು ರಾತ್ರಿ 8:05 ಗಂಟೆಗೆ ಮನೆಯಿಂದ ಕುಂದಾಪುರ ಪೇಟೆಗೆ ಹೋಗುವುದಾಗಿ ಹೇಳಿ, KA-20-HE-1704 ನೋಂದಣಿಯ ಸ್ಕೂಟಿಯಲ್ಲಿ ತೆರಳಿದವರು ಮನೆಗೆ ವಾಪಸ್ಸಾಗಿಲ್ಲ.

    ಈ ಬಗ್ಗೆ ಫಝಕ್ಕೀರ್‌ ಅವರು ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಅಪರಾಧ ಕ್ರಮಾಂಕ 75/2025 ರಂತೆ “ಗಂಡಸು ಕಾಣೆ” ಪ್ರಕರಣವಾಗಿ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಾಹೀಲ್‌ ಅವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ.

  • ಮೆಡಿಕಲ್ ಶಾಪ್‌ನಲ್ಲಿ ಚಿಲ್ಲರೆ ಕೇಳಿದ್ದಕ್ಕೆ ಯುವತಿ ಮೇಲೆ ಮಹಿಳೆಯಿಂದ ಹಲ್ಲೆ. ಪ್ರಕರಣ ದಾಖಲು, ಎಸ್ಪಿ ಭೇಟಿ

    ಕುಂದಾಪುರ, ಜೂನ್ 10, 2025: ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ ಒಬ್ಬ ಯುವತಿ (22) ಕಳೆದ ಒಂದು ವರ್ಷದಿಂದ ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಜಂಕ್ಷನ್ ಬಳಿಯ ಹೆಲ್ತ್ ಕೇರ್ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ದಿನಾಂಕ 09/06/2025 ರಂದು ಬೆಳಿಗ್ಗೆ 11:30 ಗಂಟೆಗೆ, ಯುವತಿ ಕೆಲಸದಲ್ಲಿ ನಿರತರಾಗಿದ್ದಾಗ, ಯಾಸ್ಮಿನ್ ಎಂಬಾತರು ಮೆಡಿಕಲ್ ಶಾಪ್‌ಗೆ ಬಂದು ಸಿರ್ಲ್ಯಾಕ್ ಬೇಬಿ ಪೌಡರ್ ಕೇಳಿದ್ದಾರೆ.

    ಯುವತಿ ವಸ್ತುವನ್ನು ಯಾಸ್ಮಿನ್‌ಗೆ ನೀಡಿ, 330 ರೂಪಾಯಿ ಪಾವತಿಸುವಂತೆ ಕೇಳಿದ್ದಾರೆ. ಯಾಸ್ಮಿನ್ 500 ರೂಪಾಯಿ ನೋಟು ನೀಡಿದಾಗ, ಯುವತಿ ಚಿಲ್ಲರೆ ಇಲ್ಲವೆಂದು ತಿಳಿಸಿ, ಪಕ್ಕದ ಅಂಗಡಿಯಿಂದ ಚಿಲ್ಲರೆ ತರಲು ಹೊರಗೆ ಹೋದರು. ಈ ವೇಳೆ ಯಾಸ್ಮಿನ್ ಯುವತಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಜಾತಿನಿಂದನೆ ಮಾಡಿ ಸಾರ್ವಜನಿಕವಾಗಿ ಅವಮಾನಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

    ಈ ಘಟನೆಯ ಬಗ್ಗೆ ಯುವತಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಅ.ಕೃ 34/2025, ಕಲಂ 352,115(2) BNS, 3(1)(R), 3(2)(VA) SC/ST ACT 03 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ

    ಅಪ್ಡೇಟ್:

    ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಾವಿನಕಟ್ಟೆಯಲ್ಲಿ ಮೆಡಿಕಲ್ ಶಾಪ್ ನಲ್ಲಿ ಚಿಲ್ಲರೆ ವಿಷಯಕ್ಕಾಗಿ ಇಬ್ಬರು ಮಹಿಳೆಯರ ನಡುವೆ ಮಾತಿನ ಚಕಮಕಿ ನಡೆದು ಆರೋಪಿ ಮಹಿಳೆಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.

    ಸದರಿ ಪ್ರಕರಣದ ಸಂತ್ರಸ್ತೆ ಮಹಿಳೆಯನ್ನು ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಐಪಿಎಸ್ ರವರು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿ ಮಾಹಿತಿಯನ್ನು ಪಡೆದುಕೊಂಡಿರುತ್ತಾರೆ.

    ದಲಿತ ಮುಖಂಡರಿಂದ ಪೊಲೀಸ್ ಠಾಣೆಗೆ ಭೇಟಿ

  • ಕುಂದಾಪುರ: ಸೇತುವೆ ಬಳಿ ಸ್ಕೂಟರ್, ಚಪ್ಪಲಿ ಬಿಟ್ಟು ಮಹಿಳೆ ನಾಪತ್ತೆ

    ಕುಂದಾಪುರ: ನಗರದ ವಿವಾಹಿತ ಮಹಿಳೆಯೋರ್ವರು ನಾಪತ್ತೆಯಾದ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲ್ಲಿನ ವಿಠಲವಾಡಿ ಮೂಲದ ಹೀನಾ ಕೌಸರ್ (33) ನಾಪತ್ತೆಯಾದ ಮಹಿಳೆ.

    ಹೀನಾ ಪತಿ ವಿದೇಶದಲ್ಲಿದ್ದು ಎರಡು ಮಕ್ಕಳು ಹಾಗೂ ತಾಯಿಯೊಂದಿಗೆ ಕುಂದಾಪುರ ವಿಠಲವಾಡಿಯಲ್ಲಿ ವಾಸಿಸುತ್ತಿದ್ದರು. ಸೋಮವಾರ ಬೆಳಿಗ್ಗೆ 04-00 ಗಂಟೆ ಸುಮಾರಿಗೆ ಕುಂದಾಪುರ ಚರ್ಚ್ ರಸ್ತೆಯಿಂದ ಕೋಡಿಗೆ ಹೋಗುವ ಸೇತುವೆ ಬಳಿ ಮಹಿಳೆಯ ಸ್ಕೂಟರ್ ಹಾಗೂ ಚಪ್ಪಲಿ ಪತ್ತೆಯಾಗಿದೆ.

    ಪೊಲೀಸರು, ಅಗ್ನಿ ಶಾಮಕದಳ ಹಾಗೂ ಸ್ಥಳೀಯರು ಸೇರಿ ನದಿಯಲ್ಲಿ ಹುಡುಕಾಟ ನಡೆಸಿದ್ದು ಎಲ್ಲಿಯೂ ಪತ್ತೆ ಆಗಿರುವುದಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿರುತ್ತದೆ. ಇದರಿಂದಾಗಿ ಆತ್ಮಹತ್ಯೆಯೋ ಅಥವಾ ನಾಪತ್ತೆಯೋ ಎನ್ನುವ ಅನುಮಾನ ವ್ಯಕ್ತವಾಗಿದೆ. ಕುಂದಾಪುರ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

  • ಬೈಂದೂರು: ಜಮೀನು ಕ್ರಯ ವಿಷಯದಲ್ಲಿ ಕೋಟಿಗಟ್ಟಲೆ ವಂಚನೆ ಆರೋಪ – ಪ್ರಕರಣ ದಾಖಲು

    ಬೈಂದೂರು, ಜೂನ್ 9, 2025: ತೆಗ್ಗರ್ಸೆ ಗ್ರಾಮದ ಸುಭಾಶ (32) ಎಂಬವರು ಗುತ್ತಿಗೆ ವ್ಯವಹಾರದಲ್ಲಿ ತೊಡಗಿದ್ದು, ತಮ್ಮ ವಾಹನಗಳನ್ನು ನಿಲ್ಲಿಸಲು ಯಡ್ತರೆ ಗ್ರಾಮದಲ್ಲಿ ಸೂಕ್ತ ಜಾಗವನ್ನು ಹುಡುಕುತ್ತಿದ್ದ ವೇಳೆ ದೊಡ್ಡಪ್ಪನ ಮಗನಾದ ಶಂಕರ (2ನೇ ಆರೋಪಿ) ಜಮೀನು ಒಡಮಾಡಿಕೊಡುವುದಾಗಿ ಭರವಸೆ ನೀಡಿ, ರೊಕಿ ಡಯಾಸ್ (1ನೇ ಆರೋಪಿ) ಎಂಬಾತನನ್ನು ಪರಿಚಯಿಸಿದ್ದಾನೆ. ರೊಕಿ ಡಯಾಸ್, ಯಡ್ತರೆ ಗ್ರಾಮದ ಸರ್ವೆ ನಂಬರ್ 30/3 A1 ರಲ್ಲಿ 0.40 ಎಕ್ರೆ, 30/3A2 ರಲ್ಲಿ 0.14 ಎಕ್ರೆ ಮತ್ತು 30/9 ರಲ್ಲಿ 0.26 ಎಕ್ರೆ ಜಮೀನನ್ನು ತೋರಿಸಿ, ಸೆಂಟ್‌ಗೆ 3.5 ಲಕ್ಷ ರೂ. ದರದಂತೆ ಒಟ್ಟು 2.66 ಕೋಟಿ ರೂ.ಗೆ ಕರಾರು ಪತ್ರ ಮಾಡಿಕೊಂಡಿದ್ದಾನೆ.

    ಸುಭಾಶ ಅವರು 1.80 ಕೋಟಿ ರೂ. ಬ್ಯಾಂಕ್ ಖಾತೆ ಮೂಲಕ ಮತ್ತು 1 ಲಕ್ಷ ರೂ. ನಗದಾಗಿ ಆರೋಪಿಗೆ ಪಾವತಿಸಿದ್ದು, ಉಳಿದ ಮೊತ್ತವನ್ನು ಕ್ರಯಪತ್ರದ ವೇಳೆ ನೀಡಲು ಒಪ್ಪಿಗೆ ಮಾಡಿಕೊಂಡಿದ್ದರು. ಆದರೆ, 15 ದಿನಗಳ ಬಳಿಕ ಶಂಕರ, ಜಮೀನಿನ ದಾಖಲೆಗಳಲ್ಲಿ ದೋಷಗಳಿರುವುದಾಗಿ ತಿಳಿಸಿ, ಅವುಗಳನ್ನು ಸರಿಪಡಿಸಿ ಕ್ರಯಪತ್ರ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾನೆ.

    ದಾಖಲೆ ಪರಿಶೀಲನೆಯಲ್ಲಿ 0.14 ಎಕ್ರೆ ಮತ್ತು 0.26 ಎಕ್ರೆ ಜಮೀನು ಪ್ರಾನ್ಸಿಸ್ ಪೀಟರ್ ರೆಬೆಲ್ಲೋ ಹೆಸರಿನಲ್ಲಿರುವುದು ಕಂಡುಬಂದಿದೆ. ಈ ಬಗ್ಗೆ ವಿಚಾರಿಸಿದಾಗ, ಆರೋಪಿಗಳು ಜಮೀನನ್ನು 1ನೇ ಆರೋಪಿಯ ಹೆಸರಿಗೆ ನೊಂದಣಿ ಮಾಡಿ ಕ್ರಯಪತ್ರ ನೀಡುವುದಾಗಿ ನಂಬಿಸಿದ್ದಾರೆ. ಆದರೆ, ನಂತರ ಕರಾರು ಪತ್ರವನ್ನು ರದ್ದುಗೊಳಿಸಿ ಸುಭಾಶ ಅವರಿಗೆ ನೋಟೀಸ್ ನೀಡಿದ್ದಾರೆ.

    ಮತ್ತೊಮ್ಮೆ ದಾಖಲೆಗಳನ್ನು ಸರಿಪಡಿಸಿ ಕ್ರಯಪತ್ರ ಮಾಡಿಕೊಡುವುದಾಗಿ ಆರೋಪಿಗಳು ಭರವಸೆ ನೀಡಿದರೂ, ಜಮೀನಿನ ಸರ್ವೆ ನಂಬರ್ 30/3 A1 ರಲ್ಲಿ ಬೈಂದೂರು ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ 1 ಕೋಟಿ ರೂ. ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ. ಜೂನ್ 7, 2025 ರಂದು ಈ ಬಗ್ಗೆ ವಿಚಾರಿಸಿದಾಗ, ಆರೋಪಿಗಳು ಸುಭಾಶ ಅವರಿಗೆ ಬೆದರಿಕೆ ಹಾಕಿ, ವಂಚಿಸಿರುವುದಾಗಿ ದೂರು ದಾಖಲಾಗಿದೆ.

    ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 118/2025ರಡಿ ಕಲಂ 316(2), 318(2),

  • ಕಾಪು: ಗಾಂಜಾ ಸೇವನೆ ಆರೋಪದಡಿ ಯುವಕನ ವಿರುದ್ಧ ಪ್ರಕರಣ ದಾಖಲು

    ಕಾಪು, ಜೂನ್ 8, 2025: ಕಾಪು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ತೇಜಸ್ವಿ ಟಿ. (ಕಾನೂನು ಮತ್ತು ಸುವ್ಯವಸ್ಥೆ) ದಿನಾಂಕ 06/06/2025ರಂದು ಹಗಲು ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ಕಾಪು ತಾಲೂಕಿನ ಮೂಳೂರು ಗ್ರಾಮದ ನಾರಾಯಣಗುರು ಸಭಾಭವನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕ ಗಾಂಜಾ ಎಂಬ ಮಾದಕ ದ್ರವ್ಯವನ್ನು ಸೇವಿಸಿ ಅಮಲಿನಲ್ಲಿರುವ ಬಗ್ಗೆ ಮಾಹಿತಿ ಬಂದಿತು.

    ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಒಬ್ಬ ಯುವಕ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ಅದರ ಅಮಲಿನಲ್ಲಿರುವುದು ಕಂಡುಬಂದಿತು. ವಿಚಾರಣೆಯಲ್ಲಿ ಆತ ತನ್ನ ಹೆಸರು ಅನಿಲ್ (23) ಎಂದು ತಿಳಿಸಿದನು. ಆತನನ್ನು ಠಾಣೆ ಸಿಬ್ಬಂದಿಯೊಂದಿಗೆ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗಕ್ಕೆ ವೈದ್ಯಕೀಯ ಪರೀಕ್ಷೆಗೆ ಕರೆತರಲಾಯಿತು.

    ದಿನಾಂಕ 07/06/2025ರಂದು ಕೆ.ಎಂ.ಸಿ. ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ತಜ್ಞರ ವರದಿಯ ಪ್ರಕಾರ, ಆರೋಪಿತ ಅನಿಲ್ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 83/2025, ಕಲಂ 27(b) NDPS ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

  • ಶಂಕರನಾರಾಯಣ: ವಿದ್ಯುತ್ ಶಾಕ್‌ನಿಂದ ಕಾರ್ಮಿಕನ ಮರಣ, ಇಂಜಿನಿಯರ್ ವಿರುದ್ಧ ಪ್ರಕರಣ ದಾಖಲು

    ಶಂಕರನಾರಾಯಣ, ಜೂನ್ 8, 2025: ಕುಂದಾಪುರ ತಾಲೂಕಿನ ಕುಳುಂಜೆ ಗ್ರಾಮದ ಭರತಕಲ್ಲು ಎಂಬಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕದ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ. ದಿನಾಂಕ 06/06/2025ರಂದು ಸಂಜೆ 7:15 ಗಂಟೆಗೆ, ಪಿರ್ಯಾದಿದಾರರಾದ ಸಮರ್ ಮಾಲ್ (24, ಪಶ್ಚಿಮ ಬಂಗಾಳ) ರಾಜೇಶ್ ಮಾಲ್ ರವರೊಂದಿಗೆ ಕೆಲಸ ಮಾಡುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

    ರಾಜೇಶ್ ಮಾಲ್ ರವರು ಶುದ್ಧೀಕರಣ ಘಟಕದ ದಕ್ಷಿಣ ಬದಿಯ ಸಿಮೆಂಟ್ ಗೋಡೆಯ ಮೇಲೆ ಬೆಳಕಿಗಾಗಿ ಅಳವಡಿಸಲಾಗಿದ್ದ ಹ್ಯಾಲೊಜನ್ ಲೈಟ್‌ಗೆ ಆಕಸ್ಮಿಕವಾಗಿ ಸ್ಪರ್ಶಿಸಿದಾಗ ವಿದ್ಯುತ್ ಶಾಕ್‌ಗೆ ಒಳಗಾದರು. ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಆದರೆ, ರಾಜೇಶ್ ಮಾಲ್ ಲೈಟ್ ಕಂಬದ ಬಳಿ ಅಸ್ವಸ್ಥರಾಗಿ ನಿಂತಿದ್ದರು. ಪಿರ್ಯಾದಿದಾರರು ಮತ್ತು ಇತರ ಕಾರ್ಮಿಕರು ತಕ್ಷಣ ಸ್ಥಳಕ್ಕೆ ಧಾವಿಸಿ, ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದನ್ನು ಖಾತ್ರಿಪಡಿಸಿಕೊಂಡು, ರಾಜೇಶ್ ಮಾಲ್‌ರವರನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದರು.

    ಘಟನೆಯನ್ನು ಸೈಟ್ ಇಂಜಿನಿಯರ್ ನಾಗರಾಜ್ ರವರ ಗಮನಕ್ಕೆ ತರಲಾಯಿತು. ರಾಜೇಶ್ ಮಾಲ್‌ರವರನ್ನು ಕಂಪನಿಯ ವಾಹನದಲ್ಲಿ ಹಾಲಾಡಿಯ ಶ್ರೀ ದುರ್ಗಾ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿನ ವೈದ್ಯರು ರಾಜೇಶ್ ಮಾಲ್‌ರವರನ್ನು ಪರೀಕ್ಷಿಸಿ, ಸಂಜೆ 7:30 ಗಂಟೆಗೆ ಅವರು ಮೃತಪಟ್ಟಿರುವುದಾಗಿ ದೃಢಪಡಿಸಿದರು.

    ದೂರಿನ ಪಿರ್ಯಾದಿನ ಪ್ರಕಾರ, ಕಾರ್ಮಿಕರಿಗೆ ಸೂಕ್ತ ಸುರಕ್ಷತಾ ಸಲಕರಣೆಗಳನ್ನು ಒದಗಿಸದೆ, ಅಸುರಕ್ಷಿತವಾಗಿ ಕಬ್ಬಿಣದ ಕಂಬಕ್ಕೆ ವಿದ್ಯುತ್ ತಂತಿಯನ್ನು ಬೆಳಕಿಗಾಗಿ ಕಟ್ಟಲಾಗಿತ್ತು. ರಾಜೇಶ್ ಮಾಲ್ ಆ ಸ್ಥಳವನ್ನು ಸ್ಪರ್ಶಿಸಿದಾಗ ಕಂಬದಲ್ಲಿ ವಿದ್ಯುತ್ ಪ್ರವಹಿಸಿ, ಆತನಿಗೆ ವಿದ್ಯುತ್ ಶಾಕ್‌ಗೆ ಒಳಗಾಗಿ ಗಾಯಗೊಂಡು, ಆ ಗಾಯದಿಂದ ಮೃತಪಟ್ಟಿದ್ದಾರೆ. ಈ ಘಟನೆಗೆ ಸೈಟ್ ಇನ್‌ಚಾರ್ಜ್ ಇಂಜಿನಿಯರ್ ನಾಗರಾಜ್ ರವರ ನಿರ್ಲಕ್ಷ್ಯವೇ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 55/2025, ಕಲಂ 106 BNS ರಂತೆ ಪ್ರಕರಣ ದಾಖಲಾಗಿದೆ.